ಜೈಪುರ, ಫೆಬ್ರವರಿ 16: ರಾಜಸ್ಥಾನದ ಭಿವಾಡಿಯಲ್ಲಿರುವ ಖುಷ್ಖೇಡ ಕೈಗಾರಿಕಾ ಪ್ರದೇಶದಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 7 ಮಂದಿ ಕಾರ್ಮಿಕರು ಸಜೀವದಹನವಾಗಿದ್ದಾರೆ. ಕಾರ್ಖಾನೆಯ ಒಳಗಿನಿಂದ ರಕ್ಷಣಾ ತಂಡಗಳು ಏಳು ಕಾರ್ಮಿಕರ ಶವಗಳನ್ನು ಹೊರತೆಗೆದರೆ, ತಿಜಾರಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಇನ್ನೂ ಹಲವಾರು ಅಗ್ನಿಶಾಮಕ ವಾಹನಗಳನ್ನು ಕಳುಹಿಸಲಾಯಿತು. ಒಂದೂವರೆ ಗಂಟೆಗಳ ಕಠಿಣ ಪರಿಶ್ರಮದ ನಂತರ, ಸಿಬ್ಬಂದಿ ಮತ್ತು ಅಧಿಕಾರಿಗಳು ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.ನಂತರ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.ಘಟನೆ ನಡೆದ ಸಮಯದಲ್ಲಿ ಕಾರ್ಖಾನೆಯಲ್ಲಿ 20-25 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕೆಲವರು ತಾವಾಗಿಯೇ ಹೊರಬರುವಲ್ಲಿ ಯಶಸ್ವಿಯಾದರು, ಆದರೆ ಅನೇಕರು ಒಳಗೆ ಸಿಲುಕಿಕೊಂಡು ಬೆಂಕಿಯಲ್ಲಿ ಸಾವನ್ನಪ್ಪಿದ್ದಾರೆ.
ಕೋಲಾರದಲ್ಲಿ ದೇಶದ ಮೊದಲ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ನಾಳೆ ಚಾಲನೆ!
ಕೋಲಾರ, ಫೆಬ್ರವರಿ 16: ಚಿನ್ನದ ನಾಡು ಕೋಲಾರ ಜಿಲ್ಲೆ ರಾಷ್ಟ್ರ ಮಟ್ಟದಲ್ಲಿ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಕೋಲಾರ ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗಿರುವ ಟಾಟಾ ಏರ್‌ಬಸ್ ಮಿನಿ ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕಕ್ಕೆ ನಾಳೆ (ಫೆ.17) ಅಧಿಕೃತ ಚಾಲನೆ ದೊರೆಯಲಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವಲ್ ಮ್ಯಾಕ್ರಾನ್ ವರ್ಚುವಲ್ ಆಗಿ ಘಟಕ ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವೆ ಕ್ಯಾಥರೀನ್ ವಾಟ್ರಿನ್ ಖುದ್ದು ವೇಮಗಲ್‌ಗೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಎಂ.ಆರ್. ರವಿ ಮತ್ತು ಎಸ್ಪಿ ಕನ್ನಿಕಾ ಸಿಕ್ರಿವಾಲ್ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.
ವರ್ಷಕ್ಕೆ 10 ಹೆಲಿಕಾಪ್ಟರ್‌ಗಳನ್ನು ತಯಾರಿಸಲಿದೆ ಈ ಘಟಕ!
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ವತಿಯಿಂದ ಸುಮಾರು 16 ಎಕರೆ ಪ್ರದೇಶದಲ್ಲಿ ಈ ಘಟಕ ನಿರ್ಮಾಣಗೊಂಡಿದ್ದು, ಇದು ದೇಶದಲ್ಲೇ ಮೊದಲ ಮಿನಿ ನಾಗರಿಕ ಹೆಲಿಕಾಪ್ಟರ್ ಜೋಡಣಾ ಘಟಕ ಎನ್ನಲಾಗುತ್ತಿದೆ. ಮೊದಲ ಹಂತದಲ್ಲಿ ವರ್ಷಕ್ಕೆ H125 ಮಾದರಿಯ ಹತ್ತು ಹೆಲಿಕಾಪ್ಟರ್‌ಗಳನ್ನು ತಯಾರಿಸುವ ಸಾಮರ್ಥ್ಯ ಈ ಘಟಕಕ್ಕಿದೆ. ಮುಂದಿನ ದಿನಗಳಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಯೋಜನೆಗಳೂ ರೂಪುಗೊಂಡಿವೆ.
ವೇಮಗಲ್ ಕೈಗಾರಿಕಾ ಪ್ರದೇಶವು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಗೆ ಸಮೀಪವಿರುವುದು ಈ ಸ್ಥಳ ಆಯ್ಕೆಗೂ ಪ್ರಮುಖ ಕಾರಣವಾಗಿದೆ. ಈ ಘಟಕ ಆರಂಭದಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಳವಾಗಲಿದ್ದು, ಕೋಲಾರ ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ಮತ್ತಷ್ಟು ವೇಗ ಸಿಗಲಿದೆ. ರಾಷ್ಟ್ರಮಟ್ಟದಲ್ಲಿ ಕೋಲಾರ ಜಿಲ್ಲೆಯ ಹೆಗ್ಗಳಿಕೆಯನ್ನು ಮತ್ತಷ್ಟು ಹೆಚ್ಚಿಸುವ ಯೋಜನೆ ಇದಾಗಿದೆ.
ರೇಣುಕಾ ಸ್ವಾಮಿ (Renukaswamy) ಕೊಲೆ ಕೇಸ್ನಲ್ಲಿ ಎ1 ಆಗಿರೋ ಪವಿತ್ರಾ ಗೌಡ ಅವರು ಜಾಮೀನು ಪಡೆಯಬೇಕು ಎಂದು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಈಗ ಮಗಳಿಗೆ ಪರೀಕ್ಷೆ ಸಮೀಪಿಸಿದ್ದರಿಂದ ಮಧ್ಯಂತರ ಜಾಮೀನು ನೀಡಬೇಕು ಎಂದು ಪವಿತ್ರಾ ಅವರು ಕೋರ್ಟ್‌ನಲ್ಲಿ ಕೋರಿದ್ದರು. ಆದರೆ, ಕೋರ್ಟ್ ಈ ಮನವಿಯನ್ನು ತಿರಸ್ಕರಿಸಿದೆ. ಇದರಿಂದ ಜೈಲುವಾಸ ಮುಂದುವರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಪವಿತ್ರಾ ಗೌಡ ಅವರು ದರ್ಶನ್ ಆಪ್ತೆ ಎನಿಸಿಕೊಂಡಿದ್ದರು. ಇಬ್ಬರೂ ಲಿವಿನ್ ರಿಲೇಶನ್ಶಿಪ್ನಲ್ಲಿ ಇದ್ದ ಬಗ್ಗೆ ಚಾರ್ಜ್ಶಿಟ್ನಲ್ಲಿ ಉಲ್ಲೇಖಿಸಲಾಗಿದೆ. ಪವಿತ್ರಾಗೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತ ಕಿರುಕುಳ ನೀಡಿದ್ದ. ಈ ವಿಷಯ ದರ್ಶನ್ ಕಿವಿಗೂ ಬಿತ್ತು. ಹೀಗಾಗಿ, ಆತನನ್ನು ಬೆಂಗಳೂರಿಗೆ ಕರೆಸಿ, ಪಟ್ಟಣಗೆರೆ ಶೆಡ್ನಲ್ಲಿ ಆತನ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಈ ವೇಳೆ ಪವಿತ್ರಾ ಗೌಡ, ದರ್ಶನ್ ಕೂಡ ಸ್ಥಳದಲ್ಲಿ ಇದ್ದರು ಮತ್ತು ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಈ ಪ್ರಕರಣದಲ್ಲಿ ಪವಿತ್ರಾ ಗೌಡ ಅವರು ಎ1 ಆರೋಪಿ ಆಗಿದ್ದಾರೆ. ದರ್ಶನ್ ಎ2 ಆಗಿದ್ದಾರೆ. ಪವಿತ್ರಾಗೆ ಇರೋದು ಎಂದರೆ ಮಗಳು ಮಾತ್ರ. ಅವಳಿಗೆ ಪರೀಕ್ಷೆ ಸಮೀಪಿಸಿದೆ. ಹೀಗಾಗಿ, 25 ದಿನಗಳ ಮಧ್ಯಂತ ಜಾಮೀನು ನೀಡಿ ಎಂದು ಕೋರ್ಟ್ ಅಲ್ಲಿ ಮನವಿ ಮಾಡಿದ್ದರು. ಆದರೆ, ಇದನ್ನು ಕೋರ್ಟ್ ನಿರಾಕರಿಸಿದೆ. ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಪವಿತ್ರಾಗೆ ಜಾಮೀನು ನೀಡಲು ನಿರಾಕರಿಸಿದೆ.
ಈ ಮೊದಲು ಪವಿತ್ರಾ ಅವರು ಮನೆ ಊಟಕ್ಕೆ ಬೇಡಿಕೆ ಇಟ್ಟಿದ್ದರು. ಜೈಲು ಊಟದಿಂದ ಆರೋಗ್ಯ ಸಮಸ್ಯೆ ಆಗುತ್ತಿದೆ ಎಂದು ಹೇಳಿದ್ದರು. ಕೆಲ ದಿನ ಇದಕ್ಕೆ ಅವಕಾಶ ಇತ್ತು. ನಂತರ ಇದನ್ನು ರದ್ದು ಮಾಡಲಾಯಿತು.
ಬೆಂಗಳೂರು, ಫೆಬ್ರುವರಿ 16: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಳಿಕೆಯಾಗುವುದು ಮುಂದುವರಿದಿದೆ. ವಾರಾಂತ್ಯದಲ್ಲಿ ಸುಮಾರು 200 ರೂಗಳಷ್ಟು ಏರಿದ್ದ ಚಿನ್ನದ ಬೆಲೆ (Gold Rates) ಇವತ್ತು ಸೋಮವಾರ 120 ರೂ ತಗ್ಗಿದೆ. ಆದರೆ, ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆಯಲ್ಲಿ ತುಸು ಏರಿಕೆ ಆಗಿದೆ. ಇನ್ನು, ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ಗ್ರಾಮ್ಗೆ 7 ರೂ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,43,400 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,56,440 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,43,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 26,800 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 16ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,644 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,340 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,733 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 268 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,644 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,340 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 268 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
T20 World Cup 2026: ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡ ಮತ್ತೊಮ್ಮೆ ಮುಗ್ಗರಿಸಿದೆ. ಅದು ಸಹ ತನ್ನ ಬದ್ಧವೈರಿ ಭಾರತದ ವಿರುದ್ಧ. ಇತ್ತ ಪಾಕ್ ಪಡೆಯನ್ನು ಬಗ್ಗು ಬಡಿದು ಟೀಮ್ ಇಂಡಿಯಾ 8ನೇ ಬಾರಿ ಗೆಲುವಿನ ನಗೆ ಬೀರಿದೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 175 ರನ್ಗಳು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ 18 ಓವರ್ಗಳಲ್ಲೇ ಆಲೌಟ್ ಆಯಿತು. ಅದು ಸಹ ಕೇವಲ 114 ರನ್ಗಳಿಸಿ. ಈ ಮೂಲಕ 61 ರನ್ಗಳಿಂದ ಹೀನಾಯವಾಗಿ ಸೋಲೊಪ್ಪಿಕೊಂಡಿದೆ.
ಈ ಸೋಲಿನ ಬಳಿಕ ನಡೆದ ಚಾನೆಲ್ ಚರ್ಚೆಯೊಂದರಲ್ಲಿ ಕಾಣಿಸಿಕೊಂಡ ಪಾಕಿಸ್ತಾನ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಹಿರಿಯ ಆಟಗಾರರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಈ ಆಟಗಾರರನ್ನು ತಂಡದಿಂದ ಕೈ ಬಿಡುವ ಸಮಯ ದಾಟಿದೆ ಎಂದಿದ್ದಾರೆ.
ಪಾಕಿಸ್ತಾನ್ ತಂಡದಲ್ಲಿ ಮಹತ್ವದ ಬದಲಾವಣೆಯಾಗೇಬೇಕಿದೆ. ಟೀಮ್ನಲ್ಲಿರುವ ಹಿರಿಯ ಆಟಗಾರರಾದ ಬಾಬರ್ ಆಝಂ, ಶಾಹೀನ್ ಅಫ್ರಿದಿ ಹಾಗೂ ಶಾದಾಬ್ ಖಾನ್ರನ್ನು ತಂಡದಿಂದ ಕೈ ಬಿಡಬೇಕು. ಅವರ ಬದಲಿಗೆ ಹೊಸ ಆಟಗಾರರಿಗೆ ಅವಕಾಶ ಕಲ್ಪಿಸಬೇಕು.
ಏಕೆಂದರೆ ಅನುಭವಿ ಆಟಗಾರರಾಗಿ ತಂಡಕ್ಕೆ ಆಯ್ಕೆಯಾಗಿ ಇವರು ಯಾವುದೇ ಅನುಭವದ ಪ್ರದರ್ಶನ ನೀಡುತ್ತಿಲ್ಲ. ಇದಾಗ್ಯೂಇವುರಗಳು ಬಹಳ ಸಮಯದಿಂದ ತಂಡದಲ್ಲಿದ್ದಾರೆ. ಆದರೆ ಸಿಗಬೇಕಾದ ಫಲಿತಾಂಶ ಮಾತ್ರ. ಹೀಗಾಗಿ ಈ ಮೂವರಿಗೆ ತಂಡದಿಂದ ಗೇಟ್ ಪಾಸ್ ನೀಡಬೇಕು ಎಂದು ಶಾಹಿದ್ ಅಫ್ರಿದಿ ಆಗ್ರಹಿಸಿದ್ದಾರೆ.
ಬಾಬರ್, ಶಾಹೀನ್ ಹಾಗೂ ಶಾದಾಬ್ ಅವರನ್ನು ತಂಡದಿಂದ ಹೊರಗಿಟ್ಟು ಅವರ ಬದಲಿಗೆ ಹೊಸ ಆಟಗಾರರಿಗೆ ಸ್ಥಾನ ಕಲ್ಪಿಸಬೇಕು. ಈ ಮೂಲಕ ಪಾಕಿಸ್ತಾನ್ ತಂಡ ಪ್ರಯೋಗಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಭಾರತದಂತಹ ತಂಡದ ವಿರುದ್ಧ ಪಾಕಿಸ್ತಾನ್ ತಂಡದ ಗೆಲುವು ಮರೀಚಿಕೆಯಾಗಿರಲಿದೆ ಎಂದು ಶಾಹಿದ್ ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.
ಕುತೂಹಲಕಾರಿ ವಿಷಯ ಎಂದರೆ ಪಾಕಿಸ್ತಾನ್ ತಂಡದಲ್ಲಿರುವ ಶಾಹೀನ್ ಅಫ್ರಿದಿ, ಶಾಹಿದ್ ಅಫ್ರಿದಿ ಅವರ ಅಳಿಯ. ಅಂದರೆ ಅಫ್ರಿದಿ ಅವರ ಮಗಳನ್ನು ಶಾಹೀನ್ ಶಾ ಅಫ್ರಿದಿ ವಿವಾಹವಾಗಿದ್ದಾರೆ. ಇದೀಗ ಶಾಹೀನ್ ಅಫ್ರಿದಿಯನ್ನೇ ಪಾಕಿಸ್ತಾನ್ ತಂಡದಿಂದ ಕೈ ಬಿಡಬೇಕೆಂದು ಆಗ್ರಹಿಸಿ ಶಾಹಿದ್ ಅಫ್ರಿದಿ ಎಲ್ಲರ ಗಮನ ಸೆಳೆದಿದ್ದಾರೆ.
ಮೋಹನ್ ಭಾಗವತ್ ಹಾಗೂ ಪ್ರಿಯಾಂಕ್ ಖರ್ಗೆ (ಸಂಗ್ರಹ ಚಿತ್ರ)Image Credit source: tv9
ಬೆಂಗಳೂರು, ಫೆಬ್ರವರಿ 16: ‘ಸಂಘದ ಗುರುದಕ್ಷಿಣೆ ಡೊನೇಷನ್ ಅಲ್ಲ, ಡಿವೋಷನ್’ ಎಂಬ ಮೋಹನ್ ಭಾಗವತ್ (Mohan Bhagwat) ಅವರ ಹೇಳಿಕೆಯನ್ನು ಮತ್ತೆ ಮುನ್ನೆಲೆಗೆ ತರುವ ಮೂಲಕವೇ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹಾಗೂ ಟೀಕಾಕಾರರಿಗೆ ಆರ್‍ಎಸ್‍ಎಸ್ (RSS) ಖಡಕ್ ಉತ್ತರ ನೀಡಿದೆ. ಆರ್ಎಸ್ಎಸ್ನ ಆರ್ಥಿಕ ಮೂಲ ಯಾವುದು ಮತ್ತು ಅದು ತೆರಿಗೆ ಪಾವತಿಸುತ್ತಿದೆಯೇ ಎಂಬ ಪ್ರಶ್ನೆಗಳಿಗೆ ಈವರೆಗೆ ಉತ್ತರ ಸಿಕ್ಕಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು. ಅದಕ್ಕುತ್ತರವಾಗಿ ಮೋಹನ್ ಭಾಗವತ್ ಅವರ ಹೇಳಿಕೆಯ ವಿಡಿಯೋವನ್ನು ಸಂಘ ಮತ್ತೆ ಮುನ್ನೆಲೆಗೆ ತಂದಿದೆ.
ಏನು ಹೇಳಿದ್ದರು ಮೋಹನ್ ಭಾಗವತ್?
ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕಳೆದ ನವೆಂಬರ್‌ನಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಆಗ ಮಾತನಾಡಿ, ಸಂಘದ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದ್ದರು. ‘ನಾವು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ, ದೇಣಿಗೆ ತೆಗೆದುಕೊಳ್ಳುವುದಿಲ್ಲ, ಸಂಘದ ಸದಸ್ಯರೇ ಗುರುದಕ್ಷಿಣೆ ನೀಡುತ್ತಾರೆ’ ಎಂದು ಭಾಗವತ್ ಹೇಳಿದ್ದರು. ಅಲ್ಲದೆ, ಸಂಘ ಸಮಾಜವನ್ನು ಬಲಪಡಿಸುವ ಕೆಲಸ ಮಾಡುತ್ತಿದೆ ಮತ್ತು ರಾಜಕಾರಣದಿಂದ ದೂರವಿದೆ ಎಂದು ಸ್ಪಷ್ಟಪಡಿಸಿದ್ದರು.
ವಿಡಿಯೋ ನೋಡಿ
ಈ ವಿಚಾರವಾಗಿ ಬೆಂಗಳೂರಿನ ಗಾಂಧಿಭವನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ಖರ್ಗೆ, ಆರ್‍ಎಸ್‍ಎಸ್ ಫಂಡಿಂಗ್ ತೆಗೆದುಕೊಳ್ಳುವುದಿಲ್ಲ, ಸದಸ್ಯರೇ ಗುರುದಕ್ಷಿಣೆ ನೀಡುತ್ತಾರೆ ಎಂದು ಮೋಹನ್ ಭಾಗವತ್ ಹೇಳುತ್ತಾರೆ. ಆದರೆ, ಇವರದ್ದು ದೊಡ್ಡ ನೆಟ್‌ವರ್ಕ್ ಇದೆ. ಅಮೆರಿಕಾ, ಇಂಗ್ಲೆಂಡ್ ಸೇರಿ ವಿದೇಶಗಳಿಂದ ಹೆಚ್ಚು ಫಂಡಿಂಗ್ ಬರುತ್ತದೆ. ತಮ್ಮ ಧ್ವಜದ ಹೆಸರಲ್ಲಿ ಗುರುದಕ್ಷಿಣೆ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು. 2,500 ಸಂಘಟನೆಗಳ ಜಾಲ ಇದೆ. ಈ ಜನರು ಹಣ ವರ್ಗಾವಣೆಯಲ್ಲಿ ತೊಡಗಿದ್ದಾರೆ. ಇವರಿಗೆ ಇಷ್ಟು ಹಣ ಎಲ್ಲಿಂದ ಬರುತ್ತದೆ ಎಂದು ಖರ್ಗೆ ಪ್ರಶ್ನಿಸಿದ್ದರು.
ಆರ್‍ಎಸ್‍ಎಸ್ ವಿರುದ್ಧ ಖರ್ಗೆ ಹೇಳಿದ್ದೇನು?
‘57 ವರ್ಷಗಳ ಕಾಲ ದೇಶದ ಧ್ವಜವನ್ನು ಹಾರಿಸದವರು ಈಗ ದೇಶಪ್ರೇಮದ ಬಗ್ಗೆ ಮಾತನಾಡುತ್ತಿದ್ದಾರೆ. ಸಂಘದ ಆರ್ಥಿಕ ಮೂಲ ಯಾವುದು? ಅದು ತೆರಿಗೆ ಪಾವತಿಸುತ್ತಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ’ ಎಂದು ಪ್ರಿಯಾಂಕ್ ಖರ್ಗೆ ತೀವ್ರ ಆಕ್ರೋಶ ಹೊರಹಾಕಿದ್ದರು. ಮುಂದುವರಿದು, ಆರ್‍ಎಸ್‍ಎಸ್ ದೆವ್ವ ಇದ್ದಂತೆ, ಬಿಜೆಪಿ ದೆವ್ವದ ಕರಿ ನೆರಳು. ನಾವು ನೆರಳಿನ ಜೊತೆ ಅಲ್ಲ, ದೆವ್ವದ ಜೊತೆ ಹೋರಾಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಆರ್‍ಎಸ್‍ಎಸ್ ಅನ್ನು ನೋಂದಣಿ ಮಾಡುವ ಅಗತ್ಯವಿಲ್ಲ ಎಂಬುದನ್ನು ಖಂಡಿಸಿರುವ ಖರ್ಗೆ, ಇವತ್ತಲ್ಲ, ನಾಳೆ ಆರ್‍ಎಸ್‍ಎಸ್ ನೋಂದಣಿ ಆಗಲೇಬೇಕು. ನಾನೇ ಅದನ್ನು ಮಾಡಿಸುತ್ತೇನೆ ಎಂದಿದ್ದಾರೆ. ನಾವು ಹೋಗಿ ರಿಜಿಸ್ಟ್ರೇಷನ್ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎನ್ನುತ್ತಾರೆ. ಏಕೆಂದರೆ ಅವರು ವ್ಯಕ್ತಿಗಳ ಸಮೂಹ ಎಂದು ಹೇಳುತ್ತಾರೆ. ಮೋಹನ್ ಭಾಗವತ್ ಅವರು ಹೇಳಿದರೂ, ನಮಗೆ ನೋಂದಣಿಗೆ ಅವಕಾಶವಿಲ್ಲ ಎಂದು ಗೊತ್ತಾಗಲಿಲ್ಲವೇ? ನಾನು ಮಾತು ಕೊಡುತ್ತೇನೆ, ಇವತ್ತಿನಿಂದ ನಾಳೆ ಅವರು ನೋಂದಣಿ ಆಗಲೇಬೇಕು. ಆಗ್ತಾರೆ, ನಾನು ಮಾಡಿಸುತ್ತೇನೆ ಎಂದು ಖರ್ಗೆ ಹೇಳಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ದೆಹಲಿ, ಫೆಬ್ರವರಿ 16:ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ಮರುಪರಿಶೀಲನಾ ಅರ್ಜಿಗಳ ವಿಚಾರಣೆಗೆ ಒಪ್ಪಿಗೆ ನೀಡಿದೆ. ಏಪ್ರಿಲ್ 7ರಿಂದ ಈ ವಿಚಾರಣೆ ಆರಂಭವಾಗಲಿದ್ದು, ಒಂಭತ್ತು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಇದನ್ನು ನಡೆಸಲಿದೆ. 2018ರಲ್ಲಿ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠವು ಮಹಿಳೆಯರಿಗೆ ಶಬರಿಮಲೆಗೆ ಪ್ರವೇಶಕ್ಕೆ ಅವಕಾಶ ನೀಡಿ ತೀರ್ಪು ನೀಡಿತ್ತು. ಆದರೆ, ಈ ತೀರ್ಪಿನ ನಂತರ ಭಕ್ತರು ಮತ್ತು ಧಾರ್ಮಿಕ ಹೋರಾಟಗಾರರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಹಿಂದಿನ ತೀರ್ಪನ್ನು ಸಾಂವಿಧಾನಿಕ ಪೀಠವೇ ನೀಡಿರುವುದರಿಂದ, ಅದರ ಮರುಪರಿಶೀಲನೆಗೂ ಸಾಂವಿಧಾನಿಕ ಪೀಠವೇ ಬೇಕು. ಹೀಗಾಗಿ ಒಂಭತ್ತು ನ್ಯಾಯಾಧೀಶರ ಪೀಠವನ್ನು ರಚಿಸಲಾಗಿದೆ. ಏಪ್ರಿಲ್ 7 ಮತ್ತು 9ರಂದು ವಾದಿಗಳಿಗೆ, ಹಾಗೂ ಏಪ್ರಿಲ್ 14, 15 ಮತ್ತು 16ರಂದು ಪ್ರತಿವಾದಿಗಳಿಗೆ ವಾದ ಮಂಡಿಸಲು ಅವಕಾಶ ನೀಡಲಾಗಿದೆ. ಏಪ್ರಿಲ್ 14ರೊಳಗೆ ಲಿಖಿತ ರೂಪದಲ್ಲಿ ವಾದ-ಪ್ರತಿವಾದಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಈ ಮರುಪರಿಶೀಲನಾ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಕೂಡ ಸಹಮತ ವ್ಯಕ್ತಪಡಿಸಿದೆ.
ನವದೆಹಲಿ, ಫೆಬ್ರುವರಿ 16: ಈ ಬಾರಿಯ ಎಐ ಇಂಪ್ಯಾಕ್ಟ್ ಸಭೆಗೆ (India AI Impact Summit) ಭಾರತ ಆತಿಥ್ಯ ವಹಿಸಿದೆ. ಇದು ನಾಲ್ಕನೇ ಎಐ ಸಭೆಯಾಗಿದೆ. 2023ರಲ್ಲಿ ಬ್ರಿಟನ್ನಲ್ಲಿ ಮೊದಲ ಎಐ ಇಂಪ್ಯಾಕ್ಟ್ ಸಭೆ ನಡೆದಿತ್ತು. ನಂತರದ ವರ್ಷಗಳಲ್ಲಿ ದಕ್ಷಿಣ ಕೊರಿಯಾ ಮತ್ತು ಫ್ರಾನ್ಸ್ ದೇಶಗಳಲ್ಲಿ ಶೃಂಗಸಭೆಗಳು ನಡೆದಿವೆ. ಈ ಬಾರಿಯ ಎಐ ಸಮಿಟ್ ಅನ್ನು ‘ಸರ್ವಜನ ಹಿತಾಯ, ಸರ್ವಜನ ಸುಖಾಯ’ ಥೀಮ್ನಲ್ಲಿ ರೂಪಿಸಲಾಗಿದೆ. ಅಂದರೆ, ಎಲ್ಲರಿಗೂ ಎಐ ಅಭಿವೃದ್ಧಿಫಲ ಸಿಗಲಿ ಎಂಬುದು ಭಾರತದ ಆಶಯ. ಆ ನಿಟ್ಟಿನಲ್ಲಿ ಸಮಿಟ್ನ ಕಾರ್ಯಕ್ರಮಗಳು ನಡೆಯಲಿವೆ.
ಕೈಗಾರಿಕಾ ಕ್ರಾಂತಿ ಬಳಿಕ ಮಾನವನ ಇತಿಹಾಸದಲ್ಲಿ ಕಂಡ ಅತ್ಯಂತ ಪರಿವರ್ತನಾತ್ಮಕ ಕ್ರಾಂತಿ ಎಂದರೆ ಆರ್ಟಿಫಿಶಿಯಲ್ ಇಂಟೆಲೆಜೆನ್ಸ್ನದ್ದು ಎಂದು ಹೇಳಲಾಗುತ್ತದೆ. ಔದ್ಯಮಿಕ ಕ್ರಾಂತಿಯಿಂದ ಹೇಗೆ ಜಗತ್ತಿನ ಆರ್ಥಿಕ ಪರಿಭಾಷೆ ಬದಲಾಯಿತೋ, ಅದೇ ಪರಿಣಾಮವನ್ನು ಎಐನಿಂದ ನಿರೀಕ್ಷಿಸಲಾಗುತ್ತಿದೆ.
ಸ್ಟಾನ್ಫೋರ್ಡ್ನ ಎಐ ವೈಬ್ರೆನ್ಸಿ ಟೂಲ್ ಪ್ರಕಾರ ಎಐನಲ್ಲಿ ಭಾರತ ಮೂರನೇ ಶ್ರೇಯಾಂಕ ಪಡೆದಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ನೈಪುಣ್ಯತೆ ಹೊಂದಿರುವ ಅತಿಹೆಚ್ಚು ಮಾನವಸಂಪನ್ಮೂಲ ಹೊಂದಿರುವ ದೇಶಗಳಲ್ಲಿ ಸಿಂಗಾಪುರ ಬಿಟ್ಟರೆ ಭಾರತವೇ ಇರುವುದು. ಎಐ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.
ಎಐನಲ್ಲಿ ಭಾರತ ಒಂದೊಂದೇ ಹೆಜ್ಜೆಗಳನ್ನು ಇರಿಸುತ್ತಿದೆ. ಅಮೆರಿಕ ಮತ್ತು ಚೀನಾ ತೋರಿರುವ ಪ್ರಗತಿಯನ್ನು ಸರಿಗಟ್ಟಲು ಭಾರತಕ್ಕೆ ಇನ್ನೂ ಸಾಕಷ್ಟು ಸಮಯ ಬೇಕಾಗಬಹುದು ಎಂದು ಪರಿಣಿತರು ಹೇಳುತ್ತಾರೆ. ಅಮೆರಿಕವು ಚ್ಯಾಟ್ಜಿಪಿಟಿ, ಕ್ಲಾಡ್, ಜೆಮಿನೈ ಇತ್ಯಾದಿ ಫೌಂಡೇಶನಲ್ ಮಾಡಲ್ಗಳ ಅಭಿವೃದ್ಧಿಯಲ್ಲಿ ಮುಂದಿದೆ. ಚೀನಾ ದೇಶವು ಅಗ್ಗದ ಬೆಲೆಗೆ ಎಐ ಸಿಗುವಂತೆ ಮಾಡುತ್ತಿದೆ. ಭಾರತವು ತನ್ನದೇ ಸಾವರಿನ್ ಎಐ ಮಾಡಲ್ಗಳನ್ನು ಬೆಳೆಸಲು ಗುರುತರವಾದ ಯೋಜನೆಗಳನ್ನು ಹಾಕಿದೆ.
ಎಐ ವಿಚಾರದಲ್ಲಿ ಭಾರತ ಗಂಭೀರವಾಗಿರುವುದನ್ನು ಜಗತ್ತಿನ ಟೆಕ್ ನಾಯಕರು ಗಮನಿಸಲಿದ್ದಾರೆ. ಭಾರತ ಹಾಗೂ ಭಾರತೀಯ ಕಂಪನಿಗಳ ಜೊತೆ ಜಗತ್ತಿನ ಟೆಕ್ ದೈತ್ಯರು ಹೊಂದಾಣಿಕೆ ಮಾಡಿಕೊಂಡು ಎಐ ಅಭಿವೃದ್ಧಿಗೆ ಮುಂದಾಗಬಹುದು. ಈ ಸಮಿಟ್ ವೇಳೆ ಡಾಟಾ ಸೆಂಟರ್ ಹಾಗೂ ಸಂಬಂಧಿತ ಯೋಜನೆಗಳ ಘೋಷಣೆ ಆಗಬಹುದು.
ಸರ್ಕಾರಿ ಬೆಂಬಲಿತ ಎಐ ಕಂಪ್ಯೂಟ್ ಮಾಡಲ್ ಅನ್ನು ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ ಸರ್ವಿಸ್ ಆಗಿ ಇತರ ದೇಶಗಳಿಗೆ ಆಫರ್ ಮಾಡಲಾಗಬಹುದು. ಎಐ ಸ್ಟ್ಯಾಕ್ ನಿರ್ಮಿಸುವ ಭಾರತದ ಪ್ರಯತ್ನಗಳಿಗೆ ಜಾಗತಿಕ ಕಂಪನಿಗಳು ಬೆಂಬಲ ನೀಡಬಹುದು. ಭಾರತದ ಎಐ ಸ್ಟಾರ್ಟಪ್ಗಳಿಗೆ ಜಾಗತಿಕ ಬಂಡವಾಳ ಸಿಗಲು ಸಾಧ್ಯವಾಗಬಹುದು.
ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಕಾಫಿ ತೋಟದ ಕಾರ್ಮಿಕ ಸಾವು!
ಚಿಕ್ಕಮಗಳೂರು, ಫೆಬ್ರವರಿ 16: ಚಿಕ್ಕಮಗಳೂರು ತಾಲ್ಲೂಕಿನ ಹುಣಸೆಹಳ್ಳಿ ಗ್ರಾಮದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ 50 ವರ್ಷದ ಕಾರ್ಮಿಕ ಯಲ್ಲಪ್ಪ ಆನೆ ದಾಳಿಗೆ (elephant attack) ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ತಿರುವಳ್ಳಿ ಗ್ರಾಮದ ನಿವಾಸಿ ಯಲ್ಲಪ್ಪ, ನಾಗೇಶ್ ಗೌಡ ಅವರ ತೋಟದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿದೆ.
ಬಾಳೆಹೊನ್ನೂರು ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಸುತ್ತಾಡುತ್ತಿದ್ದ ಕಾಡಾನೆ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕನ ಮೇಲೆ ದಾಳಿ ಮಾಡಿತ್ತು.ಈ ವೇಳೆ ಸ್ಥಳದಲ್ಲೇ ಯಲ್ಲಪ್ಪ ಮೃತಪಟ್ಟಿದ್ದು, ಪ್ರಾಥಮಿಕ ಪರಿಶೀಲನೆ ಮತ್ತು ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳ ಪರಿಶೀಲನೆಯ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಘಟನೆ ನಂತರ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಕಾಡಾನೆ ಸಂಚಾರವನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದೆ.
ಹನುಮಂತ, ಹಾಸನ ಸಮೀಪದ ರಾಮನಾಥಪುರದಲ್ಲಿ ಖಾಸಗಿ ಕಾಫಿ ತೋಟದಲ್ಲಿ ಆನೆ ದಾಳಿಗೆ ಬಲಿಯಾಗಿ ಮೃತಪಟ್ಟರು. ಎದೆ ಮತ್ತು ಹೊಟ್ಟೆಯ ಮೇಲೆ ತೀವ್ರ ಗಾಯಗಳಾಗಿದ್ದು, ನವೆಂಬರ್ 11, 2025 ರಂದು ಘಟನೆ ನಡೆದಿದೆ.
ಆಗಸ್ಟ್ 12, 2025 ರಂದು ನಂಜನಗೂಡು ಮೂಲದ ಬಸವರಾಜು ಬಂಡೀಪುರ ರಸ್ತೆಯಲ್ಲಿ ಕಾಡಾನೆ ಜತೆ ಸೆಲ್ಫಿ ತೆಗೆಯಲು ಹೋಗಿ ದಾಳಿಗೆ ಒಳಗಾದರು. ಅರಣ್ಯ ಇಲಾಖೆ ನಂತರ ಪತ್ತೆ ಮಾಡಿ 25 ಸಾವಿರ ರೂ. ದಂಡ ವಿಧಿಸಿದೆ.
ರೈತ ಮಹೇಶ್, ಜಮೀನಿನಲ್ಲಿ ಕಾವಲು ಕಾಯುತ್ತಿದ್ದಾಗ 9 ಕಾಡಾನೆಗಳ ಹಿಂಡು ದಾಳಿಗೆ ಬಲಿಯಾಗಿದ್ದರು. ಈ ಹಿನ್ನೆಲೆ ಫೆಬ್ರವರಿ 8, 2026 ರಂದು ಚಾಮರಾಜನಗರದ ಗ್ರಾಮಸ್ಥರಿಂದ ರಸ್ತೆ ತಡೆ ಪ್ರತಿಭಟನೆ ನಡೆದಿತ್ತು.
ತಮಿಳುನಾಡಿನ ಮಾಕಪಾಳ್ಯ ನಿವಾಸಿ ಶಿವಮೂರ್ತಿ, ಹನೂರು ತಾಲ್ಲೂಕಿನ ಜಲ್ಲಿಪಾಳ್ಯ ಸಮೀಪ ಕಾಡಾನೆ ದಾಳಿಗೆ ಬಲಿಯಾಗಿದ್ದು ಸ್ಥಳದಲ್ಲೇ ಸಾವನ್ನಪ್ಪಿದರು.
ಜನವರಿ 13ರಂದು ಮೋಗಲಿ ಗ್ರಾಮದಲ್ಲಿ ಕಾರ್ಮಿಕ ಮಹಿಳೆ ಶೋಭಾ (40) ಕಾಫಿ ತೋಟದಲ್ಲಿ ದುರ್ಘಟನೆಗೆ ಬಲಿಯಾಗಿದ್ದಾರೆ. ಪುತ್ರಿಯರಾದ ಶೋಭ ಮತ್ತು ರಾಗಿಣಿ ಜೊತೆ ಕೆಲಸಕ್ಕೆ ತೆರಳಿದ್ದರು.
ಡಿಸೆಂಬರ್ 14 ರಂದು ದುನ್ನಸಂದ್ರದಲ್ಲಿ ರೈತ ದುಂಡಮಾದ (50), ಬೆಳಗಿನ ಜಾವ ಜಮೀನಿಗೆ ನೀರು ಹಾಯಿಸಲು ಹೋಗಿ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.
ಚಿಕ್ಕಮಗಳೂರಿನ ಕೆರೆಕಟ್ಟೆ ಗ್ರಾಮದಲ್ಲಿ ಆನೆ ತುಳಿತದ ವೇಳೆ ವಸಂತ್ (36) ಮತ್ತು ಮತ್ತೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿ ಸಾವನ್ನಪ್ಪಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ಮೈಸೂರು, ಚಾಮರಾಜನಗರ, ಕೊಡಗು ಮತ್ತು ಹಾಸನಗಳ ಜಿಲ್ಲೆಗಳಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಸುಮಾರು 60% ರಷ್ಟು ಸಾವುಗಳು ಮಾನವ-ವನ್ಯಜೀವಿ ಸಂಘರ್ಷಣೆಯಿಂದಲೇ ಸಂಭವಿಸಿವೆ ಎಂದು ಹೇಳಲಾಗಿದೆ. ಕಳೆದ 5 ವರ್ಷಗಳಲ್ಲಿ ಕರ್ನಾಟಕದಲ್ಲಿ ಸುಮಾರು 170 ಜನರು ಆನೆ ದಾಳಿಯಿಂದ ಮೃತಪಟ್ಟಿದ್ದಾರೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಕೆರೆ ಬಳಿ ಮರಕ್ಕೆ ಗುದ್ದಿರುವ ಶಾಲಾ ಬಸ್Image Credit source: Tv9 Kannada
ಹಾಸನ/ಮಂಗಳೂರು, ಫೆಬ್ರವರಿ 16: ಖಾಸಗಿ ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ಕೆರೆಯ ಏರಿ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಕೆರೆ ಕಡೆಗೆ ವಾಲಿನಿಂತ ಘಟನೆ ಅರಕಲಗೂಡು ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಮುಕ್ಕನಹಳ್ಳಿ ಗ್ರಾಮದ ಬಳಿ ನಡೆದಿದೆ. ಕೂದಲೆಳೆ ಅಂತರದಲ್ಲಿ ಬಸ್ ಕೆರೆಗೆ ಬೀಳುವುದು ತಪ್ಪಿದ್ದು, 40 ವಿದ್ಯಾರ್ಥಿಗಳು ಈ ಶಾಲಾ ಬಸ್ನಲ್ಲಿದ್ದರು ಎನ್ನಲಾಗಿದೆ.
ಅಪಘಾತಕ್ಕೀಡಾಗಿರುವ ಬಸ್ ಶ್ರೀ ಸಿದ್ದರಾಮೇಶ್ವರ ಶಾಲೆಗೆ ಸೇರಿದ್ದಾಗಿದ್ದು, ಬೆಳಿಗ್ಗೆ ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ವೇಳೆ ಅಪಘಡ ನಡೆದಿದೆ. ಮರಕ್ಕೆ ಬಸ್ ಡಿಕ್ಕಿ ಹೊಡೆಯುತ್ತಿದ್ದಂತೆ ಬಸ್‌ನಿಂದ ವಿದ್ಯಾರ್ಥಿಗಳು ಕೆಳಗಿಳಿದ ಪರಿಣಾಮ ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳದಲ್ಲಿ ವಿದ್ಯಾರ್ಥಿಗಳ ಪೋಷಕರು ಜಮಾಯಿಸಿದ್ದು, ಘಟನೆ ಬಳಿಕ ಸ್ಕೂಲ್ ಬಸ್ಗೆ ಎಫ್‌ಸಿ ಹಾಗೂ ಇನ್ಶೂರೆನ್ಸ್ ಇಲ್ಲದಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಳ್ಳಿಮೈಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಂಗಳೂರು ಹೊರವಲಯದ ಕಾಪಿಕಾಡು ಬಳಿ ಶಾಲಾ ಬಸ್ಗೆ ಕ್ಯಾಂಟರ್ ಡಿಕ್ಕಿಯಾದ ಪರಿಣಾಮ 7 ವಿದ್ಯಾರ್ಥಿಗಳಿಗೆ ಗಾಯಗೊಂಡಿದ್ದಾರೆ. ತಲಪಾಡಿಯ ಶಾರದಾ ವಿದ್ಯಾನಿಕೇತನ ಶಾಲೆಗೆ ಸೇರಿದ ಬಸ್ಗೆ ಗೋವಾದಿಂದ ಕೇರಳದ ಕಡೆಗೆ ಹೊರಟಿದ್ದ ಮೀನು ಸಾಗಾಟದ ಕ್ಯಾಂಟರ್ ಹಿಂದಿನಿಂದ ಡಿಕ್ಕಿ ಹೊಡೆದೆದಿದೆ. ಉಡುಪಿ ಜಿಲ್ಲೆ ಕುಂದಾಪುರ ಮೂಲದ ಕ್ಯಾಂಟರ್ ಚಾಲಕ ಸಂಜೀವ್ ನಿದ್ರೆಯ ಮಂಪರಿನಲ್ಲಿದ್ದ ಎನ್ನಲಾಗಿದ್ದು, ಗಾಯಾಳು ವಿದ್ಯಾರ್ಥಿಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿದ್ದಾರೆ.