Headlines

Biryani and Watermelon: ಬಿರಿಯಾನಿ ತಿಂದ ನಂತರ ಕಲ್ಲಂಗಡಿ ಸೇವನೆ ಮಾರಕವೇ? ಮುಂಬೈ ಘಟನೆಯ ಬೆನ್ನಲ್ಲೇ ತಜ್ಞರು ನೀಡಿದ ಎಚ್ಚರಿಕೆ ಇಲ್ಲಿದೆ! – Kannada News | Biryani and Watermelon Death: Expert Debunks Myth, Points to Food Poisoning Risk

ಬಿರಿಯಾನಿ ತಿಂದ ನಂತರ ಕಲ್ಲಂಗಡಿ ಸೇವನೆ ಮಾರಕವೇ?Image Credit source: Pinterest

ಇತ್ತೀಚೆಗೆ ಮುಂಬೈನಲ್ಲಿ ನಡೆದ ಒಂದು ದುರದೃಷ್ಟಕರ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಬಿರಿಯಾನಿ ಸೇವಿಸಿದ ನಂತರ ಕಲ್ಲಂಗಡಿ ಹಣ್ಣನ್ನು ತಿಂದ ಒಂದೇ ಕುಟುಂಬದ ನಾಲ್ವರು ಸದಸ್ಯರು ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಭೀತಿ ಹುಟ್ಟಿಸಿದೆ. ಈ ಘಟನೆಯ ನಂತರ, “ಬಿರಿಯಾನಿ ಮತ್ತು ಕಲ್ಲಂಗಡಿ ಒಟ್ಟಿಗೆ ತಿಂದರೆ ಸಾವು ಸಂಭವಿಸುತ್ತದೆಯೇ?” ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಈ ಕುರಿತು ವೈದ್ಯಕೀಯ ತಜ್ಞರು ನೀಡಿರುವ ಸ್ಪಷ್ಟನೆ ಇಲ್ಲಿದೆ.

ಬಿರಿಯಾನಿ-ಕಲ್ಲಂಗಡಿ ಸಂಯೋಜನೆ ಸಾವಿಗೆ ಕಾರಣವಾಗುತ್ತದೆಯೇ?

ವೈದ್ಯಕೀಯ ತಜ್ಞರ ಪ್ರಕಾರ, ಬಿರಿಯಾನಿ ಮತ್ತು ಕಲ್ಲಂಗಡಿಯನ್ನು ಅಲ್ಪ ಅವಧಿಯಲ್ಲಿ ಸೇವಿಸುವುದರಿಂದ ನೇರವಾಗಿ ಸಾವು ಸಂಭವಿಸುವ ಸಾಧ್ಯತೆ ತೀರಾ ಕಡಿಮೆ. ಮುಂಬೈನ ಖ್ಯಾತ ಸಾಂಕ್ರಾಮಿಕ ರೋಗ ತಜ್ಞ (Infectious Disease Specialists) ಡಾ. ಈಶ್ವರ್ ಗಿಲಾಡಾ ಅವರ ಪ್ರಕಾರ, ಇವೆರಡೂ ವಿಭಿನ್ನ ರೀತಿಯ ಆಹಾರಗಳು ಮತ್ತು ಇವುಗಳ ಜೀರ್ಣಕ್ರಿಯೆಯ ಸಮಯ ಬೇರೆಯಾಗಿರುತ್ತದೆ. ಕಲ್ಲಂಗಡಿ ಬೇಗನೆ ಜೀರ್ಣವಾದರೆ, ಮಾಂಸಾಹಾರಿ ಆಹಾರವಾದ ಬಿರಿಯಾನಿ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ವ್ಯತ್ಯಾಸದಿಂದ ಜೀರ್ಣಕ್ರಿಯೆಯಲ್ಲಿ ಏರುಪೇರಾಗಿ ಹೊಟ್ಟೆ ಉಬ್ಬರ ಅಥವಾ ಅಜೀರ್ಣವಾಗಬಹುದೇ ಹೊರತು ತಕ್ಷಣದ ಸಾವಿಗೆ ಇದು ಕಾರಣವಾಗುವುದಿಲ್ಲ.

ಅಸಲಿ ಅಪಾಯ ಎಲ್ಲಿದೆ? ‘ಫುಡ್ ಪಾಯ್ಸನಿಂಗ್’ ಶಂಕೆ:

ಅಂತಹ ಸಂದರ್ಭಗಳಲ್ಲಿ ಸಾವಿಗೆ ಪ್ರಮುಖ ಕಾರಣ ‘ಫುಡ್ ಪಾಯ್ಸನಿಂಗ್’ (ಆಹಾರ ವಿಷವಾಗುವುದು) ಇರಬಹುದು ಎಂದು ವೈದ್ಯರು ಶಂಕಿಸುತ್ತಾರೆ. ಆಹಾರ ಅಥವಾ ಹಣ್ಣುಗಳನ್ನು ದೀರ್ಘಕಾಲದವರೆಗೆ ತೆರೆದಿಟ್ಟಿದ್ದರೆ ಅಥವಾ ಅವು ಹಳೆಯದಾಗಿದ್ದರೆ, ಅದರಲ್ಲಿ ಸಾಲ್ಮೊನೆಲ್ಲಾ, ಇ.ಕೋಲಿ ಅಥವಾ ಸ್ಟ್ಯಾಫಿಲೋಕೊಕಸ್‌ನಂತಹ ಅಪಾಯಕಾರಿ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ.

ಸೆಪ್ಸಿಸ್ ಭೀತಿ:

ಈ ಬ್ಯಾಕ್ಟೀರಿಯಾಗಳು ದೇಹ ಸೇರಿ ತೀವ್ರ ವಾಂತಿ ಮತ್ತು ಅತಿಸಾರಕ್ಕೆ ಕಾರಣವಾಗುತ್ತವೆ. ದೇಹದಲ್ಲಿ ನೀರಿನಂಶ ಮತ್ತು ಎಲೆಕ್ಟ್ರೋಲೈಟ್‌ಗಳ ಕೊರತೆಯಾಗಿ ರಕ್ತದೊತ್ತಡ ಹಠಾತ್ ಕುಸಿಯಬಹುದು. ಇದು ‘ಸೆಪ್ಸಿಸ್’ ಅಥವಾ ದೇಹದ ಅಂಗಾಂಗಗಳ ವೈಫಲ್ಯಕ್ಕೆ ಕಾರಣವಾಗಿ ಪ್ರಾಣಾಪಾಯ ಉಂಟುಮಾಡಬಹುದು.

ಇದನ್ನೂ ಓದಿ: ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆಯಾದಾಗ ಈ ರೀತಿಯ ಲಕ್ಷಣಗಳು ಕಂಡುಬರುತ್ತೆ, ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ!

ಕಲ್ಲಂಗಡಿ ಹಣ್ಣಿನ ಮೇಲಿರುವ ರಾಸಾಯನಿಕಗಳ ಎಚ್ಚರಿಕೆ:

ಕೆಲವೊಮ್ಮೆ ಕಲ್ಲಂಗಡಿ ಹಣ್ಣು ಹೆಚ್ಚು ಕೆಂಪಾಗಿ ಕಾಣಲು ಅಥವಾ ಬೇಗ ಹಣ್ಣಾಗಲು ಅಪಾಯಕಾರಿ ರಾಸಾಯನಿಕಗಳನ್ನು ಚುಚ್ಚಲಾಗುತ್ತದೆ. ಅಂತಹ ಕಲಬೆರಕೆ ಹಣ್ಣುಗಳನ್ನು ಸೇವಿಸಿದಾಗ ಅವು ದೇಹದಲ್ಲಿ ವಿಷವಾಗಿ ಪರಿಣಮಿಸಬಹುದು. ಒಂದು ವೇಳೆ ಕಲ್ಲಂಗಡಿ ಹಣ್ಣು ಕಲುಷಿತಗೊಂಡಿದ್ದರೆ ಅಥವಾ ಅದಕ್ಕೆ ವಿಷಕಾರಿ ಅಂಶಗಳು ಸೇರಿದರೆ ಮಾತ್ರ ಇಂತಹ ಸಾವುಗಳು ಸಂಭವಿಸಲು ಸಾಧ್ಯ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.

ತಜ್ಞರ ಸಲಹೆ ಏನು?

  • ತಾಜಾ ಆಹಾರ ಸೇವಿಸಿ: ಹೋಟೆಲ್‌ ಆಗಲಿ ಅಥವಾ ಮನೆಯಲ್ಲೇ ಆಗಲಿ, ತಯಾರಿಸಿದ ತಕ್ಷಣ ಆಹಾರ ಸೇವಿಸುವುದು ಉತ್ತಮ. ದೀರ್ಘಕಾಲ ಹೊರಗಿಟ್ಟ ಆಹಾರ ಬೇಡ.
  • ಹಣ್ಣುಗಳ ಶುಚಿತ್ವ: ಹಣ್ಣುಗಳನ್ನು ಕತ್ತರಿಸುವ ಮುನ್ನ ಚೆನ್ನಾಗಿ ತೊಳೆಯಿರಿ ಮತ್ತು ಕತ್ತರಿಸಿದ ತಕ್ಷಣ ಸೇವಿಸಿ. ಬಣ್ಣಕ್ಕಾಗಿ ರಾಸಾಯನಿಕ ಬಳಸಿದ ಹಣ್ಣುಗಳ ಬಗ್ಗೆ ಎಚ್ಚರವಿರಲಿ.

ಮುಂಬೈ ಘಟನೆಯಲ್ಲಿ ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ (Forensic) ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣವೇನು ಎಂಬುದು ತಿಳಿದುಬರಲಿದೆ.

ಗಮನಿಸಿ: ಈ ಮಾಹಿತಿಯು ಸಂಶೋಧನಾ ಅಧ್ಯಯನಗಳು ಮತ್ತು ತಜ್ಞರ ಅಭಿಪ್ರಾಯಗಳನ್ನು ಆಧರಿಸಿದೆ. ಇದನ್ನು ವೈದ್ಯಕೀಯ ಸಲಹೆಗೆ ಪರ್ಯಾಯವೆಂದು ಪರಿಗಣಿಸಬೇಡಿ. ನಿಮಗೆ ಯಾವುದೇ ಅನುಮಾನ ಅಥವಾ ಹೊಸ ಆಹಾರ ಕ್ರಮ, ವ್ಯಾಯಾಮವನ್ನು ಕೈಗೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *