Category Archives: Blog

Your blog category

ಜೂನ್ 10 ಕ್ಕೆ ಪ್ರಧಾನಿ ಮೋದಿ ಹೆಸರಿಗೆ ಹೊಸ ದಾಖಲೆ, ನೆಹರು ಅಧಿಕಾರಾವಧಿ ಹಿಂದಿಕ್ಕಲಿರುವ ನವ ಭಾರತದ ಸಾರಥಿ – Kannada News

ನವದೆಹಲಿ, ಜೂನ್ 04: ಭಾರತದ ರಾಜಕೀಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಮಹತ್ತರ ಮೈಲಿಗಲ್ಲೊಂದು ಜೂನ್ 10ರಂದು ನಿರ್ಮಾಣವಾಗಲಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಭಾರತದಲ್ಲಿ ಅತ್ಯಂತ ದೀರ್ಘಾವಧಿ ಅಧಿಕಾರ ನಡೆಸಿದ ಪ್ರಧಾನಿ ಎಂಬ ಅಭೂತಪೂರ್ವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 1951-52 ರ ದೇಶದ ಮೊದಲ ಸಾರ್ವತ್ರಿಕ ಚುನಾವಣೆಗೂ ಮುನ್ನ ಇದ್ದ ಮಧ್ಯಂತರ ಅವಧಿಯನ್ನು ಹೊರತುಪಡಿಸಿ, ಕೇವಲ ಚುನಾಯಿತ ಸರ್ಕಾರದ ದಿನಗಳನ್ನು ಲೆಕ್ಕ ಹಾಕಿದಾಗ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ದಿಗಜ, ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಸುದೀರ್ಘ ದಾಖಲೆಯನ್ನು ಮುರಿಯಲಿದ್ದಾರೆ.

ದಾಖಲೆಯ ದಿನಗಳ ಲೆಕ್ಕಾಚಾರ ಹೀಗಿದೆ
2014 ರ ಮೇ 26 ರಂದು ದೇಶದ ಪ್ರಧಾನಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರು, 2026 ರ ಜೂನ್ 10ರ ವೇಳೆಗೆ ಸತತವಾಗಿ 4,399 ದಿನಗಳ ಕಾಲ ಅಧಿಕಾರ ಪೂರೈಸಿದಂತಾಗುತ್ತದೆ.

ಜವಾಹರಲಾಲ್ ನೆಹರು ಅವರು ದೇಶದ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಅಂದರೆ, 1952 ರ ಮೇ 13 ರಿಂದ 1964 ರ ಮೇ 27ರಂದು ನಿಧನರಾಗುವವರೆಗೂ ಚುನಾಯಿತ ಪ್ರಧಾನಿಯಾಗಿ ಒಟ್ಟು 4,398ದಿನಗಳ ಕಾಲ ಸೇವೆ ಸಲ್ಲಿಸಿದ್ದರು.

ಇಂದಿರಾ ಗಾಂಧಿ ಅವರ ಅವಧಿ: ಇದೇ ಪಟ್ಟಿಯಲ್ಲಿ ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ ಅವರು4077 ದಿನಗಳ ಕಾಲ (1966 ರಿಂದ 1977ರವರೆಗೆ) ಸತತ ಅಧಿಕಾರ ನಡೆಸಿ ಮೂರನೇ ಸ್ಥಾನದಲ್ಲಿದ್ದಾರೆ.

ಜವಾಹರಲಾಲ್ ನೆಹರು ಮತ್ತು ನರೇಂದ್ರ ಮೋದಿ ಇಬ್ಬರೂ ತಮ್ಮದೇ ಆದ ಶೈಲಿಯಲ್ಲಿ ಭಾರತೀಯ ರಾಜಕಾರಣದ ದಿಕ್ಕನ್ನು ಬದಲಿಸಿದ ಧೀಮಂತ ನಾಯಕರಾಗಿದ್ದಾರೆ. ನೆಹರೂ ಅವರು ಸ್ವಾತಂತ್ರ್ಯೋತ್ತರ ಭಾರತದಲ್ಲಿ ‘ಜಾತ್ಯತೀತ ಒಮ್ಮತ’ದ ಆಧಾರದ ಮೇಲೆ ದಶಕಗಳ ಕಾಲ ದೇಶವನ್ನು ಮುನ್ನಡೆಸಿದರೆ, ಪ್ರಧಾನಿ ಮೋದಿ ಅವರು ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ತೇಜಸ್ವಿ ಅಭಿವೃದ್ಧಿಯ ಹೊಸ ಮಿಶ್ರಣದ ಮೂಲಕ ಭಾರತದ ರಾಜಕೀಯ ವ್ಯಾಕರಣವನ್ನೇ ಪುನಃ ಬರೆದಿದ್ದಾರೆ.

ಮತ್ತಷ್ಟು ಓದಿ: ಪ್ರಧಾನಿ ನರೇಂದ್ರ ಮೋದಿ ನೆದರ್‌ಲ್ಯಾಂಡ್ಸ್ ಭೇಟಿಯಿಂದ ಭಾರತಕ್ಕೆ ಏನೆಲ್ಲ ಲಾಭ? ಇಲ್ಲಿದೆ ಮಾಹಿತಿ

ತೀವ್ರ ಪೈಪೋಟಿಯ ಇಂದಿನ ರಾಜಕೀಯ ವಾತಾವರಣದಲ್ಲೂ ಸತತ ಮೂರು ಬಾರಿ ಭಾರಿ ಜನಾದೇಶದೊಂದಿಗೆ ಗೆದ್ದು ಬಂದಿರುವುದು ಮೋದಿ ಅವರ ನಾಯಕತ್ವದ ಶಕ್ತಿಯನ್ನು ತೋರಿಸುತ್ತದೆ.

ಐತಿಹಾಸಿಕ ಸುಧಾರಣೆಗಳು ಮತ್ತು ದೃಢ ನಿರ್ಧಾರಗಳ ಕಾಲ
ಪ್ರಧಾನಿ ನರೇಂದ್ರ ಮೋದಿ ಅವರ ಈ ಸುದೀರ್ಘ ಅಧಿಕಾರಾವಧಿಯು ಭಾರತದ ಸಾರ್ವಭೌಮತೆ ಮತ್ತು ಆಡಳಿತಾತ್ಮಕ ಸುಧಾರಣೆಗಳಿಗೆ ಹೊಸ ಭಾಷ್ಯ ಬರೆದಿದೆ. ಸ್ವಾತಂತ್ರ್ಯದ ನಂತರ ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ಅನೇಕ ಐತಿಹಾಸಿಕ ನಿರ್ಧಾರಗಳು ಇವರ ಅವಧಿಯಲ್ಲಿ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದಿವೆ.

370 ನೇ ವಿಧಿ ರದ್ದು: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ, ಅದನ್ನು ಭಾರತದ ಮುಖ್ಯವಾಹಿನಿಯೊಂದಿಗೆ ಸಂಪೂರ್ಣವಾಗಿ ಬೆಸೆದಿರುವುದು ತಂತ್ರಜ್ಞಾನ ಮತ್ತು ಭದ್ರತೆಯ ದೃಷ್ಟಿಯಿಂದ ದೇಶಕ್ಕೆ ಸಿಕ್ಕ ಬಹುದೊಡ್ಡ ಯಶಸ್ಸಾಗಿದೆ.

ಸಾಮಾಜಿಕ ಸುಧಾರಣೆ (ತ್ರಿವಳಿ ತಲಾಖ್ ರದ್ದು): ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ‘ತ್ರಿವಳಿ ತಲಾಖ್’ ಪದ್ಧತಿಯನ್ನು ರದ್ದುಗೊಳಿಸಿ ಸಾಮಾಜಿಕ ನ್ಯಾಯ ಎತ್ತಿಹಿಡಿಯಲಾಗಿದೆ.

ಭವ್ಯ ರಾಮ ಮಂದಿರ ನಿರ್ಮಾಣ: ಶತಮಾನಗಳ ಕಾಲದ ವಿವಾದಕ್ಕೆ ಸುಪ್ರೀಂ ಕೋರ್ಟ್ ಮೂಲಕ ಸೌಹಾರ್ದಯುತ ತೆರೆ ಎಳೆದು, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರವನ್ನು ನಿರ್ಮಿಸಿರುವುದು ನವ ಭಾರತದ ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾಗಿದೆ.

ಕಾಂಗ್ರೆಸ್ ಯುಗದ ನೈಸರ್ಗಿಕ ಆಡಳಿತ ಚೌಕಟ್ಟಿನಿಂದ ಹೊರಬಂದು, ಪ್ರಾದೇಶಿಕ ಮುಖ್ಯಮಂತ್ರಿಯಾಗಿ (ಗುಜರಾತ್) ಮೂರು ಬಾರಿ ಗೆದ್ದು, ನಂತರ ರಾಷ್ಟ್ರ ರಾಜಕಾರಣದಲ್ಲೂ ಸತತ ಮೂರನೇ ಬಾರಿಗೆ ಎನ್‌ಡಿಎ (NDA) ಸರ್ಕಾರವನ್ನು ಮುನ್ನಡೆಸುತ್ತಿರುವ ಪ್ರಧಾನಿ ಮೋದಿ ಅವರ ಈ ಸಾಧನೆ ಇಡೀ ವಿಶ್ವವೇ ಭಾರತದ ಪ್ರಜಾಪ್ರಭುತ್ವದ ಸ್ಥಿರತೆಯನ್ನು ಹೆಮ್ಮೆಯಿಂದ ನೋಡುವಂತೆ ಮಾಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:01 am, Thu, 4 June 26

Source link

Wind Chimes Vastu: ಮನೆಯಲ್ಲಿ ಈ ವಸ್ತು ನೇತುಹಾಕುವ ಮುನ್ನ ವಾಸ್ತು ನಿಯಮ ತಿಳಿದಿರಲಿ; ಇಲ್ಲದಿದ್ದರೆ ಕಷ್ಟ ತಪ್ಪಿದ್ದಲ್ಲ – Kannada News

ವಿಂಡ್ ಚೈಮ್‌ ವಾಸ್ತು
Image Credit source: Pinterest

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ಮನೆ ಸುಂದರಗೊಳಿಸಲು ಮತ್ತು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ವಿಂಡ್ ಚೈಮ್‌ ಖರೀದಿಸಿ ತರುತ್ತಾರೆ. ಗಾಳಿಯಲ್ಲಿ ತೂಗಾಡುವ ವಿಂಡ್ ಚೈಮ್‌ಗಳಿಂದ ಮೂಡುವ ಮಧುರ ನಾದವು ಮನಸ್ಸಿಗೆ ನೆಮ್ಮದಿ ನೀಡುವುದರ ಜೊತೆಗೆ, ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಕೇವಲ ವಿಂಡ್ ಚೈಮ್ ಹಾಕಿದರೆ ಸಾಕಾಗುವುದಿಲ್ಲ. ಅದರ ವಿಧ, ರಾಡ್‌ಗಳ ಸಂಖ್ಯೆ ಹಾಗೂ ಅದನ್ನು ಇಡುವ ದಿಕ್ಕು ಕೂಡ ಬಹಳ ಮುಖ್ಯವಾಗಿರುತ್ತದೆ.

ವಿಂಡ್ ಚೈಮ್‌ನಲ್ಲಿ ಎಷ್ಟು ರಾಡ್‌ಗಳಿರಬೇಕು?

ವಿಂಡ್ ಚೈಮ್ ಖರೀದಿಸುವಾಗ ಅದರಲ್ಲಿರುವ ರಾಡ್‌ಗಳ ಸಂಖ್ಯೆಗೆ ಗಮನ ನೀಡಬೇಕು. ವಾಸ್ತು ಪ್ರಕಾರ, ಪ್ರತಿಯೊಂದು ಸಂಖ್ಯೆಯೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ಐದು ರಾಡ್‌ಗಳನ್ನು ಹೊಂದಿರುವ ವಿಂಡ್ ಚೈಮ್‌ಗಳು ವಿಶೇಷವಾಗಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇವು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಿ, ಸಕಾರಾತ್ಮಕತೆ ಮತ್ತು ಶಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂಬ ನಂಬಿಕೆ ಇದೆ.

ಯಾವ ದಿಕ್ಕಿನಲ್ಲಿ ವಿಂಡ್ ಚೈಮ್ ಇಡಬೇಕು?

ವಾಸ್ತು ಶಾಸ್ತ್ರದ ಪ್ರಕಾರ, ಬಿದಿರು ಅಥವಾ ಮರದಿಂದ ತಯಾರಿಸಿದ ವಿಂಡ್ ಚೈಮ್‌ಗಳನ್ನು ಮನೆಯ ಪೂರ್ವ, ಆಗ್ನೇಯ ಅಥವಾ ದಕ್ಷಿಣ ದಿಕ್ಕಿನಲ್ಲಿ ಅಳವಡಿಸುವುದು ಶುಭಕರವೆಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚುವುದರ ಜೊತೆಗೆ, ಕುಟುಂಬ ಸದಸ್ಯರ ನಡುವೆ ಪ್ರೀತಿ, ಸಾಮರಸ್ಯ ಮತ್ತು ಉತ್ತಮ ಬಾಂಧವ್ಯ ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ. ಜೊತೆಗೆ, ಕುಟುಂಬದ ಸದಸ್ಯರು ತಮ್ಮ ಕೆಲಸಗಳಲ್ಲಿ ಯಶಸ್ಸು ಸಾಧಿಸಲು ಸಹ ಇದು ಸಹಕಾರಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಈ ಸ್ಥಳಗಳಲ್ಲಿ ವಿಂಡ್ ಚೈಮ್ ಇಡಬೇಡಿ:

ವಾಸ್ತು ಪ್ರಕಾರ, ಜನರು ನೇರವಾಗಿ ಕುಳಿತುಕೊಳ್ಳುವ ಅಥವಾ ಮಲಗುವ ಸ್ಥಳದ ಮೇಲ್ಭಾಗದಲ್ಲಿ ವಿಂಡ್ ಚೈಮ್‌ಗಳನ್ನು ಅಳವಡಿಸುವುದನ್ನು ತಪ್ಪಿಸಬೇಕು. ಹಾಸಿಗೆ ಅಥವಾ ಸೋಫಾದ ಮೇಲ್ಭಾಗದಲ್ಲಿ ಇಡುವುದು ಸೂಕ್ತವಲ್ಲ ಎಂದು ಪರಿಗಣಿಸಲಾಗುತ್ತದೆ. ಬದಲಾಗಿ, ಉತ್ತಮ ಗಾಳಿಯ ಹರಿವು ಇರುವ ಮುಖ್ಯ ಬಾಗಿಲು ಅಥವಾ ಕಿಟಕಿಯ ಬಳಿ ವಿಂಡ್ ಚೈಮ್‌ಗಳನ್ನು ಇಡುವುದು ಹೆಚ್ಚು ಮಂಗಳಕರವೆಂದು ಹೇಳಲಾಗುತ್ತದೆ. ಇದರಿಂದ ಅದರ ಮಧುರ ನಾದವು ಮನೆಯಾದ್ಯಂತ ಹರಡಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಅಡುಗೆಮನೆ ಮತ್ತು ಶೌಚಾಲಯದ ಬಳಿ ಯಾಕೆ ಇಡಬಾರದು?

ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆ ಅಥವಾ ಶೌಚಾಲಯದ ಸಮೀಪ ವಿಂಡ್ ಚೈಮ್‌ಗಳನ್ನು ಅಳವಡಿಸುವುದು ಸೂಕ್ತವಲ್ಲ. ಇಂತಹ ಸ್ಥಳಗಳಲ್ಲಿ ವಿಂಡ್ ಚೈಮ್‌ಗಳನ್ನು ಇಡುವುದರಿಂದ ಅದರ ಶುಭ ಪರಿಣಾಮಗಳು ಕಡಿಮೆಯಾಗಬಹುದು ಎಂದು ಹೇಳಲಾಗುತ್ತದೆ.

ಹೊಸ ವಿಂಡ್ ಚೈಮ್ ಮನೆಗೆ ತಂದಾಗ ಏನು ಮಾಡಬೇಕು?

ಸಾಂಪ್ರದಾಯಿಕ ನಂಬಿಕೆಯ ಪ್ರಕಾರ, ಹೊಸ ವಿಂಡ್ ಚೈಮ್‌ನ್ನು ಮನೆಗೆ ತಂದ ಬಳಿಕ ಗಂಗಾಜಲ ಅಥವಾ ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ, ಮನೆಯ ಶುಭ ಮೂಲೆಯಲ್ಲಿ ಅಳವಡಿಸುವುದು ಉತ್ತಮ ಎಂದು ಪರಿಗಣಿಸಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಸ್ತೆಯೋ ಅಥವಾ ಸಾವಿನ ರನ್-ವೇಯೋ?: ಬೆಂಗಳೂರಿಗರ ಜೀವ ಹಿಂಡುತ್ತಿರುವ ಗುಂಡಿಗಳು; GBA ನಿದ್ರೆಗೆ ಜಾರಿದೆಯೇ?

ಬೆಂಗಳೂರು, ಜೂ.4: “ರಾಜ್ಯದಲ್ಲಿ ಮುಖ್ಯಮಂತ್ರಿಗಳು ಬದಲಾಗಬಹುದು, ಸರ್ಕಾರಗಳು ಬದಲಾಗಬಹುದು. ಆದರೆ ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳ ಹಣೆಬರಹ ಮಾತ್ರ ಎಂದಿಗೂ ಬದಲಾಗುವುದಿಲ್ಲ. ಇದು ಪ್ರಸ್ತುತ ಬೆಂಗಳೂರಿನ ರಸ್ತೆಗಳಲ್ಲಿ ನಿತ್ಯ ನರಕಯಾತನೆ ಅನುಭವಿಸುತ್ತಿರುವ ಸಾರ್ವಜನಿಕರ ತೀವ್ರ ಆಕ್ರೋಶದ ನುಡಿಗಳು. ನಿತ್ಯ ಸಾವಿರಾರು ವಾಹನ ಸವಾರರು, ಉದ್ಯೋಗಿಗಳು ಮತ್ತು ನಾಗರಿಕರು ಸಂಚರಿಸುವ ಪ್ರಮುಖ ರಸ್ತೆಗಳ ಪರಿಸ್ಥಿತಿ ಇಂದು ನಗರದ ರಸ್ತೆಯಂತೆ ಕಾಣುತ್ತಿಲ್ಲ, ಬದಲಿಗೆ ಅದೊಂದು ಸಾಹಸಮಯ ‘ಆಫ್-ರೋಡ್ ಟ್ರ್ಯಾಕ್’ (Off-road track) ನಂತೆ ಮಾರ್ಪಟ್ಟಿದೆ. ಈ ಬಗ್ಗೆ ವಿಡಿಯೋವೊಂದನ್ನು ಕರ್ನಾಟಕ ಪೋರ್ಟ್ಫೋಲಿಯೋ (Karnataka Portfolio) ಎಂಬ ಎಕ್ಸ್​​​​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ನಗರದ ಪ್ರಮುಖ ರಸ್ತೆಗಳ ಸಂಪೂರ್ಣ ಭಾಗವು ದೈತ್ಯ ಹೊಂಡಗಳು (Craters), ಕಿತ್ತುಹೋದ ಡಾಂಬರು ಮತ್ತು ಜಲ್ಲಿಕಲ್ಲುಗಳಿಂದ ತುಂಬಿಹೋಗಿದೆ. ಇಲ್ಲಿ ವಾಹನ ಚಾಲನೆ ಮಾಡುವುದು ಕೇವಲ ಅಸಮಾಧಾನ ತರುವುದಲ್ಲ, ಬದಲಿಗೆ ದ್ವಿಚಕ್ರ ವಾಹನ ಸವಾರರು, ಸೈಕಲ್ ಸವಾರರು ಹಾಗೂ ಪಾದಚಾರಿಗಳ ಜೀವಕ್ಕೆ ನೇರ ಕುತ್ತು ತರುತ್ತಿದೆ. ಅದರಲ್ಲೂ ವಿಶೇಷವಾಗಿ ಮಳೆ ಬಂದಾಗ ಈ ರಸ್ತೆ ಗುಂಡಿಗಳು ನೀರಿನಿಂದ ಆವೃತವಾಗಿ ಮಾರಣಾಂತಿಕ ಕಂದಕಗಳಾಗಿ ಬದಲಾಗುತ್ತಿವೆ. ಇದರಿಂದಾಗಿ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ವಾಹನಗಳು ಜಖಂಗೊಳ್ಳುತ್ತಿವೆ.

ಇಲ್ಲಿದೆ ನೋಡಿ ವಿಡಿಯೋ:

ನಾವು ಪ್ರಾಮಾಣಿಕವಾಗಿ ಆದಾಯ ತೆರಿಗೆ, ರಸ್ತೆ ತೆರಿಗೆ , ಇಂಧನ ತೆರಿಗೆ ಸೇರಿದಂತೆ ಹತ್ತಾರು ರೀತಿಯ ಸೆಸ್‌ಗಳನ್ನು ಸರ್ಕಾರಕ್ಕೆ ಪಾವತಿಸುತ್ತಿದ್ದಾರೆ. ಕನಿಷ್ಠ ಪಕ್ಷ ಸುರಕ್ಷಿತವಾದ ಮೂಲಸೌಕರ್ಯ ಮತ್ತು ರಸ್ತೆಗಳನ್ನು ಪಡೆಯುವ ನಿರೀಕ್ಷೆಯಿಂದ ಜನ ತೆರಿಗೆ ಕಟ್ಟುತ್ತಾರೆ. ಆದರೆ, ರಸ್ತೆಗಳ ಈ ನರಕಸದೃಶ ಸ್ಥಿತಿಯನ್ನು ನೋಡಿದರೆ, “ನಾವು ಕಟ್ಟುವ ತೆರಿಗೆ ಹಣವೆಲ್ಲಾ ಎಲ್ಲಿಗೆ ಹೋಗುತ್ತಿದೆ?” ಎಂಬ ಯಕ್ಷಪ್ರಶ್ನೆ ಪ್ರತಿಯೊಬ್ಬ ನಾಗರಿಕನಲ್ಲೂ ಮೂಡುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ಇದನ್ನೂ ಓದಿ: ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ: ತಪ್ಪಿದ ಭಾರಿ ಅನಾಹುತ

ಬೆಂಗಳೂರಿನಂತಹ ಅಂತರರಾಷ್ಟ್ರೀಯ ಮಟ್ಟದ ನಗರಕ್ಕೆ ಇಂತಹ ದುಃಸ್ಥಿತಿ ಖಂಡಿತಾ ಶೋಭಿಸುವುದಿಲ್ಲ. ಸುರಕ್ಷಿತ ಹಾಗೂ ಸುಸಜ್ಜಿತ ರಸ್ತೆಗಳು ನಾಗರಿಕರಿಗೆ ನೀಡುವ ಐಷಾರಾಮಿ ಸೌಲಭ್ಯವಲ್ಲ, ಅದು ಪ್ರತಿಯೊಬ್ಬ ತೆರಿಗೆದಾರನ ಕನಿಷ್ಠ ಮೂಲಭೂತ ಹಕ್ಕು ಎಂಬುದನ್ನು ಬಿಬಿಎಂಪಿ (BBMP) ಮತ್ತು ಸರ್ಕಾರ ಅರಿತುಕೊಳ್ಳಬೇಕಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿದ್ದರಾಮಯ್ಯ ಪದತ್ಯಾಗದ ಬೆನ್ನಲ್ಲೇ ಒಬಿಸಿಗೆ ಕಾಂಗ್ರೆಸ್​​ ಬಂಪರ್​​: ಕಾರಣ ಇಲ್ಲಿದೆ – Kannada News

ಬೆಂಗಳೂರು, ಜೂನ್​​ 04: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ರಾಜೀನಾಮೆ ನೀಡಿದ ಬಳಿಕ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್​​ ನಿನ್ನೆಯಷ್ಟೇ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರ ಜೊತೆಗೆ 13 ಜನ ಸಚಿವರಾಗಿಯೂ ಪ್ರತಿಜ್ಞಾವಿಧಿ ಪಡೆದಿದ್ದಾರೆ. ಹೀಗಿದ್ದರೂ ಸಿಎಂ ಕುಚಿರ್ಯಿಂದ ಸಿದ್ದರಾಮಯ್ಯರನ್ನು ಇಳಿಸಿರುವುದು ಪಕ್ಷಕ್ಕೆ ಯಾವುದಾದರೂ ರೀತಿಯಲ್ಲಿ ಹೊಡೆತ ನೀಡಬಹುದೆಂಬ ಆತಂಕ ಕಾಂಗ್ರೆಸ್​​ ಹೈಕಮಾಂಡ್​​ಗಿದೆ. ಹೀಗಾಗಿಯೇ ಭಾರಿ ಲೆಕ್ಕಾಚಾರ ಹಾಕಿರುವ ವರಿಷ್ಠರು ಒಬಿಸಿಗಳಿಗೆ ಬಂಪರ್​​ ನೀಡಿದ್ದಾರೆ.

ಹೌದು, ಒಬಿಸಿಗೆ ಸೇರಿರುವ ಸಿದ್ದರಾಮಯ್ಯ ಅವರ ಪದತ್ಯಾಗದ ಬೆನ್ನಲ್ಲೇ ಕಾಂಗ್ರೆಸ್​​ ಹೈಕಮಾಂಡ್​​ ಮಹತ್ವದ ನಿರ್ಣಯ ಕೈಗೊಂಡಿದೆ. ರಾಜ್ಯದಲ್ಲಿ ನಡೆಯಲಿರುವ ಪರಿಷತ್​​ ಚುನಾವಣೆ ನಾಲ್ವರು ಅಭ್ಯರ್ಥಿಗಳನ್ನು ಘೋಷಿಸಿದ್ದು, ಅವರೆಲ್ಲರೂ ಒಬಿಸಿಗೆ ಸೇರಿದವರೆ ಎನ್ನುವುದು ವಿಶೇಷ.

ಇದನ್ನೂ ಓದಿ: ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಯತೀಂದ್ರ

ಅಭ್ಯರ್ಥಿಗಳು ಮತ್ತು ಸಮುದಾಯ

  • ಹರಿಪ್ರಸಾದ್- ಈಡಿಗ ಬಿಲ್ಲವ
  • ಪಿವಿ ಮೋಹನ್ – ಬಿಲ್ಲವ
  • ಶಿವಣ್ಣ ಮಳವಳ್ಳಿ – ಕುರುಬ
  • ತಿಪ್ಪಣ್ಣಪ್ಪ ಕಮಕನೂರು – ಕೋಲಿ (ಕಬ್ಬಲಿಗ/ಗಂಗಾಮತ)

ಇಷ್ಟೇ ಅಲ್ಲದೆ ನಿನ್ನೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 13 ಮಂದಿಯ ಪೈಕಿ ಯತೀಂದ್ರ ಸಿದ್ದರಾಮಯ್ಯ ಮತ್ತು ಬೈರತಿ ಸುರೇಶ್ ಕೂಡ ಇದೇ ಒಬಿಸಿಗೆ ಸೇರಿದವರಾಗಿದ್ದಾರೆ. ವಿಧಾನ ಪರಿಷತ್​​ ಚುನಾವಣೆ ಅಭ್ಯರ್ಥಿಯ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ಬಿ.ಕೆ. ಹರಿಪ್ರಸಾದ್​​ಗೆ ನೀಡಿರುವುದು ಸಿದ್ದರಾಮಯ್ಯ ಪದತ್ಯಾಗದ ಬಳಿಕ ಪರ್ಯಾಯ ನಾಯಕತ್ವಕ್ಕೆ ಕಾಂಗ್ರೆಸ್​​ ಹೈಕಮಾಂಡ್​ ಹೆಚ್ಚಿನ ಒತ್ತು ನೀಡುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎಂಬಂತಿದೆ. ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಇಳಿಸಿದ ಬಳಿಕ ಅದರಿಂದ ಪಕ್ಷಕ್ಕೆ ಯಾವುದೇ ಡ್ಯಾಮೇಜ್​​ ಆಗದಂತೆ ಮತ್ತು ವೋಟ್​​ ಬ್ಯಾಂಕ್​​ ಕೈ ತಪ್ಪದಂತೆ ಆರಂಭದಿಂದಲೂ ಹೈಕಮಾಂಡ್​​ ನಾಯಕರು ತಂತ್ರ ರೂಪಿಸಿದ್ದರು. ಹೀಗಾಗಿ ಇವುಗಳೆಲ್ಲವೂ ಅದರದೇ ಭಾಗ ಎಂಬ ಮಾತುಗಳೀಗ ಕೇಳಿಬಂದಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

K Annamalai Birthday: ಕೆ ಅಣ್ಣಾಮಲೈ ಹುಟ್ಟುಹಬ್ಬ: ಕರ್ನಾಟಕದಲ್ಲಿ ವೃತ್ತಿಜೀವನ, ರಾಜೀನಾಮೆ ಮತ್ತು ಬಿಜೆಪಿ ಪಯಣದ ಸಮಗ್ರ ನೋಟ – Kannada News

ಚೆನ್ನೈ, ಜೂನ್ -4: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ, ಇತ್ತೀಚೆಗಷ್ಟೇ ಬಿಜೆಪಿಗೆ ರಾಜೀನಾಮೆ ನೀಡಿ ಬಹಳ ಸುದ್ದಿಯಲ್ಲಿರುವ ಜನಪ್ರಿಯ ನಾಯಕ ಕೆ. ಅಣ್ಣಾಮಲೈ(K Annamalai) ಅವರು ತಮ್ಮ 42ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ‘ಸಿಂಗಂ’ ಎಂದೇ ಖ್ಯಾತಿ ಗಳಿಸಿದ್ದ ಅಣ್ಣಾಮಲೈ, ನಂತರ ರಾಜಕೀಯಕ್ಕೆ ಧುಮುಕಿ ದೇಶದ ಗಮನ ಸೆಳೆದ ಯುವ ಮುಖಂಡರಾಗಿದ್ದಾರೆ.

ಅವರ ಜನ್ಮದಿನದ ಈ ಸಂದರ್ಭದಲ್ಲಿ ಅವರ ಕರ್ನಾಟಕದ ಕೆರಿಯರ್, ಪೊಲೀಸ್ ಹುದ್ದೆಗೆ ನೀಡಿದ ರಾಜೀನಾಮೆ, ಬಿಜೆಪಿ ಸೇರ್ಪಡೆ ಮತ್ತು ಪ್ರಸ್ತುತ ಅವರ ರಾಜಕೀಯ ಸ್ಥಾನಮಾನದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕದಲ್ಲಿ ವೃತ್ತಿಜೀವನ

2011ರ ಬ್ಯಾಚ್‌ನ ಐಪಿಎಸ್ (IPS) ಅಧಿಕಾರಿಯಾದ ಅಣ್ಣಾಮಲೈ ಅವರು ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು ಕರ್ನಾಟಕದಲ್ಲಿ. ಉಡುಪಿ ಜಿಲ್ಲೆಯ ಕಾರ್ಕಳದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ASP)ಯಾಗಿ ಸೇವೆ ಆರಂಭಿಸಿದ ಅವರು, ನಂತರ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಯಾಗಿ (SP) ದಕ್ಷತೆಯಿಂದ ಕೆಲಸ ಮಾಡಿದರು.

ಮತ್ತಷ್ಟು ಓದಿ: ತಾವು ಹೊಸ ಪಕ್ಷ ಕಟ್ಟುವ ವದಂತಿ ಬಗ್ಗೆ ಅಣ್ಣಾಮಲೈ ಹೇಳಿದ್ದೇನು?

ಕರ್ನಾಟಕದ ಸಿಂಗಂ : ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಶಾಂತಿ ಕಾಪಾಡುವುದು, ಅಪರಾಧ ದಂಧೆಗಳಿಗೆ ಬ್ರೇಕ್ ಹಾಕುವುದು ಮತ್ತು ಸಾರ್ವಜನಿಕರೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದುವ ಮೂಲಕ ಅವರು ಕರ್ನಾಟಕದ ಜನಪ್ರಿಯ ಅಧಿಕಾರಿಯಾದರು. ಜನರು ಅವರನ್ನು ಪ್ರೀತಿಯಿಂದ ‘ಕರ್ನಾಟಕದ ಸಿಂಗಂ’ ಎಂದು ಕರೆಯುತ್ತಿದ್ದರು. ತದನಂತರ ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿಯೂ (DCP) ಅವರು ಯಶಸ್ವಿಯಾಗಿ ಸೇವೆ ಸಲ್ಲಿಸಿದರು.

ಐಪಿಎಸ್ ಹುದ್ದೆಗೆ ರಾಜೀನಾಮೆ

2019ರ ಮೇ ತಿಂಗಳಲ್ಲಿ ಅಣ್ಣಾಮಲೈ ಅವರು ತಮ್ಮ ಪ್ರತಿಷ್ಠಿತ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದಾಗ ಇಡೀ ದೇಶವೇ ಆಶ್ಚರ್ಯಚಕಿತವಾಗಿತ್ತು. 9 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿದ್ದ ಅವರು, ಜನರ ಸೇವೆಗೆ ಮತ್ತೊಂದು ದೊಡ್ಡ ವೇದಿಕೆ ಬೇಕು ಎಂಬ ಕಾರಣಕ್ಕಾಗಿ ತಮ್ಮ ಹುದ್ದೆಯನ್ನು ತ್ಯಜಿಸಿದರು.

ರಾಜೀನಾಮೆಗೆ ಕಾರಣ

ತಮ್ಮ ತವರು ರಾಜ್ಯವಾದ ತಮಿಳುನಾಡಿನ ಗ್ರಾಮೀಣ ಭಾಗಗಳಲ್ಲಿ ಜನಸೇವೆ ಮಾಡುವುದು, ಸಾವಯವ ಕೃಷಿಯನ್ನು ಉತ್ತೇಜಿಸುವುದು ಮತ್ತು ಸಮಾಜದಲ್ಲಿ ರಾಜಕೀಯದ ಮೂಲಕ ದೊಡ್ಡ ಬದಲಾವಣೆ ತರುವುದು ಅವರ ಉದ್ದೇಶವಾಗಿತ್ತು. ಕರ್ನಾಟಕದ ಜನತೆ ಇವರ ರಾಜೀನಾಮೆಯಿಂದ ಭಾವುಕರಾಗಿದ್ದರೂ, ಅವರ ಮುಂದಿನ ಸಮಾಜಸೇವೆಯ ಹಾದಿಗೆ ಶುಭ ಹಾರೈಸಿದ್ದರು.

ಬಿಜೆಪಿ ಸೇರ್ಪಡೆ ಮತ್ತು ತಮಿಳುನಾಡು ಸಾರಥ್ಯ

ರಾಜೀನಾಮೆ ನೀಡಿದ ಒಂದು ವರ್ಷದ ನಂತರ, ಅಂದರೆ 2020ರ ಆಗಸ್ಟ್‌ನಲ್ಲಿ ಅಣ್ಣಾಮಲೈ ಅವರು ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿ (BJP) ಸೇರಿದರು. ಅವರ ಸಂಘಟನಾ ಚಾತುರ್ಯ ಮತ್ತು ಯುವಕರನ್ನು ಸೆಳೆಯುವ ಶಕ್ತಿಯನ್ನು ಗುರುತಿಸಿದ ಬಿಜೆಪಿ ಹೈಕಮಾಂಡ್, ಅತ್ಯಂತ ಕಡಿಮೆ ಅವಧಿಯಲ್ಲಿ (ಜುಲೈ 2021) ಅವರಿಗೆ ತಮಿಳುನಾಡು ರಾಜ್ಯದ ಬಿಜೆಪಿ ಅಧ್ಯಕ್ಷ ಹುದ್ದೆಯ ಜವಾಬ್ದಾರಿಯನ್ನು ನೀಡಿತು. ತಮಿಳುನಾಡು ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಬಿಜೆಪಿ ರಾಜ್ಯಾಧ್ಯಕ್ಷ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.

 ಅಣ್ಣಾಮಲೈ ನಿಲುವೇನು?

ಅಣ್ಣಾಮಲೈ ಅವರು ದಕ್ಷಿಣ ಭಾರತದ ರಾಜಕಾರಣದಲ್ಲಿ, ವಿಶೇಷವಾಗಿ ತಮಿಳುನಾಡಿನಲ್ಲಿ ಬಿಜೆಪಿಯ ಅತಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದ್ದರು. ಅವರು ಹಮ್ಮಿಕೊಂಡಿದ್ದ ‘ಎನ್ ಮಣ್ಣ್, ಎನ್ ಮಕ್ಕಳ್’ (ನನ್ನ ಮಣ್ಣು, ನನ್ನ ಜನ) ಪಾದಯಾತ್ರೆಯು ತಮಿಳುನಾಡಿನಾದ್ಯಂತ ಬಿಜೆಪಿಗೆ ಹೊಸ ಜನಾಕರ್ಷಣೆಯನ್ನು ತಂದುಕೊಟ್ಟಿದೆ. ಪ್ರಸ್ತುತ ಮುಕ್ತಾಯಗೊಂಡಿರುವ ಲೋಕಸಭಾ ಚುನಾವಣೆಯಲ್ಲಿ ಅವರು ತಮಿಳುನಾಡಿನ ಕೊಯಮತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದು, ಇಡೀ ರಾಜ್ಯದಲ್ಲಿ ಬಿಜೆಪಿಯ ಮತದಾನದ ಪ್ರಮಾಣ ಗಣನೀಯವಾಗಿ ಹೆಚ್ಚಾಗಲು ಅವರೇ ಮುಖ್ಯ ಕಾರಣಕರ್ತರಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಬಿಜೆಪಿಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಂದ ಶುಭಾಶಯಗಳ ಮಹಾಪೂರ

ಅಣ್ಣಾಮಲೈ ಅವರ 42ನೇ ಹುದ್ದಿನ ಹಬ್ಬಕ್ಕೆ ಸಾಮಾಜಿಕ ಮಾಧ್ಯಮಗಳಾದ ಎಕ್ಸ್​ (ಟ್ವಿಟರ್), ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ: ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳ ಲಕ್ಷಾಂತರ ಅಭಿಮಾನಿಗಳು #HBDAnnamalai ಹ್ಯಾಶ್‌ಟ್ಯಾಗ್ ಬಳಸಿ ಶುಭ ಹಾರೈಸುತ್ತಿದ್ದಾರೆ. ದಕ್ಷ ಅಧಿಕಾರಿಯಾಗಿದ್ದ ನೀವು ಈಗ ಯುವ ರಾಜಕಾರಣಿಗಳಿಗೆ ಮಾದರಿ ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.

ಪ್ರಮುಖ ರಾಜಕೀಯ ನಾಯಕರು, ಕೇಂದ್ರ ಸಚಿವರು ಹಾಗೂ ಸಿನಿಮಾ ಗಣ್ಯರು ಅಣ್ಣಾಮಲೈ ಅವರ ನಾಯಕತ್ವ ಮತ್ತು ದೇಶಪ್ರೇಮವನ್ನು ಕೊಂಡಾಡಿ ದೀರ್ಘಾಯುಷ್ಯ ಮತ್ತು ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.

ಒಟ್ಟಾರೆಯಾಗಿ, ಕರ್ನಾಟಕದಲ್ಲಿ ಮೂಡಿಸಿದ ದಕ್ಷತೆಯ ಛಾಪು ಮತ್ತು ತಮಿಳುನಾಡಿನಲ್ಲಿ ಮುನ್ನಡೆಸುತ್ತಿರುವ ರಾಜಕೀಯ ಕ್ರಾಂತಿಯ ಮೂಲಕ 42ನೇ ವಸಂತಕ್ಕೆ ಕಾಲಿಟ್ಟಿರುವ ಕೆ. ಅಣ್ಣಾಮಲೈ, ದಕ್ಷಿಣ ಭಾರತದ ಭವಿಷ್ಯದ ಆಶಾದಾಯಕ ನಾಯಕರಾಗಿ ಮುನ್ನಡೆಯುತ್ತಿದ್ದಾರೆ. ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು, ತಮ್ಮದೇ ಆದ ಸ್ವತಂತ್ರ ಜನಪರ ವೇದಿಕೆ ಅಥವಾ ಹೊಸ ರಾಜಕೀಯ ಪಕ್ಷವನ್ನು ಆರಂಭಿಸುವ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಡಿವೋರ್ಸ್​ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಾ ಪೂಂಜಾ-ಸುಮಂತ್ – Kannada News

ಕನ್ನಡ ಚಿತ್ರರಂಗದ ಖ್ಯಾತ ನಟಿ, ‘ಬಿಗ್ ಬಾಸ್’ (Bigg Boss) ಖ್ಯಾತಿಯ ಶುಭಾ ಪೂಂಜಾ ಅವರ ವೈವಾಹಿಕ ಬದುಕು ಮದುವೆಯಾದ ನಾಲ್ಕೇ ವರ್ಷಕ್ಕೆ ಮುರಿದು ಬೀಳುವ ಸೂಚನೆ ಸಿಕ್ಕಿದೆ. ಶುಭಾ ಪೂಂಜಾ ಹಾಗೂ ಅವರ ಪತಿ ಸುಮಂತ್ ಬಿಲ್ಲವ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಫ್ಯಾಮಿಲಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಖುಷಿ ಖುಷಿಯಿಂದ ಸಂಸಾರ ನಡೆಸುತ್ತಿದ್ದ ಇವರ ಬಾಳಲ್ಲಿ ಯಾವ ಬಿರುಗಾಳಿ ಬೀಸಿತು ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

ಕನ್ನಡದ ‘ಮೊಗ್ಗಿನ ಮನಸು’ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಜನಪ್ರಿಯತೆ ಗಳಿಸಿದ್ದ ಶುಭಾ ಪೂಂಜಾ, ಉದ್ಯಮಿ ಸುಮಂತ್ ಬಿಲ್ಲವ ಅವರನ್ನು ಪ್ರೀತಿಸಿ 2022ರ ಜನವರಿಯಲ್ಲಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ಈ ದಂಪತಿ ಅತ್ಯಂತ ಖುಷಿ ಖುಷಿಯಾಗಿಯೇ ಕಾಲ ಕಳೆದಿದ್ದರು. ಆದರೆ, ಈಗ ಏಕಾಏಕಿ ಬೇರೆ ಆಗಲು ಮುಂದಾಗಿರೋದು ಅಭಿಮಾನಿಗಳಿಗೆ ಶಾಕಿಂಗ್ ಎನಿಸಿದೆ.

ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ನೀಡುವಂತೆ ಕೋರಿ ಈ ದಂಪತಿ ನ್ಯಾಯಾಲಯಕ್ಕೆ ಜಂಟಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಅರ್ಜಿ ಸಲ್ಲಿಕೆಯಾಗಿದ್ದು, ಮುಂದಿನ ವಿಚಾರಣೆಯ ವೇಳೆ ಶುಭಾ ಪೂಂಜಾ ಮತ್ತು ಸುಮಂತ್ ಇಬ್ಬರೂ ಕೋರ್ಟ್‌ಗೆ ಹಾಜರಾಗುವ ಸಾಧ್ಯತೆ ಇದೆ. ಆದರೆ, ಇಬ್ಬರ ನಡುವಿನ ವಿಚ್ಛೇದನಕ್ಕೆ ನಿಖರವಾದ ಕಾರಣವೇನು ಎಂಬುದನ್ನು ಬಹಿರಂಗಪಡಿಸಲು ಸುಮಂತ್ ನಿರಾಕರಿಸಿದ್ದಾರೆ. ಈಗಾಗಲೇ ಶುಭಾ ಅವರು ಸೋಶಿಯಲ್ ಮೀಡಿಯಾದಿಂದ ಪತಿ ಜೊತೆಗಿನ ಫೋಟೋ ಡಿಲೀಟ್ ಮಾಡಿದ್ದಾರೆ.

ಇದನ್ನೂ ಓದಿ: ನಟಿ ಶುಭಾ ಪೂಂಜಾ ತಾಯಿ ಇನ್ನಿಲ್ಲ; ಅನಾರೋಗ್ಯದಿಂದ 70ನೇ ವಯಸ್ಸಿಗೆ ನಿಧನ

ಬಿಗ್ ಬಾಸ್ ಮೂಲಕ ಗಮನ ಸೆಳೆದಿದ್ದ ಶುಭಾ:

ಸಿನಿಮಾಗಳಷ್ಟೇ ಅಲ್ಲದೆ, ಕನ್ನಡದ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 8ರಲ್ಲಿ ಸ್ಪರ್ಧಿಯಾಗಿದ್ದ ಶುಭಾ ಪೂಂಜಾ ತಮ್ಮ ಮುಗ್ಧ ಹಾಗೂ ಚುರುಕಿನ ನಡವಳಿಕೆಯಿಂದ ಅಪಾರ ಪ್ರೇಕ್ಷಕರ ಗಮನ ಸೆಳೆದಿದ್ದರು. ಸದಾ ನಗುನಗುತ್ತಾ ಇರುತ್ತಿದ್ದ ಶುಭಾ ಪೂಂಜಾ ಅವರ ದಾಂಪತ್ಯ ಜೀವನದಲ್ಲಿ ಈ ರೀತಿಯ ಬಿರುಗಾಳಿ ಎದ್ದಿರುವುದು ಅವರ ಅಭಿಮಾನಿಗಳಿಗೆ ತೀವ್ರ ನಿರಾಶೆ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 9:56 am, Thu, 4 June 26

Source link

Vastu Guide: ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ? ಸರಳ ವಾಸ್ತು ಪರಿಹಾರ ಇಲ್ಲಿದೆ – Kannada News

ಮನೆಯಲ್ಲಿ ನಕಾರಾತ್ಮಕ ಶಕ್ತಿImage Credit source: Pinterest

ಕೆಲವೊಮ್ಮೆ ಎಷ್ಟೇ ಪ್ರಯತ್ನಪಟ್ಟರೂ ಜೀವನದಲ್ಲಿ ಎಲ್ಲವೂ ಸುಗಮವಾಗಿ ಸಾಗುವುದಿಲ್ಲ. ಮನೆಯಲ್ಲಿ ಶಾಂತಿ ಕಳೆದುಹೋಗುವುದು, ಸಣ್ಣ ವಿಷಯಗಳಿಗೂ ಜಗಳಗಳು ಉಂಟಾಗುವುದು, ಆರ್ಥಿಕ ಸಮಸ್ಯೆಗಳು ಎದುರಾಗುವುದು ಮುಂತಾದ ಸಂದರ್ಭಗಳು ಹಲವರನ್ನು ಕಾಡುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ನಕಾರಾತ್ಮಕ ವಾತಾವರಣವೂ ಇದಕ್ಕೆ ಒಂದು ಕಾರಣವಾಗಿರಬಹುದು.

ನಕಾರಾತ್ಮಕ ಶಕ್ತಿಯ ಲಕ್ಷಣಗಳು ಯಾವುವು?

ವಾಸ್ತು ತಜ್ಞರ ಪ್ರಕಾರ, ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಸೂಚಿಸುವ ಕೆಲವು ಸಾಮಾನ್ಯ ಲಕ್ಷಣಗಳಿವೆ. ಕಾರಣವಿಲ್ಲದೆ ಕುಟುಂಬ ಸದಸ್ಯರ ನಡುವೆ ಆಗಾಗ್ಗೆ ಭಿನ್ನಾಭಿಪ್ರಾಯಗಳು ಉಂಟಾಗುವುದು, ಮನೆಗೆ ಕಾಲಿಟ್ಟ ತಕ್ಷಣ ಭಾರವಾದ ಅಥವಾ ಅಸಹಜ ಭಾವನೆ ಕಾಣಿಸಿಕೊಳ್ಳುವುದು, ನಿದ್ರಾಹೀನತೆ ಮತ್ತು ದುಃಸ್ವಪ್ನಗಳು ಇವುಗಳಲ್ಲಿ ಪ್ರಮುಖವಾಗಿವೆ.

ಇದರ ಜೊತೆಗೆ, ಉತ್ತಮ ಆದಾಯವಿದ್ದರೂ ಹಣ ಕೈಯಲ್ಲಿ ಉಳಿಯದಿರುವುದು, ಕುಟುಂಬ ಸದಸ್ಯರು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವುದು, ಮನೆಯಲ್ಲಿ ಬೆಳೆಸುವ ಗಿಡಗಳು ಸರಿಯಾಗಿ ಬೆಳೆಯದಿರುವುದು ಮುಂತಾದ ಸಂಗತಿಗಳನ್ನೂ ಕೆಲವರು ನಕಾರಾತ್ಮಕ ಶಕ್ತಿಯ ಸಂಕೇತಗಳೆಂದು ಪರಿಗಣಿಸುತ್ತಾರೆ.

ಉಪ್ಪು ಬಳಸಿ ನಕಾರಾತ್ಮಕತೆ ದೂರ ಮಾಡಬಹುದೇ?

ವಾಸ್ತು ಶಾಸ್ತ್ರದಲ್ಲಿ ಉಪ್ಪಿಗೆ ವಿಶೇಷ ಮಹತ್ವ ನೀಡಲಾಗಿದೆ. ಕಲ್ಲುಪ್ಪನ್ನು ಗಾಜಿನ ಪಾತ್ರೆಯಲ್ಲಿ ಹಾಕಿ ಮನೆಯ ಒಂದು ಮೂಲೆಯಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆ ಇದೆ. ವಾರಕ್ಕೊಮ್ಮೆ ಉಪ್ಪನ್ನು ಬದಲಾಯಿಸುವುದು ಅಗತ್ಯ. ಅದೇ ರೀತಿ, ಮನೆ ಒರೆಸುವ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಸ್ವಚ್ಛಗೊಳಿಸುವುದರಿಂದ ಮನೆಯ ವಾತಾವರಣ ಹೆಚ್ಚು ತಾಜಾ ಮತ್ತು ಆಹ್ಲಾದಕರವಾಗಿರುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಮನೆಯ ವಾತಾವರಣವನ್ನು ಹಿತಕರವಾಗಿಡಲು ಏನು ಮಾಡಬೇಕು?

ಸಂಜೆ ವೇಳೆಯಲ್ಲಿ ಕರ್ಪೂರ ಅಥವಾ ಧೂಪವನ್ನು ಹಚ್ಚುವುದು, ಮನೆಯಲ್ಲಿ ಸಾಕಷ್ಟು ಬೆಳಕು ಇರುವಂತೆ ನೋಡಿಕೊಳ್ಳುವುದು ಹಾಗೂ ತಾಜಾ ಗಾಳಿ ಮತ್ತು ಸೂರ್ಯನ ಬೆಳಕು ಒಳಬರಲು ಕಿಟಕಿಗಳನ್ನು ತೆರೆಯುವುದು ವಾತಾವರಣವನ್ನು ಉತ್ತಮಗೊಳಿಸಲು ಸಹಕಾರಿ ಎಂದು ವಾಸ್ತು ತಜ್ಞರು ಅಭಿಪ್ರಾಯಪಡುತ್ತಾರೆ.

ಈ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ:

ವಾಸ್ತು ಶಾಸ್ತ್ರದ ಪ್ರಕಾರ, ಒಡೆದ ಕನ್ನಡಿಗಳು, ಬಿರುಕು ಬಿಟ್ಟ ಪಾತ್ರೆಗಳು, ಕೆಲಸ ಮಾಡದ ಗಡಿಯಾರಗಳು ಹಾಗೂ ಅನಗತ್ಯ ಹಳೆಯ ವಸ್ತುಗಳನ್ನು ದೀರ್ಘಕಾಲ ಮನೆಯಲ್ಲಿ ಇಡುವುದು ಸೂಕ್ತವಲ್ಲ. ಇವುಗಳನ್ನು ತೆರವುಗೊಳಿಸಿ ಮನೆಯನ್ನು ಸ್ವಚ್ಛವಾಗಿ ಮತ್ತು ವ್ಯವಸ್ಥಿತವಾಗಿ ಇಡುವುದರಿಂದ ಸಕಾರಾತ್ಮಕತೆ ಹೆಚ್ಚುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Spiritual and Mental Peace: ಸ್ನಾನದ ನೀರಿಗೆ ಒಂದು ಚಿಟಿಕೆ ಕರ್ಪೂರ ಸೇರಿಸಿ; ಪ್ರಯೋಜನ ಸಾಕಷ್ಟಿವೆ! – Kannada News

ಭಾರತೀಯ ಸಂಪ್ರದಾಯಗಳಲ್ಲಿ ಕರ್ಪೂರImage Credit source: Pinterest

ಭಾರತೀಯ ಸಂಪ್ರದಾಯಗಳಲ್ಲಿ ಕರ್ಪೂರಕ್ಕೆ ವಿಶೇಷ ಸ್ಥಾನವಿದೆ. ಪೂಜೆ-ಪುನಸ್ಕಾರಗಳಲ್ಲಿ ಮಾತ್ರವಲ್ಲದೆ, ಸ್ನಾನದ ನೀರಿಗೆ ಒಂದು ಚಿಟಿಕೆ ಕರ್ಪೂರವನ್ನು ಸೇರಿಸಿ ಸ್ನಾನ ಮಾಡುವ ಪದ್ಧತಿಯೂ ಅನೇಕ ಮನೆಗಳಲ್ಲಿ ಕಂಡುಬರುತ್ತದೆ. ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಕರ್ಪೂರವು ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ ಮನಸ್ಸಿಗೆ ಶಾಂತಿ ಹಾಗೂ ಸಕಾರಾತ್ಮಕತೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಅದರ ಸುವಾಸನೆಯು ವಾತಾವರಣವನ್ನು ಶುದ್ಧೀಕರಿಸುವುದರ ಜೊತೆಗೆ ಮಾನಸಿಕ ಚೈತನ್ಯವನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆಯೂ ಇದೆ.

ದುಷ್ಟ ಕಣ್ಣಿನ ಪರಿಣಾಮದಿಂದ ರಕ್ಷಣೆ:

ಜ್ಯೋತಿಷ್ಯದ ಪ್ರಕಾರ, ಕರ್ಪೂರವು ನಕಾರಾತ್ಮಕ ಶಕ್ತಿಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಆದ್ದರಿಂದ ಕರ್ಪೂರ ಬೆರೆಸಿದ ನೀರಿನಲ್ಲಿ ಸ್ನಾನ ಮಾಡುವುದರಿಂದ ದುಷ್ಟ ಕಣ್ಣು ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ನಂಬಲಾಗುತ್ತದೆ.

ಮಾನಸಿಕ ಒತ್ತಡ ನಿವಾರಣೆ:

ಇಂದಿನ ವೇಗದ ಜೀವನದಲ್ಲಿ ಒತ್ತಡ ಮತ್ತು ಆತಂಕ ಸಾಮಾನ್ಯವಾಗಿವೆ. ಕರ್ಪೂರದ ಸುವಾಸನೆಯು ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದು ಹೇಳಲಾಗುತ್ತದೆ. ಕರ್ಪೂರ ಬೆರೆಸಿದ ನೀರಿನಲ್ಲಿ ಸ್ನಾನ ಮಾಡುವುದರಿಂದ ನಕಾರಾತ್ಮಕ ಆಲೋಚನೆಗಳು ಕಡಿಮೆಯಾಗಿ ಮನಸ್ಸು ಹಗುರವಾಗುತ್ತದೆ ಎಂಬ ನಂಬಿಕೆ ಇದೆ.

ಆಧ್ಯಾತ್ಮಿಕ ಶುದ್ಧೀಕರಣ:

ಕರ್ಪೂರವನ್ನು ಆಧ್ಯಾತ್ಮಿಕ ಶುದ್ಧತೆಯ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಕರ್ಪೂರ ಸ್ನಾನವು ಆಂತರಿಕ ಶಾಂತಿಯನ್ನು ಹೆಚ್ಚಿಸಿ, ಆಧ್ಯಾತ್ಮಿಕ ಅಡೆತಡೆಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ ಎಂದು ನಂಬಲಾಗುತ್ತದೆ. ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಕರ್ಪೂರ ಬೆರೆಸಿದ ನೀರಿನಲ್ಲಿ ಸ್ನಾನ ಮಾಡುವುದರಿಂದ ವ್ಯಕ್ತಿಯ ಸುತ್ತಲಿನ ಶಕ್ತಿ ಕ್ಷೇತ್ರ (Aura) ಶುದ್ಧೀಕರಣಗೊಳ್ಳುತ್ತದೆ. ಇದರಿಂದ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.

ರಾಹು-ಕೇತು ದೋಷಗಳ ಪರಿಣಾಮ ಕಡಿಮೆಯಾಗುತ್ತದೆಯೇ?

ಜ್ಯೋತಿಷ್ಯ ತಜ್ಞರ ಅಭಿಪ್ರಾಯದಂತೆ, ಕರ್ಪೂರ ಸ್ನಾನವು ರಾಹು ಮತ್ತು ಕೇತುವಿನ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಸಹಾಯಕವಾಗಬಹುದು ಎಂಬ ನಂಬಿಕೆ ಇದೆ. ಇದು ಮನಸ್ಸಿನ ಚಂಚಲತೆಯನ್ನು ಕಡಿಮೆ ಮಾಡಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಹುಣ್ಣಿಮೆ ಮತ್ತು ಅಮಾವಾಸ್ಯೆಯಲ್ಲಿ ವಿಶೇಷ ಮಹತ್ವ:

ಹುಣ್ಣಿಮೆ ಹಾಗೂ ಅಮಾವಾಸ್ಯೆಯ ದಿನಗಳಲ್ಲಿ ಕರ್ಪೂರ ಬೆರೆಸಿದ ನೀರಿನಲ್ಲಿ ಸ್ನಾನ ಮಾಡುವುದರಿಂದ ಹಳೆಯ ನಕಾರಾತ್ಮಕ ಶಕ್ತಿಗಳು ದೂರವಾಗಿ ಹೊಸ ಆರಂಭಗಳಿಗೆ ದಾರಿ ಸಿಗುತ್ತದೆ ಎಂದು ಅನೇಕರು ನಂಬುತ್ತಾರೆ. ಈ ದಿನಗಳಲ್ಲಿ ಇದರ ಆಧ್ಯಾತ್ಮಿಕ ಮಹತ್ವ ಮತ್ತಷ್ಟು ಹೆಚ್ಚಾಗುತ್ತದೆ ಎನ್ನಲಾಗುತ್ತದೆ.

ಕರ್ಪೂರ ಸ್ನಾನವನ್ನು ಹೇಗೆ ಮಾಡಬೇಕು?

ಸ್ನಾನದ ನೀರಿಗೆ ಒಂದು ಚಿಟಿಕೆ ಕರ್ಪೂರ ಪುಡಿಯನ್ನು ಸೇರಿಸಿ ಸಾಮಾನ್ಯವಾಗಿ ಸ್ನಾನ ಮಾಡಬಹುದು. ಆದರೆ ಕರ್ಪೂರ ಬೆರೆಸಿದ ನೀರು ಕಣ್ಣಿಗೆ ನೇರವಾಗಿ ತಾಗದಂತೆ ಎಚ್ಚರಿಕೆ ವಹಿಸಬೇಕು. ಸೂಕ್ಷ್ಮ ಚರ್ಮ ಹೊಂದಿರುವವರು ಅಥವಾ ಅಲರ್ಜಿ ಸಮಸ್ಯೆ ಇರುವವರು ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಿಫ್ಟ್​ ಕೇಳುವ ನೆಪದಲ್ಲಿ ಯುವಕರ ಮೊಬೈಲ್ ದೋಚುತ್ತಿದ್ದ ಯುವತಿ ಸಿಕ್ಕಿಬಿದ್ಲು – Kannada News

ಕಳ್ಳಿಯ ಹಿಡಿದ ವ್ಯಕ್ತಿImage Credit source: ABP LIVE

ಜೈಪುರ, ಜೂನ್ 04: ಲಿಫ್ಟ್​ ಕೇಳುವ ನೆಪದಲ್ಲಿ ಯುವಕರ (Mobile) ದೋಚುತ್ತಿದ್ದ ಯುವತಿ ಸಿಕ್ಕಿಬಿದ್ದಿರುವ ಘಟನೆ ಜೈಪುರದಲ್ಲಿ ನಡೆದಿದೆ. ಯುವಕನೊಬ್ಬನ ಜಾಣ್ಮೆಯಿಂದಾಗಿ ಮೊಬೈಲ್ ಫೋನ್ ಕಳ್ಳತನದ ಯತ್ನವೊಂದು ಯಶಸ್ವಿಯಾಗಿ ವಿಫಲಗೊಂಡಿದೆ. ಅಪರಿಚಿತರಿಗೆ ಸಹಾಯ ಮಾಡುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಜಾಗೃತಿ ಮೂಡಿಸುವ ಈ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.

ವೈರಲ್ ಆಗಿರುವ ವೀಡಿಯೊದ ಪ್ರಕಾರ, ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಯುವಕನೊಬ್ಬನಿಗೆ ಹುಡುಗಿಯೊಬ್ಬಳು ಲಿಫ್ಟ್ ಕೇಳುವ ನೆಪದಲ್ಲಿ ಹತ್ತಿರ ಬಂದಿದ್ದಾಳೆ. ಯುವಕನು ಆಕೆಗೆ ಸಹಾಯ ಮಾಡಲು ಮುಂದಾದಾಗ, ಆಕೆ ಅತ್ಯಂತ ಚಾಣಾಕ್ಷತನದಿಂದ ಯುವಕನ ಮೊಬೈಲ್ ಫೋನ್ ಕಸಿದುಕೊಂಡು ಓಡಿಹೋಗಲು ಯತ್ನಿಸಿದ್ದಾಳೆ.

ತಕ್ಷಣವೇ ಅಲರ್ಟ್ ಆದ ಯುವಕ, ಆಕೆ ತಪ್ಪಿಸಿಕೊಳ್ಳದಂತೆ ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಈ ವೇಳೆ ಆಕೆ ಬಿಡಿಸಿಕೊಳ್ಳಲು ಗದ್ದಲ ಸೃಷ್ಟಿಸಿ, ಕ್ಯಾಮೆರಾದಿಂದ ಮುಖ ಮರೆಮಾಡಲು ಯತ್ನಿಸಿದರೂ ಯುವಕ ಧೈರ್ಯ ಕಳೆದುಕೊಳ್ಳದೆ ಸಾರ್ವಜನಿಕರ ಸಹಾಯ ಕೋರಿದ್ದಾನೆ.

ಮತ್ತಷ್ಟು ಓದಿ: ಗೆಳೆಯನ ಮೊಬೈಲ್ ಬಚ್ಚಿಟ್ಟು ಮಜಾಕ್: ತಮಾಷೆಯಲ್ಲೇ ಹೋಯ್ತು ಸ್ನೇಹಿತನ ಜೀವ, ಆಗಿದ್ದೇನು?

ರಸ್ತೆಯ ಮಧ್ಯೆ ಗದ್ದಲ ಉಂಟಾಗುತ್ತಿದ್ದಂತೆ ದಾರಿಹೋಕರು ಮತ್ತು ಸ್ಥಳೀಯ ನಿವಾಸಿಗಳು ತಕ್ಷಣವೇ ಅಲ್ಲಿಗೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು. ಕೆಲವರು ಇಡೀ ಘಟನೆಯನ್ನು ಪಾರದರ್ಶಕತೆಗಾಗಿ ತಮ್ಮ ಮೊಬೈಲ್‌ಗಳಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಪೊಲೀಸರಿಗೆ ನಿಖರ ಮಾಹಿತಿ ನೀಡಲು ಸಜ್ಜಾಗಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಪರಿಚಿತರಿಗೆ ರಸ್ತೆಯಲ್ಲಿ ಸಹಾಯ ಮಾಡುವಾಗ ಕುರುಡಾಗಿ ನಂಬದೆ, ಸ್ವಲ್ಪ ಜಾಗರೂಕರಾಗಿರಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಕೇವಲ ವೈರಲ್ ವಿಡಿಯೋಗಳು ಇಡೀ ಕಥೆಯನ್ನು ಹೇಳುವುದಿಲ್ಲ, ಆದ್ದರಿಂದ ಪೊಲೀಸರು ಎರಡೂ ಕಡೆಯ ವಾದಗಳನ್ನು ಆಲಿಸಿ ಸತ್ಯವನ್ನು ಹೊರತರಬೇಕು ಎಂದು ಇನ್ನು ಕೆಲವು ಬಳಕೆದಾರರು ಪ್ರಬುದ್ಧವಾಗಿ ಕಾಮೆಂಟ್ ಮಾಡಿದ್ದಾರೆ.

ಯುವಕನ ಸಮಯಪ್ರಜ್ಞೆಯಿಂದಾಗಿ ಮೊಬೈಲ್ ಫೋನ್ ಸುರಕ್ಷಿತವಾಗಿ ಸಿಕ್ಕಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಅಪರಾಧಗಳನ್ನು ತಡೆಯಲು ಸಾರ್ವಜನಿಕರ ಮತ್ತು ಪೊಲೀಸರ ಈ ಒಗ್ಗಟ್ಟು ಅತ್ಯಂತ ಆಶಾದಾಯಕ ಸಂದೇಶವನ್ನು ನೀಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಲ್ಲು ಅರ್ಜುನ್-ಲೋಕೇಶ್ ಸಿನಿಮಾ ನಿಂತು ಹೋಯ್ತೆ? ಸತ್ಯಾಂಶವೇನು? – Kannada News

ಪುಷ್ಪ’ (Pushpa) ಮತ್ತು ‘ಪುಷ್ಪ 2’ ಸಿನಿಮಾಗಳ ಅಲ್ಲು ಅರ್ಜುನ್ (Allu Arjun) ಇದೀಗ ‘ರಾಕಾ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಇಡೀ ಭಾರತೀಯ ಚಿತ್ರರಂಗದಲ್ಲಿ ಅಲ್ಲು ಅರ್ಜುನ್ ಅವರಿಗೆ ಇರುವಷ್ಟು ಒಳ್ಳೆಯ ಸಿನಿಮಾ ಲೈನಪ್ ಬಹುಷಃ ಇನ್ಯಾವ ಸ್ಟಾರ್ ನಟರಿಗೂ ಇಲ್ಲವೇನೋ. ಅಷ್ಟು ಒಳ್ಳೆಯ, ಸೂಪರ್ ಹಿಟ್ ಡೈರೆಕ್ಟರ್​​ಗಳು ಕತೆ ಹಿಡಿದುಕೊಂಡು ಅಲ್ಲು ಅರ್ಜುನ್ ಅವರಿಗಾಗಿ ಕಾಯುತ್ತಿದ್ದಾರೆ. ಆದರೆ ಇತ್ತೀಚೆಗೆ ಸುದ್ದಿಯೊಂದು ಹರಿದಾಡುತ್ತಿದ್ದು, ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಬೇಕಿದ್ದ ಲೋಕೇಶ್ ಕನಗರಾಜ್ ಅವರು ಹಿಂದೆ ಸರಿದಿದ್ದು, ಸಿನಿಮಾ ರದ್ದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿತ್ತು. ಸಿನಿಮಾದ ಸಣ್ಣ ಟೀಸರ್ ಅನ್ನೂ ಸಹ ಬಿಡುಗಡೆ ಮಾಡಲಾಗಿತ್ತು. ಇನ್ನು ಹೆಸರಿಡದ ‘AA 23’ ಚಿತ್ರ ಪ್ರಕಟವಾದಾಗಿನಿಂದಲೂ, ಅನಿರುದ್ಧ್ ರವಿಚಂದರ್ ಸಂಯೋಜಿಸಿದ ಚಿತ್ರದ ಹಾಡು ಇನ್‌ಸ್ಟಾಗ್ರಾಮ್ ರೀಲ್ಸ್‌ಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಚಿತ್ರದ ಹೊಸ ಅಪ್‌ಡೇಟ್‌ಗಾಗಿ ಕಾತರದಿಂದ ಕಾಯುತ್ತಿದ್ದರು. ಆದರೆ, ಇತ್ತೀಚೆಗೆ ಲೋಕೇಶ್ ಕನಗರಾಜ್ ಮತ್ತು ಅಲ್ಲು ಅರ್ಜುನ್ ಅವರ ಸಿನಿಮಾ ರದ್ದಾಗಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದು ಅಲ್ಲು ಅರ್ಜುನ್ ಅಭಿಮಾನಿಗಳನ್ನು ಆತಂಕಕ್ಕೆ ತಳ್ಳಿದೆ.

ಲೋಕೇಶ್ ಕನಗರಾಜ್ ಅವರ ಜೊತೆ ಬರಹಗಾರರಾಗಿ ಕೆಲಸ ಮಾಡುವ ರತ್ನಕುಮಾರ್ ಅವರು ಟ್ವೀಟ್ ಮಾಡಿದ್ದು, ‘ಎಎ23’ ಸಿನಿಮಾಕ್ಕಾಗಿ ಕಾಯುತ್ತಿದ್ದೇವೆ’ ಎಂದು ಟ್ವಿಟ್ ಮಾಡಿದ್ದಾರೆ. ಲೋಕೇಶ್ ನಿರ್ದೇಶಿಸಿ, ರತ್ನಾಕರ್ ಸಹ ಜೊತೆಗೆ ಕೆಲಸ ಮಾಡಿದ್ದ ‘ವಿಕ್ರಂ’ ಸಿನಿಮಾ ಬಿಡುಗಡೆ ಆಗಿ ನಾಲ್ಕು ವರ್ಷಗಳಾದ ಕಾರಣ ಮಾಡಿದ ಸರಣಿ ಟ್ವೀಟ್​​ನಲ್ಲಿ ‘ಎಎ23’ ಸಿನಿಮಾದ ಬಗ್ಗೆಯೂ ಟ್ವೀಟ್ ಮಾಡುವ ಮೂಲಕ, ಆ ಸಿನಿಮಾ ನಿಂತು ಹೋಗಿಲ್ಲ ಬದಲಿಗೆ ಕೆಲಸಗಳು ಚಾಲ್ತಿಯಲ್ಲಿವೆ ಎಂಬ ಸುಳಿವು ಸಹ ನೀಡಿದ್ದಾರೆ.

ಇದನ್ನೂ ಓದಿ:ಶಕ್ತಿಮಾನ್ ಕತೆಯನ್ನೇ ಅಲ್ಲು ಅರ್ಜುನ್​ಗಾಗಿ ಹೆಣೆಯುತ್ತಿರುವ ಬಾಸಿಲ್ ಜೋಸೆಫ್?

ಅಲ್ಲು ಅರ್ಜುನ್ ಕಳೆದ ಐದು ವರ್ಷಗಳಿಗಿಂತಲೂ ಹೆಚ್ಚು ಸಮಯವನ್ನು ಸುಕುಮಾರ್ ನಿರ್ದೇಶನದ ‘ಪುಷ್ಪ: ದಿ ರೈಸ್’ ಮತ್ತು ‘ಪುಷ್ಪ 2: ದಿ ರೂಲ್’ ಚಿತ್ರಗಳಿಗಾಗಿ ಮುಡಿಪಾಗಿಟ್ಟಿದ್ದರು. ಈಗ ಅವರು ಅಟ್ಲಿ ನಿರ್ದೇಶನದ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ ಮತ್ತು ಮಲಯಾಳಿ ಸುಂದರಿ ಫೆಮಿನಾ ನಾಯಕಿಯರು. ಈ ಸಿನಿಮಾದ ಬಳಿಕ ಮಲಯಾಳಂ ನಟ, ನಿರ್ದೇಶಕ ಬಾಸಿಲ್ ಜೋಸೆಫ್ ನಿರ್ದೇಶನ ಮಾಡಲಿರುವ ಸೂಪರ್ ಹೀರೋ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಆ ಬಳಿಕ ಸಂದೀಪ್ ರೆಡ್ಡಿ ವಂಗಾ ರೆಡಿಯಾಗಿದ್ದಾರೆ. ಇವರೆಲ್ಲರ ಬಳಿಕ ಮತ್ತೆ ಸುಕುಮಾರ್ ಅವರು ‘ಪುಷ್ಪ 3’ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link