ಬೆಂಗಳೂರು, ಡಿಸೆಂಬರ್ 21: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಹವಾಮಾನದಲ್ಲಿ ಬದಲಾವಣೆ ಉಂಟಾಗುತ್ತಿದೆ. ಈ ಹವಾಮಾನ ಬದಲಾವಣೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ರಾಜ್ಯದಲ್ಲಿ ಸದ್ಯ ಸೀಸನಲ್ ಫ್ಲೂ (seasonal flu) ಭೀತಿ ಶುರುವಾಗಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಆರೋಗ್ಯ ಇಲಾಖೆಯಿಂದ (Karnataka Health Department) ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಡಿಸೆಂಬರ್ ಸೇರಿದಂತೆ ಜನವರಿಯಿಂದ ಮಾರ್ಚ್ ವರೆಗೆ ಸೀಸನಲ್ ಫ್ಲೂ ಹೆಚ್ಚಳ ಭೀತಿ ಹಿನ್ನಲೆ ಸೂಕ್ತ ಕ್ರಮಕೈಗೊಳ್ಳುವಂತೆ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಎಲ್ಲಾ ಲ್ಯಾಬ್‌ಗಳಲ್ಲಿ ಸೂಕ್ತ ಟೆಸ್ಟಿಂಗ್ ಕಿಟ್‌ಗಳನ್ನು ಇರಿಸಿಕೊಳ್ಳುವುದು, ಫ್ಲೂ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸರಿಯಾದ ಸಮಯದಲ್ಲಿ ಮಾನಿಟರಿಂಗ್‌ಗೆ ಸೂಚಿಸಲಾಗಿದೆ.
ಇನ್ನು ಸೋಂಕಿತರ ಎಂಜಿಲಿನಿಂದ ಸೋಂಕು ಹರಡುತ್ತದೆ. ಮಕ್ಕಳು, ಹಿರಿಯರು, ಗರ್ಭಿಣಿಯರು, ಔಷಧಿಗಳ ಮೇಲೆ ಅವಲಂಬಿತರಾದವರಿಗೆ ಹೆಚ್ಚಿನ ಅಪಾಯವಿದೆ. ಸೀಸನಲ್ ಫ್ಲೂ ತಗುಲಿದರೆ ಆಸ್ಪತ್ರೆಗೆ ದಾಖಲಾಗುವ ಅಪಾಯವಿದೆ. ಹೀಗಾಗಿ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ.
ಸೀಸನಲ್ ಫ್ಲೂ ಲಕ್ಷಣಗಳು
ಜ್ವರ, ಕೆಮ್ಮು, ಕೆಂಪು ಗುಳ್ಳೆ, ಹಸಿವು ಆಗದಿರುವುದು, ಮೈ-ಕೈ ನೋವು, ಶೀತ, ಒಣ ಕೆಮ್ಮು ಇದರ ಪ್ರಮುಖ ಗುಣಲಕ್ಷಣಗಳು. ಸೀಸನಲ್ ಫ್ಲೂ ಸಾಮಾನ್ಯವಾಗಿ ಒಂದು ವಾರಗಳ ಕಾಲ ಇರಬಹುದು ಅಥವಾ ಕೆಲವೊಮ್ಮೆ 3 ವಾರಗಳ ಕಾಲ ಇರಬಹುದು.
ಆರೋಗ್ಯ ಇಲಾಖೆ ಸೂಚನೆಗಳೇನು?
ಪ್ರತಿ ದಿನ ಕನಿಷ್ಟ 5ರಷ್ಟು ಐಎಲ್ಐ ಕೇಸ್, 100ರಷ್ಟು ಸಾರಿ (SARI) ಕೇಸ್ಗಳ ಪರೀಕ್ಷೆಗೆ ಸೂಚನೆ.
ಎಲ್ಲಾ ಪ್ರಯೋಗಾಲಯಗಳಲ್ಲಿ ಸೂಕ್ತ ಟೆಸ್ಟಿಂಗ್ ಕಿಟ್‌ಗಳನ್ನು ಇರಿಸಿಕೊಳ್ಳುವುದು
ಪಿಪಿಇ ಕಿಟ್ಗಳು, ಎನ್95 ಮಾಸ್ಕ್, oseltamivir ಮಾತ್ರೆಗಳು ಸೇರಿ ಅಗತ್ಯ ಔಷಧಗಳ ಶೇಖರಣೆಗೆ ಸೂಚನೆ
ಇನ್ಫ್ಲೂಯೆನ್ಸ್ ಲಸಿಕೆ ಶೇಖರಣೆ
ಹೆಲ್ತ್ ಕೇರ್ ವರ್ಕರ್ಸ್, ಗರ್ಭಿಣಿಯರು, ಹೆಚ್ಚಿನ ಅಪಾಯವುಳ್ಳ ರೋಗಿಗಳು ಸೂಕ್ತ ಲಸಿಕೆ ಪಡೆಯುವಂತೆ ಸಲಹೆ
ಕ್ಲಿನಿಕಲ್ ಮ್ಯಾನೇಜ್ಮೆಂಟ್ ಹಾಗೂ ಕ್ರಿಟಿಕಲ್ ಕೇರ್ ಸಿದ್ಧತೆ
ವೆಂಟಿಲೇಟರ್ಗಳ ಸಿದ್ಧತೆಗೆ ಸಲಹೆ
ಜಾಗೃತಿ ಮೂಡಿಸುವುದು ಮತ್ತು ಸರಿಯಾದ ಸಮಯದಲ್ಲಿ ಮಾನಿಟರಿಂಗ್‌ಗೆ ಕರೆ ನೀಡಲಾಗಿದೆ.
T20 World Cup 2026: ಟಿ20 ವಿಶ್ವಕಪ್ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡದಲ್ಲಿ 7 ಆಟಗಾರರು ಕಾಣಿಸಿಕೊಂಡಿಲ್ಲ. ಅಂದರೆ 2024 ರಲ್ಲಿ ಟೀಮ್ ಇಂಡಿಯಾ ಪರ ಟಿ20 ವಿಶ್ವಕಪ್ ಆಡಿದ ಏಳು ಪ್ಲೇಯರ್ಸ್ ಈ ಬಾರಿ ತಂಡದಲ್ಲಿಲ್ಲ. ಹೀಗೆ ಭಾರತ ಟಿ20 ವಿಶ್ವಕಪ್ ತಂಡದಿಂದ ಹೊರಬಿದ್ದಿರುವ ಆಟಗಾರರು ಯಾರೆಂದರೆ…
ಯಶಸ್ವಿ ಜೈಸ್ವಾಲ್: 2024 ಟಿ20 ವಿಶ್ವಕಪ್ ತಂಡದಲ್ಲಿ ಹೆಚ್ಚುವರಿ ಆರಂಭಿಕ ದಾಂಡಿಗನಾಗಿ ಯಶಸ್ವಿ ಜೈಸ್ವಾಲ್ ಕಾಣಿಸಿಕೊಂಡಿದ್ದರು. ಎರಡು ವರ್ಷಗಳ ಹಿಂದೆ 15 ಸದಸ್ಯರುಗಳ ಬಳಗದಲ್ಲಿದ್ದ ಜೈಸ್ವಾಲ್ ಮುಂಬರುವ ಟಿ20 ವಿಶ್ವಕಪ್ಗೆ ಆಯ್ಕೆಯಾಗಿಲ್ಲ.
ರಿಷಭ್ ಪಂತ್: ಕಳೆದ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪರ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕಿಳಿದಿದ್ದ ರಿಷಭ್ ಪಂತ್ ಅವರನ್ನು ಸಹ ಈ ಬಾರಿ ಕೈ ಬಿಡಲಾಗಿದೆ. ಅವರ ಬದಲಿಗೆ ಈ ಬಾರಿ ಭಾರತ ತಂಡದಲ್ಲಿ ವಿಕೆಟ್ ಕೀಪರ್ಗಳಾಗಿ ಆಯ್ಕೆಯಾಗಿರುವುದು ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್.
ಯುಜ್ವೇಂದ್ರ ಚಹಲ್: ಟಿ20 ವಿಶ್ವಕಪ್ 2024 ರಲ್ಲಿ ಭಾರತ ತಂಡದಲ್ಲಿ ಸ್ಪಿನ್ನರ್ ಆಗಿ ಯುಜ್ವೇಂದ್ರ ಚಹಲ್ ಕಾಣಿಸಿಕೊಂಡಿದ್ದರು. ಇದಾಗ್ಯೂ ಅವರಿಗೆ ಆಡುವ ಬಳಗದಲ್ಲಿ ಸ್ಥಾನ ಲಭಿಸಿರಲಿಲ್ಲ. ಇದೀಗ ಮುಂಬರುವ ಟಿ20 ವಿಶ್ವಕಪ್ಗೆ ಆಯ್ಕೆ ಮಾಡಲಾದ ತಂಡದಲ್ಲಿ ಚಹಲ್ಗೆ ಸ್ಥಾನ ನೀಡಲಾಗಿಲ್ಲ.
ಮೊಹಮ್ಮದ್ ಸಿರಾಜ್: 2024ರ ಟಿ20 ವಿಶ್ವಕಪ್ನಲ್ಲಿ ಜಸ್ಪ್ರೀತ್ ಬುಮ್ರಾ ಜೊತೆಗೂಡಿ ಮೊಹಮ್ಮದ್ ಸಿರಾಜ್ ಕೂಡ ದಾಳಿ ಸಂಘಟಿಸಿದ್ದರು. ಆದರೆ ಈ ಬಾರಿ ಟೀಮ್ ಇಂಡಿಯಾದ 15 ಸದಸ್ಯರುಗಳ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಿರಾಜ್ ವಿಫಲರಾಗಿದ್ದಾರೆ.
ರೋಹಿತ್ ಶರ್ಮಾ: ಟಿ20 ವಿಶ್ವಕಪ್ 2024 ರಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು ರೋಹಿತ್ ಶರ್ಮಾ. ಹಿಟ್ಮ್ಯಾನ್ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರಿತ್ತು. ಭಾರತ ತಂಡವು ಚಾಂಪಿಯನ್ ಪಟ್ಟಕ್ಕೇರಿದ ಬೆನ್ನಲ್ಲೇ ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಹೀಗಾಗಿ ಈ ಬಾರಿಯ ಭಾರತ ತಂಡದಲ್ಲಿ ಅವರು ಕಾಣಿಸಿಕೊಂಡಿಲ್ಲ.
ವಿರಾಟ್ ಕೊಹ್ಲಿ: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರಿದ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಮತ್ತೋರ್ವ ಆಟಗಾರ ವಿರಾಟ್ ಕೊಹ್ಲಿ. 2024 ರ ಟಿ20 ವಿಶ್ವಕಪ್ ಫೈನಲ್ ಪಂದ್ಯದೊಂದಿಗೆ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಅವರು ಸಹ ಪ್ರಸ್ತುತ ಟಿ20 ತಂಡದಲ್ಲಿ ಕಾಣಿಸಿಕೊಂಡಿಲ್ಲ.
ರವೀಂದ್ರ ಜಡೇಜಾ: ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಬಳಿಕ ಟಿ20 ವಿಶ್ವಕಪ್ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಮೂರನೇ ಆಟಗಾರ ರವೀಂದ್ರ ಜಡೇಜಾ. 2024 ರಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಜಡ್ಡು ಸದ್ಯ ಟೆಸ್ಟ್ ಹಾಗೂ ಏಕದಿನ ತಂಡಗಳಲ್ಲಿ ಮಾತ್ರ ಮುಂದುವರೆದಿದ್ದಾರೆ. ಹೀಗಾಗಿ ಅವರು ಸಹ 2026ರ ಟಿ20 ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಂಡಿಲ್ಲ.
ರಾಜ್ಯದಲ್ಲಿ ಚಳಿಯೋ ಚಳಿ; 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್!
ಬೆಂಗಳೂರು, ಡಿಸೆಂಬರ್ 20: ರಾಜ್ಯದಲ್ಲಿ ತೀವ್ರ ಚಳಿಯಿಂದಾಗಿ (Weather Forecast) ಜನ ಜೀವನ ತತ್ತರಿಸಿದೆ. ಬೆಂಗಳೂರಿನಲ್ಲೂ ಮೈಕೊರೆಯುವ ಚಳಿ ಜನರನ್ನು ಬೆಂಬಿಡದೆ ಕಾಡುತ್ತಿದ್ದು, ಮೋಡ ಮುಸುಕಿದ ವಾತಾವರಣವಿರಲಿದೆ ಎಂದು ಇಲಾಖೆ ತಿಳಿಸಿದೆ. ಕಲಬುರಗಿ, ರಾಯಚೂರು ಸೇರಿದಂತೆ 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿರುವ ಇಲಾಖೆ, ಮಂಡ್ಯ, ಮೈಸೂರು ಸೇರಿದಂತೆ 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಯಾವ ಜಿಲ್ಲೆಗಳಿಗೆ ಅಲರ್ಟ್?
ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಬಾಗಲಕೋಟೆ ಬೆಳಗಾವಿ ಜಿಲ್ಲೆಗಳಲ್ಲಿ ತೀವ್ರ ಚಳಿಗಾಳಿ ಬೀಸುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಹಾಸನ, ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಹಾವೇರಿ, ಬಳ್ಳಾರಿ, ಗದಗ, ಧಾರವಾಡ ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಸೂಚಿಸಿದೆ.
ಎಲ್ಲೆಲ್ಲಿ ಒಣ ಹವೆ
ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.
ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಮುಂದುವರೆದ ಚಳಿ
ಕಳೆದ ಕೆಲ ದಿನಗಳಿಂದ ರಾಜಧಾನಿಯ ವಾತಾವರಣದಲ್ಲಿ ಸಾಕಷ್ಟು ಏರು ಪೇರಾಗುತ್ತಿದ್ದು, ಚಳಿಯ ಪ್ರಮಾಣ ಹೆಚ್ಚುತ್ತಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ. ಈ ಮಧ್ಯೆ ಬೆಂಗಳೂರಿನ ತಾಪಮಾನ ಕನಿಷ್ಠ 15°C ಇದ್ದು, ಗರಿಷ್ಠ 27°C ಇರಲಿದೆ ಎಂದು ಇಲಾಖೆ ತಿಳಿಸಿದೆ.
ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ (Dhurandhar) ಸಿನಿಮಾ ಇಷ್ಟು ದೊಡ್ಡ ಹಿಟ್ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆರಂಭದಲ್ಲಿ ಸಾಧಾರಣ ಓಪನಿಂಗ್ ಪಡೆದುಕೊಂಡ ಈ ಸಿನಿಮಾ, ನಂತರದಲ್ಲಿ ಭಾರಿ ಕಲೆಕ್ಷನ್ ಮಾಡಲು ಆರಂಭಿಸಿತು. ನೋಡನೋಡುತ್ತಿದ್ದಂತೆಯೇ ಭಾರತದ ಬಾಕ್ಸ್ ಆಫೀಸ್ನಲ್ಲಿ ‘ಧುರಂಧರ್’ ಸಿನಿಮಾದ ಕಲೆಕ್ಷನ್ (Dhurandhar Box Office Collection) 500 ಕೋಟಿ ರೂಪಾಯಿ ಮೀರಿದೆ. ಈಗಾಗಲೇ ಅನೇಕ ಸಿನಿಮಾಗಳ ದಾಖಲೆಗಳನ್ನು ಈ ಚಿತ್ರ ಮುರಿದಿದೆ. ರಣವೀರ್ ಸಿಂಗ್ (Ranveer Singh) ಅವರಿಗೆ ಈ ಸಿನಿಮಾದಿಂದ ಭರ್ಜರಿ ಗೆಲುವು ಸಿಕ್ಕಿದೆ.
‘ಧುರಂಧರ್’ ಸಿನಿಮಾ ಬಿಡುಗಡೆ ಆಗಿ 17 ದಿನಗಳ ಕಳೆದಿವೆ. ಹಾಗಿದ್ದರೂ ಕೂಡ ಈ ಚಿತ್ರದ ನಾಗಾಲೋಟ ನಿಂತಿಲ್ಲ. ಪ್ರತಿ ದಿನ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತ ಮುಂದುವರಿದಿದೆ. ವೀಕೆಂಡ್ ಮಾತ್ರವಲ್ಲದೇ ಇನ್ನುಳಿದ ದಿನಗಳಲ್ಲಿ ಕೂಡ ಈ ಸಿನಿಮಾ ಪ್ರತಿ ದಿನ 20 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುತ್ತಿರುವುದು ವಿಶೇಷ.
3ನೇ ಶನಿವಾರ, ಅಂದರೆ 16ನೇ ದಿನ ‘ಧುರಂಧರ್’ ಸಿನಿಮಾ ಅಂದಾಜು 33.5 ಕೋಟಿ ರೂಪಾಯಿ ಗಳಿಸಿದೆ. sacnilk ನೀಡಿರುವ ಆರಂಭಿಕ ವರದಿಗಳ ಪ್ರಕಾರ, 16 ದಿನಕ್ಕೆ ಭಾರತದಲ್ಲಿ ಈ ಸಿನಿಮಾದ ಒಟ್ಟು ಕಲೆಕ್ಷನ್ 516 ಕೋಟಿ ರೂಪಾಯಿ ಮೀರಿದೆ. ಭಾನುವಾರ (ಡಿಸೆಂಬರ್ 21) ಕೂಡ ಈ ಸಿನಿಮಾಗೆ ಉತ್ತಮವಾಗಿ ಕಲೆಕ್ಷನ್ ಆಗುವ ಸಾಧ್ಯತೆ ದಟ್ಟವಾಗಿದೆ.
ಇಂದಿಗೂ ಹಲವು ಕಡೆಗಳಲ್ಲಿ ‘ಧುರಂಧರ್’ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಇದರಿಂದಾಗಿ ಇನ್ನೂ ಹಲವು ದಿನಗಳ ಕಾಲ ಈ ಚಿತ್ರಕ್ಕೆ ಬಹುಕೋಟಿ ರೂಪಾಯಿ ಕಲೆಕ್ಷನ್ ಆಗಲಿದೆ. ಆದ್ದರಿಂದ ಈ ಚಿತ್ರ ಅನಾಯಾಸವಾಗಿ 600 ಕೋಟಿ ರೂಪಾಯಿ ಗಳಿಕೆ ಮಾಡಲಿದೆ. ಹೊಸ ಸಿನಿಮಾಗಳು ಬಿಡುಗಡೆ ಆದರೂ ಕೂಡ ‘ಧುರಂದರ್’ ಅಬ್ಬರವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ.
‘ಗದರ್ 2’ (525 ಕೋಟಿ), ಪಠಾಣ್ (543 ಕೋಟಿ), ‘ಅನಿಮಲ್’ (553 ಕೋಟಿ) ಸಿನಿಮಾಗಳನ್ನು ಶೀಘ್ರದಲ್ಲೇ ‘ಧುರಂಧರ್’ ಚಿತ್ರ ಹಿಂದಿಕ್ಕಲಿದೆ. ಭಾರತದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾಗಳಾದ ‘ಸ್ತ್ರೀ’ (598 ಕೋಟಿ), ‘ಛಾವ’ (601 ಕೋಟಿ) ಹಾಗೂ ‘ಜವಾನ್’ (640 ಕೋಟಿ) ದಾಖಲೆಯನ್ನು ಮುರಿಯುವ ಟಾರ್ಗೆಟ್ ಈಗ ‘ಧುರಂಧರ್’ ಸಿನಿಮಾದ ಮುಂದಿದೆ.
ಬೆಂಗಳೂರು, ಡಿಸೆಂಬರ್ 21: ಮನೆ, ದೇವಾಲಯ ಅಥವಾ ಯಾವುದೇ ಕಟ್ಟಡ ನಿರ್ಮಾಣವನ್ನು ಪ್ರಾರಂಭಿಸುವ ಮೊದಲು ಶಂಕುಸ್ಥಾಪನೆ ಮಾಡುವುದು ಹಿಂದೂ ಸಂಪ್ರದಾಯದ ಒಂದು ಪ್ರಮುಖ ಭಾಗವಾಗಿದೆ. ಇದು ಕೇವಲ ಒಂದು ಪೂಜೆಗಿಂತ ಹೆಚ್ಚಾಗಿ, ಭೂಮಿಯನ್ನು ಶುದ್ಧೀಕರಿಸುವ ಮತ್ತು ನಿರ್ಮಾಣಕ್ಕೆ ಸದ್ಭಾವನೆಯನ್ನು ಆಹ್ವಾನಿಸುವ ಒಂದು ವಿಧಿಯಾಗಿದೆ. ಶಾಸ್ತ್ರೋಕ್ತವಾಗಿ ನಡೆಸುವ ಶಂಕುಸ್ಥಾಪನೆಯು ಆ ಜಾಗಕ್ಕೆ ನೂರು ವರ್ಷಗಳ ಕಾಲ ಬಲವನ್ನು ನೀಡುತ್ತದೆ ಎಂದು ನಂಬಲಾಗಿದೆ, ಇದರಿಂದಾಗಿ ಆಸ್ತಿಯು ವಂಶಪಾರಂಪರ್ಯವಾಗಿ ಸುಭದ್ರವಾಗಿ ಉಳಿಯುತ್ತದೆ.
ಶಂಕುಸ್ಥಾಪನೆಯ ಮುಖ್ಯ ಉದ್ದೇಶ ಭೂಮಿಯಲ್ಲಿರಬಹುದಾದ ಮೂರು ದೋಷಗಳನ್ನು ನಿವಾರಿಸುವುದು: ಸ್ಪರ್ಶ ದೋಷ, ದೃಷ್ಟಿ ದೋಷ ಮತ್ತು ಶಲ್ಯಾ ದೋಷ (ಮೃತ್ಯು ದೋಷ). ಈ ದೋಷಗಳು ಭೂಮಿಯ ಹಿಂದಿನ ಉಪಯೋಗ ಅಥವಾ ಅಲ್ಲಿ ನೆಲೆಸಿರಬಹುದಾದ ಋಣಾತ್ಮಕ ಶಕ್ತಿಗಳಿಂದ ಉಂಟಾಗಬಹುದು. ಶಂಕುಸ್ಥಾಪನೆಯ ಸಮಯದಲ್ಲಿ, ಈಶಾನ್ಯ ದಿಕ್ಕಿನಲ್ಲಿ ಬಿಲ್ವ, ಅತ್ತಿ ಅಥವಾ ತುಳಸಿ ಗಿಡವನ್ನು ನೆಡುವುದು ಮತ್ತು ನವಗ್ರಹ ದೋಷ ನಿವಾರಣೆಗಾಗಿ ವಾಸ್ತು ಪೂಜೆ ಮಾಡುವುದು ವಾಡಿಕೆ. ಗಂಗಾಜಲ ಮತ್ತು ಪಂಚಗವ್ಯಗಳನ್ನು ಭೂಮಿಯ ಮೇಲೆ ಸಿಂಪಡಿಸುವುದರಿಂದ ಭೂಶುದ್ಧಿ ಆಗುತ್ತದೆ. ಈ ವಿಧಿಯು ನಿರ್ಮಾಣ ಕಾರ್ಯ ಸುಗಮವಾಗಿ ನಡೆಯಲು ಮತ್ತು ನಿವಾಸಿಗಳಿಗೆ ಸಮೃದ್ಧಿ ತರಲು ಸಹಾಯಕವಾಗಿದೆ ಎಂದು ಗುರೂಜಿ ಹೇಳಿದ್ದಾರೆ.
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2025ರ ಡಿಸೆಂಬರ್ 21 ಭಾನುವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯಮಾಸ, ಹೇಮಂತ ಋತು, ಶುಕ್ಲಪಕ್ಷ, ಪಾಡ್ಯ, ಪೂರ್ವಾಷಾಢ ನಕ್ಷತ್ರ, ವೃದ್ಧಿಯೋಗ ಮತ್ತು ಭವಕರಣ ಇರತಕ್ಕಂತ ಈ ದಿನದ ರಾಹುಕಾಲ 4:33 ರಿಂದ 5:59 ರ ವರೆಗೆ ಇರಲಿದೆ. ಶುಭಕಾಲ, ಸಂಕಲ್ಪ ಕಾಲವು ಮಧ್ಯಾಹ್ನ 1:42 ರಿಂದ 3:07 ರವರೆಗೆ ಇರಲಿದೆ.
ಇಂದು ರವಿ ಮತ್ತು ಚಂದ್ರ ಇಬ್ಬರೂ ಧನುಸ್ಸು ರಾಶಿಯಲ್ಲಿ ಸಂಚರಿಸುತ್ತಿದ್ದು, ಜಗನ್ನಾಥ ತೀರ್ಥರ ಆರಾಧನೆ ಮತ್ತು ಚಂದ್ರ ದರ್ಶನಕ್ಕೆ ಸೂಕ್ತ ದಿನವಾಗಿದೆ. ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸುವವರಿಗೆ ಶುಭ ಹಾರೈಸಿರುವ ಗುರೂಜಿ, ಇಂದು ಐದು ನಿಮಿಷಗಳ ಕಾಲ ಜಪ ಮಾಡುವುದರಿಂದ ವರ್ಷಪೂರ್ತಿ ಶಕ್ತಿ ಮತ್ತು ಸಕಾರಾತ್ಮಕ ಯೋಗ ಇರುತ್ತದೆ ಎಂದು ತಿಳಿಸಿದ್ದಾರೆ. ಮೇಷದಿಂದ ತುಲಾವರೆಗಿನ ರಾಶಿಗಳಿಗೆ ಈ ದಿನದ ಪ್ರಮುಖ ಪ್ರಭಾವಗಳನ್ನು ವಿವರಿಸಿದ್ದಾರೆ.
ನಿಮ್ಮ ಸಮಯಪ್ರಜ್ಞೆ ನಿರ್ಧಾರಗಳಿಗೆ ಇತರರು ಅಚ್ಚರಿ ಪಡುತ್ತಾರೆ. ಯಾಕೆ ಬೇಕು- ಯಾಕೆ ಬೇಡ ಎಂಬ ಬಗ್ಗೆ ನಿಮಗಿರುವಂಥ ಸ್ಪಷ್ಟತೆ ಕಾರಣಕ್ಕೆ ಕಷ್ಟ ಎನಿಸಿದಂಥ ಕೆಲಸ -ಕಾರ್ಯಗಳು ಅಚ್ಚುಕಟ್ಟಾಗಿ ಆಗಲಿವೆ. ಈಚೆಗಷ್ಟೇ ನಿವೃತ್ತರಾಗಿದ್ದೀರಿ ಅಂತಾದಲ್ಲಿ ನಿಮಗೆ ಬರಬೇಕಾದ ಫೈನಲ್ ಸೆಟ್ಲ್ ಮೆಂಟ್ ಹಣಕಾಸಿನ ವ್ಯವಹಾರಗಳಿಗೆ ಓಡಾಟ ಇರುತ್ತದೆ. ಹೌಸಿಂಗ್ ಸೊಸೈಟಿಯಲ್ಲಿ ಸೈಟಿಗಾಗಿ ಈಗಾಗಲೇ ಹಣ ಕಟ್ಟಿಯಾಗಿದೆ, ವಿತರಣೆ ಮಾತ್ರ ಬಾಕಿ ಇದೆ ಎಂದಾದಲ್ಲಿ ಆ ಬಗ್ಗೆ ಮಾಹಿತಿ ದೊರೆಯಲಿದೆ. ನೀರು ಮಾರಾಟದ ಮೂಲಕ ಆದಾಯವನ್ನು ಪಡೆಯುತ್ತಾ ಇರುವವರಿಗೆ ದೀರ್ಘಾವಧಿಗೆ- ದೊಡ್ಡ ಪ್ರಮಾಣದ ಆರ್ಡರ್ ದೊರೆಯುವಂಥ ಸಾಧ್ಯತೆ ಇದೆ. ಕನಿಷ್ಠ ಪ್ರಮಾಣದ ಹೂಡಿಕೆ ಜತೆಗೆ ಆರಂಭಿಸಿದ ವ್ಯವಹಾರವೊಂದು ಹೆಚ್ಚಿನ ಪ್ರಮಾಣದ ಲಾಭ ತಂದುಕೊಡಲಿದೆ. ನಿಮ್ಮ ಬಗ್ಗೆ ಹರಿದಾಡುವಂಥ ಗಾಸಿಪ್ ಗಳ ಕುರಿತು ತಲೆ ಕೆಡಿಸಿಕೊಳ್ಳಬೇಡಿ.
ನಿಂತ ನಿಲವಿನಲ್ಲೇ ನಿಮ್ಮ ಅಭಿಪ್ರಾಯ ತಿಳಿಸಿಬಿಡಬೇಕು ಎಂದು ಪಟ್ಟು ಹಿಡಿಯುವಂಥವರ ಜತೆಗಿನ ವ್ಯವಹಾರ ಮುಂದುವರಿಸಲಿಕ್ಕೆ ಹೋಗಬೇಡಿ. ಬ್ಯಾಂಕ್ ಗೆ ಕಟ್ಟಲೇಬೇಕಾದ ಹಣವನ್ನು ಹೊಂದಿಸಲು ಹೆಚ್ಚು ಶ್ರಮ ಹಾಕಲಿದ್ದೀರಿ. ಇನ್ನು ನಿಮ್ಮಲ್ಲಿ ಕೆಲವರು ಉಳಿತಾಯ ಅಥವಾ ಹೂಡಿಕೆ ಹಣವನ್ನು ಹಿಂತೆಗೆದುಕೊಂಡು, ಸಾಲವನ್ನು ಚುಕ್ತಾ ಮಾಡುವುದಕ್ಕೆ ತೀರ್ಮಾನ ಮಾಡುತ್ತೀರಿ. ಭರತನಾಟ್ಯ ಕಲಾವಿದರಿಗೆ ಪ್ರತಿಷ್ಠಿತ ವೇದಿಕೆಯಲ್ಲಿ ಪ್ರದರ್ಶನ ನೀಡುವುದಕ್ಕೆ ಅವಕಾಶ ದೊರೆಯಲಿದೆ. ಇಷ್ಟು ಕಾಲ ಯಾವುದು ನಿಮಗೆ ಹವ್ಯಾಸ ಆಗಿತ್ತೋ ಅದನ್ನೇ ಆದಾಯ ಮೂಲ ಆಗುವಂಥ ವೃತ್ತಿಯಾಗಿ ಮಾಡಿಕೊಳ್ಳುವ ಬಗ್ಗೆ ಆಲೋಚನೆ ಬರಲಿದೆ. ಪಶು ಸಾಕಣೆ ಮಾಡುತ್ತಾ ಇರುವವರಿಗೆ ವ್ಯವಹಾರ ವಿಸ್ತಣೆಗೆ ಅವಕಾಶಗಳು ತೆರೆದುಕೊಳ್ಳಲಿವೆ. ನಿಮ್ಮ ಸ್ನೇಹಿತರು ತಾವಾಗಿಯೇ ಬಂದು, ಇದಕ್ಕೆ ಅಗತ್ಯ ಇರುವ ಹಣಕಾಸಿನ ಹೂಡಿಕೆಯನ್ನು ತಾವು ಮಾಡುವುದಾಗಿ ಹೇಳಲಿದ್ದಾರೆ.
ಪರಿಚಿತರ ಅಗತ್ಯಗಳಿಗೆ ನೆರವು ನೀಡಲಿದ್ದೀರಿ. ಸೈಟು- ಮನೆ ಖರೀದಿ ಮಾಡಬೇಕು ಎಂದಿರುವವರು ತಮ್ಮ ನಿರ್ಧಾರದಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಚೌಕಾಶಿ ಮಾಡಿ, ಈ ದಿನ ಕೆಲವು ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ಬರೀ ಮಾತಿನಿಂದ ಆಗುವುದಿಲ್ಲ ಎಂಬಂಥ ಕಡೆಗಳಲ್ಲಿ ಕೆಲಸ- ಕಾರ್ಯಗಳನ್ನು ಪೂರ್ಣ ಮಾಡುವುದಕ್ಕೆ ಪ್ರಭಾವ ಬಳಕೆ ಮಾಡಲಿದ್ದೀರಿ. ಮಕ್ಕಳ ಶಿಕ್ಷಣದ ಬಗ್ಗೆ ಚಿಂತೆ ಹೆಚ್ಚಾಗಲಿದೆ. ನಿಮ್ಮಲ್ಲಿ ಕೆಲವರು ಮಕ್ಕಳನ್ನು ಹಾಸ್ಟೆಲ್ ನಲ್ಲಿ ಬಿಟ್ಟು ಓದಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ನಿಮ್ಮ ಹಳೇ ಚಿನ್ನದ ಆಭರಣಗಳ ವಿನಿಮಯಕ್ಕೆ ನಿರ್ಧಾರ ಕೈಗೊಳ್ಳುವ ಯೋಗ ಇದೆ. ಸ್ವಲ್ಪ ಪ್ರಮಾಣದಲ್ಲಿಯಾದರೂ ಸಾಲ ಮಾಡುವ ಸಾಧ್ಯತೆ ಇದೆ. ಅಥವಾ ಕೆಲವರು ಪಿಎಫ್, ಎಫ್.ಡಿ., ಇಂಥವುಗಳಿಂದ ಹಣ ತೆಗೆದುಕೊಳ್ಳಲು ಪ್ರಯತ್ನ ಮಾಡಲಿದ್ದೀರಿ. ಸ್ವಾದಿಷ್ಟವಾದ ಊಟ- ತಿಂಡಿ ಸವಿಯುವ ಯೋಗ ಇದೆ.
ಮೀನುಗಾರಿಕೆ- ಮೀನು ಸಾಕಣೆ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ದ್ವಿಚಕ್ರ ವಾಹನ ಖರೀದಿ ಮಾಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೀರಿ. ನೀವೇನಾದರೂ ವ್ಯಾಪಾರ- ವ್ಯವಹಾರ ಮಾಡುವಂಥವರಾದರೆ ಅದಕ್ಕೆ ಅಗತ್ಯ ಇರುವಂಥ ಟ್ರಕ್, ಲಾರಿ, ಲಗೇಜ್ ಆಟೋ ಇಂಥವುಗಳನ್ನು ಖರೀದಿಸುವ ಸಾಧ್ಯತೆ ಇದೆ. ಚರ್ಮ- ಕೂದಲಿನ ಆರೋಗ್ಯದ ಬಗ್ಗೆ ಹೆಚ್ಚು ಲಕ್ಷ್ಯ ನೀಡಬೇಕು. ತಲೆಹೊಟ್ಟಿನ ಸಮಸ್ಯೆ ಈಗಾಗಲೇ ಇದ್ದಲ್ಲಿ ಅದು ಉಲ್ಬಣ ಆಗಬಹುದು. ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳುವುದಕ್ಕೆ ಪ್ರಾಮುಖ್ಯ ನೀಡಿ. ಪಿತ್ರಾರ್ಜಿತ ಆಸ್ತಿ ಹಂಚಿಕೆ ಬಗ್ಗೆ ಈ ಹಿಂದೆ ಯಾವಾಗಲೋ ನಿಮಗೆ ಇಂಥದ್ದನ್ನು ನೀಡುತ್ತೇನೆ ಎಂದು ಹೇಳಿದ್ದಿದ್ದು, ಈಗ ತೀರ್ಮಾನ ಬದಲಾವಣೆ ಮಾಡಿಕೊಂಡಿರುವುದಾಗಿ ಹೇಳಲಿದ್ದಾರೆ. ಅಡ್ವರ್ಟೈಸ್ ಮೆಂಟ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಒತ್ತಡ ಇರಲಿದೆ.
ಕುಟುಂಬಕ್ಕೆ ಅಗತ್ಯ ಇರುವ ವಸ್ತುಗಳ ಖರೀದಿ ಮಾಡುವುದಕ್ಕೆ ಹೆಚ್ಚಿನ ಸಮಯವನ್ನು ಇಡಲಿದ್ದೀರಿ. ನಿಮ್ಮಲ್ಲಿ ಕೆಲವರು ಪ್ರವಾಸಕ್ಕೆ ತೆರಳಲು ಸಿದ್ಧತೆ ಮಾಡಿಕೊಳ್ಳಲಿದ್ದು, ಹೋಟೆಲ್ ಬುಕ್ಕಿಂಗ್, ಕಾರು ಬುಕ್ಕಿಂಗ್ ಇಂಥವು ಮಾಡಿಕೊಳ್ಳುವುದಕ್ಕೆ ಸ್ನೇಹಿತರ ಸಹಾಯವನ್ನು ಕೇಳಲಿದ್ದೀರಿ. ಆದಾಯ ತೆರಿಗೆಗೆ ಸಂಬಂಧಿಸಿದ ವಿಷಯದ ಬಗ್ಗೆ ಚರ್ಚೆ ಮಾಡುವುದಕ್ಕೆ ಆ ಕ್ಷೇತ್ರದಲ್ಲಿ ಪರಿಣತ ಆದಂಥ ವ್ಯಕ್ತಿಗಳ ಜತೆಗೆ ಮಾತುಕತೆ ನಡೆಸಲಿದ್ದೀರಿ. ಮಾತು ಪ್ರಧಾನವಾದ ವೃತ್ತಿ- ಉದ್ಯೋಗದಲ್ಲಿ ಇರುವವರಿಗೆ ವಿಪರೀತ ಕೆಲಸಗಳು ಬರುತ್ತವೆ. ಪ್ರಮುಖ ಜವಾಬ್ದಾರಿಯೊಂದನ್ನು ಹೆಚ್ಚುವರಿಯಾಗಿ ವಹಿಸಿಕೊಳ್ಳಲು ಸೂಚನೆ ಕೂಡ ಬರಲಿದೆ. ಫ್ರೀಲ್ಯಾನ್ಸರ್ ಆಗಿ ಇರುವವರಿಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಯೋಗ ಇದ್ದು, ಸ್ನೇಹಿತರ ಮೂಲಕ ಉದ್ಯೋಗದ ರೆಫರೆನ್ಸ್ ಸಹ ಬರಬಹುದು. ಅವಕಾಶಗಳನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂಬ ಕಡೆಗೆ ಲಕ್ಷ್ಯ ನೀಡಿ.
ಸಂಗೀತ ಸಾಧನಗಳ ಕಲಿಕೆಯನ್ನು ಆರಂಭಿಸುವುದಕ್ಕೆ ಮನಸ್ಸು ಮಾಡಲಿದ್ದೀರಿ. ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಅವಕಾಶಗಳು ದೊರೆಯಲಿವೆ. ದೊಡ್ಡ ವೇದಿಕೆಯಲ್ಲಿ ನಿಮ್ಮ ಸಾಮರ್ಥ್ಯ ಪ್ರದರ್ಶನ ಮಾಡುವುದಕ್ಕೆ ಆಹ್ವಾನ ಬರಲಿದೆ. ಎಂಎಸ್ಎಂಇ ಕೈಗಾರಿಕೆ ಆರಂಭಿಸುವುದಕ್ಕೆ ಸಿದ್ಧತೆ- ಬಜೆಟ್ ಮಾಡಿಕೊಳ್ಳಲಿದ್ದೀರಿ. ಸಬ್ಸಿಡಿ ಸಹಿತವಾಗಿ ಸಾಲವನ್ನು ಪಡೆಯುವುದಕ್ಕೆ ಬ್ಯಾಂಕ್ ಗೆ ಪ್ರಾಜೆಕ್ಟ್ ರಿಪೋರ್ಟ್ ಸಲ್ಲಿಸುವ ಸಾಧ್ಯತೆ ಇದೆ. ಹೊಸ ಹೂಡಿಕೆ ಅವಕಾಶಗಳಿಗೆ ತಕ್ಷಣವೇ ಸ್ಪಂದಿಸಿದ್ದರಿಂದ ಆರಂಭದಲ್ಲಿಯೇ ಲಾಭದಲ್ಲಿ ಇರುವಂತೆ ಆಗಲಿದೆ. ಮಕ್ಕಳ ಶಿಕ್ಷಣಕ್ಕೆ ಸಹಾಯ ಆಗಲಿ ಎಂಬ ದೃಷ್ಟಿಕೋನದಿಂದ ಕೊಂಡಿದ್ದ ಷೇರುಗಳು, ಹೂಡಿಕೆ ಮಾಡಿಕೊಂಡು ಬಂದಿದ್ದ ಮ್ಯೂಚುವಲ್ ಫಂಡ್ ನಿಂದ ಹಣವನ್ನು ತೆಗೆದುಕೊಳ್ಳುವ ತೀರ್ಮಾನವನ್ನು ಮಾಡಲಿದ್ದೀರಿ. ಸ್ನೇಹಿತರ ವರ್ತನೆಯಿಂದ ಬೇಸರ ಆಗಲಿದೆ.
ನಿಮಗೆ ಎಷ್ಟೇ ಆಪ್ತರೇ ಆದರೂ ಇತರರ ಹಣಕಾಸು ವ್ಯವಹಾರಗಳಿಗೆ ಮಧ್ಯಸ್ಥಿಕೆ ಮಾಡುವುದಕ್ಕೆ ನೀವು ಹೋಗಬೇಡಿ. ನೀವಾಗಿಯೇ ವಹಿಸಿಕೊಂಡ ಕೆಲವು ಜವಾಬ್ದಾರಿಗಳನ್ನು ಗಡುವಿನೊಳಗಾಗಿ ಮಾಡಿ ಮುಗಿಸುವುದಕ್ಕೆ ಹರಸಾಹಸ ಮಾಡಬೇಕಾಗುತ್ತದೆ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ರಜಾ ಕೇಳಿಕೊಂಡು ಬಂದಲ್ಲಿ ಅವರ ಅಗತ್ಯಕ್ಕೆ ಸ್ಪಂದಿಸುವ ಕಡೆಗೆ ಗಮನವನ್ನು ನೀಡಿ. ವಿವಾಹ ವಯಸ್ಕರಾಗಿದ್ದು ಮದುವೆ ಪ್ರಯತ್ನ ಮಾಡುತ್ತಾ ಇದ್ದಲ್ಲಿ ಸೂಕ್ತ ಸಂಬಂಧ ದೊರೆಯುವ ಸಾಧ್ಯತೆ ಹೆಚ್ಚಿದೆ. ಮುಖ್ಯವಾಗಿ ಸಂಬಂಧಿಗಳ ಮೂಲಕ ಬರುವಂಥ ರೆಫರೆನ್ಸ್ ಗಂಭೀರವಾಗಿ ಪರಿಗಣಿಸಿ. ದೇವತಾ ಕಾರ್ಯಗಳ ಆಯೋಜನೆಗಾಗಿ ಓಡಾಟ ನಡೆಸಲಿದ್ದೀರಿ. ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಪ್ರಾಜೆಕ್ಟ್ ಗಳು ಹುಡುಕಿಕೊಂಡು ಬರಲಿವೆ. ಆದಾಯದಲ್ಲಿ ಹೆಚ್ಚಳ ಆಗುವುದರಿಂದ ನಿಮ್ಮ ಆತ್ಮವಿಶ್ವಾಸವು ಹೆಚ್ಚಲಿದೆ. ಪ್ರಶ್ನಿಸದೆ ಯಾವುದೇ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಡಿ.
ಯಾರ ಬಳಿಯೂ ಸಹಾಯ ಕೇಳಬಾರದು ಎಂದುಕೊಳ್ಳುತ್ತಾ ಇರುವವರಿಗೆ ಇತರರ ನೆರವು ಅನಿವಾರ್ಯ ಆಗಲಿದೆ. ಕೂಡಿಟ್ಟುಕೊಂಡಿದ್ದ ಉಳಿತಾಯದ ಹಣವನ್ನು ಹಿಂತೆಗೆದುಕೊಂಡು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವ ಆಲೋಚನೆ ಮೂಡಲಿದೆ. ಇನ್ನು ನಿಮ್ಮಲ್ಲಿ ಯಾರು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದೀರಿ, ಅಂಥವರಿಗೆ ಬಡ್ತಿ, ವೇತನ ಹೆಚ್ಚಳ ಆಗುವ ಯೋಗ ಇದೆ. ನಿವೃತ್ತ ಸರ್ಕಾರಿ ನೌಕರರಿಗೆ ಕನ್ಸಲ್ಟಂಟ್ ಆಗಿ ಕಾರ್ಯ ನಿರ್ವಹಿಸುವಂತೆ ಆಹ್ವಾನ ದೊರೆಯಲಿದೆ. ವಾಹನ ಚಾಲನೆ ಮಾಡುವಾಗ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಜಾಗ್ರತೆ ವಹಿಸಿ. ಅದರ ಜೊತೆಗೆ ಒನ್ ವೇ, ನೋ ಪಾರ್ಕಿಂಗ್ ಇಂಥವುಗಳನ್ನು ಗಮನಿಸಿಕೊಳ್ಳಿ. ಇಲ್ಲದಿದ್ದಲ್ಲಿ ಅಂಥವುಗಳಿಗೆ ದೊಡ್ಡ ಮೊತ್ತದ ದಂಡ ಪಾವತಿಸುವಂತೆ ಆಗಲಿದೆ. ಬಹಳ ವರ್ಷಗಳಿಂದ ಭೇಟಿ ಸಾಧ್ಯವೇ ಆಗಿರಲಿಲ್ಲ ಎಂಬಂಧ ಸ್ನೇಹಿತರ ಜೊತೆಗೆ ಉತ್ತಮವಾದ ಸಮಯವನ್ನು ಕಳೆಯಲಿದ್ದೀರಿ.
ಬರಹಗಾರರಿಗೆ ಒತ್ತಡದ ಸನ್ನಿವೇಶ ಎದುರಾಗಲಿದೆ. ಗಡುವಿನ ಒಳಗಾಗಿ ಪೂರ್ಣಗೊಳಿಸಲು ಸಾಧ್ಯವಾಗದೆ ಕೆಲವು ಕೆಲಸದ ವಿಚಾರದಲ್ಲಿ ಮನಸ್ಸು ಕಹಿ ಆಗುವಂಥ ಬೆಳವಣಿಗೆ ಆಗಲಿದೆ. ಆಸಕ್ತಿಯಿಂದ ಕಟ್ಟಿದ್ದ ಸಂಸ್ಥೆ, ಪತ್ರಿಕೆ ಅಥವಾ ಯೂ ಟ್ಯೂಬ್ ಚಾನೆಲ್ ಅನ್ನು ಬೇರೆಯವರಿಗೆ ವಹಿಸಿಕೊಡಬೇಕು ಎಂಬ ಸನ್ನಿವೇಶ ಸೃಷ್ಟಿ ಆಗುತ್ತದೆ. ಸಿಹಿ ಪದಾರ್ಥಗಳ ಸೇವನೆಯನ್ನು ಈ ದಿನ ಕಡಿಮೆ ಮಾಡುವುದು ಒಳ್ಳೆಯದು. ಅದರಲ್ಲೂ ದೇಹದ ತೂಕ ಹೆಚ್ಚಾಗಿ, ಮಧುಮೇಹದಂಥ ಸಮಸ್ಯೆಯಿಂದ ಬಳಲುತ್ತಾ ಇರುವವರು ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ. ಮನೆಗೆ ಟೀವಿ ಅಥವಾ ಹೋಮ್ ಥಿಯೇಟರ್ ಅಳವಡಿಕೆ ಅಥವಾ ಪ್ರೊಜೆಕ್ಟರ್ ಖರೀದಿ ಮಾಡುವುದಕ್ಕೆ ಸದಸ್ಯರ ಜತೆಗೆ ಮಾತುಕತೆ ನಡೆಸಲಿದ್ದೀರಿ. ಸ್ನೇಹಿತರಿಂದ ಸಾಲವನ್ನು ಪಡೆದುಕೊಂಡಿದ್ದಲ್ಲಿ ಅದನ್ನು ಮರುಪಾವತಿ ಮಾಡುವುದಕ್ಕೆ ಆದ್ಯತೆ ನೀಡಲಿದ್ದೀರಿ.
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಮೂಲಾ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ಧೃತಿ, ಕರಣ : ನಾಗವಾನ್, ಸೂರ್ಯೋದಯ – 06 – 45 am, ಸೂರ್ಯಾಸ್ತ – 06 – 00 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:36 – 18:00, ಯಮಗಂಡ ಕಾಲ 12:23- 13:47, ಗುಳಿಕ ಕಾಲ 15:51 – 16:36.
ಮೇಷ ರಾಶಿ: ಕನಸಿನಲ್ಲೇ ತೇಲಿದರೆ ವಾಸ್ತವಿಕ ನಷ್ಟವಾಗುವ ಸಂಭವ. ಪ್ರಯೋಗಾತ್ಮಕ ಚಿಂತನೆಯು ಯಶಸ್ಸನ್ನು ತರುತ್ತದೆ. ಇನ್ನೊಬ್ಬರ ಬಗ್ಗೆ ನಿಮ್ಮಲ್ಲಿ ಕುತೂಹಲ ಇರಲಿದೆ. ಸಜ್ಜನರ ಜೊತೆ ಸಮಯ ಕಳೆಯುವ ಅವಕಾಶ ಸಿಗುವುದು. ಕುಟುಂಬದ ಹಿರಿಯರ ಅನಾರೋಗ್ಯದ ಕಾರಣ ನಿಮ್ಮ ಸ್ವಂತ ಕಾರ್ಯವನ್ನು ಮಾಡಿಕೊಳ್ಳಲಾಗದು. ಆಭರಣ ಖರೀದಿಗೆ ಉತ್ತಮ ದಿನವಿದಾಗಲಿದೆ. ವೃದ್ಧರ ಸೇವೆಯಲ್ಲಿ ತೊಡಗಿಕೊಳ್ಳುವಿರಿ. ಉದ್ಯೋಗವನ್ನು ನಂಬಿ ಜೀವನ ಸಾಗಿಸುವವರಿಗೆ ಬೇಸರ ಎದುರಾಗಬಹುದು. ನಿಮ್ಮ ವ್ಯಾಪಾರದ ತಂತ್ರವು ಫಲಿಸಬಹುದು. ವ್ಯಾಪಾರದಲ್ಲಿ ಲಾಭವನ್ನು ತಂದೀತು. ಕಲಾತ್ಮಕ ಕೆಲಸಗಳಲ್ಲಿ ಸಂತೋಷ ಸಿಗುತ್ತದೆ. ಮನಸ್ಸಿಗೆ ಶಾಂತಿ ದೊರೆಯುತ್ತದೆ. ಸನ್ನಿವೇಶಕ್ಕೆ ತಕ್ಕುದಾದ ಮಾತನ್ನು ಆಡಿ. ಎಲ್ಲ ಕಾರ್ಯಕ್ಕೂ ಲಾಭವನ್ನು ನಿರೀಕ್ಷಿಸುವುದು ಬೇಡ. ಅನುವಾದಕರಿಗೆ ಹೆಚ್ಚು ಕಾರ್ಯಗಳು ಬರಬಹುದು. ಮನಸ್ಸಿನ ಭಾರವನ್ನು ಕಳೆಯುವ ದಾರಿಗಳು ನಿಮ್ಮ ಮುಂದೆ ಇರುವುದು.
ವೃಷಭ ರಾಶಿ: ನಿಮ್ಮ ಇಂದಿನ ಅಭಿಪ್ರಾಯವನ್ನು ಇತರರು ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಸ್ಪಷ್ಟ ಸಂವಹನದಿಂದ ನಷ್ಟವನ್ನು ತಪ್ಪಿಸಬಹುದು. ನಿಮ್ಮ ಅಂತಶ್ಶಕ್ತಿಯೇ ನಿಮ್ಮ ನಿಜವಾದ ಬಲವಾದುದರಿಂದ ಯಾವ ಸಮಸ್ಯೆಗಳಿಗೂ ನಿರಾತಂಕವಾಗಿ ಇರುವಿರಿ. ಸ್ನೇಹಿತರು ನಿಮಗೆ ಸುಳ್ಳು ಹೇಳುವರು. ಮಕ್ಕಳ ವಿದ್ಯಾಭ್ಯಾಸಕ್ಕೆ ನೀವೇ ವಿಶೇಷ ಕಾಳಜಿಯನ್ನು ತೋರಿ ಅವರನ್ನು ಓದಿಗೆ ಪ್ರೇರಣೆ ಕೊಡಬೇಕಾಗುವುದು. ದಿನದ ಕೆಲಸವೇ ಇಂದು ಬಹಳ ಆಗಲಿದ್ದು ಇನ್ನೊಬ್ಬರ ಕೆಲಸವನ್ನು ಮಾಡಿಕೊಡಲು ತಾಳ್ಮೆ ಇರಲಾರದು. ಬರಬೇಕಾದ ಹಣವು ಆಕಸ್ಮಿಕವಾಗಿ ಬಂದಿದ್ದು ಖುಷಿ ಕೊಡುವುದು. ಇಂದು ನಿಮ್ಮ ಉತ್ಸಾಹವನ್ನು ಯಾರಿಂದಲೂ ಸಾಧ್ಯವಾಗದು. ಆದಾಯದ ವಿಚಾರದಲ್ಲಿ ಹಿನ್ನಡೆಯಾಗಿದ್ದು ನಿಮ್ಮ ತಂತ್ರವು ಪೂರ್ಣವಾಗಿ ಫಲಿಸದು. ವೈಶಿಷ್ಟ್ಯತೆಯಿಂದ ಗುರುತಿಸಿಕೊಳ್ಳುವ ದಿನ. ಹೊಸ ಪ್ರಯೋಗಗಳಲ್ಲಿ ಯಶಸ್ಸು ಸಾಧ್ಯ. ಸ್ನೇಹವಲಯ ವಿಸ್ತಾರವಾಗುತ್ತದೆ. ನಿಮ್ಮ ತಪ್ಪಿಗೂ ಇನ್ನೊಬ್ಬರನ್ನು ಕೈ ಮಾಡಿ ತೋರಿಸುವುದು ಬೇಡ. ಮಾತಿನಿಂದಲೇ ಸಂಕಟವನ್ನು ತಂದುಕೊಳ್ಳುವಿರಿ. ಅತಿಯಾದ ಸಂತೋಷದ ಕ್ಷಣವು ನಿಮ್ಮ ಪಾಲಿಗೆ ಇರಲಿದೆ.
ಮಿಥುನ ರಾಶಿ: ದೇಹಾರೋಗ್ಯವನ್ನು ನಿರ್ಲಕ್ಷಿಸಿದರೆ ಅನಾರೋಗ್ಯದ ಆಧಿಕ್ಯ. ಕೆಲಸ ಮತ್ತು ವಿಶ್ರಾಂತಿ ಸಮತೋಲನದಲ್ಲಿದ್ದರೆ ದಿನ ಶುಭಕರ. ಇರುವ ಚೈತನ್ಯವನ್ನು ಬೆಳೆಸಿಕೊಂಡು ಕಾರ್ಯವನ್ನು ಸಾಧಿಸಿಕೊಳ್ಳಬಡೆಕು. ಮನೆಯ ಸಮೀಪದಲ್ಲಿಯೇ ನಿಮ್ಮ ಉದ್ಯೋಗವು ಸಿಗಲಿದೆ. ಮನೆಯಲ್ಲಿ ತಾಳ್ಮೆಯಿಂದ ವ್ಯವಹರಿಸಿ. ನಿಮ್ಮ ವಾಹನಕ್ಕಾಗಿ ಖರ್ಚನ್ನು ಮಾಡಬೇಕಾಗುವುದು. ಪ್ರೀತಿಯ ವಿಷಯದಲ್ಲಿ ಇಂದು ದುಃಖವುಂಟಾಗಬಹುದು. ಮನಸ್ತಾಪವನ್ನು ದ್ವೇಷವಾಗಿ ಪರಿವರ್ತಿಸಿಕೊಳ್ಳುವುದು ಬೇಡ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ನೀವು ತಳ್ಳಿಹಾಕುವಿರಿ. ಶ್ರಮಕ್ಕೆ ತಕ್ಕ ಫಲ ದೊರೆಯುವ ದಿನ. ಹಿರಿಯರಿಂದ ಮಾರ್ಗದರ್ಶನ ಸಿಗುತ್ತದೆ. ಕಾರ್ಯಕ್ಷೇತ್ರದಲ್ಲಿ ಸ್ಥಿರತೆ ಕಾಣಿಸುತ್ತದೆ. ವ್ಯವಹಾರದಲ್ಲಿ ಇರಬೇಕಾದ ಚಾಕಚಕ್ಯತೆಯನ್ನು ಬೆಳೆಸಿಕೊಳ್ಳಬೇಕಾಗುವುದು. ಪ್ರೀತಿಯ ಮಾತುಗಳಿಂದ ನಿಮ್ಮತ್ತ ಜನರು ಆಕರ್ಷಿತರಾಗುವುದು. ವಿದ್ಯಾರ್ಥಿಗಳಿಗೆ ಅನ್ಯರ ಸಹವಾಸ ಸಿಗಬಹುದು. ಬಿಡುಗಡೆಗಾಗಿ ದಾರಿಯನ್ನು ನೀವೇ ಹುಡುಕಿಕೊಳ್ಳುವಿರಿ.
ಕರ್ಕಾಟಕ ರಾಶಿ: ಆಶಾವಾದ ನಿಮ್ಮ ಬಲವನ್ನು ಹೆಚ್ಚು ಮಾಡುತ್ತದೆ. ಆದರೆ ಅತಿಯಾದ ನಿರೀಕ್ಷೆಗಳು ಮನಸ್ಸಿಗೆ ನೋವು ತರುತ್ತವೆ. ಏನೇ ಮಾಡಿದರೂ ಚಾಂಚಲ್ಯವನ್ನು ನಿಯಂತ್ರಿಸಲಾಗದೇ ಕಷ್ಟವಾಗುವುದು. ಸುಳ್ಳನ್ನಾಡಿ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಅಚಾತುರ್ಯದಿಂದ ಹಣವನ್ನು ಕಳೆದುಕೊಳ್ಳಬೇಕಾದೀತು. ಬೇಡದ ಕಾರ್ಯಕ್ಕೆ ಯಾರಾದರೂ ಪ್ರಚೋದಿಸಿಯಾರು. ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು. ಒಂದು ಕಾರ್ಯಕ್ಕೆ ವಿಘ್ನಗಳು ಬರುತ್ತಿದ್ದು ದೈವಜ್ಞರನ್ನು ಸಂಪರ್ಕಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಉತ್ತಮ. ವಿದ್ಯೆಯ ಕಾರಣಕ್ಕೆ ಇಂದು ನಿಮಗೆ ಗೌರವವು ಸಿಗಲಿದೆ. ಕಾರ್ಯದ ಒತ್ತಡದಿಂದ ಶಿರೋವೇದನೆ ಕಾಣಿಸಿಕೊಳ್ಳುವುದು. ಹೊಸ ಆಲೋಚನೆಗಳು ಯಾರದೋ ಪ್ರೋತ್ಸಾಹವಿಲ್ಲದೇ ಚೈತನ್ಯ ನೀಡುತ್ತವೆ. ಪ್ರಯಾಣ ಅಥವಾ ಅಧ್ಯಯನದಲ್ಲಿ ಲಾಭ ಸಿಗುತ್ತದೆ. ವಾಸ್ತವಿಕ ದೃಷ್ಟಿಯಿಂದ ನಡೆದುಕೊಂಡರೆ ಯಶಸ್ಸು ಖಚಿತ. ಸಹಾಯವನ್ನು ಕೇಳಿ ಬಂದವರಿಗೆ ಇಲ್ಲ ಎನ್ನುವುದು ಬೇಡ.
ಸಿಂಹ ರಾಶಿ: ಕೆಲಸದಲ್ಲಿ ಸ್ಥಿರ ಯಶಸ್ಸು ಕಾಣಬಹುದು. ಆದರೆ ಅನುಮಾನ ಮತ್ತು ಅಸಹನೆ ದೂರ ಮಾಡಿಕೊಳ್ಳಬೇಕು. ಇಂದು ಅನಿರೀಕ್ಷಿತ ಬಂಧುಗಳ ಆಗಮನದಿಂದ ಯೋಜಿತವಾದ ಕಾರ್ಯಗಳನ್ನು ಬದಲಿಸುವುದು ಬೇಡ. ಪ್ರಯಾಣದಿಂದ ಹಿಂಸೆ ಆಗಬಹುದು. ಮಿತ್ರರಿಂದ ಸಿಗಬೇಕಾದ ಹಣಕ್ಕೆ ಕತ್ತರಿ ಬೀಳುವುದು. ನಿರೀಕ್ಷಿತ ಫಲವು ಲಭಿಸದು. ಆಸ್ತಿಯ ಖರೀದಿಯ ವಿಚಾರದಲ್ಲಿ ನೀವು ಸರಿಯಾದ ಮಾಹಿತಿಯನ್ನು ಪಡೆಯುವುದು ಸೂಕ್ತ. ಸಹೋದ್ಯೋಗಿಗಳ ಮೇಲೆ ನಿಮಗೆ ಅಸೂಯೆ ಉಂಟಾಗಬಹುದು. ಆಂತರಿಕ ಶಕ್ತಿ ಹೆಚ್ಚಾಗುವ ದಿನ. ಗುಪ್ತ ಪ್ರಯತ್ನಗಳು ಫಲ ನೀಡುತ್ತವೆ. ವಿಶ್ವಾಸ ಮತ್ತು ಧೈರ್ಯದಿಂದ ನಡೆದುಕೊಂಡರೆ ಜಯ ಸಿಗುತ್ತದೆ. ನಿಮ್ಮ ಯೋಜನೆ ಉತ್ತಮವಿದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಕಷ್ಟವಾದೀತು. ನಿಮ್ಮ ಕಾರ್ಯಕ್ಕೆ ಇನ್ಯಾರೋ ಯಶಸ್ಸು ಪಡೆವರು. ಸಂಗಾತಿಯ ಬಗ್ಗೆ ಇದ್ದ ಪೂರ್ವಾಗ್ರಹವು ಬದಲಾಗಿ ಅವರ ಜೊತೆ ಅನ್ಯೋನ್ಯವಾಗಿ ಇರುವಿರಿ. ಒಂದೇ ಕಾರ್ಯವನ್ನು ಎರಡು ರೀತಿಯ ಲಾಭವಾಗುವಂತೆ ನೋಡಿಕೊಳ್ಳುವಿರಿ.
ಕನ್ಯಾ ರಾಶಿ: ಆರ್ಥಿಕ ವಿಷಯಗಳಲ್ಲಿ ಲಾಭದ ಸೂಚನೆ. ಆದರೆ ತೀರ್ಮಾನದಲ್ಲಿ ವಿಳಂಬ ನಿರ್ದಿಷ್ಟ ಗುರಿಯನ್ನು ತಲುಪದೇ ಬೇಸರ ಕಾರಣವಾಗಬಹುದು. ಸಮಯಕ್ಕೆ ಸರಿಯಾದ ನಿರ್ಧಾರ ದಿನವನ್ನು ಯಶಸ್ವಿಗೊಳಿಸುತ್ತದೆ. ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ಇಲ್ಲವಾದರೆ ನಿಮಗೇ ತೊಂದರೆ. ವಾಗ್ಮಿಗಳು ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವರು. ಸಂಪ್ರದಾಯದ ವಿಚಾರದಲ್ಲಿ ನಿಮಗೆ ಆಸಕ್ತಿಯು ಹೆಚ್ಚಾಗಬಹುದು. ಮನೆಗೆ ಅತಿಥಿಗಳ ಆಗಮನವಾಗಲಿದ್ದು ನಿಮ್ಮ ಇಂದಿನ ಕಾರ್ಯವು ಬದಲಾಗಬಹುದು. ನಿಮ್ಮ ಕರ್ತವ್ಯವನ್ನು ಮಾಡಲು ಹಿಂದೇಟು ಹಾಕುವಿರಿ. ನಿಮ್ಮ ಮನಸ್ಸಿಗೆ ಹಿಡಿಸದೇ ಇರುವವರಿಂದ ದೂರ ಉಳಿಯುವಿರಿ. ಅನ್ಯರನ್ನು ಪೀಡಿಸಿ ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಕಾನೂನಿನ ಕೆಲಸವನ್ನು ಯಾರ ಸಲಹೆಯನ್ನು ಪಡೆಯದೇ ಮಾಡುವಿರಿ. ಸಂಬಂಧಗಳಲ್ಲಿ ಸಮತೋಲನ ಸಿಗುತ್ತದೆ. ಮಾತುಕತೆಗಳಿಂದ ಸಮಸ್ಯೆಗಳು ಪರಿಹಾರವಾಗುತ್ತವೆ. ಭವಿಷ್ಯದ ಭದ್ರೆತೆಗೆ ಬೇಕಾದ ಬುನಾದಿಯನ್ನು ಹಾಕಿಕೊಳ್ಳುವಿರಿ.
ತುಲಾ ರಾಶಿ: ಆರೋಗ್ಯದ ಕಡೆ ಗಮನ ಹರಿಸಿದರೆ ಶಕ್ತಿ ಹೆಚ್ಚುತ್ತದೆ. ಆದರೆ ಅತಿಯಾದ ಚಿಂತನೆ ಮನಸ್ಸನ್ನು ಕುಗ್ಗಿಸಬಹುದು. ಉದ್ಯೋಗದಲ್ಲಿ ಬಡ್ತಿಗೆ ಅವಕಾಶಗಳು ಬರಬಹುದು. ಆದಾಯ ಹೆಚ್ಚಲಿದೆ. ಸಿಕ್ಕ ಅವಕಾಶದಲ್ಲಿ ತೃಪ್ತಿ ಪಡೆಯುವುದು ಮುಖ್ಯವಾಗಿರಲಿ. ಮನೆಯ ಕಾರ್ಯದಲ್ಲಿ ಸಮಯವು ಕಳೆದುಹೋಗುವುದು. ನಿಮಗೆ ಗೊತ್ತೇ ಇರದ ಕೆಲಸವನ್ನು ನೀವು ಮಾಡಬೇಕಾದೀತು. ಮನಶ್ಚಾಂಚಲ್ಯದಿಂದ ಕಛೇರಿಯಲ್ಲಿ ಸರಿಯಾದ ಕೆಲಸವನ್ನು ಮಾಡಲಾಗದು. ಪ್ರೀತಿಯು ನಿಮ್ಮ ಯಶಸ್ಸಿನ ವೇಗಕ್ಕೆ ಕಡಿವಾಣ ಹಾಕಬಹುದು. ನಿಮ್ಮ ಉದ್ದೇಶವೇ ಬದಲಾದರೂ ಅಚ್ಚರಿ ಪಡಬೇಕಾಗಿಲ್ಲ. ಸ್ನೇಹಿತರು ನಿಮ್ಮ ಸಮಯವನ್ನು ವ್ಯರ್ಥಮಾಡಿಯಾರು. ಯೋಜಿತವಾಗಿ ಕೆಲಸ ಮಾಡುವ ದಿನ. ಸೂಕ್ಷ್ಮ ಗಮನದಿಂದ ಲಾಭ ದೊರೆಯುತ್ತದೆ. ಸರಳ ದೃಷ್ಟಿಕೋನ ಇಟ್ಟುಕೊಂಡರೆ ಯಶಸ್ಸು ನಿಮ್ಮದಾಗುತ್ತದೆ. ಎಲ್ಲ ಕಡೆಗಳಿಂದಲೂ ಮಾನಸಿಕ ಸಂತೃಪ್ತಿ ಇರದೇ ಇರುವುದು ಯಾರ ಬಳಿ ಹೇಳಿಕೊಳ್ಳಬೇಕು ಎಂದು ಗೊತ್ತಾಗದು.
ವೃಶ್ಚಿಕ ರಾಶಿ: ಕೆಲಸದಲ್ಲಿ ದೃಢತೆ ಸಿಗುತ್ತದೆ. ನಾಯಕತ್ವ ಗುಣದಿಂದ ಯಶಸ್ಸು ದೊರೆಯುತ್ತದೆ. ಆದರೆ ಅಹಂಕಾರ ಮತ್ತು ಅತಿಯಾದ ಆತ್ಮವಿಶ್ವಾಸ ಅಪಯಶಸ್ಸಿಗೆ ಕಾರಣವಾಗಬಹುದು. ಕೌಟುಂಬಿಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ನಿಮ್ಮ ಅಂತರಂಗದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಯೋಚಿಸುವಿರಿ. ಕಛೇರಿಯ ಕಾರ್ಯವನ್ನು ಮನೆಯಲ್ಲಿ ಇದ್ದು ಮಾಡಬೇಕಾಗಬಹುದು. ಇಂದು ವ್ಯಾಪಾರವನ್ನು ಮಾಡುವ ಮನಸ್ಸು ಇಲ್ಲದಿದ್ದರೂ ಮನೆಯಲ್ಲಿ ಕುಳಿತು ಬೇಸರವಾಗಬಹುದು. ಸಾಮಾಜಿಕ ತಾಣದಲ್ಲಿ ಹೆಚ್ಚು ಸಮಯ ಕಳೆಯುವಿರಿ. ಸ್ನೇಹಿತರ ತಮಾಷೆಯು ನಿಮಗೆ ಇಷ್ಟವಾಗದು. ದ್ವಿಚಕ್ರ ವಾಹನವನ್ನು ಓಡಿಸುವಾಗ ಎಚ್ಚರ ಇರಲಿ. ಸಂಗಾತಿಯ ಮನಃಸ್ಥಿತಿಗೆ ಪೂರಕವಾಗಿ ನಿಮ್ಮ ಆಲೋಚನೆಯೂ ಇರಲಿದ್ದು ನಿಮಗೆ ಖುಷಿಯಾಗುವುದು. ನಿಮ್ಮ ಪ್ರತಿಭೆ ಹೊರಹೊಮ್ಮುತ್ತದೆ. ಸರಳತೆ ಮತ್ತು ಸಂಯಮದಿಂದ ದಿನವನ್ನು ಇನ್ನಷ್ಟು ಉಜ್ಜ್ವಲ ಮಾಡಿಕೊಳ್ಳುವಿರಿ. ನಿಮ್ಮವರನ್ನು ಹೊಗಳಿ ಮೆಚ್ಚಿಸಿ ಅವರಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಕೋಪವನ್ನು ನಿಯಂತ್ರಣದಲ್ಲಿ ಇರಿಸಿದಷ್ಟು ನೀವು ಕಾರ್ಯದಲ್ಲಿ ಸಫಲರಾಗುವಿರಿ.
ಧನು ರಾಶಿ: ಸಣ್ಣ ಸಣ್ಣ ಸಂತೋಷಗಳು ದಿನವನ್ನು ಸುಂದರಗೊಳಿಸುತ್ತವೆ. ಆದರೆ ಭಾವನಾತ್ಮಕವಾಗಿ ತೆಗೆದುಕೊಳ್ಳುವ ನಿರ್ಧಾರಗಳು ಗೊಂದಲ ತರಬಹುದು. ತಾಳ್ಮೆಯಿಂದ ನಡೆದುಕೊಂಡರೆ ಫಲ ಉತ್ತಮ. ಪ್ರಭಾವೀ ವ್ಯಕ್ತಿಗಳಿಂದ ನಿಮಗೆ ವಂಚನೆಯಾಗಿದೆ ಎಂದನಿಸಬಹುದು. ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರ. ನಿಮ್ಮ ನಡತೆಯಿಂದ ಕುಲಕ್ಕೆ ಅವಮಾನವಾಗಬಹುದು. ನಿದ್ರೆಯನ್ನು ಹೆಚ್ಚು ಮಾಡುವಿರಿ. ಜವಾಬ್ದಾರಿಯನ್ನು ಪಡೆದ ಬೆನ್ನಲ್ಲೇ ಹಿತಶತ್ರುಗಳನ್ನೂ ಹೆಚ್ಚಿಸಿಕೊಳ್ಳುವಿರಿ. ಚಂಚಲವಾದ ಮನಸ್ಸು ನಿಮ್ಮ ಸಂಗಾತಿಗೆ ಇಷ್ಡವಾಗದು. ಆದಾಯ ಮೂಲದ ರಹಸ್ಯವನ್ನು ಹೇಳಿಕೊಳ್ಳುವುದು ಬೇಡ. ನಕಾರಾತ್ಮಕ ಚಿಂತನೆಯನ್ನು ಕಡಿಮೆ ಮಾಡುವುದು ಉತ್ತಮ. ಹಳೆಯ ಗೆಳತಿಯು ನಿಮ್ಮನ್ನು ಇಷ್ಟಪಡಬಹುದು. ಅತಿಯಾದರೆ ಅಮೃತವೂ ವಿಷ ಎನ್ನುವ ಮಾಹಿತಿ ಗೊತ್ತಿರಲಿ. ಎಲ್ಲದಕ್ಕೂ ಸಿಟ್ಟು ಮಾತ್ರವೇ ಪರಿಹಾರವಲ್ಲ. ಮನಸ್ಸಿಗೆ ಹಿತ ನೀಡುವ ದಿನ. ಕುಟುಂಬದವರು ನಿಮ್ಮ ಬೆಂಬಲ ನಿಲ್ಲುವರು.
ಮಕರ ರಾಶಿ: ಹೊಸ ಸಂಪರ್ಕಗಳಿಂದ ಲಾಭ. ಆದರೆ ಅನಗತ್ಯ ಚರ್ಚೆಗಳು ಮನಸ್ಸಿಗೆ ಒತ್ತಡ ತರುತ್ತವೆ. ಸಮಯಕ್ಕೆ ಮಿತಿಮೀರಿ ಮಾತನಾಡದೆ ಇದ್ದರೆ ಉತ್ತಮ. ನಿಮಗೆ ಉದ್ಯೋಗದಿಂದ ನಿವೃತ್ತಿಯು ಬೇಕೆನಿಸಬಹುದು. ಮುಖಂಡರಿಗೆ ಪ್ರಶಂಸೆ ಗೌರವಗಳು ಸಿಗಲಿವೆ. ತೀರ್ಥಕ್ಷೇತ್ರಗಳಿಗೆ ಹೋಗುವ ಮನಸ್ಸಾಗುವುದು. ನೀರಿನ ವಿಷಯದಲ್ಲಿ ಜಾಗಾರೂಕತೆ ಇರಲಿ. ನಟರಿಗೆ ಅವಕಾಶವು ಸಿಕ್ಕೂ ಸಿಗದಂತೆ ಆಗಬಹುದು. ಒಂದೇ ವಿಚಾರವನ್ನು ಹೆಚ್ಚು ಯೋಚಿಸಿದಷ್ಟೂ ಮನಸ್ಸು ದುರ್ಬಲವಾಗಬಹುದು. ಅಲ್ಪ ಮೊತ್ತವನ್ನು ಸಾಮಾಜಿಕ ಕಾರ್ಯಕ್ಕೆ ಕೊಡುವಿರಿ. ಒತ್ತಡವು ಬಂದರೆ ಸ್ವಲ್ಪ ಕಾಲ ಎಲ್ಲವನ್ನೂ ಮರೆತು ಓಡಾಡಿ ಬನ್ನಿ. ರಾಜಕೀಯವಾಗಿ ಮೇಲೆ ಬರಲು ನಿಮ್ಮ ತಂತ್ರಗಾರಿಕೆ ಇರುವುದು. ಸ್ನೇಹಿತರ ಜೊತೆಗಿನ ಓಡಾಟದಿಂದ ನಿಮ್ಮವರಿಗೆ ಅನುಮಾನವು ಬರುವುದು. ನೀವಾಡುವ ಮಾತು ಜವಾಬ್ದಾರಿಯ ಸ್ಥಾನದ್ದು ಎನ್ನುವುದನ್ನು ನೆನಪಿನಲ್ಲಿ ಇಡಿ. ಮಾತು ಮತ್ತು ಯೋಚನೆಯಿಂದ ಕೆಲಸ ಸುಲಭವಾಗುತ್ತದೆ. ಉದ್ಯೋಗದ ಪ್ರಯತ್ನವು ಫಲಿಸುವುದು. ಎಲ್ಲರ ಮೇಲೂ ಅನುಮಾನ ಪಡುವ ದುರಭ್ಯಾಸವು ಬೆಳೆಯಬಹುದು.
ಕುಂಭ ರಾಶಿ: ಹಠ ಮತ್ತು ಹಳೆಯ ವಿಷಯಗಳ ಮೇಲೆ ಒತ್ತಡ ಅಪಯಶಸ್ಸು ತರುವುದು. ವಿನಯದಿಂದ ವರ್ತಿಸಿದರೆ ಯಶಸ್ಸು ನಿಮ್ಮದಾಗುತ್ತದೆ. ಇಂದು ನಿಮಗೆ ಸಣ್ಣ ತಡೆಯೂ ದೊಡ್ಡದಾಗಿ ಕಾಣಿಸುವುದು. ಇಂದು ನಿಮ್ಮ ಯಾವುದಾದರೂ ಕಾರ್ಯಕ್ಕೆ ಸ್ನೇಹಿತರ ಬೆಂಬಲದಿಂದ ಸಾಧ್ಯವಾಗಿಸುವಿರಿ. ಹುಡುಗಾಟಿಕೆಯನ್ನು ಬಿಡುವುದು ನಿಮಗೆ ಕಷ್ಟವಾದೀತು. ಅತಿಯಾದ ಸಂತೋಷದ ಕ್ಷಣವು ನಿಮ್ಮ ಪಾಲಿಗೆ ಇರಲಿದೆ. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗಲಿದೆ. ವ್ಯವಹಾರದಲ್ಲಿ ಗೊಂದಲವಿಟ್ಟುಕೊಳ್ಳುವುದು ಬೇಡ. ನಿಮ್ಮ ಸೋಲನ್ನು ಒಪ್ಪಿಕೊಳ್ಳದೇ ವಾದಿಸುವಿರಿ. ಪರೀಕ್ಷೆಯ ಸಮಯವಿದ್ದರೂ ವಿದ್ಯಾರ್ಥಿಗಳು ಅನ್ಯ ಚಟುವಟಿಕೆಯಲ್ಲಿ ನಿಶ್ಚಿಂತೆಯಿಂದ ಭಾಗವಹಿಸುವರು. ಆರ್ಥಿಕವಾಗಿ ಸಮತೋಲನದ ದಿನ. ಕುಟುಂಬದಲ್ಲಿ ನೆಮ್ಮದಿ ವಾತಾವರಣ ಇರುತ್ತದೆ. ಸಣ್ಣ ಲಾಭದಿಂದ ಸಂತೋಷ ಸಿಗುತ್ತದೆ. ಯೋಗ್ಯತೆ ಇದ್ದರೂ ಯೋಗವೂ ಜೊತೆಗೆ ಬಂದಾಗ ಸಿಗಬೇಕಾದುದು ಸಿಗಲಿದೆ. ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವುದು ಬೇಡ.
ಮೀನ ರಾಶಿ: ಆತುರದ ನಿರ್ಧಾರ ಅಪಯಶಸ್ಸಿಗೆ ಕಾರಣವಾಗಬಹುದು. ಶಾಂತ ಮನಸ್ಸಿನಿಂದ ನಡೆದುಕೊಂಡರೆ ದಿನ ಸುಂದರವಾಗಿ ಮುಗಿಯುತ್ತದೆ. ಮೇಲ್ನೋಟಕ್ಕೆ ಯಾವುದನ್ನೂ ತೀರ್ಮಾನಿಸುವುದು ಕಷ್ಟವೇ. ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿ ರಿಂದಲೇ ನೋಡುವುದು ಕಷ್ಟ. ಆಪ್ತರಿಗೆ ಇಷ್ಟವಾದ ಉಡುಗೊರೆಯನ್ನು ಕೊಡಲಿದ್ದೀರಿ. ಅಕಾರಣವಾಗಿ ಬರುವ ಕೋಪವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವಿರಿ. ನಿಜವಾದ ಮಿತ್ರನ ಬಗ್ಗೆ ನಿಮಗೆ ಗೊತ್ತಾಗಲಿದೆ. ಸಂಗಾತಿಯನ್ನು ದೂರ ಕಳಿಸಿಕೊಂಡು ಸಂಕಟಪಡುವಿರಿ. ನಿಮ್ಮ ಆದಾಯವು ಹೆಚ್ಚು ಮಾಡಿಕೊಳ್ಳುವ ಆಕಾಂಕ್ಷೆಯು ಇರಲಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಧೈರ್ಯ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ. ಸ್ನೇಹಿತರ ಸಹಕಾರ ಸಿಗುತ್ತದೆ. ಕೆಲವರ ವ್ಯಕ್ತಿತ್ವವು ನಿಮಗೆ ಇಷ್ಟವಾದೀತು. ಅಪರಿಚಿತರು ಇರುವ ಕಡೆ ನೀವು ಮೌನವಾಗಿ ಇರುವಿರಿ. ನಿಮ್ಮ ಬಗ್ಗೆ ನಕಾರಾತ್ಮಕ ಭಾವನೆಯು ಇರಲಿದ್ದು ಅದನ್ನು ಲೆಕ್ಕಿಸದೇ ಕಾರ್ಯದಲ್ಲಿ ಮಗ್ನರಾಗುವಿರಿ. ಇನ್ನೊಬ್ಬರ ಬಗ್ಗೆ ನಿಮ್ಮಲ್ಲಿ ಕುತೂಹಲ ಇರಲಿದೆ.
ಬಿಗ್ಬಾಸ್ (Bigg Boss) ಮನೆಯಲ್ಲಿ ಅಶ್ವಿನಿ ಅವರ ಅಬ್ಬರ ಜೋರಾಗಿದೆ. ಅದರಲ್ಲೂ ಬಿಗ್ಬಾಸ್ ಪ್ರಾರಂಭವಾದ ಮೊದಲ ಕೆಲ ವಾರಗಳಲ್ಲಿ ಅಶ್ವಿನಿ ಅವರು ಇಡೀ ಮನೆಯನ್ನು ನಿಯಂತ್ರಣದಲ್ಲಿ ಇಟ್ಟಿದ್ದರು. ಆದರೆ ತಮ್ಮ ಧಮನಕಾರಿ ಮಾತುಗಳಿಂದಾಗಿ ಸುದೀಪ್ ಅವರಿಂದ ಟೀಕೆಗೆ ಸಹ ಗುರಿಯಾದರು. ರಕ್ಷಿತಾರ ಸ್ಟೇಟಸ್ ಬಗ್ಗೆ ಆಡಿದ ಮಾತು, ಗೆಜ್ಜೆ ವಿಷಯದಲ್ಲಿ ರಕ್ಷಿತಾರನ್ನು ಸಿಕ್ಕಿ ಹಾಕಿಸಿ ಮಜಾ ತೆಗೆದುಕೊಂಡಿದ್ದು, ಕೆಲವರನ್ನು ವೈಯಕ್ತಿಕವಾಗಿ ನಿಂದನೆ ಮಾಡಿದ್ದು, ಹೀಗೆ ಹಲವು ವಿಷಯಗಳಿಗೆ ಸುದೀಪ್ ಅವರಿಂದ ಟೀಕೆಗೆ ಒಳಪಟ್ಟ ಬಳಿಕ ಅಶ್ವಿನಿ ತುಸು ಮೆತ್ತಗಾಗಿದ್ದರು. ಆದರೆ ಕಳೆದ ವಾರ ಮತ್ತೊಮ್ಮೆ ಅವರು ತಮ್ಮ ಹಳೆಯ ವರಸೆ ತೋರಿಸಿದ್ದಾರೆ.
ಕಳೆದ ವಾರ ನೀರಿನ ಟಬ್ನ ಟಾಸ್ಕ್ ಒಂದು ನಡೆದಿತ್ತು. ಈ ವೇಳೆ ಅಶ್ವಿನಿ ಹಾಗೂ ಕಾವ್ಯಾ ಅವರುಗಳು ಪರಸ್ಪರ ಎದುರಾಳಿ ತಂಡಗಳಲ್ಲಿ ಇದ್ದರು. ಇಬ್ಬರೂ ಸಹ ಗೆಲ್ಲಲೇ ಬೇಕೆಂದು ಆಟ ಆಡುತ್ತಿದ್ದರು. ಈ ವೇಳೆ ಅಶ್ವಿನಿ ಅವರು ತಮ್ಮ ತೋಲ್ಬಳ ಬಳಸಿ ಕಾವ್ಯಾ ಅವರನ್ನು ಸೋಲಿಸಿದರು. ಆಗ ಸಿಟ್ಟಾದ ಕಾವ್ಯಾ ಚರ್ಚೆಯ ವೇಳೆ, ‘ಆಯ್ತು ಹೋಗಮ್ಮ’ ಎಂದೇನೋ ಹೇಳಿದರು. ಅದನ್ನು ತುಸು ಅಫೆನ್ಸಿವ್ ಆಗಿ ತೆಗೆದುಕೊಂಡ ಅಶ್ವಿನಿ, ‘ಅದನ್ನೆಲ್ಲ ನಿನ್ನ ಅಮ್ಮನ ಬಳಿ ಹೇಳಿಕೊ’ ಎಂದರು. ಇದು ಕಾವ್ಯಾರನ್ನು ಕೆರಳಿಸಿತು, ‘ನನ್ನ ಅಮ್ಮನ ಬಗ್ಗೆ ಮಾತನಾಡಬೇಡಿ, ಅವರ 10% ಸಹ ನೀವಿಲ್ಲ’ ಎಂದು ಕಿರುಚಾಡಲು ಆರಂಭಿಸಿದರು. ಆದರೆ ಅಶ್ವಿನಿ ‘ನಿನ್ನ ಅಮ್ಮನ ಬಳಿ ಹೇಳು ಹೋಗು’ ಎಂದು ಕೆಲ ಬಾರಿ ಹೇಳಿದರು.
ಶನಿವಾರದ ಎಪಿಸೋಡ್ನಲ್ಲಿ ಸುದೀಪ್ ಅವರು ಈ ವಿಷಯ ಚರ್ಚೆ ಮಾಡಿದರು. ಮೊದಲಿಗೆ ಟಾಸ್ಕ್ ವಿಚಾರವಾಗಿ ಚರ್ಚೆ ಮಾಡಿ, ರಾಶಿಕಾ ಅವರು ಕೆಟ್ಟದಾಗಿ ಉಸ್ತುವಾರಿ ಮಾಡಿದ ರೀತಿಯನ್ನು ಟೀಕೆ ಮಾಡಿದರು. ಆ ನಂತರ ರಘು, ಚೈತ್ರಾ ಇನ್ನಿತರರು ಟಾಸ್ಕ್ ಅನ್ನು ತಪ್ಪಾಗಿ ಅರ್ಥೈಸಿಕೊಂಡು, ತಪ್ಪಾಗಿ ಆಡಿದ್ದರ ಬಗ್ಗೆ ಟೀಕೆ ಮಾಡಿದರು. ‘ನೀವೆಲ್ಲ 10-12 ವರ್ಷ ಮಕ್ಕಳಿಗಿಂತಲೂ ಕಡೆಯಾಗಿ ವರ್ತಿಸಿದಿರಿ. ಪರಸ್ಪರ ಬೈಯ್ಯುವುದು, ಗಿಲ್ಲುವುದು, ಕೂದಲೆಳೆಯುವುದು, ಉಗಿಯುವುದು ಇದೆಲ್ಲ ಆಡುವ ರೀತಿಯೇ?’ ಎಂದು ಸುದೀಪ್ ಪ್ರಶ್ನೆ ಮಾಡಿದರು.
ಅಂತಿಮವಾಗಿ ಅಶ್ವಿನಿ ವಿಷಯಕ್ಕೆ ಬಂದ ಸುದೀಪ್, ‘ಮನೆಯಲ್ಲಿ ಇರುವವರನ್ನು ಬಿಗ್ಬಾಸ್ ಮನೆಗೆ ಏಕೆ ತರುತ್ತೀರಿ, ಕಾವ್ಯಾ ಅವರ ತಾಯಿಯ ವಿಷಯ ನಿಮಗೆ ಯಾಕೆ? ನಿಮ್ಮ ಜಗಳ ಕಾವ್ಯಾ ಜೊತೆಗೆ, ಅವರೊಟ್ಟಿಗೆ ಜಗಳ ಮಾಡಿ, ಅವರ ಮನೆಯವರ ವಿಷಯ ನಿಮಗೆ ಯಾಕೆ? ಅವರ ತಾಯಿಯೂ ಸಹ ಶೋ ನೋಡುತ್ತಿರುತ್ತಾರೆ. ಬಹುಷಃ ಕಾವ್ಯಾರ ತಾಯಿ, ನಿಮ್ಮ ಅಭಿಮಾನಿಯೇ ಆಗಿರಬಹುದು? ಆದರೆ ನೀವು ಆಡಿದ ಮಾತಿನಿಂದ ಅವರ ಮನಸ್ಸಿಗೆ ಎಷ್ಟು ಬೇಸರ ಆಗಿರಬಹುದು’ ಎಂದರು. ಅಶ್ವಿನಿ, ಸ್ಪಷ್ಟನೆ ನೀಡುವ ಪ್ರತಯ್ನ ಮಾಡಿದರಾದರೂ ಸುದೀಪ್ ಅದನ್ನು ಒಪ್ಪಲಿಲ್ಲ, ‘ನೀವು ಏನೇ ಹೇಳಿದರೂ ಸಹ ನಾನು ಒಪ್ಪುವುದಿಲ್ಲ’ ಎಂದರು. ಬಳಿಕ ಅಶ್ವಿನಿ, ಕ್ಷಮೆ ಕೇಳಿದರು. ನಾನು ತಪ್ಪು ಮಾಡಿದೆ, ಅವರ ತಾಯಿಯ ವಿಷಯ ಎತ್ತಬಾರದಿತ್ತು ಎಂದರು.
ಬೆಂಗಳೂರು, ಡಿಸೆಂಬರ್ 20: ರಾಜ್ಯ ರಾಜಕೀಯದಲ್ಲಿ ಪಟ್ಟದಾಟ ಜೋರಾಗಿದೆ. ಈ ಮಧ್ಯೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಬೆಂಗಳೂರಿನ ಖಾಸಗಿ ಅತಿಥಿ ಗೃಹದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಮಾಜಿ ಸಚಿವ ಕೆ.ಎನ್ ರಾಜಣ್ಣ ಭೇಟಿ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಅಪೆಕ್ಸ್ ಬ್ಯಾಂಕ್ ಚುನಾವಣೆ ವಿಚಾರವಾಗಿ ಚರ್ಚೆ ಮಾಡಿರುವ ಸಾಧ್ಯತೆ ಎನ್ನಲಾಗುತ್ತಿದೆ.