Category Archives: Blog

Your blog category

‘ಅಧ್ಯಾಯ ಎರಡು’: ‘ಕಾಂತಾರ: ಚಾಪ್ಟರ್ 2’ ಆರಂಭಿಸಿದರೇ ರಿಷಬ್ ಶೆಟ್ಟಿ?

‘ಅಧ್ಯಾಯ ಎರಡು’: ‘ಕಾಂತಾರ: ಚಾಪ್ಟರ್ 2’ ಆರಂಭಿಸಿದರೇ ರಿಷಬ್ ಶೆಟ್ಟಿ?

ರಿಷಬ್ ಶೆಟ್ಟಿ (Rishab Shetty) ನಟಿಸಲಿರುವ, ತೆಲುಗು ಪ್ಯಾನ್ ಇಂಡಿಯಾ ಸಿನಿಮಾ ‘ಜೈ ಹನುಮಾನ್’ನ ಮುಹೂರ್ತ ಹಂಪಿಯಲ್ಲಿ ನೆರವೇರಿತು. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಪೌರಾಣಿಕ ಸಿನಿಮಾನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಸದ್ಯಕ್ಕೆ ನನ್ನ ಕೈಯಲ್ಲಿ ‘ಜೈ ಹನುಮಾನ್’ ಸಿನಿಮಾ ಮಾತ್ರವೇ ಇದೆ ಎಂದು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಸಮಯದಲ್ಲಿ ಹೇಳಿದ್ದರು. ಆದರೆ ಇದೀಗ ಯುಗಾದಿಯಂದು ರಿಷಬ್ ಶೆಟ್ಟಿ ಹೊಸ ಸಿನಿಮಾ ಪ್ರಾರಂಭ ಮಾಡಿದಂತಿದ್ದಾರೆ.

ಇಂದು ಯುಗಾದಿ ಹಬ್ಬದ ಪ್ರಯುಕ್ತ ರಿಷಬ್ ಶೆಟ್ಟಿ ಮತ್ತು ಅವರ ಪತ್ನಿ ಪ್ರಗತಿ ಅವರು ಕಮಲಶಿಲೆಯ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ವಿಶೇಷ ಪೂಜೆ ಮಾಡಿಸಿದ್ದಾರೆ. ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಮತ್ತೊಂದು ಪೋಸ್ಟ್​​ನಲ್ಲಿ ‘ಅಧ್ಯಾಯ ಎರಡು, ಇಲ್ಲಿಂದ ಶುರು’ ಎಂದು ಬರೆದಿರುವ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ಹೊಸ ವರ್ಷ, ಹೊಸ ಚಾಪ್ಟರ್’ ಎಂದು ಬರೆದುಕೊಂಡಿದ್ದಾರೆ.

ರಿಷಬ್ ಶೆಟ್ಟಿ ಅವರ ಈ ಪೋಸ್ಟ್ ಅಮಾನಿಗಳಲ್ಲಿ ಕುತೂಹಲದ ಜೊತೆಗೆ ನಿರೀಕ್ಷೆಯನ್ನು ಸಹ ಮೂಡಿಸಿದೆ. ‘ಕಾಂತಾರ ಚಾಪ್ಟರ್ 2’ ಸಿನಿಮಾದ ಬಗ್ಗೆ ರಿಷಬ್ ಅವರು ಈ ಪೋಸ್ಟ್ ಹಂಚಿಕೊಂಡಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಅಂತ್ಯದಲ್ಲಿ, ‘ಚಾಪ್ಟರ್ 2’ನ ಸುಳಿವನ್ನು ರಿಷಬ್ ಶೆಟ್ಟಿ ನೀಡಿದ್ದರು. ‘ಕಾಂತಾರ: ಚಾಪ್ಟರ್ 1’ ಬಿಡುಗಡೆ ಬಳಿಕ ಮಾತನಾಡಿದ್ದ ರಿಷಬ್, ‘ಚಾಪ್ಟರ್ 2’ ಸಹ ಬರಲಿದೆ ಎಂದಿದ್ದರು. ಅಂತೆಯೇ ಇದೀಗ ‘ಅಧ್ಯಾಯ ಎರಡು’ ಎನ್ನುವ ಮೂಲಕ ‘ಚಾಪ್ಟರ್ 2’ ಆರಂಭದ ಸುಳಿವನ್ನು ನೀಡಿದ್ದಾರೆ.

ಇದನ್ನೂ ಓದಿ:ವಿಡಿಯೋ: ರಶ್ಮಿಕಾ ಮದುವೆ ಕುರಿತ ಪ್ರಶ್ನೆಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ಹೀಗಿತ್ತು ನೋಡಿ

ಆದರೆ ರಿಷಬ್ ಶೆಟ್ಟಿ ಈಗ ಹಂಚಿಕೊಂಡಿರುವ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯ ಲೋಗೊ ಇದೆ, ‘ಕಾಂತಾರ’ ಸಿನಿಮಾ ಸರಣಿಯ ನಿರ್ಮಾಣ ಮಾಡಿರುವ ಹೊಂಬಾಳೆಯ ಲೋಗೊ ಇಲ್ಲ. ಇದು ಸಹ ಸಣ್ಣ ಅನುಮಾನ ಮೂಡಿಸಿದ್ದು, ‘ಕಾಂತಾರ’ ಸರಣಿಯ ಹೊರತಾದ ಸಿನಿಮಾ ಇದಾಗಿರಬಹುದೆ ಎಂಬ ಅನುಮಾನವೂ ಇದೆ. ಒಟ್ಟಾರೆ ಸ್ವತಃ ರಿಷಬ್ ಅವರೇ ಇದಕ್ಕೆಲ್ಲ ಉತ್ತರ ನೀಡಬೇಕಿದೆ.

ರಿಷಬ್ ಅವರು ಪ್ರಸ್ತುತ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ‘ಜೈ ಹನುಮಾನ್’ ಸಿನಿಮಾನಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಸಿನಿಮಾದ ಬಳಿಕ ಹಿಂದಿಯ ‘ಛತ್ರಪತಿ ಶಿವಾಜಿ’ ಸಿನಿಮಾನಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆ. ‘ಲಗಾನ್’ ಸಿನಿಮಾ ನಿರ್ದೇಶಕ ಅಶುತೋಶ್ ಗೋವರಿಕರ್ ನಿರ್ದೇಶನದ ಸಿನಿಮಾನಲ್ಲಿಯೂ ರಿಷಬ್ ಶೆಟ್ಟಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆ ಸಿನಿಮಾ ಸಹ ಇದೇ ವರ್ಷ ಪ್ರಾರಂಭ ಆಗುವ ನಿರೀಕ್ಷೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಡುವಿನಹೊಸಹಳ್ಳಿಯಲ್ಲಿ ಯುಗಾದಿ ಹೊನ್ನಾರು ಸಂಭ್ರಮ, ಮೆರಗು ನೀಡಿದ ಮಂಗಳವಾದ್ಯಗಳು

ಹಾಸನ, (ಮಾರ್ಚ್ 19): ಭಾರತೀಯರಿಗೆ ಹೊಸ ವರ್ಷದ ಸಂಕೇತ ಮತ್ತು ಚೈತ್ರಮಾಸದ ಆರಂಭದ ದಿನವಾದ ಯುಗಾದಿ ಹಬ್ಬದ (Ugadi Festival) ಸಂಭ್ರಮ ಮನೆ ಮಾಡಿದೆ. ಕಳೆದ ಸಿಹಿ ಕನಸುಗಳ ನಿರೀಕ್ಷೆಯಲ್ಲಿ ಜನರು ಎಲ್ಲೆಡೆ ಯುಗಾದಿ ಆಚರಣೆ ಮಾಡಲಾಗುತ್ತದೆ. ಇನ್ನು ಅನ್ನದಾತರು ಹೊಸ ವರ್ಷದ ಮೊದಲ‌ ದಿನ ಹೊನ್ನಾರು ಕಟ್ಟಿ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಹಾಸನ (Hassan) ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕಡುವಿನಹೊಸಹಳ್ಳಿ ಗ್ರಾಮದಲ್ಲಿ ರೈತರ, ಹಸುಗಳಿಗೆ ಅಲಂಕಾರ ಮಾಡಿ ನೇಗಿಲು ಹೂಡಿ ಉಳುಮೆ ಮಾಡಿ ಸಂಭ್ರಮಿಸಿದರು. ಅಲ್ಲದೇ ಸಾಂಕೇತಿಕವಾಗಿ ಸಾಮೂಹಿಕವಾಗಿ ಮಂಗಳವಾದ್ಯಗಳೊಂದಿಗೆ ಹೊನ್ನಾರು ಕಟ್ಟಿ ಕೃಷಿ ಚಟುವಟಿಕೆ ಶುರು ಮಾಡಿದ್ದಾರೆ.

Source link

IPL 2026: ಕಿಂಗ್ ಕೊಹ್ಲಿ 2.0.. ಟಾಪ್ ಗೇರ್​ನಲ್ಲಿ ವಿರಾಟ್ ಬ್ಯಾಟಿಂಗ್‌; ವಿಡಿಯೋ ನೋಡಿ

ಇಂಡಿಯನ್ ಪ್ರೀಮಿಯರ್ ಲೀಗ್‌ನ 19 ನೇ ಸೀಸನ್‌ ಮಾರ್ಚ್​ 28 ರಿಂದ ಆರಂಭವಾಗಲಿದೆ. ಟೂರ್ನಿಯ ಮೊದಲ ಪಂದ್ಯ ಹಾಲಿ ಚಾಂಪಿಯನ್‌ ಆರ್​ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಡುವೆ ನಡೆಯಲಿದೆ. ಈ ಪಂದ್ಯಕ್ಕೆ ಇನ್ನ 9 ದಿನಗಳು ಮಾತ್ರ ಉಳಿದಿವೆ. ಹೀಗಾಗಿ ಉಭಯ ತಂಡಗಳು ಮೈದಾನದಲ್ಲಿ ಬೆವರು ಹರಿಸುತ್ತಿವೆ. ಇತ್ತ ಆರ್​ಸಿಬಿ ಕೂಡ ತಯಾರಿಯನ್ನು ಚುರುಕುಗೊಳಿಸಿದ್ದು, ತಂಡದ ಬ್ಯಾಟಿಂಗ್‌ ಜೀವಾಳ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ, ತಂಡವನ್ನು ಕೂಡಿಕೊಂಡ ಬಳಿಕ ಮೊದಲ ಬಾರಿಗೆ ನೆಟ್ಸ್​ನಲ್ಲಿ ಬ್ಯಾಟ್ ಹಿಡಿದು ಅಬ್ಬರಿಸಿದ್ದಾರೆ.

ವಾಸ್ತವವಾಗಿ ಮೊನ್ನೆಯಷ್ಟೆ ಆರ್​ಸಿಬಿ ತಂಡವನ್ನು ಸೇರಿಕೊಂಡಿರುವ ವಿರಾಟ್ ಕೊಹ್ಲಿ ಇಂದು ನಡೆದ ಅಭ್ಯಾಸದ ಶಿಬಿರದಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆದಿದ್ದಾರೆ. ಅಂತರರಾಷ್ಟ್ರೀಯ ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಕೊಹ್ಲಿ ಈಗ ಏಕದಿನ ಸ್ವರೂಪದಲ್ಲಿ ಮಾತ್ರ ಆಡುತ್ತಿದ್ದಾರೆ. ಅದರ ಪರಿಣಾಮವಾಗಿ ಕಳೆದ ಆವೃತ್ತಿಯಿಂದ ತಮ್ಮ ಬ್ಯಾಟಿಂಗ್​ನಲ್ಲಿ ಬದಲಾವಣೆ ಮಾಡಿಕೊಂಡಿರುವ ಕೊಹ್ಲಿ ಸ್ಟ್ರೈಕ್​ ರೇಟ್​ ಮೇಲೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಹೀಗಾಗಿ ಕೊಹ್ಲಿ ಬ್ಯಾಟ್​​ನಿಂದ ಬೌಂಡರಿ, ಸಿಕ್ಸರ್​ಗಳ ಮಳೆಯಾಗುತ್ತಿದೆ.

Source link

ಯುಗಾದಿ ಹೊಸತೊಡಕು: ನಾಟಿ ಕೋಳಿಗೆ ಭಾರೀ ಡಿಮ್ಯಾಂಡ್, ರೇಟ್ ಎಷ್ಟು ಗೊತ್ತಾ?

ಚಿಕ್ಕಬಳ್ಳಾಫುರ, ಮಾರ್ಚ್ 19: ಇಂದು ಯುಗಾದಿ (Ugadi) ಹೊಸತೊಡಕು, ನಾನ್ ವೆಜ್ ಪ್ರಿಯರು ಚಿಕನ್, ಮಟನ್ ತಿನ್ನದಿದ್ದರೇ ಸಮಾಧಾನವಾಗಲ್ಲ. ಆದರೆ ಫಾರಂ ಕೋಳಿ ಬದಲು ಈಗ ನಾಟಿ ಕೋಳಿ (Nati Koli) ಹಾಗೂ ನಾಟಿ ಕೋಳಿ ಮೊಟ್ಟೆ ಮೊರೆ ಹೋಗಿದ್ದಾರೆ. ಹೀಗಾಗಿ ನಾಟಿ ಕೋಳಿಗೆ ಸಖತ್​​ ಡಿಮ್ಯಾಂಡ್​​ ಬಂದಿದ್ದು, ಜನರು ಹುಡುಕಾಡಿ ಕೇಳಿದಷ್ಟು ಹಣ ನೀಡಿ ಖರೀದಿ ಮಾಡುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ನಾಟಿ ಕೋಳಿ ಸಾಕಾಣಿಕೆ

ಆರೋಗ್ಯ ಕಾಳಜಿ ವಹಿಸುತ್ತಿರುವ ಕೆಲವರು, ಹೈಬ್ರಿಡ್ ಆಹಾರದ ಬದಲು ನಾಟಿ, ಜವಾರಿ ಆಹಾರದ ಮೊರೆ ಹೊಗ್ತಿದ್ದಾರೆ. ಇಂದು ಯುಗಾದಿ ಹೊಸತೊಡಕು, ಹೀಗಾಗಿ ನಾನ್ ವೆಜ್ ಪ್ರಿಯರು ನಾಟಿ ಕೋಳಿ ಮೊರೆ ಹೋಗುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರದ ವಾಪಸಂದ್ರದ ಬಳಿ ನಾಟಿ ಕೋಳಿ ಸಾಕಾಣಿಕೆ ಮಾಡಲಾಗಿದ್ದು, ಯುಗಾದಿ ಹೊಸತೊಡಕು ಪ್ರಯುಕ್ತ ಜನ ಕೋಳಿ ಖರೀದಿಗೆ ಮುಗಿಬಿದ್ದಿದ್ದಾರೆ. ಮನೆಯೊಂದರಲ್ಲಿ ಸಾಕಿರುವ ನಾಟಿ ಕೋಳಿ ಖರೀದಿ ಮಾಡಲು ಮನೆ ಬಳಿ ಆಗಮಿಸಿ ಕೇಳಿದಷ್ಟು ಹಣ ನೀಡಿ ಕೋಳಿ ಖರೀದಿ ಮಾಡುತ್ತಿದ್ದಾರೆ.

ಇದನ್ನೂ ಓದಿ: ಉತ್ತರ ಕರ್ನಾಟಕದ ಮೊಟ್ಟೆ ಉದ್ಯಮಕ್ಕೂ ತಟ್ಟಿದ ಯುದ್ಧದ ಬಿಸಿ; ಲಕ್ಷಾಂತರ ರೂ. ಮೌಲ್ಯದ ಮೊಟ್ಟೆಗಳು ಮಣ್ಣುಪಾಲು!

ಇನ್ನು ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಬಡಾವಣೆಯಲ್ಲಿ, ಸಾಫ್ಟ್ವೇರ್ ಇಂಜಿನಿಯರ್ ದಂಪತಿ ಅಶ್ವಿನ್ ಹಾಗೂ ನಿಧಿ ದಂಪತಿ, ಮನೆ ಪಕ್ಕದಲ್ಲೇ ಆರು ನೂರು ನಾಟಿ ಕೋಳಿ ಸಾಕಾಣಿಕೆ ಮಾಡಿದ್ದಾರೆ. ಇನ್ನು ಮಾರುಕಟ್ಟೆಯಲ್ಲಿ ಕೆಜಿ ನಾಟಿ ಕೋಳಿ ಬೆಲೆ ಏಳು ನೂರು ರೂಪಾಯಿ ಆಗಿದೆ. ಆದರೆ ಇವರ ಮನೆ ಬಳಿ ಬಂದ ಗ್ರಾಹಕರಿಗೆ ಕೆ.ಜಿ ಕೋಳಿಗೆ 450 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಸೇಲ್ ಆಗ್ತಿತ್ತು? ಹೊರ ದೇಶಕ್ಕೆ ಎಷ್ಟು ರಫ್ತು ಆಗ್ತಿತ್ತು?

ಜೊತೆಗೆ ತಲಾ ಮೊಟ್ಟೆಗೆ 12 ರೂಪಾಯಿ ಮಾರಾಟ ಮಾಡುತ್ತಿದ್ದಾರೆ. ನಾಟಿ ಕೋಳಿ ಹಾಗೂ ಮೊಟ್ಡೆ ರುಚಿ ನೋಡಿರುವ ಗ್ರಾಹಕರು ಮನೆಯ ಬಳಿ ಆಗಮಿಸಿ ಕೋಳಿ ಹಾಗೂ ಮೊಟ್ಟೆ ಖರೀದಿಸುತ್ತಿದ್ದಾರೆ. ಫಾರಂ ಕೋಳಿ ತಿಂದು ತಿಂದು ಸಾಕಾಕಿದ್ದರೆ, ನಾಟಿ ಕೋಳಿ ರುಚಿ ನೋಡಬೇಕು ಎನ್ನುವವರು ಚಿಕ್ಕಬಳ್ಳಾಪುರದಲ್ಲಿ ಸಿಗುವ ನಾಟಿ ಕೋಳಿಯನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನೌಕರರ ವರ್ಗಾವಣೆಗಿಂತ ಮಾಡಬೇಕಾದ ಉತ್ತಮ ಕೆಲಸಗಳಿವೆ: ಸಿಎಂಗೆ ಹೈಕೋರ್ಟ್ ತರಾಟೆ

ಬೆಂಗಳೂರು, (ಮಾರ್ಚ್ 19): ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಯಲ್ಲಿ (government employees transfer) ಸಿಎಂ ಹಸ್ತಕ್ಷೇಪಕ್ಕೆ ಕರ್ನಾಟಕ ಹೈಕೋರ್ಟ್ (Karnataka High Court) ಆಕ್ಷೇಪ ವ್ಯಕ್ತಪಡಿಸಿದೆ. ಬೆಸ್ಕಾಂ ಎಇ ಎಸ್.ಚೇತನ್ ಎಂಬುವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್, ಹಾಗೂ ಟಿ.ಎಂ.ನದಾಫ್ ಅವರಿದ್ದ ಹೈಕೋರ್ಟ್ ಪೀಠ, ಸಿಎಂ ಸಿದ್ದರಾಮಯ್ಯಗೆ (siddaramaiah )ಚಾಟಿ ಬೀಸಿದೆ. ಸಿಎಂಗೆ ನೌಕರರ ವರ್ಗಾವಣೆಗಿಂತ ಮಾಡಬೇಕಾದ ಉತ್ತಮ ಕೆಲಸಗಳಿವೆ. ಸರ್ಕಾರಿ ನೌಕರರ ವರ್ಗಾವಣೆ ವಿಚಾರ ಆಯಾ ಇಲಾಖೆಗೇ ಬಿಡಬೇಕು. ಮುಖ್ಯಮಂತ್ರಿಗಳ ಕಚೇರಿ ವರ್ಗಾವಣೆಯ ಮನವಿ ಸ್ವೀಕರಿಸಬಾರದು ಎಂದು ತರಾಟೆಗೆ ತೆಗೆದುಕೊಂಡಿದೆ.

ಸರ್ಕಾರಿ ನೌಕರರ ವರ್ಗಾವಣೆ ವಿಚಾರ ಆಯಾ ಇಲಾಖೆಗೇ ಬಿಡಬೇಕು. ಮುಖ್ಯಮಂತ್ರಿಗಳ ಕಚೇರಿ ವರ್ಗಾವಣೆಯ ಮನವಿ ಸ್ವೀಕರಿಸಬಾರದು. ಇಂತಹ ವಿಚಾರಗಳಿಗೆ ಮುಖ್ಯಮಂತ್ರಿ ತಮ್ಮ ಸಮಯ ವಿನಿಯೋಗಿಸಬಾರದು ಎಂದು ಅಭಿಪ್ರಾಯಪಟ್ಟಿದ್ದು, ಹೈಕೋರ್ಟ್​ನ ಈ ಆದೇಶದ ಪ್ರತಿಯನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲು ಸೂಚನೆ ನೀಡಿದೆ.

ಇದನ್ನೂ ಓದಿ: ಇಂಧನ ಇಲಾಖೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪಕ್ಕೆ ಬೇಸತ್ತು ರಾಜೀನಾಮೆಗೆ ಮುಂದಾಗಿದ್ದ ಕೆಜೆ ಜಾರ್ಜ್: ಆಮೇಲಾಗಿದ್ದೇ ಬೇರೆ!

ಸಿಎಂ ನೀಡುವ ವರ್ಗಾವಣೆ ಪತ್ರಗಳ ಬಗ್ಗೆ ಹೈಕೋರ್ಟ್, ಸರ್ಕಾರದ ಮುಖ್ಯಕಾರ್ಯದರ್ಶಿ( ಸಿಎಸ್) ನಿಲುವು ಕೇಳಿತ್ತು. ಇದಕ್ಕೆ ಮುಖ್ಯ ಕಾರ್ಯದರ್ಶಿ ಸಹ ಉತ್ತರಿಸಿ, ಸಿಎಂ ಕಚೇರಿಯಿಂದ ನೀಡುವ ಟಿಪ್ಪಣಿಗಳು ಕೇವಲ ಶಿಫಾರಸುಗಳಷ್ಟೇ. ಸಂಬಂಧಪಟ್ಟ ಇಲಾಖೆ ವರ್ಗಾವಣೆ ಆದೇಶ ನೀಡುತ್ತದೆಂದು ಎಂದು ಹೇಳಿದ್ದರು.

ಇಂಧನ ಇಲಾಖೆಯ ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಸಿಎಂ ಕಚೇರಿ ಮುಂದಾಗಿತ್ತು. ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಇಂಧನ ಇಲಾಖೆ ಆಡಳಿತದಲ್ಲಿ ತೀವ್ರ ಹಸ್ತಕ್ಷೇಪ ಮಾಡುತ್ತಿದ್ದರು. ಇದರಿಂದ ಅಸಮಾಧಾನಗೊಂಡ ಕೆಜೆ ಜಾರ್ಜ್ ಸಿಎಂ ನಿವಾಸಕ್ಕೆ ತೆರಳಿ ಪ್ರಶ್ನಿಸಿದ್ದರು, ಅಲ್ಲದೇ ರಾಜೀನಾಮೆ ಬಗ್ಗೆ ಸಹ ಪ್ರಸ್ತಾಪಿಸಿದ್ದರು. ಆದ್ರೆ,  ಸಿಎಂ ಸಿದ್ದರಾಮಯ್ಯ ಜಾರ್ಚ್ ಅವರನ್ನು ಸಮಾಧಾನಪಡಿಸಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಹೀಗೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಎಲ್ಲಾ ಇಲಾಖೆಗಳಲ್ಲೂ ಮೂಗು ತೂರಿಸುತ್ತಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಹೈಕೋರ್ಟ್, ಸಿಎಂಗೆ ತರಾಟೆಗೆ ತೆಗೆದಯಕೊಂಡಿದ್ದು, ಮಾಡಬೇಕಾದ ಉತ್ತಮ ಕೆಲಸಗಳಿವೆ. ಅವುಗಳನ್ನು ಮಾಡಿ ಎಂದು ಟಾಂಗ್ ಕೊಟ್ಟಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಂಟೆಗಳ ಕಾಲ ಕುಳಿತು ಕೆಲಸ ಮಾಡ್ತೀರಾ? ಹಾಗಿದ್ರೆ ಇನ್ನಾದರೂ ತಪ್ಪದೆ ಈ ವಿಷಯಗಳನ್ನು ತಿಳಿದುಕೊಳ್ಳಿ

ಇಂದಿನ ಜೀವನಶೈಲಿಯಲ್ಲಿ, ಆಫೀಸ್, ಮನೆ ಕೆಲಸ ಅಥವಾ ಆನ್‌ಲೈನ್ ಅಧ್ಯಯನಕ್ಕಾಗಿ ಹಲವು ಗಂಟೆಗಳ ಕಾಲ ಕುಳಿತುಕೊಂಡು ಕೆಲಸ ಮಾಡುವುದು ಬಹಳ ಸಾಮಾನ್ಯವಾಗಿದೆ. ಜನರು ಕಂಪ್ಯೂಟರ್, ಲ್ಯಾಪ್‌ಟಾಪ್ ಅಥವಾ ಮೊಬೈಲ್ ಮುಂದೆ ನಿರಂತರವಾಗಿ ಕುಳಿತುಕೊಂಡಿರುತ್ತಾರೆ. ಆದರೆ ತಜ್ಞರ ಪ್ರಕಾರ, ಈ ಅಭ್ಯಾಸವನ್ನು ನಿರ್ಲಕ್ಷ್ಯ ಮಾಡುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಹೌದು, ಡಾ. ಅಜಯ್ ಕುಮಾರ್ ಹೇಳುವ ಪ್ರಕಾರ, ದೀರ್ಘಕಾಲ ಕುಳಿತುಕೊಳ್ಳುವುದರಿಂದ ಸ್ನಾಯುಗಳು ದುರ್ಬಲವಾಗುತ್ತವೆ ಮತ್ತು ಬೆನ್ನುಹುರಿಯ ಮೇಲೆ ಒತ್ತಡ ಹೆಚ್ಚುತ್ತದೆ. ಇದರಿಂದ ಬೆನ್ನು ನೋವು (Back Pain) ಸಾಮಾನ್ಯವಾಗುತ್ತದೆ. ರಕ್ತ ಸಂಚಾರ ನಿಧಾನಗೊಳ್ಳುವುದರಿಂದ ಕೈ- ಕಾಲುಗಳಲ್ಲಿ ಊತ ಕಾಣಿಸಬಹುದು. ಹಾಗಾಗಿ ಈ ರೀತಿಯ ಸಮಸ್ಯೆಗಳನ್ನು ತಡೆಯಲು ಕೆಲವು ಸಲಹೆಗಳನ್ನು ಅನುಸರಿಸುವುದು ಬಹಳ ಮುಖ್ಯವಾಗುತ್ತದೆ. ಇಲ್ಲವಾದಲ್ಲಿ ಇದು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ಡಾ. ಅಜಯ್ ಕುಮಾರ್ ಪ್ರಕಾರ, ಇದರ ಜೊತೆಗೆ, ಈ ರೀತಿಯ ಅಭ್ಯಾಸದಿಂದ ತೂಕ ಹೆಚ್ಚಳ, ಹೃದಯಕ್ಕೆ ಸಂಬಂಧ ಪಟ್ಟ ರೋಗ ಮತ್ತು ಮಧುಮೇಹದಂತಹ ಅಪಾಯ ಹೆಚ್ಚಾಗಬಹುದು. ಅಷ್ಟು ಮಾತ್ರವಲ್ಲ, ಮೆಟಾಬಾಲಿಸಮ್ ನಿಧಾನಗೊಳ್ಳುವುದರಿಂದ ಕ್ಯಾಲೊರಿಗಳು ಸರಿಯಾಗಿ ಕಾಲಿಯಾಗದಿರಬಹುದು. ಜೊತೆಗೆ ನಿರಂತರವಾಗಿ ಕಂಪ್ಯೂಟರ್, ಲ್ಯಾಪ್‌ಟಾಪ್ ಅಥವಾ ಮೊಬೈಲ್ ನೋಡುವುದರಿಂದ ಕಣ್ಣುಗಳ ಮೇಲೂ ಒತ್ತಡ ಹೆಚ್ಚಾಗುವುದರಿಂದ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಬಹುದು. ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು, ಚಡಪಡಿಕೆ ಮತ್ತು ಕೆಲಸದ ಕಡೆ ಕೊಡುವಂತಹ ಗಮನ ಕಡಿಮೆಯಾಗಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೀವು ಕೆಲಸ ಮಾಡುವಾಗ ಕುಳಿತುಕೊಳ್ಳುವಂತಹ ಭಂಗಿಯಿಂದಲೂ ಬರಬಹುದು ಬೆನ್ನು ನೋವು ಎಚ್ಚರಿಕೆ ನೀಡಿದ ಡಾ ಅಜಯ್‌ ಹೆಗ್ಡೆ

ಈ ರೀತಿಯ ಲಕ್ಷಣ ಕಂಡುಬಂದಾಗ ನಿರ್ಲಕ್ಷಿಸಬಾರದು!

  • ಬೆನ್ನು ನೋವು
  • ಕಣ್ಣುಗಳಲ್ಲಿ ಉರಿ, ದಣಿವು
  • ಕೈ-ಕಾಲುಗಳಲ್ಲಿ ಊತ, ನೋವು
  • ಶಕ್ತಿ ಕೊರತೆ, ಚಡಪಡಿಕೆ, ನಿದ್ರೆ ಸರಿಯಾಗಿ ಬಾರದಿರುವುದು
  • ತೂಕ ಹೆಚ್ಚಳ, ಸ್ನಾಯು ದುರ್ಬಲತೆ

ತಡೆಗಟ್ಟುವುದು ಹೇಗೆ?

  • ಪ್ರತೀ ಗಂಟೆಗೊಮ್ಮೆ ಬ್ರೇಕ್ ತೆಗೆದುಕೊಳ್ಳಿ
  • ಎದ್ದು ಸ್ಟ್ರೆಚಿಂಗ್ ಅಥವಾ ಸಣ್ಣ ವಾಕ್ ಮಾಡಿ ಬನ್ನಿ
  • ಸರಿಯಾದ ಸ್ಥಿತಿಯಲ್ಲಿ ಕುಳಿತುಕೊಳ್ಳಿ, ಕಂಪ್ಯೂಟರ್ ಪರದೆ ಕಣ್ಣು ಮಟ್ಟದಲ್ಲಿ ಇರಲಿ
  • ಸಮತೋಲನ ಆಹಾರ ಸೇವಿಸಿ, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ
  • ಸ್ಟ್ಯಾಂಡಿಂಗ್ ಡೆಸ್ಕ್ ಅಥವಾ ಯೋಗ, ನಿಯಮಿತ ವ್ಯಾಯಾಮ ಮಾಡುವುದನ್ನು ಮರೆಯಬೇಡಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನಸ್ಸಿನ ಶಾಂತಿ, ನೆಮ್ಮದಿಗಾಗಿ ಸಂಜೆ ಹೊತ್ತಲ್ಲಿ ತಪ್ಪದೇ ಈ ಕೆಲಸಗಳನ್ನು ಮಾಡಿ

ಇಂದಿನ ಈ ಬ್ಯುಸಿ ಜೀವನದಲ್ಲಿ ಅನೇಕರಿಗೆ ನೆಮ್ಮದಿ ಅನ್ನೋದೇ ಇಲ್ಲದಾಗಿದೆ. ಹೆಚ್ಚಿನವರು ಒತ್ತಡದ  ಜೀವನವನ್ನೇ (stressful Life) ನಡೆಸುತ್ತಿದ್ದಾರೆ. ಮನಸ್ಸು ನಿರಾಳವಾಗಿದ್ದರೆ ಮಾತ್ರ ಸಂತೋಷ, ನೆಮ್ಮದಿ, ಶಾಂತಿ ಜೀವನದಲ್ಲಿ ನೆಲೆಸುತ್ತದೆ. ಹಾಗಾಗಿ ಮನಸ್ಸನ್ನು ನಿರಾಳವಾಗಿಸಲು ಶಾಂತಿ ನೆಮ್ಮದಿಯನ್ನು ಪಡೆಯಲು ಹಲವರು ಸಾಕಷ್ಟು ಸರ್ಕಸ್‌ಗಳನ್ನು ಮಾಡುತ್ತಿರುತ್ತಾರೆ. ಏನೇ ಮಾಡಿದ್ರೂ ನೆಮ್ಮದಿ ಅನ್ನೋದೇ ಸಿಗುತ್ತಿಲ್ಲ ಅಂತ ಅನೇಕರು ಹೇಳುತ್ತಿರುತ್ತಾರೆ. ನೀವು ಕೂಡ ಇದೇ ರೀತಿ ಮನಸ್ಸಿನ ಶಾಂತಿ, ನೆಮ್ಮದಿಗಾಗಿ ಹಂಬಲಿಸುತ್ತಿದ್ದೀರಾ? ಹಾಗಿದ್ರೆ ಸಂಜೆಯ ಹೊತ್ತಲ್ಲಿ ತಪ್ಪದೆ ಈ ಕೆಲವು ಕೆಲಸಗಳನ್ನು ಮಾಡಿ, ಇದರಿಂದ ಖಂಡಿತವಾಗಿಯೂ ಇಡೀ ದಿನದ ಆಯಾಸ ಒತ್ತಡ ಕ್ಷಣಾರ್ಧದಲ್ಲಿ ಮಾಯವಾಗಿ ನೆಮ್ಮದಿ ಲಭಿಸುತ್ತದೆ.

ಮನಸ್ಸಿನ ಶಾಂತಿ, ನೆಮ್ಮದಿಗಾಗಿ ಸಂಜೆ ಈ ಕೆಲಸಗಳನ್ನು ಮಾಡಿ:

ಆಳವಾದ ಉಸಿರಾಟದ ವ್ಯಾಯಾಮ: ಇಡೀ ದಿನದ ಕೆಲಸದ ಒತ್ತಡದಿಂದ ಮುಕ್ತಿ ಪಡೆಯಲು ನಿತ್ಯ ಸಂಜೆ ಹೊತ್ತಲ್ಲಿ ಉಸಿರಾಟದ ವ್ಯಾಯಾಮವನ್ನು ಅಭ್ಯಾಸ ಮಾಡಿ. ಪ್ರತಿದಿನ ಸಂಜೆ 10 ರಿಂದ 15 ನಿಮಿಷಗಳ ಕಾಲ ಉಸಿರಾಟದ ವ್ಯಾಯಾಮ  ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ, ಮನಸ್ಸಿಗೆ ಶಾಂತಿ ಲಭಿಸುತ್ತದೆ.

ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ: ಸಂಜೆ ನಿಮ್ಮ ಎಲ್ಲಾ ಕೆಲಸ ಮುಗಿದ ತಕ್ಷಣ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಉಗುರು ಬೆಚ್ಚಗಿನ ನೀರಿನ ಸ್ನಾನವು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ, ಒತ್ತಡವನ್ನು ನಿವಾರಿಸುತ್ತದೆ ಮತ್ತು ಮನಸ್ಸನ್ನು ನಿರಾಳಗೊಳಿಸುತ್ತದೆ.

ಸಾಮಾಜಿಕ ಮಾಧ್ಯಮದಿಂದ ದೂರವಿರಿ: ಕೆಲಸದಿಂದ ಮನೆಗೆ ಬಂದ ತಕ್ಷಣ ಸೋಷಿಯಲ್‌ ಮೀಡಿಯಾ ನೋಡುತ್ತಾ, ಮೊಬೈಲ್‌ ಸ್ಕ್ರೋಲ್‌ ಮಾಡುತ್ತಾ ಟೈಮ್‌ ವೇಸ್ಟ್‌ ಮಾಡುವ ಬದಲು ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತಾ ಸ್ವಲ್ಪ ಸಮಯ ಕಳೆಯಿರಿ, ಮನೆ ಕೆಲಸಗಳನ್ನು ಮಾಡಿ. ಈ ಅಭ್ಯಾಸ ಖಂಡಿತವಾಗಿಯೂ ನಿಮ್ಮ ಮನಸ್ಸಿಗೆ ನೆಮ್ಮದಿ ನೀಡುತ್ತದೆ.

ವಾಕಿಂಕ್‌ ಮಾಡಿ: ಸಂಜೆ ಕಚೇರಿಯಿಂದ ಬಂದ ನಂತರ ಮೊಬೈಲ್‌ ನೋಡುವ ಬದಲು ವಾಕಿಂಗ್‌ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. 15 ರಿಂದ 20 ನಿಮಿಷಗಳ ಕಾಲ ವಾಕಿಂಗ್‌ ಮಾಡುವುದರಿಂದ ದೇಹದಲ್ಲಿ ಸಂತೋಷದ ಹಾರ್ಮೋನ್‌ ಆದ ಎಂಡಾರ್ಫಿನ್‌ ಬಿಡುಗಡೆಯಾಗುತ್ತದೆ. ಇದರಿಂದ ಮನಸ್ಸಿಗೆ ಸಂತೋಷ ದೊರೆಯುತ್ತದೆ.

ಡೈರಿ ಬರೆಯುವ ಅಭ್ಯಾಸ ಬೆಳೆಸಿಕೊಳ್ಳಿ: ನೀವು ದಿನವಿಡೀ ಏನೆಲ್ಲಾ ಮಾಡಿದ್ದೀರಿ, ನಾಳೆ ಏನೆಲ್ಲಾ ಮಾಡಬೇಕು ಎಂಬುದನ್ನು ಸಂಜೆ ಹೊತ್ತಲ್ಲಿ ಡೈರಿಯಲ್ಲಿ ಬರೆಯಿರಿ. ಡೈರಿ ಬರೆಯುವ ಅಭ್ಯಾಸ ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ.

ಗಿಡಮೂಲಿಕಾ ಚಹಾ ಸೇವಿಸಿ: ಸಂಜೆ ಒಂದು ಲೋಟ ಗಿಡಮೂಲಿಕಾ ಚಹಾ ಸೇವನೆ ಮಾಡಿ. ಇದು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ರಾತ್ರಿ ಉತ್ತಮ ನಿದ್ರೆ ಪಡೆಯಲು ನಿಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ದೀರ್ಘಾಯುಷ್ಯ ನಿಮ್ಮದಾಗಬೇಕೇ? ಹಾಗಿದ್ರೆ ಪಾಲಿಸಿ ಸಲಹೆ

ಪುಸ್ತಕ ಓದಿ: ಸಂಜೆ ಕಚೇರಿಯಿಂದ ಬಂದ ನಂತರ ಕೆಲಸಗಳನ್ನೆಲ್ಲಾ ಮುಗಿಸಿ, ಒಂದೊಳ್ಳೆ ಪುಸ್ತಕವನ್ನು ಓದಿ. ಈ ರೀತಿ ಪುಸ್ತಕವನ್ನು ಓದುವುದರಿಂದ ಒತ್ತಡವೆಲ್ಲಾ ನಿವಾರಣೆಯಾಗಿ ಮನಸ್ಸು ನಿರಾಳವಾಗುತ್ತದೆ.

ನಿಮ್ಮ ನೆಚ್ಚಿನ ಪದ್ಯ ಕೇಳಿ: ಸಂಜೆ ಸ್ವಲ್ಪ ಹೊತ್ತು ಶಾಂತವಾಗಿ ಕುಳಿತು ನಿಮ್ಮ ನೆಚ್ಚಿನ ಹಾಡುಗಳನ್ನು ಕೇಳಿ. ಹೀಗೆ ಹಾಡುಗಳನ್ನು ಕೇಳುವುದರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ಸಿಗುತ್ತದೆ. ಇಡೀ ದಿನದ ಒತ್ತಡ ನಿವಾರಣೆಯಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಮಚಂದ್ರ ರಾವ್ ಕೇಸ್​​​​: ವೈರಲ್​ ಆಗಿರುವ ವಿಡಿಯೋ ಅಸಲಿ ಎಂದ ತನಿಖಾ ತಂಡ

ಬೆಂಗಳೂರು, ಮಾರ್ಚ್​​ 19: ಸಮವಸ್ತ್ರದಲ್ಲಿಯೇ ಕಚೇರಿಯಲ್ಲಿ ಮಹಿಳೆಯೋರ್ವರ ಜೊತೆ ಅನುಚಿತವಾಗಿ ಕೆ. ರಾಮಚಂದ್ರ ರಾವ್ ವರ್ತಿಸಿರುವ ವಿಡಿಯೋ ವೈರಲ್​​ ಪ್ರಕರಣ ಸಂಬಂಧ ಮಹತ್ವದ ಬೆಳವಣಿಗೆ ನಡೆದಿದೆ. ವಿಡಿಯೋಗಳು ಸಂಪೂರ್ಣವಾಗಿ ನಿಜವಾಗಿದ್ದು, ಅವು ಡೀಪ್‌ಫೇಕ್, AI ನಿರ್ಮಿತ ಅಥವಾ ಯಾವುದೇ ರೀತಿಯಲ್ಲಿ ಎಟಿಟ್​​ ಆಗಿರುವ ದೃಶ್ಯಗಳಲ್ಲ ಎಂಬುದು ದೃಢ ಪಟ್ಟಿದೆ. ಈ ಕುರಿತು ತನಿಖೆ ನಡೆಸಲು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್. ಹಿತೇಂದ್ರ ನೇತೃತ್ವದಲ್ಲಿ ರಾಜ್ಯ ಸರ್ಕಾರ ನೇಮಿಸಿದ್ದ 4 ಮಂದಿ ಐಪಿಎಸ್​​ ಅಧಿಕಾರಿಗಳ ತಂಡ 100 ಪುಟಗಳ ವರದಿ ನೀಡಿದೆ.

ವರದಿಯಲ್ಲಿ ಏನಿದೆ?

  • ವಿಡಿಯೋಗಳು ನಿಜವಾಗಿವೆ, ಎಡಿಟ್​​ ಆಗಿಲ್ಲ
  • ಫಾರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (FSL) ದೃಢೀಕರಣದಂತೆ ವಿಡಿಯೋಗಳಲ್ಲಿ ಯಾವುದೇ ಮಾರ್ಪಾಡಾಗಿಲ್ಲ
  • ರಾವ್ ಅವರ ಬೆಳಗಾವಿ ಅವಧಿಯಲ್ಲಿ ಕೆಲಸ ಮಾಡಿದ್ದ ಸಿಬ್ಬಂದಿ (ಚಾಲಕರು, ಕಚೇರಿ ಸಿಬ್ಬಂದಿ) ಮಹಿಳೆಯರನ್ನು ಗುರುತಿಸಿದ್ದು, ಅವರು ರಾವ್ ಅವರ ಖಾಸಗಿ ಕಚೇರಿಗೆ ಹಲವು ಬಾರಿ ಭೇಟಿ ನೀಡಿದ್ದನ್ನು ದೃಢಪಡಿಸಿದ್ದಾರೆ
  • ಮೂಲಗಳ ಪ್ರಕಾರ, ಮಹಿಳೆಯರಲ್ಲಿ ಒಬ್ಬರು ತಮ್ಮ ಮೊಬೈಲ್‌ನಲ್ಲಿ ಈ ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಚಿತ್ರೀಕರಿಸಿದ್ದಾರೆ

ಇದನ್ನೂ ಓದಿ: ಕಚೇರಿಯಲ್ಲೇ ಮಹಿಳೆಯರ ಜತೆ ಡಿಜಿಪಿ ಸರಸ ಸಲ್ಲಾಪ: ರಾಮಚಂದ್ರ ರಾವ್​​ಗೆ ಸಂಕಷ್ಟ!

ಮಹಿಳೆಯರು ನಾಪತ್ತೆ, ಮುಂದೇನು?

ಪ್ರಕರಣದಲ್ಲಿ ಬಹು ಮುಖ್ಯವಾದ ವಿಡಿಯೋದಲ್ಲಿರುವ ಇಬ್ಬರೂ ಮಹಿಳೆಯರು ಘಟನೆ ಬೆಳಕಿಗೆ ಬಂದ ಬಳಿಕ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ. ಆದರೆ ಮುಂದಿನ ನತಿಖೆಗೆ ಅವರ ಹೇಳಿಕೆ ಅತ್ಯಂತ ಪ್ರಮುಖವಾಗಿದ್ದು, ಅವರು ತನಿಖಾ ತಂಡದ ಮುಂದೆ ಹಾಜರಾಗಲೇಬೇಕಿದೆ. ಮತ್ತೊಂದೆಡೆ ಹಿರಿಯ ಅಧಿಕಾರಿಗಳ ತಂಡದ ವರದಿ ಬಳಿಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ರಾವ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಅಧಿಕೃತ ಇಲಾಖಾ ತನಿಖೆ ಪ್ರಾರಂಭವಾಗಿದೆ. ರಾವ್ ಮೇ 31ರಂದು ನಿವೃತ್ತಿಯಾಗಲಿದ್ದಾರೆಯಾದರೂ ತನಿಖೆ ಮುಂದುವರಿದರೆ, ಅವರ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂದು ಬೆಂಗಳೂರು ನೌ ವರದಿ ಮಾಡಿದೆ.

ಇಬ್ಬರು ಮಹಿಳೆಯರೊಂದಿಗೆ ಕೆ. ರಾಮಚಂದ್ರ ರಾವ್ ಅಸಭ್ಯ ವರ್ತನೆ ನಡೆಸುತ್ತಿರುವ ದೃಶ್ಯಗಳು 2016-17ರ ಅವಧಿಯಲ್ಲಿ ಬೆಳಗಾವಿ ವಲಯದ ಐಜಿಪಿ ಕಚೇರಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿದೆ.  ಇನ್ನು ವಿಡಿಯೋಗಳು ಹೊರಬಂದಾಗ, ರಾವ್ ಅವುಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದರು. ಅವು ಮಾರ್ಫ್ ಮಾಡಲ್ಪಟ್ಟಿದ್ದು, AI ಮೂಲಕ ಸೃಷ್ಟಿಸಲ್ಪಟ್ಟಿವೆ. ತಮ್ಮ ವಿರುದ್ಧ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿ, ಕಾನೂನು ಕ್ರಮ ಕೈಗೊಳ್ಳುವುದಾಗಿ ಕೂಡ ಎಚ್ಚರಿಕೆ ನೀಡಿದ್ದರು. ಆದರೆ ಈಗ ಆ ವಿಡಿಯೋಗಳ ಅಸಲೀಯತ್ತು ಹೊರ ಬಂದಿರೋದು ಅಮಾನತುಗೊಂಡಿರುವ ಡಿಜಿಪಿಗೆ ಸಂಕಷ್ಟ ತಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಚಿನ್ನದ ಬೆಲೆ ಸತತವಾಗಿ ಇಳಿಯುತ್ತಿರುವುದು ಯಾಕೆ? ಮತ್ತೆ ಯಾವಾಗ ಏರಿಕೆಯಾಗುತ್ತೆ?

ನವದೆಹಲಿ, ಮಾರ್ಚ್ 19: ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver Rates) ಕಳೆದ ಕೆಲ ವಾರಗಳಿಂದ ಕುಸಿತ ಕಾಣುತ್ತಿವೆ. ಭೌತಿಕ ಚಿನ್ನ ಮತ್ತು ಬೆಳ್ಳಿ ಮಾತ್ರವಲ್ಲ, ಎಂಸಿಎಕ್ಸ್​ನಲ್ಲಿ ಗೋಲ್ಡ್ ಫ್ಯೂಚರ್ಸ್ ದರ ಒಂದು ತಿಂಗಳ ಕನಿಷ್ಠಕ್ಕೆ ಜಾರಿದೆ. ಗೋಲ್ಡ್ ಇಟಿಎಫ್, ಸಿಲ್ವರ್ ಇಟಿಎಫ್​ಗಳೂ ಕೂಡ ಕುಸಿತ ಕಾಣುತ್ತಿವೆ. ಗುರುವಾರ ಚಿನ್ನದ ಬೆಲೆ ಸತತ ಏಳನೇ ಬಾರಿ ಇಳಿಕೆಯಾಗಿದೆ. ಆರು ವಾರಗಳ ಕನಿಷ್ಠ ಮಟ್ಟ ತಲುಪಿದೆ. ಚಿನ್ನ, ಬೆಳ್ಳಿ ಬೆಲೆಗಳ ಕುಸಿತಕ್ಕೆ ಎರಡು ಸಂಭಾವ್ಯ ಕಾರಣಗಳು ಈ ಕೆಳಕಂಡಂತಿವೆ:

1. ಅಮೆರಿಕದ ಆರ್ಥಿಕತೆ ಬಗ್ಗೆ ಫೆಡರಲ್ ರಿಸರ್ವ್ ಮಾಡಿದ ಅಂದಾಜು

ಅಮೆರಿಕದ ಸೆಂಟ್ರಲ್ ಬ್ಯಾಂಕ್ ಎನಿಸಿದ ಫೆಡರಲ್ ರಿಸರ್ವ್ ಈ ಬಾರಿಯೂ ತನ್ನ ಬಡ್ಡಿದರವನ್ನು ಕಡಿತಗೊಳಿಸಿಲ್ಲ. ಮುಂಬರುವ ದಿನಗಳಲ್ಲೂ ಹೆಚ್ಚಿನ ಕಡಿತ ಇರದು ಎನ್ನುವ ಸುಳಿವು ಕೊಟ್ಟಿದೆ.

ಇದನ್ನೂ ಓದಿ: ಷೇರು ಮಾರುಕಟ್ಟೆ ಭಾರೀ ಕುಸಿತ; ಸಿಕ್ಕಾಪಟ್ಟೆ ನಷ್ಟ ಕಂಡ ಸೆನ್ಸೆಕ್ಸ್, ನಿಫ್ಟಿ; ಈ ಪರಿ ಕುಸಿತಕ್ಕೆ ಕಾರಣಗಳೇನು?

ಆದರೆ, ಅಮೆರಿಕದ ಹಣದುಬ್ಬರ ಏರಬಹುದು ಎಂದು ಹೇಳಿರುವುದು ಮಾರುಕಟ್ಟೆಗೆ ನೆಗಟಿವ್ ಎನಿಸಿದೆ. ಹಣದುಬ್ಬರ ಹೆಚ್ಚಿದರೆ ಫೆಡರಲ್ ರಿಸರ್ವ್ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆ ಕ್ಷೀಣಿಸುತ್ತದೆ. ಹೀಗಾಗಿ, ಚಿನ್ನದ ಮೇಲಿನ ಹೂಡಿಕೆಗಳನ್ನು ಕೈಬಿಡುತ್ತಿರುವ ಟ್ರೆಂಡ್ ಇದೆ.

2. ಅಮೆರಿಕದ ಡಾಲರ್ ಇಂಡೆಕ್ಸ್ ಬಲ

ಅಮೆರಿಕದ ಡಾಲರ್ ಇಂಡೆಕ್ಸ್ ಬಲಗೊಳ್ಳುತ್ತಿದೆ. ಇದು ಚಿನ್ನವನ್ನು ದುರ್ಬಲಗೊಳಿಸುತ್ತಿರಬಹುದು. ತೈಲ ಬೆಲೆ ಹೆಚ್ಚಿರುವುದರಿಂದ ಡಾಲರ್ ಬಲ ಮತ್ತಷ್ಟು ಹೆಚ್ಚುತ್ತದೆ. ಹೀಗಾಗಿ, ಚಿನ್ನದ ಬೆಲೆ ಇಳಿಯುತ್ತಿರಬಹುದು.

ಇದನ್ನೂ ಓದಿ: ಇಂಧನ ದತ್ತಾಂಶವನ್ನು ರಾಷ್ಟ್ರೀಯ ಭದ್ರತಾ ವಿಚಾರವೆಂದು ವರ್ಗೀಕರಿಸಿದ ಸರ್ಕಾರ; ತೈಲ, ಅನಿಲ ಕ್ಷೇತ್ರದ ಸಂಸ್ಥೆಗಳಿಗೆ ಹೊಸ ಜವಾಬ್ದಾರಿ

ಚಿನ್ನದ ಬೆಲೆ ಕುಸಿತ ಯಾವಾಗ ನಿಲ್ಲುತ್ತೆ?

ಚಿನ್ನದ ಕುಸಿತಕ್ಕೆ ಹೊಸ ಕಾರಣಗಳ ಸಂಭಾವ್ಯತೆ ಇಲ್ಲದೇ ಇರುವುದು, ಜಾಗತಿಕ ಅನಿಶ್ಚಿತ ಪರಿಸ್ಥಿತಿ ಮುಂದುವರಿಯುತ್ತಿರುವುದು ಚಿನ್ನಕ್ಕೆ ಮತ್ತೆ ಬೇಡಿಕೆ ಕುದುರುವ ಅವಕಾಶ ಇದೆ. ಈ ವರ್ಷದೊಳಗೆ ಒಮ್ಮೆ ಬಡ್ಡಿದರ ಕಡಿತಗೊಳಿಸುವುದಾಗಿ ಫೆಡರಲ್ ರಿಸರ್ವ್ ಸುಳಿವು ಕೊಟ್ಟಿರುವುದರಿಂದ ಮುಂಬರುವ ದಿನಗಳಲ್ಲಿ ಬೆಲೆ ಏರುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಚಿತ್ರದುರ್ಗದಲ್ಲಿ ಐವರ ಮೇಲೆ ಆ್ಯಸಿಡ್ ದಾಳಿ; ಮಚ್ಚಿನಿಂದ ಹಲ್ಲೆ ಮಾಡಿ ವ್ಯಕ್ತಿ ಪರಾರಿ

ಚಿತ್ರದುರ್ಗ, ಮಾರ್ಚ್​ 19: ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ (Attack) ಮಾಡಿ ಬಳಿಕ ಮನೆ ಮಂದಿಯ ಮೇಲೆ ಆ್ಯಸಿಡ್ ದಾಳಿ (Acid Attack) ಮಾಡಿ ವ್ಯಕ್ತಿಯೋರ್ವ ಪರಾರಿ ಆಗಿರುವಂತಹ ಘಟನೆ ಚಿತ್ರದುರ್ಗದ ಮಾಳಪ್ಪನಹಟ್ಟಿಯಲ್ಲಿ ನಡೆದಿದೆ. ಸುಹೈಲ್ ಭಾಷಾನಿಂದ ದುಷ್ಕೃತ್ಯ ಎಸಗಲಾಗಿದೆ. ಘಟನೆಯಲ್ಲಿ ಮಹಿಳೆ ತಾಸಿನಾ ಬಾನು ಸೇರಿದಂತೆ ಆಕೆಯ ಸಹೋದರಿ ನೇಹಾ, ಪುತ್ರಿ ಇಕ್ರಾ, ನಗ್ಮಾ ನಾಯ್ಕ್ ಮೇಲೆ ಆ್ಯಸಿಡ್ ದಾಳಿ ಮಾಡಲಾಗಿದೆ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು? 

ತಾಸಿನಾ ಬಾನು ಮತ್ತು ಸುಹೈಲ್ ಭಾಷಾ ಪ್ರೀತಿಸಿ ಮದುವೆಯಾಗಿದ್ದರು. ಚಿತ್ರದುರ್ಗದ ನೆಹರು ನಗರದ ನಿವಾಸಿ ಸುಹೈಲ್ ಭಾಷಾ ಆಟೋ ಚಾಲಕ. ಆದರೆ ಪತಿಯ ಕಿರುಕುಳದಿಂದ ಬೇಸತ್ತು ತಾಸಿನಾ ಕೆಲವು ತಿಂಗಳ ಹಿಂದೆ ಪತಿಯನ್ನ ತೊರೆದು ಬೆಂಗಳೂರಿಗೆ ಬಂದಿದ್ದರು. ರಂಜಾನ್​​ ಹಬ್ಬಕ್ಕೆಂದು ಇತ್ತ ಚಿತ್ರದುರ್ಗದಲ್ಲಿರುವ ತನ್ನ ಸಹೋದರಿಯ ಮನೆಗೆ ಬಂದಿದ್ದರು. ಈ ವೇಳೆ ಸುಹೈಲ್ ಭಾಷಾ ದುಷ್ಕೃತ್ಯ ಮೆರೆದಿದ್ದಾರೆ. ತನ್ನೊಂದಿಗಿನ ಸಂಬಂಧ ಕಡಿದುಕೊಂಡಿದ್ದಕ್ಕೆ ಕೃತ್ಯವೆಸಗಲಾಗಿದೆ ಎನ್ನಲಾಗುತ್ತಿದೆ.

ಆಸ್ತಿ ವಿಚಾರಕ್ಕೆ ಅಣ್ಣನಿಂದ ತಂಗಿಯ ಬರ್ಬರ ಕೊಲೆ

ಆಸ್ತಿ ವಿಚಾರಕ್ಕೆ ಅಣ್ಣನಿಂದ ತಂಗಿಯ ಬರ್ಬರ ಕೊಲೆ ನಡೆದಿರುವಂತಹ ಘಟನೆ ಧಾರವಾಡ ತಾಲೂಕಿನ ಅಮ್ಮಿನಭಾವಿಯಲ್ಲಿ ನಡೆದಿದೆ. ತಂಗಿ ಶಿವಕ್ಕ(45) ರನ್ನ ಅಣ್ಣ ಹನುಮಂತ ಯಲಿವಾಳ ಮಾರಕಾಸ್ತ್ರದಿಂದ ಕೊಚ್ಚಿ ಹತ್ಯೆಗೈದಿದ್ದಾರೆ.

ಇದನ್ನೂ ಓದಿ: ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಇರಿದು ಭೀಕರವಾಗಿ ಕೊಲೆ: ಭಾವಿ ಪತಿ ಅನುಮಾಕ್ಕೆ ಅಪ್ರಾಪ್ತೆ ಬಲಿ

ತಂದೆಯ ಆಸ್ತಿಯಲ್ಲಿ ನನಗೂ ಪಾಲಿದೆ ಎನ್ನುತ್ತಿದ ಶಿವಕ್ಕ. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಕೂಡ ನಡೆದಿದೆ. ಜಮೀನು ಪೂಜೆಗಾಗಿ ಹೋದಾಗ ಮರ್ಡರ್ ಮಾಡಲಾಗಿದೆ. ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಆಲಿಕಲ್ಲು ಮಳೆಗೆ 25ಕ್ಕೂ ಹೆಚ್ಚು ಕುರಿಗಳು ಸಾವು

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಯಂಡಿಗೇರಿ ಗ್ರಾಮದಲ್ಲಿ ಆಲಿಕಲ್ಲು ಮಳೆಗೆ 25ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವಂತಹ ದಾರುಣ ಘಟನೆಯೊಂದು ನಡೆದಿದೆ. ಹುಸೇನಸಾಬ್ ಬಾಂಗದ ಎಂಬುವರಿಗೆ ಕುರಿಗಳು ಮೃತಪಟ್ಟಿವೆ. ಸೂಕ್ತ ಪರಿಹಾರ ನೀಡುವಂತೆ ಕುರಿಗಾಹಿ ಹುಸೇನಸಾಬ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link