Category Archives: Blog

Your blog category

ದಿನ ಭವಿಷ್ಯ: ಇಂದು ಈ ರಾಶಿಯವರ ನಿರೀಕ್ಷೆಯು ಶತ್ರುಗಳು ಹುಸಿ ಮಾಡುವರು – Kannada News | Horoscope April 25 Satursday 2026; Dina Rashi Bhavishya Today, Checkout the details here

ಮೇಷ ರಾಶಿ:

ಇಂದು ನಿಮ್ಮ ಪ್ರಮುಖ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ವಾಹನಗಳು, ಜಮೀನುಗಳನ್ನು ಖರೀದಿಸಲಾಗುತ್ತದೆ. ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸುಧಾರಿಸುತ್ತದೆ. ಉನ್ನತ ವಿದ್ಯಾಭ್ಯಾಸಕ್ಕೆ ಮಾರ್ಗ ಹಾಗೂ ಉತ್ತಮ ಮಾರ್ಗದರ್ಶನ ಎರಡೂ ಸಿಗುವುದು. ಯಾವುದನ್ನೂ ತೋರಿಕೆಗೆ ಮಾಡುವುದು ಬೇಡ. ಏಕಾಂತದಲ್ಲಿ ಇರಲು ನಿಮಗೆ ಅನಿವಾರ್ಯವಾದೀತು. ನೀವು ಯಾರಿಂದಲೂ ಸಲಹೆಯನ್ನು ಪಡೆಯಲು ಇಷ್ಟಪಡುವುದಿಲ್ಲ.

ವೃಷಭ ರಾಶಿ:

ನಿಮಗೆ ಮನೆ ನಿರ್ಮಾಣ ಮಾಡಲು ಆರ್ಥಿಕತೆಯನ್ನು ಹೊಂದಿಸಬೇಕಾಗುವುದು. ವ್ಯವಹಾರಗಳು ವಿಸ್ತರಣೆಯಲ್ಲಿ ಯಶಸ್ವಿಯಾಗುತ್ತವೆ. ಉದ್ಯೋಗಿಗಳಿಗೆ ಉನ್ನತ ಸ್ಥಾನಮಾನ ಪ್ರಾಪ್ತಿ‌. ಹೊಸ ಕೆಲಸವನ್ನು ಆರಂಭಿಸುವ ಹುನ್ನಾರ ನಡೆಸುವಿರಿ. ನಂಬುಗೆಯನ್ನು ಉಳಿಸಿಕೊಳ್ಳುವ ಕಾರ್ಯವನ್ನು ಮಾಡಬೇಕು. ಇದು ಸಮಸ್ಯೆಯನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ.

ಮಿಥುನ ರಾಶಿ:

ಸಾಲದ ಸಮಸ್ಯೆಗಳು ಹೆಚ್ಚಾಗಿ ಬಗೆಹರಿಯುತ್ತವೆ. ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ. ಗುತ್ತಿಗೆದಾರರಿಗೆ ಹೊಸ ಭರವಸೆಗಳು ಮೂಡಲಿವೆ. ಒಂದಿಲ್ಲೊಂದು ವಿಷಯಗಳಿಂದ ಸುಖವನ್ನು ಪಡೆಯುವ ನಿಮಗೆ ಮುಂಬರುವ ವಿಷಯಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ಸ್ಪಷ್ಟತೆಯನ್ನು ಇಟ್ಟುಕೊಂಡಿರುತ್ತೀರಿ. ಶತ್ರುಗಳಿಂದ ಎಚ್ಚರವಾಗಿರಿ. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ.

ಕರ್ಕಾಟಕ ರಾಶಿ:

ವಿದ್ಯಾರ್ಥಿಗಳ ಪ್ರಯತ್ನಗಳು ಯಶಸ್ವಿಯಾಗುತ್ತವೆ. ವ್ಯವಹಾರಗಳು ಭರದಿಂದ ಸಾಗುತ್ತವೆ. ಉದ್ಯಮಿಗಳಿಗೆ ವ್ಯಾಪಾರಕ್ಕೆ ಸಂಬಂಧಿಸಿದ ಅನಿರೀಕ್ಷಿತ ಪ್ರಯಾಣವು ಬರಲಿದೆ‌. ಇಂದು ಯಾವದೋ ಆತಂಕದಲ್ಲಿ ಇರುವಿರಿ. ನಿಮ್ಮ ಕೀರ್ತಿ ಹೆಚ್ಚಲಿದೆ. ದೂರದಿಂದ ಒಳ್ಳೆಯ ಸುದ್ದಿ ಸಿಗಲಿದೆ. ಇಂದು ಕಡಿಮೆ ಕಾರ್ಯದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುವಿರಿ. ಹಳೆಯ ಕೆಲಸಗಳು ವ್ಯರ್ಥವಾಗಬಹುದು. ಯಾರಿಗಾದರೂ ನೀವು ಹಣವನ್ನು ಕೊಡುವ ಸಂದರ್ಭವು ಬರಬಹುದು.

ಸಿಂಹ ರಾಶಿ:

ಕೆಲಸಗಳು ಅನಿರೀಕ್ಷಿತ ರೀತಿಯಲ್ಲಿ ಪೂರ್ಣಗೊಳ್ಳುತ್ತವೆ. ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕಗಳು ಇರುತ್ತವೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಕುಟುಂಬದ ಬಗ್ಗೆ ಹೆಮ್ಮೆಯ ಭಾವ ಮೂಡುತ್ತದೆ. ನೀವು ಆರಾಮಾಗಿದ್ದೀರಿ ಎಂದು ತೋರಿಸಲು ಹೋಗಬೇಡಿ‌. ನೀವು ಕೆಲಸಕ್ಕೆ ಸಂಬಂಧಿಸಿದಂತೆ ಯಾರೊಂದಿಗಾದರೂ ಸಂವಹನ ನಡೆಸಲು ಪ್ರಯತ್ನಿಸುತ್ತಿದ್ದರೆ, ಇಂದು ನಿಮಗೆ ಅದೃಷ್ಟವನ್ನು ತರಬಹುದು. ಸಂಗಾತಿಯ ವಿಷಯದಲ್ಲಿ ವಾಗ್ವಾದ ನಡೆಯಲಿದೆ.

ಕನ್ಯಾ ರಾಶಿ:

ಮನೆಯಲ್ಲಿ ಸಣ್ಣ ಸಣ್ಣ ಕೆಲಸಕ್ಕೂ ಧನವನ್ನು ಖರ್ಚು ಮಾಡಬೇಕಾಗಬಹುದು. ಹೊಸ ಜನರ ಪರಿಚಯವು ಸಂತೋಷವನ್ನು ತರುತ್ತದೆ. ಗುತ್ತಿಗೆದಾರರಿಗೆ ಪ್ರೋತ್ಸಾಹಕವಾಗಲಿದೆ. ಮೋಟಾರು ವಾಹನದಿಂದ ಸಂತೋಷ ಇರುತ್ತೆ. ವ್ಯವಹಾರದಲ್ಲಿನ ಅಡೆತಡೆಗಳನ್ನು ನಿವಾರಿಸಿ ಲಾಭದ ಹಾದಿಯಲ್ಲಿ ಸಾಗುತ್ತೀರಿ. ಮನೆಯಲ್ಲಿ ನಿಮ್ಮ ಬಗ್ಗೆ ಏನಾದರೂ ಮಾತುಗಳು ಬರಬಹುದು. ವಾಹನದ ಅಪಘಾತವನ್ನು ನಿಮ್ಮದೇ ತಪ್ಪಿನಿಂದ ಆಗಲಿದೆ.

ತುಲಾ ರಾಶಿ:

ಇಂದು ನಿಮ್ಮ ಮನಸ್ಸು ಶಕ್ತಿಯನ್ನು ಉಲ್ಬಣಗೊಳಿಸಿಕೊಳ್ಳುವುದು. ಪರಿಹಾರದ ದಾರಿಗಳು ಆ ಕ್ಷಣದಲ್ಲಿ ಸ್ಫುರಿಸುವುದು. ಆರ್ಥಿಕ ಶಕ್ತಿಯನ್ನು ಪಡೆಯುತ್ತೀರಿ. ಸಾಲಗಳನ್ನು ತೀರಿಸುತ್ತೀರಿ. ನಿರುದ್ಯೋಗಿಗಳ ಕಠಿಣ ಪರಿಶ್ರಮಕ್ಕೆ ಫಲ ಸಿಗಲಿದೆ.  ಸ್ನೇಹಿತರ ಮೇಲೆ ಕೂಗಾಡುವಷ್ಟು ಸಲುಗೆ ಬೇಡ. ಉದ್ಯೋಗದಲ್ಲಿ ಒತ್ತಡವನ್ನು ನಿವಾರಿಸಿಕೊಳ್ಳಲು ಯಾರದ್ದಾದರೂ ಸಹಾಯವನ್ನು ಪಡೆಯುವಿರಿ. ನಿಮಗೆ ಸಿಗಬೇಕಾದ ಗೌರವವು ಗೊಂದಲದಲ್ಲಿ ಇದ್ದು ಕೊನೆಗೂ ನಿಮಗೇ ಸಿಗಲಿದೆ.

ವೃಶ್ಚಿಕ ರಾಶಿ:

ನಿರುದ್ಯೋಗಿಗಳ ಪ್ರಯತ್ನಗಳು ನಿಧಾನವಾಗಿ ಖುಷಿ ಕೊಡುವುದು. ವ್ಯವಹಾರದಲ್ಲಿ ಸಣ್ಣಪುಟ್ಟ ಕಿರಿಕಿರಿಗಳು ಮತ್ತು ಉದ್ಯೋಗಗಳಲ್ಲಿ ಬದಲಾವಣೆಗಳು ಉಂಟಾಗಬಹುದು. ಸಿಟ್ಟಿನನ್ನು ಕಡಿಮೆಮಾಡಿಕೊಳ್ಳಲು ಆಗದು. ನಿಮ್ಮ ಹಾದಿಯನ್ನು ನೋಡಿಕೊಳ್ಳುವ ಸಮಯವಿದಾಗಿರುತ್ತದೆ. ನೂತನ ಉದ್ಯಮಕ್ಕೆ ಹೆಚ್ಚು ಆದ್ಯತೆ ಇರಲಿದೆ. ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಾಗ ನಿಮ್ಮ ಖರ್ಚಿನ ಅಂದಾಜು ತಪ್ಪಿಹೋಗಬಹುದು. ಅನಿರೀಕ್ಷಿತವಾಗಿ ಪ್ರಭಾವಿ ವ್ಯಕ್ತಿಗಳ ಸಂಪರ್ಕವು ಸಿಗುವುದು.

ಧನು ರಾಶಿ:

ಮನೆ ನಿರ್ಮಾಣ ಪ್ರಯತ್ನಗಳಲ್ಲಿ ಒಂದು ಹೆಜ್ಜೆ ಮುಂದಿಡುತ್ತೀರಿ. ವ್ಯವಹಾರಗಳು ಭರದಿಂದ ಸಾಗುತ್ತಿವೆ. ಉದ್ಯೋಗಗಳಲ್ಲಿ ಬಡ್ತಿಗಳನ್ನು ಪಡೆಯುತ್ತೀರಿ. ಪ್ರೇಮ ವ್ಯವಹಾರಗಳಲ್ಲಿ ಹೊಂದಾಣಿಕೆ ಬೇಕೆನಿಸುವುದು. ಅದೃಷ್ಟ ನಿಮ್ಮ ಕಡೆ ಇದ್ದರೂ ಅದನ್ನು ಅನುಭವಿಸುವ ಮನೋಭಾವ ಇರಲಿ. ನಿಮ್ಮ ಸಹೋದರರ ಸಹಯೋಗವು ಇಂದು ಆರ್ಥಿಕ ಲಾಭಕ್ಕೆ ಕಾರಣವಾಗುತ್ತದೆ. ಇಂದು ಹಣಕಾಸಿನ ವ್ಯವಹಾರ ಮಾಡಲು ಧೈರ್ಯವು ಸಾಕಾಗದು.

ಮಕರ ರಾಶಿ:

ನಿಮ್ಮ ಒಪ್ಪಂದಗಳು ಸುರಕ್ಷಿತವಾಗಿ ಇರುವಂತೆ ನೋಡಿ. ವ್ಯವಹಾರದಲ್ಲಿ ನಿರೀಕ್ಷಿತ ಲಾಭಗಳು ಇರುತ್ತವೆ. ಕೆಲಸಗಳು ರೋಮಾಂಚನ ರೀತಿಯಿಂದ ಮುಂದುವರಿಯುತ್ತವೆ. ರಾಜಕೀಯ ವಲಯದಲ್ಲಿ ಸೇರುವ ಅನಿವಾರ್ಯತೆ ಇರುತ್ತದೆ. ವಿದ್ಯಾರ್ಥಿಗಳು ಯಶಸ್ಸು ಸಾಧಿಸುವರು. ಉದ್ಯೋಗದಲ್ಲಿ ನಿಮ್ಮ ಕಣ್ತಪ್ಪಿನಿಂದ ಆದ ತಪ್ಪಿಗೆ ನೀವೇ ಜವಾಬ್ದಾರಿ ಆಗಿರುವಿರಿ. ಭೂಮಿಯ ವ್ಯವಹಾರದಲ್ಲಿ ಸುಮ್ಮನೆ ಕೆಲವನ್ನು ನಿಮ್ಮ ಮೇಲೆ ಬರುವಂತೆ ಮಾಡಿಕೊಳ್ಳುವಿರಿ.

ಕುಂಭ ರಾಶಿ:

ವ್ಯವಹಾರಗಳು ವಿಸ್ತರಣೆಯಲ್ಲಿ ಮುಂಚೂಣಿಯಲ್ಲಿರುತ್ತವೆ. ಉದ್ಯೋಗದ ಕೊರತೆ ಮಾಯವಾಗುತ್ತದೆ. ರಾಜಕೀಯ ವಲಯಗಳಲ್ಲಿ ಉತ್ತಮ ಮನ್ನಣೆ ಪಡೆಯಬಹುದು. ಮಾನಸಿಕ ಶಾಂತಿ ಮತ್ತು ಸ್ಥಿರತೆಗೆ ಕಾರಣವಾಗಬಹುದು. ಪ್ರೀತಿಪಾತ್ರರ ಜೊತೆ ವಾದಗಳನ್ನು ಹುಟ್ಟುಹಾಕುವ ವಿಷಯಗಳಿಂದ ದೂರವಿರಿ. ಯಾರ ಮೇಲಾದರೂ ದೋಷಾರೋಪ ಮಾಡುವ ಸಂಭವವಿದೆ. ಬರುವ ಆದಾಯಕ್ಕೆ ವಿಘ್ನವು ಬರಬಹುದು. ಅಂತರ್ಜಾಲದಿಂದ ನಿಮಗೆ ಕೆಲಸಕ್ಕೆ ಕರೆ ಬರುವುದು.

ಮೀನ ರಾಶಿ:

ನಿಮ್ಮ ಯೋಜಿತ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಫಲಿತಾಂಶಗಳಿವೆ. ಭೂವ್ಯವಹಾರದ ಒಪ್ಪಂದಗಳನ್ನು ಮಾಡಿಕೊಳ್ಳುತ್ತೀರಿ. ವ್ಯವಹಾರಗಳು ಲಾಭದಾಯಕವಾಗಿ ನಡೆಯಲಿವೆ. ಹಿರಿಯ ಹಾಗೂ ಪ್ರಮುಖವ್ಯಕ್ತಿಗಳನ್ನು ಇಂದು ಭೇಟಿಯಾಗುತ್ತೀರಿ. ನೀವು‌ ಮಾಡುವ ಕಾರ್ಯಕ್ಕೆ ಇತರರ ಸಹಾಯವೂ ಲಭ್ಯವಾಗಲಿದೆ. ಕಛೇರಿಗೆ ವಿರಾಮವಿದ್ದರೂ ಅನಿರೀಕ್ಷಿತ ಸಭೆಗೆ ಹಾಜಾರಾಗಬೇಕಾದೀತು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಅಶ್ವಿನೀ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಮಘಾ, ಯೋಗ : ಸುಕರ್ಮ, ಕರಣ : ವಣಿಜ, ಸೂರ್ಯೋದಯ – 06 – 06 am, ಸೂರ್ಯಾಸ್ತ – 06 – 38 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:14 – 10:48, ಯಮಗಂಡ ಕಾಲ 13:56 – 15:30, ಗುಳಿಕ ಕಾಲ 06:06 – 07:40

-ಲೋಹಿತ ಹೆಬ್ಬಾರ್ – 8762924271 (what’s app only)

Source link

RCB vs GT: ಕೊಹ್ಲಿ- ಪಡಿಕ್ಕಲ್ ಅರ್ಧಶತಕ; ಆರ್​ಸಿಬಿಗೆ ಚಿನ್ನಸ್ವಾಮಿಯಲ್ಲಿ 50ನೇ ಜಯ – Kannada News | RCB Dominates GT: 5 Wicket Win at Chinnaswamy Propels Them to 2nd Spot in IPL Points Table

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಿದ ಆರ್​ಸಿಬಿ, ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಿತ್ತು. ಕಳೆದ ಪಂದ್ಯದಲ್ಲಿ ಇದೇ ಚಿನ್ನಸ್ವಾಮಿ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತಿದ್ದ ಆರ್​ಸಿಬಿ, ಇದೀಗ ಗುಜರಾತ್ ವಿರುದ್ಧ 5 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮತ್ತೆ ಎರಡನೇ ಸ್ಥಾನವನ್ನು ಅಲಂಕರಿಸಿತು. ಇನ್ನು ಚಿನ್ನಸ್ವಾಮಿ ಮೈದಾನದಲ್ಲಿ ಆರ್​​ಸಿಬಿಗೆ ಇದು 50ನೇ ಗೆಲುವಾಗಿದ್ದು, ಮತ್ತಷ್ಟು ವಿಶೇಷವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್ 206 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ 19ನೇ ಓವರ್​ನಲ್ಲಿ ಗೆಲುವಿನ ದಡ ಮುಟ್ಟಿತು.

Source link

ಗ್ರಾಹಕರಿಟ್ಟಿದ್ದ ಚಿನ್ನ ಎಗರಿಸಿದ ಮ್ಯಾನೇಜರ್: ನಂಬಿಕೆಯ ಬ್ಯಾಂಕ್​​ ಹೀಗೆ ಮಾಡಿದ್ರೆ ಹೇಗೆ? – Kannada News | Bengalurus Indian Bank Branch Rocked by Major Gold Jewellery Theft

ಬೆಂಗಳೂರು, ಏಪ್ರಿಲ್​ 24: ಬ್ಯಾಂಕ್ ಅಂದಮೇಲೆ ಹಣ ಮತ್ತು ಒಡವೆಗೆ ಭದ್ರತೆ ಇರುತ್ತದೆ ಎಂದು ನಂಬುವ ಜನರಿಗೆ ಬೆಂಗಳೂರಿನ ಗಿರಿನಗರದ ಈ ಘಟನೆ ಆಘಾತ ನೀಡಿದೆ. ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಅಸಿಸ್ಟೆಂಟ್ ಮ್ಯಾನೇಜರ್ ಒಬ್ಬ ತನ್ನ ಬೆಟ್ಟಿಂಗ್ ಚಟಕ್ಕಾಗಿ ಗ್ರಾಹಕರ ಚಿನ್ನಕ್ಕೆ ಕನ್ನ ಹಾಕಿದ್ದು, ಸದ್ಯ ಜಾಮೀನಿನ ಮೇಲೆ ಹೊರಬಂದು ಓಡಾಡುತ್ತಿದ್ದಾನೆ. ಇತ್ತ ಸಾಲ ತೀರಿಸಿದರೂ ತಮ್ಮ ಚಿನ್ನ ಸಿಗದೆ ಗ್ರಾಹಕರು ಪರದಾಡುವಂತಾಗಿದೆ. ಈ ಮೊದಲು ಬ್ಯಾಂಕ್ ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಗ್ರಾಹಕರಿಗೆ ಭರವಸೆ ನೀಡಿತ್ತು. ಆದರೆ, ಮೂರು ತಿಂಗಳ ನಂತರವೂ ಯಾವುದೇ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಎಫ್‌ಐಆರ್ ದಾಖಲಾಗಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಗ್ರಾಹಕರು ಇದೀಗ ಮತ್ತೆ ಪ್ರತಿಭಟನೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

RCB vs GT: ಮೊದಲ ಎಸೆತದಲ್ಲೇ ಜೀವದಾನ; ಅಬ್ಬರದ 81 ರನ್ ಬಾರಿಸಿದ ಕೊಹ್ಲಿ – Kannada News | IPL 2026: Virat Kohli’s Explosive 81 After Dropped Catch Powers RCB Batting

ಕ್ರಿಕೆಟ್​ನಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಮಾತಿದೆ. ಫಿಲ್ಡರ್ ಮಾಡುವ ಅದೊಂದೆ ಒಂದು ತಪ್ಪು ತಂಡವನ್ನು ಸೋಲಿನ ದವಡೆಗೆ ಹೇಗೆ ತಳ್ಳುತ್ತದೆ ಎಂಬುದು ಇಂದಿನ ಆರ್​ಸಿಬಿ ಹಾಗೂ ಗುಜರಾತ್ ನಡುವಿನ ಪಂದ್ಯದಲ್ಲಿ ಸಾಭೀತಾಯಿತು. ಐಪಿಎಲ್ 2026 34ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್ 206 ರನ್ ಕಲೆಹಾಕಿತ. ಈ ಗುರಿ ಬೆನ್ನಟ್ಟಿದ ಆರ್​​ಸಿಬಿ ಪರ ವಿರಾಟ್ ಕೊಹ್ಲಿ ಹಾಗೂ ಜೆಕೋಬ್ ಬೆಥೆಲ್ ಇನ್ನಿಂಗ್ಸ್ ಆರಂಭಿಸಿದರು. ಇತ್ತ ಗುಜರಾತ್ ಪರ ಮೊಹಮ್ಮದ್ ಸಿರಾಜ್ ಬೌಲಿಂಗ್ ಆರಂಭಿಸಿದರು. ಸಿರಾಜ್ ಬೌಲ್ ಮಾಡಿದ ಈ ಓವರ್​ನಲ್ಲಿ ಕೊಹ್ಲಿ ಎದುರಿಸಿದ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ್ದರು. ಆದರೆ ಆ ಕ್ಯಾಚ್ ಹಿಡಿಯುವಲ್ಲಿ ವಾಷಿಂಗ್ಟನ್ ಸುಂದರ್ ವಿಫಲರಾದರು.

ಮೊದಲ ಎಸೆತದಲ್ಲೇ ಜೀವದಾನ

ಸಿರಾಜ್ ಎಸೆತವನ್ನು ಕೊಹ್ಲಿ ಮಿಡ್ ವಿಕೆಟ್​ ಕಡೆಗೆ ಆಡಿದರು. ಅಲ್ಲಿಯೇ ನಿಂತಿದ್ದ ಸುಂದರ್​ಗೆ ಇದು ಸುಲಭ ಕ್ಯಾಚ್ ಆಗಿತ್ತು. ಆದರೆ ಆ ಕ್ಯಾಚ್ ತೆಗೆದುಕೊಳ್ಳುವಲ್ಲಿ ಸುಂದರ್ ತಪ್ಪು ಮಾಡಿದರು. ಹೀಗಾಗಿ ಕೊಹ್ಲಿಗೆ ತಾವು ಎದುರಿಸಿದ ಮೊದಲ ಎಸೆತದಲ್ಲೇ ಜೀವದಾನ ಸಿಕ್ಕಿತು. ಅಂದರೆ ಆಗ ಕೊಗ್ಲಿ ಖಾತೆಯನ್ನು ತೆರೆದಿರಲಿಲ್ಲ. ಇಲ್ಲಿಂದ ಜೀವದಾನದ ಲಾಭವನ್ನು ಸಂಪೂರ್ಣವಾಗಿ ಬಳಸಿಕೊಂಡ ವಿರಾಟ್ ಕೊಹ್ಲಿ ಗುಜರಾತ್​ನ ಪ್ರತಿಯೊಬ್ಬ ಬೌಲರ್​ ಅನ್ನು ತರಾಟೆಗೆ ತೆಗೆದುಕೊಂಡರು.

44 ಎಸೆತಗಳಲ್ಲಿ 81 ರನ್

ಇದರ ಫಲವಾಗಿ ಕೊಹ್ಲಿ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಅವರ 66 ನೇ ಐಪಿಎಲ್ ಅರ್ಧಶತಕ ಮತ್ತು ಈ ಆವೃತ್ತಿಯ ಮೂರನೇ ಅರ್ಧಶತಕವೂ ಆಗಿದೆ. ಕೊಹ್ಲಿ ಅರ್ಧಶತಕ ಬಾರಿಸುವುದರ ಜೊತೆಗೆ ದೇವದತ್ ಪಡಿಕ್ಕಲ್ ಅವರೊಂದಿಗೆ ಎರಡನೇ ವಿಕೆಟ್​ಗೆ ಶತಕದ ಜೊತೆಯಾಟವನ್ನು ಕಟ್ಟಿದರು. ಅರ್ಧಶತಕದ ಬಳಿಕ ತಮ್ಮ ಬ್ಯಾಟಿಂಗ್ ಗೇರ್ ಬದಲಿಸಿದ ಕೊಹ್ಲಿ ಕೇವಲ 44 ಎಸೆತಗಳಲ್ಲಿ 81 ರನ್ ಬಾರಿಸಿದರು. ಅಂದರೆ ಕೊಹ್ಲಿ ಮುಂದಿನ 14 ಎಸೆತಗಳಲ್ಲಿ 31 ರನ್ ಚಚ್ಚಿದರು. ದುರಾದೃಷ್ಟವಶಾತ್ ಕೊಹ್ಲಿ ಜೇಸನ್ ಹೊಲ್ಡರ್ ಅವರ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿ ಶತಕ ವಂಚಿತದರು.

800 ಬೌಂಡರಿ, 300 ಸಿಕ್ಸರ್

ಕೊಹ್ಲಿ ತಮ್ಮ ಈ ಇನ್ನಿಂಗ್ಸ್​ನಲ್ಲಿ 8 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್​ಗಳನ್ನು ಬಾರಿಸಿದರು. ಈ ಮೂಲಕ ಕೊಹ್ಲಿ ಐಪಿಎಲ್​ನಲ್ಲಿ 800 ಬೌಂಡರಿಗಳನ್ನು ಮತ್ತು 300 ಸಿಕ್ಸರ್​ಗಳನ್ನು ಬಾರಿಸಿದ ಮೈಲಿಗಲ್ಲು ದಾಟಿದರು. ಹಾಗೆಯೇ ಅತಿ ಹೆಚ್ಚು ಸಿಕ್ಸರ್​ಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಲೈಸೆನ್ಸ್ ರದ್ದು ಮಾಡಿದ ಆರ್​ಬಿಐ; ಪೇಟಿಎಂ ಗ್ರಾಹಕರಿಗೆ ತೊಂದರೆಯಾ? – Kannada News | Paytm payments Bank Ltd licence canceled by RBI, know what happens next

ನವದೆಹಲಿ, ಏಪ್ರಿಲ್ 24: ಭಾರತೀಯ ರಿಸರ್ವ್ ಬ್ಯಾಂಕ್ (RBI) ಇಂದು ಶುಕ್ರವಾರ ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್​ನ (PPBL) ಬ್ಯಾಂಕಿಂಗ್ ಪರವಾನಗಿಯನ್ನು (Licence) ಅಧಿಕೃತವಾಗಿ ರದ್ದುಗೊಳಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಪಿಪಿಬಿಎಲ್​ಗೆ ಆರ್​ಬಿಐ ವಿವಿಧ ನಿರ್ಬಂಧಗಳನ್ನು ವಿಧಿಸಿತ್ತು. ಈಗ ಈ ಸಂಸ್ಥೆಯು ಇನ್ಮುಂದೆ ಯಾವುದೇ ಬ್ಯಾಂಕಿಂಗ್ ಚಟುವಟಿಕೆ ನಡೆಸುವಂತಿಲ್ಲ. ತತ್​ಕ್ಷಣದಿಂದಲೇ ಜಾರಿಯಾಗುವಂತೆ ಲೈಸೆನ್ಸ್ ಅನ್ನು ಹಿಂಪಡೆಯಲಾಗಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಪರವಾನಗಿ ರದ್ದತಿಗೆ ಕಾರಣ

ಆರ್‌ಬಿಐ ಪ್ರಕಾರ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ವ್ಯವಹಾರಗಳನ್ನು ನಡೆಸುತ್ತಿದ್ದ ರೀತಿ ಠೇವಣಿದಾರರು ಹಾಗು ಬ್ಯಾಂಕ್​ನ ಹಿತಾಸಕ್ತಿಗೆ ಮಾರಕವಾಗಿತ್ತು. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ರ ಸೆಕ್ಷನ್ 22(4) ರ ಅಡಿಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಕಂಪನಿಯು ಬ್ಯಾಂಕಿಂಗ್ ನಿಯಮಗಳನ್ನು ಪದೇ ಪದೇ ಉಲ್ಲಂಘಿಸಿರುವುದು ಮತ್ತು ಆಡಳಿತಾತ್ಮಕ ವೈಫಲ್ಯಗಳೇ ಈ ಕಠಿಣ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.

ಇಂದಿನಿಂದ (ಏಪ್ರಿಲ್ 24) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಯಾವುದೇ ರೀತಿಯ ಬ್ಯಾಂಕಿಂಗ್ ವ್ಯವಹಾರಗಳನ್ನು ಅಥವಾ ಹಣಕಾಸು ಚಟುವಟಿಕೆಗಳನ್ನು ನಡೆಸುವಂತಿಲ್ಲ. ಬ್ಯಾಂಕನ್ನು ಮುಚ್ಚುವ ಪ್ರಕ್ರಿಯೆಯನ್ನು (Winding up) ಪ್ರಾರಂಭಿಸಲು ಆರ್‌ಬಿಐ ಶೀಘ್ರದಲ್ಲೇ ಹೈಕೋರ್ಟ್ ಮೊರೆ ಹೋಗಲಿದೆ.

ಇದನ್ನೂ ಓದಿ: ರುಪಾಯಿ ಮೌಲ್ಯ ಕುಸಿತ; ಆತಂಕ ಪಡಬೇಕಿಲ್ಲ; ದೀರ್ಘಾವಧಿ ಹೂಡಿಕೆಗೆ ಒಳ್ಳೆಯ ಅವಕಾಶ: ಸಿಇಎ ಅನಂತನಾಗೇಶ್ವರನ್

ಗ್ರಾಹಕರ ಹಣ ಸುರಕ್ಷಿತವೇ?

ಪೇಟಿಎಂ ಬ್ಯಾಂಕ್‌ನಲ್ಲಿ ಹಣ ಇಟ್ಟಿರುವ ಗ್ರಾಹಕರಿಗೆ ಆರ್‌ಬಿಐ ಅಭಯ ನೀಡಿದೆ. ಠೇವಣಿದಾರರಿಗೆ ನೀಡಬೇಕಾದ ಪೂರ್ಣ ಹಣವನ್ನು ಹಿಂತಿರುಗಿಸಲು ಬ್ಯಾಂಕ್ ಬಳಿ ಸಾಕಷ್ಟು ನಗದು ಹಣ (Liquidity) ಲಭ್ಯವಿದೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ. ಆದ್ದರಿಂದ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ.

ಪೇಟಿಎಂ ಕಂಪನಿಗೆ 2015ರಲ್ಲಿ ಬ್ಯಾಂಕಿಂಗ್ ಲೈಸೆನ್ಸ್ ಸಿಕ್ಕಿತ್ತು. 2017ರಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಆರಂಭವಾಯಿತು. ಬಹಳ ಬೇಗ ಅದು ಜನಪ್ರಿಯವಾಗಿತ್ತು. 3 ಕೋಟಿ ಬ್ಯಾಂಕ್ ಅಕೌಂಟ್​ಗಳು; 10 ಕೋಟಿ ಕೆವೈಸಿಯುಕ್ತ ಗ್ರಾಹಕರು; ಮತ್ತು 30 ಕೋಟಿ ವ್ಯಾಲಟ್ ಬಳಕೆದಾರರನ್ನು ಅದು ಹೊಂದಿತ್ತು. ಹಾಗೆಯೇ, 80 ಲಕ್ಷ ಫಾಸ್​ಟ್ಯಾಗ್ ಗ್ರಾಹಕರ ಬಳಗವೂ ಅದಕ್ಕಿತ್ತು.

ಆದರೆ, ಕೆವೈಸಿ ಸರಿಯಾಗಿ ಪಡೆಯದೆಯೇ ಅಕೌಂಟ್​ಗಳನ್ನು ನೀಡಲಾಗಿದೆ ಎಂಬಿತ್ಯಾದಿ ಹಲವು ನಿಯಮಗಳ ಉಲ್ಲಂಘನೆ ಆಗಿರುವ ಆರೋಪ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಕೇಳಿಬಂದಿತು. ಈ ಸಂಬಂಧ ಆರ್​ಬಿಐ ಹಲವು ಬಾರಿ ಆ ಸಂಸ್ಥೆಗೆ ನೋಟೀಸ್ ಕೊಟ್ಟಿತ್ತು. ಆದರೂ ಉಲ್ಲಂಘನೆ ಮುಂದುವರಿದಿತ್ತು. 2022ರಲ್ಲಿ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳದಂತೆ ಪೇಮೆಂಟ್ಸ್ ಬ್ಯಾಂಕ್​ಗೆ ಆರ್​ಬಿಐ ನಿರ್ಬಂಧ ವಿಧಿಸಿತು.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಇದ್ದೂ ಅದನ್ನು ಬಳಸದೇ ಇದ್ದರೆ ಏನಾಗುತ್ತೆ? ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ?

2024ರಲ್ಲಿ ಇರುವ ಗ್ರಾಹಕರಿಂದಲೇ ಹೊಸ ಡೆಪಾಸಿಟ್, ಕ್ರೆಡಿಟ್ ಟ್ರಾನ್ಸಾಕ್ಷನ್ಸ್, ಟಾಪಪ್, ವ್ಯಾಲಟ್ಸ್, ಫಾಸ್​ಟ್ಯಾಗ್ ಇತ್ಯಾದಿಯನ್ನು ಪಡೆಯದಂತೆಯೂ ನಿರ್ಬಂಧಿಸಲಾಯಿತು.

ಈಗ ಅಂತಿಮವಾಗಿ ಪರವಾನಗಿಯನ್ನೇ ರದ್ದುಗೊಳಿಸುವ ಮೂಲಕ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಬ್ಯಾಂಕಿಂಗ್ ಅಧ್ಯಾಯ ಕೊನೆಗೊಂಡಂತಾಗಿದೆ. ಆದರೆ, ಪೇಟಿಎಂನ ಇತರ ಯುಪಿಐ (UPI) ಮತ್ತು ಪೇಮೆಂಟ್ ಅಗ್ರಿಗೇಟರ್ ಸೇವೆಗಳು ಸಾಮಾನ್ಯದಂತೆ ಮುಂದುವರಿಯಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಂಜಯ್ ದತ್ ಹೊಸ ಸಿನಿಮಾ; ‘ಖಳನಾಯಕ್ ರಿಟರ್ನ್ಸ್’ ಫಸ್ಟ್ ಲುಕ್ ಟೀಸರ್ ಬಿಡುಗಡೆ – Kannada News | Sanjay Dutt Khalnayak Returns First Look Teaser released Khalnayak Sequel update

ಬಾಲಿವುಡ್ ಚಿತ್ರರಂಗದ ಇತಿಹಾಸದಲ್ಲಿ ‘ಖಳನಾಯಕ್’ ಸಿನಿಮಾಗೆ ವಿಶೇಷ ಸ್ಥಾನವಿದೆ. ಸುಮಾರು ಮೂರು ದಶಕಗಳ ಹಿಂದೆ ಸಂಜಯ್ ದತ್ (Sanjay Dutt) ಅವರಿಗೆ ಭಾರಿ ಜನಪ್ರಿಯತೆ ತಂದುಕೊಟ್ಟ ಈ ಚಿತ್ರದ ಸೀಕ್ವೆಲ್ ಈಗ ಸಿದ್ಧವಾಗುತ್ತಿದೆ. ಚಿತ್ರತಂಡವು ಶುಕ್ರವಾರ (ಏಪ್ರಿಲ್ 24) ‘ಖಳನಾಯಕ್ ರಿಟರ್ನ್ಸ್’ (Khalnayak Returns) ಸಿನಿಮಾದ ಪವರ್‌ಫುಲ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಸಂಜಯ್ ದತ್ ಅತ್ಯಂತ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಟೀಸರ್​ನಲ್ಲಿ ಸಂಜಯ್ ದತ್ ಅವರ ತೀಕ್ಷ್ಣವಾದ ಕಣ್ಣುಗಳು ಮತ್ತು ಆಕ್ರಮಣಕಾರಿ ಶೈಲಿಯ ಲುಕ್ ಹೈಲೈಟ್ ಆಗಿದೆ. ಮತ್ತೆ ‘ಬಲ್ಲು’ ಪಾತ್ರದ ಗತ್ತು ಕಾಣಿಸಿದೆ. ಟೀಸರ್‌ನ ಹಿನ್ನೆಲೆ ಸಂಗೀತ ಮತ್ತು ದೃಶ್ಯಗಳು ಅಭಿಮಾನಿಗಳಲ್ಲಿ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿವೆ. ಸದ್ಯಕ್ಕಂತೂ ಸಂಜಯ್ ದತ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಮಿಂಚುತ್ತಿದ್ದಾರೆ.

ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಟೀಸರ್ ಹಂಚಿಕೊಂಡಿರುವ ಸಂಜಯ್ ದತ್, ‘ಯಾವುದೇ ಕಥೆ ಮುಗಿಯುವುದಿಲ್ಲ. ಅದು ಮತ್ತೆ ಆರಂಭವಾಗುತ್ತದೆ. ಖಳನಾಯಕ್ ರಿಟರ್ನ್ಸ್’ ಎಂದು ಬರೆದುಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಚಿತ್ರದ ಪೋಸ್ಟರ್‌ಗಳನ್ನು ಸಹ ಅನಾವರಣಗೊಳಿಸಲಾಯಿತು. ‘ಪ್ರತಿ ಕಥೆಗೂ ಒಂದು ಸಮಯವಿರುತ್ತದೆ. ಈಗ ಅದರ ಸಮಯ ಬಂದಿದೆ’ ಎಂಬ ಕ್ಯಾಪ್ಷನ್ ನೀಡಿರುವುದು ಕುತೂಹಲ ಹೆಚ್ಚಿಸಿದೆ.

‘ಖಳನಾಯಕ್ ರಿಟರ್ನ್ಸ್’ ಫಸ್ಟ್ ಲುಕ್ ಟೀಸರ್:

ಸುಭಾಷ್ ಘೈ ನಿರ್ದೇಶನದಲ್ಲಿ 1993ರಲ್ಲಿ ತೆರೆಕಂಡಿದ್ದ ‘ಖಳನಾಯಕ್’ ಸಿನಿಮಾ ಬಾಲಿವುಡ್‌ನ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದು. ಆ ಸಿನಿಮಾದಲ್ಲಿ ಸಂಜಯ್ ದತ್ ಜೊತೆಗೆ ಜಾಕಿ ಶ್ರಾಫ್ ಮತ್ತು ಮಾಧುರಿ ದೀಕ್ಷಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಆ ಚಿತ್ರದ ಹಾಡುಗಳು ಇಂದಿಗೂ ಜನಪ್ರಿಯ. ಈಗ ಸೀಕ್ವೆಲ್‌ನಲ್ಲಿ ಸಂಜಯ್ ದತ್ ಅವರೊಂದಿಗೆ ಹಳೆಯ ತಾರಾಗಣ ಇರುತ್ತದೆಯೇ ಅಥವಾ ಹೊಸಬರು ಸೇರಿಕೊಳ್ಳುತ್ತಾರೆಯೇ ಎಂಬ ಮಾಹಿತಿ ಇನ್ನು ಬಹಿರಂಗವಾಗಿಲ್ಲ.

ಇದನ್ನೂ ಓದಿ: ‘ಧುರಂಧರ್’ ಯಶಸ್ಸಿನ ಬೆನ್ನಲ್ಲೇ ಸಂಜಯ್ ದತ್ ಹೊಸ ಸಿನಿಮಾ ‘ಆಖ್ರಿ ಸವಾಲ್’

ಸದ್ಯಕ್ಕೆ ಚಿತ್ರದ ಕಥೆ ಮತ್ತು ಉಳಿದ ಪಾತ್ರವರ್ಗದ ಬಗ್ಗೆ ಹೆಚ್ಚಿನ ವಿವರಗಳನ್ನು ಚಿತ್ರತಂಡ ಗುಟ್ಟಾಗಿಟ್ಟಿದೆ. ಸಂಜಯ್ ದತ್ ಅವರ ಈ ಮಾಸ್ ಲುಕ್ ನೋಡಿದ ಮೇಲೆ ಬಾಲಿವುಡ್‌ನಲ್ಲಿ ಮತ್ತೊಂದು ದೊಡ್ಡ ಆ್ಯಕ್ಷನ್ ಸಿನಿಮಾ ಸಿದ್ಧವಾಗುತ್ತಿದೆ ಎಂಬುದು ಖಚಿತವಾಗಿದೆ. ‘ಧುರಂಧರ್ 2’ ಯಶಸ್ಸಿನಲ್ಲಿ ತೇಲುತ್ತಿರುವ ಸಂಜಯ್ ದತ್ ಅವರು ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RCB vs GT: 6,6,6,6,6,6.. 20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್ – Kannada News | IPL 2026: Devdutt Padikkal’s Explosive Fifty Propels RCB in GT’s 207 Chase

ಐಪಿಎಲ್ 2026 ರ 34 ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನೀಡಿರುವ 207 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ ಪರ ಲೋಕಲ್ ಬಾಯ್ ದೇವದತ್ ಪಡಿಕ್ಕಲ್ ಅಬ್ಬರದ ಅರ್ಧಶತಕ ಬಾರಿಸಿದರು. ಎಂದಿನಂತೆ ಎರಡನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಪಡಿಕ್ಕಲ್ ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್​ಗಟ್ಟಿದರು. ಆ ನಂತರವೂ ಒಂದೇ ಗೇರ್​ನಲ್ಲಿ ಬ್ಯಾಟ್ ಬೀಸಿದ ಪಡಿಕ್ಕಲ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ವಾಸ್ತವವಾಗಿ ಇಂದಿನ ಪಂದ್ಯದಲ್ಲಿ ಫಿಲ್ ಸಾಲ್ಟ್ ಆಡಿರಲಿಲ್ಲ. ಹೀಗಾಗಿ ಅವರ ಬದಲಿಗೆ ಜೆಕೋಬ್ ಬೆಥೆಲ್​ಗೆ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತು. ಅದರಂತೆ ವಿರಾಟ್ ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸಿದ ಬೆಥೆಲ್ 14 ರನ್ ಬಾರಿಸಿ ಔಟಾದರು. ಆ ನಂತರ ಬಂದ ಪಡಿಕ್ಕಲ್ ಕೊಹ್ಲಿ ಜೊತೆಗೆ ಶತಕದ ಜೊತೆಯಾಟ ಕಟ್ಟಿದರು. ಮಾತ್ರವಲ್ಲದೆ 20 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 2 ಬೌಂಡರಿಗಳ ಸಹಿತ ಅರ್ಧಶತಕ ಪೂರೈಸಿದರು. ಅಂದರೆ ಪಡಿಕ್ಕಲ್ ಕೇವಲ ಬೌಂಡರಿ ಸಿಕ್ಸರ್​ಗಳಿಂದಲೇ 44 ರನ್ ಕಲೆಹಾಕಿದರು. ಈ ಅರ್ಧಶತಕದೊಂದಿಗೆ ಪಡಿಕ್ಕಲ್ ಐಪಿಎಲ್‌ನಲ್ಲಿ 2000 ರನ್​ಗಳನ್ನು ಸಹ ಪೂರೈಸಿದರು.

Source link

ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ – Kannada News | Kedarnath Temple Opens To devotees choas after people Jumping Barricades

ಕೇದಾರನಾಥ, ಏಪ್ರಿಲ್ 24: ಈ ವರ್ಷದ ಚಾರ್ ಧಾಮ್ ಯಾತ್ರೆ (Char Dham Yatra) ಉತ್ತರಾಖಂಡದಲ್ಲಿ ಅಧಿಕೃತವಾಗಿ ಪ್ರಾರಂಭವಾಗಿದೆ. ಕೇದಾರನಾಥ (Kedarnath) ದೇವಾಲಯದ ಬಾಗಿಲುಗಳು ಏಪ್ರಿಲ್ 22ರಂದು ಭಕ್ತರಿಗೆ ತೆರೆಯಲ್ಪಟ್ಟವು. ಗರ್ವಾಲ್ ಹಿಮಾಲಯದಲ್ಲಿ ಎತ್ತರದಲ್ಲಿರುವ ಈ ದೇವಾಲಯವು 22 ಕಿಲೋಮೀಟರ್ ಕಷ್ಟಕರವಾದ ಚಾರಣ ಮತ್ತು ಸೀಮಿತ ಹೆಲಿಕಾಪ್ಟರ್ ಪ್ರವೇಶದ ಹೊರತಾಗಿಯೂ ಮೊದಲ ದಿನವೇ ಅಗಾಧವಾದ ಜನಸಾಗರವನ್ನು ಕಂಡಿತು. ಸಾವಿರಾರು ಜನರು ಏಕಕಾಲದಲ್ಲಿ ಆಗಮಿಸಿದ್ದರಿಂದ ದೇವಾಲಯದ ಸುತ್ತಮುತ್ತಲಿನ ಹಲವಾರು ಪ್ರದೇಶಗಳಲ್ಲಿ ನೂಕುನುಗ್ಗಲು ಉಂಟಾಯಿತು. ಇದರಿಂದ ಕಾಲ್ತುಳಿತವೂ ಉಂಟಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಾಡ್ಲೆ ಮಶಾಕ್ ದರ್ಗಾ ಕೇಸ್​​ ಮತ್ತೆ ಮುನ್ನೆಲೆಗೆ: ಯುಟಿ ಖಾದರ್​​ ಪತ್ರಕ್ಕೆ ಹಿಂದೂ ಸಂಘಟನೆಗಳು ಸಿಡಿದಿದ್ದೇಕೆ? – Kannada News | Aland Dargah Conflict: Speaker UT Khader’s Plea to Drop Cases Sparks Hindu Anger

ಲಾಡ್ಲೆ ಮಶಾಕ್ ದರ್ಗಾ, ಯುಟಿ ಖಾದರ್​​ ಪತ್ರImage Credit source: tv9 kannada

ಕಲಬುರಗಿ, ಏಪ್ರಿಲ್​ 24: ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದ ಜಿಲ್ಲೆಯ ಆಳಂದದ ಲಾಡ್ಲೆ ಮಶಾಕ್ ದರ್ಗಾ (ladle mashak dargah) ಗಲಭೆ ಪ್ರಕರಣಕ್ಕೆ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ಅಮಾಯಕ ಮುಸ್ಲಿಂ ಯುವಕರನ್ನು ಬಿಡುಗಡೆ ಮಾಡುವಂತೆ ಸಭಾಧ್ಯಕ್ಷ ಯು.ಟಿ. ಖಾದರ್ (U.T. Khader) ಗೃಹ ಸಚಿವ ಜಿ ಪರಮೇಶ್ವರ್​ಗೆ ಬರೆದಿರುವ ಪತ್ರವು ತೀವ್ರ ವಿವಾದಕ್ಕೆ ಕಾರಣವಾಗಿದೆ. ಸ್ಪೀಕರ್ ಅವರ ಈ ನಡೆಯನ್ನು ಹಿಂದೂ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು, ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿವೆ.

ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ತೆರಳಿದ್ದ ವೇಳೆ ಮುಸ್ಲಿಂರಿಂದ ಹಿಂದೂ ಸಂಘಟನೆ ಮುಖಂಡರು, ಡಿಸಿ, ಎಸ್ಪಿ, ಕೇಂದ್ರ ಸಚಿವರ ಮೇಲೆ ದೊಡ್ಡ ಪ್ರಮಾಣದ ಕಲ್ಲುತೂರಾಟ ನಡೆಸಿದ್ದ ಘಟನೆಗೆ ಸಂಬಂಧಿಸಿದಂತೆ, ಪ್ರಕರಣದಲ್ಲಿ ಬಂಧಿತರಾಗಿರುವ ಅಮಾಯಕ ಮುಸ್ಲಿಂರನ್ನ ಬಿಡುಗಡೆ ಮಾಡಬೇಕೆಂದು ಸ್ಪೀಕರ್ ಯು.ಟಿ ಖಾದರ್ ಬರೆದಿರುವ ಪತ್ರಕ್ಕೆ ಹಿಂದೂ ಸಂಘಟನೆಗಳು ಕಿಡಿಕಾರಿವೆ‌.

ಯು.ಟಿ ಖಾದರ್ ಪತ್ರಕ್ಕೆ ಶಿವಸೇನೆ ಕಿಡಿ

ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾ ಕಲ್ಲು ತೂರಾಟ ಪ್ರಕರಣದಲ್ಲಿ ಅಮಾಯಕ ಮುಸ್ಲಿಂ ಯುವಕರ ಹೆಸರು ಸಿಲುಕಿಸಲಾಗಿದ್ದು, ಪ್ರಕರಣದಿಂದ ಅವರನ್ನ ಕೈಬಿಡಬೇಕೆಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಗೃಹ ಸಚಿವರಿಗೆ ಯು.ಟಿ ಖಾದರ್ ಬರೆದಿರುವ ಪತ್ರಕ್ಕೆ ಶಿವಸೇನೆ ಕಿಡಿಕಾರಿದೆ.

ಇದನ್ನೂ ಓದಿ: ಆಳಂದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಬದಲಾವಣೆ: ಪೂಜೆ ಬಳಿಕ ಹಿಂದೂಗಳು ಸ್ಫೋಟಕ ಆರೋಪ

ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಕೆಲ ಕಿಡಿಗೇಡಿಗಳು ಮಲ-ಮೂತ್ರ ಎರೆಚಿ ಅಪವಿತ್ರಗೊಳಿಸಿದ್ದರು. ಅದಕ್ಕಾಗಿ 2022ರಲ್ಲಿ ಹಿಂದೂ ಸಂಘಟನೆಗಳು ಶಿವಲಿಂಗ ಶುದ್ದೀಕರಣಕ್ಕೆ ತೆರಳಿದ್ದ ಸಂದರ್ಭದಲ್ಲಿ ನೂರಾರು ಮುಸ್ಲಿಂ ಯುವಕರು ಪೂಜೆ ಸಲ್ಲಿಸಿ ಹೊರಬರ್ತಿದ್ದ ಕೇಂದ್ರ ಸಚಿವ ಭಗವಂತ್ ಖೂಬಾ, ಡಿಸಿ, ಎಸ್ಪಿ, ಹಿಂದೂ ಮುಖಂಡರ ಕಾರಿನ ಮೇಲೆ ಮನಸೋ ಇಚ್ಛೆ ಕಲ್ಲು ತೂರಾಟ ಮಾಡಿದ್ದಲ್ಲದೇ, ದೊಣ್ಣೆಗಳನ್ನ ಹಿಡಿದು ಗಲಭೆ ಎಬ್ಬಿಸಿದ್ದರು.

ಗಲಭೆಗೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ ಅನ್ಸಾರಿ ಸೇರಿದಂತೆ ನೂರಾರು ಜನರ ವಿರುದ್ಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಪ್ರಕರಣದಲ್ಲಿ ಅಮಾಯಕ ಮುಸ್ಲಿಂರನ್ನ ಸಹ ಸಿಲುಕಿಸಲಾಗಿದ್ದು, ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನ ವಾಪಸ್ಸು ಪಡೆಯಬೇಕೆಂದು ಯು.ಟಿ ಖಾದರ್ ಮನವಿ ಮಾಡಿದ್ದಾರೆ. ಇನ್ನು ಪ್ರಕರಣದಲ್ಲಿ ಮುಸ್ಲಿಂರನ್ನ ಕೈಬಿಟ್ಟರೆ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಅಂತಾ ಸರ್ಕಾರಕ್ಕೆ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಇದನ್ನೂ ಓದಿ: ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಕೋರ್ಟ್‌ ಗ್ರೀನ್‌ ಸಿಗ್ನಲ್‌

ಆಳಂದ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ, ಮುಸ್ಲಿಂರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನ ಕೈಬಿಡಿ ಎಂದಿರುವ ಯು.ಟಿ ಖಾದರ್ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಒಂದು ಸಮುದಾಯ ಪರ ಕೆಲಸ ಮಾಡುತ್ತಿರುವುದು ಹಿಂದೂ ಸಂಘಟನೆಗಳ ಆಕ್ರೋಶ ಮತ್ತಷ್ಟು ಹೆಚ್ಚಾಗುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದೇವರಿಗೆ ಥ್ಯಾಂಕ್ಸ್; ಕ್ಯಾನ್ಸರ್ ಗೆದ್ದು ಬಂದಿದ್ದಾಗಿ ಘೋಷಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು – Kannada News | Israeli PM Benjamin Netanyahu treated for early stage prostate cancer

ನವದೆಹಲಿ, ಏಪ್ರಿಲ್ 24: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಪ್ರಾಸ್ಟೇಟ್ ಕ್ಯಾನ್ಸರ್​ಗೆ ತುತ್ತಾಗಿದ್ದರು ಎಂಬ ವಿಷಯ ಹೊರಬಿದ್ದಿದೆ. ಆದರೆ, ಅವರು ಈ ವಿಷಯವನ್ನು ಗುಟ್ಟಾಗಿಟ್ಟಿದ್ದರು. ಚಿಕಿತ್ಸೆ ಪಡೆದು ಕ್ಯಾನ್ಸರ್​ನಿಂದ ಸಂಪೂರ್ಣವಾಗಿ ಗುಣಮುಖರಾಗಿರುವ ಅವರು ಈ ವಿಷಯವನ್ನು ಖುದ್ದಾಗಿ ಬಹಿರಂಗಪಡಿಸಿದ್ದಾರೆ. ಎಕ್ಸ್​​ನಲ್ಲಿನ ಪೋಸ್ಟ್‌ನಲ್ಲಿ ಅವರು ತಮ್ಮ ಪ್ರಾಸ್ಟೇಟ್‌ ಕ್ಯಾನ್ಸರ್​​ಗೆ ಸಂಬಂಧಿಸಿದ ಸಣ್ಣ ವೈದ್ಯಕೀಯ ಸಮಸ್ಯೆಯನ್ನು ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈಗ ಸಂಪೂರ್ಣವಾಗಿ ಚಿಕಿತ್ಸೆ ನೀಡಲಾಗಿದೆ. ನಾನು ಕ್ಯಾನ್ಸರ್​​ ಅನ್ನು ಜಯಿಸಿದ್ದೇನೆ. ದೇವರಿಗೆ ಧನ್ಯವಾದಗಳು ಎಂದು ನೆತನ್ಯಾಹು ಪೋಸ್ಟ್ ಮಾಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ತೀವ್ರ ಸಂಘರ್ಷದ ಕಾರಣದಿಂದ ನನ್ನ ಆರೋಗ್ಯದ ಬಗ್ಗೆ ಅಪ್​ಡೇಟ್ ನೀಡಲು ಸ್ವಲ್ಪ ಸಮಯ ತೆಗೆದುಕೊಂಡೆ ಎಂದು ನೆತನ್ಯಾಹು ಎಕ್ಸ್​​ನಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ. “ನಾನು ನಿಮ್ಮೊಂದಿಗೆ ಮೂರು ವಿಷಯಗಳನ್ನು ಹಂಚಿಕೊಳ್ಳಲು ಕೇಳಿಕೊಳ್ಳುತ್ತೇನೆ. 1 – ದೇವರಿಗೆ ಧನ್ಯವಾದಗಳು, ನಾನು ಆರೋಗ್ಯವಾಗಿದ್ದೇನೆ. 2 – ನಾನು ಅತ್ಯುತ್ತಮ ದೈಹಿಕ ಸ್ಥಿತಿಯಲ್ಲಿದ್ದೇನೆ. 3 – ನನ್ನ ಪ್ರಾಸ್ಟೇಟ್‌ನಲ್ಲಿ ನನಗೆ ಸಣ್ಣ ವೈದ್ಯಕೀಯ ಸಮಸ್ಯೆ ಇತ್ತು, ಅದಕ್ಕೆ ಸಂಪೂರ್ಣವಾಗಿ ಚಿಕಿತ್ಸೆ ನೀಡಲಾಯಿತು. ನನ್ನ ಜೊತೆಗೆ ಇದ್ದಿದ್ದಕ್ಕೆ ದೇವರಿಗೆ ಧನ್ಯವಾದಗಳು” ಎಂದು ನೆತನ್ಯಾಹು ಹೇಳಿದ್ದಾರೆ.

ಇದನ್ನೂ ಓದಿ: ಲೆಬನಾನ್‌ನೊಂದಿಗೆ ಶೀಘ್ರದಲ್ಲೇ ಇಸ್ರೇಲ್ ನೇರ ಮಾತುಕತೆ; ನೆತನ್ಯಾಹು ಘೋಷಣೆ

“ದೇವರಿಗೆ ಧನ್ಯವಾದಗಳು, ನಾನು ಇದನ್ನೂ ಸಹ ಜಯಿಸಿದೆ. ಜೆರುಸಲೆಮ್‌ನ ಹಡಸ್ಸಾ ಆಸ್ಪತ್ರೆಯ ವೈದ್ಯರು ಮತ್ತು ಅದ್ಭುತ ವೈದ್ಯಕೀಯ ತಂಡಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇಸ್ರೇಲ್ ನಾಗರಿಕರೇ, ನಿಮಗೆ ನನಗೆ ಒಂದೇ ಒಂದು ವಿನಂತಿ ಇದೆ. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ತಪಾಸಣೆಗೆ ಒಳಗಾಗಿ ಮತ್ತು ವೈದ್ಯರ ಸೂಚನೆಗಳನ್ನು ಅನುಸರಿಸಿ” ಎಂದು ನೆತನ್ಯಾಹು ತಮ್ಮ ಪೋಸ್ಟ್‌ನಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಇಸ್ರೇಲ್ ಕ್ಯಾನ್ಸರ್ ಇದ್ದಂತೆ : ಪಾಕ್ ಸಚಿವ ಖ್ವಾಜಾ ಆಸಿಫ್ ವಿವಾದಾತ್ಮಕ ಹೇಳಿಕೆ, ನೆತನ್ಯಾಹು ತೀವ್ರ ವಾಗ್ದಾಳಿ

ಇಸ್ರೇಲ್​ನ ಪ್ರಧಾನ ಮಂತ್ರಿ ಕಚೇರಿ ಬಿಡುಗಡೆ ಮಾಡಿದ ಮತ್ತು ದಿ ಜೆರುಸಲೆಮ್ ಪೋಸ್ಟ್ ಉಲ್ಲೇಖಿಸಿದ ಅಧಿಕೃತ ವೈದ್ಯಕೀಯ ವರದಿಯ ಪ್ರಕಾರ, ನೆತನ್ಯಾಹು ಆರಂಭಿಕ ಹಂತದ ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಯಶಸ್ವಿ ಚಿಕಿತ್ಸೆ ಪಡೆದಿದ್ದಾರೆ. ಏಪ್ರಿಲ್ 20, 2026ರ ದಿನಾಂಕದ ವರದಿಯು ಇಸ್ರೇಲಿ ಪ್ರಧಾನಿ ಈ ಹಿಂದೆ ಡಿಸೆಂಬರ್ 29, 2024ರಂದು ಪ್ರಾಸ್ಟೇಟ್ ಹೈಪರ್‌ಪ್ಲಾಸಿಯಾಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ಸೂಚಿಸುತ್ತದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link