Category Archives: Blog

Your blog category

ನಿಮ್ಮ ಮನೆಯ ಮಿಕ್ಸರ್ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ? ಈ ರೀತಿ ಮಾಡಿ ನೋಡಿ – Kannada News | How to Sharpen your Kitchen Mixer Grinder Blades Instantly check this hack

ನವದೆಹಲಿ, ಮೇ 25: ಅಡುಗೆಮನೆಯಲ್ಲಿ ಬಳಸುವ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಮಿಕ್ಸರ್ (Mixer) ಮತ್ತು ಗ್ರೈಂಡರ್‌ಗಳು ಪ್ರಮುಖವಾಗಿವೆ. ಚಟ್ನಿಗಳು, ಮಸಾಲೆಗಳು, ಸಾಂಬಾರ್ ಪುಡಿಗಳಂತಹ ವಿವಿಧ ಆಹಾರ ಪದಾರ್ಥಗಳನ್ನು ಪುಡಿ ಮಾಡಲು ನಾವು ಪ್ರತಿದಿನ ಅವುಗಳನ್ನು ಬಳಸುತ್ತೇವೆ. ಆದರೆ, ನಿರಂತರ ಬಳಕೆಯಿಂದಾಗಿ ಮಿಕ್ಸರ್ ಬ್ಲೇಡ್‌ಗಳು ಕಾಲಾನಂತರದಲ್ಲಿ ಹರಿತ ಕಡಿಮೆಯಾಗುತ್ತವೆ. ಇದರಿಂದಾಗಿ, ನಾವು ಎಷ್ಟೇ ರುಬ್ಬಿದರೂ, ಪದಾರ್ಥಗಳು ನುಣ್ಣಗಾಗುವುದಿಲ್ಲ. ಸಾಮಾನ್ಯವಾಗಿ, ಮಿಕ್ಸರ್ ಜಾರ್ ಹರಿತವಾಗದಿದ್ದರೆ ನಾವೆಲ್ಲರೂ ಅದನ್ನು ಮೆಕ್ಯಾನಿಕ್‌ಗೆ ಕರೆದೊಯ್ಯುತ್ತೇವೆ. ಅಥವಾ ಜಾರ್ ಅನ್ನು ಬದಲಾಯಿಸುತ್ತೇವೆ. ಆದರೆ ಒಂದು ರೂ. ಕೂಡ ಖರ್ಚು ಮಾಡದೆ ಮನೆಯಲ್ಲಿ ಲಭ್ಯವಿರುವ ಒಂದೇ ಒಂದು ಪದಾರ್ಥದಿಂದ ನೀವು ಮತ್ತೆ ಚಾಕುವಿನಂತೆ ಬ್ಲೇಡ್ ಅನ್ನು ಹರಿತಗೊಳಿಸಬಹುದು ಎಂದು ನಿಮಗೆ ತಿಳಿದಿದೆಯೇ?

ಎಲ್ಲರ ಮನೆಯಲ್ಲೂ ಇರುವ ಉಪ್ಪು ಮಿಕ್ಸರ್ ಬ್ಲೇಡ್‌ಗಳನ್ನು ಹರಿತಗೊಳಿಸಲು ಸಹಾಯ ಮಾಡುತ್ತದೆ. ಆದರೆ, ಇದಕ್ಕಾಗಿ ನಾವು ಪ್ರತಿದಿನ ಬಳಸುವ ಮೃದುವಾದ ಉಪ್ಪಿನ ಪುಡಿಯ ಬದಲಿಗೆ ಕಲ್ಲು ಉಪ್ಪನ್ನು ಬಳಸಬೇಕು. ಕಲ್ಲು ಉಪ್ಪು ಅತ್ಯುತ್ತಮ ಸ್ಕ್ರಬ್ಬರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ನೈಸರ್ಗಿಕವಾಗಿ ಬ್ಲೇಡ್‌ಗಳನ್ನು ಹರಿತಗೊಳಿಸುತ್ತದೆ.

ಇದನ್ನೂ ಓದಿ: Pomegranate Juice: ಜ್ಯೂಸರ್, ಮಿಕ್ಸರ್ ಇಲ್ಲದೆಯೂ ದಾಳಿಂಬೆ ರಸವನ್ನು ಸುಲಭವಾಗಿ ತೆಗೆಯಬಹುದು ಹೇಗೆ?

ಮಿಕ್ಸರ್ ಬ್ಲೇಡ್ ಹರಿತಗೊಳಿಸುವುದು ಹೇಗೆ?:

ಹರಿತ ಕಡಿಮೆಯಾಗಿರುವ ಮಿಕ್ಸರ್ ಜಾರ್ ತೆಗೆದುಕೊಳ್ಳಿ. ಆ ಬ್ಲೇಡ್ ಸಂಪೂರ್ಣವಾಗಿ ಮುಳುಗುವವರೆಗೆ ಕಲ್ಲು ಉಪ್ಪನ್ನು ಸೇರಿಸಿ. ಇದಾದ ನಂತರ, ಜಾರ್ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ ಮಿಕ್ಸರ್ ಮೇಲೆ ಇರಿಸಿ. ಮಿಕ್ಸರ್ ಅನ್ನು ನಿರಂತರವಾಗಿ ತಿರುಗಿಸದೆ, ಆಗಾಗ ನಿಲ್ಲಿಸುತ್ತಾ ಆನ್ ಮಾಡಬೇಕು. ಮಿಕ್ಸರ್ ಅನ್ನು ಒಂದು ಅಥವಾ 2 ನಿಮಿಷಗಳ ಕಾಲ ಹೆಚ್ಚಿನ ವೇಗದಲ್ಲಿ ಚಲಾಯಿಸಿ. ಇದು ಜಾರ್​​ನೊಳಗಿನ ಉಪ್ಪನ್ನು ಸಂಪೂರ್ಣವಾಗಿ ನಯವಾದ ಪುಡಿಯಾಗಿ ಮಾಡುತ್ತದೆ. ಚಾಕುವಿನಷ್ಟು ಹರಿತವಾಗಿರುವುದಲ್ಲದೆ ಕೊಳಕೆಲ್ಲ ಸ್ವಚ್ಛವಾಗಿದೆ. ಈ ಪ್ರಕ್ರಿಯೆಯಲ್ಲಿ, ಕಲ್ಲು ಉಪ್ಪಿನ ಘರ್ಷಣೆಯಿಂದ ಬ್ಲೇಡ್‌ಗಳು ಚಾಕುವಿನಂತೆ ಹರಿತವಾಗುತ್ತವೆ.

ನಿಮ್ಮ ಮನೆಯಲ್ಲಿ ಕಲ್ಲುಪ್ಪು ಲಭ್ಯವಿಲ್ಲದಿದ್ದರೆ, ಅಲ್ಯೂಮಿನಿಯಂ ಫಾಯಿಲ್ ಅನ್ನು ಕೂಡ ಬಳಸಬಹುದು. ಅಲ್ಯೂಮಿನಿಯಂ ಫಾಯಿಲ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮಿಕ್ಸಿಂಗ್ ಜಾರ್‌ನಲ್ಲಿ ಹಾಕಿ. ಒಂದು ನಿಮಿಷ ಹೆಚ್ಚಿನ ವೇಗದಲ್ಲಿ ಮಿಕ್ಸ್ ಮಾಡಿ. ಇದು ಜಾರ್​​ನ ಬ್ಲೇಡ್‌ಗಳ ಅಂಚುಗಳನ್ನು ಹರಿತಗೊಳಿಸುತ್ತದೆ.

ಇದನ್ನೂ ಓದಿ: ಗರ್ಭಿಣಿಯರು ಮಿಕ್ಸರ್ ಗ್ರೈಂಡರ್ ಬಳಸೋದು ಅಪಾಯಕಾರಿಯೇ? ಈ ಬಗ್ಗೆ ತಜ್ಞರು ಹೇಳುವುದು ಏನು?

ಬ್ಲೇಡ್‌ಗಳನ್ನು ಹರಿತಗೊಳಿಸಿದ ನಂತರ ಜಾರ್ ಅನ್ನು ಸ್ವಚ್ಛಗೊಳಿಸಲು ಮರೆಯಬೇಡಿ. ಬೆರೆಸಿದ ಉಪ್ಪನ್ನು ಎಸೆಯುವ ಬದಲು, ನೀವು ಅದನ್ನು ಬೇರೆ ಪಾತ್ರೆಯಲ್ಲಿ ಹಾಕಿ ಮರುಬಳಕೆ ಮಾಡಬಹುದು. ಜಾರ್ ನಿಂದ ಉಪ್ಪು ಅಥವಾ ಫಾಯಿಲ್ ತುಂಡುಗಳನ್ನು ತೆಗೆದ ನಂತರ, ಸ್ವಲ್ಪ ನೀರು ಮತ್ತು ಪಾತ್ರೆ ತೊಳೆಯುವ ಜೆಲ್ ಸೇರಿಸಿ ಮಿಕ್ಸರ್ ಅನ್ನು ಒಮ್ಮೆ ಆನ್ ಮಾಡಿ. ಅದರ ನಂತರ, ಜಾರ್ ಅನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಿರಿ. ತೊಳೆದ ತಕ್ಷಣ ಜಾರ್ ಅನ್ನು ತಲೆಕೆಳಗಾಗಿ ಇಡಬೇಕು. ಬ್ಲೇಡ್‌ಗಳು ಒದ್ದೆಯಾಗಿದ್ದರೆ ತುಕ್ಕು ಹಿಡಿಯುವ ಸಾಧ್ಯತೆ ಹೆಚ್ಚಿರುವುದರಿಂದ, ಜಾರ್ ಸಂಪೂರ್ಣವಾಗಿ ಒಣಗಿದ ನಂತರವೇ ಅದನ್ನು ತೆಗೆದಿಡಬೇಕು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಡಾನ್ 3’ ವಿವಾದ: ಚಿತ್ರರಂಗದಿಂದ ಬ್ಯಾನ್ ಆದ ಬಳಿಕ ಮೌನ ಮುರಿದ ರಣವೀರ್ ಸಿಂಗ್‌ – Kannada News | Dhurandhar actor Ranveer Singh responds after FWICE bans him over Don 3 exit

ಬಹುನಿರೀಕ್ಷಿತ ‘ಡಾನ್ 3’ (Don 3) ಚಿತ್ರದಿಂದ ಹಠಾತ್ ಹೊರನಡೆದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ವಿರುದ್ಧ ಸಿನಿಮಾ ನೌಕರರ ಒಕ್ಕೂಟ (FWICE) ಅಸಹಕಾರದ ಮೂಲಕ ಬ್ಯಾನ್ ಮಾಡಿದೆ. ಈ ವಿವಾದದ ಬೆನ್ನಲ್ಲೇ ರಣವೀರ್ ಸಿಂಗ್ ಅವರ ವಕ್ತಾರರು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ಕೊನೆಗೂ ಮೌನ ಮುರಿದಿದ್ದಾರೆ. ‘ಡಾನ್ 3’ ಚಿತ್ರದ ನಿರ್ದೇಶಕ ಫರ್ಹಾನ್ ಅಖ್ತರ್ ಜೊತೆಗಿನ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ರಣವೀರ್ ಸಿಂಗ್ ಅವರು ಚಿತ್ರದಿಂದ ಹೊರನಡೆದಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಈ ವಿಷಯದ ಕುರಿತು ಚರ್ಚಿಸಲು ಫೆಡರೇಶನ್ ಮುಂದೆ ಹಾಜರಾಗುವಂತೆ ರಣವೀರ್ ಸಿಂಗ್ ಅವರಿಗೆ ಹಲವು ಬಾರಿ ನೋಟಿಸ್ ಕಳುಹಿಸಲಾಗಿದ್ದರೂ, ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಒಕ್ಕೂಟವು ಸೋಮವಾರ (ಮೇ 25) ಗಂಭೀರ ಆರೋಪ ಮಾಡಿದೆ. ಅದರ ಬೆನ್ನಲ್ಲೇ ರಣವೀರ್ ಸಿಂಗ್ ಅವರನ್ನು ಬ್ಯಾನ್ ಮಾಡಲಾಗಿದೆ. ಇದು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ರಣವೀರ್ ಸಿಂಗ್ ಅವರ ಅಧಿಕೃತ ವಕ್ತಾರರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ‘ರಣವೀರ್ ಸಿಂಗ್ ಅವರು ಚಿತ್ರರಂಗದ ಮತ್ತು ಡಾನ್ ಫ್ರಾಂಚೈಸಿಯೊಂದಿಗೆ ಸಂಬಂಧ ಹೊಂದಿರುವ ಪ್ರತಿಯೊಬ್ಬರ ಬಗ್ಗೆಯೂ ಗೌರವವನ್ನು ಹೊಂದಿದ್ದಾರೆ. ಡಾನ್ 3 ಚಿತ್ರದ ಸುತ್ತ ಇತ್ತೀಚೆಗೆ ನಡೆದ ಬೆಳವಣಿಗೆಗಳ ನಡುವೆ ಅವರು ಪ್ರಜ್ಞಾಪೂರ್ವಕವಾಗಿ ಮೌನವಾಗಿರಲು ನಿರ್ಧರಿಸಿದ್ದರು. ಏಕೆಂದರೆ ವೃತ್ತಿಪರ ಚರ್ಚೆಗಳು ಮತ್ತು ವೈಯಕ್ತಿಕ ಸಂಬಂಧಗಳನ್ನು ಗೌರವ, ಪ್ರಬುದ್ಧತೆ ಮತ್ತು ಪರಸ್ಪರ ಮರ್ಯಾದೆಯಿಂದ ನಿಭಾಯಿಸುವುದು ಉತ್ತಮ ಎಂದು ಅವರು ನಂಬುತ್ತಾರೆ’ ಎಂದು ವಕ್ತಾರರು ತಿಳಿಸಿದ್ದಾರೆ.

‘ಕಳೆದ ಕೆಲವು ಸಮಯದಿಂದ ಈ ವಿಷಯದ ಬಗ್ಗೆ ಹಲವಾರು ವದಂತಿಗಳು ಮತ್ತು ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಸಾರ್ವಜನಿಕವಾಗಿ ಇವುಗಳಿಗೆ ಪ್ರತಿಕ್ರಿಯಿಸುವುದು ಅಥವಾ ಊಹೆಗಳಿಗೆ ಗಮನ ನೀಡುವುದು ರಣವೀರ್ ಅವರಿಗೆ ಎಂದಿಗೂ ಅಗತ್ಯ ಎನಿಸಿಲ್ಲ. ಅವರ ಗಮನವು ಕೇವಲ ತಮ್ಮ ಕೆಲಸ ಮತ್ತು ಮುಂಬರುವ ಪ್ರಾಜೆಕ್ಟ್‌ಗಳ ಮೇಲಷ್ಟೇ ಇದೆ’ ಎಂದು ವಕ್ತರಾರು ಹೇಳಿದ್ದಾರೆ.

‘ಈ ಚಿತ್ರದೊಂದಿಗೆ ತೊಡಗಿಸಿಕೊಂಡಿರುವ ಎಲ್ಲರ ಬಗ್ಗೆಯೂ ಅವರು ಗೌರವ ಮತ್ತು ಸದ್ಭಾವನೆಯನ್ನು ಹೊಂದಿದ್ದಾರೆ ಹಾಗೂ ಈ ಫ್ರಾಂಚೈಸಿಗೆ ಯಶಸ್ಸನ್ನು ಬಯಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಸಂಯಮ ಮತ್ತು ಘನತೆಯನ್ನು ಕಾಯ್ದುಕೊಳ್ಳುವುದು ಅವರ ಪ್ರಜ್ಞಾಪೂರ್ವಕ ನಿರ್ಧಾರವಾಗಿದೆ ಮತ್ತು ಮುಂದೆಯೂ ಅವರು ಇದೇ ನಿಲುವನ್ನು ಮುಂದುವರಿಸಲಿದ್ದಾರೆ’ ಎಂದು ಕೂಡ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಚಿತ್ರರಂಗದಿಂದ ರಣವೀರ್ ಸಿಂಗ್‌ ಬ್ಯಾನ್; ಸಿನಿಮಾ ನೌಕರರ ಒಕ್ಕೂಟದಿಂದ ಕಠಿಣ ನಿರ್ಧಾರ

ರಣವೀರ್ ಸಿಂಗ್ ಅವರು ‘ಡಾನ್ 3’ ಚಿತ್ರದಿಂದ ಹಿಂದೆ ಸರಿದಿರುವ ಬಗ್ಗೆ ಸುಮಾರು ಐದು ತಿಂಗಳ ಹಿಂದೆಯೇ ನಿರ್ದೇಶಕ ಫರ್ಹಾನ್ ಅಖ್ತರ್ ಅವರು ಫೆಡರೇಶನ್‌ಗೆ ಅಧಿಕೃತ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ತನಿಖೆ ಮತ್ತು ಚರ್ಚೆಗೆ ಸಹಕರಿಸದ ಹಿನ್ನೆಲೆಯಲ್ಲಿ, ಒಕ್ಕೂಟವು ಸೋಮವಾರ ರಣವೀರ್ ವಿರುದ್ಧ ಅಸಹಕಾರ ನಿರ್ಣಯವನ್ನು ಪ್ರಕಟಿಸಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ರಣವೀರ್ ಸಿಂಗ್ ಅವರ ಸಿನಿಮಾಗಳ ಮೇಲೆ ಇದು ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

30 ವರ್ಷಗಳ ಬಳಿಕ ಭಾರತಕ್ಕೆ ಮರಳಿದ ನಟಿ ಮೀನಾಕ್ಷಿ ಶೇಷಾದ್ರಿ; ಚಿತ್ರರಂಗಕ್ಕೆ ಕಮ್​ಬ್ಯಾಕ್ – Kannada News | Meenakshi Seshadri returns to Mumbai announces acting comeback after 30 years

ಬಾಲಿವುಡ್‌ನ (Bollywood) ಹಿರಿಯ ಹಾಗೂ ಜನಪ್ರಿಯ ನಟಿ ಮೀನಾಕ್ಷಿ ಶೇಷಾದ್ರಿ ಅವರು ಸುಮಾರು ಮೂರು ದಶಕಗಳ ಕಾಲ ವಿದೇಶದಲ್ಲಿ ನೆಲೆಸಿದ ನಂತರ ಕಡೆಗೂ ಭಾರತಕ್ಕೆ ಮರಳಿದ್ದಾರೆ. 1990ರ ದಶಕದ ವೇಳೆ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಚಿತ್ರರಂಗದಿಂದ ದೂರ ಸರಿದಿದ್ದ ನಟಿ, ಇದೀಗ ಸಿನಿಮಾ ಮತ್ತು ಒಟಿಟಿ ಶೋಗಳ ಮೂಲಕ ಹೊಸ ಅವಕಾಶಗಳೊಂದಿಗೆ ತಮ್ಮ ನಟನಾ ಪ್ರಯಾಣವನ್ನು ಪುನರಾರಂಭಿಸಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಮೀನಾಕ್ಷಿ ಶೇಷಾದ್ರಿ (Meenakshi Seshadri) ಅವರು ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ.

ಮದುವೆಯ ನಂತರ ಚಿತ್ರರಂಗವನ್ನು ತೊರೆಯುವ ಮೀನಾಕ್ಷಿ ಅವರ ನಿರ್ಧಾರವು ಬಾಲಿವುಡ್‌ನಲ್ಲಿ ಇಂದಿಗೂ ಹೆಚ್ಚು ಚರ್ಚಿಸಲ್ಪಡುವ ವಿಷಯಗಳಲ್ಲಿ ಒಂದಾಗಿದೆ. 1995ರಲ್ಲಿ ಉದ್ಯಮಿ ಹರೀಶ್ ಮೈಸೂರು ಅವರನ್ನು ವಿವಾಹವಾದ ನಂತರ, ಮೀನಾಕ್ಷಿ ಅಮೆರಿಕಕ್ಕೆ ವಲಸೆ ಹೋಗಿದ್ದರು. ಆ ಸಮಯದಲ್ಲಿ ಹಿಂದಿ ಚಿತ್ರರಂಗದ ಮುಂಚೂಣಿ ನಟಿಯಾಗಿದ್ದರೂ, ಅವರು ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದಿದ್ದರು.

ವೀಡಿಯೊದಲ್ಲಿ ಮಾತನಾಡಿದ ಅವರು, ‘ನನ್ನ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ಗೆ ಆತ್ಮೀಯ ನಮಸ್ಕಾರಗಳು. ಇಂದು ನಿಮ್ಮ ಪ್ರೀತಿ, ಪ್ರೋತ್ಸಾಹ ಮತ್ತು ನಿರಂತರ ಬೆಂಬಲಕ್ಕಾಗಿ ನಾನು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಬರೋಬ್ಬರಿ 30 ವರ್ಷಗಳ ನಂತರ, ನಾನು ನನ್ನ ಕರ್ಮಭೂಮಿಯಾದ ಭಾರತದ ಮುಂಬೈಗೆ ಮರಳಿದ್ದೇನೆ. ಭರವಸೆ, ಉತ್ಸಾಹ ಮತ್ತು ಸಕಾರಾತ್ಮಕತೆಯೊಂದಿಗೆ ಮತ್ತೊಮ್ಮೆ ಮನರಂಜನಾ ಕ್ಷೇತ್ರಕ್ಕೆ ಹೆಜ್ಜೆ ಇಟ್ಟಿದ್ದೇನೆ’ ಎಂದು ಹೇಳಿದ್ದಾರೆ.

ತಮ್ಮ ಸೃಜನಶೀಲತೆಗೆ ಸವಾಲು ನೀಡುವ ಮತ್ತು ನಟನೆಯ ಹೊಸ ಆಯಾಮಗಳನ್ನು ಅನ್ವೇಷಿಸಲು ಸಹಾಯ ಮಾಡುವ ಪಾತ್ರಗಳನ್ನು ಮಾಡಲು ಬಯಸುವುದಾಗಿ ಅವರು ತಿಳಿಸಿದ್ದಾರೆ. ‘ಅದು ಮುಖ್ಯ ಪಾತ್ರವಾಗಿರಲಿ, ಪೋಷಕ ಪಾತ್ರವಾಗಿರಲಿ ಅಥವಾ ಸಣ್ಣ ಶೋ ಆಗಿರಲಿ, ನಾನು ಅರ್ಥಪೂರ್ಣ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದೇನೆ. ಅದು ಪ್ರಭಾವಶಾಲಿ ಅಭಿನಯವಾಗಿದ್ದರೆ ಸಾಕು, ಪಾತ್ರ ಯಾವುದಾದರೂ ಪರವಾಗಿಲ್ಲ. ಸಿನಿಮಾ ಅಥವಾ ಒಟಿಟಿ ಶೋಗಳು ಯಾವುದಾದರೂ ಸರಿ’ ಎಂದು ಅವರು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸೆಲೆಬ್ರಿಟಿಗಳ ಅಹಂಕಾರಕ್ಕೆ ತೆರೆ ಹಾಕಲು ನಿರ್ಧರಿಸಿದ ಬಾಲಿವುಡ್​ನ ಖ್ಯಾತ ಹೇರ್​​​ಸ್ಟೈಲಿಸ್ಟ್

‘ಹಲವು ಆಫರ್‌ಗಳು ನನ್ನ ಬಳಿ ಬಂದಿದ್ದವು ನಿಜ, ಆದರೆ ಅವುಗಳಲ್ಲಿ ಕೆಲವು ಕ್ರಿಯೇಟಿವ್ ಆಗಿ ಅಷ್ಟೊಂದು ಆಕರ್ಷಕವಾಗಿರಲಿಲ್ಲ ಮತ್ತು ಕೆಲವು ಕಾರಣಾಂತರಗಳಿಂದ ಕಾರ್ಯರೂಪಕ್ಕೆ ಬರಲಿಲ್ಲ’ ಎಂದು ಮೀನಾಕ್ಷಿ ಶೇಷಾದ್ರಿ ಹೇಳಿದ್ದಾರೆ. ಸದ್ಯಕ್ಕೆ ತಾವು ಯಾವುದೇ ಟ್ಯಾಲೆಂಟ್ ಏಜೆನ್ಸಿಯ ಬೆಂಬಲವಿಲ್ಲದೆ ಸ್ವತಂತ್ರವಾಗಿ ಕಮ್‌ಬ್ಯಾಕ್ ಜರ್ನಿಯನ್ನು ನಿಭಾಯಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಕೈ ಕಾದಾಟ ದಿಲ್ಲಿಗೆ ಶಿಫ್ಟ್: ಸಿಎಂ-ಡಿಸಿಎಂ ಲೆಕ್ಕವೇ ಬೇರೆ, ಶಾಸಕರ ಲೆಕ್ಕಾಚಾರವೇ ಇನ್ನೊಂದು – Kannada News | Karnataka power tussle And cabinet reshuffle Row: CM Siddaramaiah, DK Shivkumar And others Some MLAs fly Delhi

ಬೆಂಗಳೂರು, (ಮೇ 25): ಸಿಎಂ ಹಾಗೂ ಡಿಸಿಎಂಗೆ ಹೈಕಮಾಂಡ್ (congress high command) ಬುಲಾವ್ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳಲ್ಲಿ ಚಟುವಟಿಕೆ ಗರಿಗೆದರಿದೆ.ಸಿಎಂ ಸಿದ್ದರಾಮಯ್ಯ, (Siddaramaiah) ಡಿಸಿಎಂ ಡಿಕೆ ಶಿವಕುಮಾರ್​ ಗೆ (DK Shivakumar) ಇರೋ ಲೆಕ್ಕಾಚಾರ ಬೇರೆ. ಆದ್ರೆ ಶಾಸಕರಿಗೆ ಇರೋ ಲೆಕ್ಕಾಚಾರವೇ ಬೇರೆ ಆಗಿದೆ. ನಾಯಕತ್ವ ಚರ್ಚೆ ಆಗಲಿ ಬಿಡಲಿ, ಸಚಿವ ಸಂಪುಟ ಪುನಾರಚನೆಗೆ (cabinet reshuffle) ಅವಕಾಶ ಕೊಡಬಹುದು ಅನ್ನೋ ಲೆಕ್ಕಾಚಾರದಲ್ಲಿ ಸದ್ಯ ಸಚಿವಾಕಾಂಕ್ಷಿಗಳು ಇದ್ದಾರೆ. ಸಂಪುಟ ಪುನಾರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡೋ ಲೆಕ್ಕಾಚಾರದಲ್ಲಿದ್ದಾರೆ. ಹೀಗಾಗಿ 20ಕ್ಕೂ ಹೆಚ್ಚು ಶಾಸಕರು ದೆಹಲಿಗೆ ಹಾರಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಮೀಟಿಂಗ್

ಹೈಕಮಾಂಡ್​ ಏನೂ ಸಿಎಂ, ಡಿಸಿಎಂಗೆ ಸುಖಾಸುಮ್ಮನೆ ಬುಲಾವ್ ಕೊಟ್ಟಿಲ್ಲ. ಕೆಲ ದಿನಗಳ ಹಿಂದೆಯೇ ದೆಹಲಿಯಲ್ಲಿ ಹೈಕಮಾಂಡ್​ ನಾಯಕರು ಹೈವೋಲ್ಟೇಜ್ ಸಭೆ ಮಾಡಿದ್ದಾರೆ. ಕರ್ನಾಟಕದ ವಿಚಾರವಾಗಿಯೇ ಚರ್ಚಿಸೋಕೆ ಅಂತಾನೇ ರಾಹುಲ್ ಗಾಂಧಿ, ವೇಣುಗೋಪಾಲ್ ಸಭೆ ಕರೆದಿದ್ರು. ರಾಜ್ಯ ರಾಜಕಾರಣದ ಬಗ್ಗೆ ಸಾಧಕ ಭಾದಕಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಚರ್ಚೆ ಮಾಡಿಯೇ ಸಿಎಂ ಸಿದ್ದರಾಮಯ್ಯಗೆ ಬುಲಾವ್ ಕೊಡಲಾಗಿದೆ.

ಇದನ್ನೋ ನೋಡಿ: ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್ ಹಿಂದಿದೆ ರೋಚಕ ಸ್ಟೋರಿ

ಮಂಗಳವಾರ ಬೆಳಗ್ಗೆ 11 ಗಂಟೆಗೆ ಹೈಕಮಾಂಡ್ ನಾಯಕರು ಹೈವೋಲ್ಟೇಜ್ ಮೀಟಿಂಗ್ ನಡೆಸಲಿದ್ದಾರೆ. ದೆಹಲಿಯಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ನಡೆಯಲಿದ್ದಯ, ಈ ಸಭೆಯಲ್ಲಿ AICC ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಭಾಗಿ ಸಾಧ್ಯತೆ ಇದೆ. ಸಭೆ ಬಳಿಕ ವಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿ ಸಾಧ್ಯತೆಯೂ ಇದೆ. ಭೇಟಿ ವೇಳೆ ಸಂಪುಟ ಪುನಾರಚನೆಗೆ ಬಗ್ಗೆ ಪ್ರಸ್ತಾಪ ಸಾಧ್ಯತೆ ಇದೆ.

ಸಿಎಂ,ಡಿಸಿಎಂಗೆ ಮಾತ್ರವಲ್ಲ ಶಾಸಕರಿಗೂ ಮುಖ್ಯವಾದ ಸಭೆ

ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಶಾಸಕರಾದ ನರೇಂದ್ರ ಸ್ವಾಮಿ, ರಾಘವೇಂದ್ರ ಹಿಟ್ನಾಳ್, ಬಸವರಾಜ ಶಿವಣ್ಣನವರ, ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್, MLCಗಳಾದ ಶರಣಗೌಡ ಬೈಯ್ಯಾಪುರ, ವಸಂತ್ ಕುಮಾರ್ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರು ದೆಹಲಿಗೆ ಹಾರಿದ್ದಾರೆ. ಸಚಿವ ಸಂಪುಟ ಪುನಾರಚನೆ ಆಗಬೇಕು ಎನ್ನುವ ಆಗ್ರಹ ಈಗಿನದ್ದು ಅಲ್ಲವೇ ಅಲ್ಲ. ಕಳೆದ 6 ತಿಂಗಳಿನಿಂದಲೂ ಆಗ್ರಹ ಕೇಳಿ ಬರ್ತಿದೆ. ಕೇವಲ ಸಿಎಂ ಭವಿಷ್ಯ ಮಾತ್ರ ಇಲ್ಲಿ ಮುಖ್ಯ ಆಗಿಲ್ಲ. ಸಚಿವ ಸಂಪುಟ ಪುನಾರಚನೆಯೂ ಮುಖ್ಯ ಆಗಿದೆ. ಹೀಗಾಗಿಯೇ ಸಿಎಂ ಜೊತೆ ಶಾಸಕರು ದೆಹಲಿಗೆ ತೆರಳಿದ್ದಾರೆ. ಇದರಿಂದ ನಾಳೆ (ಮೇ 26) ನಡೆಯೋ ಸಭೆ ಸಿಎಂ ದೃಷ್ಟಿಯಿಂದ ಎಷ್ಟು ಮಹತ್ವ ಆಗಿದ್ಯೋ? ಶಾಸಕರ ದೃಷ್ಟಿಯಿಂದಲೂ ಅಷ್ಟೇ ಮಹತ್ವ ಆಗಿದೆ.
.
ಇನ್ನೆರಡು ವರ್ಷಗಳೇ ಮಾತ್ರ ಇರುವುದು. ಈಗಲೇ ಸಚಿವ ಸ್ಥಾನ ಕೊಟ್ರೆ ಒಳ್ಳೆಯದು, ಮುಂದೆ ಕೊಟ್ರೆ ಪ್ರಯೋಜನ ಏನು ಅಂತಾ ಅಸಮಾಧಾನ ಹೊರಹಾಕುತ್ತಲೇ ದೆಹಲಿಗೆ ಹೋಗಿದ್ದಾರೆ. ಇದರಿಂದ ದೆಹಲಿಯಲ್ಲಿ ಮಂಗಳವಾರ ನಡೆಯೋ ಸಭೆ ಸಿಎಂ ದೃಷ್ಟಿಯಿಂದ ಎಷ್ಟು ಮಹತ್ವ ಆಗಿದ್ಯೋ? ಶಾಸಕರ ದೃಷ್ಟಿಯಿಂದಲೂ ಅಷ್ಟೇ ಮಹತ್ವ ಆಗಿದ್ದು, ಅಂತಿಮವಾಗಿ ಏನಾಗಲಿದೆ ಎನ್ನುವ ಕುತೂಹಲ ಕೆರಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಉತ್ತರ ಪ್ರದೇಶದ ಬುಲಂದ್‌ಶಹರ್ ಕಾರ್ಖಾನೆಯಲ್ಲಿ ಬೆಂಕಿ ದುರಂತ

ಗಾಜಿಯಾಬಾದ್, ಮೇ 25: ಉತ್ತರ ಪ್ರದೇಶದ ಬುಲಂದ್‌ಶಹರ್ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ (Fire Accident) ಸಂಭವಿಸಿದೆ. ಈ ಘಟನೆಯಲ್ಲಿ ಯಾವುದೇ ಸಾವುನೋವುಗಳು ಅಥವಾ ಗಾಯಗಳ ವರದಿಯಾಗಿಲ್ಲ. ಕಾರ್ಖಾನೆಯ ಆವರಣದ ಒಳಗಿನಿಂದ ಅಗ್ನಿಶಾಮಕ ದಳದ ಪ್ರಯತ್ನಗಳು ನಡೆಯುತ್ತಿವೆ. ಈ ಆವರಣದಲ್ಲಿ ಯಾರೂ ಸಿಲುಕಿಕೊಂಡಿಲ್ಲ. ಎಲ್ಲರೂ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ, ಭಾರೀ ದುರಂತವೊಂದು ತಪ್ಪಿದಂತಾಗಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣವನ್ನು ಪತ್ತೆಹಚ್ಚಲು ತನಿಖೆಗೆ ಆದೇಶಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ನಡೆದಿದ್ದೇಗೆ? ಮಾಡಿದ್ಯಾರು? ಇಲ್ಲಿದೆ ಪ್ರಕರಣದ ಆಳ-ಅಗಲ – Kannada News | Karnataka’s Biggest Digital Arrest Case Explained: Who Was Behind the Massive Cyber Scam

ಡಿಜಿಟಲ್ ಅರೆಸ್ಟ್ (ಎಐ ಚಿತ್ರ)Image Credit source: tv9 kannada

ಬೆಂಗಳೂರು, ಮೇ 25: ಕರ್ನಾಟಕದಲ್ಲಿ ನಡೆದಿದ್ದ ಅತಿದೊಡ್ಡ ಡಿಜಿಟಲ್ ಅರೆಸ್ಟ್ (Digital Arrest) ಪ್ರಕರಣವನ್ನು ಸದ್ಯ ಬೆಂಗಳೂರು ಸೈಬರ್ ಕಮಾಂಡ್ ಪೊಲೀಸರು ಭೇದಿಸಿದ್ದಾರೆ. ರಾಜ್ಯದಲ್ಲೂ ಆ್ಯಕ್ಟಿವ್ ಆಗಿದ್ದ ಉತ್ತರ ಭಾರತದ ಸೈಬರ್ ವಂಚಕರ ಜಾಲವನ್ನು ಪತ್ತೆ ಹಚ್ಚುವ ಮೂಲಕ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಮುಂಬೈ ಮೂಲದ ಎ.ಮಲ್ಲಿಕ್, ತಮಿಳುನಾಡು ಮೂಲದ ಶಿವಗ್ಯಾನಂ, ಗುಜರಾತ್ ಮೂಲದ ಪಾಲಕ್ ಬೈ ಪಟೇಲ್, ಮೊಹಮ್ಮದ್ ಹಮೀದ್ ಮತ್ತು ದೆಹಲಿ ಮೂಲದ ಓಂ ಪ್ರಕಾಶ್ ಸೇರಿದಂತೆ 6 ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ 1 ಕೋಟಿ 46 ಲಕ್ಷ ರೂ ಹಣ ವಶಕ್ಕೆ ಪಡೆಯಲಾಗಿದೆ.

ಮುಖ್ಯಾಂಶಗಳು

  • ರಾಜ್ಯದಲ್ಲೂ ಆ್ಯಕ್ಟಿವ್ ಆಗಿದ್ದ ಉತ್ತರ ಭಾರತದ ಸೈಬರ್ ವಂಚಕರ ಜಾಲ
  • ಗುರುಗ್ರಾಮದಿಂದ ಕಾರ್ಯಾಚರಣೆ ನಡೆಸುತ್ತಿದ್ದ ಆರೋಪಿಗಳು
  • ವೃದ್ಧರು, ನಿವೃತ್ತ ಅಧಿಕಾರಿಗಳು ಮತ್ತು ಶ್ರೀಮಂತರೇ ಟಾರ್ಗೆಟ್

ಡಿಜಿಟಲ್ ಅರೆಸ್ಟ್ ನಡೆದಿದ್ದೇಗೆ, ಮಾಡಿದ್ಯಾರು?

ಬಂಧಿತ ಆರೋಪಿಗಳು ಹರಿಯಾಣದ ಗುರುಗ್ರಾಮದಲ್ಲಿ ಕಚೇರಿ ಮಾಡಿಕೊಂಡು ದೇಶದ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ವೃದ್ಧರು, ನಿವೃತ್ತ ಅಧಿಕಾರಿಗಳು ಮತ್ತು ಶ್ರೀಮಂತರನ್ನು ಟಾರ್ಗೆಟ್ ಮಾಡುತ್ತಿದ್ದರು. ಇದೇ ರೀತಿ ದುಬೈನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿ ನಿವೃತ್ತಿಯಾಗಿದ್ದ ಬೆಂಗಳೂರಿನ ಶಿವಾಜಿನಗರ ನಿವಾಸಿ 74 ವರ್ಷದ ವಯೋವೃದ್ಧೆ ಲಕ್ಷ್ಮೀ ರಾಮಮೂರ್ತಿ ಅವರನ್ನು ಗ್ಯಾಂಗ್​​ ಡಿಜಿಟಲ್ ಅರೆಸ್ಟ್​ ಮಾಡಿದೆ.

ಇದನ್ನೂ ಓದಿ: ಕರ್ನಾಟಕದ ಅತಿದೊಡ್ಡ ಡಿಜಿಟಲ್ ಅರೆಸ್ಟ್ ಕೇಸ್​​​ ಭೇದಿಸಿದ ಖಾಕಿ​​​: 6 ಆರೋಪಿಗಳ ಬಂಧನ

ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವೃದ್ದೆಗೆ ವಿಡಿಯೋ ಕರೆ ಮಾಡಿದ ಗ್ಯಾಂಗ್​​​, ಅಕ್ರಮ ಹಣ ವರ್ಗಾವಣೆ ಮಾಡಿದ್ದೀರಾ, ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ, ಅಕೌಂಟ್ ಮನಿ ಲ್ಯಾಂಡರಿಂಗ್‌ಗೆ ಬಳಕೆ ಆಗಿದೆ. ನೀವು ಯಾರ ಜೊತೆಯೂ ಮಾತನಾಡಬಾರದು ಎಂದಿದ್ದಾರೆ. ಅಷ್ಟೇ ಅಲ್ಲದೆ ಎಲ್ಲಾ ಹಣವನ್ನು ಆರ್​ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಬರೋಬ್ಬರಿ 24 ಕೋಟಿ ರೂ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಖದೀಮರು ಮತ್ತಷ್ಟು ಹಣಕ್ಕಾಗಿ ಪೀಡಿಸಿದ್ದಾರೆ. ಹೆದರಿದ ಲಕ್ಷ್ಮೀ ರಾಮಮೂರ್ತಿ ಅವರು ಮನೆಯಲ್ಲಿದ್ದ ಸುಮಾರು 1 ಕೆಜಿ 300 ಗ್ರಾಂ ಚಿನ್ನಾಭರಣವನ್ನು ಅಡಮಾನ ಇಟ್ಟು ಹಣ ಪಡೆಯಲು ಕಂಟೋನ್ಮೆಂಟ್ ಬ್ರಾಂಚ್‌ನ ಐಸಿಐಸಿಐ (ICICI) ಬ್ಯಾಂಕ್‌ಗೆ ಬಂದಿದ್ದಾರೆ. ಬ್ಯಾಂಕ್ ಮ್ಯಾನೇಜರ್‌ಗೆ ಅನುಮಾನ ಬಂದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ತಾವು ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿರುವುದಾಗಿ ಬಾಯ್ಬಿಟ್ಟಿದ್ದಾರೆ.

ಸೈಬರ್ ಕಮಾಂಡ್ ಡಿಜಿಪಿ ಪ್ರಣವ್ ಮೊಹಾಂತಿ ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ಟಿವಿ9ಗೆ ಸೈಬರ್ ಕಮಾಂಡ್ ಡಿಜಿಪಿ ಪ್ರಣವ್ ಮೊಹಾಂತಿ ಪ್ರತಿಕ್ರಿಯಿಸಿದ್ದು, ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಗೆ 24 ಕೋಟಿ ರೂ ವಂಚನೆ ಪ್ರಕರಣ ಬೆಂಗಳೂರು ಸಿಟಿ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿತ್ತು. ಈ ಸಂಬಂಧ ಇದುವರೆಗೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ಶಿವಗ್ಯಾನಂ ಈ ಹಿಂದೆ 4 ಕೇಸ್​ನಲ್ಲಿ ಭಾಗಿಯಾಗಿದ್ದಾನೆ. ಪಾಲಕ್ ಬೈ ಪಟೇಲ್ ಈ ಹಿಂದೆ 4 ಸೈಬರ್ ಕೇಸ್​ನಲ್ಲಿ ಭಾಗಿಯಾಗಿದ್ದಾನೆ. ಆರೋಪಿಗಳ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ. ವೃದ್ಧೆಗೆ 24 ಕೋಟಿ ರೂ ವಂಚನೆ ಪ್ರಕರಣದ ಮಾಸ್ಟರ್ ಮೈಂಡ್ ಪತ್ತೆಯಾಗಿಲ್ಲ. ಆರೋಪಿಗಳಿಂದ 1 ಕೋಟಿ 46 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ ಎಂದರು.

ಇದನ್ನೂ ಓದಿ: ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ ವೃದ್ಧೆಯಿಂದ 24 ಕೋಟಿ ರೂ. ಸುಲಿಗೆ: ಬ್ಯಾಂಕ್​​ ಮ್ಯಾನೇಜರ್​​ ಸಮಯಪ್ರಜ್ಞೆಯಿಂದ ಪ್ರಕರಣ ಬೆಳಕಿಗೆ

ಸೈಬರ್ ವಂಚಕರ ಖಾತೆಗೆ 23 ಖಾತೆಗಳಿಂದ ಹಣ ವರ್ಗಾವಣೆಯಾಗಿದೆ. ಸಂತ್ರಸ್ತರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿದ್ದು ಮತ್ತು ಆರೋಪಿಗಳ ಸುಳಿವು ಸಿಗಲಿದೆ. ಪ್ರಕರಣದಲ್ಲಿ ಶೀಘ್ರದಲ್ಲೇ ಮತ್ತಷ್ಟು ಆರೋಪಿಗಳನ್ನು ಬಂಧಿಸಲಾಗುವುದು ಎಂದು ಸೈಬರ್ ಕಮಾಂಡ್ ಡಿಜಿಪಿ ಪ್ರಣವ್ ಮೊಹಾಂತಿ ಹೇಳಿದ್ದಾರೆ.

ವರದಿ: ವಿಕಾಸ್ Tv9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪ್ರಪೋಸಲ್ ನಿರಾಕರಿಸಿದ್ದಕ್ಕೆ ಯುವತಿಯ ಮನೆ ಮೇಲೆ ಪ್ರೇಮಿಯಿಂದ ಬಾಂಬ್ ದಾಳಿ – Kannada News | Tamil Nadu group hurled bombs at woman house in Coimbatore know why

ಕೊಯಮತ್ತೂರು, ಮೇ 25: ತಮಿಳುನಾಡಿನ ಕೊಯಮತ್ತೂರಿನಲ್ಲಿ (Coimbatore) ಯುವತಿಯೊಬ್ಬರು ಪುರುಷನ ಪ್ರಪೋಸಲ್ ನಿರಾಕರಿಸಿದ ಕಾರಣದಿಂದ ಆತ ತನ್ನ ಗ್ಯಾಂಗ್ ಜೊತೆ ಸೇರಿ ಆಕೆಯ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ. ಆ ಯುವತಿ ಸ್ವಲ್ಪ ಸಮಯದಿಂದ ಅವನೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದರು. ಆದರೆ ಇತ್ತೀಚೆಗೆ ಅವನ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರಿಂದ ಆಕೆ ಅವನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸಿದರು. ಇದು ಆ ವ್ಯಕ್ತಿಯನ್ನು ಕೆರಳಿಸಿತು.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಆ ಯುವತಿ ಕಾಳಿಕ್ಕನೈಕ್ಕನ್‌ಪಾಳ್ಯಂನಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಎರಡನೇ ವರ್ಷದ ವಿದ್ಯಾರ್ಥಿನಿ. ಅವರು ಚೆನ್ನೈನ ಕಾರ್ತಿ ಎಂಬ ವ್ಯಕ್ತಿಯೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸ್ನೇಹ ಬೆಳೆಸಿಕೊಂಡಿದ್ದರು. ಬಳಿಕ ಅವರಿಬ್ಬರೂ ಪ್ರೀತಿಸತೊಡಗಿದ್ದರು. ಆದರೆ, ಇತ್ತೀಚೆಗೆ ಆ ಯುವತಿಗೆ ಕಾರ್ತಿ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದು ಗೊತ್ತಾಯಿತು. ಹೀಗಾಗಿ ಆಕೆ ತಕ್ಷಣವೇ ಅವನೊಂದಿಗಿನ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳಲು ನಿರ್ಧರಿಸಿದರು. ಇದರಿಂದ ಕೋಪಗೊಂಡ ಕಾರ್ತಿ ತನ್ನ ಸ್ನೇಹಿತರೊಂದಿಗೆ ಆಕೆಯ ಮನೆಗೆ ಹೋಗಿ ಪೆಟ್ರೋಲ್ ಬಾಂಬ್‌ಗಳನ್ನು ಎಸೆದು ಪರಾರಿಯಾಗಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ನಾನದ ನೀರಿಗೆ ಚಿಟಿಕೆ ಅರಶಿನ ಸೇರಿಸುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ನೋಡಿ – Kannada News | Know the benefits of bathing in water mixed with a pinch of turmeric

ಅರಶಿನವನ್ನು (turmeric) ಬಹಳ ಹಿಂದಿನ ಕಾಲದಿಂದಲೂ ಅಡುಗೆಯಲ್ಲಿ ಬಳಸಲಾಗುತ್ತದೆ. ಇದಲ್ಲದೆ ತ್ವಚೆಯ ಆರೈಕೆಯಲ್ಲೂ ಅರಶಿನವನ್ನು ಬಳಸಲಾಗುತ್ತದೆ. ಇದರ ಅಂತರ್ಗತ ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರನಾಶಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಚರ್ಮವನ್ನು ಸ್ವಚ್ಛವಾಗಿಡಲು ಮತ್ತು ತುರಿಕೆ, ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ.  ಇದಲ್ಲದೆ ಅರಿಶಿನ ನೀರಿನಿಂದ ಸ್ನಾನ ಮಾಡುವುದರಿಂದಲೂ ಹಲವು ಪ್ರಯೋಜನಗಳಿವೆ. ಆಯುರ್ವೇದದಲ್ಲಿ, ಅರಶಿನ ಬೆರೆಸಿದ ನೀರಿನಿಂದ ಸ್ನಾನ ಮಾಡುವುದರಿಂದ ದೇಹ ಮತ್ತು ಚರ್ಮ ಎರಡಕ್ಕೂ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅರಿಶಿನದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರನಾಶಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಚರ್ಮವನ್ನು ವಿವಿಧ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಒಟ್ಟಾರೆಯಾಗಿ ಅರಶಿನ ಬೆರೆಸಿದ ನೀರಿನಿಂದ ಸ್ನಾನ ಮಾಡುವುದರಿಂದ ಲಭಿಸುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.

ಅರಿಶಿನ ಬೆರೆಸಿದ ನೀರಿನಿಂದ ಸ್ನಾನ ಮಾಡುವುದರಿಂದ ಲಭಿಸುವ ಪ್ರಯೋಜನಗಳು:

ಚರ್ಮವನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿರಿಸುತ್ತದೆ: ಅರಿಶಿನವು ಚರ್ಮದ ಮೇಲೆ ಸಂಗ್ರಹವಾಗಿರುವ ಕೊಳಕು ಮತ್ತು ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಚರ್ಮವನ್ನು ಸ್ವಚ್ಛ ಮತ್ತು ತಾಜಾವಾಗಿ ಕಾಣುವಂತೆ ಮಾಡುತ್ತದೆ.

ಮೊಡವೆ ಮತ್ತು ಕಲೆಗಳನ್ನು ನಿವಾರಿಸುತ್ತದೆ: ಅರಿಶಿನವು ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದಲ್ಲದೆ, ಅರಿಶಿನವು ಉರಿಯೂತವನ್ನು, ಮೊಡವೆಗಳಿಂದ ಉಂಟಾಗುವ ಕೆಂಪು ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಅರಿಶಿನದಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮದ ಟೋನ್ ಅನ್ನು ಸಮಗೊಳಿಸಲು ಸಹಾಯ ಮಾಡುತ್ತದೆ.

ಚರ್ಮವನ್ನು ತೇವಗೊಳಿಸುತ್ತದೆ: ಅರಿಶಿನವು ಚರ್ಮವನ್ನು ತೇವಗೊಳಿಸುತ್ತದೆ ಮತ್ತು ಒಣಗದಂತೆ ತಡೆಯುತ್ತದೆ. ಇದು ಚರ್ಮದಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ, ಚರ್ಮವನ್ನು ಮೃದು ಮತ್ತು ಮೃದುವಾಗಿಸುತ್ತದೆ.

ಗಾಯಗಳನ್ನು ಗುಣಪಡಿಸಲು ಸಹಕಾರಿ: ಚರ್ಮದ ಗಾಯಗಳನ್ನು ಗುಣಪಡಿಸುವಲ್ಲಿ ಅರಿಶಿನ ನೀರು ತುಂಬಾ ಉಪಯುಕ್ತವಾಗಿದೆ. ಅರಶಿನ ನೀರಿನಿಂದ ನಿಯಮಿತವಾಗಿ ಸ್ನಾನ ಮಾಡುವುದರಿಂದ ಗಾಯಗಳು ವೇಗವಾಗಿ ಗುಣವಾಗಲು ಸಹಾಯ ಮಾಡುತ್ತದೆ.

ತುರಿಕೆ ಮತ್ತು ಸೋಂಕುಗಳಿಂದ ಪರಿಹಾರ: ನೀವು ತುರಿಕೆ, ದದ್ದುಗಳು ಅಥವಾ ಶಿಲೀಂಧ್ರಗಳ ಸೋಂಕಿನಿಂದ ಬಳಲುತ್ತಿದ್ದರೆ, ಸ್ನಾನದ ನೀರಿಗೆ ಚಿಟಿಕೆ ಅರಶಿನವನ್ನು ಬೆರೆಸಿ.

ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ: ಪ್ರತಿದಿನ ಅರಿಶಿನ ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮಕ್ಕೆ ಸೂಕ್ಷ್ಮವಾದ ಹೊಳಪು ಮತ್ತು ಕಾಂತಿ ಬರುತ್ತದೆ.

ದೇಹದ ವಾಸನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ: ಅರಿಶಿನದಲ್ಲಿರುವ ಗುಣಗಳು ದೇಹದ ವಾಸನೆಯನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಹೇರ್‌ ಫಾಲ್‌ ಸಮಸ್ಯೆಯಿಂದ ಮುಕ್ತಿ ಪಡೆಯಲು ತಲೆಸ್ನಾನಕ್ಕೂ ಮುನ್ನ ಕೂದಲಿಗೆ ಒಂದು ವಸ್ತುವನ್ನು ಹಚ್ಚಿ

ಅರಶಿನ ನೀರಿನ ಸರಿಯಾದ ಬಳಕೆಯ ವಿಧಾನ:

ಒಂದು ಬಕೆಟ್ ನೀರಿಗೆ ಸುಮಾರು ಒಂದು ಟೀ ಚಮಚ ಅರಿಶಿನ ಹಾಕಿದರೆ ಸಾಕು. ಮೊದಲು ಒಂದು ಬಕೆಟ್‌ನಲ್ಲಿ ಬೆಚ್ಚಗಿನ ಅಥವಾ ಉಗುರು ಬೆಚ್ಚಗಿನ ನೀರನ್ನು ತುಂಬಿಸಿ. ಆ ನೀರಿಗೆ ಚಿಟಿಕೆ ಅರಿಶಿನ ಸೇರಿಸಿ ಮತ್ತು ಅದನ್ನು ಚೆನ್ನಾಗಿ ಬೆರೆಸಿ. ನೀವು ಬಯಸಿದರೆ, ನೀವು ಸ್ವಲ್ಪ ರೋಸ್ ವಾಟರ್ ಅಥವಾ ಬೇವಿನ ನೀರನ್ನು ಕೂಡ ಸೇರಿಸಬಹುದು.

ಅರಿಶಿನ ನೀರನ್ನು ಬಳಸುವ ಮೊದಲು ಯಾವಾಗಲೂ ಸಣ್ಣ ಪ್ಯಾಚ್ ಟೆಸ್ಟ್‌ ಮಾಡಿ. ನಿಮಗೆ ಯಾವುದೇ ಕಿರಿಕಿರಿ ಅಥವಾ ಚರ್ಮದಲ್ಲಿ ಕೆಂಪು ಬಣ್ಣ ಕಾಣಿಸಿದರೆ ಇದರ ಬಳಕೆಯನ್ನು ನಿಲ್ಲಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಗಿಣಿ ದ್ವಿವೇದಿ ಹೊಸ ಸಿನಿಮಾಗೆ ಜಗ್ಗೇಶ್ ಮಕ್ಕಳ ನಿರ್ದೇಶನ; ಕೆ. ಮಂಜು ನಿರ್ಮಾಣ – Kannada News | Ragini Dwivedi new film Ragini IPS 2 announced Jaggesh sons will direct and K Manju Produce

ಕನ್ನಡ ಚಿತ್ರರಂಗದ ಖ್ಯಾತ ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ ಅವರ ಹೊಸ ಸಿನಿಮಾದ ಘೋಷಣೆ ಮಾಡಲಾಯಿತು. 12 ವರ್ಷಗಳ ಹಿಂದೆ ರಾಗಿಣಿ ನಾಯಕಿಯಾಗಿ ಅಭಿನಯಿಸಿದ್ದ ‘ರಾಗಿಣಿ ಐಪಿಎಸ್’ ಸಿನಿಮಾ ತೆರೆಕಂಡಿತ್ತು. ಈಗ ಆ ಸಿನಿಮಾಗೆ ಸೀಕ್ವೆಲ್ ಮಾಡಲು ತಯಾರಿ ನಡೆದಿದೆ. ಹೌದು, ‘ರಾಗಿಣಿ ಐಪಿಎಸ್ 2’ ಸಿನಿಮಾ ಅನೌನ್ಸ್ ಆಗಿದೆ. ಜಗ್ಗೇಶ್ (Jaggesh) ಪುತ್ರರಾದ ಗುರುರಾಜ್ ಮತ್ತು ಯತಿರಾಜ್ ಅವರು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ಕೆ. ಮಂಜು ಬಂಡವಾಳ ಹೂಡಲಿದ್ದಾರೆ.

ಜಗ್ಗೇಶ್ ರೀತಿಯೇ ಅವರ ಮಕ್ಕಳಾದ ಗುರುರಾಜ್, ಯತಿರಾಜ್ ಅವರು ನಟನೆಯಲ್ಲಿ ತೊಡಗಿಕೊಂಡಿದ್ದರು. ಆದರೆ ನಿರ್ದೇಶನದ ಬಗ್ಗೆಯೂ ಅವರಿಗೆ ಆಸಕ್ತಿ ಇದೆ. ‘ರಾಗಿಣಿ ಐಪಿಎಸ್ 2’ ಸಿನಿಮಾದ ಮೂಲಕ ನಿರ್ದೇಶಕರಾಗಿ ಅವರಿಬ್ಬರು ಹೊಸ ಅಧ್ಯಾಯ ಆರಂಭಿಸುತ್ತಿದ್ದಾರೆ. ರಾಗಿಣಿ ಅವರ ಹುಟ್ಟುಹಬ್ಬದ ದಿನವೇ ಈ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು.

ಕೆ. ಮಂಜು ಹಾಗೂ ‘ರಾಗಿಣಿ ವೆಂಚರ್ಸ್’ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ಬಗ್ಗೆ ಗುರುರಾಜ್ ಮತ್ತು ಯತಿರಾಜ್ ಮಾತನಾಡಿದರು. ‘ರಾಗಿಣಿ ಐಪಿಎಸ್ ಜನಪ್ರಿಯ ಸಿನಿಮಾ. ರಾಗಿಣಿ ಅವರ ಅಭಿನಯ ಅಭಿಮಾನಿಗಳಿಗೆ ಇಷ್ಟ ಆಗಿತ್ತು. ಈಗ ಆ ಸಿನಿಮಾದ ಮುಂದುವರಿದ ಭಾಗವಾಗಿ ‘ರಾಗಿಣಿ ಐಪಿಎಸ್ 2’ ಸಿನಿಮಾವನ್ನು ಶುರು ಮಾಡುತ್ತಿದ್ದೇವೆ. ನಾವಿಬ್ಬರು 2019ರಿಂದಲೂ ನಿರ್ದೇಶನಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇವೆ‌. ನಟನೆಯೇ ಬೇರೆ, ನಿರ್ದೇಶನವೇ ಬೇರೆ. ನಿರ್ದೇಶನಕ್ಕೆ ತಯಾರಿ ಅಗತ್ಯ’ ಎಂದು ಅವರು ಹೇಳಿದರು.

‘ರಾಗಿಣಿ ಅವರು ಈಗಾಗಲೇ ಜನಪ್ರಿಯ ನಟಿ ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿಯೂ ಹೌದು. ಅವರ ಸಿನಿಮಾವನ್ನು ನಿರ್ದೇಶನ ಮಾಡುವುದು ಅಷ್ಟು ಸುಲಭವಲ್ಲ. ರಾಗಿಣಿ ಐಪಿಎಸ್ ಸಿನಿಮಾದ ಮುಂದುವರಿದ ಭಾಗ ಎಂದರೆ, ಮೊದಲ ಸಿನಿಮಾದಲ್ಲಿ ಕಥೆ ಎಲ್ಲಿ ಕೊನೆಯಾಗಿತ್ತೋ ಈಗ ಅಲ್ಲಿಂದಲೇ ಮುಂದುವರಿಯುತ್ತದೆ’ ಎಂದು ಗುರುರಾಜ್ ಮತ್ತು ಯತಿರಾಜ್ ತಿಳಿಸಿದ್ದಾರೆ.

ಇದನ್ನೂ ಓದಿ: ಪಂಜಾಬಿ ಹಾಡು ಕೇಳುತ್ತಾ ಎಂಜಾಯ್ ಮಾಡಿದ ರಾಗಿಣಿ

ರಾಗಿಣಿ ದ್ವಿವೇದಿ ಅವರು ಮಾತನಾಡಿ, ‘ಕೆ.ಮಂಜು ಅವರು ನಿರ್ಮಾಣಕ್ಕೆ ಜೊತೆಯಾಗಿರುವುದು ಮತ್ತು ಜಗ್ಗೇಶ್ ಪುತ್ರರಾದ ಗುರುರಾಜ್, ಯತಿರಾಜ್ ನಿರ್ದೇಶನ ಮಾಡುತ್ತಿರುವುದು ನನಗೆ ಸಂತಸ ತಂದಿದೆ’ ಎಂದು ಹೇಳಿದರು. ‘ಈ ಸಿನಿಮಾದ ಕಥೆ ಬಹಳ ಚೆನ್ನಾಗಿದೆ. ಆದಷ್ಟು ಬೇಗ ಚಿತ್ರದ ಕೆಲಸಗಳಿಗೆ ಚಾಲನೆ ಸಿಗಲಿದೆ’ ಎಂದು ನಿರ್ಮಾಪಕ ಕೆ ಮಂಜು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದಲೈ ಲಾಮಾ ಉತ್ತರಾಧಿಕಾರಿ ನೇಮಕದಿಂದ ದೂರವಿರಿ; ಭಾರತಕ್ಕೆ ಚೀನಾ ಎಚ್ಚರಿಕೆ – Kannada News | China warns India to stay away from Dalai Lama succession issue ahead of Dharamshala ceremony

ನವದೆಹಲಿ, ಮೇ 25: ಟಿಬೆಟಿಯನ್ನರ ಆಧ್ಯಾತ್ಮಿಕ ನಾಯಕ ದಲೈ ಲಾಮಾ (Dalai Lama) ಅವರ ಉತ್ತರಾಧಿಕಾರಿ ನೇಮಕದ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚೀನಾ ಸರ್ಕಾರವು ಭಾರತಕ್ಕೆ ಕಠಿಣ ಎಚ್ಚರಿಕೆ ನೀಡಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಮಹತ್ವದ ಧಾರ್ಮಿಕ ಸಮಾರಂಭಕ್ಕೂ ಮುನ್ನ ಹೇಳಿಕೆ ಬಿಡುಗಡೆ ಮಾಡಿರುವ ಚೀನಾ, “ಭಾರತವು ದಲೈ ಲಾಮಾ ಅವರ ಉತ್ತರಾಧಿಕಾರಿ ನೇಮಕದ ವಿಷಯದಿಂದ ಸಂಪೂರ್ಣವಾಗಿ ದೂರವಿರಬೇಕು” ಎಂದು ಆಗ್ರಹಿಸಿದೆ.

ಚೀನಾದ ವಿದೇಶಾಂಗ ಸಚಿವಾಲಯವು ಜಾಗತಿಕ ಮಾಧ್ಯಮಗಳ ಮುಂದೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಭಾರತಕ್ಕೆ ಈ ಬಗ್ಗೆ ನೇರ ಸಂದೇಶವನ್ನು ರವಾನಿಸಿದೆ. ದಲೈ ಲಾಮಾ ಅವರ ಉತ್ತರಾಧಿಕಾರಿಯನ್ನು ಆರಿಸುವ ಪ್ರಕ್ರಿಯೆಯು ಸಂಪೂರ್ಣವಾಗಿ ಚೀನಾದ ಆಂತರಿಕ ಮತ್ತು ಕಾನೂನಾತ್ಮಕ ವಿಷಯವಾಗಿದೆ. ಇದರಲ್ಲಿ ಯಾವುದೇ ವಿದೇಶಿ ಶಕ್ತಿಗಳು ಅಥವಾ ನೆರೆಯ ರಾಷ್ಟ್ರಗಳು ಹಸ್ತಕ್ಷೇಪ ಮಾಡಬಾರದು ಎಂದು ಚೀನಾ ಭಾರತಕ್ಕೆ ಸೂಚಿಸಿದೆ.

ಇದನ್ನೂ ಓದಿ: ದಲೈ ಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಥೀಮ್ ಹಾಡು ಸಿದ್ಧಪಡಿಸಿದ ವಿಐಪಿ ಮೋಷನ್ ಪಿಕ್ಚರ್ಸ್

ದಲೈ ಲಾಮಾ ಅವರ ಉತ್ತರಾಧಿಕಾರಿ ನೇಮಕಾತಿಯು ಚೀನಾ ಸರ್ಕಾರದ ಕಟ್ಟುನಿಟ್ಟಾದ ಧಾರ್ಮಿಕ ನಿಯಮಗಳು, ಐತಿಹಾಸಿಕ ಸಂಪ್ರದಾಯಗಳು ಮತ್ತು ರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿಯೇ ನಡೆಯಬೇಕು ಎಂದು ಚೀನಾ ಪ್ರತಿಪಾದಿಸಿದೆ.

ಇದರ ನಡುವೆ, ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ವಾಸಿಸುತ್ತಿರುವ ದಲೈ ಲಾಮಾ ಮತ್ತು ಟಿಬೆಟಿಯನ್ ಬೌದ್ಧ ಧರ್ಮದ ಪ್ರಮುಖ ಧರ್ಮಗುರುಗಳು ಉನ್ನತ ಮಟ್ಟದ ಧಾರ್ಮಿಕ ಸಮಾರಂಭ ಮತ್ತು ಸಭೆಯನ್ನು ಆಯೋಜಿಸಿದ್ದಾರೆ. ಈ ಸಭೆಯಲ್ಲಿ ಮುಂದಿನ 15ನೇ ದಲೈ ಲಾಮಾ ಅವರ ಆಯ್ಕೆ ಪ್ರಕ್ರಿಯೆಯ ಕರಡು ನಿಯಮಗಳ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

ಈ ಸಮಾರಂಭಕ್ಕೆ ಭಾರತ ಸರ್ಕಾರದ ಪ್ರತಿನಿಧಿಗಳು ಅಥವಾ ಭಾರತೀಯ ನಾಯಕರು ಬೆಂಬಲ ನೀಡಬಹುದು ಎಂಬ ಆತಂಕ ಚೀನಾವನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ಈ ಸಮಾರಂಭಕ್ಕೂ ಮುನ್ನವೇ ಚೀನಾ ಭಾರತಕ್ಕೆ ರಾಜತಾಂತ್ರಿಕ ಒತ್ತಡ ಹೇರಲು ಯತ್ನಿಸುತ್ತಿದೆ.

ಇದನ್ನೂ ಓದಿ: ಇನ್ನೂ 30-40 ವರ್ಷ ಬದುಕುವ ಭರವಸೆಯಿದೆ; ಅನಾರೋಗ್ಯದ ವದಂತಿ ತಳ್ಳಿಹಾಕಿದ ದಲೈ ಲಾಮಾ

ಭಾರತದ ನಿಲುವು ಏನು?:

ಭಾರತ ಸರ್ಕಾರವು ಮೊದಲಿನಿಂದಲೂ 14ನೇ ದಲೈ ಲಾಮಾ ಅವರನ್ನು ಒಬ್ಬ ಅತ್ಯುನ್ನತ ಆಧ್ಯಾತ್ಮಿಕ ನಾಯಕರಾಗಿ ಗೌರವಿಸುತ್ತಾ ಬಂದಿದೆ ಮತ್ತು ಅವರಿಗೆ ಭಾರತದಲ್ಲಿ ಆಶ್ರಯ ನೀಡಿದೆ. ಉತ್ತರಾಧಿಕಾರದ ವಿಷಯದ ಬಗ್ಗೆ ಭಾರತವು ಪ್ರತಿಕ್ರಿಯಿಸಿದ್ದು, “ಇದು ಸಂಪೂರ್ಣವಾಗಿ ಧಾರ್ಮಿಕ ವಿಷಯವಾಗಿದ್ದು, ಟಿಬೆಟಿಯನ್ ಬೌದ್ಧ ಸಮುದಾಯ ಮತ್ತು ಸ್ವತಃ ದಲೈ ಲಾಮಾ ಅವರೇ ತಮ್ಮ ಸಂಪ್ರದಾಯದ ಪ್ರಕಾರ ನಿರ್ಧಾರ ಕೈಗೊಳ್ಳಬೇಕು” ಎಂಬ ಮೃದು ನಿಲುವನ್ನು ಹೊಂದಿದೆ. ಆದರೆ, ಚೀನಾ ಮಾತ್ರ ಭಾರತದಲ್ಲಿ ಟಿಬೆಟಿಯನ್ ದೇಶಭ್ರಷ್ಟ ಸರ್ಕಾರ ಚಟುವಟಿಕೆಯಿಂದ ಇರುವುದನ್ನು ಸತತವಾಗಿ ವಿರೋಧಿಸುತ್ತಾ ಬಂದಿದೆ.

ದಲೈ ಲಾಮಾ ಹೇಳಿದ್ದೇನು?:

ಧರ್ಮಶಾಲಾದಲ್ಲಿರುವ 14ನೇ ದಲೈ ಲಾಮಾ ಅವರು ಈ ಹಿಂದೆ ಮಾತನಾಡುತ್ತಾ, “ನನ್ನ ಉತ್ತರಾಧಿಕಾರಿಯನ್ನು ಚೀನಾ ಸರ್ಕಾರ ಆಯ್ಕೆ ಮಾಡಲು ಸಾಧ್ಯವಿಲ್ಲ. ನನ್ನ ಪುನರ್ಜನ್ಮವು ಮುಕ್ತ ದೇಶದಲ್ಲಿ (ಭಾರತ ಅಥವಾ ಮಂಗೋಲಿಯಾದಲ್ಲಿ) ಸಂಭವಿಸಲಿದೆಯೇ ಹೊರತು ಚೀನಾದ ನಿಯಂತ್ರಣದಲ್ಲಿರುವ ಟಿಬೆಟ್‌ನಲ್ಲಿ ಅಲ್ಲ” ಎಂದು ಸ್ಪಷ್ಟಪಡಿಸಿದ್ದರು.

ಆದರೆ, ಧರ್ಮಶಾಲಾ ಸಮಾರಂಭದ ಹಿನ್ನೆಲೆಯಲ್ಲಿ ಚೀನಾ ನೀಡಿರುವ ಈ ಹೇಳಿಕೆಯು ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ಮತ್ತಷ್ಟು ಉದ್ವಿಗ್ನತೆಯನ್ನು ಉಂಟುಮಾಡುವ ಸಾಧ್ಯತೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link