Category Archives: Blog

Your blog category

ಹಿಟಾಚಿ ಶೋರೂಮ್​ಗೆ ಬೀಗ ಹಾಕಿದ ಗ್ರಾಹಕ ಹೇಳಿದ್ದೇನು ನೋಡಿ! – Kannada News | Angry Customer Locks Tata Hitachi Showroom in Tumakuru, Speaks Out Over Faulty Machine

ತುಮಕೂರು, ಫೆಬ್ರವರಿ 10: 52 ಲಕ್ಷ ರೂಪಾಯಿ ಮೌಲ್ಯದ ‘ಹಿಟಾಚಿ 140’ ಯಂತ್ರವು ಖರೀದಿಸಿದ ಐದೇ ತಿಂಗಳಲ್ಲಿ ಕೆಟ್ಟುಹೋಗಿದ್ದರಿಂದ ಅಸಮಾಧಾನಗೊಂಡ ಗ್ರಾಹಕ ಗಿರೀಶ್ ಅವರು ಹಿಟಾಚಿ ಶೋರೂಂಗೆ ಬೀಗ ಜಡಿದ ಘಟನೆ ತುಮಕೂರಿನ ಅಂತರಸನಹಳ್ಳಿ ಬಳಿ ನಡೆದಿದೆ. 2022ರ ಡಿಸೆಂಬರ್‌ನಲ್ಲಿ ಯಂತ್ರವನ್ನು ಖರೀದಿಸಲಾಗಿತ್ತು. 7,000 ಗಂಟೆಗಳ ವಾರಂಟಿ ಇದ್ದರೂ, ಕೇವಲ 480 ಗಂಟೆಗಳ ಬಳಿಕ ಯಂತ್ರದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಗುಬ್ಬಿ ಮೂಲದ ಗಿರೀಶ್ ಅಳಲು ತೋಡಿಕೊಂಡಿದ್ದಾರೆ.

ಕಳೆದ ಎರಡು ತಿಂಗಳಿಂದ ದುರಸ್ತಿಗಾಗಿ ಹಲವಾರು ಬಾರಿ ಪ್ರಯತ್ನಿಸಿದರೂ, ಸಮಸ್ಯೆಯನ್ನು ಪರಿಹರಿಸಿಲ್ಲ ಎಂದು ಗಿರೀಶ್ ಆರೋಪಿಸಿದ್ದಾರೆ. ಯಂತ್ರವು ನಿರೀಕ್ಷೆಗಿಂತ ಹೆಚ್ಚು ಇಂಧನ (ಡೀಸೆಲ್) ಮುಗಿಸುತ್ತಿದ್ದು, ಪ್ರತಿ ತಿಂಗಳು 1,15,000 ರೂಪಾಯಿ EMI ಪಾವತಿಸುವುದು ಕಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರತಿಕ್ರಿಯೆ ನೀಡದ ಕಂಪನಿ ಸಿಬ್ಬಂದಿ ಮತ್ತು ಮಾರಾಟ ಪ್ರತಿನಿಧಿ ಶಿವಾನಂದ್ ಅವರ ವರ್ತನೆಯಿಂದ ರೋಸಿಹೋಗಿ, ಶೋರೂಂಗೆ ಬೀಗ ಹಾಕಿದ್ದಾಗಿ ‘ಟಿವಿ9’ಗೆ ಗಿರೀಶ್ ತಿಳಿಸಿದ್ದಾರೆ.

ಇದನ್ನೂ ಓದಿ: ಹೊಸದಾಗಿ ಖರೀದಿಸಿದ ಹಿಟಾಚಿ ಕೆಟ್ಟುಹೋಯ್ತೆಂದು ಶೋರೂಮ್​ಗೇ ಬೀಗ ಹಾಕಿದ ಗ್ರಾಹಕ!

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಯುವತಿ ನಾಪತ್ತೆ, ಆಕೆ ಮಲಗಿದ್ದ ಹಾಸಿಗೆಯಲ್ಲಿ ಹಾವಿನ ಪೊರೆ ಪತ್ತೆ – Kannada News | Woman’s Disappearance and Shed Snake Skin Trigger Panic in UP Village

ಉತ್ತರ ಪ್ರದೇಶ, ಫೆಬ್ರವರಿ 10: ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಯುವತಿ ಹಠಾತ್ ಕಣ್ಮರೆಯಾಗಿದ್ದಾರೆ. ಆದರೆ ಅದಕ್ಕಿಂತ ಅಚ್ಚರಿಗೊಳಿಸುವ ವಿಚಾರವೆಂದರೆ ಆಕೆ ಮಲಗಿದ್ದ ಹಾಸಿಗೆಯಲ್ಲಿ ಹಾವಿನ ಪೊರೆ ಪತ್ತೆಯಾಗಿದೆ. ಆಕೆಯ ಕುಟುಂಬವು ಆಕೆಯ ಹಾಸಿಗೆಯ ಮೇಲೆ ಬಟ್ಟೆಯಲ್ಲಿ ಸುತ್ತಿದ ಐದು ಅಡಿ ಉದ್ದದ ಹಾವಿನ ಪೊರೆಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಆಕೆ ನಾಗಿಣಿಯಾಗಿ ಮಾರ್ಪಟ್ಟಿದ್ದಾಳೆ ಎಂದು ಹೇಳುತ್ತಾ ಎಲ್ಲರೂ ತಿರುಗಾಡಿದ್ದಾರೆ.

ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಯುವತಿ ಮನೆಯಿಂದ ನಾಪತ್ತೆಯಾಗಿದ್ದಳು. ಮಹಿಳೆ ತನ್ನ ಕೋಣೆಯಿಂದ ಹೊರಗೆ ಬಾರದಿದ್ದಾಗ ಈ ವಿಷಯ ಬೆಳಕಿಗೆ ಬಂದಿದೆ. ಗಾಬರಿಗೊಂಡ ಕುಟುಂಬ ಸದಸ್ಯರು ಆಕೆಯ ಕೋಣೆಗೆ ಪ್ರವೇಶಿಸಿದಾಗ ಅವರು ಕಂಡ ದೃಶ್ಯದಿಂದ ಬೆಚ್ಚಿಬಿದ್ದರು. ಅಲ್ಲಿ ಹಾವಿನ ಪೊರೆ ಇತ್ತು.

ಮದುವೆಯನ್ನು ತಪ್ಪಿಸಲು, ಯುವತಿಯೊಬ್ಬಳು 5 ಅಡಿ ಉದ್ದದ ಹಾವಿನ ಪೊರೆಯನ್ನು ತನ್ನ ಹಾಸಿಗೆಯ ಮೇಲೆ ಬಿಟ್ಟು ನಾಟಕವಾಡಿದ್ದಳು, ಇದು ಗ್ರಾಮದಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. 25 ವರ್ಷದ ರೀನಾಳ ಕುಟುಂಬವು ಮದುವೆಯನ್ನು ನಿಶ್ಚಯಿಸಿತ್ತು, ಆದರೆ ಹುಡುಗಿ ಆ ಸಂಬಂಧವನ್ನು ಒಪ್ಪಿರಲಿಲ್ಲ, ಆಕೆಗೆ ಅದೇ ಗ್ರಾಮದ ಯುವಕನೊಂದಿಗೆ ಸಂಬಂಧವಿತ್ತು. ಓಡಿಹೋಗುವ ಮೊದಲು, ರೀನಾ ಒಂದು ಯೋಜನೆಯನ್ನು ರೂಪಿಸಿದಳು, ಅದು ಎಲ್ಲರಿಗೂ ಆಘಾತವನ್ನುಂಟು ಮಾಡಿತ್ತು. ಆದರೆ ಪೊಲೀಸರು ಬಂದು ತನಿಖೆ ನಡೆಸಿ ನಿಜವಾದ ಕಾರಣವನ್ನು ಬಯಲು ಮಾಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Gold Rate Today: ಚಿನ್ನ, ಬೆಳ್ಳಿ ಬೆಲೆ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 10th February 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಫೆಬ್ರುವರಿ 10: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮಂಗಳವಾರ ಸ್ವಲ್ಪ ಇಳಿಕೆ ಕಂಡಿವೆ. ಚಿನ್ನದ ಬೆಲೆ (Gold Rates) ಗ್ರಾಮ್​ಗೆ 85 ರೂ ಕಡಿಮೆ ಆಗಿದೆ. ಬೆಳ್ಳಿ ಬೆಲೆ 10 ರೂ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,44,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,57,910 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 29,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,44,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 29,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 30,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 10ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,791 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,475 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,844 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 290 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,791 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,475 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 290 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,475 ರೂ
  • ಚೆನ್ನೈ: 14,580 ರೂ
  • ಮುಂಬೈ: 14,475 ರೂ
  • ದೆಹಲಿ: 14,490 ರೂ
  • ಕೋಲ್ಕತಾ: 14,475 ರೂ
  • ಕೇರಳ: 14,475 ರೂ
  • ಅಹ್ಮದಾಬಾದ್: 14,480 ರೂ
  • ಜೈಪುರ್: 14,490 ರೂ
  • ಲಕ್ನೋ: 14,490 ರೂ
  • ಭುವನೇಶ್ವರ್: 14,475 ರೂ

ಇದನ್ನೂ ಓದಿ: ಭಾರತಕ್ಕೆ ದಿಢೀರ್ ಪೆಟ್ರೋಲಿಯಂ ಪೂರೈಕೆ ನಿಂತು ಹೋದರೆ, ಎಷ್ಟು ದಿನಕ್ಕೆ ಆಗುವಷ್ಟು ಪೆಟ್ರೋಲ್ ರಿಸರ್ವ್ ಇದೆ ಗೊತ್ತಾ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 600 ರಿಂಗಿಟ್ (13,893 ರುಪಾಯಿ)
  • ದುಬೈ: 565.25 ಡಿರಾಮ್ (13,955 ರುಪಾಯಿ)
  • ಅಮೆರಿಕ: 157.50 ಡಾಲರ್ (14,283 ರುಪಾಯಿ)
  • ಸಿಂಗಾಪುರ: 198.90 ಸಿಂಗಾಪುರ್ ಡಾಲರ್ (14,258 ರುಪಾಯಿ)
  • ಕತಾರ್: 561.50 ಕತಾರಿ ರಿಯಾಲ್ (13,971 ರೂ)
  • ಸೌದಿ ಅರೇಬಿಯಾ: 573 ಸೌದಿ ರಿಯಾಲ್ (13,855 ರುಪಾಯಿ)
  • ಓಮನ್: 59.90 ಒಮಾನಿ ರಿಯಾಲ್ (14,118 ರುಪಾಯಿ)
  • ಕುವೇತ್: 46.09 ಕುವೇತಿ ದಿನಾರ್ (13,697 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 290 ರೂ
  • ಚೆನ್ನೈ: 300 ರೂ
  • ಮುಂಬೈ: 290 ರೂ
  • ದೆಹಲಿ: 290 ರೂ
  • ಕೋಲ್ಕತಾ: 290 ರೂ
  • ಕೇರಳ: 300 ರೂ
  • ಅಹ್ಮದಾಬಾದ್: 290 ರೂ
  • ಜೈಪುರ್: 290 ರೂ
  • ಲಕ್ನೋ: 290 ರೂ
  • ಭುವನೇಶ್ವರ್: 300 ರೂ
  • ಪುಣೆ: 290

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಚಾಕಲೇಟ್ ತೋರಿಸಿ ಎರಡೂವರೆ ವರ್ಷದ ಕಂದಮ್ಮನ ಕಿಡ್ನ್ಯಾಪ್, ಕಾರಣ ಕೇಳಿದ್ರೆ ಶಾಕ್​​ ಆಗ್ತೀರಾ! – Kannada News | Male Child Desire: Woman Abducts Boy from Tumakuru Fair, Police Rescue in Bengaluru

ಚಾಕಲೇಟ್ ತೋರಿಸಿ ಎರಡೂವರೆ ವರ್ಷದ ಮಗುವನ್ನೇ ಕಿಡ್ನ್ಯಾಪ್ ಮಾಡಿದ್ರು!

ತುಮಕೂರು, ಫೆಬ್ರವರಿ 10: ಇಂದಿನ 21ನೇ ಶತಮಾನದಲ್ಲಿ ಹೆಣ್ಣು-ಗಂಡು ಸಮಾನರು ಎಂಬ ಆಲೋಚನೆ ತಕ್ಕಮಟ್ಟಿಗೆ ನಮ್ಮ ಸಮಾಜದಲ್ಲಿದೆ. ಆದರೂ ಇಲ್ಲೊಬ್ಬ ಮಹಿಳೆ ತನಗೆ ಇಬ್ಬರು ಹೆಣ್ಣು ಮಕ್ಕಳಿದ್ದರೂ ಗಂಡು ಮಗು ಬೇಕೆಂಬ ದುರಾಸೆಗೆ ಬಿದ್ದು, ಎರಡೂವರೆ ವರ್ಷದ ಮಗುವನ್ನೇ ಅಪರಹಿಸಿದ್ದಾಳೆ. ತುಮಕೂರಿನ (Tumkuru) ಜಾತ್ರೆಯೊಂದರಲ್ಲಿ ಈ ಘಟನೆ ನಡೆದಿದ್ದು, ಅಪರಹಿಸಲಾಗ ಮಗುವನ್ನು ಬೆಂಗಳೂರಿನ ಕೊರಮಂಗಲ ಪ್ರದೇಶದಲ್ಲಿ ಪತ್ತೆ ಮಾಡಲಾಗಿದ್ದು, ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಿಸಲಾಗಿದೆ.

ಜಾತ್ರೆಯಲ್ಲಿ ಕಾಣೆಯಾದ ಮಗು ಬೆಂಗಳೂರಿನಲ್ಲಿ ಪತ್ತೆ

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಮಾಗೋಡು ಗ್ರಾಮದಲ್ಲಿ ನಡೆದ ಶ್ರೀರಂಗ ಜಾತ್ರೆ ವೇಳೆ ಅಪಹರಣಗೊಂಡಿದ್ದ ಎರಡುವರೆ ವರ್ಷದ ಗಂಡು ಮಗುವನ್ನು ಶಿರಾ ಪೊಲೀಸರು ಸಿನಿಮೀಯ ರೀತಿಯಲ್ಲಿ ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಬೆಂಗಳೂರಿನ ಲಗ್ಗೆರೆಯಲ್ಲಿ ವಾಸಿಸುವ ದಂಪತಿಯ ಮಗುವನ್ನು ಫೆಬ್ರವರಿ 1ರಂದು ಶಿರಾ ಜಾತ್ರಾ ಮಹೋತ್ಸವದ ವೇಳೆ ಅಪಹರಿಸಲಾಗಿತ್ತು. ಮಗುವನ್ನು ಅದರ ತಾತ ಪುಟ್ಟರಂಗಯ್ಯ ತಮ್ಮೊಂದಿಗೆ ಜಾತ್ರೆಗೆ ಕರೆತಂದಿದ್ದರು.

ಇದನ್ನೂ ಓದಿ ಪೋಷಕರು ಕಾಲಿಗೆ ಬಿದ್ದು ಗೋಗರೆದರೂ ಕರಗದ ಮಗಳು! ಮುಸ್ಲಿಂ ಯುವಕನೊಂದಿಗೆ ಯುವತಿ ಪರಾರಿ

ಜಾತ್ರೆಯಲ್ಲಿ ಅಂಗಡಿ ಹಾಕಿದ್ದ ತಾತನೊಂದಿಗೆ ಇದ್ದ ಮಗುವನ್ನು ನೋಡಿದ ಆರೋಪಿಗಳು ಚಾಕೊಲೇಟ್ ಕೊಡಿಸುವ ನೆಪದಲ್ಲಿ ಮಗುವನ್ನು ಕರೆದೊಯ್ದಿದ್ದರು. ಈ ಕುರಿತು ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಿರಾ ಡಿವೈಎಸ್‌ಪಿ ಶೇಖರ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಆಂಧ್ರ ಪ್ರದೇಶ ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಲಾಗಿತ್ತು.

ಗಂಡು ಮಗು ಬೇಕೆಂಬಾಸೆಗೆ ಮಗು ಕಿಡ್ನ್ಯಾಪ್

ಕೊನೆಗೆ ಬೆಂಗಳೂರಿನ ಕೊರಮಂಗಲದಲ್ಲಿರುವ ಶಾಂತಮೇರಿ ಎಂಬ ಮಹಿಳೆಯ ಮನೆಯಲ್ಲಿ ಮಗು ಪತ್ತೆಯಾಗಿದೆ. ಆರೋಪಿ ಶಾಂತಮೇರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದರೂ ಗಂಡು ಮಗು ಬೇಕೆಂಬ ಹಂಬಲದಿಂದ ಸಂಬಂಧಿ ನರಸಯ್ಯನೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾತ್ರೆಗೂ ಎರಡು ದಿನ ಮೊದಲು ತುಮಕೂರಿಗೆ ಬಂದಿದ್ದ ಶಾಂತಮೇರಿ ಮತ್ತು ನರಸಯ್ಯ, ಪೂರ್ವ ಯೋಜನೆಯೊಂದಿಗೆ ಮಗುವಿನ ಅಪಹರಣ ನಡೆಸಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಜಾತ್ರೆಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಚಲನವಲನ ಗಮನಿಸಿದ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಕ್ಷಯ್ ಖನ್ನಾ ಜೊತೆ ಫ್ಲರ್ಟ್ ಮಾಡಲು ನೋಡಿದ್ದ ಆ ನಟಿ; ಈಗ ಅವರು ಸಂಸದೆ – Kannada News | Akshaye Khanna: Kangana Ranaut’s Viral Flirt Attempt on Koffee With Karan Resurfaces

ನಟ ಅಕ್ಷಯ್ ಖನ್ನಾ (Akshaye Khanna) ಕಳೆದ ಕೆಲವು ದಿನಗಳಿಂದ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ. ‘ಛಾವಾ’ ನಂತರ, ‘ಧುರಂಧರ್’ ಚಿತ್ರದಲ್ಲಿ ನಟಿಸಿ ಖ್ಯಾತಿಯನ್ನು ಹೆಚ್ಚಿಸಿಕೊಂಡರು. ಈಗ ಅಭಿಮಾನಿಗಳು ನಟನ ಮುಂಬರುವ ಸಿನಿಮಾಗಳಿಗಾಗಿ ಕಾಯುತ್ತಿದ್ದಾರೆ. ಅಕ್ಷಯ್ ಖನ್ನಾ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ನಟನ ಜೊತೆ ಸಂಸದೆ ಒಬ್ಬರು ಫ್ಲರ್ಟ್ ಮಾಡಲು ಪ್ರಯತ್ನಿಸಿದ್ದರು. ಆದರೆ, ಅದು ಸಾಧ್ಯವಾಗಿಲ್ಲ.

ಈಗ ಹಳೆಯ ವಿಡಿಯೋ ವೈರಲ್ ಆಗುತ್ತಿದೆ. ನಟನೊಂದಿಗೆ ಚೆಲ್ಲಾಟವಾಡಲು ಪ್ರಯತ್ನಿಸಿದ ನಟಿ, ಮಹಿಳಾ ಸಂಸದೆ ಬೇರೆ ಯಾರೂ ಅಲ್ಲ ಕಂಗನಾ ರಣಾವತ್. ಪ್ರಸ್ತುತ, ಕಂಗನಾ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಒಮ್ಮೆ ಕಂಗನಾ ನಿರ್ದೇಶಕ ಕರಣ್ ಜೋಹರ್ ಅವರ ‘ ಕಾಫಿ ವಿತ್ ಕರಣ್ ‘ ಕಾರ್ಯಕ್ರಮಕ್ಕೆ ಅನಿಲ್ ಕಪೂರ್ ಮತ್ತು ಸಂಜಯ್ ದತ್ ಅವರೊಂದಿಗೆ ಬಂದಿದ್ದರು. ಕಂಗನಾ ಹೇಳಿಕೆಯಿಂದ ಅನಿಲ್ ಮತ್ತು ಸಂಜಯ್ ಕೂಡ ಆಘಾತಕ್ಕೊಳಗಾದರು. ಕಂಗನಾ ಅವರು ಅಕ್ಷಯ್ ಜೊತೆ ಫ್ಲರ್ಟ್ ಮಾಡಲು ಪ್ರಯತ್ನಿಸಿದರು, ಆದರೆ ಅವರು ಯಾವುದೇ ಉತ್ತರವನ್ನು ನೀಡಲಿಲ್ಲ ಎಂದು ಹೇಳಿದ್ದಾರ.

‘ನೀವು ಎಂದಾದರೂ ಯಾರೊಂದಿಗಾದರೂ ಫ್ಲರ್ಟ್ ಮಾಡಲು ಪ್ರಯತ್ನಿಸಿದ್ದೀರಾ ಮತ್ತು ಆ ವ್ಯಕ್ತಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವೇ’ ಎಂದು ಕರಣ್ ಕೇಳಿದರು. ಇದಕ್ಕೆ ಕಂಗನಾ, ‘ಅಕ್ಷಯ್ ಖನ್ನಾ. ನಾನು ಅಕ್ಷಯ್ ಜೊತೆ ಮಾತನಾಡಲು ಮತ್ತು ಫ್ಲರ್ಟ್ ಮಾಡಲು ಪ್ರಯತ್ನಿಸಿದೆ. ಆದರೆ ಅವರು ಎಂದಿಗೂ ಉತ್ತರಿಸಲಿಲ್ಲ. ಅವರು ಯಾರೊಂದಿಗೂ ಮಾತನಾಡುತ್ತಿರಲಿಲ್ಲ’ ಎಂದಿದ್ದರು.

ಇದನ್ನೂ ಓದಿ: ‘ಧುರಂದರ್ 2’ ಚಿತ್ರದಲ್ಲಿ ಅಕ್ಷಯ್ ಖನ್ನಾ ಇರೋದು ಖಚಿತ; ಸಿಕ್ತು ಪಕ್ಕಾ ಸಾಕ್ಷಿ

ಕಂಗನಾ ಅವರ ಖಾಸಗಿ ಜೀವನದ ಬಗ್ಗೆ ಹೇಳುವುದಾದರೆ, ಅವರ ಹೆಸರು ಅನೇಕ ಸೆಲೆಬ್ರಿಟಿಗಳೊಂದಿಗೆ ಚರ್ಚಿಸಲ್ಪಟ್ಟಿದೆ. ಅವರು ಹಲವರ ಜೀವನವನ್ನು ಮುರಿದ ಆರೋಪವನ್ನೂ ಹೊಂದಿದ್ದಾರೆ. ನಟರಾದ ಆದಿತ್ಯ ಪಂಚೋಲಿ, ಹೃತಿಕ್ ರೋಷನ್ ಮತ್ತು ಅಜಯ್ ದೇವಗನ್ ಅವರೊಂದಿಗೂ ಕಂಗನಾ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ, ಯಾವುದೂ ವಿವಾಹದವರೆಗೆ ಹೋಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

World Pulses Day 2026: ಫೆ. 10ರಂದು ವಿಶ್ವ ದ್ವಿದಳ ಧಾನ್ಯ ದಿನ; ಪೌಷ್ಟಿಕಾಂಶ, ಆರ್ಥಿಕ ಮತ್ತು ಪರಿಸರ ಸ್ನೇಹಿ ಪ್ರಯೋಜನಗಳು – Kannada News | World Pulses Day 2026: Celebrate Health and Sustainability with Pulses’ Power

ಪ್ರತಿ ವರ್ಷ ಫೆಬ್ರವರಿ 10ರಂದು ವಿಶ್ವದಾದ್ಯಂತ ವಿಶ್ವ ದ್ವಿದಳ ಧಾನ್ಯ ದಿನವನ್ನು ಆಚರಿಸಲಾಗುತ್ತದೆ. ದ್ವಿದಳ ಧಾನ್ಯಗಳ ಪೌಷ್ಟಿಕ, ಪರಿಸರ ಮತ್ತು ಆರ್ಥಿಕ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಜನರಿಗೆ ತಿಳಿಸುವ ಉದ್ದೇಶದಿಂದ ಸಂಯುಕ್ತ ರಾಷ್ಟ್ರಸಂಘದ ಮಹಾಸಭೆಯು 2018ರಲ್ಲಿ ಈ ದಿನವನ್ನು ಘೋಷಿಸಿತು. 2019ರಲ್ಲಿ ಮೊದಲ ಬಾರಿಗೆ ಆಚರಣೆ ಪ್ರಾರಂಭವಾಯಿತು. ಇದಕ್ಕೂ ಮೊದಲು 2016 ಅನ್ನು ಅಂತರರಾಷ್ಟ್ರೀಯ ದ್ವಿದಳ ಧಾನ್ಯ ವರ್ಷದಾಗಿ ಆಚರಿಸಲಾಗಿದ್ದು, ಅದರ ಯಶಸ್ಸಿನ ಮುಂದುವರಿಕೆಯೇ ಈ ವಿಶೇಷ ದಿನ. ಸಾವಿರಾರು ವರ್ಷಗಳಿಂದ ಮಾನವ ಆಹಾರ ಸಂಸ್ಕೃತಿಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಈ ಧಾನ್ಯಗಳು ಇಂದು ಆರೋಗ್ಯಕರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿವೆ.

ಲೆಗ್ಯೂಮಿನೋಸೇ (Leguminosae) ಕುಟುಂಬಕ್ಕೆ ಸೇರಿದ ಸಸ್ಯಗಳ ಖಾದ್ಯ ಬೀಜಗಳನ್ನು ದ್ವಿದಳ ಧಾನ್ಯಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಸುಲಭವಾಗಿ ಸಂಗ್ರಹಿಸಬಹುದು ಹಾಗೂ ಮಾನವ ಮತ್ತು ಪಶು ಆಹಾರವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಭಾರತದಲ್ಲಿ ತೊಗರಿ, ಹೆಸರು, ಕಡಲೆ, ಉದ್ದು, ಮಸೂರ, ಅವರೆಕಾಳು, ಹುರುಳಿ, ಅಲಸಂದೆ, ರಾಜ್ಮಾ ಮತ್ತು ಸೋಯಾಬೀನ್ಸ್ ಮುಂತಾದ ಧಾನ್ಯಗಳು ಸಾಮಾನ್ಯವಾಗಿ ಬಳಸಲ್ಪಡುತ್ತವೆ. ನಮ್ಮ ದೈನಂದಿನ ಊಟದ ತಟ್ಟೆಯಲ್ಲಿ ಬೇಳೆಸಾರು, ದಾಲ್, ತೊವ್ವೆ, ಬಿಸಿಬೇಳೆಬಾತ್, ವಡೆ, ಅಂಬೋಡೆ ಮತ್ತು ಪಾಯಸಗಳ ರೂಪದಲ್ಲಿ ಇವುಗಳ ಬಳಕೆ ಸಾಮಾನ್ಯವಾಗಿದೆ.

ಆರೋಗ್ಯದ ದೃಷ್ಟಿಯಿಂದ ದ್ವಿದಳ ಧಾನ್ಯಗಳು ಅತ್ಯಂತ ಪೌಷ್ಟಿಕ ಆಹಾರವಾಗಿವೆ. ಪ್ರೋಟೀನ್‌ಗಳ ಉತ್ತಮ ಮೂಲವಾಗಿರುವ ಇವು ಸಸ್ಯಾಹಾರಿಗಳಿಗೆ ವಿಶೇಷವಾಗಿ ಉಪಯುಕ್ತ. ಜೊತೆಗೆ ಫೈಬರ್ ಅಧಿಕವಾಗಿರುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಮಲಬದ್ಧತೆ ಕಡಿಮೆಯಾಗುತ್ತದೆ. ಕಬ್ಬಿಣ, ಜಿಂಕ್, ಫೋಲೇಟ್, ಮೆಗ್ನೀಸಿಯಂ ಮುಂತಾದ ಖನಿಜಗಳು ದೇಹದ ಸಮಗ್ರ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುತ್ತವೆ. ಕಡಿಮೆ ಕೊಬ್ಬು ಮತ್ತು ಕೊಲೆಸ್ಟ್ರಾಲ್ ರಹಿತ ಗುಣಗಳಿಂದ ಹೃದಯರೋಗ, ಮಧುಮೇಹ ಹಾಗೂ ತೂಕ ಹೆಚ್ಚಳದ ಅಪಾಯವನ್ನು ತಗ್ಗಿಸಲು ಸಹಾಯವಾಗುತ್ತದೆ. ಅಂದರೆ, ದ್ವಿದಳ ಧಾನ್ಯಗಳು “ಪೂರ್ಣ ಪೌಷ್ಟಿಕ ಆಹಾರ” ಎಂದೇ ಹೇಳಬಹುದು.

ಪರಿಸರದ ದೃಷ್ಟಿಯಿಂದಲೂ ಇವು ಬಹಳ ಮಹತ್ವದ್ದಾಗಿವೆ. ದ್ವಿದಳ ಬೆಳೆಗಳ ಬೇರುಗಳಲ್ಲಿ ಇರುವ ರೈಜೋಬಿಯಂ ಬ್ಯಾಕ್ಟೀರಿಯಾ ಮಣ್ಣಿನಲ್ಲಿ ಸಾರಜನಕವನ್ನು ಸ್ಥಿರೀಕರಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಇದರಿಂದ ರಾಸಾಯನಿಕ ರಸಗೊಬ್ಬರಗಳ ಅವಶ್ಯಕತೆ ಕಡಿಮೆಯಾಗುತ್ತದೆ. ಜೊತೆಗೆ ಇತರ ಬೆಳೆಗಳಿಗಿಂತ ಕಡಿಮೆ ನೀರು ಬೇಕಾಗುವುದು ಮತ್ತು ಕಡಿಮೆ ಹಸಿರುಮನೆ ಅನಿಲಗಳನ್ನು ಉತ್ಪತ್ತಿ ಮಾಡುವುದು ಪರಿಸರ ಸ್ನೇಹಿ ಕೃಷಿಗೆ ನೆರವಾಗುತ್ತದೆ. ಹೀಗಾಗಿ, ದ್ವಿದಳ ಧಾನ್ಯಗಳು ಸುಸ್ಥಿರ ಕೃಷಿಯ ಪ್ರಮುಖ ಭಾಗವಾಗಿವೆ.

ಇದನ್ನೂ ಓದಿ: ಟೆಡ್ಡಿ ಡೇ ವ್ಯಾಲೆಂಟೈನ್‌ ವೀಕ್‌ನ ಭಾಗವಾಗಿದ್ದು ಹೇಗೆ? ಈ ದಿನದ ಹಿನ್ನೆಲೆಯ ಬಗ್ಗೆ ತಿಳಿಯಿರಿ

ಆರ್ಥಿಕವಾಗಿ ಕೂಡ ದ್ವಿದಳ ಧಾನ್ಯಗಳು ಬಹಳ ಪ್ರಯೋಜನಕಾರಿ. ಅಗ್ಗದ ಬೆಲೆಯಲ್ಲಿ ಲಭ್ಯವಾಗುವ ಈ ಧಾನ್ಯಗಳು ಜನರಿಗೆ ಪೌಷ್ಟಿಕ ಆಹಾರ ಭದ್ರತೆಯನ್ನು ಒದಗಿಸುತ್ತವೆ. ಸಣ್ಣ ಮತ್ತು ಮಧ್ಯಮ ರೈತರಿಗೆ ಉತ್ತಮ ಆದಾಯದ ಮೂಲವಾಗಿದ್ದು, ದೀರ್ಘಕಾಲ ಸಂಗ್ರಹಿಸಬಹುದಾದ ಗುಣದಿಂದ ಆಹಾರ ಸುರಕ್ಷತೆಯನ್ನೂ ಹೆಚ್ಚಿಸುತ್ತದೆ. ಭಾರತವು ವಿಶ್ವದಲ್ಲೇ ದ್ವಿದಳ ಧಾನ್ಯಗಳ ಅತಿದೊಡ್ಡ ಉತ್ಪಾದಕ ಹಾಗೂ ಗ್ರಾಹಕ ರಾಷ್ಟ್ರವಾಗಿದ್ದು, ಕರ್ನಾಟಕದಲ್ಲಿ ತೊಗರಿ, ಹೆಸರು, ಕಡಲೆ, ಉದ್ದು ಮತ್ತು ಅವರೆ ಬೆಳೆಗಳು ಪ್ರಮುಖ ಸ್ಥಾನ ಪಡೆದಿವೆ.

ಸರಳವಾಗಿ ಕಾಣುವ ಈ ಸಣ್ಣ ಬೀಜಗಳು ಆರೋಗ್ಯಕರ ಸಮಾಜ, ಸುರಕ್ಷಿತ ಪರಿಸರ ಮತ್ತು ಸ್ಥಿರ ಆರ್ಥಿಕತೆಯ ಅಡಿಪಾಯವಾಗಿವೆ. ನಮ್ಮ ದೈನಂದಿನ ಆಹಾರದಲ್ಲಿ ದ್ವಿದಳ ಧಾನ್ಯಗಳನ್ನು ಹೆಚ್ಚು ಸೇರಿಸುವುದು ಕೇವಲ ಆರೋಗ್ಯಕ್ಕಲ್ಲ, ಭವಿಷ್ಯದ ಸುಸ್ಥಿರ ಬದುಕಿಗೆ ಸಹ ಮಹತ್ವದ ಹೆಜ್ಜೆಯಾಗಿದೆ. “ಸಣ್ಣ ಬೀಜಗಳು – ದೊಡ್ಡ ಶಕ್ತಿ” ಎಂಬ ಮಾತಿನಂತೆ, ದ್ವಿದಳ ಧಾನ್ಯಗಳೊಂದಿಗೆ ಆರೋಗ್ಯಕರ ಮತ್ತು ಸುಸ್ಥಿರ ನಾಳೆಯನ್ನು ನಿರ್ಮಿಸೋಣ.

ಲೇಖನ: ಡಾ. ರವಿಕಿರಣ ಪಟವರ್ಧನ, ಪಟವರ್ಧನ ಆಯುರ್ವೇದ ಕ್ಲಿನಿಕ್, ಶಿರಸಿ – 581401, ದೂರವಾಣಿ: 08384225836

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿ ಅಂಗಳ ತಲುಪಿದ ಬಿಜೆಪಿ, ಜೆಡಿಎಸ್ ಮೈತ್ರಿ ಗೊಂದಲ: ಹೆಚ್​ಡಿಕೆಗೆ ಬಿಜೆಪಿ ಹೈಕಮಾಂಡ್​ನಿಂದ ಸಿಕ್ತು ಅಭಯ! – Kannada News | Karnataka NDA Alliance Rift Reaches Delhi: HD Kumaraswamy and BJP High Command discussed Local BJP–JDS Leaders Clash

ದೆಹಲಿ ಅಂಗಳ ತಲುಪಿದ ಬಿಜೆಪಿ, ಜೆಡಿಎಸ್ ಮೈತ್ರಿ ಗೊಂದಲImage Credit source: tv9

ಬೆಂಗಳೂರು/ ನವದೆಹಲಿ, ಫೆಬ್ರವರಿ 10: ಕರ್ನಾಟಕದಲ್ಲಿ (Karnataka) ಎನ್‌ಡಿಎ (NDA) ಮೈತ್ರಿ ರಾಜಕೀಯ ಗೊಂದಲ ಇದೀಗ ದೆಹಲಿ ಅಂಗಳಕ್ಕೂ ತಲುಪಿದೆ. ಟಿಕೆಟ್ ಹಂಚಿಕೆ ವಿಚಾರವಾಗಿ ಬಿಜೆಪಿ (BJP) ಮಾಜಿ ಶಾಸಕರ ಹೇಳಿಕೆಗಳು ಜೆಡಿಎಸ್ (JDS) ನಾಯಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ಬೆಳವಣಿಗೆ ಕುರಿತು ಕೇಂದ್ರ ನಾಯಕರ ಮಟ್ಟದಲ್ಲೇ ಚರ್ಚೆಗಳು ನಡೆದಿವೆ. ಟಿಕೆಟ್ ಹಂಚಿಕೆ ಕುರಿತಾಗಿ ಬಿಜೆಪಿ ನಾಯಕ ಪ್ರೀತಂಗೌಡ ಹಾಗೂ ನಾರಾಯಣಗೌಡ ನೀಡಿದ ಹೇಳಿಕೆಗಳಿಗೆ ಜೆಡಿಎಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಶಾಸಕರ ವರ್ತನೆ ಬಗ್ಗೆ ಜೆಡಿಎಸ್ ರಾಜ್ಯ ನಾಯಕರು ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಬೆನ್ನಲ್ಲೇ ಅಗರ್ವಾಲ್ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಜೊತೆ ದೆಹಲಿಯಲ್ಲಿ ಮಾತುಕತೆ ನಡೆಸಿದ್ದಾರೆ.

ರಾಜ್ಯ ರಾಜಕೀಯ ಬೆಳವಣಿಗೆಗಳು, ಮಾಜಿ ಶಾಸಕರ ಹೇಳಿಕೆಗಳು ಹಾಗೂ ಮೈತ್ರಿ ಪಕ್ಷಗಳ ನಡುವಿನ ಸಮನ್ವಯದ ಬಗ್ಗೆ ಇಬ್ಬರು ನಾಯಕರು ಚರ್ಚೆ ನಡೆಸಿದರೆಂದು ತಿಳಿದುಬಂದಿದೆ. ಅನಗತ್ಯ ಹೇಳಿಕೆಗಳು ಮೈತ್ರಿ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಗೊಂದಲ ಉಂಟಾಗಬಹುದು ಹಾಗೂ ಜೆಡಿಎಸ್-ಬಿಜೆಪಿ ಕಾರ್ಯಕರ್ತರಲ್ಲೂ ಗೊಂದಲ ಹೆಚ್ಚಬಹುದು. ಕಾರ್ಯಕರ್ತರಲ್ಲಿ ಗೊಂದಲವಾದರೆ ಕಾಂಗ್ರೆಸ್‌ಗೆ ಲಾಭವಾಗುತ್ತದೆ ಎಂಬ ಆತಂಕವನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ನಾಯಕರ ಹೇಳಿಕೆಗಳಿಗೆ ಬ್ರೇಕ್ ಹಾಕಲಾಗುವುದು ಎಂದು ಅಗರ್ವಾಲ್ ತಿಳಿಸಿದ್ದಾರೆ.

ಏನು ಹೇಳಿದ್ದರು ಪ್ರೀತಂಗೌಡ, ನಾರಾಯಣಗೌಡ?

ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನವೇ ಮಂಡ್ಯ ಜಿಲ್ಲೆಯಲ್ಲಿ ಮೈತ್ರಿ ಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ನಾಯಕರ ನಡುವೆ ಟಿಕೆಟ್ ಗುದ್ದಾಟ ಆರಂಭವಾಗಿತ್ತು. 2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ಕ್ಷೇತ್ರ ಹಂಚಿಕೆ ಕುರಿತು ಎರಡೂ ಪಕ್ಷಗಳ ನಾಯಕರು ತಮ್ಮ ತಮ್ಮ ಹಕ್ಕು ಮಂಡಿಸಲು ಮುಂದಾಗಿದ್ದರು. ಮಂಡ್ಯ ಜಿಲ್ಲೆಯ ಕೆಲವು ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಡಬೇಕು ಎಂದು ಬಿಜೆಪಿ ನಾಯಕರಾದ ಪ್ರೀತಂಗೌಡ, ನಾರಾಯಣಗೌಡ ಒತ್ತಾಯಿಸಿದ್ದರು. ಕೆಆರ್ ಪೇಟೆ ಸೇರಿದಂತೆ ಮೂರು ಕ್ಷೇತ್ರಗಳನ್ನು ನೀಡುವಂತೆ ಆಗ್ರಹ ವ್ಯಕ್ತಪಡಿಸಲಾಗಿತ್ತು. ಅಲ್ಲದೇ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿಯೂ ಶೇ 50ರಷ್ಟು ಸ್ಥಾನಗಳನ್ನು ಬಿಜೆಪಿಗೆ ನೀಡಬೇಕು ಎಂಬ ಬೇಡಿಕೆಯನ್ನು ಮಾಜಿ ಸಚಿವ ನಾರಾಯಣಗೌಡ ಹಾಗೂ ಮಾಜಿ ಶಾಸಕ ಪ್ರೀತಂಗೌಡ ಮುಂದಿಟ್ಟಿದ್ದರು.

ಇದೇ ವೇಳೆ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ನೀಡಿದ ಹೇಳಿಕೆಗಳಿಗೂ ಬಿಜೆಪಿ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. 2028ರ ಚುನಾವಣೆಯಲ್ಲಿ ಎಚ್​​ಟಿ ಮಂಜು ಅವರನ್ನು ಮತ್ತೆ ಗೆಲ್ಲಿಸಬೇಕು ಎಂದು ಕೆಆರ್ ಪೇಟೆಯಲ್ಲಿ ನಿಖಿಲ್ ಮನವಿ ಮಾಡಿದ್ದನ್ನು ಬಿಜೆಪಿ ನಾಯಕರು ವಿರೋಧಿಸಿದ್ದರು. ಅಭ್ಯರ್ಥಿ ಘೋಷಣೆ ಮಾಡುವ ಅಧಿಕಾರ ನಿಖಿಲ್ ಅವರಿಗೆ ಇಲ್ಲ ಎಂದು ತಿರುಗೇಟು ನೀಡಿದ್ದರು.

ನಿಖಿಲ್ ಕುಮಾರಸ್ವಾಮಿ ನಿರಂತರ ಸೋಲು ಅನುಭವಿಸಿರುವ ನಾಯಕರು; ಮೊದಲಿಗೆ ತಮ್ಮ ರಾಜಕೀಯ ಅಸ್ತಿತ್ವವನ್ನು ಸಾಬೀತುಪಡಿಸಿಕೊಳ್ಳಲಿ ಎಂದು ಬಿಜೆಪಿ ನಾಯಕರು ಸವಾಲು ಹಾಕಿದ್ದರು. ಈ ರೀತಿಯ ಹೇಳಿಕೆಗಳು ಮುಂದುವರಿದರೆ ಮೈತ್ರಿ ಸಂಬಂಧಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಇದನ್ನೂ ಓದಿ: ಮಂಡ್ಯ: ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನವೇ ಬಿಜೆಪಿ, ಜೆಡಿಎಸ್ ಟಿಕೆಟ್ ಫೈಟ್! ನಿಖಿಲ್ ವಿರುದ್ಧ ಕೇಸರಿ ಪಡೆ ಬಹಿರಂಗ ವಾಗ್ದಾಳಿ

ಒಟ್ಟಿನಲ್ಲಿ, ಸ್ಥಳೀಯ ಸಂಸ್ಥೆ ಚುನಾವಣೆಗಳ ಹೊಸ್ತಿಲಲ್ಲೇ ಮೈತ್ರಿ ಪಕ್ಷಗಳೊಳಗಿನ ಭಿನ್ನಾಭಿಪ್ರಾಯಗಳು ಹೊರಹೊಮ್ಮುತ್ತಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊದಲ ಪಂದ್ಯದಲ್ಲಿ ಎದ್ದು ಬಿದ್ದು ಗೆದ್ದ ಪಾಕಿಸ್ತಾನಕ್ಕೆ ನಡುಕ! – Kannada News | T20 World Cup 2026: Pakistan vs United States of America Match Today

T20 World Cup 2026: ಟಿ20 ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಗೆಲ್ಲುವ ಮೂಲಕ ಪಾಕಿಸ್ತಾನ್ ಶುಭಾರಂಭ ಮಾಡಿದೆ. ಈ ಶುಭಾರಂಭ ರೋಚಕ ಗೆಲುವಿನೊಂದಿಗೆ ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ನೆದರ್​ಲೆಂಡ್ಸ್ ವಿರುದ್ಧದ ಈ ಪಂದ್ಯದಲ್ಲಿ ಪಾಕ್ ಪಡೆ ಅಂತಿಮ ಓವರ್​ನಲ್ಲಿ ಗೆಲುವು ದಾಖಲಿಸಿತ್ತು. ಅದು ಸಹ 3 ವಿಕೆಟ್​ಗಳಿಂದ.

ಕೊಲಂಬೊದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನೆದರ್​ಲೆಂಡ್ಸ್ ತಂಡವು ಕಲೆಹಾಕಿದ್ದು ಕೇವಲ 147 ರನ್​ಗಳು ಮಾತ್ರ.

ಆದರೆ ಈ ಗುರಿಯನ್ನು ಬೆನ್ನತ್ತುವಲ್ಲಿ ಪಾಕ್ ಪಡೆ ಅಕ್ಷರಶಃ ಒದ್ದಾಡಿದರು. ಅದರಲ್ಲೂ ಕೊನೆಯ 2 ಓವರ್​ಗಳಲ್ಲಿ ಪಾಕಿಸ್ತಾನ್ ತಂಡಕ್ಕೆ 29 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಮ್ಯಾಕ್ಸ್ ಒಡೌಡ್ ಬಿಟ್ಟ ಕ್ಯಾಚ್ ನೆದರ್​ಲೆಂಡ್ಸ್ ಪಾಲಿಗೆ ಮುಳುವಾಯಿತು.

ಅಂತಿಮ ಹಂತದಲ್ಲಿ ಸಿಕ್ಕ ಜೀವದಾನವನ್ನು ಬಳಸಿಕೊಂಡ ಫಯೀಮ್ ಅಶ್ರಫ್ 19ನೇ ಓವರ್​ನಲ್ಲಿ 24 ರನ್ ಚಚ್ಚಿದರು. ಅಲ್ಲದೆ ಕೊನೆಯ ಓವರ್​ನ 3ನೇ ಎಸೆತದಲ್ಲಿ ಫೋರ್ ಬಾರಿಸಿ ಪಾಕಿಸ್ತಾನ್ ತಂಡಕ್ಕೆ 3 ವಿಕೆಟ್​ಗಳ ರೋಚಕ ಗೆಲುವು ತಂದು ಕೊಟ್ಟರು.

ಅಂದರೆ ಇಲ್ಲಿ ನೆದರ್​ಲೆಂಡ್ಸ್ ಫೀಲ್ಡರ್ ಮಾಡಿದ ತಪ್ಪಿನಿಂದಾಗಿ ಪಾಕಿಸ್ತಾನ್ ತಂಡ ಗೆಲ್ಲುವಂತಾಯಿತು ಎಂದರೆ ತಪ್ಪಾಗಲಾರದು. ಏಕೆಂದರೆ ಫಯೀಮ್ ಅಶ್ರಫ್ ವಿಕೆಟ್ ಪಡೆದಿದ್ದರೆ, ಪಂದ್ಯವು ಸಂಪೂರ್ಣ ನೆದರ್​ಲೆಂಡ್ಸ್ ಪರ ವಾಲುತ್ತಿತ್ತು. ಆದರೆ ಅಂತಿಮ ಹಂತದಲ್ಲಿ ಮ್ಯಾಕ್ಸ್​ ಒಡೌಡ್ ಮಾಡಿದ ತಪ್ಪಿನಿಂದಾಗಿ ನೆದರ್​ಲೆಂಡ್ಸ್ ಸೋಲನುಭವಿಸಿತು.

ಇದೀಗ ಪಾಕಿಸ್ತಾನ್ ತಂಡವು ತನ್ನ 2ನೇ ಪಂದ್ಯವಾಡಲು ಸಜ್ಜಾಗಿದೆ. ಇಂದು (ಫೆ.10) ನಡೆಯಲಿರುವ ಟಿ20 ವಿಶ್ವಕಪ್​ನ 12ನೇ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ಯುಎಸ್​ಎ ಮುಖಾಮುಖಿಯಾಗಲಿದೆ. ಮೊದಲ ಪಂದ್ಯದಲ್ಲೇ ಎದ್ದು ಬಿದ್ದು ಗೆದ್ದಿರುವ ಪಾಕ್ ಪಡೆಗೆ ಇದೀಗ ಇತಿಹಾಸದ್ದೇ ಚಿಂತೆ.

ಮರುಕಳಿಸಲಿದೆಯಾ ಇತಿಹಾಸ?

ಪಾಕಿಸ್ತಾನ್ ಮತ್ತು ಯುಎಸ್​ಎ ಟಿ20 ಕ್ರಿಕೆಟ್​ನಲ್ಲಿ ಈವರೆಗೆ ಒಮ್ಮೆ ಮಾತ್ರ ಮುಖಾಮುಖಿಯಾಗಿದೆ. ಈ ಮುಖಾಮುಖಿಯಲ್ಲಿ ಗೆದ್ದಿರುವುದು ಯುಎಸ್​ಎ ಎಂಬುದು ವಿಶೇಷ. ಅಂದರೆ 2024 ರಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕ್ ಪಡೆಯನ್ನು ಬಗ್ಗು ಬಡಿಯುವಲ್ಲಿ ಯುಎಸ್​ಎ ಯಶಸ್ವಿಯಾಗಿತ್ತು.

ಡಲ್ಲಾಸ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಯುಎಸ್​ಎ ತಂಡವು ಅಂತಿಮ ಓವರ್​ನಲ್ಲಿ 14 ರನ್​ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿದ್ದರು.

ಇನ್ನು ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಸ್​ಎ ತಂಡವು 18 ರನ್ ಕಲೆಹಾಕಿದ್ದರು. 19 ರನ್​ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ್ 13 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಯುಎಸ್​ಎ ತಂಡ 5 ರನ್​ಗಳ ವಿಜಯ ಸಾಧಿಸಿತ್ತು.

ಇದನ್ನೂ ಓದಿ: IPL 2026: ಬೆಂಗಳೂರು ಯುನೈಟೆಡ್ ಆಗಲಿದೆಯಾ RCB?

ಇದೀಗ ಮತ್ತೊಮ್ಮೆ ಪಾಕಿಸ್ತಾನ್ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದೆ ಯುಎಸ್​ಎ. ಅದರಲ್ಲೂ ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿರುವ ಭಾರತ ತಂಡವನ್ನೇ ಕಾಡಿದ್ದ ಯುಎಸ್​ಎ ಬೌಲರ್​ಗಳು ಪಾಕಿಸ್ತಾನ್ ತಂಡವನ್ನು ಸಹ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವುದರಲ್ಲಿ ಅನುಮಾನವೇ ಇಲ್ಲ.

Source link

ಪೋಷಕರು ಕಾಲಿಗೆ ಬಿದ್ದು ಗೋಗರೆದರೂ ಕರಗದ ಮಗಳು! ಮುಸ್ಲಿಂ ಯುವಕನೊಂದಿಗೆ ಯುವತಿ ಪರಾರಿ – Kannada News | Vijayapura Love Story: Adult Daughter Chooses Muslim Husband Over Crying Parents

‘ನಾನು ಅವನ ಜೊತೆಗೇ ಹೋಗ್ತೀನಿ, ನಿಮ್ಮ ಜೊತೆ ಬರಲ್ಲ’ ಪೋಷಕರ ಕಣ್ಣೀರಿಗೂ ಕರಗದ ಮಗಳು!

ವಿಜಯಪುರ, ಫೆಬ್ರವರಿ 10: ಪ್ರೀತಿಸಿದ ಯುವಕನೊಂದಿಗೆ ಪರಾರಿಯಾದ ಮಗಳಿಗಾಗಿ ಆಕೆಯ ಪೋಷಕರು ಪೊಲೀಸ್ ಠಾಣೆ ಮುಂದೆ ಕಣ್ಣಿರು ಹಾಕಿದ ಘಟನೆ ವಿಜಯಪುರದಲ್ಲಿ (Vijayapura) ನಡೆದಿದೆ. ಹೆತ್ತವರನ್ನು ಬಿಟ್ಟು ಪರಾರಿಯಾದ ಯುವತಿ, ಅನ್ಯಧರ್ಮೀಯನನ್ನು ಮದುವೆ ಆಗಿದ್ದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಮಹಿಳಾ ಪೊಲೀಸ್ ಠಾಣೆಯ ಎದುರಿಗೆ ಕೂತು ಗೋಳಿಟ್ಟಿದ್ದಾರೆ.

ಮೊಹಮದ್ ಸಲಿಂ ಸುತಾರ್ ಎಂಬ ಯುವಕನನ್ನು ಪ್ರೀತಿಸಿದ್ದ ಹುಡುಗಿ, ತಂದೆ ತಾಯಿಯನ್ನು ಎದುರುಹಾಕಿಕೊಂಡು ಆತನೊಂದಿಗೆ ಪರಾರಿಯಾಗಿದ್ದಳು. ಈ ಹಿನ್ನೆಲೆ ಮಗಳು ಕಾಣೆಯಾಗಿದ್ದಾಳೆಂದು ಫೆಬ್ರವರಿ 2ರಂದು ಯುವತಿಯ ಪೋಷಕರು ವಿಜಯನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಇದೀಗ ಅದೇ ಠಾಣೆಗೆ ಸ್ವಯಂಪ್ರೇರಿತವಾಗಿ ಪ್ರಿಯಕರನೊಂದಿಗೆ ಬಂದ ಯುವತಿ, ತಾನು ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ.

ಪೊಲೀಸ್ ವಾಹನದ ಮುಂದೆ ಅಡ್ಡ ಬಿದ್ದು ಗೋಳಾಡಿದ ತಂದೆ-ತಾಯಿ

ಈ ವೇಳೆ ಠಾಣೆಗೆ ಬಂದ ತಂದೆ-ತಾಯಿ, ಮನೆಗೆ ವಾಪಸ್ ಬರುವಂತೆ ಮಗಳಲ್ಲಿ ಅಂಗಲಾಚಿದ್ದಾರೆ. ಆದರೆ ಯುವತಿ ಮಾತ್ರ ಹೆತ್ತವರ ಕಣ್ಣೀರಿಗೂ ಕರಗದೆ, ನಾನು ನನ್ನ ಗಂಡನ ಜೊತೆಗೆ ಹೋಗುತ್ತೇನೆ, ನಿಮ್ಮ ಜೊತೆ ಬರಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾಳೆ. ಯುವತಿಯೂ ಪ್ರಾಪ್ತ ವಯಸ್ಸಿನವಳಾದ್ದರಿಂದ ಪೊಲೀಸರು ಆಕೆಯನ್ನು ಪತಿಯ ಜೊತೆಗೇ ಕಳುಹಿಸಿಕೊಟ್ಟಿದ್ದಾರೆ.

ಇದನ್ನೂ ಓದಿ ಸಾವಿರ ರೂಪಾಯಿಗೆ ಹೆಂಡತಿಯನ್ನು ಸ್ನೇಹಿತರಿಗೆ ಮಾರಿದ ವ್ಯಕ್ತಿ, ಆಮೇಲೆ ನಡೀಬಾರದ್ದು ನಡೆದೇ ಹೋಯ್ತು

ಪೋಷಕರು ಎಷ್ಟೇ ಕರೆದರೂ ಒಪ್ಪದ ಮಗಳು ಗಂಡನೊಂದಿಗೇ ಹೋದಾಗ, ಆಕೆಯಿದ್ದ ಪೊಲೀಸ್ ವಾಹನಕ್ಕೂ ಅಡ್ಡಬಿದ್ದು ಮಗಳನ್ನು ಓಲೈಸಲು ಪೋಷಕರು ಪ್​ರಯತ್ನಿಸಿದ್ದಾರೆ. ಆದರೂ ಹೆತ್ತ ಕರುಳಿಗೆ ಸಮಾಧಾನವಾಗದೇ ಪೊಲೀಸ್ ಠಾಣೆಯ ಮುಂದೇ ಕುಳಿತು ತಂದೆ ತಾಯಿಯಿಬ್ಬರೂ ಗೋಗರೆದಿದ್ದಾರೆ. ಮಗಳು ಮಾತ್ರ ತಂದೆ ತಾಯಿಯ ಮುಖವನ್ನೂ ನೋಡದೆ ಅನ್ಯಕೋಮಿನ ಪ್ರಿಯಕರನೊಂದಿಗೆ ಹೊರಟು ಹೋಗಿದ್ದಾಳೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Pearl Ring: ಮುತ್ತಿನ ಉಂಗುರ ಧರಿಸುವ ಮುನ್ನ ಈ ವಿಚಾರ ತಿಳಿದಿರಲಿ; ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Pearl for Weak Moon: Astrological Remedies for Mental Peace and Zodiac Benefits

ಜ್ಯೋತಿಷ್ಯಶಾಸ್ತ್ರದಲ್ಲಿ ಚಂದ್ರ ನಿಗೆ ತನ್ನದೇ ಆದ ಮಹತ್ವದ ಸ್ಥಾನವಿದೆ. ನಮ್ಮ ಆಲೋಚನೆಗಳು, ಭಾವನೆಗಳು, ನಿದ್ರೆ ಮತ್ತು ಮನಸ್ಥಿತಿಯ ಮೇಲೆ ಚಂದ್ರನ ಪ್ರಭಾವ ಬಹಳ ಗಟ್ಟಿಯಾಗಿರುತ್ತದೆ. ಜಾತಕದಲ್ಲಿ ಚಂದ್ರನು ದುರ್ಬಲವಾಗಿದ್ದರೆ ಮಾನಸಿಕ ಗೊಂದಲ, ಅತಿಯಾದ ಕೋಪ, ಆತಂಕ, ನಿರ್ಧಾರಗಳಲ್ಲಿ ಅಸ್ಥಿರತೆ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ಮುತ್ತು (Pearl) ಧರಿಸುವುದು ಅತ್ಯಂತ ಪರಿಣಾಮಕಾರಿ ಪರಿಹಾರವೆಂದು ಜ್ಯೋತಿಷಿಗಳು ಸೂಚಿಸುತ್ತಾರೆ. ಬೆಳ್ಳಿಯ ಉಂಗುರದಲ್ಲಿ ನೈಸರ್ಗಿಕ ಮುತ್ತು ಧರಿಸುವುದರಿಂದ ಮನಸ್ಸಿಗೆ ಶಾಂತಿ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಶಕ್ತಿ ದೊರೆಯುತ್ತದೆ.

ಮೇಷ ಮತ್ತು ಕರ್ಕ ರಾಶಿ:

ಮೇಷ ಮತ್ತು ಕರ್ಕ ರಾಶಿಯವರಿಗೆ ಮುತ್ತು ಧರಣೆ ವಿಶೇಷವಾಗಿ ಶುಭಕರವಾಗಿದೆ. ಮೇಷ ರಾಶಿಯವರಿಗೆ ಚಂದ್ರನು ನಾಲ್ಕನೇ ಪಾದದ ಅಧಿಪತಿ ಆಗಿರುವುದರಿಂದ, ಮುತ್ತು ಧರಿಸಿದರೆ ಮನೆ, ವಾಹನ ಮತ್ತು ಇತರೆ ಭೌತಿಕ ಸೌಕರ್ಯಗಳಲ್ಲಿ ಪ್ರಗತಿ ಕಾಣಬಹುದು. ಕುಟುಂಬ ಜೀವನದಲ್ಲಿ ಸ್ಥಿರತೆ ಹೆಚ್ಚಾಗಿ, ಜೀವನದಲ್ಲಿ ರಾಜಯೋಗದಂತಾದ ಫಲಿತಾಂಶಗಳು ದೊರೆಯುವ ಸಾಧ್ಯತೆ ಇದೆ. ಕರ್ಕ ರಾಶಿಯವರು ಚಂದ್ರನ ಸ್ವರಾಶಿಯವರಾಗಿರುವುದರಿಂದ ಮುತ್ತು ಅವರಿಗೆ ಅತ್ಯಗತ್ಯ. ಇದು ಮಾನಸಿಕ ಗೊಂದಲವನ್ನು ಕಡಿಮೆ ಮಾಡಿ, ಕುಟುಂಬದಲ್ಲಿ ಸಾಮರಸ್ಯ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ವೃತ್ತಿಜೀವನದಲ್ಲಿಯೂ ಉತ್ತಮ ಪ್ರಗತಿ ಕಾಣಬಹುದು.

ವೃಶ್ಚಿಕ ಮತ್ತು ಮೀನ ರಾಶಿ:

ವೃಶ್ಚಿಕ ಮತ್ತು ಮೀನ ರಾಶಿಯವರಿಗೂ ಮುತ್ತು ಧರಣೆ ಬಹಳ ಉಪಕಾರಿಯಾಗಿದೆ. ವೃಶ್ಚಿಕ ರಾಶಿಯವರು ಸಾಮಾನ್ಯವಾಗಿ ಹಠಾತ್ ಮತ್ತು ತೀವ್ರ ಸ್ವಭಾವ ಹೊಂದಿರುತ್ತಾರೆ. ಮುತ್ತು ಧರಿಸುವುದರಿಂದ ಕೋಪ ನಿಯಂತ್ರಣದಲ್ಲಿದ್ದು, ಆಲೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯವಾಗುತ್ತದೆ. ಸಂಬಂಧಗಳಲ್ಲಿ ಮಧುರತೆ ಹೆಚ್ಚಾಗಿ, ಆರ್ಥಿಕ ಸ್ಥಿರತೆ ಕೂಡ ದೊರೆಯುತ್ತದೆ. ಮೀನ ರಾಶಿಯವರು ಮುತ್ತಿನಿಂದ ಮಾನಸಿಕ ಸ್ಪಷ್ಟತೆ ಮತ್ತು ಆತ್ಮಶಾಂತಿ ಪಡೆಯುತ್ತಾರೆ. ಗೊಂದಲಮಯ ಸಂದರ್ಭಗಳಲ್ಲಿಯೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ ವೃದ್ಧಿಯಾಗುತ್ತದೆ ಮತ್ತು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಆರಂಭವಾಗುತ್ತವೆ.

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಮುತ್ತು ಧರಿಸುವ ವಿಧಾನ:

ಮುತ್ತು ಧರಿಸುವ ವಿಧಾನವೂ ಮಹತ್ವದ್ದಾಗಿದೆ. ಯಾವಾಗಲೂ ಬೆಳ್ಳಿ ಲೋಹದಲ್ಲೇ ಮುತ್ತು ಹೂಡಿಸಬೇಕು. ಶುಕ್ಲ ಪಕ್ಷದ ಸೋಮವಾರದಂದು ಹಾಲು ಮತ್ತು ಗಂಗಾಜಲದಿಂದ ಶುದ್ಧೀಕರಿಸಿ ‘ಓಂ ಸೌಂ ಸೋಮಾಯ ನಮಃ’ ಮಂತ್ರವನ್ನು ಜಪಿಸಿದ ನಂತರ ಬಲಗೈಯ ಕಿರುಬೆರಳಿಗೆ ಧರಿಸುವುದು ಶುಭಕರವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದ ಲಾಭಗಳ ಜೊತೆಗೆ, ಮುತ್ತು ಧರಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರಲು ಮತ್ತು ಜೀರ್ಣಕ್ರಿಯೆ ಸುಧಾರಿಸಲು ಸಹಾಯವಾಗುತ್ತದೆ ಎಂಬ ನಂಬಿಕೆಯೂ ಇದೆ. ಆದ್ದರಿಂದ ನೈಸರ್ಗಿಕ ಹಾಗೂ ಗುಣಮಟ್ಟದ ಮುತ್ತುಗಳನ್ನು ಮಾತ್ರ ಆಯ್ಕೆ ಮಾಡುವುದು ಉತ್ತಮ. ಒಟ್ಟಾರೆ, ಮುತ್ತು ಧರಣೆ ಚಂದ್ರನ ಶಕ್ತಿಯನ್ನು ಬಲಪಡಿಸಿ ಮನಸ್ಸಿಗೆ ಶಾಂತಿ, ಆರೋಗ್ಯಕ್ಕೆ ಬಲ ಮತ್ತು ಜೀವನದಲ್ಲಿ ಅದೃಷ್ಟವನ್ನು ತರಬಲ್ಲ ಸರಳವಾದ ಆದರೆ ಪರಿಣಾಮಕಾರಿ ಜ್ಯೋತಿಷ್ಯ ಪರಿಹಾರವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:36 am, Tue, 10 February 26

Source link