ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಆದರೆ ಅವರು ಆಹಾರಪ್ರಿಯೆ ಕೂಡ ಹೌದು. ದೆಹಲಿಗೆ ತೆರಳಿದ ಅವರು ಡಯೆಟ್ ಮರೆತು ತಮ್ಮ ಇಷ್ಟದ ತಿಂಡಿ ಸೇವಿಸಿದ್ದಾರೆ. ತಟ್ಟೆ ತುಂಬ ಊಟ ಹಾಕಿಸಿಕೊಂಡಿರುವ ಈ ವಿಡಿಯೋವನ್ನು ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದೆಹಲಿಯಲ್ಲಿ ಮೇಘಾಲಯದ ಮೋಮೋಸ್ (Meghalaya Momos) ತಿಂದು ಅವರು ಎಂಜಾಯ್ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆ ಸಿನಿಮಾಗಳಲ್ಲಿ ಕೂಡ ರಾಗಿಣಿ ದ್ವಿವೇದಿ ಅವರು ಬ್ಯುಸಿ ಆಗಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆಯಲ್ಲಿ ಅವರು ಸಕ್ರಿಯರಾಗಿದ್ದಾರೆ. ಈ ರೀತಿಯ ಅನೇಕ ವಿಡಿಯೋಗಳನ್ನು ಅವರು ಅಭಿಮಾನಿಗಳಿಗಾಗಿ ಪೋಸ್ಟ್ ಮಾಡುತ್ತಾರೆ.
ಬೆಂಗಳೂರು, ಮಾರ್ಚ್ 12: ವಿಧಾನಸೌಧದಲ್ಲಿ ಇಂದು ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಈ ಸಂಪುಟ ಸಭೆಯಲ್ಲಿ ಒಟ್ಟು 28 ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಮಂಡ್ಯದ ಮೈಶುಗರ್ ಕಾರ್ಖಾನೆ ದುರಸ್ತಿ ಸೇರಿದಂತೆ 76 ಮೌಲಾನಾ ಆಜಾದ್ ಆಂಗ್ಲ ಮಾದರಿ ಶಾಲೆಗಳನ್ನ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಣಗೊಳಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
813 ಕೋಟಿ ರೂ. ವೆಚ್ಚದಲ್ಲಿ ಅಂತಾಷ್ಟ್ರೀಯ ಮಟ್ಟದ ಕ್ರೀಡಾಂಗಣ
ಕೆಎಚ್‌ಬಿ ಸೂರ್ಯಸಿಟಿಯಲ್ಲಿ ಅಂತಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮಹತ್ವದ ಅನುಮೋದನೆ ನೀಡಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಸೂರ್ಯನಗರದಲ್ಲಿ ಸುಮಾರು 75 ಎಕರೆ ಜಮೀನಿನಲ್ಲಿ ಸುಮಾರು 813 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಲು ತೀರ್ಮಾನಿಸಲಾಗಿದೆ.
ಕ್ರೀಡಾಂಗಣದ ಸುತ್ತಮುತ್ತ ವಾಣಿಜ್ಯ ಮಳಿಗೆಗಳು ಹಾಗೂ ಇತರೆ ಕಟ್ಟಡಗಳನ್ನು ನಿರ್ಮಿಸುವ ಯೋಜನೆಯೂ ರೂಪಿಸಲಾಗಿದೆ. ಈ ಕಟ್ಟಡ ಕಾಮಗಾರಿಗಳ ಪರಿಷ್ಕೃತ ವೆಚ್ಚದ ವಿವರಗಳನ್ನು ಸಿದ್ಧಪಡಿಸಿ ಮುಂದಿನ ಸಚಿವ ಸಂಪುಟ ಸಭೆಗೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಮಹತ್ವದ ಹೆಜ್ಜೆಯಾಗಲಿದೆ.
682 ಕೋಟಿ ರೂ ವೆಚ್ಚದಲ್ಲಿ ಶಾಲೆಗಳ ಉನ್ನತೀಕರಣ
76 ಮೌಲಾನಾ ಆಜಾದ್ ಆಂಗ್ಲ ಮಾದರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಣಗೊಳಿಸಲು ನಿರ್ಧರಿಸಲಾಗಿದೆ. 41 ಉರ್ದು ಮಾಧ್ಯಮ ಶಾಲೆ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ 682 ಕೋಟಿ ರೂ ವೆಚ್ಚದಲ್ಲಿ ಉನ್ನತೀಕರಿಸಲು ಸಂಪುಟ ಸಮ್ಮತಿಸಿದೆ.
ಇನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ನಾಲೆ ಅಭಿವೃದ್ಧಿಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಮಂಡ್ಯ ಕ್ಷೇತ್ರದ ಕಾವೇರಿ ಶಾಖಾ ನಾಲೆ, ಕೆರೆಗೋಡು ಶಾಖಾ ನಾಲೆ, ಶಿಂಷಾ ಶಾಖಾ ನಾಲೆ ಸೇರಿದಂತೆ ನಾಲ್ಕು ಕಾವೇರಿ ವಿತರಣಾ ನಾಲೆಗಳು ಮತ್ತು ಪಿಕಪ್ ನಾಲೆಗಳ ಆಧುನೀಕರಣಕ್ಕೆ 100 ಕೋಟಿ ರೂ ಅನುದಾನ ನೀಡಲು ಸಚಿವ ಸಂಪುಟ ಅಸ್ತು ಎಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ನವದೆಹಲಿ, ಮಾರ್ಚ್ 12: ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಿಗೆ ಇಂಧನ ಪೂರೈಕೆಗೆ ಆಯಕಟ್ಟಿನ ಸ್ಥಳವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲು ಇರಾನ್ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೆನೈ ಅವರು ಕರೆ ನೀಡಿದ್ದಾರೆ. ಹಾಗೆಯೇ, ಅಮೆರಿಕದ ಎಲ್ಲಾ ಮಿಲಿಟರಿ ನೆಲೆಗಳನ್ನು ತತ್ಕ್ಷಣವೇ ಮುಚ್ಚಬೇಕೆಂದೂ ಗಲ್ಫ್ ದೇಶಗಳಿಗೆ ಅವರು ಅಪ್ಪಣೆ ಮಾಡಿದ್ದಾರೆ. ‘ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಕ್ರಮ ಮುಂದುವರಿಯುತ್ತದೆ’ ಎಂದು ಮೊಜ್ತಬಾ ಹೇಳಿದ್ದಾರೆ.
ವೈರಿಗಳಿಗೆ ಹೊಸ ಶಾಕ್ ಕೊಡಲು ಇರಾನ್ ಅಣಿ…
ಇದೇ ವೇಳೆ, ಇರಾನ್ ಮುಖ್ಯಸ್ಥರು ಅಮೆರಿಕ ಮತ್ತು ಇಸ್ರೇಲ್ ದೇಶಗಳಿಗೆ ಹಾಗೂ ಗಲ್ಫ್ ರಾಷ್ಟ್ರಗಳಿಗೆ ಹೊಸ ಶಾಕ್ನ ಸುಳಿವು ಕೊಟ್ಟಿದ್ದಾರೆ. ‘ವೈರಿಗೆ ಕಡಿಮೆ ಅನುಭವ ಇರುವಂತಹ ಮತ್ತು ಬಹಳ ದುರ್ಬಲ ಇರುವಂತಹ ಇತರ ಫ್ರಂಟ್ಗಳನ್ನು ತೆರೆಯುವ ಬಗ್ಗೆ ಯೋಜಿಸುತ್ತಿದ್ದೇವೆ. ಈ ಯುದ್ಧ ಸ್ಥಿತಿ ಮುಂದುವರಿದರೆ ಅವುಗಳನ್ನು ಸಕ್ರಿಯಗೊಳಿಸಲಾಗುವುದು’ ಎಂದು ಖಮನೈ ಎಚ್ಚರಿಕೆ ಕೊಟ್ಟಿದ್ದಾರೆ.
ಇರಾನ್ನ ಹುತಾತ್ಮರ ರಕ್ತಕ್ಕೆ ಮುಯ್ಯಿ ತೀರಿಸಿಕೊಳ್ಳಲು ಈ ದೇಶ ಮರೆಯದು ಎಂದೂ ಮೊಜ್ತಬಾ ಹೇಳಿದ್ದಾರೆ. ನೆರೆಯ ದೇಶಗಳೊಂದಿಗೆ ಇರಾನ್ ಸ್ನೇಹ ಬಯಸುತ್ತದಾದರೂ ಅವಲ್ಲಿರುವ ಅಮೆರಿಕನ್ ನೆಲೆಗಳ ಮೇಲೆ ದಾಳಿ ಮುಂದುವರಿಯುವುದು ಎಂದೂ ಸ್ಪಷ್ಟಪಡಿಸಿದ್ದಾರೆ.
‘ನಮ್ಮ ಪ್ರೀತಿಯ ತಾಯ್ನಾಡಿನ ಮೇಲೆ ದಾಳಿ ಮಾಡಿ ನಮ್ಮ ಜನರನ್ನು ಕೊಂದವರ ವಿಚಾರದಲ್ಲಿ ಈ ದೇಶಗಳು (ಗಲ್ಫ್) ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಶಾಂತಿ ಮತ್ತು ಭದ್ರತೆ ಒದಗಿಸುವ ಅಮೆರಿಕದ ಭರವಸೆ ಬರೀ ಸುಳ್ಳು ಎಂಬುದು ಈ ದೇಶಗಳಿಗೆ ಈಗಾಗಲೇ ಗೊತ್ತಾಗಿದೆ. ಆ ಅಮೆರಿಕನ್ ನೆಲೆಗಳನ್ನು ಕೂಡಲೇ ಮುಚ್ಚಬೇಕು’ ಎಂದು ಇರಾನ್ ಸರ್ವೋಚ್ಚ ನಾಯಕ ಒತ್ತಾಯಿಸಿದ್ದಾರೆ.
ಯುದ್ಧ ನಿಲ್ಲಿಸಲು ಇರಾನ್ ಮೂರು ಷರತ್ತುಗಳನ್ನು ಮುಂದಿಟ್ಟಿದೆ. ಅಮೆರಿಕ ಮತ್ತು ಇಸ್ರೇಲ್ ತತ್ಕ್ಷಣವೇ ದಾಳಿ ನಿಲ್ಲಿಸಬೇಕು. ಭವಿಷ್ಯದಲ್ಲಿ ಇರಾನ್ ಮೇಲೆ ದಾಳಿಯಾಗುವುದಿಲ್ಲ ಎಂದು ಖಾತ್ರಿಪಡಿಸಬೇಕು. ದಾಳಿಯಿಂದ ಈಗಾಗಲೇ ಇರಾನ್ಗೆ ಆಗಿರುವ ನಷ್ಟವನ್ನು ಭರಿಸಿಕೊಡಬೇಕು ಎಂಬುದು ಆ ಮೂರು ಷರತ್ತುಗಳು.
‘ಒಂದು ವಿಚಾರ ಒತ್ತಿಹೇಳಲು ಇಷ್ಟಪಡುತ್ತೇನೆ. ಶತ್ರುವಿನಿಂದ ನಾವು ಪರಿಹಾರ ಪಡೆದೇ ಪಡೆಯುತ್ತೇವೆ. ಪರಿಹಾರಕ್ಕೆ ಅವರು ಒಪ್ಪಲಿಲ್ಲವೆಂದರೆ ಅವರ ಆಸ್ತಿಗಳಿಂದಲೇ ನಮಗೆ ಬೇಕಾದ್ದನ್ನು ಪಡೆಯುತ್ತೇವೆ. ಅದು ಸಾಧ್ಯವಾಗದಿದ್ದಲ್ಲಿ ಅವರ ಆಸ್ತಿಗಳನ್ನು ತಕ್ಕ ಪ್ರಮಾಣದಲ್ಲಿ ನಾಶ ಮಾಡುತ್ತೇವೆ’ ಎಂದು ಮೊಜ್ತಬಾ ಖಮೇನಿ ತಿಳಿಸಿದ್ದಾರೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಯಾಗ್‌ರಾಜ್ ಕುಂಭಮೇಳದ ಸಂದರ್ಭದಲ್ಲಿ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆಗಿ ಹೊರಹೊಮ್ಮಿದ್ದ 18 ವರ್ಷದ ಮೊನಾಲಿಸಾ ಭೋಸ್ಲೆ (Monalisa Bhosle) ತಮ್ಮ ಪ್ರಿಯಕರ ಫರ್ಮಾನ್ ಖಾನ್ ಅವರೊಂದಿಗೆ ಕೇರಳದಲ್ಲಿ ವಿವಾಹವಾಗಿದ್ದಾರೆ. ಕೇರಳದ ಪೂವಾರ್ ಸಮೀಪದ ಅರುಮನೂರಿನ ನಯನಾರ್ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಈ ಜೋಡಿ ಮದುವೆಯಾಗಿದೆ. ಈ ಮದುವೆ ಬಳಿಕ ಮೊನಾಲಿಸಾ ಬೋಸ್ಲೆ ಅವರು ಇಸ್ಲಾಂ (Islam) ಧರ್ಮಕ್ಕೆ ಮತಾಂತರ ಆಗುತ್ತಾರಾ ಎಂಬ ಪ್ರಶ್ನೆಗೆ ಕೆಲವರಿಗೆ ಮೂಡಿದೆ. ಅದಕ್ಕೆ ಈ ಜೋಡಿ ಉತ್ತರ ನೀಡಿದೆ.
ಮದುವೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೊನಾಲಿಸಾ, ‘ನಾವು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದೇವೆ. ನಾನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿಲ್ಲ. ಹಾಗಾಗಿ ಇದು ಲವ್ ಜಿಹಾದ್ ಅಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಹಣೆಯ ಮೇಲೆ ಸಿಂಧೂರ ಧರಿಸಿದ್ದ ಅವರು, ‘ಫರ್ಮಾನ್ ಈ ಮದುವೆಗೆ ಮೊದಲು ಒಪ್ಪಿರಲಿಲ್ಲ. ನಾನೇ ಒತ್ತಾಯ ಮಾಡಿ ಮದುವೆ ಆಗುವಂತೆ ಮಾಡಿದೆ’ ಎಂದು ಹೇಳಿಕೆ ನೀಡಿದ್ದಾರೆ.
ಈ ವೇಳೆ ಫರ್ಮಾನ್ ಖಾನ್ ಮಾತನಾಡಿ, ‘ನಾವಿಬ್ಬರೂ ಕಲಾವಿದರು. ನಾವು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ. ಪ್ರೀತಿಯಲ್ಲಿ ಧರ್ಮ ಬದಲಾಯಿಸುವ ಅಗತ್ಯವಿಲ್ಲ’ ಎಂದಿದ್ದಾರೆ. ಆ ಮೂಲಕ ತಮ್ಮ ಪತ್ನಿ ಮೊನಾಲಿಸಾ ಭೋಸ್ಲೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವುದಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಈ ಜೋಡಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಆಗುತ್ತಿದೆ.
ಮೊನಾಲಿಸಾ ಅವರು ಕೇರಳದಲ್ಲಿ ಚಿತ್ರೀಕರಣಕ್ಕಾಗಿ ಬಂದಿದ್ದ ಸಂದರ್ಭದಲ್ಲಿ ರಕ್ಷಣೆ ಕೋರಿ ತಿರುವನಂತಪುರಂ ಪೊಲೀಸರನ್ನು ಸಂಪರ್ಕಿಸಿದ್ದರು. ತಂದೆ ತನ್ನನ್ನು ಬಲವಂತವಾಗಿ ಊರಿಗೆ ಕರೆದೊಯ್ದು, ಸೋದರ ಸಂಬಂಧಿಯೊಂದಿಗೆ ಮದುವೆ ಮಾಡಲು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದ್ದರು. ‘ನನಗೆ ನನ್ನ ಸೋದರ ಸಂಬಂಧಿಯನ್ನು ಮದುವೆಯಾಗಲು ಇಷ್ಟವಿಲ್ಲ, ಅದಕ್ಕಾಗಿಯೇ ನಾನು ಪ್ರೀತಿಸಿದವನ ಜೊತೆ ಮದುವೆಯಾಗಿದ್ದೇನೆ’ ಎಂದು ಅವರು ಪೊಲೀಸರ ಬಳಿ ಹೇಳಿಕೊಂಡಿದ್ದರು.
ಮೊನಾಲಿಸಾ ವಯಸ್ಕಳಾ ಅಥವಾ ಅಪ್ರಾಪ್ತಳಾ ಎಂಬ ಗೊಂದಲವಿತ್ತು. ಆದರೆ ಸುದ್ದಿಗೋಷ್ಠಿಯಲ್ಲಿ ತಮ್ಮ ಜನ್ಮ ದಾಖಲೆಗಳನ್ನು ಪ್ರದರ್ಶಿಸಿದ ಅವರು, ತಮಗೆ ಈಗಷ್ಟೇ 18 ವರ್ಷ ತುಂಬಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ‘ಅವರು ವಯಸ್ಕರಾಗಿರುವುದರಿಂದ ತಮ್ಮ ಆಯ್ಕೆಯಂತೆ ಬದುಕುವ ಹಕ್ಕಿದೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು, (ಮಾರ್ಚ್ 12): ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕರ್ನಾಟಕದ (Karnataka) ವಿವಿಧ ಜೈಲಿನಲ್ಲಿರುವ ಒಟ್ಟು 31 ಕೈದಿಗಳ (Prisoners) ಬಿಡುಗಡೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕೈದಿಗಳನ್ನು ಅವರ ‘ಸನ್ನಡತೆ’ಯ ಆಧಾರದ ಮೇಲೆ ಅವಧಿಪೂರ್ವವಾಗಿ ಬಿಡುಗಡೆಗೊಳಿಸಿ ಇಂದು (ಮಾರ್ಚ್ 12) ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಜೈಲಿನಲ್ಲಿ ಉತ್ತಮ ನಡವಳಿಕೆ ತೋರಿದ ಕೈದಿಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಅವರಿಗೆ ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವ ಮಾನವೀಯ ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ನಾಳೆ (ಮಾರ್ಚ್ 13) 31 ಕೈದಿಗಳು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಮಹಾನಿರ್ದೇಶಕರು ಸಲ್ಲಿಸಿದ ಪ್ರಸ್ತಾವನೆಯನ್ನು ಆಧರಿಸಿ, ಒಳಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಒಟ್ಟು 54 ಜೀವಾವಧಿ ಶಿಕ್ಷೆ ಕೈದಿಗಳ ಪ್ರಕರಣಗಳನ್ನು ಕೂಲಂಕಷವಾಗಿ ಚರ್ಚಿಸಲಾಗಿದ್ದು, ಸಮಿತಿಯು ಪರಿಶೀಲಿಸಿದ 54 ಪ್ರಕರಣಗಳ ಪೈಕಿ ಬಿಡುಗಡೆಗೆ 31 ಮಂದಿಯನ್ನು ಶಿಫಾರಸ್ಸು ಮಾಡಲಾಗಿತ್ತು. ಇನ್ನುಳಿದಂತೆ 21 ಕೈದಿಗಳ ಬಿಡುಗಡೆ ಅರ್ಜಿಯನ್ನು ತಿರಸ್ಕರಿಸಲಾಗಿದೆ. 2 ಪ್ರಕರಣಗಳು ಕೇಂದ್ರ ಗೃಹ ಸಚಿವಾಲಯದ ಅನುಮೋದನೆಗಾಗಿ ಬಾಕಿ ಉಳಿದಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಸಂವಿಧಾನವು ರಾಜ್ಯಪಾಲರಿಗೆ ಶಿಕ್ಷೆಗೊಳಗಾದ ಕೈದಿಗಳ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವ ಅಥವಾ ಕ್ಷಮಾದಾನ ನೀಡುವ ವಿಶೇಷ ಅಧಿಕಾರವನ್ನು ನೀಡಿದೆ. ದೀರ್ಘಕಾಲ ಜೈಲುವಾಸ ಅನುಭವಿಸಿ, ಪಶ್ಚಾತ್ತಾಪದೊಂದಿಗೆ ಉತ್ತಮ ನಡವಳಿಕೆ ರೂಢಿಸಿಕೊಂಡ ಕೈದಿಗಳನ್ನು ಸಮಾಜಕ್ಕೆ ಮರಳಿಸುವುದು ಹಾಗೂ ಅವರ ಕುಟುಂಬದ ಪುನರ್ವಸತಿಗೆ ಅವಕಾಶ ಕಲ್ಪಿಸುವುದು ಸರ್ಕಾರದ ಪ್ರಮುಖ ನೀತಿಗಳಲ್ಲಿ ಒಂದಾಗಿದೆ. ಈ ಆಶಯದಡಿಯೇ ಬಿಡುಗಡೆ ಮಾಡಲಾಗುತ್ತಿದೆ.
ದಾವಣಗೆರೆ, ಮಾರ್ಚ್ 12: ಹರಿಹರದ ಪಂಚಮಸಾಲಿ ಮಠ (harihara panchamasali peetha) ರಾಜ್ಯದ ಪ್ರತಿಷ್ಠಿತ ಮಠ. ಈ ಮಠಕ್ಕೆ ಕೋಟ್ಯಂತರ ಭಕ್ತರಿದ್ದಾರೆ. ನಿತ್ಯ ದಾಸೋಹ ಕೂಡ ಶುರುವಾಗಿದೆ. ರಾಜ್ಯದ ಬಹುತೇಕ ಕಡೆ ಈ ಮಠದ ಆಸ್ತಿ ಇದೆ. ಇಂತಹ ಮಠದಲ್ಲಿ ಇದೀಗ ಲೆಕ್ಕ ಪತ್ರ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಕೋಟ್ಯಂತರ ರೂ ಅವ್ಯವಹಾರ ನಡೆದಿದೆ. ಮಾತಿನ ಚಕಮಕಿ ವೇಳೆ ನೂಕಾಟ ತಳ್ಳಾಟ ಕೂಡ ನಡೆದಿದೆ. ಮೇಲಾಗಿ ಸರ್ಕಾರದಿಂದ ಬಂದ ಹಣವಾದರೂ ಎಲ್ಲಿ ಎಂಬ ಹತ್ತು ಹಲವಾರು ಪ್ರಶ್ನೆಗೆ ಉತ್ತರಿಸಿದೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ.
ರಾಜ್ಯದ ಪ್ರತಿಷ್ಠಿತ ಹರಿಹರದ ಪಂಚಮಸಾಲಿ ಮಠದಲ್ಲಿ ಘಟನೆ ನಡೆದಿದೆ. ಇದರಲ್ಲಿ ಆರೋಪಿ ಸ್ಧಾನದಲ್ಲಿ ಇರುವರು ದಾವಣಗೆರೆಯ ಬಿ.ಎಸ್ ಚನ್ನಬಸಪ್ಪ ಆ್ಯಂಡ್ ಸನ್ಸ್ ಮಾಲೀಕ ಹಾಗೂ ಮಠದ ಪ್ರಧಾನ ಧರ್ಮದರ್ಶಿ ಬಿಸಿ ಉಮಾಪತಿ, ಬಿಜೆಪಿ ಮುಖಂಡ ಚಂದ್ರಶೇಖರ ಪೂಜಾರ ಹಾಗೂ ಕಾರ್ಯದರ್ಶಿ ಕೆಎಂ ಜ್ಯೋತಿ ಪ್ರಕಾಶ್.
ಮಾರ್ಚ್ 10ರಂದು ರಾತ್ರಿ 7ರಿಂದ9 ಗಂಟೆ ವೇಳೆಗೆ ಗಲಾಟೆ ನಡೆದಿದೆ. ಈ ವೇಳೆ ಮಠದ ದಾಸೋಹದ ಉಸ್ತುವಾರಿ ಅಶೋಕ ಎಂಬುವವರ ಮೇಲೆ ಹಲ್ಲೆ ಮಾಡಲಾಗಿದೆ. ಸಿಸಿ ಕ್ಯಾಮೆರಾ, ಹಾರ್ಡ್ ಡಿಸ್ಕ್ ಕಿತ್ತುಕೊಂಡು ಹೋಗುವುದನ್ನ ತಡೆಯಲು ಹೋದ ವೇಳೆ ಹಲ್ಲೆ ಮಾಡಲಾಗಿದೆ. ಇದಕ್ಕೆ ಮೂಲ ಕಾರಣ ಲೆಕ್ಕ ಪತ್ರದದ ಕಿತಾಪತಿ. 2008ರಲ್ಲಿ ಹರಿಹರ ಪಂಚಮಸಾಲಿ ಗುರುಪೀಠ ಆರಂಭವಾಗಿದೆ. ಬರೋಬ್ಬರಿ 100 ಕೋಟಿ ರೂ ಹಣ ಬಂದಿದೆ. ಲೆಕ್ಕಾ ಕೊಡಿ ಅಂದರೆ ಹೀಗೆ ಹಲ್ಲೆ, ಜಗಳ ಮಾಡುವುದು, ಡಿವಿಆರ್ ಕಿತ್ತುಕೊಂಡು ಹೋಗುವುದು ಮಾಡುತ್ತಿದ್ದಾರೆ. ಚಂದ್ರಶೇಖರ ಪೂಜಾರ ಬೆಂಬಲಿಗರಿಂದ ಇಂತಹ ಕೃತ್ಯ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಸುದ್ದಿಗೋಷ್ಠಿಯಲ್ಲೂ ಗಲಾಟೆ
ಇಂದು ಮಠದ ಆಡಳಿತಾಧಿಕಾರಿ ಡಾ. ರಾಜಕುಮಾರ ಅವರು ಸುದ್ದಿಗೋಷ್ಠಿ ಮಾಡಿದ್ದು, ಆ ವೇಳೆ ಕೂಡ ಹೊನ್ನಾಳಿಯ ಕೆಲವರು ಗಲಾಟೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸೋಮಣ್ಣ ಬೇವಿನಮರದ, ರಾಣೆಬೊನ್ನೂರು ಮಾಜಿ ಶಾಸಕ ಅರುಣಕುಮಾರ ಸೇರಿದಂತೆ ಪ್ರಮುಖರು ಹಾಜರಾಗಿದ್ದರು. ರಾಜಕುಮಾರ ಅವರು ಆಡಳಿತಾಧಿಕಾರಿ ಆಗಿ ಎರಡು ವರ್ಷವಾಗಿದೆ. ಅವರಿಗೆ ಚೆಕ್ ಬುಕ್ ಕೊಟ್ಟಿಲ್ಲ. ಮಠದ ದಾಖಲೆ ಕೊಟ್ಟಿಲ್ಲ. ಮೇಲಾಗಿ ಮಠದ ಆಸ್ತಿ ವಿಚಾರ ಕೇಳಿದರೂ ಸಹ ಹೇಳುತ್ತಿಲ್ಲ.
7ರಿಂದ 8 ಕೋಟಿ ರೂ ಅವ್ಯವಹಾರ ಆರೋಪ
ಸರ್ಕಾರದಿಂದ ಮಠಕ್ಕೆ 11 ಕೋಟಿ ರೂ ಬಂದಿದೆ. ಇದರಲ್ಲಿ ಸಹ ಹಣ ಗೋಲ್ ಮಾಲ್ ಮಾಡಲಾಗಿದೆ. ಇತ್ತೀಚೆಗೆ ನಡೆದ ಮಠದ ಸಭೆಯಲ್ಲಿ ಬಾವಿ ಬೆಟ್ಟಪ್ಪ ಅವರು ಹೇಳಿದಂತೆ 7ರಿಂದ 8 ಕೋಟಿ ರೂ ಅವ್ಯವಹಾರ ನಡೆದಿದೆ. ಮೇಲಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಶಿಗ್ಗಾವಿಯಲ್ಲಿ ಎರಡು ಎಕರೆ ಹಾಗೂ ಬಸವರಾಜ್ ಬೊಮ್ಮಾಯಿ ನೀಡಿದ ಒಟ್ಟು ನಾಲ್ಕು ಎಕರೆ ಭೂಮಿ ಇದೆ. ಆದರೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಭೂಮಿ ಎಲ್ಲಿದೆ ಎಂಬ ಮಾಹಿತಿ ನೀಡುತ್ತಿಲ್ಲ. ಹೀಗೆ ಹತ್ತಾರು ಅವ್ಯವಹಾರ ಮಾಡಿ ಈಗ ಸ್ವಾಮೀಜಿಗಳ ಬಗ್ಗೆ ಮಾತಾಡುತ್ತಿದ್ದಾರೆ. ಸ್ವಾಮೀಜಿಗೆ ಚೆಕ್ ಸಹಿ ಅಧಿಕಾರವಿಲ್ಲ. ಮಠದಿಂದ ಒಂದು ರೂ ಪಡೆದಿಲ್ಲ. ಇವರ ಬಗ್ಗೆ ಮಾತಾದಿದರೆ ಪ್ರತಿಭಟನೆ ಮಾಡಲು ಸಮಾಜ ಮುಖಂಡರು ನಿರ್ಧರಿಸಿದ್ದಾರೆ.
ತಿಂಗಳಿಗೆ ಮಠದ ಖರ್ಚು 4 ಲಕ್ಷ ರೂ. ಬಾಕಿ 20 ತಿಂಗಳ ಹಣ ಪಡೆಯಲಾಗಿದೆ. ಮಠದಕ್ಕೆ ಸಂಬಂಧಿಸಿದ 14 ಖಾತೆಗಳು ಬ್ಯಾಂಕ್ನಲ್ಲಿವೆ. ಇವುಗಳಲ್ಲಿ ಕೇವಲ 17 ಲಕ್ಷ ರೂ ಇದೆ. ಈಗ ಹೊಸ ಆಡಳಿತಾಧಿಕಾರಿ ಬಂದ ಬಳಿಕ ಒಂದುವರೆ ಕೋಟಿ ರೂ ಹಣ ಠೇವಣಿ ಇಡಲಾಗಿದೆ. ಬಂದ ಬಡ್ಡಿಯಲ್ಲಿ ದಾಸೋಹ ಮಾಡಲಾಗುತ್ತಿದೆ. ಆದರೆ ಈ ಹಿಂದೆ ಯಾರ ಯಾರ ಕಡೆ ಹಣ ತೆಗೆದುಕೊಂಡಿದ್ದೀರಿ ಪಟ್ಟಿ ಕೊಡಿ ಅಂದರೆ ಕೊಡುತ್ತಿಲ್ಲ. ಒಟ್ಟಾರೆ ಪಂಚಮಸಾಲಿ ಮಠದದಲ್ಲಿ ಕೆಲ ಪ್ರಭಾವಿಗಳು ಸೇರಿ ಕೋಟ್ಯಂತರ ರೂ ಗೋಲ್ ಮಾಲ್ ಮಾಡಿದ ಆರೋಪ ಕೇಳಿ ಬರುತ್ತಿದೆ.
ಶ್ರೀಮಂತರಾಗಬೇಕು, ಜೀವನದಲ್ಲಿ ದುಡ್ಡು ಗಳಿಸಬೇಕು ಎಂಬ ಬಯಕೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಅದಕ್ಕಾಗಿ ಪ್ರತಿಯೊಬ್ಬರೂ ಕಠಿಣ ಪರಿಶ್ರಮ ಪಡುತ್ತಾರೆ. ಹಣ ಗಳಿಸಲು ಕಠಿಣ ಪರಿಶ್ರಮ ಒಂದೇ ಸಾಲಲ್ಲ, ಈ ಕೆಲವೊಂದು ಸಲಹೆಗಳನ್ನೂ ಪಾಲಿಸಬೇಕು ಎಂದು ಆಚಾರ್ಯ ಚಾಣಕ್ಯರು (Acharya Chanakya) ಹೇಳಿದ್ದಾರೆ. ಹಾಗಿದ್ರೆ ಆಚರ್ಯ ಚಾಣಕ್ಯರು ಹೇಳಿರುವಂತೆ ಜೀವನದಲ್ಲಿ ಆರ್ಥಿಕ ಸ್ಥಿರತೆ ಮತ್ತು ಸಮೃದ್ಧಿ ಲಭಿಸಲು ಯಾವ ವಿಷಯಗಳಿಗೆ ಗಮನ ಕೊಡಬೇಕು ಎಂಬುದನ್ನು ನೋಡೋಣ ಬನ್ನಿ.
ಹಣ, ಶ್ರೀಮಂತಿಕೆ ಗಳಿಸಲು ಏನು ಮಾಡಬೇಕು?
ದುಂದುವೆಚ್ಚವನ್ನು ತಪ್ಪಿಸಿ: ಹಣವು ನಿಮ್ಮ ಉತ್ತಮ ಸ್ನೇಹಿತನಾಗಿದ್ದು, ಅದು ಕಷ್ಟದ ಸಮಯದಲ್ಲಿ ನಿಮಗೆ ಸಾಕಷ್ಟು ಸಹಾಯಕ್ಕೆ ಬುರುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಆದ್ದರಿಂದ ಹಣವನ್ನು ನೀರಿನಂತೆ ಖರ್ಚು ಮಾಡಬಾರದು, ಅನಗತ್ಯ ವಿಷಯಗಳಿಗೆ ಹಣ ಖರ್ಚು ಮಾಡುವವನು ಎಂದಿಗೂ ಶ್ರೀಮಂತನಾಗಲು ಸಾಧ್ಯವಿಲ್ಲ. ಹಾಗಾಗಿ ಒಂದೊಂದು ರೂಪಾಯಿಯನ್ನೂ ಬುದ್ಧಿವಂತಿಕೆಯಿಂದ ಖರ್ಚು ಮಾಡಬೇಕು. ಆದಾಯದ ಸ್ವಲ್ಪ ಭಾಗವನ್ನು ಉಳಿಸಬೇಕು. ಆಗ ಮಾತ್ರ ಸಾಕಷ್ಟು ದುಡ್ಡು ಮಾಡಲು ಸಾಧ್ಯ.
ಉತ್ತಮ ರೀತಿಯಲ್ಲಿ ಹೂಡಿಕೆ ಮಾಡಿ: ಚಾಣಕ್ಯ ನೀತಿಯ ಪ್ರಕಾರ, ಗಳಿಸಿದ ಹಣವನ್ನು ಪೆಟ್ಟಿಗೆಯಲ್ಲಿ ಸಂಗ್ರಹಿಸಿಡುವ ಬದಲು ಅದನ್ನು ನೀರಿನಂತೆ ಹರಿಯಲು ಬಿಡಬೇಕು. ಅಂದರೆ ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡಬೇಕು. ಹೀಗೆ ಸರಿಯಾದ ಸ್ಥಳದಲ್ಲಿ ನೀವು ಹೂಡಿಕೆ ಮಾಡುವುದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ. ಅದೇ ತಪ್ಪು ವಿಧಾನಗಳ ಮೂಲಕ ಅಥವಾ ಯಾರನ್ನಾದರೂ ಮೋಸ ಮಾಡಿ ಗಳಿಸಿದ ಹಣವು ಹೆಚ್ಚು ಕಾಲ ಉಳಿಯುವುದಿಲ್ಲ. ಈ ರೀತಿ ಗಳಿಸಿದ ಹಣವು ವಿನಾಶಕ್ಕೆ ಕಾರಣವಾಗುತ್ತದೆ, ಆದ್ದರಿಂದ ಯಾವಾಗಲೂ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಹಣವನ್ನು ಗಳಿಸಬೇಕು ಎಂದು ಹೇಳುತ್ತಾರೆ ಚಾಣಕ್ಯ.
ಅದೃಷ್ಟವನ್ನು ಅವಲಂಬಿಸಬೇಡಿ, ಕಷ್ಟಪಟ್ಟು ಕೆಲಸ ಮಾಡಿ: ಸೋಮಾರಿತನ ಮನುಷ್ಯನ ದೊಡ್ಡ ಶತ್ರು ಎಂದು ಚಾಣಕ್ಯ ಸ್ಪಷ್ಟವಾಗಿ ಹೇಳಿದ್ದಾರೆ. ಅದೃಷ್ಟವನ್ನು ಮಾತ್ರ ಅವಲಂಬಿಸಿ ಕೆಲಸ ಮಾಡದವರು ಶ್ರೀಮಂತಿಕೆಯನ್ನು ಗಳಿಸಲು ಸಾಧ್ಯವೇ ಇಲ್ಲ. ಕಷ್ಟಪಟ್ಟು ದುಡಿಯುವವರು ಮಾತ್ರ ಯಶಸ್ಸನ್ನು ಗಳಿಸಲು ಸಾಧ್ಯ. ಹಾಗಾಗಿ ಅದೃಷ್ಟವನ್ನು ಅವಲಂಬಿಸುವ ಬದಲು ಕಷ್ಟಪಟ್ಟು ದುಡಿಯಿರಿ.
ಒಳ್ಳೆಯ ವ್ಯಕ್ತಿಗಳ ಸಹವಾಸ: ಭವಿಷ್ಯದಲ್ಲಿ ನೀವು ಎಷ್ಟು ಯಶಸ್ವಿಯಾಗುತ್ತೀರಿ ಎಂಬುದನ್ನು ನಿಮ್ಮ ಸಹವಾಸ ನಿರ್ಧರಿಸುತ್ತದೆ. ನಿಮ್ಮ ಸ್ನೇಹಿತರು ಅಥವಾ ನಿಮ್ಮ ಸಂಘ ಕೆಟ್ಟದಾಗಿದ್ದರೆ, ನೀವು ಎಂದಿಗೂ ಪ್ರಗತಿ ಹೊಂದಲು ಸಾಧ್ಯವಿಲ್ಲ. ತಮ್ಮ ಗುರಿಗಳನ್ನು ಸಾಧಿಸಲು ದೃಢನಿಶ್ಚಯ ಹೊಂದಿರುವ ಮತ್ತು ಯಾವಾಗಲೂ ಪ್ರಗತಿಯ ಬಗ್ಗೆ ಯೋಚಿಸುವ ಜನರ ಸಹವಾಸದಲ್ಲಿರಿ, ಇದು ನಿಮ್ಮ ಆಲೋಚನಾ ವಿಧಾನವನ್ನು ಬದಲಾಯಿಸುತ್ತದೆ. ಅದೇ ಕೆಟ್ಟ ಚಟಗಳನ್ನು ಹೊಂದಿರುವವ ಸಹವಾಸದಲ್ಲಿದ್ದರೆ ನಿಮ್ಮ ಜೀವನವೇ ಹಾಳಾಗುತ್ತದೆ. ಹಾಗಾಗಿ ಉತ್ತಮ ಜನರ ಸಹವಾಸವನ್ನು ಬೆಳೆಸಿ.
ನವದೆಹಲಿ, ಮಾರ್ಚ್ 12: ಹೆಚ್ಚು ಕೈಗಾರಿಕಾ ಸಾಮರ್ಥ್ಯ ಹೊಂದಲಾಗಿರುವ ಕುರಿತಂತೆ ವಿವಿಧ ದೇಶಗಳ ಮೇಲೆ ಅಮೆರಿಕ ತನಿಖೆ ಆರಂಭಿಸಿದೆ. ಅಮೆರಿಕದ ಕಾನೂನಿನ ಸೆಕ್ಷನ್ 301 ಅಡಿಯಲ್ಲಿ ಅನ್ಯಾಯದ ವ್ಯಾಪಾರ ಕ್ರಮಗಳನ್ನು ನಡೆಸಲಾಗುತ್ತಿರುವ ಆರೋಪದ ಮೇಲೆ ತನಿಖೆ ನಡೆಸಲಾಗುತ್ತದೆ. ಭಾರತವೂ ಒಳಗೊಂಡಂತೆ ಅಮೆರಿಕದ 16 ಟ್ರೇಡಿಂಗ್ ಪಾರ್ಟ್ನರ್ ದೇಶಗಳ ಕೈಗಾರಿಕಾ ನೀತಿಗಳನ್ನು ಅಮೆರಿಕ ಅವಲೋಕಿಸಲಿದೆ.
ಟ್ರಂಪ್ ಸರ್ಕಾರದ ಟ್ಯಾರಿಫ್ ಕ್ರಮವನ್ನು ಅಮೆರಿಕದ ಸರ್ವೋಚ್ಚ ನ್ಯಾಯಾಲಯ ಇತ್ತೀಚೆಗೆ ಅನೂರ್ಜಿತಗೊಳಿಸಿ, ಶೇ. 10ರ ಬೇಸ್ಲೈನ್ ಟ್ಯಾರಿಫ್ ನಿಗದಿ ಮಾಡಿತ್ತು. ಕೋರ್ಟ್ನ ಈ ತೀರ್ಪಿನ ವಿರುದ್ಧ ನಿಂತಿರುವ ಟ್ರಂಪ್ ಸರ್ಕಾರ ಪದೇ ಪದೇ ತನ್ನ ಟ್ಯಾರಿಫ್ ನೀತಿಯನ್ನು ಸಮರ್ಥಿಸಿಕೊಳ್ಳುತ್ತಲೇ ಇದೆ. ಈ ನಿಟ್ಟಿನಲ್ಲಿ ಅನ್ಫೇರ್ ಟ್ರೇಡ್ ಪ್ರಾಕ್ಟಿಸಸ್ ಶಂಕೆಯ ಮೇಲೆ 16 ದೇಶಗಳಿಗೆ ಅಮೆರಿಕದ ತನಿಖೆಯ ಬಿಸಿ ಶುರುವಾಗಿದೆ.
ಭಾರತ ಅಲ್ಲದೇ, ಚೀನಾ, ಐರೋಪ್ಯ ಒಕ್ಕೂಟ, ಜಪಾನ್, ಸೌತ್ ಕೊರಿಯಾ, ಮೆಕ್ಸಿಕೋ, ತೈವಾನ್, ವಿಯೆಟ್ನಾಂ, ಥಾಯ್ಲೆಂಡ್, ಮಲೇಷ್ಯಾ, ಕಾಂಬೋಡಿಯಾ, ಸಿಂಗಾಪುರ್, ಇಂಡೋನೇಷ್ಯಾ, ಬಾಂಗ್ಲಾದೇಶ, ಸ್ವಿಟ್ಜರ್ಲ್ಯಾಂಡ್ ಮತ್ತು ನಾರ್ವೆ ದೇಶಗಳು ಈ ತನಿಖೆಗೆ ಒಳಪಡುತ್ತಿವೆ. ಈ 16 ದೇಶಗಳು ಅಮೆರಿಕದ ಪ್ರಮುಖ ಟ್ರೇಡಿಂಗ್ ಪಾರ್ಟ್ನರ್ಗಳ ಪೈಕಿ ಇವೆ. ಅಮೆರಿಕದ ಎರಡನೇ ಅತಿದೊಡ್ಡ ಟ್ರೇಡಿಂಗ್ ಪಾರ್ಟ್ನರ್ ಆದ ಕೆನಡಾವನ್ನು ಈ ತನಿಖೆಯಿಂದ ಹೊರತುಪಡಿಸಲಾಗಿದೆ.
ಯಾವ ಅಂಶಗಳ ಮೇಲೆ ನಡೆಯುತ್ತೆ ತನಿಖೆ?
ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ಗಳಲ್ಲಿ ಹೆಚ್ಚಿನ ಉತ್ಪಾದನೆ ಮತ್ತು ಸಾಮರ್ಥ್ಯ ಇರುವುದು, ಸರ್ಕಾರದ ಸಬ್ಸಿಡಿಗಳು, ಕಡಿಮೆ ವೇತನ, ಸರ್ಕಾರಿ ಉದ್ದಿಮೆಗಳ ವಾಣಿಜ್ಯೇತರ ಚಟುವಟಿಕೆ, ಅಸಮರ್ಪಕ ಪರಿಸರ ಮತ್ತು ಕಾರ್ಮಿಕ ವ್ಯವಸ್ಥೆಯ ಗುಣಮಟ್ಟ, ಸಬ್ಸಿಡಿಯಲ್ಲಿ ಸಾಲ ಇತ್ಯಾದಿ ಅಂಶಗಳನ್ನು ಅವಲೋಕಿಸಲಾಗುತ್ತದೆ.
ಒಟ್ಟಾರೆ, ಸರ್ಕಾರದ ಸಬ್ಸಿಡಿ ಇತ್ಯಾದಿ ಉತ್ತೇಜನಕಾರಿ ಸವಲತ್ತುಗಳ ನೆರವಿನಿಂದ ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳು ಕಡಿಮೆ ಬೆಲೆಗೆ ಸರಕುಗಳನ್ನು ತಯಾರಿಸಿ ರಫ್ತು ಮಾಡುತ್ತಿವೆಯಾ ಎಂಬುದನ್ನು ಅಮೆರಿಕ ತನಿಖೆಯಲ್ಲಿ ಪತ್ತೆ ಮಾಡಲು ಹೊರಟಿದೆ. ಈ ರೀತಿ ಸವಲತ್ತು ಪಡೆದು ಕಡಿಮೆ ಬೆಲೆ ಸರಕುಗಳನ್ನು ತಯಾರಿಸಿ ಮಾರುತ್ತಿದ್ದರೆ ಅದು ಅಮೆರಿಕನ್ ಕಾನೂನು ಪ್ರಕಾರ ಅನ್ಫೇರ್ ಟ್ರೇಡ್ ಪ್ರಾಕ್ಟಿಸಸ್ ಆಗುತ್ತದೆ. ತನಿಖೆಯಲ್ಲಿ ಇದು ಋಜುವಾತಾದರೆ, ಅಂಥ ದೇಶಗಳು ಮತ್ತು ಕಂಪನಿಗಳು, ಹಾಗು ಸರಕುಗಳ ಮೇಲೆ ಅಮೆರಿಕ ಹೆಚ್ಚಿನ ಟ್ಯಾರಿಫ್ ವಿಧಿಸಲು ಯೋಜಿಸುತ್ತಿದ್ದಂತಿದೆ.
ಬಾಲಿವುಡ್‌ನ ಎವರ್‌ಗ್ರೀನ್ ಹಿಟ್ ಜೋಡಿ ಅಕ್ಷಯ್ ಕುಮಾರ್ (Akshay Kumar) ಮತ್ತು ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಸುಮಾರು 14 ವರ್ಷಗಳ ಸುದೀರ್ಘ ಗ್ಯಾಪ್ ನಂತರ ಮತ್ತೆ ಒಂದಾಗಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಹಾರರ್-ಕಾಮಿಡಿ ಸಿನಿಮಾ ‘ಭೂತ್ ಬಂಗ್ಲ’ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಈಗ ಈ ಸಿನಿಮಾದ ಟೀಸರ್ (Bhooth Bangla Teaser) ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಈ ಸಿನಿಮಾದ ಪ್ರಚಾರದಲ್ಲಿ ಅಕ್ಷಯ್ ಕುಮಾರ್ ಅವರು ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.
‘ಹೇರಾ ಫೇರಿ’, ‘ಭೂಲ್ ಭುಲಯ್ಯ’, ‘ಗರಂ ಮಸಾಲಾ’ ರೀತಿಯ ಕ್ಲಾಸಿಕ್ ಕಾಮಿಡಿ ಚಿತ್ರಗಳನ್ನು ನೀಡಿದ ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಜೋಡಿ, 2026ರ ಅತ್ಯಂತ ನಿರೀಕ್ಷಿತ ಸಿನಿಮಾದ ಮೂಲಕ ಮರಳುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಸಿನಿಮಾದ ಟೀಸರ್‌ನಲ್ಲಿ ಹಾರರ್ ಮತ್ತು ಕಾಮಿಡಿಯ ಮಿಶ್ರಣವಿದ್ದು, ನೋಡುಗರಿಗೆ ನಗುವಿನ ಜೊತೆಗೆ ಭಯವನ್ನೂ ಹುಟ್ಟಿಸುವ ಸನ್ನಿವೇಶಗಳ ಸುಳಿವು ನೀಡಲಾಗಿದೆ.
ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಹಿರಿಯ ಹಾಸ್ಯ ನಟರ ದಂಡೇ ಇಲ್ಲಿದೆ. ಟೀಸರ್‌ನಲ್ಲಿ ಕಾಣಿಸಿಕೊಂಡಿರುವ ಪರೇಶ್ ರಾವಲ್, ರಾಜ್‌ಪಾಲ್ ಯಾದವ್ ಮತ್ತು ಅಸ್ರಾನಿ ಅವರು ಹಳೆಯ ಹಿಟ್ ಚಿತ್ರಗಳ ನೆನಪನ್ನು ಮರುಕಳಿಸುವಂತೆ ಮಾಡಿದ್ದಾರೆ. ಅಕ್ಷಯ್ ಕುಮಾರ್ ಅವರೊಂದಿಗೆ ಟಬು ಮತ್ತು ವಾಮಿಕಾ ಗಬ್ಬಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಾರು ಎರಡು ದಶಕಗಳ ನಂತರ ಅಕ್ಷಯ್ ಮತ್ತು ಟಬು ತೆರೆ ಹಂಚಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಡಬಲ್ ಧಮಾಕಾ ನೀಡಿದಂತಾಗಿದೆ.
‘ಭೂತ್ ಬಂಗ್ಲ’ ಸಿನಿಮಾ ಟೀಸರ್:
‘ಬಾಲಾಜಿ ಮೋಷನ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ‘ಕೇಪ್ ಆಫ್ ಗುಡ್ ಫಿಲ್ಮ್ಸ್’ ಸಹಯೋಗದಲ್ಲಿ ಮೂಡಿಬರುತ್ತಿರುವ ಈ ಸಿನಿಮಾವು ಏಪ್ರಿಲ್ 10ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಹಾರರ್-ಕಾಮಿಡಿ ಶೈಲಿಯ ಈ ಚಿತ್ರವು ಬಾಲಿವುಡ್‌ನಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆಯಿದೆ.
ಚಿತ್ರರಂಗದಲ್ಲಿ ನಿರ್ದೇಶಕ ಪ್ರಿಯದರ್ಶನ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಜೊತೆ ಅಕ್ಷಯ್ ಕುಮಾರ್ ಕೈ ಜೋಡಿಸಿದರೆ ಅಭಿಮಾನಿಗಳಿಗೆ ಡಬಲ್ ಮನರಂಜನೆ ಗ್ಯಾರಂಟಿ. ಆ ಕಾರಣದಿಂದ ‘ಭೂತ್ ಬಂಗ್ಲ’ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಟೀಸರ್ ನೋಡಿದ ಸಿನಿಪ್ರಿಯರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ.
ಇತ್ತೀಚಿನ ಕೆಲವು ವರ್ಷಗಳಲ್ಲಿ ಕಿಡ್ನಿ (Kidney)ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತಿದೆ. ಅಸ್ವಸ್ಥ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಮಾಡಿಕೊಂಡ ಅನೇಕ ರೀತಿಯ ಬದಲಾವಣೆಗಳು ಇಂತಹ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣಗಳಾಗಿವೆ. ಆದರೆ ಕೆಲ ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸಿದರೆ ಕಿಡ್ನಿಯ ಆರೋಗ್ಯವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು. ಈ ಬಗ್ಗೆ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಡಾ. ಹಿಮಾಂಶು ವರ್ಮಾ ಮಾತನಾಡಿದ್ದು ಕಿಡ್ನಿ ಆರೋಗ್ಯವಾಗಿರಲು ಯಾವ ರೀತಿಯ ಸಲಹೆಗಳನ್ನು ಪಾಲಿಸಬೇಕು, ಇದರಿಂದ ಕಿಡ್ನಿ ಆರೋಗ್ಯ ಹೇಗೆ ಸುಧಾರಿಸುತ್ತದೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಈ ಸಲಹೆಗಳನ್ನು ತಪ್ಪದೆ ಪಾಲನೆ ಮಾಡುವುದರಿಂದ ಕಿಡ್ನಿ ಆರೋಗ್ಯ ಹಾಳಾಗುವುದನ್ನು ತಡೆಯಬಹುದಾಗಿದೆ.
ಕಿಡ್ನಿಯನ್ನು ಆರೋಗ್ಯವಾಗಿಡಲು ಸಲಹೆಗಳು;
ನೀರು ಕುಡಿಯಿರಿ: ಪ್ರತಿ ದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಕಿಡ್ನಿ ಆರೋಗ್ಯಕ್ಕೆ ಅಗತ್ಯ. ಇದರಿಂದ ದೇಹದಲ್ಲಿನ ವಿಷಪದಾರ್ಥಗಳು ಹೊರಹೋಗುತ್ತವೆ ಮತ್ತು ಕಿಡ್ನಿಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ.
ಉಪ್ಪಿನ ಸೇವನೆಯನ್ನು ನಿಯಂತ್ರಿಸಿ: ಹೆಚ್ಚು ಉಪ್ಪು ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚಾಗಬಹುದು, ಇದು ಕಿಡ್ನಿಗೆ ಹಾನಿಕಾರಕ. ಆದ್ದರಿಂದ ದಿನನಿತ್ಯ ಸೇವನೆ ಮಾಡುವ ಉಪ್ಪಿನ ಪ್ರಮಾಣವನ್ನು ನಿಯಂತ್ರಿಸುವುದು ಅಗತ್ಯ.
ರಕ್ತದೊತ್ತಡ ಮತ್ತು ಶುಗರ್ ನಿಯಂತ್ರಣದಲ್ಲಿರಲಿ: ಯಾರಾದರೂ ಹೈ ಬಿಪಿ ಅಥವಾ ಮಧುಮೇಹದಿಂದ ಬಳಲುತ್ತಿದ್ದರೆ ಅವುಗಳನ್ನು ನಿಯಂತ್ರಣದಲ್ಲಿಡುವುದು ಅತ್ಯಂತ ಮುಖ್ಯ. ಇಲ್ಲವಾದರೆ ಕಿಡ್ನಿಯ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ.
ನಿಯಮಿತ ವ್ಯಾಯಾಮ ಮಾಡಿ: ಪ್ರತಿ ದಿನ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಿದರೆ ದೇಹ ಫಿಟ್ ಆಗಿರುತ್ತದೆ ಮತ್ತು ಕಿಡ್ನಿ ಕಾಯಿಲೆಗಳ ಅಪಾಯ ಕಡಿಮೆಯಾಗಬಹುದು.
ವೈದ್ಯರ ಸಲಹೆ ಇಲ್ಲದೆ ಪೇನ್‌ಕಿಲರ್ ಬಳಸದಿರಿ: ಕೆಲವು ಪೇನ್‌ಕಿಲರ್ ಔಷಧಿಗಳನ್ನು ದೀರ್ಘಕಾಲ ಬಳಸುವುದರಿಂದ ಕಿಡ್ನಿಗೆ ಹಾನಿಯಾಗಬಹುದು. ಆದ್ದರಿಂದ ವೈದ್ಯರ ಸಲಹೆ ಇಲ್ಲದೆ ಔಷಧಿ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.
35 ವರ್ಷಗಳ ನಂತರ ಪೂರ್ಣ ಆರೋಗ್ಯ ತಪಾಸಣೆ: ಡಾ. ಹಿಮಾಂಶು ಹೇಳುವ ಪ್ರಕಾರ 35 ವರ್ಷಗಳ ನಂತರ ನಿಯಮಿತವಾಗಿ ಫುಲ್ ಬಾಡಿ ಚೆಕ್‌ಅಪ್ ಮಾಡಿಸಿಕೊಳ್ಳುವುದು ಅಗತ್ಯ. ಇದರಿಂದ ಯಾವುದೇ ಕಾಯಿಲೆಯನ್ನು ಮೊದಲ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ.