ಬಿಗ್ಬಾಸ್ ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲಾಗಿದೆ. ಇದಕ್ಕೆ ಕಾರಣ ಆಗಿದ್ದು ಸುದೀಪ್ ಬಳಕೆ ಮಾಡಿದ ಪದ. ರಣಹದ್ದುಗಳ ಬಗ್ಗೆ ನಟ ಸುದೀಪ್ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ದೂರು ದಾಖಲು ಮಾಡಲಾಗಿದೆ! ಸುದೀಪ್ ವಿರುದ್ಧ ಪಕ್ಷಿಪ್ರೇಮಿಗಳು ಹಾಗೂ ರಹಣದ್ದು ಸಂರಕ್ಷಣಾ ಟ್ರಸ್ಟ್ನಿಂದ ಬೆಂಗಳೂರು ದಕ್ಷಿಣ DFO ರಾಮಕೃಷ್ಣಪ್ಪಗೆ ದೂರು ದಾಖಲು ಮಾಡಲಾಗಿದೆ. ರಣಹದ್ದುಗಳು ಹೊಂಚು ಹಾಕಿ ಕರೆಕ್ಟ್ ಟೈಮ್ಗೆ ಹಿಡಿಯುತ್ತೆಂಬ ಹೇಳಿಕೆಯೇ ದೂರು ನೀಡಲು ಕಾರಣ! ಹದ್ದುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ವೀಕ್ಷಕರಿಗೆ ತಿಳಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.
ಕುಂದಾಪುರ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಕೆಂಡ ಮಹೋತ್ಸವ ನಡೆಯಲಿದೆ. ಈ ಕ್ಷೇತ್ರದ ಜಾತ್ರೆಯ ಸಮಯದಲ್ಲಿ ಈ ಹೂವು ಇರಲೇಬೇಕು.ಬ್ರಹ್ಮಲಿಂಗೇಶ್ವರನಿಗೆ ಸೇವಂತಿಗೆ ಹೂ ಸಮರ್ಪಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ.
ಹಳದಿ ಬಣ್ಣದ, ಕಣ್ಮನ ಸೆಳೆಯುವ ಸುವಾಸನೆಯ ಸೇವಂತಿಗೆ ಬ್ರಹ್ಮಲಿಂಗೇಶ್ವರನ ಜಾತ್ರೆ ಬೇಕೇಬೇಕು. ತಲೆ ಮೇಲೆ ಹಣ್ಣು–ಕಾಯಿ ಹಾಗೂ ಹರಕೆ ಹೊತ್ತುಸಾಗುವ ಭಕ್ತರ ಬುಟ್ಟಿಯಲ್ಲಿ ಸೇವಂತಿಗೆಗೆ ವಿಶೇಷ ಸ್ಥಾನವಿದೆ. ಬ್ರಹ್ಮಲಿಂಗೇಶ್ವರನಿಗೆ ಅತ್ಯಂತ ಪ್ರಿಯವಾದ ಹೂ ಎನ್ನಲಾಗುವ ಸೇವಂತಿಗೆ ಇಷ್ಟಾರ್ಥಗಳ ಈಡೇರಿಕೆಗೆ ಭಕ್ತರಿಂದ ಹರಕೆಯಾಗಿ ಸಮರ್ಪಣೆ ಆಗುತ್ತದೆ.
ಮಾರಣಕಟ್ಟೆ ಜಾತ್ರೆಯಂದು ಪ್ರತಿ ವರ್ಷ ಇಲ್ಲಿನ ಈ ಸೇವಂತಿಯನ್ನು ತಮ್ಮ ತೋಟದಲ್ಲಿ ಬೆಳೆಯುತ್ತಾರೆ. ಕರಾವಳಿ ಭಾಗದಲ್ಲಿ ಎರಡು ಕಡೆ ಮಾತ್ರ ದೇವರ ಜಾತ್ರೆಗೆ ಹಣ್ಣು ಹಾಗೂ ಹೂವಿನ ಕೃಷಿ ಮಾಡುವುದು, ಒಂದು ದಕ್ಷಿಣ ಕನ್ನಡ ಪೊಳಲಿ ಶ್ರೀ ರಾಜರಾಜೇಶ್ವರಿ ಕಲ್ಲಂಗಡಿಯನ್ನು ಹಾಗೂ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಸೇವಂತಿಗೆ ಹೂ.
ಕುಂದಾಪುರ ತಾಲ್ಲೂಕಿನ ಹೆಮ್ಮಾಡಿ, ಕಟ್ಟು, ಭಟ್ರ ಬೆಟ್ಟು, ಹೊಸ್ಕಳಿ, ಹರೆಗೋಡು, ಸುಳ್ಸೆ, ಗುಡ್ಡೆಮನೆ, ದೇವಸ್ಥಾನ ಬೆಟ್ಟು ಸೇರಿದಂತೆ ಹಲವು ಗ್ರಾಮಗಳಲ್ಲಿ ಹೆಮ್ಮಾಡಿ ಸೇವಂತಿಗೆ ಕೃಷಿಯನ್ನು ಮಾಡುತ್ತಾರೆ. ಗಾತ್ರದಲ್ಲಿ ಚಿಕ್ಕದಾದರೂ ನೋಡಲು ಆಕರ್ಷಕವಾಗಿರುವ ಹೆಮ್ಮಾಡಿ ಸೇವಂತಿಗೆ ಆಡುಭಾಷೆಯಲ್ಲಿ ‘ಹೆಮ್ಮಾಡಿ ಶ್ಯಾಮಂತಿ’ ಎಂದೇ ಪ್ರಸಿದ್ಧಿಯನ್ನು ಪಡೆದಿದೆ.
ಆಗಸ್ಟ್ನಲ್ಲಿ ಭತ್ತದ ಕಟಾವು ಮುಗಿಸಿದ ಬಳಿಕ ಕೃಷಿಕರು ಗದ್ದೆಗಳಲ್ಲಿ ಸೇವಂತಿಗೆ ಗಿಡಗಳನ್ನು ನಾಟಿ ಮಾಡುತ್ತಾರೆ. ಮೂರು ತಿಂಗಳ ಪೋಷಣೆಯ ನಂತರ ಜನವರಿ ಎರಡನೇ ವಾರದಲ್ಲಿ ಹೂ ಕಟಾವು ಆರಂಭವಾಗುತ್ತದೆ. ಸಂಕ್ರಾಂತಿ ಹಬ್ಬದ ಮೊದಲ ದಿನ ಮೊದಲ ಹೂ ಕೊಯ್ಲನ್ನು ಬುಟ್ಟಿಯಲ್ಲಿ ತುಂಬಿಕೊಂಡು ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನಿಗೆ ಅರ್ಪಿಸಿದ ಬಳಿಕವೇ ಉಳಿದ ಹೂವನ್ನು ಮಾರಾಟ ಮಾಡಬೇಕು.
ಮಾರಣಕಟ್ಟೆ ಜಾತ್ರೆಯ ಬಳಿಕ ಹೆಮ್ಮಾಡಿ ಸೇವಂತಿಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುವ ಜಾತ್ರೆ, ಉತ್ಸವ, ಕೆಂಡ ಮಹೋತ್ಸವ, ಕೋಲ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೆ ಕಳಿಸಲಾಗುತ್ತದೆ. ಆದರೆ ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಸೇವಂತಿಗೆ ಬೆಳೆಗಾರರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಕೆಲ ಕೃಷಿಕರು ಸೇವಂತಿಗೆ ಬೆಳೆಯಿಂದ ಹಿಂದೆ ಸರಿದಿದ್ದಾರೆ.
ಬೆಂಗಳೂರು, ಜನವರಿ 12: ಬೆಂಗಳೂರು (Bengaluru) ಅಂದರೆ ಅದೇನೋ ಸೆಳೆತ. ಹೀಗಾಗಿ ಅದೆಷ್ಟೋ ಯುವ ಮನಸ್ಸುಗಳನ್ನು ಕೈ ಬೀಸಿ ತನ್ನತ್ತ ಕರೆಯುತ್ತದೆ. ಆದರೆ ಇದೀಗ ಯುವತಿಯೊಬ್ಬಳು (Young woman) ತಾನು ಎಂದಿಗೂ ಬೆಂಗಳೂರಿಗೆ ಬರಲು ಬಯಸಿರಲಿಲ್ಲ. ಆದರೆ ಇಲ್ಲಿಗೆ ಬಂದ ನಂತರದಲ್ಲಿ ನನ್ನ ಆರಂಭಿಕ ದಿನಗಳ ಹಿಂಜರಿಕೆ ಹಾಗೂ ಕಾಲಾನಂತರದಲ್ಲಿ ಆ ಭಾವನೆಗಳು ಸಂಪೂರ್ಣವಾಗಿ ಬದಲಾಗಿವೆ ಎಂಬುವುದನ್ನು ತಿಳಿಸಿದ್ದಾಳೆ. ರಾಜಧಾನಿ ಬೆಂಗಳೂರಿಗೆ ತೆರಳಿ ಒಂದು ವರ್ಷ ಪೂರೈಸಿದ ಬಗ್ಗೆ ಪ್ರಗತಿ ಝಾ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿ ಕೊಂಡಿದ್ದು ಜೀವನ ಬದಲಾಯಿಸಿದ ನಗರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಪ್ರಗತಿ ಝಾ (Pragathi Jha) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಯುವತಿ ಜನವರಿ 5, 2025 ರಂದು ಬೆಂಗಳೂರಿಗೆ ಬಂದಿಳಿದದ್ದನ್ನು ನೆನಪಿಸಿಕೊಳ್ಳುತ್ತಾ ಕಾಲೇಜು ಪ್ಲೇಸ್‌ಮೆಂಟ್ ವೇಳೆ ನಾನು ಎಂದಿಗೂ ಇಲ್ಲಿಗೆ ಬರಲು ಬಯಸಿರಲಿಲ್ಲ. ದೇವರ ಯೋಜನೆಯನ್ನು ಕಣ್ಣು ಮುಚ್ಚಿ ಒಪ್ಪಬೇಕು. ನಾನು ಈ ಬೆಂಗಳೂರಿಗೆ ಬಂದು ನಿಖರವಾಗಿ ಒಂದು ವರ್ಷವಾಗಿದೆ ಎಂದು ಹೇಳುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
ಆದರೆ ಈ ಬೆಂಗಳೂರಿನ ಹೊರತಾಗಿ ಬೇರೆಲ್ಲಿಯಾದರೂ ನನಗೆ ಪ್ಲೇಸ್ ಮೆಂಟ್ ಆಗಲಿ ಎಂದು ಸಕ್ರಿಯವಾಗಿ ಪ್ರಾರ್ಥಿಸುತ್ತಿದ್ದೆ. ಇದು ತುಂಬಾ ದೊಡ್ಡ ನಗರ, ಸಂಚಾರ, ಜನದಟ್ಟಣೆ ಎಲ್ಲವೂ ಹೆಚ್ಚು. ನಾನು ಯಾವಾಗಲೂ ಈ ಜನಸಂದಣಿಯಿಂದ ದೂರವಿರಲು ಬಯಸುತ್ತೇನೆ. ಆದರೆ ವಿಧಿಯ ಯೋಜನೆಯೇ ಬೇರೆಯಾಗಿತ್ತು. ಬೆಂಗಳೂರು ತನ್ನನ್ನು ತಾನು ಊಹಿಸಿದ್ದಕ್ಕಿಂತ ಹೆಚ್ಚು ಬಲಶಾಲಿಯನ್ನಾಗಿ ಮಾಡಿತು ಎಂದಿದ್ದಾಳೆ.
ಅಂತಿಮ ಪರೀಕ್ಷೆಯ ವೇಳೆ ತಾನು ಕಾಲೇಜಿಗೆ ಮತ್ತೆ ಭೇಟಿ ನೀಡಿದ್ದನ್ನು ನೆನಪಿಸಿಕೊಳ್ಳುತ್ತಾ, ನಾನು ಬೆಂಗಳೂರಿಗೆ ಹಿಂತಿರುಗಲು ಬಯಸುತ್ತೇನೆ ಎಂದು ನನಗೆ ಅನಿಸಿತು. ನಾನು ನನ್ನ ನಗರಕ್ಕೆ ಹಿಂತಿರುಗಲು ಬಯಸುತ್ತೇನೆ. ಇಲ್ಲಿನ ವಾತಾವರಣವು ಬೆಚ್ಚಗಿನ ಅಪ್ಪುಗೆಯಂತೆ ಭಾಸವಾಗುತ್ತದೆ. ಪ್ರತಿ ಏರಿಳಿತದಲ್ಲಿ ತನ್ನೊಂದಿಗೆ ನಿಂತಿದ್ದಕ್ಕಾಗಿ ಈ ನಗರಕ್ಕೆ ಧನ್ಯವಾದ. ಈ ನಗರವು ಎಲ್ಲಾ ಏರಿಳಿತಗಳನ್ನು ಕಂಡಿದೆ ಮತ್ತು ನನ್ನನ್ನು ತುಂಬಾ ಬಲಶಾಲಿಯನ್ನಾಗಿ ಮಾಡಿದೆ ಎಂದು ಹೇಳಿರುವುದನ್ನು ನೋಡಬಹುದು.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೆಂಗಳೂರು ನಿಜವಾಗಿಯೂ ಅದ್ಭುತ ನಗರ. ನಾನು ಈ ನಗರವನ್ನು ತುಂಬಾ ಪ್ರೀತಿಸುತ್ತೇನೆ” ಎಂದು ಹೇಳಿದ್ದಾರೆ. ಮತ್ತೊಬ್ಬರು ದೇವರ ಯೋಜನೆಯನ್ನು ನಂಬಿರಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಬೆಂಗಳೂರಿನ ಮೇಲಿನ ನಿಮ್ಮ ಪ್ರೀತಿ ಅಪ್ರತಿಮ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಿ-ಖಾತಾ ಹೊಂದಿರುವ ಅಪಾರ್ಟ್‌ಮೆಂಟ್ ಮಾಲೀಕರು ಎ-ಖಾತಾಗೆ ಕನ್ವರ್ಟ್ ಆಗೋದು ಹೇಗೆ? ಇಲ್ಲಿದೆ ಮಾಹಿತಿ
ಬೆಂಗಳೂರು, ಜನವರಿ 12: ನವೆಂಬರ್ 1 ರಿಂದ ಬಿ-ಖಾತಾ ಆಸ್ತಿ ದಾಖಲೆಗಳ ಎ-ಖಾತಾ ಪರಿವರ್ತನೆಗೆ ಇ- ಖಾತಾ ಹೊಂದಿರುವುದು ಅಗತ್ಯ ಎಂದು GBAಹೇಳಿತ್ತು. ಈ ಹಿನ್ನೆಲೆ ರಾಜ್ಯದಲ್ಲಿ ಆಸ್ತಿ ನೋಂದಣಿ ಹಾಗೂ ರಿಯಲ್ ಎಸ್ಟೇಟ್ ವಹಿವಾಟುಗಳಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಎ-ಖಾತಾ ನೀಡುವ ಪ್ರಕ್ರಿಯೆಗೆ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿದೆ . ಈ ನಿಯಮಗಳು ವಿಶೇಷವಾಗಿ ಬಿ-ಖಾತಾ ಹೊಂದಿರುವ ಅನುಮೋದಿತ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್ಗಳಿಗೆ ಮಹತ್ವದ್ದಾಗಿವೆ.
ಇ-ಖಾತಾ ದೊರಕಿದ ನಂತರವೇ ಎ-ಖಾತಾಗೆ ಅರ್ಜಿ
ಅಧಿಕಾರಿಗಳು ಹೇಳುವಂತೆ ಅನುಮೋದಿತ ಲೇಔಟ್‌ಗಳು ಹಾಗೂ ಅನುಮೋದಿತ ಕಟ್ಟಡಗಳಲ್ಲಿನ ಫ್ಲಾಟ್ ಮಾಲೀಕರು ಈಗ ಎ-ಖಾತಾಗೆ ಅರ್ಜಿ ಸಲ್ಲಿಸಬಹುದು. ಆದರೆ ಅದಕ್ಕೂ ಮೊದಲು ಪ್ರತಿಯೊಬ್ಬ ಫ್ಲಾಟ್ ಮಾಲೀಕರು ಕಡ್ಡಾಯವಾಗಿ ಆನ್‌ಲೈನ್ ಪೋರ್ಟಲ್ ಮೂಲಕ ಇ-ಖಾತಾ ಪಡೆಯಬೇಕು. ಇ-ಖಾತಾ ದೊರಕಿದ ನಂತರವೇ ಎ-ಖಾತಾ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ. ಪ್ರತ್ಯೇಕ ಫ್ಲಾಟ್ ಮಾಲೀಕರಿಂದ ವೈಯಕ್ತಿಕ ಅರ್ಜಿಯೇ ಕಡ್ಡಾಯವಾಗಿದೆ.
ಪರಿಷ್ಕೃತ ವ್ಯವಸ್ಥೆಯಡಿ ಮಾಲೀಕರು ತಮ್ಮ ಮಾಲೀಕತ್ವದ ದಾಖಲೆಗಳು ಹಾಗೂ ಆಸ್ತಿ ತೆರಿಗೆ ಪಾವತಿ ವಿವರಗಳನ್ನು ಅಪ್‌ಲೋಡ್ ಮಾಡಿ ಇ-ಖಾತಾಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಹತೆಗೆ ಪ್ರಸ್ತುತ ವರ್ಷದ ಆಸ್ತಿ ತೆರಿಗೆಯ ಸಂಪೂರ್ಣ ಪಾವತಿ, ಮಂಜೂರಾದ ಕಟ್ಟಡ ಯೋಜನೆ ಹಾಗೂ ಬಿ-ಖಾತಾ ಹೊಂದಿರುವ ಭೂಮಿಯ ದಾಖಲೆಗಳನ್ನು ಹೊಂದಿರುವುದು ಅಗತ್ಯವಾಗಿದೆ. 1961ರ ಪುರಸಭೆ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದ ಅಪಾರ್ಟ್‌ಮೆಂಟ್‌ಗಳನ್ನೂ ಎ-ಖಾತಾಗೆ ಪರಿಗಣಿಸಬಹುದು. ಆದರೆ ಉಲ್ಲಂಘನೆಯ ಪ್ರಮಾಣದ ಆಧಾರದಲ್ಲಿ ದಂಡ ವಿಧಿಸಲಾಗುತ್ತದೆ. ಪ್ರಮುಖ ನಿರ್ಮಾಣ ಉಲ್ಲಂಘನೆಗಳಿದ್ದರೆ ಮಾರ್ಗದರ್ಶನ ಮೌಲ್ಯದ ಶೇಕಡಾ 5 ರಿಂದ 50 ರವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ.
ಚಿಕ್ಕಮಗಳೂರು, (ಜನವರಿ 12): ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರ ವಿರುದ್ಧ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಹಾಗೂ ಅವಮಾನಕಾರಿ ಕಾಮೆಂಟ್‌ಗಳನ್ನು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ರಾಮನಗರ ಮೂಲದ ಯಕ್ಷಿತ್ ರಾಜ್ ಎಂಬ ಯುವಕನನ್ನು ಮೂಡಿಗೆರೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಖುದ್ದು ‘ಕೈ’ ಶಾಸಕಿ ನಯನಾ ಮೋಟಮ್ಮ ಪ್ರತಿಕ್ರಿಯಿಸಿದ್ದು, ಪರ್ಸನಲ್ ಮತ್ತು ರಾಜಕೀಯ ವಿಚಾರವಾಗಿ 2 ಇನ್ಸ್ಟಾಗ್ರಾಮ್ ಖಾತೆ ಇದೆ. ಈ ನಡುವೆ ಪರ್ಸನಲ್ ಖಾತೆಗೆ ಕೆಟ್ಟ ಕಮೆಂಟ್ ಮಾಡುತ್ತಿದ್ದಾರೆ. ವ್ಯಾಯಾಮ ಮಾಡಿದ್ರೂ ತಪ್ಪು, ಬರ್ತ್ಡೇ ಆಚರಿಸಿದ್ರೆ ತಪ್ಪಾ? ವಿಶೇಷವಾಗಿ ನಾನು ಮಹಿಳೆಯರ ಪರ ಧ್ವನಿ ಎತ್ತಿದ್ದೇನೆ.ಅಶ್ಲೀಲ ಕಮೆಂಟ್ ಸಂಬಂಧ ಕಾರ್ಯಕರ್ತರು ದೂರು ನೀಡಿದ್ದಾರೆ.ಈಗಾಗಲೇ ಆರೋಪಿಗಳನ್ನು ಅರೆಸ್ಟ್ ಕೂಡ ಮಾಡಿದ್ದಾರೆ. ನಾನು ಧೈರ್ಯವಾಗಿ ಜೀವನ ಮಾಡ್ತೇನೆ, ನನಗೆ ಯಾರ ಭಯವಿಲ್ಲ ಎಂದು ಗುಡುಗಿದರು.
ರಾಜಕೀಯಕ್ಕೆ ಪ್ರವೇಶ ಮಾಡುವ ಮುನ್ನ ನಾನು ಹೇಗಿದ್ದೆನೋ ಅದೇ ರೀತಿ ಈಗಲೂ ಇರಲು ಪ್ರಯತ್ನ ಮಾಡುತ್ತೇನೆ. ರಾಜಕೀಯ ವಿಚಾರದಲ್ಲಿ ಯಾವುದೇ ಮುಚ್ಚುಮರೆ ಇರಬಾರದು. ನಮ್ಮ ವೈಯಕ್ತಿಕ ಜೀವನ ಸಾರ್ವಜನಿಕರೊಂದಿಗೆ ಹಂಚಿಕೊಳ್ಳಬೇಕು . ನನ್ನ ಬಟ್ಟೆಗಳ ಬಗ್ಗೆ ಇನ್ಸ್ಟಾಗ್ರಾಮ್ ಎಂಎಲ್ಎ ಹಾಗೂ ಗುಂಡಿ ಮುಚ್ಚಿಲ್ಲ ಎಂದು ಪರ್ಸನಲ್ ಆಗಿ ಟಾರ್ಗೆಟ್ ಮಾಡ್ತಾರೆ. ರಾಜ್ಯದಲ್ಲಿ 11 ಮಹಿಳಾ ಶಾಸಕರಿದ್ದೇವೆ. ನನ್ನ ಇನ್ಸ್ಟಾಗ್ರಾಮ್, ಫೇಸ್ಬುಕ್ ಖಾತೆ ಜನರಿಗೆ ಇಟ್ಟಿದ್ದೇನೆ. ಇದು ತಪ್ಪಾ? ಪಾರದರ್ಶಕವಾಗಿ ಜೀವನ ಮಾಡುವುದು ತಪ್ಪಾ? ಇದೆ ಕಾರಣಕ್ಕೆ ರಾಜಕಾರಣಿಗಳು ವೈಯಕ್ತಿಕ ಜೀವನ ಮುಚ್ಚಿಡ್ತಾರೆ . ನಾವು ಸಾರ್ವಜನಿಕ ಜೀವನದಲ್ಲಿದ್ದೇನೆ, ಜಿಗುಪ್ಸೆ ಮತ್ತು ಹಿಂಸೆ ಆಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಹುಬ್ಬಳ್ಳಿ, ಜನವರಿ 12: ಮಹಿಳೆಯೋರ್ವಳ ಜೊತೆಗೆ ಅಕ್ರಮ ಸಂಬಂಧದ ಕಾರಣ ಆಕೆಯ ಕುಟುಂಬಸ್ಥರಿಂದ ಗಂಭೀರ ಹಲ್ಲೆಗೆ ಒಳಗಾಗಿದ್ದ ಹುಬ್ಬಳ್ಳಿ ಕಾನೂನು ವಿಶ್ವ ವಿದ್ಯಾಲಯದ ಎಂಜಿನಿಯರ್ ವಿಠ್ಠಲ್ ರಾಠೋಡ್(60) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಹುಬ್ಬಳ್ಳಿಯ ನವನಗರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಡಿ.10ರಂದು ವಿಠ್ಠಲ್ ಅವರ ಮೇಲೆ ಹಲ್ಲೆ ನಡೆದಿತ್ತು.
ಹಲ್ಲೆ ನಡೆಸಿ ನಾಟಕವಾಡಿದ್ದ ಆರೋಪಿಗಳು
ಕಾನೂನು ವಿವಿಯಲ್ಲಿ ಗುತ್ತಿಗೆ ಕೆಲಸ ಪಡೆದಿದ್ದ ವಿಠ್ಠಲ್ ರಾಠೋಡ್ ಬಳಿ 4-5 ವರ್ಷಗಳಿಂದ ಛತ್ತೀಸ್ಗಢ ಮೂಲದ ಕುಟುಂಬವೊಂದು ಕೆಲಸ ಮಾಡುತ್ತಿತ್ತು. ಆ ಪೈಕಿ ವಿಮಾಲ ಜೊತೆ ವಿಠ್ಠಲ್ ರಾಠೋಡ್ ಅನೈತಿಕ ಸಂಬಂಧ ಹೊಂದಿದ್ದರು. ಇದೇ ವಿಚಾರಕ್ಕೆ ಅನೇಕ ಬಾರಿ ಜಗಳ ಕೂಡ ನಡೆದಿತ್ತು. ಜನವರಿ 10ರ ರಾತ್ರಿ ಕೂಡ ಇದೇ ವಿಚಾರಕ್ಕೆ ಮತ್ತೆ ಗಲಾಟೆಯಾಗಿದ್ದು, ಆ ವೇಳೆ ವಿಠ್ಠಲ್ ಮೇಲೆ ಮೇಘವ್ ಮತ್ತು ಭಗವಾನದಾಸ್ ಹಲ್ಲೆ ಮಾಡಿದ್ದರು. ಬಳಿಕ ಮದ್ಯ ಸೇವಿಸಿ ಬಿದ್ದು ವಿಠ್ಠಲ್ ಗಾಯಗೊಂಡಿರೋದಾಗಿ ಬಿಂಬಿಸಿದ್ದರು. ಗಂಭೀರ ಗಾಯಗೊಂಡಿದ್ದ ಅವರನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಕಳೆದೆರಡು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆಗೆ ಫಲಕಾರಿಯಾಗದೆ ಅವರಿಂದು ಕೊನೆಯುಸಿರೆಳೆದಿದ್ದಾರೆ.
ಘಟನೆ ಬಗ್ಗೆ ಅನುಮಾನಗೊಂಡು ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣದ ರಹಸ್ಯ ಬಯಲಾಗಿದೆ. ಛತ್ತೀಸ್ಗಢ ಮೂಲದ ದಂಪತಿ ಮತ್ತು ಮಗ ಸೇರಿ ವಿಜಯಪುರದ ಅರಕೇರಾ ತಾಂಡಾ ಮೂಲದ ನಿವಾಸಿ ವಿಠ್ಠಲ್ರನ್ನು ಕೊಂದಿದ್ದು, ಪ್ರಕರಣ ಸಂಬಂಧ ಮೇಘವ, ಭಗವಾನದಾಸ್ ಹಾಗೂ ವಿಮಲಾಳನ್ನು ಬಂಧಿಸಲಾಗಿದೆ. ಈ ಬಗ್ಗೆ ಹುಬ್ಬಳ್ಳಿಯ ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯೂಟ್ಯೂಬ್ನಲ್ಲಿ ರಿಲೀಸ್ ಆದ‘ಟಾಕ್ಸಿಕ್’ ಸಿನಿಮಾದ ಟೀಸರ್ ಸಾಕಷ್ಟು ಸದ್ದು ಮಾಡಿತ್ತು. ಈ ಟೀಸರ್ನ ಅಲ್ಲಿ ಹಸಿಬಿಸಿ ದೃಶ್ಯಗಳು ಇದ್ದವು. ಈ ಸಂಬಂಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆ ಆಗಿದೆ. ‘ನಾನು ಹಸಿಬಿಸಿ ದೃಶ್ಯ ಮಾಡೋದಿಲ್ಲ ಎಂದು ಯಶ್ ಈ ಮೊದಲು ಹೇಳಿದ್ದರು. ಆದರೆ, ಈಗ ರಿಲೀಸ್ ಆಗಿರುವ ಟಾಕ್ಸಿಕ್ ಅದಕ್ಕೆ ವಿರುದ್ಧವಾಗಿದೆ. ಕುಟುಂಬದವರು ಕುಳಿತು ಟೀಸರ್ನ ನೋಡೋಕೆ ಆಗುತ್ತಾ? ಅದನ್ನು ತೆಗೆದು ಹಾಕಿ’ ಎಂದು ಆಮ್ ಆದ್ಮಿ ಪಕ್ಷದ ಮಹಿಳಾ ಘಟಕ ಒತ್ತಾಯಿಸಿದೆ.
ಬೆಂಗಳೂರು, ಜ.12: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಬೆಂಗಳೂರು-ಕಡಪ-ವಿಜಯವಾಡವನ್ನು ಸಂಪರ್ಕಿಸುವ ಆರ್ಥಿಕ ಕಾರಿಡಾರ್ (NH-544G) ನಿರ್ಮಾಣ ಮಾಡುವ ಕಾರ್ಯದಲ್ಲಿ ಮಹತ್ವ ಮೈಲಿಗಲ್ಲು ಸಾಧಿಸಿದೆ. ಈ ಮೂಲಕ ವಿಶ್ವ ದಾಖಲೆಯ ಪುಟ ಸೇರಿದೆ ಎಂದು ಕೇಂದ್ರ ಸಾರಿಗೆ ಸಚಿವ ನೀತಿನ್ ಗಡ್ಕರಿ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಟ್ಟು ನಾಲ್ಕು ಗಿನ್ನೆಸ್ ದಾಖಲೆಗಳನ್ನು ಮಾಡಿದೆ. ಜನವರಿ 6 ರಂದು ಆಂಧ್ರಪ್ರದೇಶದ ಪುಟ್ಟಪರ್ತಿ ಬಳಿ ಎರಡು ಗಿನ್ನೆಸ್ ವಿಶ್ವ ದಾಖಲೆ ಮಾಡಿತ್ತು. ಇದೀಗ ತನ್ನದೇ ದಾಖಲೆಗಳನ್ನು ಮುರಿದು ಮತ್ತೆರಡು ದಾಖಲೆಗಳನ್ನು ಮಾಡಿದೆ. ಇದೀಗ ಈ ದಾಖಲೆ ಮೂಲಕ ದೇಶದಲ್ಲಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ಎಷ್ಟು ನಿಷ್ಠೆಯನ್ನು ಹಾಗೂ ವೇಗವನ್ನು ಹೊಂದಿದೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಿದ ಮೊದಲ ದಾಖಲೆ ಪ್ರಕಾರ, 24 ಗಂಟೆಯಲ್ಲಿ 9.63 ಕಿಮೀ ಉದ್ದದ 3 ಲೇನ್ ಅಗಲದ ಬಿಟುಮಿನಸ್ ಕಾಂಕ್ರೀಟ್ ಅನ್ನು ನಿರಂತರವಾಗಿ ಹಾಕಿದ್ದಾರೆ. ಎರಡನೇ ದಾಖಲೆ 24 ಗಂಟೆಗಳಲ್ಲಿ 10,655 ಮೆಟ್ರಿಕ್ ಟನ್ ನಿರಂತರವಾಗಿ ಬಿಟುಮಿನಸ್ ಕಾಂಕ್ರೀಟ್ ಹಾಕಿರುವುದು. ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಆರ್ಥಿಕ ಕಾರಿಡಾರ್ ಜಾಗತಿಕವಾಗಿ ಮೊದಲ ಬಾರಿಗೆ ವಿಶ್ವ ದಾಖಲೆಯನ್ನು ಮಾಡಿದೆ. ಇದೀಗ ಜನವರಿ 11ರಂದು ಮತ್ತೆರಡು ದಾಖಲೆಗಳು ಇದಕ್ಕೆ ಸೇರಿಕೊಂಡಿದೆ. 57,500 ಮೆಟ್ರಿಕ್ ಟನ್ ಬಿಟುಮಿನಸ್ ಕಾಂಕ್ರೀಟ್ ಹಾಕುವ ಮೂಲಕ ಮೂರನೇ ದಾಖಲೆಯನ್ನು ಮಾಡಿದೆ. 156 ಕಿ.ಮೀ. ನಿರಂತರ ಡಾಂಬರು ಹಾಕುವ ಮೂಲಕ ನಾಲ್ಕನೇ ದಾಖಲೆಯನ್ನು ಮಾಡಿದೆ. ಈ ಎರಡು ದಾಖಲೆಗಳು ಈ ಹಿಂದಿನ ದಾಖಲೆಯನ್ನು ಮುರಿದಿದೆ.
ಬೆಂಗಳೂರು-ಕಡಪ-ವಿಜಯವಾಡ ಆರ್ಥಿಕ ಕಾರಿಡಾರ್‌ನ ಪ್ಯಾಕೇಜ್ -2 ಮತ್ತು ಪ್ಯಾಕೇಜ್ -3 ರಲ್ಲಿ ಈ ವೇಗ ನಿರ್ಮಾಣ ಕಾರ್ಯವನ್ನು ಮಾಡಲಾಗಿದೆ. ಮೆಸರ್ಸ್ ರಾಜ್‌ಪಥ್ ಇನ್ಫ್ರಾಕಾನ್ ಪ್ರೈವೇಟ್ ಲಿಮಿಟೆಡ್‌ನ ಸಹಯೋಗದೊಂದಿಗೆ ಈ ಸಾಧನೆಯನ್ನು ಮಾಡಲಾಗಿದೆ. ಈ ವೇಗದ ನಿರ್ಮಾಣ ಕಾರ್ಯಕ್ಕೆ 70 ಟಿಪ್ಪರ್‌ಗಳು, 5 ಹಾಟ್ ಮಿಕ್ಸ್ ಪ್ಲಾಂಟ್, ಡಾಂಬರು ಪೇವರ್, 17 ರೋಲರುಗಳನ್ನು ಬಳಸಿಕೊಳ್ಳಲಾಗಿದೆ. ಇನ್ನು ಈ ನಿರ್ಮಾಣ ಕಾರ್ಯಕ್ಕೆ ಬೇಕಾದ ಸಲಕರಣೆಗಾಗಿ ಬೇರೆ ಬೇರೆ ಕಂಪನಿಗಳ ಜತೆಗೆ ಒಪ್ಪಂದವನ್ನು ಕೂಡ ಮಾಡಲಾಗಿದೆ. ಈ ಕಂಪನಿಗಳ ಮೂಲಕ ನಿರ್ಮಾಣ ಕಾರ್ಯದ ಮೇಲ್ವಿಚಾರಣೆ ಮಾಡಲಾಗುತ್ತದೆ. ಇದರ ಜತೆಗೆ ಸುರಂಗ, ಅರಣ್ಯ ಪ್ರದೇಶ, ಇತರ ಸೌಲಭ್ಯಗಳಿಗಾಗಿ ಸುರಕ್ಷಿತ ಕ್ರಮಗಳನ್ನು ಕೂಡ ತೆಗೆದುಕೊಳ್ಳಲಾಗಿದೆ. ಈ ಯೋಜನೆ ಬೆಂಗಳೂರು ಮತ್ತು ವಿಜಯವಾಡ ನಡುವಿನ ಸಂಪರ್ಕಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಲಿದೆ ಎಂದು ಹೇಳಲಾಗಿದೆ.
ಗದಗ, ಜನವರಿ 12: ಲಕ್ಕುಂಡಿಯಲ್ಲಿ ಪತ್ತೆಯಾದ ನಿಧಿಯ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದೆ. ತಮ್ಮ ಮನೆಗೆ ಅಡಿಪಾಯ ಹಾಕುವಾಗ ಸಿಕ್ಕ ನಿಧಿಯನ್ನು ತಾಯಿ-ಮಗ ಸರ್ಕಾರಕ್ಕೊಪ್ಪಿಸಿದ್ದರು. ಮನೆಯ ಜಾಗದಲ್ಲಿ ಸಿಕ್ಕ ಚಿನ್ನ ನಿಧಿಯೇ ಅಲ್ಲ, ಅದು ಕುಟುಂಬಕ್ಕೇ ಸೇರಿದ್ದೆಂದು ತಜ್ಞರು ಹೇಳಿದ್ದರು. ಈ ಮಾತು ಕೇಳಿದ ಬಡ ಕುಟುಂಬವೂ ಕೊಟ್ಟ ಬಂಗಾವರನ್ನು ವಾಪಸ್ ಕೇಳಿದ. ಇದೆಲ್ಲದರ ನಡುವೆ ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕರು ಈ ಕುರಿತು ಸ್ಪಷ್ಟನೆ ನೀಡಿದ್ದು, ನಿಯಮಗಳ ಪ್ರಕಾರ, ನಿಧಿ ಕಂಡ ಕುಟುಂಬಕ್ಕೆ ಅದರ ಮೌಲ್ಯದ ಐದನೇ ಒಂದು ಭಾಗದಷ್ಟು (ಶೇ 20) ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತವು ನಿಧಿಯ ಮೌಲ್ಯವನ್ನು ನಿರ್ಧರಿಸಿದ ನಂತರ, ಆ ಮೌಲ್ಯದ ಐದನೇ ಒಂದು ಭಾಗವನ್ನು ಹಣಕಾಸಿನ ರೂಪದಲ್ಲಿ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ. ಇದು ಭಾರತೀಯ ನಿಧಿ ಕಾಯಿದೆ 1878 ರ ಅಡಿಯಲ್ಲಿರುವ ನಿಯಮವಾಗಿದ್ದು, ಪ್ರಾಮಾಣಿಕವಾಗಿ ನಿಧಿ ವರದಿ ಮಾಡಿದವರಿಗೆ ಪರಿಹಾರ ನೀಡುವ ವ್ಯವಸ್ಥೆ ಇದೆ ಎಂದು ಇಲಾಖೆ ತಿಳಿಸಿದೆ.
ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಟೀಮ್ ಇಂಡಿಯಾ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಹೊರಬಿದ್ದಿದ್ದಾರೆ. ಅವರ ಬದಲಿಗೆ ಇದೀಗ ಯುವ ಆಲ್ರೌಂಡರ್ ಆಯುಷ್ ಬದೋನಿ (Ayush Badoni) ಅವರನ್ನು ಆಯ್ಕೆ ಮಾಡಲಾಗಿದೆ.
ವಡೋದರಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆ ವಾಷಿಂಗ್ಟನ್ ಸುಂದರ್ ಅವರ ಪೆಕ್ಕೆಲುಬಿಗೆ ಗಾಯವಾಗಿತ್ತು. ಈ ಕಾರಣದ ಅವರಿಗೆ ವೈದ್ಯರು ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ ನ್ಯೂಝಿಲೆಂಡ್ ವಿರುದ್ಧದ ಮುಂದಿನ ಎರಡು ಪಂದ್ಯಗಳಲ್ಲಿ ಸುಂದರ್ ಕಾಣಿಸಿಕೊಳ್ಳುವುದಿಲ್ಲ.
ಅಲ್ಲದೆ ವಾಷಿಂಗ್ಟನ್ ಸುಂದರ್ ಅವರ ಸ್ಥಾನಕ್ಕೆ ಬಲಗೈ ಆಲ್ರೌಂಡರ್ ಆಯುಷ್ ಬದೋನಿ ಆಯ್ಕೆಯಾಗಿದ್ದಾರೆ. ದೆಹಲಿ ಮೂಲದ ಬದೋನಿ ಇದೇ ಮೊದಲ ಬಾರಿಗೆ ಭಾರತ ತಂಡದಲ್ಲಿ ಸ್ಥಾನ ಪಡದಿದ್ದಾರೆ. ಅದರಂತೆ ರಾಜ್ಕೋಟ್ ಹಾಗೂ ಇಂದೋರ್ನಲ್ಲಿ ನಡೆಯಲಿರುವ ನ್ಯೂಝಿಲೆಂಡ್ ವಿರುದ್ಧ 2 ಪಂದ್ಯಗಳ ವೇಳೆ ಆಯುಷ್ ಬದೋನಿ ಟೀಮ್ ಇಂಡಿಯಾ ಜೊತೆ ಕಾಣಿಸಿಕೊಳ್ಳಲಿದ್ದಾರೆ.
ಆಯುಷ್ ಬದೋನಿ ಲಿಸ್ಟ್ ಎ ಕ್ರಿಕೆಟ್ನಲ್ಲಿ ಈವರೆಗೆ 27 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 22 ಇನಿಂಗ್ಸ್ ಆಡಿರುವ ಅವರು 1 ಶತಕ ಹಾಗೂ 5 ಅರ್ಧಶತಕಗಳೊಂದಿಗೆ 693 ರನ್ ಕಲೆಹಾಕಿದ್ದಾರೆ. ಹಾಗೆಯೇ 18 ವಿಕೆಟ್ಗಳನ್ನು ಸಹ ಕಬಳಿಸಿದ್ದಾರೆ. ಇನ್ನು ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ 56 ಪಂದ್ಯಗಳನ್ನಾಡಿರುವ ಅವರು ಒಟ್ಟು 6 ಅರ್ಧಶತಕಗಳೊಂದಿಗೆ 963 ರನ್ಗಳಿಸಿದ್ದಾರೆ. ಇದೀಗ ಚೊಚ್ಚಲ ಬಾರಿಗೆ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ.
ಭಾರತ ಏಕದಿನ ತಂಡ : ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಆಯುಷ್ ಬದೋನಿ.