Category Archives: Blog

Your blog category

WPL 2026: ಈ ಆವೃತ್ತಿಯಲ್ಲಿ ಮೊದಲ ಸೋಲಿಗೆ ಕೊರಳೊಡ್ಡಿದ ಆರ್​ಸಿಬಿ – Kannada News | WPL 2026: Delhi Capitals Dominates RCB in Vadodara, Avenges Previous Loss

2026 ರ ಮಹಿಳಾ ಪ್ರೀಮಿಯರ್ ಲೀಗ್‌ನ 15 ನೇ ಪಂದ್ಯವು ವಡೋದರಾದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ಆವೃತ್ತಿಯಲ್ಲಿ ಉಭಯ ತಂಡಗಳ ನಡುವಿನ ಎರಡನೇ ಮುಖಾಮುಖಿ ಇದಾಗಿತ್ತು. ಮೊದಲ ಮುಖಾಮುಖಿಯಲ್ಲಿ ಆರ್​ಸಿಬಿ, ಡೆಲ್ಲಿ ತಂಡವನ್ನು ಏಕಪಕ್ಷೀಯವಾಗಿ ಮಣಿಸಿತ್ತು. ಹೀಗಾಗಿ ಎರಡನೇ ಮುಖಾಮುಖಿಯಲ್ಲೂ ಅದೇ ಪ್ರದರ್ಶನವನ್ನು ನಿರೀಕ್ಷಿಸಲಾಗಿತ್ತು. ಆದರೆ ಈ ಬಾರಿ ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವಲ್ಲಿ ಡೆಲ್ಲಿ ತಂಡ ಯಶಸ್ವಿಯಾಯಿತು. ಆರ್​ಸಿಬಿ ನೀಡಿದ 109 ರನ್​ಗಳ ಅಲ್ಪ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಇನ್ನು 26 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್​ಗಳಿಂದ ಗೆದ್ದುಕೊಂಡಿತು.

Source link

ಮಾದಪ್ಪನ ಭಕ್ತರಿಗೆ ಮಹತ್ವದ ಸೂಚನೆ: ಮಲೆ ಮಹದೇಶ್ವರನ ದರ್ಶನಕ್ಕೆ ಹೊಸ ರೂಲ್ಸ್ – Kannada News | Chamarajanagar: MM Hills Leopard Attack: New Pilgrim Timings Imposed for Safety

ಚಾಮರಾಜನಗರ, ಜನವರಿ 24: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara) ಚಿರತೆ (Leopard) ದಾಳಿಗೆ ಮಾದಪ್ಪನ ಭಕ್ತನೊಬ್ಬ ಬಲಿಯಾದ ಘಟನೆ ಹಿನ್ನೆಲೆ, ಚಾಮರಾಜನಗರ ಜಿಲ್ಲಾಡಳಿತ ಪಾದಯಾತ್ರಿಕರು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಸಂಬಂಧಿಸಿದಂತೆ ಹೊಸ ಆದೇಶವನ್ನು ಹೊರಡಿಸಿದೆ. ಪಾದಯಾತ್ರಿಕರು, ದ್ವಿಚಕ್ರ ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಕ್ರಮಕೈಗೊಂಡಿರುವ ಈ ಆದೇಶ ಜನವರಿ 25ರಿಂದ ಜಾರಿಗೆ ಬರಲಿದೆ.

ಚಾಮರಾಜನಗರ ಜಿಲ್ಲಾಧಿಕಾರಿ ಶ್ರೀರೂಪಾ ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಭಕ್ತರು ಜಿಲ್ಲಾಡಳಿತದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ.

ಬೆಳಗ್ಗೆ 7ರಿಂದ ಸಂಜೆ 4ರವರೆಗೆ ಮಾತ್ರ ಅವಕಾಶ

ಚಿರತೆ ದಾಳಿ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಜಿಲ್ಲಾಡಳಿತ ಜನವರಿ 24ವರೆಗೆ ಸಂಜೆ 6 ರಿಂದ ಬೆಳಗ್ಗೆ 6ರವರೆಗೆ ಪಾದಯಾತ್ರೆಗೆ ನಿರ್ಬಂಧ ಹೇರಿತ್ತು. ಆದರೆ ಇದೀಗ ಪಾದಯಾತ್ರಿಗರಿ ಜಿಲ್ಲಾಡಳಿತ ಸಮಯದ ಡೈಡ್​ಲೈನ್ ನೀಡಿದೆ. ನಾಳೆಯಿಂದ ಬೆಳಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮಾತ್ರ ಪಾದಯಾತ್ರಿಕರಿಗೆ ಹಾಗೂ ದ್ವಿಚಕ್ರ ವಾಹನಕ್ಕೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತನ ಕತ್ತು ಸೀಳಿ ಕೊಂದು ಹೊತ್ತೊಯ್ದಿದ್ದ ಚಿರತೆ ಕೊನೆಗೂ ಸೆರೆ

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ಬೆಳಗ್ಗೆ ಮಂಡ್ಯ ಜಿಲ್ಲೆಯ ಚೀರನಹಳ್ಳಿ ಮೂಲದ ಪ್ರವೀಣ್ ಎಂಬ ಭಕ್ತನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ತಿಂದ ಘಟನೆ ನಡೆದಿತ್ತು. ಈ ಘಟನೆಯ ಬಳಿಕ ಜಿಲ್ಲಾಡಳಿತವು ತಕ್ಷಣ ಕ್ರಮಕೈಗೊಂಡಿದ್ದು, ಮೊದಲ ಹಂತದಲ್ಲಿ ಸಂಜೆ 6ರಿಂದ ಬೆಳಗ್ಗೆ 6 ಗಂಟೆಯವರೆಗೆ ಪಾದಯಾತ್ರೆಗೆ ನಿರ್ಬಂಧ ವಿಧಿಸಲಾಗಿತ್ತು. ಈ ನಿರ್ಬಂಧವನ್ನು ಜನವರಿ 24ರವರೆಗೆ ಜಾರಿಗೊಳಿಸಲಾಗಿತ್ತು.

ಇದನ್ನೂ ಓದಿ: ಕಾಪಾಡಲಿಲ್ಲ ಮಹದೇಶ್ವರ: ಚಿರತೆ ದಾಳಿಗೆ ಭಕ್ತ ಬಲಿ; ಪಾದಯಾತ್ರೆಗೆ 4 ದಿನಗಳ ಕಾಲ ನಿರ್ಬಂಧ

ಚಿರತೆ ದಾಳಿ ಸಂಭವಿಸುವ ಮೊದಲು ಪಾದಯಾತ್ರಿಕರು ಮತ್ತು ದ್ವಿಚಕ್ರ ವಾಹನಗಳಿಗೆ 24 ಗಂಟೆಗಳ ಕಾಲವೂ ಸಂಚಾರಕ್ಕೆ ಅವಕಾಶವಿತ್ತು. ಆದರೆ ಇತ್ತೀಚಿನ ದುರ್ಘಟನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೊಸ ಸಮಯ ಮಿತಿಯನ್ನು ವಿಧಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದ್ವೇಷ ಭಾಷಣ ಕಾಯ್ದೆಯಾಗುವ ಮುನ್ನವೇ ಬಿಜೆಪಿಗರ ಮೇಲೆ ಪೊಲೀಸ್ ನೋಟಿಸ್ ಅಸ್ತ್ರ, ಶಾಸಕ ಕಿಡಿ – Kannada News | Chikkamagaluru Police Notice To BJP Leader Under hate speech bill before implement as Law

ಬೆಂಗಳೂರು, (ಜನವರಿ 24): ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ತಡೆ) ವಿಧೇಯಕ 2025’ (Karnataka Hate Speech And Hate Crimes Bill) ಅಂಗೀಕಾರಗೊಂಡಿದ್ದು, ಇದಕ್ಕೆ ಇನ್ನೂ ರಾಜ್ಯಪಾಲರ ಅಂಕಿತ ಬಿದ್ದಿಲ್ಲ. ಆದರೂ ಸಹ ಗೃಹ ಇಲಾಖೆ ದ್ವೇಷ ಭಾಷಣದಡಿಯಲ್ಲಿ ಬಿಜೆಪಿ(BJP) ಮುಖಂಡರಿಗೆ ನೋಟಿಸ್ ನೀಡಿರುವು ಬೆಳಕಿಗೆ ಬಂದಿದೆ. ಹೌದು.. ಚಿಕ್ಕಮಗಳೂರು (Chikkamagaluru) ಜಿಲ್ಲೆಯ ತರೀಕೆರೆಯಲ್ಲಿ ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳುವ ಮೊದಲೇ ಬಿಜೆಪಿ ಮುಖಂಡ ವಿಕಾಸ ಪುತ್ತೂರ್ ಅವರಿಗೆ ದ್ವೇಷ ಭಾಷಣ ಕಾಯ್ದೆಯ ಎಚ್ಚರಿಕೆ ನೀಡಿ ನೋಟಿಸ್ ನೀಡಲಾಗಿದೆ.

ಇಂದು (ಜನವರಿ 24) ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಹಿಂದೂ ಸಮಾಜೋತ್ಸವ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದ್ದು, ವಿಕಾಸ ಪುತ್ತೂರ್ ದಿಕ್ಕೂಚಿ ಭಾಷಣಕಾರರಾಗಿದ್ದರು. ಹೀಗಾಗಿ ಚಿಕ್​ಕಮಗಳೂರು ಪೊಲೀಸ್, ವಿಕಾಸ ಪುತ್ತೂರ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ದ್ವೇಷ ಭಾಷಣ ಮಸೂದೆ-2025 ಆನ್ವಯ ಸದರಿ ಕಾಯ್ದೆ ಉಲ್ಲಂಘನೆಯಾಗದ ರೀತಿಯಲ್ಲಿ ಕಾರ್ಯಕ್ರಮವನ್ನು ನೆಡಸಿಕೊಂಡು ಹೋಗುವುದು. ತಪ್ಪಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್​​ನಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ದ್ವೇಷ ಭಾಷಣ ಮಸೂದೆ ಕಾನೂನಾಗಿ ಜಾರಿಗೆ ಬಂದಿಲ್ಲ. ಆಗಲೇ ಪೊಲೀರು ಬಿಜೆಪಿ ಮುಖಂಡನ ಮೇಲೆ ಕ್ರಮದ ಬಗ್ಗೆ ಎಚ್ಚರಿಕೆ ನೋಟಿಸ್ ನೀಡಿರುವುದು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿಳ 22ರಲ್ಲಿ 19 ಮಸೂದೆ ಪಾಸ್, ಎರಡು ವಾಪಸ್: ಕಾಂಗ್ರೆಸ್​​​​ನ ದ್ವೇಷ ಭಾಷಣ ಬಿಲ್ ಆಸೆ​ ಠುಸ್

ಈ ಸಂಬಂಧ ರಾಜಾಜಿನಗರ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಸಮಾಜಿಕ ಜಾಲತಾಣದ ಮೂಲಕ ಧ್ವನಿ ಎತ್ತಿದ್ದು, ಗೃಹ ಇಲಾಖೆಯ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದ್ವೇಷ ಭಾಷಣ ಮಸೂದೆ ಕಾಯ್ದೆಯಾಗಿದೆಯೇ? ರಾಜ್ಯಪಾಲರಿಂದ ಇದಕ್ಕೆ ಅಂಕಿತ ಸಿಕ್ಕಿದೆಯೇ? Anticipatory Bail ಎಂಬುದು ಗೊತ್ತಿತ್ತು. ಆದರೆ ಕಾಯ್ದೆ ಜಾರಿಯಾಗುವ ಮೊದಲೇ Anticipatory Notice ನಿಜಕ್ಕೂ ಗೃಹ ಇಲಾಖೆಯ ಹೊಸ ಕಾರ್ಯ ವೈಖರಿ ಎಂದು ಕಿಡಿಕಾರಿದ್ದಾರೆ.

ಸುರೇಶ್ ಕುಮಾರ್ ಪೋಸ್ಟ್​​ ಹೀಗಿದೆ

ವಿಕಾಸ ಪುತ್ತೂರ್ ನಮ್ಮ ಪಕ್ಷದ ಹಿರಿಯ ಕಾರ್ಯಕರ್ತರು. ನನ್ನ ಆತ್ಮೀಯ ಸಹಕಾರಿಗಳೂ ಸಹ. ಪಕ್ಷದಲ್ಲಿನ ಅನ್ಯಾನ್ಯ ಜವಾಬ್ದಾರಿಗಳನ್ನು ಬಹಳ ಶ್ರದ್ದೆಯಿಂದ ನಿರ್ವಹಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ನಡೆಯಲಿರುವ ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳಲು ಅವರು ಬಂದಾಗ ಅವರಿಗೆ ಪೊಲೀಸರು ನೀಡಿರುವ “ಪ್ರೇಮಪತ್ರ” ಇದು. ಅಂದ ಹಾಗೆ ರಾಜ್ಯದ ಗೃಹ ಸಚಿವರಿಗೆ ಹಾಗೂ ವಿಕಾಸ ಪುತ್ತೂರು ಅವರಿಗೆ ನೋಟಿಸ್ ಕೊಟ್ಟ ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಗೆ ಇಬ್ಬರಿಗೂ ನನ್ನದೊಂದು ಪ್ರಶ್ನೆ

  • ದ್ವೇಷ ಭಾಷಣ ಮಸೂದೆ ಕಾಯ್ದೆಯಾಗಿದೆಯೇ? ರಾಜ್ಯಪಾಲರಿಂದ ಇದಕ್ಕೆ ಅಂಕಿತ ಸಿಕ್ಕಿದೆಯೇ?
    Anticipatory Bail ಎಂಬುದು ಗೊತ್ತಿತ್ತು. ಆದರೆ ಕಾಯ್ದೆ ಜಾರಿಯಾಗುವ ಮೊದಲೇ Anticipatory Notice ನಿಜಕ್ಕೂ ಗೃಹ ಇಲಾಖೆಯ ಹೊಸ ಕಾರ್ಯ ವೈಖರಿ.
  •  ಇಷ್ಟೊಂದು ಎಚ್ಚರಿಕೆಯಿಂದ ಮತ್ತು ಜತನದಿಂದ ಕಾರ್ಯ ನಿರ್ವಹಿಸುವ ಪೊಲೀಸರಿಗೆ ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ರವರನ್ನು ಇನ್ನೂ ಬಂಧಿಸಲು ಏಕೆ ಸಾಧ್ಯವಾಗಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಚಿಕ್ಕಮಗಳೂರು ಪೊಲೀಸರ​ ನೋಟಿಸ್​​ನಲ್ಲೇನಿದೆ?

ಈ ಮೂಲಕ ನಿಮಗೆ (ವಿಕಾಸ ಪುತ್ತೂರು ಅವರಿಗೆ) ತಿಳಿಯಪಡಿಸುವುದೇನೆಂದರೆ, ದಿನಾಂಕ 24-01-2026 ರಂದು ಹಿಂದೂ ಸಮಾಜೋತ್ಸವ ಶೋಭಾಯಾತ್ರೆ ಹಾಗೂ ಸಾರ್ವಜನಿಕ ಸಮಾರಂಭವನ್ನು ಬಯಲು ರಂಗಮಂದಿರ ತರೀಕೆರೆಯಲ್ಲಿ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ದಿಕ್ಕೂಚಿ ಭಾಷಣಕಾರರಾಗಿ ನೀವು ಆಗಮಿಸಿದ್ದು, ನೀವು ಹಿಂದೂ ಭಾಂದವರನ್ನು ಆದೇಶಿಸಿ ಭಾಷಣ ಮಾಡಲಿದ್ದು, ತಾವುಗಳು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಕಾರ್ಯಕ್ರದಲ್ಲಿ ಭಾಷಣವನನು ಮಾಡಲು ಈ ಮೂಲಕ ನಿಮಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿರುತ್ತದೆ.

  • ನೀವುಗಳು ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವ ಸಮಯದಲ್ಲಿ ಅನ್ಯ ಕೋಮಿನ ಸಮುದಾಯದವರ ಭಾವನೆಗಳಿಗೆ ದಕ್ಕೆ ಉಂಟಾಗದಂತೆ ನೋಡಿಕೊಳ್ಳುವುದು.
  •  ತಾವು ಮಾಡುವ ಭಾಷಣವು ಯಾವುದೇ ಗುಂಪಿನ ವಿರುದ್ಧ ದ್ವೇಷ ಹಿಂಸೆ ಪ್ರಚೋದನೆಗೆ ಒಳಪಡಬಾರದು.
  •  ಶೋಭಾಯಾತ್ರೆಯ ಸಮಯದಲ್ಲಿ ತಾವುಗಳು ತರೀಕೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕಾರ್ಯಕ್ರಮಮ ಹಮ್ಮಿಕೊಂಡಿದ್ದು ಶಾಂತ ರೀತಿಯಲ್ಲಿ ಸಾರ್ವಜನಿಕರಿಗೆ ಮತ್ತು ಸುಗುಮ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದು.
  •  ಘನ ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ದ್ವೇಷ ಭಾಷಣ ಮಸೂದೆ-2025 ಆನ್ವಯ ಸದರಿ ಕಾಯ್ದೆ ಉಲ್ಲಂಘನೆಯಾಗದ ರೀತಿಯಲ್ಲಿ ಕಾರ್ಯಕ್ರಮವನ್ನು ನೆಡಸಿಕೊಂಡು ಹೋಗುವುದು. ತಪ್ಪಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

11 ವರ್ಷಗಳ ಬಳಿಕ ಕಂಬಳದ ಕತೆ ಹೊತ್ತು ಬಂದ ರಾಜೇಂದ್ರ ಸಿಂಗ್ ಬಾಬು – Kannada News | Rajendra Singh Babu’s Veera Kambala movie will release in February

ರಾಜೇಂದ್ರ ಸಿಂಗ್ ಬಾಬು ಕನ್ನಡ ಚಿತ್ರರಂಗದ (Sandalwood) ಹಿರಿಯ ಮತ್ತು ಯಶಸ್ವಿ ನಿರ್ದೇಶಕ. ಚಿತ್ರರಂಗಕ್ಕೆ ಹಲವು ಕಲ್ಟ್ ಸಿನಿಮಾಗಳನ್ನು ರಾಜೇಂದ್ರ ಸಿಂಗ್ ಬಾಬು ನೀಡಿದ್ದಾರೆ. ‘ಅಂತ’, ‘ನಾಗರಹೊಳೆ’, ‘ಬಂಧನ’, ‘ಮುತ್ತಿನ ಹಾರ’ ಹೀಗೆ ಅನೇಕ ಕಲ್ಟ್ ಸಿನಿಮಾಗಳನ್ನು ರಾಜೇಂದ್ರ ಸಿಂಗ್ ಬಾಬು ನೀಡಿದ್ದಾರೆ. ಇದೀಗ ಅವರು ತುಳು ನಾಡಿನ ಸಂಸ್ಕೃತಿಯಲ್ಲಿ ಬೆರೆತು ಹೋಗಿರುವ ಕ್ರೀಡೆ ಕಂಬಳ ಕುರಿತಾದ ಕತೆ ಹೊಂದಿರುವ ಹೊಸ ಸಿನಿಮಾ ನಿರ್ದೇಶಿಸಿದ್ದು, ಶೀಘ್ರವೇ ಸಿನಿಮಾ ಬಿಡುಗಡೆ ಆಗಲಿದೆ. ವಿಶೇಷವೆಂದರೆ ಸುಮಾರು 11 ವರ್ಷಗಳ ಬಳಿಕ ರಾಜೇಂದ್ರ ಸಿಂಗ್ ಬಾಬು ಅವರ ಸಿನಿಮಾ ಒಂದು ಬಿಡುಗಡೆ ಆಗಲಿಕ್ಕೆ ತಯಾರಾಗಿದೆ.

ರಾಜೇಂದ್ರ ಸಿಂಗ್ ಬಾಬು ಅವರು ‘ವೀರ ಕಂಬಳ’ ಹೆಸರಿನ ಸಿನಿಮಾ ನಿರ್ದೇಶಿಸಿದ್ದಾರೆ. ತುಳು ನಾಡಿನ ಸಂಸ್ಕೃತಿಯಾದ ಕಂಬಳದ ಬಗೆಗಿನ ಸಿನಿಮಾ ಆಗಿದ್ದು, ಈ ಕ್ರೀಡೆಗೆ ಸುಮಾರು ಎಂಟುನೂರು ವರ್ಷಗಳ ಇತಿಹಾಸವಿದೆ. ಈಗ ಈ ಕ್ರೀಡೆ ಸಾಕಷ್ಟು ಬದಲಾವಣೆಗೆ ಒಳಪಟ್ಟಿದೆ. ಆದರೆ ರಾಜೇಂದ್ರ ಸಿಂಗ್ ಬಾಬು ಅವರು ಈ ಕ್ರೀಡೆಯ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿ ಕತೆ ಮಾಡಿದ್ದಾರೆ. ಕನ್ನಡ ಹಾಗೂ ತುಳು ಭಾಷೆಗಳಲ್ಲಿ ‘ವೀರ ಕಂಬಳ’ ಸಿನಿಮಾವನ್ನು ನಿರ್ಮಿಸಲಾಗಿದೆ.

ಕಂಬಳವನ್ನು ಕೇಂದ್ರವಾಗಿಟ್ಟುಕೊಂಡು ಈ ಕಥೆ, ಚಿತ್ರಕಥೆ ಸಿದ್ಧಪಡಿಸಲು ರಾಜೇಂದ್ರ ಸಿಂಗ್ ಬಾಬು ಅವರು ಸುಮಾರು ಎರಡು ವರ್ಷಗಳ ಕಷ್ಟ ಪಟ್ಟಿದ್ದಾರೆ. ತುಳು ರಂಗಭೂಮಿಯ ಪ್ರಸಿದ್ಧ ನಿರ್ದೇಶಕ ವಿಜಯ್ ಕೊಡಿಯಾಲ್ ಬೈಲ್ ಅವರು ಸಹ ಈ ಸಿನಿಮಾಕ್ಕೆ ಜೊತೆಯಾಗಿದ್ದು, ಚಿತ್ರಕತೆ ಮತ್ತು ಸಂಭಾಷಣೆ ಬರೆದಿದ್ದಾರೆ. ರಾಜೇಂದ್ರ ಸಿಂಗ್ ಬಾಬು ಅವರ ಪುತ್ರ ಆದಿತ್ಯ ಅವರು ನಾಯಕನಾಗಿ ನಟಿಸಿದ್ದಾರೆ. ತುಳುನಾಡಿನ ಪ್ರಾಜ್ಞರ ಮಾರ್ಗದರ್ಶನದಲ್ಲಿ ಯಾವುದೇ ತೊಡಕಿಲ್ಲದಂತೆ ವೀರ ಕಂಬಳವನ್ನು ಸಿನಿಮಾ ಮಾಡಿರುವುದಾಗಿ ರಾಜೇಂದ್ರ ಸಿಂಗ್ ಬಾಬು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:

ದಕ್ಷಿಣ ಕನ್ನಡದ ಮೂಡುಬಿದರೆಯ ಬಳಿಯಲ್ಲಿ ವಿಶಾಲವಾದ ಕಂಬಳದ ಗದ್ದೆಯನ್ನು ಸಿದ್ಧಪಡಿಸಿ, ಅಲ್ಲಿ ಕಂಬಳದ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಪ್ರತೀ ದಿನ ಇಪ್ಪತ್ತು ಜೊತೆ ಕೋಣಗಳು ಹಾಗೂ ಐನೂರಕ್ಕೂ ಅಧಿಕ ಮಂದಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದರಂತೆ. ವಿಶೇಷವೆಂದರೆ, ಕಂಬಳದಲ್ಲಿ ಕೋಣಗಳನ್ನು ಓಡಿಸೋದರಲ್ಲಿ ದಾಖಲೆ ಬರೆದಿರುವ ಶ್ರೀನಿವಾಸ್ ಗೌಡ ಇಲ್ಲಿಯೂ ಸಹ ಶ್ರೀನಿವಾಸ್ ಗೌಡರ ಪಾತ್ರದಲ್ಲೇ ನಟಿಸಿದ್ದಾರೆ. ಸ್ವರಾಜ್ ಶೆಟ್ಟಿ ಅವರಿಗೆ ಜೊತೆಯಾಗಿದ್ದಾರೆ. ಸಿನಿಮಾದ ಚಿತ್ರೀಕರಣವನ್ನು ದುಬೈನಲ್ಲಿಯೂ ಮಾಡಲಾಗಿದೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳ ಅಂತಿಮ ಘಟ್ಟದಲ್ಲಿರುವ ಚಿತ್ರತಂಡ ಇಷ್ಟರಲ್ಲಿಯೇ ಬಿಡುಗಡೆಯ ನಿಖರ ದಿನಾಂಕ ಘೋಷಿಸಲಿದೆ.

ಈ ಚಿತ್ರವನ್ನು ಬಾಬಾ’ಸ್ ಬ್ಲೆಸಿಂಗ್ ಫಿಲ್ಮ್ಸ್ ಬ್ಯಾನರಿನಡಿಯಲ್ಲಿ ಡಾ.ವಿನಿತ ವಿಜಯ್ ಕುಮಾರ್ ರೆಡ್ಡಿ ಹಾಗೂ ಅರುಣ್ ರೈ ತೊಡಾರ್ ನಿರ್ಮಾಣ ಮಾಡಿದ್ದಾರೆ. ಪ್ರಕಾಶ್ ರೈ, ರವಿಶಂಕರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರೆ, ರಾಧಿಕಾ ಚೇತನ್ ವಿಶೇಷ ಪಾತ್ರಕ್ಕೆ ಜೀವ ತುಂಬಿದ್ದಾರೆ. ತುಳು ಭಾಷೆಯಲ್ಲಿಯೂ ಬಿಡುಗಡೆಗೊಳ್ಳಲಿರುವ ಸದರಿ ಚಿತ್ರದಲ್ಲಿ ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಸೇರಿದಂತೆ ಪ್ರಸಿದ್ಧ ತುಳು ರಂಗಭೂಮಿ ಹಿನ್ನೆಲೆಯ ನಟರು ನಟಿಸಿದ್ದಾರೆ. ವಿಜಯ್ ಕೊಡಿಯಾಲ್‌ಬೈಲ್ ಚಿತ್ರಕಥೆ ಸಂಭಾಷಣೆ, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಫೆಬ್ರವರಿಯಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Pro Wrestling League 2026: ಭಾರತೀಯ ಕುಸ್ತಿಪಟುಗಳಿಗೆ ಹೊಸ ವೇದಿಕೆ ಪ್ರೊ ಕುಸ್ತಿ ಲೀಗ್ – Kannada News | Pro Wrestling League 2026: Noida Hosts Olympic Level Action & Global Stars

ಒಲಿಂಪಿಕ್ ಮಟ್ಟದ ಕುಸ್ತಿಯನ್ನು ವೃತ್ತಿಪರ ಕ್ರೀಡೆಯಾಗಿ ಮತ್ತಷ್ಟು ಬಲಪಡಿಸುವ ಗುರಿಯೊಂದಿಗೆ ಪ್ರೊ ಕುಸ್ತಿ ಲೀಗ್-2026 ( Pro Wrestling League 2026) ಉತ್ತರ ಪ್ರದೇಶದ ನೋಯ್ಡಾದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ದೇಶೀಯ ಕುಸ್ತಿಪಟುಗಳು ಮತ್ತು ಅಂತರರಾಷ್ಟ್ರೀಯ ಕ್ರೀಡಾಪಟುಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಈ ಲೀಗ್, ಕುಸ್ತಿಗೆ ಹೊಸ ಗುರುತನ್ನು ತರಲಿದೆ. ಯುವ ಕುಸ್ತಿಪಟುಗಳಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಅನುಭವವನ್ನು ಒದಗಿಸುವುದು ಈ ಲೀಗ್‌ನ ಮುಖ್ಯ ಉದ್ದೇಶವಾಗಿದೆ. ವೈಯಕ್ತಿಕ ಸ್ಪರ್ಧೆಯಾಗಿರುವ ಕುಸ್ತಿಯನ್ನು ತಂಡ ಆಧಾರಿತ ಸ್ವರೂಪವಾಗಿ ಪರಿವರ್ತಿಸುವುದು ಮತ್ತು ಅಭಿಮಾನಿಗಳಿಗೆ ಅದನ್ನು ಹೆಚ್ಚು ಆಸಕ್ತಿದಾಯಕವಾಗಿಸುವುದು ಮತ್ತೊಂದು ಗುರಿಯಾಗಿದೆ.

ಕುಸ್ತಿಪಟುಗಳಿಗೆ ವೃತ್ತಿಪರ ವೇದಿಕೆ

ಪಿಡಬ್ಲ್ಯೂಎಲ್ ಕುಸ್ತಿಪಟುಗಳಿಗೆ ನಿಯಮಿತ ವೃತ್ತಿಪರ ಸ್ಪರ್ಧೆಗಳು ಮತ್ತು ವೃತ್ತಿ ಭದ್ರತೆಯನ್ನು ಒದಗಿಸುತ್ತದೆ. ಗ್ರಾಮೀಣ ಪ್ರದೇಶಗಳಿಂದ ರಾಷ್ಟ್ರೀಯ ತಂಡಕ್ಕೆ ಮತ್ತು ಅಲ್ಲಿಂದ ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ ಕುಸ್ತಿಪಟುಗಳನ್ನು ಸಿದ್ಧಪಡಿಸುವ ವೇದಿಕೆಯಾಗಿದೆ. ಪ್ರೊ ಕುಸ್ತಿ ಲೀಗ್ ಯುವ ಕುಸ್ತಿಪಟುಗಳಿಗೆ ಉತ್ತಮ ವೇದಿಕೆಯಾಗಿದೆ ಎಂದು ಕ್ರೀಡಾ ತಜ್ಞರ ಅಭಿಪ್ರಾಯವಾಗಿದೆ.

ಜನವರಿ 15 ರಿಂದ ಫೆಬ್ರವರಿ 1 ರವರೆಗೆ

ಮೇಲೆ ಹೇಳಿದಂತೆ ಪ್ರೊ ಕುಸ್ತಿ ಲೀಗ್- 2026 ಜನವರಿ 15 ರಿಂದ ಫೆಬ್ರವರಿ 1 ರವರೆಗೆ ಉತ್ತರ ಪ್ರದೇಶದ ನೋಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಭಿಮಾನಿಗಳು ಸೋನಿ ಲಿವ್ ಮತ್ತು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ (ಸೋನಿ ಟೆನ್ 4, ಸೋನಿ ಟೆನ್ 5) ನಲ್ಲಿ ಲೀಗ್ ಅನ್ನು ನೇರ ಪ್ರಸಾರ ವೀಕ್ಷಿಸಬಹುದಾಗಿದೆ. ಹಾಗೆಯೇ ದೂರದರ್ಶನ ಹಾಗೂ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಪ್ರಸಾರ ಮಾಡಲಾಗುತ್ತದೆ.

ಭಾರತೀಯ ಕುಸ್ತಿಪಟುಗಳಿಗೆ ಹೊಸ ಸವಾಲು

ಇಲ್ಲಿಯವರೆಗೆ ಕೆಲವೇ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದ ಕುಸ್ತಿಯನ್ನು ಪ್ರಮುಖ ಪ್ರೇಕ್ಷಕರ ಕ್ರೀಡೆಯನ್ನಾಗಿ ಪರಿವರ್ತಿಸುವುದು ಪಿಡಬ್ಲ್ಯೂಎಲ್ ಗುರಿಯಾಗಿದೆ. ವಿವಿಧ ದೇಶಗಳ ಕ್ರೀಡಾಪಟುಗಳ ಭಾಗವಹಿಸುವಿಕೆಯು ಸ್ಪರ್ಧೆಯ ವೈವಿಧ್ಯತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಭಾರತೀಯ ಕುಸ್ತಿಪಟುಗಳಿಗೆ ಹೊಸ ಸವಾಲುಗಳನ್ನು ಒಡ್ಡುತ್ತಿದೆ. ಅದೇ ಸಮಯದಲ್ಲಿ, ಅಭಿಮಾನಿಗಳು ವಿಶ್ವ ದರ್ಜೆಯ ಕುಸ್ತಿಯನ್ನು ನೇರಪ್ರಸಾರ ವೀಕ್ಷಿಸುವ ಅವಕಾಶವನ್ನು ಪಡೆಯುತ್ತಾರೆ.

ಪ್ರೊ ಕುಸ್ತಿ ಲೀಗ್- 2026 ತಂಡಗಳು

  1. ಡೆಲ್ಲಿ ದಂಗಲ್ ವಾರಿಯರ್ಸ್
  2. ಹರಿಯಾಣ ಥಂಡರ್ಸ್
  3. ಟೈಗರ್ಸ್ ಆಫ್ ಮುಂಬೈ ದಂಗಲ್
  4. ಮಹಾರಾಷ್ಟ್ರ ಕೇಸರಿ
  5. ಪಂಜಾಬ್ ರಾಯಲ್ಸ್
  6. ಯುಪಿ ಡೊಮಿನೇಟರ್ಸ್

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಕೇಂದ್ರ ಗುಡ್​​ ನ್ಯೂಸ್​​: ವೇತನ ಪರಿಷ್ಕರಣೆಗೆ ಅಸ್ತು – Kannada News | Central Govt Approves Wage and Pension Revision: Boost for PSU Insurance, NABARD, RBI Employees and Pensioners

ದೆಹಲಿ, ಜನವರಿ 24: ಬಹುಕಾಲದಿಂದ ಬಾಕಿ ಉಳಿದಿದ್ದ ವೇತನ ಪರಿಷ್ಕರಣೆಗೆ (Wage Revision) ಕೇಂದ್ರ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ. ಆ ಮೂಲಕ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರ ಗುಡ್​ ನ್ಯೂಸ್ ನೀಡಿದೆ. ಸಾರ್ವಜನಿಕ ವಲಯದ ವಿಮಾ ಕಂಪನಿ, ನಬಾರ್ಡ್​​ ಉದ್ಯೋಗಿಗಳು, ಭಾರತೀಯ ರಿಸರ್ವ್​​ ಬ್ಯಾಂಕ್ ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್​​​ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪಿಂಚಣಿದಾರರಿಗೆ ಪಿಂಚಣಿ ಹೆಚ್ಚಳವಾಗಲಿದೆ.​​​

ಈ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತ ಮಾಧ್ಯಮ ಪ್ರಕರಟಣೆ ಹೊರಡಿಸಿದೆ. ಈ ನಿರ್ಧಾರವು ಪಿಂಚಣಿದಾರರ ದೀರ್ಘ ಮತ್ತು ಸಮರ್ಪಿತ ವೃತ್ತಿಪರ ಸೇವೆಯನ್ನು ಗುರುತಿಸಿ, ಸರ್ಕಾರದ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಯೋಗಕ್ಷೇಮದ ಮೇಲಿನ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಒತ್ತಿ ಹೇಳಿದೆ.

ನಿರ್ಮಲಾ ಸೀತಾರಾಮನ್ ಟ್ವೀಟ್​

ಸಾರ್ವಜನಿಕ ವಲಯದ ವಿಮಾ ಸಂಸ್ಥೆಗಳ ಉದ್ಯೋಗಿಗಳಿಗೆ ವೇತನ ಪರಿಷ್ಕರಣೆ ಘೋಷಣೆಯಾಗಿದ್ದು, ಈ ಪರಿಷ್ಕರಣೆಯಿಂದ ಒಟ್ಟಾರೆ ವೇತನ ವೆಚ್ಚದಲ್ಲಿ 12.41 ಶೇಕಡಾ ಹೆಚ್ಚಳವಾಗಲಿದೆ. ಇದರ ಭಾಗವಾಗಿ, ಪ್ರಸ್ತುತ ಮೂಲ ವೇತನ ಮತ್ತು ಡಿಯರ್ನೆಸ್ ಅಲೌನ್ಸ್ ಮೇಲೆ 14 ಶೇಕಡಾ ಹೆಚ್ಚಳ ನೀಡಲಾಗುತ್ತದೆ.

ಇದನ್ನೂ ಓದಿ: ಗುಜರಾತ್​ನಲ್ಲಿ ಗೆಲುವು ಹೀಗೆಯೇ ಆರಂಭವಾಗಿತ್ತು, ಮುಂದೆ ಕೇರಳದಲ್ಲೂ ಗೆಲ್ತೀವಿ: ಪ್ರಧಾನಿ ಮೋದಿ

ಈ ವೇತನ ಪರಿಷ್ಕರಣೆಯಿಂದ ಒಟ್ಟು 43,247 ಪಿಎಸ್‌ಜಿಐಸಿ ಉದ್ಯೋಗಿಗಳು ಲಾಭ ಪಡೆಯಲಿದ್ದಾರೆ. ಜೊತೆಗೆ, 01 ಏಪ್ರಿಲ್ 2010ರ ನಂತರ ಸೇವೆಗೆ ಸೇರಿದ ಉದ್ಯೋಗಿಗಳ ಭವಿಷ್ಯ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್)ಗೆ ನೀಡುವ ಕೊಡುಗೆಯನ್ನು 10 ಶೇಕಡೆಯಿಂದ 14 ಶೇಕಡಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಈ ವೇತನ ಪರಿಷ್ಕರಣೆಯಿಂದ ಸರ್ಕಾರಕ್ಕೆ ಒಟ್ಟು ರೂ. 8,170.30 ಕೋಟಿ ರೂ ವೆಚ್ಚವಾಗಲಿದೆ. ಇದರಲ್ಲಿ ವೇತನ ಪರಿಷ್ಕರಣೆ ಬಾಕಿ ಹಣ (ಅರಿಯರ್ಸ್) ಪಾವತಿಗೆ ರೂ. 5,822.68 ಕೋಟಿ ಮೀಸಲಿಡಲಾಗಿದೆ. ಜೊತೆಗೆ, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್)ಗಾಗಿ ರೂ. 250.15 ಕೋಟಿ ರೂ ಹಾಗೂ ಕುಟುಂಬ ಪಿಂಚಣಿಗೆ ರೂ. 2,097.47 ಕೋಟಿ ರೂ ವೆಚ್ಚವಾಗಲಿದೆ.

ನಬಾರ್ಡ್‌ನ ಗ್ರೂಪ್ ‘ಎ’, ‘ಬಿ’ ಮತ್ತು ‘ಸಿ’ ವರ್ಗದ ಎಲ್ಲಾ ಉದ್ಯೋಗಿಗಳಿಗೆ ವೇತನ ಹಾಗೂ ಭತ್ಯೆಗಳಲ್ಲಿ  ಶೇಕಡಾ 20ರಷ್ಟು ಹೆಚ್ಚಳ ನೀಡಲು ತೀರ್ಮಾನಿಸಲಾಗಿದೆ. ಈ ನಿರ್ಧಾರದಿಂದ ಸುಮಾರು 3,800 ಸೇವೆಯಲ್ಲಿರುವ ಹಾಗೂ ನಿವೃತ್ತ ಉದ್ಯೋಗಿಗಳು ಲಾಭ ಪಡೆಯಲಿದ್ದಾರೆ. ಈ ವೇತನ ಪರಿಷ್ಕರಣೆಯಿಂದ ನಬಾರ್ಡ್‌ಗೆ ವರ್ಷಕ್ಕೆ ಹೆಚ್ಚುವರಿ ಸುಮಾರು ರೂ. 170 ಕೋಟಿ ರೂ ವೇತನ ವೆಚ್ಚವಾಗಲಿದೆ. ಅಲ್ಲದೆ, ಬಾಕಿ ಹಣ (ಅರಿಯರ್ಸ್) ಪಾವತಿಗೆ ಒಟ್ಟು ಸುಮಾರು ರೂ. 510 ಕೋಟಿ ವೆಚ್ಚವಾಗಲಿದೆ.

ಪಿಂಚಣಿ ಪರಿಷ್ಕರಣೆ ಹಿನ್ನೆಲೆಯಲ್ಲಿ ಒಮ್ಮೆ ಮಾತ್ರ ನೀಡಲಾಗುವ ಬಾಕಿ ಪಾವತಿಗೆ ರೂ. 50.82 ಕೋಟಿ ರೂ ಖರ್ಚಾಗಲಿದ್ದು, ಪ್ರತೀ ತಿಂಗಳು ಪಿಂಚಣಿ ಪಾವತಿಗಾಗಿ ಹೆಚ್ಚುವರಿಯಾಗಿ ರೂ. 3.55 ಕೋಟಿ ರೂ ವೆಚ್ಚವಾಗಲಿದೆ. ಇದರಿಂದ ನಬಾರ್ಡ್‌ನ 269 ಪಿಂಚಣಿದಾರರು ಹಾಗೂ 457 ಕುಟುಂಬ ಪಿಂಚಣಿದಾರರು ಲಾಭ ಪಡೆಯಲಿದ್ದಾರೆ.

ಇದನ್ನೂ ಓದಿ: ಕ್ಷಮೆ ಕೇಳುವುದಿಲ್ಲ, ಕಾಂಗ್ರೆಸ್​​​​​ ನಿಯಮವನ್ನು ಉಲ್ಲಂಘಿಸಿಲ್ಲ: ಈ ವಿಚಾರದಲ್ಲಿ ಕೇಂದ್ರವನ್ನು ಬೆಂಬಲಿಸುವೆ ಎಂದ ಶಶಿ ತರೂರ್

ಇನ್ನು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ನಿವೃತ್ತ ಉದ್ಯೋಗಿಗಳಿಗೆ ಪಿಂಚಣಿ ಹಾಗೂ ಕುಟುಂಬ ಪಿಂಚಣಿ ಪರಿಷ್ಕರಣೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಹಿರಿಯ ನಾಗರಿಕರು ಹಾಗೂ ಅವಲಂಬಿತರಿಗಾಗಿ ನ್ಯಾಯಸಮ್ಮತ, ಸಮರ್ಪಕ ಮತ್ತು ದೀರ್ಘಕಾಲಿಕ ನಿವೃತ್ತಿ ಭದ್ರತಾ ಸೌಲಭ್ಯಗಳನ್ನು ಒದಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಸುಮಾರು 46,322 ಉದ್ಯೋಗಿಗಳು, 23,570 ಪಿಂಚಣಿದಾರರು ಹಾಗೂ 23,260 ಕುಟುಂಬ ಪಿಂಚಣಿದಾರರು ಲಾಭ ಪಡೆಯಲಿದ್ದಾರೆ. ಈ ನಿರ್ಧಾರವು ಪಿಎಸ್‌ಜಿಐಸಿ ಮತ್ತು ನಬಾರ್ಡ್ ಸಂಸ್ಥೆಗಳ ಉದ್ಯೋಗಿಗಳು, ಆರ್‌ಬಿಐ ಹಾಗೂ ನಬಾರ್ಡ್‌ನ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರಿಗೆ ಮಹತ್ವದ ಪರಿಹಾರವನ್ನು ಒದಗಿಸಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ನಿರ್ಮಾಪಕ – Kannada News | Prabhas starrer The Raja Saab movie producer gave complaint

ಪ್ರಭಾಸ್ (Prabhas), ಭಾರತದ ಟಾಪ್ ಪ್ಯಾನ್ ಇಂಡಿಯಾ ಸ್ಟಾರ್ ನಟ. ಪ್ರಭಾಸ್​​ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇತ್ತೀಚೆಗಷ್ಟೆ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಪ್ರಭಾಸ್ ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ ಸಹ ಸಿನಿಮಾ ಚೆನ್ನಾಗಿಲ್ಲದಿದ್ದರೆ ಜನ ನೋಡುವುದಿಲ್ಲ. ಅಂತೆಯೇ ಪ್ರಭಾಸ್ ಕಾರಣಕ್ಕೆ ಮೊದಲೆರಡು ಮೂರು ದಿನ ಉತ್ತಮ ಕಲೆಕ್ಷನ್ ಮಾಡಿದ ಸಿನಿಮಾ ಬಳಿಕ ಬಾಕ್ಸ್ ಆಫೀಸ್​​ನಲ್ಲಿ ಧಾರುಣವಾಗಿ ಕುಸಿಯಿತು. ಪ್ರಭಾಸ್ ಅಭಿಮಾನಿಗಳೇ ಸಿನಿಮಾ ಬಗ್ಗೆ ಟ್ರೋಲ್ ಮಾಡಲು ಆರಂಭಿಸಿದರು. ಇದೀಗ ಸಿನಿಮಾದ ನಿರ್ಮಾಪಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

‘ದಿ ರಾಜಾ ಸಾಬ್’ ಸಿನಿಮಾ ಹಾರರ್ ಕಾಮಿಡಿ ಸಿನಿಮಾ ಆಗಿದ್ದು, ಪ್ರಭಾಸ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ದೆವ್ವ, ಭೂತ, ಪಿಶಾಚಿ ಇನ್ನೂ ಏನೇನೋ ತೋರಿಸಲಾಗಿದೆ. ಬಂಗ್ಲೆಯ ಒಳಗೆ ಮೊಸಳೆಯನ್ನು ಸಹ ಸಿನಿಮಾನಲ್ಲಿ ನಿರ್ದೇಶಕರು ತೋರಿಸಿದ್ದು, ಪ್ರಭಾಸ್, ಮೊಸಳೆ ಜೊತೆ ಫೈಟ್ ಮಾಡುವ ದೃಶ್ಯವೂ ಇದೆ. ಒಟ್ಟಾರೆ ನಿರ್ದೇಶಕರು, ತಮ್ಮ ಊಹಗೆ ಬಂದಿದ್ದನ್ನೆಲ್ಲ ಸಿನಿಮಾನಲ್ಲಿ ತೋರಿಸಿದ್ದಾರೆ. ಇದೇ ಕಾರಣಕ್ಕೆ ಸಿನಿಮಾ ಸಖತ್ ಟ್ರೋಲ್ ಸಹ ಆಗುತ್ತಿದೆ. ಇದೀಗ ಈ ಟ್ರೋಲಿಂಗ್ ವಿರುದ್ಧ ಸಿನಿಮಾದ ನಿರ್ಮಾಪಕರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

ನಿನ್ನೆ ಶುಕ್ರವಾರದಂದು ನಿರ್ಮಾಪಕರು ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನೂ ಸಹ ಹೊರಡಿಸಿದ್ದಾರೆ. ‘ನಮ್ಮ ‘ದಿ ರಾಜಾ ಸಾಬ್’ ಸಿನಿಮಾದ ದೃಶ್ಯಗಳನ್ನು ಅವಹೇಳನಕಾರಿಯಾಗಿ ಅನುಕರಿಸುವುದು, ಚಿತ್ರ ಮತ್ತು ಅದರ ನಟರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಮತ್ತು ದಾರಿತಪ್ಪಿಸುವ ಹೇಳಿಕೆಗಳನ್ನು ಪೋಸ್ಟ್ ಮಾಡುವುದು, ಇಂತಹ ದುರುದ್ದೇಶಪೂರಿತ ಕೃತ್ಯಗಳು ಗೊಂದಲವನ್ನು ಸೃಷ್ಟಿಸುವ ಮತ್ತು ನಕಾರಾತ್ಮಕತೆಯನ್ನು ಹರಡುವ ಉದ್ದೇಶವನ್ನು ಹೊಂದಿವೆ. ಇಂಥಹಾ ಕೃತ್ಯಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು, ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ’ ಎಂದಿದ್ದಾರೆ.

ಇದನ್ನೂ ಓದಿ:ಪೂಜಾ ಹೆಗ್ಡೆ ಕ್ಯಾರಾವ್ಯಾನ್​ಗೆ ನುಗ್ಗಿದ್ದರೇ ಪ್ರಭಾಸ್? ಸತ್ಯಾಂಶವೇನು?

‘ದಿ ರಾಜಾ ಸಾಬ್’ ಸಿನಿಮಾವನ್ನು ಹಲವರು ಟ್ರೋಲ್ ಮಾಡುತ್ತಿದ್ದಾರೆ. ಸಿನಿಮಾದ ದೃಶ್ಯಗಳು, ದೃಶ್ಯಗಳ ಸ್ಕ್ರೀನ್ ಶಾಟ್​​ಗಳನ್ನು ಬಳಸಿಕೊಂಡು ಮೀಮ್​​ಗಳನ್ನು ಕ್ರಿಯೇಟ್ ಮಾಡಲಾಗುತ್ತಿದೆ. ಅದರಲ್ಲೂ ಸಿನಿಮಾದ ನಿರ್ದೇಶಕ, ನಿರ್ಮಾಪಕರು ಸಂದರ್ಶನಗಳಲ್ಲಿ ಸಿನಿಮಾ ಬಗ್ಗೆ ಆಡಿರುವ ಮಾತುಗಳನ್ನು ಬಳಸಿಕೊಂಡು ಟ್ರೋಲ್ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಇದೀಗ ನಿರ್ಮಾಪಕರು ಟ್ರೋಲರ್​​ಗಳ ವಿರುದ್ಧ ದೂರು ನೀಡಿದ್ದಾರೆ.

‘ದಿ ರಾಜಾ ಸಾಬ್’ ಸಿನಿಮಾವನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಪ್ರಭಾಸ್ ಜೊತೆಗೆ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್ ಮತ್ತು ರಿದ್ಧಿ ಕುಮಾರ್ ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ಸಂಜಯ್ ದತ್, ಬೊಮನ್ ಇರಾನಿ ಸಹ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಭಾಸ್ ದ್ವಿಪಾತ್ರದಲ್ಲಿ ನಟಿಸಿಯೂ ಸಹ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ನಿರೀಕ್ಷಿತ ಯಸಸ್ಸನ್ನು ಗಳಿಸಲು ವಿಫಲವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

U19 World Cup 2026: ಕಿವೀಸ್ ವಿರುದ್ಧ 81 ಎಸೆತಗಳಲ್ಲಿ ಪಂದ್ಯ ಗೆದ್ದ ಯುವ ಭಾರತ – Kannada News | India U19 Dominates New Zealand, Extends Unbeaten Run in ICC World Cup 2026 Group Stage

ಭಾರತದ ಯುವ ತಂಡವು ಐಸಿಸಿ ಅಂಡರ್-19 ವಿಶ್ವಕಪ್ 2026 (U19 World Cup 2026) ರಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ನ್ಯೂಜಿಲೆಂಡ್ ವಿರುದ್ಧದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ (India vs New Zealand) ಸುಲಭ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ಗಳ ಮುಂದೆ ಪೆವಿಲಿಯನ್ ಪರೇಡ್ ನಡೆಸಿದರು. ಹೀಗಾಗಿ ಇಡೀ ತಂಡವು 135 ಸ್ಕೋರ್‌ಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಭಾರತದ ಪರ ಸ್ಟಾರ್ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಮತ್ತು ನಾಯಕ ಆಯುಷ್ ಮ್ಹಾತ್ರೆ ಬಿರುಗಾಳಿಯ ಇನ್ನಿಂಗ್ಸ್ ಆಡಿ ತಂಡವನ್ನು ಸುಲಭ ಗೆಲುವಿನತ್ತ ಕೊಂಡೊಯ್ದಿತು.

ಬೌಲಿಂಗ್‌ನಲ್ಲಿ ಮಿಂಚಿದ ಅಂಬ್ರಿಸ್

ಬುಲವಾಯೊದಲ್ಲಿ ನಡೆದ ಈ ಪಂದ್ಯವನ್ನು ಮಳೆಯಿಂದಾಗಿ ತಲಾ 37 ಓವರ್‌ಗಳಿಗೆ ಇಳಿಸಲಾಯಿತು. ಭಾರತ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಆದರೆ ಮಳೆ ಆಟಕ್ಕೆ ಆರಂಭದಲ್ಲಿಯೇ ಅಡ್ಡಿಪಡಿಸಿದರಿಂದ ಪಂದ್ಯವನ್ನು ತಲಾ ಮೂರು ಓವರ್‌ಗಳಷ್ಟು ಕಡಿಮೆ ಮಾಡಿತು. ಪಂದ್ಯ ಪುನರಾರಂಭವಾದರೂ ಮಳೆ ಮತ್ತೆ ಆಟವನ್ನು ಸ್ಥಗಿತಗೊಳಿಸಲಾಯಿತು. ಹೀಗಾಗಿ ಉಭಯ ತಂಡಗಳಿಗೆ ತಲಾ 10 ಓವರ್‌ಗಳನ್ನು ಕಡಿತಗೊಳಿಸಲಾಯಿತು. ನಂತರ ಭಾರತೀಯ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿ ನ್ಯೂಜಿಲೆಂಡ್ ತಂಡವನ್ನು 36.2 ಓವರ್‌ಗಳಲ್ಲಿ 135 ರನ್‌ಗಳಿಗೆ ಆಲೌಟ್ ಮಾಡಿದರು. ನ್ಯೂಜಿಲೆಂಡ್‌ ಪರ ಕ್ಯಾಲಮ್ ಸ್ಯಾಮ್ಸನ್ ಅಜೇಯ 37 ರನ್‌ ಬಾರಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಸೆಲ್ವಿನ್ ಸಂಜಯ 28 ರನ್ ಗಳಿಸಿದರು. ಬೇರೆ ಯಾವುದೇ ಬ್ಯಾಟ್ಸ್‌ಮನ್ 25 ರನ್‌ಗಳ ಗಡಿಯನ್ನು ತಲುಪಲಿಲ್ಲ.

ಭಾರತದ ಪರ ಆರ್.ಎಸ್. ಅಂಬ್ರಿಸ್ ಅದ್ಭುತ ಬೌಲಿಂಗ್ ಮಾಡಿ ನಾಲ್ಕು ವಿಕೆಟ್ ಪಡೆದರೆ, ಹೆನಿಲ್ ಪಟೇಲ್ ಮೂರು ವಿಕೆಟ್ ಪಡೆದರು. ಇತರ ಬೌಲರ್‌ಗಳು ಸಹ ಮಿತವಾಗಿ ಬೌಲಿಂಗ್ ಮಾಡಿ ನ್ಯೂಜಿಲೆಂಡ್ ದೊಡ್ಡ ಮೊತ್ತ ಗಳಿಸದಂತೆ ತಡೆದರು. ಖಿಲನ್ ಪಟೇಲ್, ಮೊಹಮ್ಮದ್ ಇನಾನ್ ಮತ್ತು ಕನಿಷ್ಕ್ ಚೌಹಾಣ್ ತಲಾ ಒಂದು ವಿಕೆಟ್ ಪಡೆದರು.

ವೈಭವ್, ಆಯುಷ್ ಸ್ಫೋಟಕ ಬ್ಯಾಟಿಂಗ್

ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಆಕ್ರಮಣಕಾರಿ ಆರಂಭ ಪಡೆಯಿತು. ಆರನ್ ಜಾರ್ಜ್ 6 ಎಸೆತಗಳಲ್ಲಿ 7 ರನ್‌ಗಳಿಗೆ ಔಟಾದರೂ, ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಮತ್ತು ನಾಯಕ ಆಯುಷ್ ಮ್ಹಾತ್ರೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಎರಡನೇ ವಿಕೆಟ್‌ಗೆ ಕೇವಲ 39 ಎಸೆತಗಳಲ್ಲಿ 76 ರನ್‌ಗಳ ಜೊತೆಯಾಟ ನಡೆಸಿ, ಪಂದ್ಯವನ್ನು ಸಂಪೂರ್ಣವಾಗಿ ಭಾರತದ ಪರವಾಗಿ ತಿರುಗಿಸಿದರು.

T20 World Cup 2026: ಬಾಂಗ್ಲಾ ತಂಡವನ್ನು ಟಿ20 ವಿಶ್ವಕಪ್​ನಿಂದ ಹೊರಹಾಕಿದ ಐಸಿಸಿ

ವೈಭವ್ ಸೂರ್ಯವಂಶಿ 23 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಒಳಗೊಂಡಂತೆ 40 ರನ್ ಗಳಿಸಿದರೆ, ಈ ಮಧ್ಯೆ, ನಾಯಕನ ಇನ್ನಿಂಗ್ಸ್ ಆಡಿದ ಆಯುಷ್ ಮ್ಹಾತ್ರೆ 27 ಎಸೆತಗಳಲ್ಲಿ 2 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಒಳಗೊಂಡಂತೆ 53 ರನ್ ಬಾರಿಸಿದರು. ನಂತರ ವಿಹಾನ್ ಮಲ್ಹೋತ್ರಾ ಅಜೇಯ 17 ರನ್ ಮತ್ತು ವೇದಾಂತ್ ತ್ರಿವೇದಿ ಅಜೇಯ 13 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅಂತಿಮವಾಗಿ ಟೀಂಇಂಡಿಯಾ 13.3 ಓವರ್‌ಗಳಲ್ಲಿ (81 ಎಸೆತಗಳು) 3 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:30 pm, Sat, 24 January 26

Source link

ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ಶಾರುಖ್ ಖಾನ್, ಅಭಿಮಾನಿಗಳಿಗೆ ನಿರಾಸೆ – Kannada News | Shah Rukh Khan announce his King movie release date

ಕಳೆದ ಎರಡು ವರ್ಷ (2025) ಶಾರುಖ್ ಖಾನ್ (Shah Rukh Khan) ನಟನೆಯ ಯಾವೊಂದು ಸಿನಿಮಾ ಸಹ ಬಿಡುಗಡೆ ಆಗಿಲ್ಲ. 2023 ಶಾರುಖ್ ಖಾನ್ ಪಾಲಿಗೆ ಚಿನ್ನದ ವರ್ಷವಾಗಿತ್ತು. ಒಂದೇ ವರ್ಷದಲ್ಲಿ ಶಾರುಖ್ ನಟನೆಯ ಮೂರು ಸಿನಿಮಾಗಳು ಬಿಡುಗಡೆ ಆಗಿ, ಮೂರೂ ಸಿನಿಮಾಗಳು ಭಾರಿ ದೊಡ್ಡ ಹಿಟ್ ಆದವು. ಆದರೆ 2024 ಮತ್ತು 2025 ರಲ್ಲಿ ಶಾರುಖ್ ಖಾನ್ ನಟನೆಯ ಯಾವೊಂದು ಸಿನಿಮಾ ಸಹ ಬಿಡುಗಡೆ ಆಗಲಿಲ್ಲ. ಈ ವರ್ಷಾರಂಭದಲ್ಲಿಯೇ ಶಾರುಖ್ ಅವರ ಹೊಸ ಸಿನಿಮಾ ಬಿಡುಗಡೆ ಆಗುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದರು, ಆದರೆ ಅದು ಸುಳ್ಳಾಗಿದೆ.

ಶಾರುಖ್ ಖಾನ್ ಪ್ರಸ್ತುತ ‘ಕಿಂಗ್’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಕೆಲವಾರು ತಿಂಗಳುಗಳು ಕಳೆದಿದ್ದು, ಸಿನಿಮಾದ ಸಣ್ಣ ಟೀಸರ್ ಈಗಾಗಲೇ ಬಿಡುಗಡೆ ಸಹ ಆಗಿದೆ. ‘ಕಿಂಗ್’ ಸಿನಿಮಾ ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎಂಬ ನಿರೀಕ್ಷೆಯನ್ನು ಅಭಿಮಾನಿಗಳು ಇರಿಸಿಕೊಂಡಿದ್ದರು. ಆದರೆ ಅದು ಸುಳ್ಳಾಗಿದೆ. ‘ಕಿಂಗ್’ ಸಿನಿಮಾದ ಬಿಡುಗಡೆ ದಿನಾಂಕವನ್ನು ಶಾರುಖ್ ಖಾನ್ ಘೋಷಿಸಿದ್ದು, ಸಿನಿಮಾ ನೋಡಲು ಅಭಿಮಾನಿಗಳು ಇನ್ನೂ ಬಹಳ ಸಮಯ ಕಾಯಬೇಕಿದೆ.

‘ಕಿಂಗ್’ ಸಿನಿಮಾ ಇದೇ ವರ್ಷ ಕ್ರಿಸ್​​ಮಸ್ ಹಬ್ಬಕ್ಕೆ ಬಿಡುಗಡೆ ಆಗಲಿದೆ. ಅಂದರೆ ಡಿಸೆಂಬರ್ 24ಕ್ಕೆ ಸಿನಿಮಾ ತೆರೆಗೆ ಬರಲಿದೆ. ‘ಡಿಸೆಂಬರ್ 24ಕ್ಕೆ ಕಿಂಗ್ ಘರ್ಜಿಸಲಿದ್ದಾನೆ’ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ ನಟ ಶಾರುಖ್ ಖಾನ್. ಹೆಸರೇ ಹೇಳುತ್ತಿರುವಂತೆ ‘ಕಿಂಗ್’ ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿ. ಸಿನಿಮಾನಲ್ಲಿ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಹ ನಟಿಸುತ್ತಿದ್ದಾರೆ. ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಸ್ವತಃ ಶಾರುಖ್ ಖಾನ್ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ:ಹೃತಿಕ್ ಆಯ್ತು ಈಗ ಶಾರುಖ್ ಖಾನ್ ಜೊತೆ ನಟಿಸಲಿದ್ದಾರಾ ಜೂ ಎನ್​​ಟಿಆರ್?

2024 ಮತ್ತು 2025 ರಲ್ಲಿ ಶಾರುಖ್ ಖಾನ್ ನಟನೆಯ ಯಾವೊಂದು ಸಿನಿಮಾ ಬಿಡುಗಡೆ ಆಗಿಲ್ಲವಾದರೂ ನಾಲ್ಕು ಡಾಕ್ಯುಮೆಂಟರಿ ಮತ್ತು ಒಂದು ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ನಯನತಾರಾ ಅವರ ಮದುವೆಯ ಡಾಕ್ಯುಮೆಂಟರಿ, ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಮತ್ತು ಜಾವೇದ್ ಅಖ್ತರ್ ಅವರ ಕುರಿತಾದ ಡಾಕ್ಯುಮೆಂಟರಿ, ರೋಷನ್ ಕುಟುಂಬದ ಡಾಕ್ಯುಮೆಂಟರಿ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಳಿಕ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನಿರ್ದೇಶನ ಮಾಡಿರುವ ‘ದಿ ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:17 pm, Sat, 24 January 26

Source link

ದಶಕಗಳ ಕನಸು ನನಸು: ಮೆಜೆಸ್ಟಿಕ್‌ TO ಏರ್‌ಪೋರ್ಟ್‌ ಸಬ್​ಅರ್ಬನ್ ರೈಲು ಯೋಜನೆಗೆ ಗ್ರೀನ್ ಸಿಗ್ನಲ್ – Kannada News | Railways approves Rs 4100 crore suburban rail link to Bengaluru airport from majestic

ಬೆಂಗಳೂರು, (ಜನವರಿ 24): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (kempegowda international airport)  ಉಪನಗರ ರೈಲು  (suburban railway)ಸಂಪರ್ಕ ಕಲ್ಪಿಸುವ ಯೋಜನೆಗೆ ಕೊನೆಗೂ ಹಸಿರು ನಿಶಾನೆ ದೊರೆತಿದೆ. ಹೌದು…ಮೆಜೆಸ್ಟಿಕ್​​​​ನಿಂದ ಬೆಂಗಳೂರು (Bengaluru) ಏರ್​ಪೋರ್ಟ್​ ವರೆಗೆ 4,100 ಕೋಟಿ ರೂಪಾಯಿ ವೆಚ್ಚದ ಸಬ್​ಅರ್ಬನ್ ರೈಲು ಯೋಜನೆಗೆ ಕೇಂದ್ರ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಇನ್ನುಸುಮಾರು 4,100 ಕೋಟಿ ರೂ.ವೆಚ್ಚದ ಯೋಜನೆಯ ಅಂತಿಮ ವಿನ್ಯಾಸಕ್ಕೂ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್) ಸಮ್ಮತಿ ಸೂಚಿಸಿದೆ. ಒಟ್ಟು 8.5 ಕಿ.ಮೀ ರೈಲು ಮಾರ್ಗವಿದ್ದು, ಈ ಯೋಜನೆ 2030ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಬಹುಮುಖ್ಯವಾಗಿ ಈ ಯೋಜನೆಯಿಂದ ಈ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಲಿದೆ.

2030ರ ವೇಳೆಗೆ ಪೂರ್ಣಗೊಳಿಸುವ ಗುರಿ

ಈ ಯೋಜನೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಅನುದಾನ ನೀಡಲು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಮತ್ತು ಭಾರತೀಯ ರೈಲ್ವೆಯಿಂದ ಈಕ್ವಿಟಿ ಹಣಕಾಸು ಪಡೆಯಲು ಪ್ರಯತ್ನಗಳು ನಡೆಯುತ್ತಿವೆ. ಯೋಜನೆಯ ವರದಿಯನ್ನು ರೈಟ್ಸ್ ಸಂಸ್ಥೆ ಸಿದ್ಧಪಡಿಸಿದ್ದು, ಈ ಸಂಪೂರ್ಣ ಸಂಪಿಗೆ ಲೈನ್ ಮತ್ತು ವಿಮಾನ ನಿಲ್ದಾಣದ ಕೊಂಡಿಯನ್ನು ಮಾರ್ಚ್ 2030ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಇದನ್ನೂ ಓದಿ: ವಿಶ್ವದಲ್ಲೇ ಹೆಚ್ಚು ಟ್ರಾಫಿಕ್ ಇರುವ ನಗರ: ಬೆಂಗಳೂರಿಗೆ 2ನೇ ಸ್ಥಾನ!

ಮೆಜೆಸ್ಟಿಕ್ ಟು ಏರ್​​ಪೋರ್ಟ್ ಮಾರ್ಗ

ಈ ಮಾರ್ಗ ಕೆಎಸ್‌ಆರ್ ಬೆಂಗಳೂರು ಸಿಟಿಯಿಂದ ಹೊರಟು ಯಶವಂತಪುರ, ಯಲಹಂಕ ಮೂಲಕ ಸಾಗಿ, ಟ್ರಂಪೆಟ್ ಇಂಟರ್‌ಚೇಂಜ್ ಬಳಿ ತಿರುವು ಪಡೆದು, ಬಿಕೆ ಹಳ್ಳಿ ಮತ್ತು ಏರೋಸ್ಪೇಸ್ ಪಾರ್ಕ್ ಮೂಲಕ ದೇವನಹಳ್ಳಿ ಏರ್‌ಪೋರ್ಟ್ ಟರ್ಮಿನಲ್ ತಲುಪಲಿದೆ.

ಬೆಂಗಳೂರು ಉಪನಗರ ರೈಲು ಯೋಜನೆಯ ಮೊದಲನೇ ಕಾರಿಡಾರ್ ಆದ ‘ಸಂಪಿಗೆ ಲೈನ್’ ಅಡಿಯಲ್ಲಿ ಮೆಜೆಸ್ಟಿಕ್‌ನಿಂದ ದೇವನಹಳ್ಳಿಯವರೆಗೆ ಈ ವಿಮಾನ ನಿಲ್ದಾಣದ ಸಂಪರ್ಕ ಕೊಂಡಿಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಟ್ರಂಪೆಟ್ ಜಂಕ್ಷನ್‌ನಿಂದ ವಿಮಾನ ನಿಲ್ದಾಣದ ಟರ್ಮಿನಲ್‌ವರೆಗೆ ಒಟ್ಟು 8.5 ಕಿ.ಮೀ ಉದ್ದದ ಮಾರ್ಗವನ್ನು ಇದು ಒಳಗೊಂಡಿದೆ. ಈ ಯೋಜನೆಯಲ್ಲಿ 5.5 ಕಿ.ಮೀ ಮಾರ್ಗವು ನೆಲಮಟ್ಟದಲ್ಲಿ ಹಾಗೂ ಉಳಿದ 3.5 ಕಿ.ಮೀ ಮಾರ್ಗವು ವಿಮಾನ ನಿಲ್ದಾಣದ ಸಂಕೀರ್ಣದೊಳಗೆ ಸಂಪೂರ್ಣ ಭೂಗತವಾಗಿ ನಿರ್ಮಾಣವಾಗಲಿದೆ.

ಟ್ರಾಫಿಕ್ ಸಮಸ್ಯೆಗೆ ಮುಕ್ತಿ

ಟ್ರಾಫಿಕ್‌ನಿಂದ ಬಳಲುತ್ತಿರುವ ಬೆಂಗಳೂರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಉಪನಗರ ರೈಲು ಯೋಜನೆ ಮಹತ್ವದ್ದಾಗಿದೆ.   ಪ್ರಸ್ತುತ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗಳಲ್ಲಿ ಪ್ರತಿದಿನ ಬಹಳಷ್ಟು ವಾಹನಗಳು ಸಂಚರಿಸುತ್ತಿವೆ. ಇದರಿಂದ ಈ ಭಾಗದಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈಗ ಈ ರೈಲು ಮಾರ್ಗವು ಕಾರ್ಯಾರಂಭ ಮಾಡಿದರೆ ವಾಹನ ಸಂಚಾರ ದಟ್ಟಣೆಗೆ ಮುಕ್ತಿ ಸಿಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link