ಕಲಬುರಗಿ, ಏಪ್ರಿಲ್ 06: ದಲಿತ ಎಂಬ ಕಾರಣಕ್ಕೆ ಸ್ವಾಮೀಜಿ ಮೇಲೆ ಹಲ್ಲೆ ಮಾಡಿ, ದೇಗುಲದಿಂದ ಹೊರಗೆ ಹಾಕಿರುವಂತಹ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿಯಲ್ಲಿ ನಡೆದಿದೆ. ಮಾತಾ ಮಾಣಿಕೇಶ್ವರಿ ದೇವಸ್ಥಾನದಲ್ಲಿ ಟ್ರಸ್ಟಿಗಳಿಂದ ತೆಲಂಗಾಣ ಮೂಲದ ಬಂಡಿ ಬಾಲಕೃಷ್ಣ ಎಂಬುವರನ್ನು ಎಳೆದಾಡಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಸ್ವಾಮೀಜಿ ಕಳೆದ 7-8 ವರ್ಷಗಳಿಂದ ದೇವಸ್ಥಾನದಲ್ಲಿ ನೆಲೆಸಿ ಸೇವೆ ಸಲ್ಲಿಸುತ್ತಿದ್ದರು. ಕೆಳಜಾತಿಯವರು ದೇವಸ್ಥಾನ ಪ್ರವೇಶಿಸಬಾರದು ಎಂದು ನಿಂದಿಸಿ ಹಲವು ಬಾರಿ ಹಲ್ಲೆ ಮಾಡಿದ್ದಾರೆ. ಟ್ರಸ್ಟ್ನ ಕಾರ್ಯದರ್ಶಿ ಶಿವಯ್ಯ ಮತ್ತು ಪುತ್ರ ಸುಮನ್ ವಿರುದ್ಧ ಹಲ್ಲೆ ಆರೋಪ ಮಾಡಲಾಗಿದೆ.
ನವದೆಹಲಿ, ಏಪ್ರಿಲ್ 6: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (Artificial Intelligence technology) ಅಡಿ ಇಟ್ಟ ಮೇಲೆ ಖುಷಿಪಡುವ ಮತ್ತು ದುಃಖಪಡುವ ಸಂಗತಿಗಳೆರಡೂ ಸಮಾನವಾಗಿ ಘಟಿಸುತ್ತಿವೆ. ಎಐ ಒಳಿತೋ, ಕೆಡುಕೋ ಎನ್ನುವ ಚರ್ಚೆ ನಡೆಯುತ್ತಲೇ ಇದೆ. ಈ ಜಿಜ್ಞಾಸೆ ಉದ್ಯಮ ವಲಯದವರನ್ನೂ ಬಿಟ್ಟಿಲ್ಲ. ಅಲ್ಲಿಯೂ ಭಿನ್ನಾಭಿಪ್ರಾಯಗಳು, ಅಭಿಪ್ರಾಯಭೇದಗಳು ಹೆಚ್ಚಿವೆ. ಅವರಲ್ಲೂ ಗೊಂದಲಗಳಿವೆ. ಎಐ ತಜ್ಞರೊಳಗೆಯೇ ಅಭಿಪ್ರಾಯಗಳು ಬೇರೆ ಬೇರೆ ಇವೆ.
ಕೆನಡಾದ ಶ್ರೀಮಂತ ಉದ್ಯಮಿ ಕೆವಿನ್ ಓಲಿಯಾರಿ ಅವರು ಎಐ ವಿಚಾರದ ಬಗ್ಗೆ ಬಹಳ ಕುತೂಹಲ ಎನಿಸುವ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಮನುಷ್ಯನ ಸೃಜನಶೀಲತೆಯ ಶಕ್ತಿಯು ಹಿಂದೆಂದಿಗಿಂತಲೂ ಹೆಚ್ಚು ಮೌಲ್ಯಯುತ ಎನಿಸುವಂತೆ ಮಾಡುತ್ತಿದೆ ಎಐ. ಐಡಿಯಾಗಳನ್ನು ಜಾರಿಗೊಳಿಸುವ ಶಕ್ತಿ ಹೊಂದಿದವರಿಗೆ ಒಳ್ಳೆಯ ಅವಕಾಶಗಳಿವೆ. ಹಿಂದೆಲ್ಲಾ ಎಲ್ಲರೂ ಎಂಜಿನಿಯರ್, ಎಂಜಿನಿಯರ್ ಆಗಬೇಕು ಎನ್ನುತ್ತಿದ್ದರು. ಈಗ ಆರ್ಟಿಸ್ಟ್ ಆಗಬೇಕೆಂದು ಬಯಸುವ ಕಾಲ ಮರಳಿದೆ’ ಎಂದು ಅವರು ಹೇಳಿದ್ದಾರೆ.
ಎಐನಿಂದ ಎಲ್ಲರೂ ನಿರುದ್ಯೋಗಿಗಳಾಗುತ್ತಾರೆ ಎನ್ನುವ ವಾದವನ್ನು ಕೆವಿನ್ ಒಲಿಯಾರಿ ತಿರಸ್ಕರಿಸಿದ್ದಾರೆ. ‘ಎಐ ಉದ್ಯೋಗಗಳನ್ನು ಕಿತ್ತುಕೊಳ್ಳುವುದಕ್ಕಿಂತ ಹೆಚ್ಚಾಗಿ ಹೊಸ ಉದ್ಯಮಗಳನ್ನು ಸೃಷ್ಟಿಸುತ್ತಿದೆ. ಯಾರೂ ಊಹಿಸದೇ ಇರುವಂತಹ ಕ್ಷೇತ್ರಗಳಲ್ಲಿ ಅವಕಾಶಗಳು ಹುಟ್ಟಲಿವೆ. ಆರ್ಥಿಕತೆಯ ಎಲ್ಲಾ 11 ಕ್ಷೇತ್ರಗಳಲ್ಲೂ ಉತ್ಪನ್ನಶೀಲತೆ ಹೆಚ್ಚಿಸಲಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕ್ರಿಯೇಟಿವಿಟಿಗೆ ಮಹತ್ವ
ಪೋಡ್ಕ್ಯಾಸ್ಟ್ವೊಂದರಲ್ಲಿ ಮಾತನಾಡುತ್ತಿದ್ದ ಕೆನಡಿಯನ್ ಉದ್ಯಮಿ ಕೆವಿನ್ ಓಲಿಯಾರಿ ಅವರು ಸೃಜನಶೀಲತೆಗೆ ಈಗ ಹೆಚ್ಚಿನ ಬೆಲೆ ಸಿಗುತ್ತಿರುವುದನ್ನು ಗುರುತಿಸಿದ್ದಾರೆ. ಕ್ರಿಯೇಟಿವ್ ಸ್ಟೋರಿಟೆಲ್ಲಿಂಗ್ ಹಿಂದೆಂದಿಗಿಂತಲೂ ಮಹತ್ವದ್ದಾಗಿದೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು ಇವರ ಪಾತ್ರ ಮುಖ್ಯ ಎಂದು ಒಲಿಯಾರಿ ಹೇಳಿದ್ದಾರೆ.
ಹಾಲಿ ಚಾಂಪಿಯನ್ ಆರ್‌ಸಿಬಿ (RCB) ಕಳೆದ ಆವೃತ್ತಿಯಲ್ಲಿ ತನ್ನ ಅಮೋಘ ಪ್ರದರ್ಶನವನ್ನು ಎಲ್ಲಿಗೆ ನಿಲ್ಲಿಸಿತ್ತೋ ಅದನ್ನು ಈ ಆವೃತ್ತಿಯಲ್ಲೂ ಮುಂದುವರೆಸಿದೆ. ಆಡಿದ ಮೊದಲ ಎರಡು ಪಂದ್ಯಗಳನ್ನು ಗೆದ್ದು ಐಪಿಎಲ್ 2026 (IPL 2026) ರ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಎಸ್‌ಆರ್‌ಹೆಚ್ ವಿರುದ್ಧದ ತನ್ನ ಮೊದಲ ಪಂದ್ಯವನ್ನು ಆರು ವಿಕೆಟ್‌ಗಳಿಂದ ಗೆದ್ದುಕೊಂಡಿದ್ದ ಆರ್‌ಸಿಬಿ, ತನ್ನ ಎರಡನೇ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು 43 ರನ್‌ಗಳಿಂದ ಸೋಲಿಸಿತು. ಆರ್ಸಿಬಿಯ ಈ ಬಲಿಷ್ಠ ಪ್ರದರ್ಶನಕ್ಕೆ 2025 ರ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಅಳೆದು ತೂಗಿ ಆಟಗಾರರನ್ನು ಖರೀದಿಸಿದ್ದೆ ಕಾರಣ. ಅದರಲ್ಲೂ ಕೇವಲ 11 ಕೋಟಿ ರೂ. ನೀಡಿ ಆರ್‌ಸಿಬಿ ಖರೀದಿಸಿದ ಐವರು ಮ್ಯಾಚ್ ವಿನ್ನರ್ಸ್ಗಳು ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತಿದ್ದಾರೆ ಎಂದರೆ ತಪ್ಪಾಗಲಾರದು.
11 ಕೋಟಿಗೆ ಐವರು ಮ್ಯಾಚ್ ವಿನ್ನರ್ಸ್ ಖರೀದಿ
2025 ರ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಕೆಲವೇ ಕೆಲವು ಕೋಟಿಗಳನ್ನು ನೋಡಿ ಐವರು ಆಟಗಾರರನ್ನು ಖರೀದಿಸಿತ್ತು. ಆ ಐವರು ಆಟಗಾರರೇ ಇವಾಗ ಆರ್ಸಿಬಿಯ ಬೆನ್ನೆಲುಬಾಗಿದ್ದಾರೆ. ಅವರುಗಳಲ್ಲಿ ಮೊದಲ ಹೆಸರು ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಟಿಮ್ ಡೇವಿಡ್. ಈ ಸ್ಫೋಟಕ ದಾಂಡಿಗನನ್ನು ಆರ್‌ಸಿಬಿ ಕೇವಲ 3 ಕೋಟಿ ರೂ.ಗೆ ಖರೀದಿಸಿತು. ಹಾಗೆಯೇ ಮತ್ತೊಬ್ಬ ಆಟಗಾರ ಜಾಕೋಬ್ ಡಫಿ, ಅವರನ್ನು ಆರ್‌ಸಿಬಿ 2 ಕೋಟಿ ರೂ.ಗೆ ಖರೀದಿಸಿತು.
ಪ್ರಸ್ತುತ ಆವೃತ್ತಿಯಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿರುವ ಕನ್ನಡಿಗ ದೇವದತ್ ಪಡಿಕ್ಕಲ್ ಅವರನ್ನು ಕೂಡ ಆರ್‌ಸಿಬಿಗೆ ಕೇವಲ 2 ಕೋಟಿ ರೂ.ಗೆ ಖರೀದಿ ಮಾಡಿತ್ತು. ಮತ್ತೊಬ್ಬ ಅಪಾಯಕಾರಿ ಆಲ್ರೌಂಡರ್ ರೊಮಾರಿಯೊ ಶೆಫರ್ಡ್ ಅವರನ್ನು ಆರ್‌ಸಿಬಿ ಮೂಲ ಬೆಲೆ 1.50 ಕೋಟಿ ರೂ.ಗೆ ಖರೀದಿ ಮಾಡಿತ್ತು. ಈ ನಾಲ್ವರ ಜೊತೆಗೆ ಇಂಗ್ಲೆಂಡ್ನ ಸ್ಟಾರ್ ಬ್ಯಾಟರ್ ಜಾಕೋಬ್ ಬೆಥೆಲ್ ಕೂಡ ಕೇವಲ 2.60 ಕೋಟಿ ರೂ.ಗೆ ಆರ್‌ಸಿಬಿ ಪಾಲಾಗಿದ್ದರು.
ಟಿಮ್ ಡೇವಿಡ್ ಮತ್ತು ದೇವದತ್ ಪಡಿಕ್ಕಲ್ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯದಲ್ಲಿ ಇಬ್ಬರೂ ಅದ್ಭುತ ಅರ್ಧಶತಕದ ಇನ್ನಿಂಗ್ಸ್ ಆಡಿದರು. ದೇವದತ್ ಪಡಿಕ್ಕಲ್ 29 ಎಸೆತಗಳಲ್ಲಿ 50 ರನ್ ಗಳಿಸಿದರೆ, ಟಿಮ್ ಡೇವಿಡ್ ಕೇವಲ 25 ಎಸೆತಗಳಲ್ಲಿ 8 ಸಿಕ್ಸರ್‌ಗಳೊಂದಿಗೆ ಅಜೇಯ 70 ರನ್ ಬಾರಿಸಿದರು.
ಇದಕ್ಕೂ ಮೊದಲು, SRH ವಿರುದ್ಧದ ಪಂದ್ಯದಲ್ಲಿ ಮಿಂಚಿದ್ದ ವೇಗೊ ಜಾಕೋಬ್ ಡಫಿ 4 ಓವರ್‌ಗಳಲ್ಲಿ 22 ರನ್ ನೀಡಿ ಪ್ರಮಿಖ 3 ವಿಕೆಟ್‌ಗಳನ್ನು ಪಡೆದಿದ್ದರು. ರೊಮಾರಿಯೊ ಶೆಫರ್ಡ್ ಕೂಡ 4 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಪಡೆದಿದ್ದರು. ದೇವದತ್ ಪಡಿಕ್ಕಲ್ ಕೂಡ SRH ವಿರುದ್ಧ 61 ರನ್‌ಗಳ ಸ್ಫೋಟಕ ಇನ್ನಿಂಗ್ಸ್‌ನೊಂದಿಗೆ ತಂಡದ ಗೆಲುವಿಗೆ ಕೊಡುಗೆ ನೀಡಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
2026 ರ ಐಪಿಎಲ್‌ನಲ್ಲಿ (IPL 2026) ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿರುವ ಆರ್‌ಸಿಬಿ(RCB) ಇದುವರೆಗೆ ಆಡಿರುವ ಮೊದಲ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ತನ್ನ ತವರಿನಲ್ಲಿ ಮೊದಲ ಎರಡು ಪಂದ್ಯಗಳನ್ನು ಆಡಿದ ಆರ್‌ಸಿಬಿ ಎರಡು ಪಂದ್ಯಗಳಲ್ಲೂ ಏಕಪಕ್ಷೀಯ ಗೆಲುವು ಸಾಧಿಸಿದೆ. ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿದ್ದ ಆರ್‌ಸಿಬಿ, ಅದಾದ ಬಳಿಕ ನಡೆದಿದ್ದ ಎರಡನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಸಿಎಸ್‌ಕೆ ತಂಡವನ್ನು ಕೂಡ ಏಕಪಕ್ಷೀಯವಾಗಿ ಸೋಲಿಸಿತ್ತು. ಈ ಎರಡು ಗೆಲುವುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ಇದೀಗ ತನ್ನ ಮೂರನೇ ಪಂದ್ಯಕ್ಕಾಗಿ ತಯಾರಿ ನಡೆಸುತ್ತಿದೆ. ಹಾಗಿದ್ದರೆ, ಆರ್ಸಿಬಿಯ ಮೂರನೇ ಪಂದ್ಯ ಯಾವಾಗ? ಯಾವ ತಂಡದ ವಿರುದ್ಧ ನಡೆಯಲಿದೆ ಎಂಬುದನ್ನು ನೋಡುವುದಾದರೆ..
ಆರ್‌ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯ ಯಾವಾಗ ನಡೆಯಲಿದೆ?
ಆರ್‌ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯವು ಏಪ್ರಿಲ್ 10 ರ ಶುಕ್ರವಾರದಂದು ನಡೆಯಲಿದೆ.
ಆರ್‌ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯ ಎಲ್ಲಿ ನಡೆಯಲಿದೆ?
ಆರ್‌ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯ ಬರ್ಸಾಪರ ಸ್ಟೇಡಿಯಂ, ಗುವಾಹಟಿಯಲ್ಲಿ ನಡೆಯಲಿದೆ.
ಆರ್‌ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯ ಯಾವ ಸಮಯಕ್ಕೆ ಪ್ರಾರಂಭವಾಗುತ್ತದೆ?
ಆರ್‌ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯವು ಭಾರತೀಯ ಕಾಲಮಾನ ಸಂಜೆ 7:30 ಕ್ಕೆ ಪ್ರಾರಂಭವಾಗಲಿದ್ದು, ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.
ಆರ್‌ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸುವುದು ಹೇಗೆ?
ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ಆರ್‌ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯವನ್ನು ವೀಕ್ಷಿಸಬಹುದು.
ಆರ್‌ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯವನ್ನು ಮೊಬೈಲ್‌ನಲ್ಲಿ ವೀಕ್ಷಿಸುವುದು ಹೇಗೆ?
ಜಿಯೋ-ಹಾಟ್‌ಸ್ಟಾರ್ ಅಪ್ಲಿಕೇಶನ್ ಬಳಸಿಕೊಂಡು ನಿಮ್ಮ ಮೊಬೈಲ್ಲ್ಲಿ ಆರ್‌ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16ನೇ ಪಂದ್ಯವನ್ನು ನೀವು ವೀಕ್ಷಿಸಬಹುದು.
ನಟ ರಣವೀರ್ ಸಿಂಗ್ (Ranveer Singh) ಮತ್ತು ನಿರ್ದೇಶಕ ಆದಿತ್ಯ ಧರ್ ಅವರ ಕಾಂಬಿನೇಷನ್ನಲ್ಲಿ ಬಂದ ‘ಧುರಂಧರ್ 2’ ಸಿನಿಮಾ ಅಕ್ಷರಶಃ ಹೊಸ ಇತಿಹಾಸ ಬರೆದಿದೆ. ಭಾರತೀಯ ಬಾಕ್ಸ್ ಆಫೀಸ್ ಇತಿಹಾಸದಲ್ಲೇ 1000 ಕೋಟಿ ರೂಪಾಯಿ ನಿವ್ವಳ ಗಳಿಕೆ (Box Office Collection) ಮಾಡಿದ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಈ ಸಿನಿಮಾ ಪಾತ್ರವಾಗಿದೆ. ಮಾರ್ಚ್ 19ರಂದು ತೆರೆಕಂಡ ಈ ಸಿನಿಮಾ, ಮೂರನೇ ವಾರದಲ್ಲೂ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಪ್ರೇಕ್ಷಕರನ್ನು ಥಿಯೇಟರ್‌ಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಭಾರತದಲ್ಲೇ 1000 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದಕ್ಕೆ ‘ಧುರಂಧರ್ 2’ (Dhurandhar 2) ಚಿತ್ರತಂಡಕ್ಕೆ ಖುಷಿ ಆಗಿದೆ.
ವರದಿಗಳ ಪ್ರಕಾರ, ‘ಧುರಂಧರ್ 2’ ಸಿನಿಮಾ ಬಿಡುಗಡೆಯಾಗಿ 18ನೇ ದಿನ (ಏಪ್ರಿಲ್ 5) ಬರೋಬ್ಬರಿ 28.75 ಕೋಟಿ ರೂಪಾಯಿ ಬಾಚಿಕೊಂಡಿದೆ. ಮೂರನೇ ವಾರದಲ್ಲೂ ಈ ಮಟ್ಟದ ಗಳಿಕೆ ಮಾಡಿರುವುದು ಚಿತ್ರರಂಗವನ್ನು ಬೆರಗುಗೊಳಿಸಿದೆ. ಮೊದಲ ವಾರ 674 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಎರಡನೇ ವಾರ 263.65 ಕೋಟಿ ರೂಪಾಯಿ ಸೇರ್ಪಡೆ ಆಯಿತು.
ಈವರೆಗೂ ‘ಧುರಂಧರ್ 2’ ಸಿನಿಮಾಗೆ ಭಾರತದಲ್ಲಿ ಆಗಿರುವ ಒಟ್ಟು ಗಳಿಕೆ (Gross) 1,209 ಕೋಟಿ ರೂಪಾಯಿ. ಭಾರತದಲ್ಲಿನ ನಿವ್ವಳ ಗಳಿಕೆ (Net) 1,013 ಕೋಟಿ ಎಂಬ ಮಾಹಿತಿ ಸಿಕ್ಕಿದೆ. ‘ಧುರಂಧರ್ 2’ ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಕೇವಲ ಮೊದಲ ವಾರದಲ್ಲೇ 1000 ಕೋಟಿ ರೂಪಾಯಿ ಗಡಿ ದಾಟುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿತ್ತು.
‘ಧುರಂಧರ್ 2’ ಚಿತ್ರವು ಈಗಾಗಲೇ ಭಾರತದ ಬ್ಲಾಕ್‌ಬಸ್ಟರ್ ಸಿನಿಮಾಗಳಾದ ‘ಆರ್ಆರ್ಆರ್’ (782.20 ಕೋಟಿ ರೂ.), ‘ಕಲ್ಕಿ 2898 AD’ (646 ಕೋಟಿ ರೂ.), ‘ಕೆಜಿಎಫ್: ಚಾಪ್ಟರ್ 2’ (859.70 ಕೋಟಿ ರೂ.), ಜವಾನ್ ಮತ್ತು ಪಠಾಣ್ ಚಿತ್ರಗಳ ಲೈಫ್‌ಟೈಮ್ ಕಲೆಕ್ಷನ್ ಹಿಂದಿಕ್ಕಿದೆ. 1,030 ಕೋಟಿ ರೂಪಾಯಿ ಗಳಿಸಿದ್ದ ‘ಬಾಹುಬಲಿ 2’ ದಾಖಲೆಯನ್ನು ಮುರಿಯಲು ಸಜ್ಜಾಗಿರುವ ಈ ಚಿತ್ರ, ನಂತರ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ (1,234 ಕೋಟಿ ರೂ.) ದಾಖಲೆಯನ್ನು ಮೀರಿಸುತ್ತದೆಯೇ ಎಂದು ಕಾದು ನೋಡಬೇಕಿದೆ.
ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಭಾರತೀಯ ಗೂಢಚಾರನಾಗಿ ನಟಿಸಿದ್ದಾರೆ. ಪಾಕಿಸ್ತಾನದ ಭೂಗತ ಲೋಕಕ್ಕೆ ನುಗ್ಗಿ ಭಾರತವನ್ನು ಗುರಿಯಾಗಿಸಿಕೊಂಡಿರುವ ಭಯೋತ್ಪಾದಕ ಜಾಲವನ್ನು ಮಟ್ಟಹಾಕುವ ರೋಚಕ ಕಥೆ ಚಿತ್ರದಲ್ಲಿದೆ. ಚಿತ್ರದಲ್ಲಿ ರಣವೀರ್ ಜೊತೆಗೆ ಆರ್. ಮಾಧವನ್, ಸಂಜಯ್ ದತ್, ಅರ್ಜುನ್ ರಾಮ್ಪಾಲ್, ಸಾರಾ ಅರ್ಜುನ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಉಡುಪಿ, (ಏಪ್ರಿಲ್ 06): ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೂರು ದಿನಗಳ ಕಾಲ ಜೀವ ಕೈಯಲ್ಲಿ ಹಿಡಿದುಕೊಂಡಿದ್ದ ವ್ಯಕ್ತಿ ಕೊನೆಗೂ ಪವಾಡ ಸದೃಶರಾಗಿ ಬದುಕಿಬಂದ ಘಟನೆ ಉಡುಪಿಯ (Udupi) ಕಂಬಳಕಟ್ಟೆಯಲ್ಲಿ ನಡೆದಿದೆ. ಕಂಬಳಕಟ್ಟೆಯ ನಿವಾಸಿ 62 ವರ್ಷದ ಶ್ರೀನಿವಾಸ ಆಚಾರ್ಯ, 20 ಅಡಿ ಆಳದ ನೀರಿರುವ ಬಾವಿಗೆ ಬಿದ್ದು ಮೂರು ದಿನ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಗೆದ್ದುಬಂದಿದ್ದಾರೆ. ಹೌದು.. ಗ್ಯಾಸ್ ಸಿಲಿಂಡರ್ ಓಟಿಪಿಯಿಂದ (gas cylinder OTP ) ಬಡಜೀವ ಬದುಕಿ ಬಂದಿದೆ. ಇದು ಅಚ್ಚರಿ ಅನ್ನಿಸಿದರೂ ಸತ್ಯ.
ಮನೆ ಮುಂದಿನ 10 ಅಡಿ ಅಗಲ ಹಾಗೂ 20 ಅಡಿ ಆಳದ ಬಾವಿಗೆ ಕಸ ಬಿದ್ದು ಪಂಪ್ ಮೂಲಕ ನೀರು ಸರಿಯಾಗಿ ಬಾರದ ಕಾರಣ ಕಳೆದ ಶನಿವಾರ ಸಂಜೆ ಪಂಪ್ ಫುಟ್ ಬಾಲ್ ಪೈಪಿಗೆ ಕಟ್ಟಿದ್ದ ಹಗ್ಗವನ್ನು ಮೇಲಕ್ಕೆಳೆಯಲು ಅವರು ಪ್ರಯತ್ನಿಸಿದ್ದರು. ಈ ವೇಳೆ ಹಗ್ಗ ತುಂಡಾದ ಕಾರಣ ಆಯತಪ್ಪಿ ಬಾವಿಗೆ ಬಿದ್ದಿದ್ದಾರೆ. ಬಾವಿಯ ನೀರಿನಲ್ಲಿ ಮುಳುಗಿದರೂ ಜೀವ ಉಳಿಸಿಕೊಳ್ಳಲು ಪರದಾಡಿದ್ದ ಅವರ ಕೈಗೆ ಬಾವಿಯೊಳಗಿದ್ದ ಫುಟ್ ಬಾಲ್ ಪೈಪ್ ಹಾಗೂ ಅದಕ್ಕೆ ಕಟ್ಟಿದ್ದ ಹಗ್ಗ ಸಿಕ್ಕಿದ್ದು, ಅದನ್ನು ಹಿಡಿದುಕೊಂಡೇ ಜೀವ ರಕ್ಷಣೆಗಾಗಿ ಬೊಬ್ಬೆ ಹಾಕಿದ್ದರು. ಆದರೆ ಅವರ ಕೂಗು ಹೊರಕ್ಕೆ ಯಾರಿಗೂ ಕೇಳಿರಲಿಲ್ಲ. ಕೊನೆಗೆ ಗ್ಯಾಸ್ ಸಿಲಿಂಡರ್ ಓಟಿಪಿಯಿಂದಾಗಿ ಶ್ರೀನಿವಾಸ ಆಚಾರ್ಯರ ಜೀವ ಉಳಿದಿದೆ. ಅದು ಹೇಗೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.
ಬೆಂಗಳೂರು, ಏಪ್ರಿಲ್ 06: ಹೆಣ್ಣು ಮಕ್ಕಳ ಜತೆ ಕೆಲ ಆಟೋ, ಟ್ಯಾಕ್ಸಿ ಚಾಲಕರು ಸೇರಿದಂತೆ ಪುಂಡಪೋಕರಿಗಳು ಅಹಿತಕರವಾಗಿ ವರ್ತಿಸುವ ಘಟನೆಗಳ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ಬೆಂಗಳೂರು (Bengaluru) ನಗರವು ದೇಶದ ಅತ್ಯಂತ ಕಾಳಜಿಯುಳ್ಳ ಹಾಗೂ ಜವಾಬ್ದಾರಿಯುತ ನಗರಗಳಲ್ಲಿ ಒಂದಾಗಿದೆ ಎಂಬುದನ್ನು ಮತ್ತೆ ನೆನಪಿಸಿದೆ. ಇದಕ್ಕೆ ಕಾರಣವಾಗಿದ್ದು ಯುವತಿಯೂ ಹಂಚಿಕೊಂಡ ಈ ವಿಡಿಯೋ. ತಡರಾತ್ರಿ ಒಬ್ಬಂಟಿಯಾಗಿದ್ದ ವೇಳೆ ಈ ಯುವತಿಯ ಸುರಕ್ಷತೆಗಾಗಿ ಇಬ್ಬರು ಅಪರಿಚಿತರು ಬಂದಿದ್ದಾರೆ. ಅಪರಿಚಿತ ವ್ಯಕ್ತಿಗಳು ತೋರಿದ ಕಾಳಜಿ ಕಂಡು ಯುವತಿಯೂ ಫಿದಾ ಆಗಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Karnatakaportfolio ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಐಶ್ವರ್ಯ ಕಲ್ಪಾರ್ಜುನ್ ಎಂಬ ಯುವತಿ ತಮಗಾದ ಅನುಭವ ಹೇಳಿಕೊಂಡಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ, ಐಶ್ವರ್ಯ ಅವರು ತಡರಾತ್ರಿ ಬೆಂಗಳೂರು ಏರ್‌ಪೋರ್ಟ್‌ನಿಂದ ಕಾಡುಗೋಡಿಗೆ ಬಂದು ಇಳಿದಿದ್ದಾರೆ. ತಡರಾತ್ರಿ 3 ಗಂಟೆ ಆಗಿತ್ತು. ಆದರೆ ಅವರ ಮನೆಗೆ ಕಾಡುಗೋಡಿ ಬಸ್ ನಿಲ್ದಾಣದಿಂದ 3 ಕಿಲೋ ಮೀಟರ್ ದೂರದಲ್ಲಿದ್ದ ಕಾರಣ ಯಾವುದೇ ಟ್ಯಾಕ್ಸಿ ಅಥವಾ ಆಟೋಗಳು ಬರಲು ರೆಡಿ ಇರಲಿಲ್ಲ. ಟ್ಯಾಕ್ಸಿ ಬುಕ್ ಆಗುತ್ತಿರಲಿಲ್ಲ. ಹೀಗಾಗಿ ಟ್ಯಾಕ್ಸಿಗಾಗಿ ಕಾಯುತ್ತಿದ್ದ ವೇಳೆ ಅಲ್ಲಿದ್ದ ಒಬ್ಬ ಬಸ್ ಕಂಡಕ್ಟರ್ ಅವರ ಸಹಾಯಕ್ಕೆ ಧಾವಿಸಿದ್ದಾರೆ. ನಿಮಗೆ ಟ್ಯಾಕ್ಸಿ ಸಿಗುವವರೆಗೂ ನಾನು ಜೊತೆಯಲ್ಲೇ ಇರುತ್ತೇನೆ ಎಂದು ಧೈರ್ಯ ತುಂಬಿದ್ದಾರೆ ಎಂದು ಹೇಳಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
A heartwarming moment from Bengaluru has reminded people why the city is often called one of the most caring and responsible urban spaces in the country. A woman travelling late at night from the airport to Kadugodi on a BMTC airport bus found herself in a vulnerable situation… pic.twitter.com/GUhsQpPxeV
— Karnataka Portfolio (@karnatakaportf) April 6, 2026
ಅದೇ ವೇಳೆ ಕ್ಯಾಬ್ ಹಾಗೂ ಟ್ಯಾಕ್ಸಿ ಬುಕ್ ಮಾಡಿದ್ರೂ ಬುಕ್ ಆಗಲಿಲ್ಲ. ಅಲ್ಲಿಗೆ ಬಂದ ರಾಪಿಡೋ ಡ್ರೈವರ್ ಬಳಿ ಮನೆಗೆ ಬಿಡುವಂತೆ ಕೇಳಿದ್ದಾರೆ. ಎಷ್ಟು ಚಾರ್ಚ್ ಆಗುತ್ತದೆ ಎಂದು ವಿಚಾರಿಸುತ್ತಿದ್ದಂತೆ ಅದೆಲ್ಲಾ ಪರವಾಗಿಲ್ಲ ಮೇಡಂ, ಮೊದಲು ನೀವು ಮ್ಯಾಪ್‌ನಲ್ಲಿ ಲೊಕೇಶನ್ ತೋರಿಸಿ, ಲೇಟ್ ಆಗಿದೆ ಎಂದು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮನೆ ತಲುಪಿದ ಬಳಿಕ ಐಶ್ವರ್ಯ ಅವರು ಹಣದ ಬಗ್ಗೆ ಕೇಳಿದಾಗ ‘ಸಮಯ ತುಂಬಾ ಲೇಟ್ ಆಗಿದೆ, ಒಬ್ಬ ಮಹಿಳೆಯಾಗಿ ನಿಮ್ಮನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವುದು ನನ್ನ ಜವಾಬ್ದಾರಿಯಾಗಿತ್ತು. ಇಷ್ಟೇ ಹಣ ಬೇಕು ಎಂದು ನಾನು ಕೇಳುವುದಿಲ್ಲ, ನಿಮಗೆ ಎಷ್ಟು ಅನಿಸುತ್ತದೋ ಅಷ್ಟನ್ನು ಕೊಡಿ ಎಂದು ಉತ್ತರ ನೀಡಿದ್ದಾರೆ. ಈ ಘಟನೆಯ ಬಗ್ಗೆ ವಿವರಿಸುತ್ತಾ ಅಪರಿಚಿತ ವ್ಯಕ್ತಿಗಳ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಏಪ್ರಿಲ್ 6 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಹತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಉತ್ತರ ಭಾರತಕ್ಕಿಂತ ದಕ್ಷಿಣ ಭಾರತ ಸುರಕ್ಷಿತ ಎಂದು ಜನರು ಈಗ ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ. ಇನ್ನೊಬ್ಬರು, ಅತ್ಯುತ್ತಮ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಬೆಂಗಳೂರಿನಲ್ಲಿ ಹೃದಯವಂತರು ಅಸಂಖ್ಯಾತ ಜನರಿದ್ದಾರೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಉಡುಪಿ, ಏಪ್ರಿಲ್ 06: ‘ಮುಳುಗುವವನಿಗೆ ಹುಲ್ಲು ಕಡ್ಡಿ ಕೂಡ ಆಸರೆ’ ಎನ್ನುವಂತೆ ಅದೊಂದು ಗ್ಯಾಸ್ ಸಿಲಿಂಡರ್ ಒಟಿಪಿಯಿಂದ ವೃದ್ಧ ಜೀವವೊಂದು ದೊಡ್ಡ ಅಪಾಯದಿಂದ ಬದುಕಿಬಂದಿದೆ. ಆಯತಪ್ಪಿ ಬಾವಿಗೆ ಬಿದ್ದಿದ್ದ ವ್ಯಕ್ತಿಯನ್ನು ಗ್ಯಾಸ್ ಸಿಲಿಂಡರ್ (Gas cylinder) ಒಟಿಪಿಯಿಂದ ರಕ್ಷಣೆ ಮಾಡಲಾಗಿದೆ. ಆ ಮೂಲಕ ಅಪರೂಪದ ಘಟನೆಗೆ ಉಡುಪಿ (udupi) ಜಿಲ್ಲೆ ಸಾಕ್ಷಿ ಆಗಿದೆ. ಸದ್ಯ ರಕ್ಷಣೆಗೊಳಗಾದ ವೃದ್ಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಡೆದಿದ್ದೇನು?
ಉಡುಪಿ ನಗರದ ಕೊಡವೂರು ವಾರ್ಡ್ ಕಂಬ್ಳಕಟ್ಟದಲ್ಲಿ ನಿರ್ಜನ ಪ್ರದೇಶದ ಮನೆಯಲ್ಲಿ ಶೀನಿವಾಸ್ ಆಚಾರ್ಯ(62) ಎಂಬುವವರು ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಅನಾರೋಗ್ಯದಿಂದ ಸುಧಾರಿಸಿಕೊಂಡದ್ದ ಅವರು ತೋಟಕ್ಕೆ ನೀರು ಹಾಯಿಸಲು ಅದೊಂದು ದಿನ ತೆರಳಿದ್ದಾರೆ. ಬಾವಿಗೆ ಹಾಕಿದ್ದ ಪಂಪ್ನಲ್ಲಿ ಕಸ ತುಂಬಿದೆ. ಅದನ್ನ ಸ್ವಚ್ಛ ಮಾಡಲು ಬಾವಿ ಕಡೆಗೆ ತೆರಳಿದ್ದಾರೆ. ಪೈಪ್ ಎಳೆಯಲು ಹೋಗಿ ಹಗ್ಗ ತುಂಡಾಗಿದೆ. ಈ ವೇಳೆ ಅವರು ಕೂಡ ಆಯತಪ್ಪಿ ಸುಮಾರು 15 ರಿಂದ 20 ಅಡಿ ಆಳದ ಬಾವಿಗೆ ಬಿದ್ದಿದ್ದಾರೆ.
ಒಂಟಿ ಮನೆ ಹಾಗೂ ಏಕಾಂಗಿಯಾಗಿ ಶ್ರೀನಿವಾಸ್ ಆಚಾರ್ಯ ವಾಸಿಸುತ್ತಿದ್ದ ಹಿನ್ನೆಲೆ ಯಾರ ಗಮನಕ್ಕೂ ಬಂದಿರಲಿಲ್ಲ. ಬಾವಿ ಒಳಗಿಂದ ಎಷ್ಟೇ ಬೊಬ್ಬೆ ಹೊಡೆದರು ಯಾರ ಅರಿವಿಗೂ ಬಂದಿಲ್ಲ. ಇನ್ನೇನು ಮಾಡುವುದು ಎಂದು ಬಾವಿಯಲ್ಲಿದ್ದ ಪೈಪ್ವೊಂದನ್ನು ಹಿಡಿದು ಕುಳಿತುಕೊಂಡಿದ್ದಾರೆ. ಶ್ರೀನಿವಾಸ್ ಆಚಾರ್ಯ ಅವರು ಹೇಳುವ ಪ್ರಕಾರ ಮೂರು ದಿನಗಳ ಕಾಲ ಬಾವಿಯಲ್ಲಿ ಇದ್ದೆ ಎನ್ನುತ್ತಿದ್ದಾರೆ.
ಜೀವ ಉಳಿಸಿತು ಗ್ಯಾಸ್ ಸಿಲಿಂಡರ್ ಒಟಿಪಿ
ಹೌದು. ಶ್ರೀನಿವಾಸ್ ಆಚಾರ್ಯರ ಜೀವ ಉಳಿಸಿದ್ದು ಗ್ಯಾಸ್ ಸಿಲಿಂಡರ್ ಎಂದರೆ ನೀವು ನಂಬಲೇಬೇಕು. ಶ್ರೀನಿವಾಸ್ ಅವರು ಸಿಂಗಲ್ ಗ್ಯಾಸ್ ಸಿಲಿಂಡರ್ ಹೊಂದಿದ್ದಾರೆ. ಗ್ಯಾಸ್ ಬುಕ್ ಮಾಡಿ ಪರಿಚಯಸ್ಥರಾದ ಗಣೇಶ್ ಎಂಬವರಿಂದ ಖಾಲಿ ಸಿಲಿಂಡರ್ ಪಡೆದಿದ್ದರು. ಆ ಮೂಲಕ ಹೊಸ ಸಿಲಿಂಡರ್ ಪಡೆಯುವ ನಿರೀಕ್ಷೆಯಲ್ಲಿದ್ದರು. ಈ ನಡುವೆ ಬಾವಿಗೆ ಬಿದ್ದಿದ್ದಾರೆ.
ಮೂರು ದಿನದ ಬಳಿಕ ಪತ್ತೆ
ಹೊಸ ಸಿಲಿಂಡರ್ ಪಡೆಯಲು ಒಟಿಪಿ ಬೇಕಾಗಿತ್ತು. ಗ್ಯಾಸ್ ಸರಬರಾಜಿಗೆ ಬಂದಾಗ ಶ್ರೀನಿವಾಸ್ ಆಚಾರ್ಯ ಮನೆಯಿಂದ ನಾಪತ್ತೆಯಾಗಿದ್ದರು. ಸ್ಥಳೀಯರು ಸಿಲಿಂಡರ್ ನೀಡಿದ್ದ ಗಣೇಶ್ ಅವರಿಗೆ ಮಾಹಿತಿ ನೀಡಿದ್ದಾರೆ. ಗಣೇಶ್ ತಮ್ಮ ಬಾಡಿಗೆ ಮನೆಯಲ್ಲಿ ಇರುವ ವ್ಯಕ್ತಿಗಳ ಮೂಲಕ ಶ್ರೀನಿವಾಸ್ಗಾಗಿ ಹುಡುಕಾಡಿದ್ದಾರೆ. ಈ ವೇಳೆ ತೋಟದ ಮನೆಯ ಮೂಲೆಯಲ್ಲಿರುವ ಬಾವಿಯಲ್ಲಿ ಶ್ರೀನಿವಾಸ್ ಬಿದ್ದಿರುವುದು ಪತ್ತೆ ಆಗಿದೆ.
ತಕ್ಷಣವೇ ಕಾರ್ಯಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ, ಶ್ರೀನಿವಾಸ್ ಆಚಾರ್ಯರನ್ನು ಬಾವಿಯಿಂದ ಮೇಲಕ್ಕೆ ಎತ್ತುವ ಮೂಲಕ ರಕ್ಷಣೆ ಮಾಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ.
ದಾವಣಗೆರೆ, (ಏಪ್ರಿಲ್ 06): ಮನೆಯಲ್ಲಿ ಇವರ ತಾತ ಇದ್ದಾಗ ಎಂಎಲ್ ಎ , ಮಂತ್ರಿ. ಈಗ ಮತ್ತೆ ಮಗ ಶಾಸಕ ಆದರೆ ದಾವಣಗೆರೆ ಅಕ್ಕ ಪಕ್ಕದ ಕ್ಷೇತ್ರದಲ್ಲಿ ಅವರದೇ ಟಿಕೆಟ್ ಕೊಟ್ಟು ಇಡೀ ದಾವಣಗೆರೆ (Davanagere) ಕಬ್ಜಾ ಮಾಡಿಕೊಳ್ಳುತ್ತಾರೆ. ಈ ಹುಡುಗ ಗೆದ್ದರೆ ಹಿ ಈಸ್ ಅ ಸ್ಮಾಲ್ ಬಾಯ್. ಕಾಂಗ್ರೆಸ್ ಪಕ್ಷದವರು ಬಾಗಲಕೋಟೆಯಲ್ಲಿ ಅಹಿಂದ , ಇಲ್ಲಿ ಗೋವಿಂದ. ಟೇಕನ್ ಫಾರ್ ಗ್ರಾಂಟೆಡ್ ಇವರದ್ದು. ಇಲ್ಲಿ ಯಾರೂ ಸಮರ್ಥರಿರಲಿಲ್ಲವಾ? ನಿಮ್ಮ ಮನೆ ತನಕ್ಕೆ ಆಗಬೇಕಿತ್ತಾ? ಅಲ್ಲಿ ಪ್ರಿಯಾಂಕಾ ಗಾಂಧಿ ಮಗನಿಗೂ ಕ್ಷೇತ್ರ ಹುಡುಕುತ್ತಿದ್ದಾರೆ. ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (pralhad joshi) ಕಾಂಗ್ರೆಸ್ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೊಶಿ, ದಾವಣಗೆರೆಯಲ್ಲಿ ಸಿದ್ದೇಶ್ವರ್ ಅವರ ಕಾಲದಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿ ಆಗಿದೆ. ಕಾಂಗ್ರೆಸ್ ಕಾರ್ಯಕರ್ತರು ಜಾಗೃತ ಆಗಬೇಕು. ಆ ಹುಡುಗನಿಗೆ ನೀವು ಈ ಸಲ ಗೆಲುವು ಕೊಟ್ಟರೆ ಮುಂದೆ ಸಮಸ್ಯೆ ಆಗಲಿದೆ. ಕಾಂಗ್ರೆಸ್ ನವರಿಗೂ ನಾನು ಕರೆ ಕೊಡುತ್ತೇನೆ, ಆ ಹುಡುಗನನ್ನ (ಸಮರ್ಥ್ ಶಾಮನೂರು) ಸೋಲಿಸಿ ಎಂದು ಕರೆ ನೀಡಿದರು.
ಅನ್ನಭಾಗ್ಯ ಅಕ್ಕಿ ಒಂದು ಅಗಳು ಕೊಡಿತ್ತಿಲ್ಲ. ನಾವು ಕೊಡುವ ಅಕ್ಕಿಯನ್ನು ಕೊಡುತ್ತಿದ್ದಾರೆ. ಎಲ್ ಪಿ ಜಿ ಗ್ಯಾಸ್ ತೊಂದರೆ ಇದೆ. ಆದ್ರೆ ಗೃಹ ಬಳಕೆಗೆ ಯಾವುದೇ ಸಮಸ್ಯೆ ಇಲ್ಲ. ರಾಹುಲ್ ಗಾಂಧಿ, ಸಿದ್ದರಾಮಯ್ಯನವರ ಹೇಳಿಕೆ ನೀವು ಕೇಳಿದ್ದೀರಿ. ಇನ್ನೆರಡು ದಿನಗಳಲ್ಲಿ ಪೆಟ್ರೋಲ್ ಸಿಗಲ್ಲ ಎಂದು ಹೇಳಿದ್ದಾರೆ. ಪೆಟ್ರೋಲ್ ನಿಮಗೆ ಸಿಕ್ಕಿಲ್ಲ ಅಂದರೆ ನಮಗೆ ಹೇಳಿ. ಶೇ 70ರಷ್ಟು ಪೆಟ್ರೀಲ್ ನಮ್ಮಲ್ಲಿ ಸ್ಟಾಕ್ ಎಂದು ಕಾಂಗ್ರೆಸ್ ನಾಯಕರ ಹೇಳಿಕೆ ತಿರುಗೇಟು ನೀಡಿದರು.
ನವದೆಹಲಿ, ಏಪ್ರಿಲ್ 6: ಇಂದು ಮಧ್ಯಾಹ್ನ ದೆಹಲಿ ವಿಧಾನಸಭೆಯಲ್ಲಿ (Delhi Assembly) ಗಂಭೀರ ಭದ್ರತಾ ಲೋಪ ಕಂಡುಬಂದಿದೆ. ಉತ್ತರ ಪ್ರದೇಶದ ನೋಂದಣಿ ನಂಬರ್ ಹೊಂದಿರುವ ಅಪರಿಚಿತ ಕಾರು ಗೇಟ್ ಅನ್ನು ಮುರಿದು ಒಳಗೆ ನುಗ್ಗಿದೆ. ಭದ್ರತಾ ಸಿಬ್ಬಂದಿ ನೋಡನೋಡುತ್ತಿದ್ದಂತೆ ಕಾರು ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಆಫೀಸ್ ಬಳಿ ತೆರಳಿದೆ. ಈ ಘಟನೆ ಕೋಲಾಹಲಕ್ಕೆ ಕಾರಣವಾಯಿತು. ಆ ಕಾರು, ಚಾಲಕ ಮತ್ತು ಘಟನೆಯ ಹಿಂದಿನ ಕಾರಣಗಳನ್ನು ಗುರುತಿಸಲು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಭದ್ರತಾ ವ್ಯವಸ್ಥೆಗಳ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.
ದೆಹಲಿ ಪೊಲೀಸರ ಪ್ರಕಾರ, ಉತ್ತರ ಪ್ರದೇಶ ನೋಂದಣಿ ಸಂಖ್ಯೆಯನ್ನು ಹೊಂದಿರುವ ಟಾಟಾ ಸಿಯೆರಾ ಕಾರು ಕಬ್ಬಿಣದ ಗೇಟ್ ಅನ್ನು ಮುರಿದು ವಿಧಾನಸಭಾ ಕಟ್ಟಡದ ಒಳಗೆ ನುಗ್ಗಿತು. ಒಳಗೆ ಬಂದ ಕಾರಿನಿಂದ ಇಳಿದ ಮುಸುಕುಧಾರಿ ಚಾಲಕ ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿಯ ಕಡೆಗೆ ತೆರಳಿ ಅದರ ಹೊರಗೆ ಹೂವಿನ ಹೂಗುಚ್ಛ ಇಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ!
ಈ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ಕಾರಿನಲ್ಲಿ ಏನಿತ್ತು, ಅದರ ಮಾಲೀಕರು ಯಾರು ಮತ್ತು ಅದರಲ್ಲಿ ಯಾರಿದ್ದರು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ. “ಕಾರು ಚಾಲಕ ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿಯ ಕಡೆಗೆ ತೆರಳಿ ಮುಖಮಂಟಪದ ಬಳಿ ಪುಷ್ಪಗುಚ್ಛವನ್ನು ಇರಿಸಿ ವಾಪಾಸ್ ತೆರಳಿದ್ದಾನೆ” ಎಂದು ದೆಹಲಿ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ಹೂಗುಚ್ಛದಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ. ಭದ್ರತೆಗಾಗಿ ವಿಐಪಿ ಗೇಟ್‌ನಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನಂತರ ಚಾಲಕ ಪರಾರಿಯಾಗಿದ್ದಾನೆ.
An unknown car enters into Delhi Legislative Assembly premises by breaking all the security barriers. The vehicle rammed through the main gate before entering the complex. After entering the assembly, moved inside briefly before exiting and disappearing from the scene.
ದೆಹಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ತನಿಖೆ ಆರಂಭಿಸಿದ್ದು, ಚಾಲಕ ಮತ್ತು ಕಾರನ್ನು ಹುಡುಕುತ್ತಿದ್ದಾರೆ. ಈ ಘಟನೆಯು ಗಂಭೀರ ಭದ್ರತಾ ಕಳವಳಗಳನ್ನು ಹುಟ್ಟುಹಾಕಿದೆ. ಇತ್ತೀಚೆಗೆ ಮುಕ್ತಾಯಗೊಂಡ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ವಿಧಾನಸಭೆಗೆ ಬಾಂಬ್ ಬೆದರಿಕೆ ಬಂದ ನಂತರ ಈ ಘಟನೆ ನಡೆದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ