Category Archives: Blog

Your blog category

ಅಧಿಕಾರಿಗಳಿಗೆ ನಾನು ಬಂಟ್ವಾಳ ಶಾಸಕ ಎಂದೇ ಗೊತ್ತಿಲ್ಲ, ರಮಾನಾಥ್ ರೈರನ್ನೇ ಸಚಿವ ಎಂದೇ ಭಾವಿಸಿದ್ದಾರೆ: ರಾಜೇಶ್ ನಾಯಕ್ ಆಕ್ರೋಶ

ಅಧಿಕಾರಿಗಳಿಗೆ ನಾನು ಬಂಟ್ವಾಳ ಶಾಸಕ ಎಂದೇ ಗೊತ್ತಿಲ್ಲ, ರಮಾನಾಥ್ ರೈರನ್ನೇ ಸಚಿವ ಎಂದೇ ಭಾವಿಸಿದ್ದಾರೆ: ರಾಜೇಶ್ ನಾಯಕ್ ಆಕ್ರೋಶ

ಬೆಂಗಳೂರು, ಮಾ.24: ವಿಧಾನಸಭೆಯ ಅಧಿವೇಶನದಲ್ಲಿ ಇಂದು ಶಿಷ್ಟಾಚಾರ ಉಲ್ಲಂಘನೆಯ ವಿಷಯ ಭಾರಿ ಚರ್ಚೆಗೆ ಕಾರಣವಾಯಿತು. ಚುನಾಯಿತ ಶಾಸಕರನ್ನು ಕಡೆಗಣಿಸಿ, ಪರಾಜಿತ ಅಭ್ಯರ್ಥಿಗಳಿಗೆ ಅಧಿಕಾರಿಗಳು ಮಣೆ ಹಾಕುತ್ತಿದ್ದಾರೆ ಎಂಬ ಆರೋಪ ಸದನದಲ್ಲಿ ಪ್ರತಿಧ್ವನಿಸಿತು. ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದಾರೆ. “ನಾನು ಬಂಟ್ವಾಳದ ಶಾಸಕ ಎಂಬುದು ಅಧಿಕಾರಿಗಳಿಗೆ ಗೊತ್ತೇ ಇಲ್ಲದಂತಿದೆ. ಮಾಜಿ ಸಚಿವ ರಮಾನಾಥ್ ರೈ ಅವರನ್ನು ಅಧಿಕಾರಿಗಳು ಇನ್ನೂ ಸಚಿವ ಎಂದೇ ಭಾವಿಸಿದ್ದಾರೆ. ಕಾಮಗಾರಿಗಳ ಹಣ ಬಿಡುಗಡೆ ಮಾಡಲು ಮಾಜಿ ಶಾಸಕರ ಹೆಸರನ್ನು ಬಳಸಲಾಗುತ್ತಿದೆ. ಅಷ್ಟೇ ಅಲ್ಲದೆ, ಕಾಮಗಾರಿ ಏಜೆನ್ಸಿಗಳನ್ನು ಗುರುತಿಸುವಂತೆ ಮಾಜಿ ಶಾಸಕರಿಗೇ ಅಧಿಕಾರಿಗಳು ಪತ್ರ ಬರೆಯುತ್ತಿದ್ದಾರೆ,” ಎಂದು ರಾಜೇಶ್ ನಾಯಕ್ ಆಕ್ರೋಶ ವ್ಯಕ್ತಪಡಿಸಿದರು.

“ಸರ್ಕಾರಿ ಆದೇಶದ ಮಂಜೂರಾತಿ ನೀಡುವಾಗ ಶಿಷ್ಟಾಚಾರದ ಉಲ್ಲಂಘನೆ ಆಗುತ್ತಿಲ್ಲವೇ? ಪರಾಜಿತ ಅಭ್ಯರ್ಥಿಗಳ ಹೆಸರಿನಲ್ಲಿ ಅಧಿಕಾರಿಗಳು ಹಣ ಮಂಜೂರು ಮಾಡುತ್ತಿದ್ದಾರೆ ಎಂದರೆ ಇದರ ಅರ್ಥವೇನು? ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆಗಳು ಪರಾಜಿತ ಅಭ್ಯರ್ಥಿಗಳ ಶಿಫಾರಸಿನ ಮೇಲೆ ಪತ್ರ ಬರೆಯುತ್ತಿವೆ. ಹೀಗಾದರೆ ಚುನಾಯಿತ ಶಾಸಕರಿಗೆ ಬೆಲೆ ಎಲ್ಲಿದೆ? ಇದು ಶಾಸಕರ ಹಕ್ಕುಚ್ಯುತಿಯಲ್ಲವೇ?” ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: ಅಜಿತ್ ಪವಾರ್ ವಿಮಾನ ಅಪಘಾತ ಆಕಸ್ಮಿಕವಲ್ಲ, ವ್ಯವಸ್ಥಿತ ಕೊಲೆ? ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲು

“ನನ್ನ ಕ್ಷೇತ್ರದಲ್ಲೂ ಇದೇ ಪರಿಸ್ಥಿತಿ ಇದೆ. ಪರಾಜಿತ ಅಭ್ಯರ್ಥಿಯ ಪತ್ರದ ಆಧಾರದ ಮೇಲೆ ಹಣ ಬಿಡುಗಡೆಯಾಗುತ್ತಿದೆ. ಶಾಸಕರು ಕೇವಲ ಹೆಸರಿಗಷ್ಟೇ ಇರಬೇಕೇ?” ಎಂದು ಪ್ರಶ್ನಿಸಿದರು.ಈ ವಿಷಯದ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ನಡುವೆ ತೀವ್ರ ವಾಗ್ವಾದ ನಡೆಯಿತು. ಎಲ್ಲ ಕ್ಷೇತ್ರಗಳಲ್ಲೂ ಪರಾಜಿತ ಅಭ್ಯರ್ಥಿಗಳ ಹಸ್ತಕ್ಷೇಪ ಹೆಚ್ಚಾಗುತ್ತಿದೆ ಎಂಬುದು ವಿರೋಧ ಪಕ್ಷದ ಶಾಸಕರ ಒಮ್ಮತದ ಆರೋಪವಾಗಿತ್ತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ಚಿತ್ರಕ್ಕೆ ಸಂಕಷ್ಟ: ಆ ಒಂದು ದೃಶ್ಯದಿಂದ ಸಿಖ್ ಧರ್ಮದ ಭಾವನೆಗೆ ಧಕ್ಕೆ

‘ಧುರಂಧರ್ 2’ (Dhurandhar 2) ಸಿನಿಮಾ ಬಿಡುಗಡೆ ಆಗಿ ಎಲ್ಲ ಕಡೆಗಳಲ್ಲಿ ಧೂಳೆಬ್ಬಿಸುತ್ತಿದೆ. ಅದರ ಜೊತೆಗೆ ವಿವಾದಕ್ಕೂ ಸಿಲುಕಿದೆ. ಚಿತ್ರದ ದೃಶ್ಯವೊಂದರಲ್ಲಿ ಸಿಖ್ (Sikh) ಧರ್ಮದ ಪವಿತ್ರ ಗ್ರಂಥದ ಸಾಲುಗಳನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಚಿತ್ರದ ನಾಯಕ ನಟ ರಣವೀರ್ ಸಿಂಗ್, ಆರ್. ಮಾಧವನ್ (R Madhavan) ಮತ್ತು ನಿರ್ದೇಶಕ ಆದಿತ್ಯ ಧರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಹಾರಾಷ್ಟ್ರ ಸಿಖ್ ಸಂಘಟನೆಯ ಅಧ್ಯಕ್ಷ ಗುರ್ಜೋತ್ ಸಿಂಗ್ ಕೀರ್ ಅವರು ಮುಂಬೈನಲ್ಲಿ ಈ ದೂರು ದಾಖಲಿಸಿದ್ದಾರೆ.

ನಟ ಆರ್. ಮಾಧವನ್ ಅವರು ‘ಧುರಂಧರ್ 2’ ಚಿತ್ರದ ದೃಶ್ಯವೊಂದರಲ್ಲಿ ಸಿಗರೇಟ್ ಸೇದುತ್ತಾ, ಗುರು ಗೋಬಿಂದ್ ಸಿಂಗ್ ರಚಿಸಿದ ಪವಿತ್ರ ‘ದಶಮ್ ಗ್ರಂಥ’ದ ಶ್ಲೋಕಗಳನ್ನು ಪಠಿಸುತ್ತಿದ್ದಾರೆ. ಇದು ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ‘ಗುರ್ಬಾನಿ ಎಂಬುದು ಕೇವಲ ಸಂಭಾಷಣೆಯಲ್ಲ, ಅದು ದೈವಿಕ ಮತ್ತು ಪವಿತ್ರವಾದದ್ದು. ಸಿಗರೇಟ್ ಸೇದುತ್ತಾ ಅದನ್ನು ಹೇಳುವುದು ಅಕ್ಷಮ್ಯ ಅಪರಾಧ’ ಎಂದು ಗುರ್ಜೋತ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿವಾದ ತಾರಕಕ್ಕೇರುತ್ತಿದ್ದಂತೆಯೇ ನಟ ಆರ್. ಮಾಧವನ್ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ ಕ್ಷಮೆಯಾಚಿಸಿದ್ದಾರೆ. ‘ಯಾರ ಮನಸ್ಸಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ಚಿತ್ರದಲ್ಲಿ ಶ್ಲೋಕ ಹೇಳುವ ಮುನ್ನವೇ ನಾನು ಸಿಗರೇಟ್ ಆರಿಸಿದ್ದೆ. ಪರದೆಯ ಮೇಲೆ ಎಲ್ಲಿಯೂ ಧೂಮಪಾನ ಮಾಡುತ್ತಾ ಶ್ಲೋಕ ಹೇಳುವ ದೃಶ್ಯವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ನಿರ್ದೇಶಕ ಆದಿತ್ಯ ಧರ್ ಅವರು ಇಂತಹ ವಿಷಯಗಳಲ್ಲಿ ತುಂಬಾ ಜಾಗರೂಕರಾಗಿದ್ದಾರೆ. ಸಿಖ್ ಸಮುದಾಯದ ಮೇಲೆ ನಮಗೆ ಅಪಾರ ಗೌರವವಿದೆ. ಚಿತ್ರ ಬಿಡುಗಡೆಗೆ ಮುನ್ನ ನಾನು ಯಾವಾಗಲೂ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡುತ್ತೇನೆ. ಉದ್ದೇಶಪೂರ್ವಕವಾಗಿ ಈ ತಪ್ಪು ನಡೆದಿಲ್ಲ’ ಎಂದು ಆರ್. ಮಾಧವನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರತಿಯೊಬ್ಬ ಭಾರತೀಯ ನೋಡಬೇಕಾದ ಸಿನಿಮಾ: ‘ಧುರಂಧರ್ 2’ ಬಗ್ಗೆ ರಜನಿಕಾಂತ್ ಮೆಚ್ಚುಗೆ

ಸದ್ಯಕ್ಕೆ ವಿವಾದ ತಣ್ಣಗಾಗಿಲ್ಲ. ಚಿತ್ರತಂಡ ಬೇಷರತ್ ಕ್ಷಮೆ ಕೇಳದಿದ್ದರೆ ನಿರ್ದೇಶಕ ಆದಿತ್ಯ ಧರ್, ನಟರಾದ ರಣವೀರ್ ಸಿಂಗ್ ಮತ್ತು ಮಾಧವನ್ ಅವರು ಎಲ್ಲೇ ಕಾಣಿಸಿಕೊಂಡರೂ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸುವುದಾಗಿ ಸಿಖ್ ಸಂಘಟನೆಗಳು ಎಚ್ಚರಿಕೆ ನೀಡಿವೆ. ಸದ್ಯ ಈ ಎಲ್ಲ ಕಾರಣಗಳಿಂದ ‘ಧುರಂಧರ್ 2’ ಸಿನಿಮಾ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಜಿತ್ ಪವಾರ್ ವಿಮಾನ ಅಪಘಾತ ಆಕಸ್ಮಿಕವಲ್ಲ, ವ್ಯವಸ್ಥಿತ ಕೊಲೆ? ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲು

ಬೆಂಗಳೂರು ಮಾ.24: ಜನವರಿ 28ರಂದು ಪುಣೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ನಡೆದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಮಾಜಿ ಡಿಸಿಎಂ ಅಜಿತ್ ಪವಾರ್ ( Ajit Pawar) ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ರೋಹಿತ್ ಪವಾರ್ ಅವರು ದೂರು ನೀಡಿದ್ದು, ಇದು ಆಕಸ್ಮಿಕ ಸಾವಲ್ಲ, ಬದಲಿಗೆ ವ್ಯವಸ್ಥಿತ ಸಂಚು ಎಂದು ಗಂಭೀರವಾಗಿ ಆರೋಪಿಸಿದ್ದಾರೆ.ಅಮೆರಿಕದಲ್ಲಿ ಸೇವೆಯಿಂದ ನಿವೃತ್ತಿಗೊಂಡಿದ್ದ, ಹಾರಾಟಕ್ಕೆ ಯೋಗ್ಯವಲ್ಲದ ವಿಮಾನವನ್ನು ಭಾರತಕ್ಕೆ ತಂದು ಬಳಸಲಾಗಿತ್ತು. ವಿಮಾನದ ಸುರಕ್ಷಿತ ಮಿತಿ 5,000 ಗಂಟೆಗಳಿದ್ದರೂ, ಸುಮಾರು 8,000 ಗಂಟೆ ಹಾರಾಟ ನಡೆಸಿದ್ದ ದಾಖಲೆಗಳನ್ನು ತಿದ್ದಿ ವಾಣಿಜ್ಯ ಬಳಕೆಗೆ ಬಳಸಲಾಗಿತ್ತು.

ವಿಮಾನದ ಪೈಲಟ್ ಸುಮಿತ್ ಕಪೂರ್ ಈ ಹಿಂದೆ ಎರಡು ಬಾರಿ ಮದ್ಯಪಾನ ಮಾಡಿ ಸಿಕ್ಕಿಬಿದ್ದು ಅಮಾನತುಗೊಂಡಿದ್ದರು. ಇಂತಹ ಇತಿಹಾಸವಿದ್ದ ವ್ಯಕ್ತಿಯನ್ನು ಉಪಮುಖ್ಯಮಂತ್ರಿಗಳ ವಿಮಾನಕ್ಕೆ ಪೈಲಟ್ ಆಗಿ ನೇಮಿಸಿದ್ದು ಯಾಕೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.ಮೊದಲು ನಿಗದಿಯಾಗಿದ್ದ ಪೈಲಟ್‌ಗಳನ್ನು ಕೊನೆಯ ಕ್ಷಣದಲ್ಲಿ ಬದಲಿಸಿ, ಕಪೂರ್ ಮತ್ತು ತಂಡವನ್ನು ನೇಮಿಸಲಾಗಿತ್ತು. ಇದು ಉದ್ದೇಶಪೂರ್ವಕ ಸಂಚಿನ ಭಾಗವೇ ಎಂಬ ಅನುಮಾನ ಮೂಡಿಸಿದೆ.

ಅಜಿತ್ ಪವಾರ್ ಅವರು ರಸ್ತೆ ಮೂಲಕ ಹೋಗಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಅದು ವಿಮಾನ ಪ್ರಯಾಣವಾಗಿ ಬದಲಾಗಿದ್ದು ಹೇಗೆ? ಇದರ ಹಿಂದೆ ಯಾರಿದ್ದಾರೆ ಎಂಬ ತನಿಖೆ ನಡೆಯಬೇಕಿದೆ. ವಿಮಾನ ಪತನವಾಗುವ ಮುನ್ನ ಕೋ-ಪೈಲಟ್ “ಓ ಶಿಟ್” ಎಂದು ಕಿರುಚಿದ್ದಾರೆ. ಆದರೆ ಮುಖ್ಯ ಪೈಲಟ್ ಕಪೂರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪೈಲಟ್ ಅಮಲಿನಲ್ಲಿದ್ದರೇ ಅಥವಾ ಉದ್ದೇಶಪೂರ್ವಕವಾಗಿ ಸುಮ್ಮನಿದ್ದರೇ ಎಂಬ ಸಂಶಯ ವ್ಯಕ್ತವಾಗಿದೆ.

ಇದನ್ನೂ ಓದಿ: ಅಜಿತ್ ಪವಾರ್ ಇದ್ದ ವಿಮಾನ ಪತನಗೊಂಡ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬಾರಾಮತಿಯಲ್ಲಿ ದಟ್ಟ ಮಂಜು ಕವಿದಿದ್ದು, ಕನಿಷ್ಠ 5 ಕಿ.ಮೀ ವಿಸಿಬಿಲಿಟಿ ಇಲ್ಲದಿದ್ದರೂ ಲ್ಯಾಂಡಿಂಗ್‌ಗೆ ಅವಕಾಶ ನೀಡಿದ್ದು ಯಾರು? ಟೇಬಲ್‌ಟಾಪ್ ರನ್‌ವೇ ಆಗಿದ್ದರೂ ಅಪಾಯಕಾರಿ ನಿರ್ಧಾರ ಕೈಗೊಳ್ಳಲು ಕಾರಣವೇನು? ಡಿಜಿಸಿಎ (DGCA) ತನಿಖೆಯಲ್ಲಿ ವಿಮಾನವು ಹಾರಾಟಕ್ಕೆ ಯೋಗ್ಯವಾಗಿರಲಿಲ್ಲ ಎಂದು ತಿಳಿದಿದ್ದರೂ ವಿಎಸ್ಆರ್ ವೆಂಚರ್ಸ್ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಾಚರಣೆ ನಡೆಸಿದೆ ಎಂದು ಆರೋಪಗಳು ಕೇಳಿ ಬಂದಿದೆ. ಇದೀಗ ಈ ಬಗ್ಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ರೋಹಿತ್ ಪವಾರ್ ಅವರು ದೂರು ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಭೀಮ್ ಯುಪಿಐ ಆ್ಯಪ್​ನಲ್ಲಿ ಪೇಮೆಂಟ್​ಗೆ ಪಿನ್ ಕೋಡ್ ಬದಲು ಫಿಂಗರ್ ಪ್ರಿಂಟ್ ಮತ್ತು ಫೇಸ್ ಅನ್​ಲಾಕ್ ಸಿಸ್ಟಂ

ನವದೆಹಲಿ, ಮಾರ್ಚ್ 24: ಭೀಮ್ (BHIM) ಪೇಮೆಂಟ್ ಆ್ಯಪ್​ನಲ್ಲಿ ಯುಪಿಐ ಪಾವತಿಗೆ ಪಿನ್ ಕೋಡ್ ಜೊತೆಗೆ ಬಯೋಮೆಟ್ರಿಕ್ ದೃಢೀಕರಣದ ಅವಕಾಶವನ್ನೂ ಕೊಡಲಾಗುತ್ತಿದೆ. ಯುಪಿಐ ಸಿಸ್ಟಂ ರೂಪಿಸಿದ ಎನ್​ಪಿಸಿಐನ ಅಂಗಸಂಸ್ಥೆಯಾದ ಭೀಮ್ ಸರ್ವಿಸಸ್ ಲಿಮಿಟೆಡ್ (BHIM Payments App) ಈ ಹೊಸ ಫೀಚರ್ ಅನಾವರಣಗೊಳಿಸಿರುವುದನ್ನು ಇಂದು ಘೋಷಿಸಿದೆ. ಭೀಮ್ ಆ್ಯಪ್ ಬಳಕೆದಾರರು 5,000 ರೂವರೆಗಿನ ಯುಪಿಐ ಟ್ರಾನ್ಸಾಕ್ಷನ್​ಗಳಿಗೆ ಬಯೋಮೆಟ್ರಿಕ್ ಅಥೆಂಟಿಕೇಶನ್ ನೀಡಬಹುದು

ಫಿಂಗರ್ ಪ್ರಿಂಟ್ ಮತ್ತು ಫೇಶಿಯಲ್ ರೆಕಗ್ನಿಶನ್ ಸೌಲಭ್ಯ ಇರುವಂತಹ ಸ್ಮಾರ್ಟ್​ಫೋನ್​ಗಳಲ್ಲಿ ಭೀಮ್ ಆ್ಯಪ್ ಬಳಕೆದಾರರು ಈ ಫೀಚರ್ ಅನ್ನು ಬಳಸಬಹುದು.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಇಎಂಐ, ಝೀರೋ ಕಾಸ್ಟ್ ಇಎಂಐ ಹಿಂದಿರುವ ಸೀಕ್ರೆಟ್ ವಿಚಾರಗಳು ಏನು ಗೊತ್ತಾ?

ಬಯೋಮೆಟ್ರಿಕ್ ಫೀಚರ್ ಎನೇಬಲ್ ಆಗಿದ್ದರೆ, 5,000 ರೂವರೆಗಿನ ಪಾವತಿಗೆ ಪಿನ್ ಹಾಕುವ ಅವಶ್ಯಕತೆ ಇರುವುದಿಲ್ಲ. ಅದಕ್ಕೂ ಮೇಲ್ಪಟ್ಟ ಮೊತ್ತದ ಪಾವತಿಗೆ ಮಾತ್ರ ಪಿನ್ ಬೇಕಾಗುತ್ತದೆ. ಉಳಿದಂತೆ, ಫಿಂಗರ್ ಪ್ರಿಂಟ್ ಅಥವಾ ಮುಖ ಚಹರೆ ಕಾಣಿಸಿದರೆ ಸಾಕಾಗುತ್ತದೆ.

ಯುಪಿಐ ಪಾವತಿ ಸಿಸ್ಟಂಗೆ ಬಯೋಮೆಟ್ರಿಕ್ ಅಥೆಂಟಿಕೇಶನ್ ಹೆಚ್ಚುವರಿ ಭದ್ರತೆ ಒದಗಿಸುತ್ತದೆ. ಫಿಂಗರ್​ಪ್ರಿಂಟ್ ಮತ್ತು ಫೇಶಿಯಲ್ ರೆಕಗ್ನಿಶನ್​ನ ದತ್ತಾಂಶವು ಸ್ಮಾರ್ಟ್​ಫೋನ್​ನಲ್ಲಿ ಮಾತ್ರವೇ ಸಂಗ್ರಹವಾಗಿರುತ್ತದೆ. ಹೀಗಾಗಿ, ಬೇರೆಯವರು ನಿಮ್ಮ ಐಡೆಂಟಿಟಿಯನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ. ಪಾವತಿ ಕಾರ್ಯವೂ ಸುಲಭವಾಗಿರುತ್ತದೆ.

ಇದನ್ನೂ ಓದಿ: ಹೊಸ ಪ್ಯಾನ್ ನಿಯಮದಿಂದ ಹಿಡಿದು ಇನ್ಷೂರೆನ್ಸ್ ಪಾವತಿವರೆಗೆ, ಮಾರ್ಚ್ 31ಕ್ಕೆ ಡೆಡ್​ಲೈನ್ ಇರುವ ಕೆಲ ಪ್ರಮುಖ ಹಣಕಾಸು ಕಾರ್ಯಗಳು

ಭೀಮ್ ಪೇಮೆಂಟ್ಸ್ ಆ್ಯಪ್​ನಲ್ಲಿ ಬಯೋಮೆಟ್ರಿಕ್ ಅಥೆಂಟಿಕೇಶನ್ ಸಕ್ರಿಯಗೊಳಿಸುವ ಕ್ರಮ

  • ಭೀಮ್ ಪೇಮೆಂಟ್ಸ್ ಆ್ಯಪ್ ತೆರೆಯಿರಿ
  • ಪ್ರೊಫೈಲ್​ಗೆ ಹೋಗಿ
  • ನಿಮ್ಮ ಬ್ಯಾಂಕ್ ಅಕೌಂಟ್ ಆಯ್ದುಕೊಳ್ಳಿ
  • ಬಯೋಮೆಟ್ರಿಕ್ ಟ್ರಾನ್ಸಾಕ್ಷನ್ಸ್ ಸಕ್ರಿಯಗೊಳಿಸಿ
  • ಫಿಂಗರ್ ಪ್ರಿಂಟ್ ಮೂಲಕ 5,000 ರೂವರೆಗಿನ ಹಣವನ್ನು ಪಾವತಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

WITT Summit 2026: ಪಂಜಾಬ್​ನಲ್ಲಿ ದ್ವೇಷದ ಬೀಜ ಮೊಳಕೆಯೊಡುವುದಿಲ್ಲ; ವಿಟ್ ಶೃಂಗಸಭೆಯಲ್ಲಿ ಸಿಎಂ ಭಗವಂತ್ ಮಾನ್

ನವದೆಹಲಿ, ಮಾರ್ಚ್ 24: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಟಿವಿ9ನ WITT ಶೃಂಗಸಭೆಯಲ್ಲಿ (WITT Summit 2026) ರಾಜ್ಯ ಮತ್ತು ರಾಷ್ಟ್ರೀಯ ವಿಷಯಗಳ ಕುರಿತು ಮಾತನಾಡಿದರು. ಪಂಜಾಬ್ ನಿರಂತರ ನಗು, ಮಿಲಿಟರಿ ಸೇವೆ ಮತ್ತು ಹಚ್ಚ ಹಸಿರಿನ ಹೊಲಗಳಿಗೆ ಹೆಸರುವಾಸಿಯಾದ ರಾಜ್ಯ. ಜಗತ್ತಿನಲ್ಲಿ ಎಲ್ಲಿಯಾದರೂ ವಿಪತ್ತು ಸಂಭವಿಸಿದರೂ ರೆಡ್ ಕ್ರಾಸ್ ಸಹಾಯ ಮಾಡಲು ಬರಬಹುದು ಅಥವಾ ಬರದೆಯೂ ಇರಬಹುದು. ಪ್ರತಿಯೊಂದು ಬೀಜವು ಪಂಜಾಬ್‌ನಲ್ಲಿ ಬೆಳೆಯುತ್ತದೆ, ಆದರೆ ದ್ವೇಷದ ಬೀಜ ಮಾತ್ರ ಮೊಳಕೆಯೊಡೆಯುವುದಿಲ್ಲ. ಭಾರತವು ಉಂಗುರವಾಗಿದ್ದರೆ, ಪಂಜಾಬ್ ಒಂದು ವಜ್ರ ಎಂದು ಹೇಳಿದ್ದಾರೆ.

“ರಾಷ್ಟ್ರೀಯ ರಾಜಕೀಯದಲ್ಲಿ 4 ವರ್ಷಗಳಲ್ಲಿ ನಾವು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿರುವುದು ಇದೇ ಮೊದಲು. ನಾವು 19 ಟೋಲ್ ಪ್ಲಾಜಾಗಳನ್ನು ಮುಚ್ಚಿದ್ದೇವೆ. ಪಂಜಾಬ್‌ನಲ್ಲಿ ರಸ್ತೆಗಳಲ್ಲಿ ಉಳಿಯುವ ಹೊಸ ಪೊಲೀಸ್ ಪಡೆ (SSF) ಅನ್ನು ನಾವು ರಚಿಸಿದ್ದೇವೆ. ಈ ತಂಡವು ಅಪಘಾತದ ಸ್ಥಳಕ್ಕೆ ಆಗಮಿಸಿ ಸಹಾಯವನ್ನು ಒದಗಿಸುತ್ತದೆ. ಹಿಂದೆ, ಪ್ರತಿದಿನ 15 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದರು. ಇಂದು SSF ಸಹಾಯದಿಂದ ಸಾವಿನ ಪ್ರಮಾಣವು ಶೇ. 48ರಷ್ಟು ಕಡಿಮೆಯಾಗಿದೆ. ನಾವು ಜನರ ಜೀವ ಮತ್ತು ಆಸ್ತಿಯನ್ನು ರಕ್ಷಿಸುತ್ತೇವೆ” ಎಂದು ಪಂಜಾಬ್ ಮುಖ್ಯಮಂತ್ರಿ ಹೇಳಿದ್ದಾರೆ.

ಇದನ್ನೂ ಓದಿ: PM Modi in WITT Summit 2026: ಯುದ್ಧದ ಸಮಯದಲ್ಲೂ ಭಾರತದ ಆರ್ಥಿಕ ಸ್ಥಿರತೆ ಕಂಡು ಜಗತ್ತು ಬೆರಗಾಗಿದೆ; ಟಿವಿ9 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಬಣ್ಣನೆ

ಬಿಜೆಪಿ ವಿರುದ್ಧವೂ ಸಿಎಂ ಭಗವಂತ್ ಮಾನ್ ತೀವ್ರ ವಾಗ್ದಾಳಿ ನಡೆಸಿದರು. ಭಗವಂತ್ ಮಾನ್ ಪಂಜಾಬ್ ಮುಖ್ಯಮಂತ್ರಿಯಾದರೆ ಕೇಜ್ರಿವಾಲ್ ಸೂಪರ್ ಸಿಎಂ ಎಂಬ ಬಿಜೆಪಿ ಆರೋಪಕ್ಕೆ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. “ಮೊದಲನೆಯದಾಗಿ, ಆಮ್ ಆದ್ಮಿ ಪಕ್ಷವು ರಾಷ್ಟ್ರೀಯ ಪಕ್ಷ ಎಂದು ಬಿಜೆಪಿ ಒಪ್ಪಿಕೊಳ್ಳಬೇಕು. ನಮ್ಮ ವಿರುದ್ಧ ಈ ಆರೋಪಗಳನ್ನು ಮಾಡುತ್ತಿರುವ ಬಿಜೆಪಿ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿಗಳು ಯಾರು ಎಂಬುದನ್ನು ಬಹಿರಂಗಪಡಿಸಬೇಕು” ಎಂದು ಅವರು ಹೇಳಿದರು.

ಇದನ್ನೂ ಓದಿ: WITT Summit 2026: ಪ್ರಧಾನಿ ನರೇಂದ್ರ ಮೋದಿಗೆ ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ ರಾವ್ ಸನ್ಮಾನ

ಕೇಜ್ರಿವಾಲ್ ನಮ್ಮ ಪಕ್ಷದ ಮುಖ್ಯಸ್ಥರು. ಕೇಜ್ರಿವಾಲ್ ದೆಹಲಿಯಿಂದ ಪಂಜಾಬ್‌ಗೆ ಬಂದರೆ ಅಮಿತ್ ಶಾ ಎಲ್ಲಿಂದ ಬರುತ್ತಾರೆ? ಇಡೀ ದೇಶ ನಮ್ಮದು. ದೆಹಲಿ ರಾಜಧಾನಿ. ದೇಶವನ್ನು ನಡೆಸುವವರು ಅಹಮದಾಬಾದ್‌ನಿಂದ ಏಕೆ ಬರಬೇಕು? ಬಿಜೆಪಿ ಅಧಿಕಾರದಲ್ಲಿಲ್ಲದ ರಾಜ್ಯಗಳಲ್ಲಿ ಅವರು ರಾಜ್ಯಪಾಲರಿಗೆ ಕಿರುಕುಳ ನೀಡುತ್ತಾರೆ. ಅವರು ನಮ್ಮ ಹಿಂದೆ ಬಿಳಿ ಆನೆಯನ್ನು (ಗವರ್ನರ್) ಬಿಟ್ಟಿದ್ದಾರೆ ಎಂದು ಭಗವಂತ್ ಮಾನ್ ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್ಸಿಗನಾಗಿ ಹುಟ್ಟಿದ್ದೇನೆ, ಕಾಂಗ್ರೆಸ್ಸಿಗನಾಗೇ ಸಾಯ್ತೇನೆ: ಟಿವಿ9 ಶೃಂಗಸಭೆಯಲ್ಲಿ ಡಿಕೆ ಶಿವಕುಮಾರ್​ ಮಾತು

ನವದೆಹಲಿ, ಮಾರ್ಚ್​ 24: ನಾನು ಕಾಂಗ್ರೆಸ್ಸಿಗನಾಗಿ ಹುಟ್ಟಿದ್ದೇನೆ, ಕಾಂಗ್ರೆಸ್ಸಿಗನಾಗೇ ಸಾಯುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಟಿವಿ9 ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಶೃಂಗಸಭೆಯಲ್ಲಿ ಮಾತನಾಡಿದ ಅವರು, ನಾನು ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯಕ್ಕೆ ಬಂದವನು. ಎದುರಾಳಿಗಳ ಅಜೆಂಡಾ ಏನೆಂದು ನನಗೆ ಚೆನ್ನಾಗಿ ಗೊತ್ತಿದೆ. ನನ್ನ ಪರ ಯಾರೂ ಮಾತನಾಡುವ ಅಗತ್ಯವಿಲ್ಲ. ನನ್ನ ಪರವಾಗಿ 140 ಶಾಸಕರು ಇದ್ದಾರೆ. ಬೆಂಗಳೂರು, ಕರ್ನಾಟಕ ರಾಜ್ಯದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕ್ರೆಡಿಟ್ ಕಾರ್ಡ್ ಇಎಂಐ, ಝೀರೋ ಕಾಸ್ಟ್ ಇಎಂಐ ಹಿಂದಿರುವ ಸೀಕ್ರೆಟ್ ವಿಚಾರಗಳು ಏನು ಗೊತ್ತಾ?

ಕ್ರೆಡಿಟ್ ಕಾರ್ಡ್​ನಲ್ಲಿ ಶಾಪಿಂಗ್ ಮಾಡಿ ಅಭ್ಯಾಸ ಇದ್ದವರಲ್ಲಿ ಹೆಚ್ಚಿನವರು ಇಎಂಐ ಆಯ್ಕೆಗಳನ್ನು ಬಳಸಿರುತ್ತಾರೆ, ಅಥವಾ ಅದರ ಬಗ್ಗೆ ಗೊತ್ತಿರುತ್ತದೆ. ಅಧಿಕ ಮೌಲ್ಯದ ವಸ್ತುವನ್ನು ಖರೀದಿಸಿದಾಗ ಮುಂದಿನ ಬಿಲ್​ನಲ್ಲಿ ಅಷ್ಟೂ ಹಣ ಕಟ್ಟಲಾಗದಿದ್ದರೆ, ಜನರು ಸುಲಭವೆನಿಸುವ ಇಎಂಐ ಅವಕಾಶವನ್ನು ಬಳಸಿಕೊಳ್ಳುತ್ತಾರೆ. ಅದರಲ್ಲೂ ನೋ ಕಾಸ್ಟ್ ಅಥವಾ ಝೀರೋ ಕಾಸ್ಟ್ ಇಎಂಐ ತಲೆಬರಹ ನೋಡಿ ಮಾರುಹೋಗುವುದುಂಟು. ಈ ಕ್ರೆಡಿಟ್ ಕಾರ್ಡ್ ಇಎಂಐ ಮೇಲ್ನೋಟಕ್ಕೆ ಕಾಣುವಷ್ಟು ಸರಳವಿಲ್ಲ.

ನೀವು 80,000 ರೂ ಮೊತ್ತದ ವಾಷಿಂಗ್ ಮೆಷೀನ್ ಶಾಪಿಂಗ್ ಮಾಡುತ್ತೀರಿ. ಅದಕ್ಕೆ 12 ಕಂತುಗಳಲ್ಲಿ ಕಟ್ಟುವ ಆಯ್ಕೆಯನ್ನು ಅಂಗಡಿಯವರು ನಿಮಗೆ ನೀಡುತ್ತಾರೆ. 7,900 ರೂಗಳ 12 ಇಎಂಐಗಳಲ್ಲಿ ಕಟ್ಟುವ ಆಫರ್ ಇರುತ್ತದೆ. ಒಮ್ಮೆಗೆ 80,000 ರೂ ಕಟ್ಟುವುದಕ್ಕಿಂತ ತಿಂಗಳಿಗೆ 7,900 ರೂ ಕಟ್ಟುವುದು ಸುಲಭ ಎನಿಸುತ್ತದೆ. ಆದರೆ, ಯಾರೂ ಕೂಡ ಈ ಇಎಂಐಗಳ ಹಿಂದಿನ ಮರ್ಮ ತಿಳಿದಿರುವುದಿಲ್ಲ.

ಇಎಂಐ = ಸಾಲ

ನಿಮ್ಮ ಖರೀದಿಯನ್ನು ಇಎಂಐಗಳಾಗಿ ಪರಿವರ್ತಿಸಿದಾಗ ಅದು ಸಾಲ ಎನಿಸುತ್ತದೆ. ಹಣಕಾಸು ಸಂಸ್ಥೆ ಅಷ್ಟು ಮೊತ್ತದ ಸಾಲವನ್ನು ನಿಮಗೆ ಕೊಟ್ಟಿದೆ ಎಂದರ್ಥ. ಪರ್ಸನಲ್ ಲೋನ್​ಗೆ ಇರುವಷ್ಟು ಬಡ್ಡಿದರ ಅನ್ವಯ ಆಗುತ್ತದೆ. ಶೇ. 12ರಿಂದ 24ರಷ್ಟು ವಾರ್ಷಿಕ ಬಡ್ಡಿದರ ಇರಬಹುದು. ಇದರ ಜೊತೆಗೆ ಪ್ರೋಸಸಿಂಗ್ ಫೀ, ಜಿಎಸ್​ಟಿ ಇತ್ಯಾದಿ ಇತರೆ ಶುಲ್ಕಗಳು ಸೇರ್ಪಡೆಯಾಗುತ್ತದೆ. ನಿಮ್ಮ 80,000 ರೂ ವಾಷಿಂಗ್ ಮೆಷೀನ್​ಗೆ ನೀವು ಒಂದು ವರ್ಷದ ಅಂತರದಲ್ಲಿ ಒಂದು ಲಕ್ಷ ರೂ ಆದರೂ ಪಾವತಿಸಿರಬಹುದು. ನಿಮ್ಮ ಗಮನಕ್ಕೂ ಅದು ಬಂದಿರುವುದಿಲ್ಲ.

ಇದನ್ನೂ ಓದಿ: ಹೊಸ ಪ್ಯಾನ್ ನಿಯಮದಿಂದ ಹಿಡಿದು ಇನ್ಷೂರೆನ್ಸ್ ಪಾವತಿವರೆಗೆ, ಮಾರ್ಚ್ 31ಕ್ಕೆ ಡೆಡ್​ಲೈನ್ ಇರುವ ಕೆಲ ಪ್ರಮುಖ ಹಣಕಾಸು ಕಾರ್ಯಗಳು

ಕ್ರೆಡಿಟ್ ಕಾರ್ಡ್ ಇಎಂಐಗೆ ಇರುವ ವಿವಿಧ ಶುಲ್ಕಗಳಿವು

  • ಇಎಂಐ ಬಡ್ಡಿದರ: ಶೇ. 12-24
  • ಪ್ರೋಸಸಿಂಗ್ ಫೀ: ಖರೀದಿ ಮೊತ್ತದ ಶೇ 1-3ರಷ್ಟು
  • ಜಿಎಸ್​ಟಿ: ಬಡ್ಡಿಹಣ ಹಾಗೂ ಪ್ರೋಸಸಿಂಗ್ ಫೀ ಮೇಲೆ ಶೇ. 18ರಷ್ಟು ತೆರಿಗೆ
  • ಮುಂಗಡ ಪಾವತಿ ಶುಲ್ಕ: ಬಾಕಿ ಇರುವ ಮೊತ್ತದ ಶೇ. 1-5ರಷ್ಟು
  • ಕ್ಯಾಷ್​ಬ್ಯಾಕ್ ನಷ್ಟ: ಇಎಂಐಗೆ ಪರಿವರ್ತಿಸಿದಾಗ ಕ್ಯಾಷ್​ಬ್ಯಾಕ್ ಅಥವಾ ರಿವರ್ಡ್ ಪಾಯಿಂಟ್ಸ್ ಅನ್ವಯ ಆಗುವುದಿಲ್ಲ.
  • ಮರ್ಚಂಟ್ ಡಿಸ್ಕಂಟ್ ನಷ್ಟ: ವರ್ತಕರಿಂದ ಸಿಗಬಹುದಾದ ಡಿಸ್ಕೌಂಟ್ ಅಥವಾ ರಿಯಾಯಿತಿಯು ಅನ್ವಯ ಆಗುವುದಿಲ್ಲ.

ನೀವು ಒಮ್ಮೆ ಇಎಂಐ ಆಯ್ಕೆ ಆರಿಸಿಕೊಂಡರೆ, ಅಷ್ಟು ಕಂತುಗಳನ್ನು ಕಟ್ಟಬೇಕು. ಮುಂಗಡವಾಗಿ ಕೆಲ ಕಂತುಗಳನ್ನು ಕಟ್ಟುತ್ತೇನೆಂದರೆ, ಅಥವಾ ಮುಂಗಡವಾಗಿ ಪೂರ್ಣ ಹಣ ಕಟ್ಟುತ್ತೇನೆಂದರೆ ಶೇ. 5ರವರೆಗಿನ ಬಾಕಿ ಹಣವನ್ನು ದಂಡವಾಗಿ ತೆರಬೇಕು. ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಮಾಡಿದಾಗ ರಿವಾರ್ಡ್ ಪಾಯಿಂಟ್, ಕ್ಯಾಷ್​ಬ್ಯಾಕ್ ಇತ್ಯಾದಿ ಸಿಗುತ್ತವೆ. ಆದರೆ, ಇಎಂಐಗೆ ಪರಿವರ್ತಿಸಿದಾಗ ಈ ಸೌಲಭ್ಯ ಅನ್ವಯ ಆಗುವುದಿಲ್ಲ. ಇನ್ನು, ವರ್ತಕರು ತಮ್ಮ ಅಂಗಡಿಗಳಲ್ಲಿ ಡಿಸ್ಕೌಂಟ್ ಸೇಲ್​ಗೆ ಇಟ್ಟಾಗ, ನೀವು ಇಎಂಐ ಆಯ್ಕೆ ಮಾಡಿಕೊಂಡಾಗ ಆ ಡಿಸ್ಕೌಂಟ್ ಸಿಗದೇ ಹೋಗಬಹುದು.

ಇದನ್ನೂ ಓದಿ: ನಿಷ್ಕ್ರಿಯ ಇಪಿಎಫ್ ಅಕೌಂಟ್​ಗಳಿಗೆ ಬಡ್ಡಿ ಸಿಗುತ್ತಾ? ಯಾವುದಕ್ಕೆ ಟ್ಯಾಕ್ಸ್ ಇರುತ್ತೆ?

ಝೀರೋ ಕಾಸ್ಟ್ ಇಎಂಐ ಎನ್ನುವ ಮಾಯಾಜಿಂಕೆ

ಅಂಗಡಿಗಳಲ್ಲಿ ಕೆಲ ವಸ್ತುಗಳ ಖರೀದಿಗೆ ಝೀರೋ ಕಾಸ್ಟ್ ಇಎಂಐ ಆಫರ್ ಇರುವುದನ್ನು ನೋಡಿ, ಬಡ್ಡಿರಹಿತವಾಗಿ ಕಂತುಗಳನ್ನು ಕಟ್ಟಬಹುದು ಎಂದೇ ಬಹಳ ಜನರು ಭಾವಿಸುತ್ತಾರೆ. ಜನರಿಗೆ ತಿಳಿಯದ ಸಂಗತಿ ಎಂದರೆ, ಅಂಗಡಿಗಳು ಕೆಲ ಉತ್ಪನ್ನಗಳಿಗೆ ಡಿಸ್ಕೌಂಟ್ ಕೊಟ್ಟಿರುತ್ತವೆ. ಅದರ ಜೊತೆಗೆ ಝೀರೋ ಕಾಸ್ಟ್ ಇಎಂಐ ಆಯ್ಕೆಯನ್ನೂ ಕೊಟ್ಟಿರುತ್ತವೆ. ಜನರು ಡಿಸ್ಕೌಂಟ್ ಮತ್ತು ಬಡ್ಡಿರಹಿತ ಇಎಂಐ ಎರಡೂ ಸಿಗುತ್ತೆ ಎಂದು ತಪ್ಪಾಗಿ ಅರ್ಥೈಸಿಕೊಳ್ಳುವುದುಂಟು. ಇಲ್ಲಿ ಇಎಂಐ ಪಡೆದಾಗ ಡಿಸ್ಕೌಂಟ್ ಅನ್ವಯ ಆಗುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: ಹಣದ ಮಳೆ ಸುರಿಸ್ತೀವಿ ಅಂದೋರು ಮಾಡಿದ್ರು ಚೀಟಿಂಗ್; ಲಕ್ಷ ಲಕ್ಷ ಪಂಗನಾಮ

ಬೆಂಗಳೂರು, ಮಾರ್ಚ್​ 24: ಹಣ ಅಂದರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೋ ಮಾತು ನೂರಕ್ಕೆ ನೂರರಷ್ಟು ಸತ್ಯ. ರೊಕ್ಕದ ಲಾಭ ಆಗುತ್ತೆ ಅಂದರೆ ಕೆಲ ಜನ ಏನು ಬೇಕಾದರು ಮಾಡುತ್ತಾರೆ. ಕೆಲವರು ಮೂರ್ಖರು ಕೂಡ ಆಗುತ್ತಾರೆ. ಈಗಿನ ಕಾಲದಲ್ಲಿ ಲಕ್ಷಕ್ಕೆ ಮೂರು ಲಕ್ಷ ರೂ ಕೊಡ್ತೀವಿ ಅಂದರೆ ಯಾರು ನಂಬ್ತಾರೆ ಹೇಳಿ. ಹೀಗೆ ಡಬಲ್, ತ್ರಿಬಲ್ ಹಣ (money doubling) ಸಿಗುತ್ತೆ ಅಂತಾ ಆಸೆ ಬಿದ್ದವರು ಲಕ್ಷ ಲಕ್ಷ ಕಳ್ಕೊಂಡಿದ್ದಾರೆ.

ಮೂವರ ಬಂಧನ

ಜಗತ್ತಿನಲ್ಲಿ ಮೋಸ ಹೋಗುವವರು ಇರೋವರೆಗೂ ಮೋಸ ಮಾಡೋರು ಇರ್ತಾರೆ ಅನ್ನೋದು ನಿಜಾನೇ ಬಿಡಿ. ಹಣದ ಮಳೆ ರೀತಿ ಸುರಿಯುತ್ತೆ ಅನ್ನೋ ಬಣ್ಣದ ಮಾತುಗಳನ್ನ ನಂಬಿ ಬೆಂಗಳೂರಿನಲ್ಲಿ ಗುತ್ತಿಗೆದಾರ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾನೆ. ಹಣ ಚೀಟ್ ಆಗಿದೆ ಅಂತ ಗೊತ್ತಾದ ಮೇಲೆ ಪೊಲೀಸ್ ಮೊರೆ ಹೋಗಿದ್ದು, ಸದ್ಯ ಪೊಲೀಸರು ಮೂವರನ್ನ ಬಂಧಿಸಿ 40 ಲಕ್ಷ ರೂ ಸೀಜ್ ಮಾಡಿದ್ದಾರೆ.

ಇದನ್ನೂ ಓದಿ: ಡಿಜಿಟಲ್ ಅರೆಸ್ಟ್ ಎಂದು ಯಾಮಾರಿಸಿ ವೃದ್ಧ ಉದ್ಯಮಿಯ 15 ಕೋಟಿ ರೂ. ಎಗರಿಸಿದ್ರು!

ಅಂದ್ಹಾಗೆ ಈ ಘಟನೆ ನಡೆದಿರುವುದು ಬೆಂಗಳೂರಿನ ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ. ಹಣ ಡಬ್ಲಿಂಗ್ ಮಾಡುವ ನೆಪದಲ್ಲಿ ಗುತ್ತಿಗೆದಾರ ರಮೇಶ್‌ ಎಂಬುವರಿಗೆ 28 ಲಕ್ಷ ರೂ. ವಂಚಿಸಲಾಗಿದೆ. ವಂಚನೆ ಮಾಡಿದ್ದ ಮಧುಗಿರಿ ಮೂಲದ ವಿಜಯ್, ಕೆರೆಗುಡ್ಡದಹಳ್ಳಿಯ ಕೃಷ್ಣ ಸಿಂಗ್ ಮತ್ತು ಚಾಲಕ ನವೀನ್​ನ ಪೊಲೀಸರು ಬಂಧಿಸಿದ್ದಾರೆ. ಬಾರಿಶ್ ಹಣ ಅಂತಾ ಪುಂಗಿ ಬಿಟ್ಟಿದ್ದ ಖದೀಮರು ನಮ್ಮತ್ರ ದುಡ್ಡಿನ ಸುರಿಮಳೆಯೇ ಇದೆ. ಆದರೆ ಅದು 90 ದಿನದಲ್ಲಿ ನಾರ್ಮಲ್ ಕಾಗದ ಆಗುತ್ತೆ ಹೀಗಾಗಿ ಅದನ್ನ ಖರ್ಚು ಮಾಡಬೇಕು. ನೀವು ನಮಗೆ ಒಂದು ಲಕ್ಷ ರೂ ಕೊಟ್ಟರೆ ಮೂರು ಲಕ್ಷ ರೂ ಕೊಡ್ತೀವಿ. ತೊಂಬತ್ತು ದಿನಗಳ ಒಳಗೆ ಯಾವುದಕ್ಕಾದ್ರು ಖರ್ಚು ಮಾಡಿ ಅಂತಾ ನಂಬಿಸಿದ್ದರು.

ಹಣದ ಸಮೇತ ಖದೀಮರು ಪರಾರಿ

ಆರೋಪಿಗಳ ಮಾತನ್ನು ನಂಬಿದ್ದ ಗುತ್ತಿಗೆದಾರ ರಮೇಶ್, 28 ಲಕ್ಷ 60 ಸಾವಿರ ರೂ ಹಣವನ್ನು 8ನೇ ಮೈಲಿ ಬಳಿ ತಂದಿದ್ದರು. ಇಷ್ಟು ಕೊಟ್ಟರೆ ಆಕಡೆ ಈಕಡೆ ಒಂದು ಕೋಟಿ ರೂ ಸಿಗುತ್ತೆ ಅಂತಾ ಅತಿ ಆಸೆ ಇಟ್ಕೊಂಡಿದ್ದರು. ಹೋಟೆಲ್ ಒಂದಕ್ಕೆ ಕರೆದಿದ್ದ ಆರೋಪಿಗಳು ಹಣ ಪಡೆದು ಅದನ್ನ ಚೆಕ್ ಮಾಡ್ಕೊಂಡ್ ಬರ್ತೀವಿ ಅಂತಾ ಹಣದ ಸಮೇತ ಪರಾರಿಯಾಗಿದ್ದರು.

ಇದನ್ನೂ ಓದಿ: ನಗರದಲ್ಲಿ ಹೆಚ್ಚಿದ ಡಿಜಿಟಲ್ ಅರೆಸ್ಟ್ ಸ್ಕ್ಯಾಮ್; ನಿವೃತ್ತ ಸಂಶೋಧಕನಿಗೆ 5 ಕೋಟಿ ರೂ. ವಂಚನೆ!

ಇನ್ನು ಮೋಸ ಹೋಗಿದ್ದು ಗೊತ್ತಾದಾಗಲೇ ರಮೇಶ್​ಗೆ ಎಚ್ಚರವಾಗಿದೆ. ಕೂಡಲೇ ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ್ದ ಪೊಲೀಸರು ವಂಚಕರನ್ನ ಬಂಧಿಸಿ ಒಟ್ಟು 40 ಲಕ್ಷ ರೂಪಾಯಿ ಹಣವನ್ನು ರಿಕವರಿ ಮಾಡಿದ್ದಾರೆ. ಕೇವಲ ರಮೇಶ್ ಮಾತ್ರ ಅಲ್ಲ, ಇದೇ ರೀತಿಯ ವಂಚನೆಗೆ ಇನ್ನೋರ್ವ ವ್ಯಕ್ತಿ ಕೂಡ 18 ಲಕ್ಷ ರೂಪಾಯಿ ಕಳೆದುಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಹಾಗಾಗಿ ಯಾರಾದರೂ ಹಿಂಗೆ ಡಬಲ್ ತ್ರಿಬಲ್ ಹಣ ಕೊಡ್ತೀವಿ ಅಂದರೆ ಆಗಲೇ ಹುಷಾರಾಗಿ. ಹೆಚ್ಚಿನ ಹಣ ಸಿಗುತ್ತೆ ಅಂತಾ ಅತಿ ಆಸೆ ಪಟ್ಟರೆ ಈ ಥರ ನೀವೂ ಮೂರ್ಖರಾಗೋದು ಪಕ್ಕಾ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್; ಇರಾನ್ ಮೇಲಿನ ಯುದ್ಧ, ಹಾರ್ಮುಜ್ ಜಲಸಂಧಿಯ ಬಗ್ಗೆ ಚರ್ಚೆ

ನವದೆಹಲಿ, ಮಾರ್ಚ್ 24: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ವಿಧಿಸಿರುವ ನಿರ್ಬಂಧಗಳ ನಡುವೆಯೂ ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡುವ ಮಹತ್ವದ ಕುರಿತು ಚರ್ಚಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಕರೆ ಮಾಡಿದ್ದರು. ಈ ದೂರವಾಣಿ ಕರೆಯ ಸಮಯದಲ್ಲಿ ಈ ಪ್ರದೇಶದಲ್ಲಿ ಶಾಂತಿ ಮರುಸ್ಥಾಪನೆ ಮತ್ತು ಹಾರ್ಮುಜ್ ಜಲಸಂಧಿಯನ್ನು ತೈಲ ಮತ್ತು ಇಂಧನ ವ್ಯಾಪಾರಕ್ಕೆ ಮುಕ್ತವಾಗಿಸುವುದಕ್ಕೆ ಭಾರತದ ಬೆಂಬಲವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು.

ಅಂದಹಾಗೆ, ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ಪ್ರಾರಂಭವಾದ ನಂತರ ಮೋದಿ ಮತ್ತು ಟ್ರಂಪ್ ಮಾತನಾಡುತ್ತಿರುವುದು ಇದೇ ಮೊದಲು.

ಇದನ್ನೂ ಓದಿ: ಟ್ರಂಪ್ ಕದನ ವಿರಾಮ ಬಯಸುತ್ತಿದ್ದಾರೆ, ಇರಾನ್ ಅಮೆರಿಕದ ಷರತ್ತಿಗೆ ಒಪ್ಪುವುದು ಅನುಮಾನ; ಇಸ್ರೇಲ್ ಅಭಿಮತ

ಭಾರತದಲ್ಲಿರುವ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಇಬ್ಬರು ನಾಯಕರ ನಡುವಿನ ಮಾತುಕತೆಯ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಟ್ರಂಪ್ ಅವರೊಂದಿಗಿನ ಮಾತುಕತೆಯ ಬಗ್ಗೆ ತಿಳಿಸಿದ್ದು, “ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದಾರೆ. ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಪರಿಸ್ಥಿತಿಯ ಕುರಿತು ಇಬ್ಬರೂ ನಾಯಕರು ಮಾತುಕತೆ ನಡೆಸಿದ್ದಾರೆ. ಭಾರತ ಶಾಂತಿಗೆ ಬೆಂಬಲವಾಗಿ ನಿಂತಿದೆ. ಭಾರತವು ಸಾಧ್ಯವಾದಷ್ಟು ಬೇಗ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಬೆಂಬಲ ನೀಡುವುದಾಗಿ ತಿಳಿಸಿದೆ. ಹಾರ್ಮುಜ್ ಜಲಸಂಧಿಯು ಮುಕ್ತ, ಸುರಕ್ಷಿತ ಸ್ಥಳವಾಗುವುದು ಇಡೀ ಜಗತ್ತಿಗೆ ಅತ್ಯಗತ್ಯ ಎಂದು ಭಾರತವೂ ಹೇಳಿದೆ” ಎಂದು ಗೋರ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಯುದ್ಧ ನಿಲ್ಲಿಸುವ ಸುಳಿವು ನೀಡಿದ ಟ್ರಂಪ್; ಕದನವಿರಾಮಕ್ಕೆ ಇರಾನ್ ಜೊತೆ ಅಮೆರಿಕ ಮಾತುಕತೆ

ಇದಾದ ಬಳಿಕ ಪ್ರಧಾನಿ ಮೋದಿ ಕೂಡ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದು, ಅಮೆರಿಕದ ಅಧ್ಯಕ್ಷರೊಂದಿಗೆ ಉಪಯುಕ್ತ ವಿಷಯದ ವಿನಿಮಯ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. “ಜಾಗತಿಕ ಸ್ಥಿರತೆಗೆ ಹಾರ್ಮುಜ್ ಜಲಸಂಧಿಯನ್ನು ಮುಕ್ತ, ಸುರಕ್ಷಿತವಾದ ರೀತಿಯಲ್ಲಿ ಇಡುವುದು ಅತ್ಯಗತ್ಯ ಎಂದು ಒತ್ತಿ ಹೇಳಿದ್ದೇನೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಶಾಂತಿಯನ್ನು ಶೀಘ್ರವಾಗಿ ಪುನಃಸ್ಥಾಪಿಸಲು ಭಾರತ ಬೆಂಬಲಿಸುತ್ತದೆ ಎಂದು ತಿಳಿಸಿದ್ದೇನೆ” ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಲವ್ ಮಾಕ್ಟೇಲ್ 3’ ಸಿನಿಮಾ ಕಥೆ ಕಾಪಿ? ಎಲ್ಲವನ್ನೂ ವಿವರಿಸಿದ ರಾಘವೇಂದ್ರ ನಾಯ್ಕ್

ಡಾರ್ಲಿಂಗ್ ಕೃಷ್ಣ ನಟನೆ, ನಿರ್ದೇಶನದ ‘ಲವ್ ಮಾಕ್ಟೇಲ್ 3’ (Love Mocktail 3) ಸಿನಿಮಾ ತಂಡದ ಮೇಲೆ ಕೃತಿಚೌರ್ಯದ ಆರೋಪ ಎದುರಾಗಿದೆ. ರಾಘವೇಂದ್ರ ನಾಯ್ಕ್ ಅವರು ಈ ಕಥೆ ತಮ್ಮದು ಎಂದು ಹೇಳಿದ್ದಾರೆ. ಈ ಕಥೆಯನ್ನು2023ರಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಹೇಳಲಾಗಿತ್ತು. ಆದರೆ ಡಾರ್ಲಿಂಗ್ ಕೃಷ್ಣ (Darling Krishna) ಅವರು ಆ ಕಥೆಯನ್ನು ಒಪ್ಪಿಕೊಂಡಿರಲಿಲ್ಲ. ಆದರೆ ಈಗ ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ಅದೇ ಕಥೆ ಇರುವುದು ನೋಡಿ ರಾಘವೇಂದ್ರ ನಾಯ್ಕ್ ಅವರಿಗೆ ಶಾಕ್ ಆಗಿದೆ. ‘ಈ ಸಿನಿಮಾದ ದ್ವಿತೀಯಾರ್ಧ ಸಂಪೂರ್ಣ ನಮ್ಮದೇ ಕಥೆಗೆ ಹತ್ತಿರವಾಗಿದೆ. ಅವರ ಹಿನ್ನೆಲೆ ಮತ್ತು ಪರಿಸರ ಬೇರೆ ಇದೆ. ಆದರೆ ಮುಖ್ಯ ವಿಚಾರ ಹಾಗೆಯೇ ಇದೆ. ಅದರಿಂದ ನನಗೆ ಬೇಜಾರು ಆಯಿತು. ಅದಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡೆ. ಈಗ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದೇವೆ’ ಎಂದು ರಾಘವೇಂದ್ರ ನಾಯ್ಕ್ (Raghavendra Naik) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link