Category Archives: Blog

Your blog category

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತ‌ಎಣಿಕೆ: ನಾಪತ್ತೆಯಾಗಿದ್ದ ಮತಗಳು ಪತ್ತೆ; ಹೈರಾಣಾದ ಅಧಿಕಾರಿಗಳು – Kannada News | Chikmagalur Sringeri Recount: 9 Missing Ballots Found Amidst Intense Election Dispute

ಚಿಕ್ಕಮಗಳೂರು, ಮೇ 02: ನಗರದ IDSG ಕಾಲೇಜಿನಲ್ಲಿ ಇಂದು ಶೃಂಗೇರಿ ಕ್ಷೇತ್ರದ (Sringeri assembly constituency) ಅಂಚೆ ಮತಗಳ ಮರು ಮತ‌ ಎಣಿಕೆ ನಡೆದಿದೆ. ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಗೆಲುವಿನ ಫೈಟ್ ಶುರುವಾಗಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಮತಗಳ ಮರು ಎಣಿಕೆ ಪ್ರಕ್ರಿಯೆ ವೇಳೆ ಗೊಂದಲ ಉಂಟಾಗಿತ್ತು. ಏಕೆಂದರೆ 279 ತಿರಸ್ಕೃತ ಮತಗಳಲ್ಲಿ 270 ಮತ ಪತ್ರಗಳಷ್ಟೇ ಪತ್ತೆಯಾಗಿದ್ದವು. ಬಾಕಿ 9 ತಿರಸ್ಕೃತ ಮತ ಪತ್ರಗಳು ನಾಪತ್ತೆಯಾಗಿದ್ದು, ಅಧಿಕಾರಿಗಳ ಸತತ ಹುಡುಕಾಟದ ಬಳಿಕ ಕೊನೆಗೂ 9 ಮತಪತ್ರಗಳು ಪತ್ತೆಯಾಗಿವೆ.

ನ್ಯಾಯಾಲಯದ ಆದೇಶದ ಮೇರೆಗೆ ಒಟ್ಟು 1822 ಅಂಚೆ ಮತಗಳ ಮರು ಎಣಿಕೆಗೆ ಅಧಿಕಾರಿಗಳು ಮುಂದಾಗಿದ್ದರೂ, ಇದೀಗ ಮತಪತ್ರಗಳ ಪತ್ತೆ ಕಾರ್ಯವೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ನ್ಯಾಯಾಲಯದ ನಿರ್ದೇಶನದಂತೆ, 2023ರ ಚುನಾವಣೆಯಲ್ಲಿ ಚಲಾವಣೆಯಾಗಿದ್ದ 1822 ಅಂಚೆ ಮತಗಳನ್ನು ಮರು ಎಣಿಕೆ ಮಾಡಬೇಕಿತ್ತು. ಈ ಪೈಕಿ 279 ಮತಗಳನ್ನು ಅಂದು ತಿರಸ್ಕೃತ ಮತಗಳೆಂದು ಪರಿಗಣಿಸಲಾಗಿತ್ತು. ಆದರೆ, ಈಗ ಮರು ಎಣಿಕೆಯ ಸಂದರ್ಭದಲ್ಲಿ 20 ಟ್ರಂಕ್‌ಗಳಲ್ಲಿ ಭದ್ರಪಡಿಸಲಾಗಿದ್ದ ಮತಪತ್ರಗಳನ್ನು ಪರಿಶೀಲಿಸಿದಾಗ, 279 ತಿರಸ್ಕೃತ ಮತಗಳ ಪೈಕಿ ಕೇವಲ 270 ಮತಪತ್ರಗಳು ಮಾತ್ರ ಲಭ್ಯವಾಗಿದ್ದವು. ಉಳಿದ 9 ಮತಪತ್ರಗಳು ನಾಪತ್ತೆಯಾಗಿದ್ದವು. ಸತತ ಹುಡುಕಾಟದ ಬಳಿಕ ಇದೀಗ ಮತಪತ್ರಗಳು ಪತ್ತೆಯಾಗಿವೆ.

ಇದನ್ನೂ ಓದಿ: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಗೂ ಮೊದಲೇ ಮತಗಳಿರುವ ಬಾಕ್ಸ್​ ಸೀಲ್ ಓಪನ್ ಆರೋಪ

ಬೆಳಗ್ಗೆಯಿಂದಲೇ ಅಧಿಕಾರಿಗಳು ಈ 9 ನಾಪತ್ತೆಯಾದ ಮತಪತ್ರಗಳಿಗಾಗಿ ತೀವ್ರ ಶೋಧ ನಡೆಸಿದ್ದರು. ಮತಪತ್ರಗಳ ಪತ್ತೆಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದರು, ಇದರಿಂದಾಗಿ ಮರು ಎಣಿಕೆ ಕಾರ್ಯ ನಿಗದಿತ ಸಮಯಕ್ಕಿಂತಲೂ ತೀವ್ರ ವಿಳಂಬವಾಗಿತ್ತು, ಆದರೆ ಇದೀಗ ಪತ್ತೆಯಾಗಿದ್ದು, ಮರು ಮತ ಎಣಿಕೆ ಕಾರ್ಯ ನಡೆಯುತ್ತಿದೆ.

ಶಾಸಕ ಟಿ.ಡಿ.ರಾಜೇಗೌಡ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್​: ತನಿಖಾಧಿಕಾರಿಗೆ ಕೋರ್ಟ್ ತರಾಟೆ

ಟಿ.ಡಿ.ರಾಜೇಗೌಡ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್​​ಗೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಲ್ಲಿ ಇಂದು ವಿಚಾರಣೆ ಮಾಡಲಾಗಿದ್ದು, ತನಿಖಾಧಿಕಾರಿಯ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಪ್ರಕರಣದ ತನಿಖಾ ಸ್ಥಿತಿಗತಿ ವರದಿಯನ್ನು ಸಲ್ಲಿಸಿದ ತನಿಖಾಧಿಕಾರಿ, ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಪರಿಶೀಲನಾ ಹಂತದಲ್ಲಿದೆ. ಅಂತಿಮ ವರದಿ ಸಲ್ಲಿಸಲು ಮೇಲಧಿಕಾರಿಗಳ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಕೋರ್ಟಗೆಎ ತಿಳಿಸಿದರು.

ಇದನ್ನೂ ಓದಿ: ಮೇ 2ರಂದು ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ: ಹೈಕೋರ್ಟ್​​ ಆದೇಶದ ಬೆನ್ನಲ್ಲೇ ಸಕಲ ಸಿದ್ಧತೆ

ತನಿಖಾಧಿಕಾರಿ ಹೇಳಿಕೆಗೆ ಗರಂ ಆದ ಜಡ್ಜ್ ಸಂತೋಷ್ ಗಜಾನನ ಭಟ್, ತನಿಖೆಯ ಅಂತಿಮ ವರದಿ ಸಲ್ಲಿಸಲೂ ಮೇಲಧಿಕಾರಿಗಳ ಅನುಮತಿ ಬೇಕೇ? ಎಂದು ಪ್ರಶ್ನಿಸಿದರು. ಅಲ್ಲದೆ, ಸಿಆರ್‌ಪಿಸಿಯ ಯಾವ ನಿಯಮ ಅಥವಾ ಕಾನೂನಿನ ಅಡಿಯಲ್ಲಿ ಅಂತಿಮ ವರದಿ ಸಲ್ಲಿಸಲು ಮೇಲಧಿಕಾರಿಗಳ ಅನುಮತಿ ಕಡ್ಡಾಯವಾಗಿದೆ? ಎಂದು ಕೇಳುವ ಮೂಲಕ ತನಿಖಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ನ್ಯಾಯಾಲಯದ ಪ್ರಶ್ನೆಗೆ ಸೂಕ್ತ ವಿವರಣೆ ನೀಡುವಂತೆ ತನಿಖಾಧಿಕಾರಿಗೆ ಸೂಚನೆ ನೀಡಿರುವ ನ್ಯಾಯಪೀಠವು, ಪ್ರಕರಣದ ವಿಚಾರಣೆಯನ್ನು ಮೇ 4ಕ್ಕೆ ಮುಂದೂಡಿದೆ.

ಪ್ರಕರಣ ಹಿನ್ನೆಲೆ 

2023ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೀವರಾಜ್ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ ರಾಜೇಗೌಡ ಎದುರು 201 ಮತಗಳ ಅಂತರದಿಂದ ಸೋತಿದ್ದರು. ಒಟ್ಟು 1822 ಅಂಚೆ ಮತಗಳಲ್ಲಿ 279 ಮತಗಳು ತಿರಸ್ಕೃತವಾಗಿದ್ದವು. ಈ ಫಲಿತಾಂಶವನ್ನು ಪ್ರಶ್ನಿಸಿ ಡಿ.ಎನ್. ಜೀವರಾಜ್ ಮರು ಎಣಿಕೆಗೆ ಮನವಿ ಮಾಡಿದ್ದರು ಕೂಡ ಅಂದಿನ ಜಿಲ್ಲಾ ಚುನಾವಣಾಧಿಕಾರಿ ಅದನ್ನು ಪರಿಗಣಿಸದೆ ಟಿ.ಡಿ. ರಾಜೇಗೌಡರನ್ನು ವಿಜೇತರೆಂದು ಘೋಷಿಸಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಜೀವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅದರಂತೆ ಇಂದು ಮರು ಎಣಿಕೆ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:28 pm, Sat, 2 May 26

Source link

ಮದುವೆಯಾದ ವರ್ಷದೊಳಗೆ ಯುವತಿ ಅನುಮಾನಾಸ್ಪದ ಸಾವು: ಎದೆಯ ಮೇಲೆ ಯುವಕನ ಹೆಸರು ಹಚ್ಚೆ ಹಾಕಿಸಿಕೊಂಡಿದ್ದೇ ಕಾರಣವಾಯ್ತಾ? – Kannada News | Chikkaballapur Tragedy: Newlywed Woman Commits Suicide Over Tattoo Dispute and Dowry Harassment; Husband Arrested

ಪ್ರೇಮಾ ಹಾಗೂ ಶಿವಕುಮಾರ್Image Credit source: tv9

ಚಿಕ್ಕಬಳ್ಳಾಪುರ, ಮೇ 2: ಮದುವೆಯಾದ ಮೊದಲ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿದ್ದ ನವವಿವಾಹಿತೆಯೊಬ್ಬಳು ಗಂಡನ ಮನೆಯಲ್ಲಿ ನೇಣಿಗೆ ಶರಣಾಗಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆಯಲ್ಲಿ ನಡೆದಿದೆ. ಮೇ 15ಕ್ಕೆ ಮದುವೆಯ ಸಂಭ್ರಮ ಆಚರಿಸಬೇಕಿದ್ದ ಮನೆ ಈಗ ಸ್ಮಶಾನ ಸದೃಶವಾಗಿದೆ.

ಪ್ರಕರಣದ ಹಿನ್ನೆಲೆ

ಗೌರಿಬಿದನೂರು ಮೂಲದ ಶಕುಂತಲಾ ಎಂಬುವರ ಪುತ್ರಿ ಪ್ರೇಮಾ ಹಾಗೂ ಶಿಡ್ಲಘಟ್ಟದ ಜಂಗಮಕೋಟೆಯ ಶಿವಕುಮಾರ್ ಪರಸ್ಪರ ಸಂಬಂಧಿಕರು. ಪ್ರೇಮಾಳನ್ನು ಶಿವಕುಮಾರ್ ಕಾಡಿ ಬೇಡಿ ಮದುವೆಯಾಗಿದ್ದ. ಮದುವೆಯಾದ ಮೊದಲ ಮೂರು ತಿಂಗಳು ದಂಪತಿ ಸುಖವಾಗಿದ್ದರು. ಆದರೆ, ಆ ನಂತರ ಪ್ರೇಮಾ ಎದೆಯ ಮೇಲೆ ಯುವಕನೊಬ್ಬನ ಹೆಸರಿನ ಹಚ್ಚೆ (Tattoo) ಇರುವುದನ್ನು ಕಂಡು ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ. ಅದು ಕೇವಲ ಸ್ನೇಹಿತನ ಹೆಸರು ಎಂದು ಪ್ರೇಮಾ ಹೇಳಿದ್ದರೂ, ಶಿವಕುಮಾರ್ ಅದನ್ನು ಅನುಮಾನಿಸಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.

ವರದಕ್ಷಿಣೆ ಕಿರುಕುಳದ ಆರೋಪ

ಕೇವಲ ಹಚ್ಚೆ ವಿವಾದ ಮಾತ್ರವಲ್ಲದೆ, ವರದಕ್ಷಿಣೆ ತರುವಂತೆ ಶಿವಕುಮಾರ್ ಪ್ರೇಮಾ ಮೇಲೆ ನಿರಂತರವಾಗಿ ಹಲ್ಲೆ ಮಾಡುತ್ತಿದ್ದ ಎಂದು ಪ್ರೇಮಾ ತಾಯಿ ಶಕುಂತಲಾ ಆರೋಪಿಸಿದ್ದಾರೆ. ತಿಂಗಳ ಹಿಂದೆಯಷ್ಟೇ ಜಗಳವಾಡಿ ತವರು ಮನೆ ಸೇರಿದ್ದ ಪ್ರೇಮಾಳನ್ನು, ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಶಿವಕುಮಾರ್ ಮತ್ತೆ ಮನೆಗೆ ಕರೆತಂದಿದ್ದ. ಆದರೆ ಮನೆಗೆ ಬಂದ ತಿಂಗಳೊಳಗೆ ಪ್ರೇಮಾ ಮೃತಪಟ್ಟಿರುವುದು ಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿದೆ.

ಮೂರು ತಿಂಗಳ ಹಿಂದೆ ಪ್ರೇಮಾಗೆ ಗರ್ಭಪಾತವಾಗಿತ್ತು. ಆಗಲೂ ಗಂಡನ ಮನೆಯವರು ಸರಿಯಾಗಿ ನೋಡಿಕೊಂಡಿರಲಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಗೃಹಿಣಿ ಅನುಮಾನಾಸ್ಪದ ಸಾವು, ವರದಕ್ಷಿಣೆ ಕಿರುಕುಳ ಕೊಟ್ಟು ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರ ಆರೋಪ

ಸದ್ಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವರದಕ್ಷಿಣೆ ಕಿರುಕುಳದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪತಿ ಶಿವಕುಮಾರ್‌ನನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:22 pm, Sat, 2 May 26

Source link

94ನೇ ವಯಸ್ಸಿಗೆ ನಿರ್ದೇಶನ ಮಾಡಿದ ‘ಪುಷ್ಪಕ ವಿಮಾನ’ ನಿರ್ದೇಶಕ – Kannada News | Singeetam Srinivasa Rao Returns with ‘Sing Geetham’ at 94: Teaser Out Now

ಭಾರತೀಯ ಚಿತ್ರರಂಗದ ದಂತಕಥೆ, ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರು ಬರೋಬ್ಬರಿ 13 ವರ್ಷಗಳ ನಂತರ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಅವರ ನಿರ್ದೇಶನದ ಹೊಸ ಚಿತ್ರ ‘ಸಿಂಗ್ ಗೀತಂ’ (Sing Geetham) ಟೀಸರ್ ಬಿಡುಗಡೆಯಾಗಿದ್ದು, 94ನೇ ವಯಸ್ಸಿನಲ್ಲೂ ಅವರ ಕ್ರಿಯಾಶೀಲತೆ ಕಂಡು ಎಲ್ಲರೂ ಅಚ್ಚರಿಕೊಂಡಿದ್ದಾರೆ.ಇವರು ಜೆನ್-ಜಿ ತಲೆಮಾರಿಗಿಂತಲೂ ಮಿಗಿಲು ಎಂದು ಗುಣಗಾನ ಮಾಡುತ್ತಿದ್ದಾರೆ.

ಸಿಂಗೀತಂ ಅವರ ಹೆಸರಿನಲ್ಲೇ ಇರುವ ‘ಸಿಂಗ್ ಗೀತಂ’ ಎಂಬ ಶೀರ್ಷಿಕೆಯ ಈ ಚಿತ್ರದ 1 ನಿಮಿಷ 22 ಸೆಕೆಂಡುಗಳ ಟೀಸರ್ ಕುತೂಹಲ ಮೂಡಿಸುವಂತಿದೆ. ಗಣಿಗಾರಿಕೆ ನಡೆಯುವ ಪಟ್ಟಣದ ಹಿನ್ನೆಲೆಯನ್ನು ಹೊಂದಿದ್ದು, ಅಲ್ಲಿ ಜನರು ಚಿನ್ನದ ಹುಡುಕಾಟದಲ್ಲಿ ತೊಡಗುತ್ತಾರೆ. ಪ್ರತಾಪ್ ಎಂಬ ಯುವಕ ವಿಚಿತ್ರ ಜಗತ್ತೊಂದಕ್ಕೆ ಪ್ರವೇಶಿಸಿದಾಗ ಎದುರಿಸುವ ಸವಾಲುಗಳು ಹಾಗೂ ಪ್ರಗತಿ ಮತ್ತು ಸಂರಕ್ಷಣೆಯ ನಡುವಿನ ಸಂಘರ್ಷವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

ಈ ಚಿತ್ರವು ಒಂದು ‘ಮ್ಯೂಸಿಕಲ್ ಫ್ಯಾಂಟಸಿ’ ಕಥಾಹಂದರವನ್ನು ಹೊಂದಿದೆ. ಅಯಾನ್, ಅಹಲ್ಯಾ ಬಾಮ್ರೂ ಮತ್ತು ಶಾಲಿನಿ ಕೊಂಡೆಪುಡಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೆ, ತುಳಸಿ ಪಿಎ, ಬ್ಯಾನರ್ಜಿ ಮತ್ತು ಶಿವನಾರಾಯಣ ಅವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ, ‘ಕಲ್ಕಿ 2898 ಎಡಿ’ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಅವರು ವೈಜಯಂತಿ ಮೂವೀಸ್ ಮತ್ತು ಸ್ವಪ್ನ ಸಿನಿಮಾ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ (DSP) ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: ಕೊನೆಗೂ ಸೆಟ್ಟೇರಲೇ ಇಲ್ಲ ರಾಜ್​​ಕುಮಾರ್ ನಟಿಸಬೇಕಿದ್ದ ಆ ಸಿನಿಮಾ

ಸಿಂಗೀತಂ ಶ್ರೀನಿವಾಸ ರಾವ್ ಅವರು ಕನ್ನಡ ಮತ್ತು ತೆಲುಗು ಚಿತ್ರರಂಗಕ್ಕೆ ಮರೆಯಲಾಗದ ಕೊಡುಗೆ ನೀಡಿದವರು. 1972 ರಲ್ಲಿ ‘ನೀತಿ ನಿಜಾಯಿತಿ’ ಚಿತ್ರದ ಮೂಲಕ ನಿರ್ದೇಶನ ಆರಂಭಿಸಿದ ಇವರು, 10 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಅವರು ‘ಚಲಿಸುವ ಮೋಡಗಳು’ ಸಿನಿಮಾ ಮಾಡಿದರು. ಅವರ ‘ಪುಷ್ಪಕ ವಿಮಾನ’ ಗಮನ ಸೆಳೆಯಿತು. ‘ಟುವ್ವಿ ಟುವ್ವಿ ಟುವ್ವಿ’, ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಮೊದಲಾದ ಸಿನಿಮಾ ಮಾಡಿದರು. ‘ಸಿಂಗ್ ಗೀತಂ’ ಚಿತ್ರವು ಜೂನ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

NEET UG 2026: ನೀಟ್ ಯುಜಿ ಪರೀಕ್ಷಾ ದಿನದ ಡ್ರೆಸ್ ಕೋಡ್ ಮತ್ತು ಪ್ರಮುಖ ಮಾರ್ಗಸೂಚಿ ಪ್ರಕಟ! – Kannada News | NEET UG 2026 Exam Guidelines: NTA Dress Code and Security Rules Explained

ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಯುಜಿ (NEET UG) 2026 ರ ಪರೀಕ್ಷಾ ದಿನಾಂಕ ಹತ್ತಿರವಾಗುತ್ತಿದೆ. ಈ ಪ್ರಮುಖ ಪರೀಕ್ಷೆಯು ಮೇ 3 ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ರವರೆಗೆ ಒಂದೇ ಪಾಳಿಯಲ್ಲಿ ದೇಶಾದ್ಯಂತ ನಡೆಯಲಿದೆ. ಒಟ್ಟು 180 ನಿಮಿಷಗಳ ಕಾಲ ನಡೆಯುವ ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಿಂದ ಒಟ್ಟು 180 ಪ್ರಶ್ನೆಗಳನ್ನು ಎದುರಿಸಲಿದ್ದಾರೆ. ಒಟ್ಟು 720 ಅಂಕಗಳನ್ನು ಒಳಗೊಂಡಿರುವ ಈ ಪರೀಕ್ಷೆಯ ಬಗ್ಗೆ ಅಭ್ಯರ್ಥಿಗಳಲ್ಲಿ ಯಾವುದೇ ಗೊಂದಲವಿರಬಾರದು ಎಂಬ ಉದ್ದೇಶದಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹತ್ವದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಡ್ರೆಸ್ ಕೋಡ್ ಮತ್ತು ಉಡುಪುಗಳ ನಿಯಮ:

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಧರಿಸಬೇಕಾದ ಉಡುಪುಗಳ ಬಗ್ಗೆ ಎನ್‌ಟಿಎ ಸ್ಪಷ್ಟವಾದ ವಿವರಗಳನ್ನು ನೀಡಿದೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹಗುರವಾದ ಬಟ್ಟೆಗಳನ್ನು ಧರಿಸಿ ಬರಲು ಸೂಚಿಸಲಾಗಿದೆ. ಒಂದು ವೇಳೆ ಪೂರ್ಣ ತೋಳಿನ ಶರ್ಟ್ ಅಥವಾ ಉಣ್ಣೆಯ ಬಟ್ಟೆಗಳನ್ನು ಧರಿಸುವುದು ಅನಿವಾರ್ಯವಾಗಿದ್ದಲ್ಲಿ, ಅಂತಹ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಪಾಸಣೆಗಾಗಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ವರದಿ ಮಾಡಬೇಕಾಗುತ್ತದೆ. ಧಾರ್ಮಿಕ ಕಾರಣಗಳಿಗಾಗಿ ವಿಶೇಷ ಉಡುಪು ಅಥವಾ ಸಾಮಗ್ರಿಗಳನ್ನು ಧರಿಸುವ ಅಭ್ಯರ್ಥಿಗಳಿಗೂ ಅವಕಾಶವಿದ್ದು, ಇವರೂ ಕೂಡ ಕಟ್ಟುನಿಟ್ಟಾದ ಭದ್ರತಾ ತಪಾಸಣೆಗೆ ಒಳಪಡಬೇಕಿರುವುದರಿಂದ ಮುಂಚಿತವಾಗಿಯೇ ಕೇಂದ್ರಕ್ಕೆ ತಲುಪುವುದು ಕಡ್ಡಾಯವಾಗಿದೆ.

ಪಾದರಕ್ಷೆಗಳು ಮತ್ತು ಪಾರದರ್ಶಕ ವಸ್ತುಗಳು:

ಪರೀಕ್ಷಾ ಕೇಂದ್ರದಲ್ಲಿ ಭದ್ರತಾ ತಪಾಸಣೆಯನ್ನು ಸುಲಭಗೊಳಿಸಲು ಅಭ್ಯರ್ಥಿಗಳು ಚಪ್ಪಲಿ ಅಥವಾ ಕಡಿಮೆ ಎತ್ತರದ ಹಿಮ್ಮಡಿಯ ಸ್ಯಾಂಡಲ್‌ಗಳನ್ನು (Low heel shoes) ಧರಿಸುವುದು ಉತ್ತಮ ಎಂದು ತಿಳಿಸಲಾಗಿದೆ. ಪರೀಕ್ಷಾ ಕೊಠಡಿಯ ಒಳಗೆ ಕೇವಲ ಪಾರದರ್ಶಕವಾದ ನೀರಿನ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ಮಾತ್ರ ಅನುಮತಿ ನೀಡಲಾಗಿದೆ. ಈ ನಿಯಮಗಳ ಮೂಲಕ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ಎನ್‌ಟಿಎ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ neet.nta.nic.in ಗೆ ಭೇಟಿ ನೀಡಬಹುದು ಅಥವಾ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಬಯೋಮೆಟ್ರಿಕ್ ಮತ್ತು ಭದ್ರತಾ ಪರಿಶೀಲನೆ:

ಪರೀಕ್ಷಾ ಕೊಠಡಿಯನ್ನು ಪ್ರವೇಶಿಸುವ ಮೊದಲು ಪ್ರತಿಯೊಬ್ಬ ಅಭ್ಯರ್ಥಿಯೂ ಕಡ್ಡಾಯವಾಗಿ ಬಯೋಮೆಟ್ರಿಕ್ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ. ಒಂದು ವೇಳೆ ತಾಂತ್ರಿಕ ಕಾರಣಗಳಿಂದ ಅಥವಾ ದೈಹಿಕ ಅಸಮರ್ಥತೆಯಿಂದ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ, ಅಂತಹ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಲಭ್ಯವಿರುವ ನಿಗದಿತ ಫಾರ್ಮ್‌ನಲ್ಲಿ ಲಿಖಿತ ಒಪ್ಪಂದವನ್ನು ಸಲ್ಲಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶವಿರುತ್ತದೆ. ಪರೀಕ್ಷಾ ಪ್ರಕ್ರಿಯೆಯು ಸುಗಮವಾಗಿ ನಡೆಯಲು ಅಭ್ಯರ್ಥಿಗಳು ಪರೀಕ್ಷಾ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಮತ್ತು ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಎನ್‌ಟಿಎ ವಿನಂತಿಸಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:09 pm, Sat, 2 May 26

Source link

2 ವರ್ಷದಿಂದ 15 ವರ್ಷದವರೆಗೆ ಕಂಡುಬರುವ ಈ ಟುರೆಟ್ ಸಿಂಡ್ರೋಮ್ ಬಗ್ಗೆ ಪೋಷಕರಿಗೆ ತಿಳಿದಿರಲೇಬೇಕು: ಡಾ. ಪ್ರಪುಲ್ಲ – Kannada News | Tourette Syndrome Symptoms in Children: Dr. Prapulla’s Guidance for Parents

ಇತ್ತೀಚಿನ ದಿನಗಳಲ್ಲಿ ಈ ಟುರೆಟ್ ಸಿಂಡ್ರೋಮ್ (Tourette Syndrome) ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಆದರೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ವಿವಿಧ ರೀತಿಯ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಾಗಾಗಿ ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಅದರಲ್ಲಿಯೂ ಪೋಷಕರು ಈ ಸಿಂಡ್ರೋಮ್ ಬಗ್ಗೆ ತಿಳಿಯುವುದು ಅತಿಮುಖ್ಯವಾಗಿದೆ. ಏಕೆಂದರೆ ಇದೊಂದು ನರಮಂಡಲಕ್ಕೆ ಸಂಬಂಧಿಸಿದ ಖಾಯಿಲೆಯಾಗಿದ್ದು, ಇದು ಹದಿಹರೆಯದವರಲ್ಲಿ ಕಂಡುಬರುತ್ತದೆ (ಸಾಮಾನ್ಯವಾಗಿ 2 ವರ್ಷದಿಂದ 15 ವರ್ಷದವರೆಗೆ). ಇದನ್ನು ತಡೆಗಟ್ಟಲು ಮತ್ತು ಇದರ ಲಕ್ಷಣಗಳ ಬಗ್ಗೆ ಅರಿತಿದ್ದರೆ ಮಕ್ಕಳು ಇಂತಹ ಸಿಂಡ್ರೋಮ್ ನಿಂದ ಬಳಲುವುದನ್ನು ತಡೆಯಬಹುದು. ಹಾಗಾದರೆ ಟುರೆಟ್ ಸಿಂಡ್ರೋಮ್ ಗುರುತಿಸುವುದು ಹೇಗೆ, ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ, ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ಹಾಸನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪಂಚಕರ್ಮ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಪ್ರಪುಲ್ಲ ಕೆ ಅವರು ಟಿವಿ9 ಕನ್ನಡ ಜೊತೆ ಮಾತನಾಡಿದ್ದು ಮತ್ತಷ್ಟು ಮಾಹಿತಿ ನೀಡಿದ್ದಾರೆ.

ಟುರೆಟ್ ಸಿಂಡ್ರೋಮ್ ಎಂದರೇನು?

ಈ ಖಾಯಿಲೆಯಲ್ಲಿ ವ್ಯಕ್ತಿಯು ತನ್ನ ನಿಯಂತ್ರಣವಿಲ್ಲದೆ ದೈಹಿಕ ಚಲನೆಗಳನ್ನು ಅಥವಾ ಶಬ್ದಗಳನ್ನು ಅರಿವಿಲ್ಲದೆಯೇ ಪುನರಾವರ್ತಿಸುತ್ತಾರೆ. ಈ ಸ್ಥಿತಿಯನ್ನು ‘ಟಿಕ್ಸ್’ ಎಂದು ಗುರುತಿಸಲಾಗುತ್ತದೆ. ಇದು ಮೆದುಳಿನ ನರಕೋಶಗಳ ಸಂವಹನದಲ್ಲಿನ ವ್ಯತ್ಯಾಸದಿಂದ ಉಂಟಾಗುತ್ತದೆ.
ಟಿಕ್ಸ್‌ನಲ್ಲಿ ಎರಡು ವಿಧಗಳಿವೆ:
ಮೋಟಾರ್ ಟಿಕ್ಸ್: ಕಣ್ಣು ಮಿಟುಕಿಸುವುದು, ಅಲುಗಾಡುವ ತಲೆ ಚಲನೆಗಳು, ಭುಜ ಕುಗ್ಗಿಸುವಿಕೆ ಬೇರೆಯವರ ಕ್ರಿಯೆಗಳನ್ನು ಅನುಕರಿಸುವುದು ಮುಂತಾದ ದೈಹಿಕ ಚಲನೆಗಳು.
ವೋಕಲ್ ಟಿಕ್ಸ್: ಗಂಟಲು ಸ್ವಚ್ಛಗೊಳಿಸುವ ಶಬ್ದ, ಬಿಕ್ಕಳಿಕೆ, ನಿರಂತರವಾಗಿ ಇತರರ (ಎಕೋಲಾಲಿಯಾ) ಅಥವಾ ಸ್ವತಃ (ಪಾಲಿಲಾಲಿಯಾ) ಒಂದೇ ರೀತಿಯ ಪದಗಳನ್ನು ಪುನರಾವರ್ತಿಸುವುದು ಅಥವಾ ಪದಗಳನ್ನು ಕೂಗುವುದು.

ಟುರೆಟ್ ಸಿಂಡ್ರೋಮ್ ಬಗ್ಗೆ ಇರುವ ತಪ್ಪು ಕಲ್ಪನೆ:

ಸಾಮಾನ್ಯವಾಗಿ ಟುರೆಟ್ ಖಾಯಿಲೆ ಇರುವವರೆಲ್ಲರು ಅಸಭ್ಯವಾಗಿ ವರ್ತಿಸುತ್ತಾರೆ ಎಂಬುದು ತಪ್ಪು ಕಲ್ಪನೆ. ಸಹಜವಾಗಿ 10 -15 % ಜನರಲ್ಲಿ ಮಾತ್ರ ಅಸಭ್ಯ ವರ್ತನೆ ಕಂಡುಬರುತ್ತದೆ. ಇದು ಒಂದು ಬುದ್ದಿಮಾಂಧ್ಯ ಖಾಯಿಲೆ ಅಲ್ಲ. ಇಂತಹ ವ್ಯಕ್ತಿಗಳಲ್ಲಿ ಸಾಮಾನ್ಯ ಅಥವಾ ಅದಕ್ಕಿಂತ ಹೆಚ್ಚಿನ ಬುದ್ಧಿಶಕ್ತಿಯನ್ನು ಹೊಂದಿರುತ್ತಾರೆ. ಟಿಕ್ಸ್ ಮಾಡುವುದು ಸಹಜವಾಗಿ ವ್ಯಕ್ತಿಯ ನಿಯಂತ್ರಣದಲ್ಲಿ ಇರುವುದಿಲ್ಲ. ಇದನ್ನು ಸೀನುವಿಕೆ ಅಥವಾ ಕಣ್ಣು ರೆಪ್ಪೆ ಮಿಟುಕಿಸುವ ಸಹಜ ಕ್ರಿಯೆಗೆ ಹೋಲಿಸಬಹುದು.

ಇದನ್ನೂ ಓದಿ: ಕೋವಿಡ್​ಗಿಂತ ಅಪಾಯಕಾರಿಯೇ ಈ ಗುಯಿಲಿನ್‌ ಬಾರ್‌ ಸಿಂಡ್ರೋಮ್‌? ಲಕ್ಷಣಗಳು ಹೇಗಿರುತ್ತೆ, ತಡೆಗಟ್ಟುವುದು ಹೇಗೆ?

ಈ ಸಲಹೆಯನ್ನು ತಪ್ಪದೆ ಪಾಲಿಸಬೇಕು:

ಸಾಮಾನ್ಯವಾಗಿ ಈ ಸಮಸ್ಯೆ ಹೊಂದಿರುವವರನ್ನು ನೋಡಿದರೂ ಗಮನಿಸದಂತೆ ವರ್ತಿಸಬೇಕು. ಅದನ್ನು ಪದೇ ಪದೇ ತೋರಿಸಿ ಹೀಯಾಳಿಸಬಾರದು. ಅವರೊಂದಿಗೆ ನಾವು ಸಹಜವಾಗಿ ವ್ಯವಹರಿಸಿದರೆ ಅವರಿಗೆ ಮುಜುಗರ ಮತ್ತು ಒತ್ತಡ ಕಡಿಮೆಯಾಗುತ್ತದೆ. ಈ ಕಾಯಿಲೆ ಇಂದ ಬಳಲುತ್ತಿರುವರರ ಜೊತೆ ತಾಳ್ಮೆಯಿಂದ ವರ್ತಿಸಬೇಕು. ಅವರಿಗೆ ಮಾತು ಪೂರ್ಣಗೊಳಿಸಲು ಅಥವಾ ಕೆಲಸ ಪೂರ್ಣಗೊಳಿಸಲು ಸಮಯ ನೀಡಬೇಕು. ಅವರು ಓದುವ ಶಾಲೆ ಅಥವಾ ಕೆಲಸದ ಸ್ಥಳದಲ್ಲಿ ಈ ಸಮಸ್ಯೆಯ ಬಗ್ಗೆ ತಿಳಿಸಿ, ಅಲ್ಲಿ ಅವಮಾನ ಅಥವಾ ಕಿರುಕುಳ ಆಗದಂತೆ ನೋಡಿಕೊಳ್ಳಬೇಕು.

ಆಯುರ್ವೇದ ಮತ್ತು ಜೀವನಶೈಲಿ:

ಟೂರೆಟ್ ಸಿಂಡ್ರೋಮ್ ನಿರ್ವಹಣೆಯಲ್ಲಿ ಆಯುರ್ವೇದದ ಪಂಚಕರ್ಮ ಚಿಕಿತ್ಸೆಗಳು ಬಹಳ ಪರಿಣಾಮಕಾರಿಯಾಗಿದೆ. ಶಿರೋಧಾರಾ ಚಿಕಿತ್ಸೆ ಅಂದರೆ ಹಣೆಯ ಮೇಲೆ ನಿರಂತರವಾಗಿ ಔಷಧೀಯುಕ್ತ ತೈಲವನ್ನು ಸುರಿಯುವ ಮೂಲಕ ಮೆದುಳನ್ನು ಶಾಂತಗೊಳಿಸುತ್ತದೆ ಮತ್ತು ನರಗಳ ಒತ್ತಡವನ್ನು ಕಡಿಮೆ ಮಾಡಿ ‘ಟಿಕ್ಸ್’ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ನಸ್ಯ ಚಿಕಿತ್ಸೆ ಅಂದರೆ ಮೂಗಿನ ಹೊಳ್ಳೆಗಳಿಗೆ ಔಷಧೀಯ ತುಪ್ಪ ಅಥವಾ ತೈಲವನ್ನು ಹಾಕುವುದರಿಂದ ಶಿರೋಭಾಗದ ನರಮಂಡಲವನ್ನು ಬಲಗೊಳಿಸುತ್ತದೆ. ಬಲಾದಿ ಅಥವಾ ಕ್ಷೀರಬಲ ತೈಲದಿಂದ ಮಾಡುವ ಅಭ್ಯಂಗವು, ದೇಹದಲ್ಲಿನ ವಾತ ದೋಷವನ್ನು ಶಮನಗೊಳಿಸಿ ನರಮಂಡಲಕ್ಕೆ ಪುನಶ್ಚೇತನ ನೀಡುತ್ತದೆ. ಬ್ರಾಹ್ಮಿ, ಶಂಖಪುಷ್ಪಿ ಅಥವಾ ಅಶ್ವಗಂಧದಂತಹ ಮೂಲಿಕೆಗಳು ಮತ್ತು ಭ್ರಾಮರಿ ಪ್ರಾಣಾಯಾಮವು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಸಮಯೋಚಿತ ಬೆಂಬಲ, ಅರಿವು ಮತ್ತು ಸೂಕ್ತ ಚಿಕಿತ್ಸೆ, ಟೂರೆಟ್ ಲಕ್ಷಣಗಳನ್ನು ಕಡಿಮೆಮಾಡಲು ಹಾಗೂ ವ್ಯಕ್ತಿಯು ಸಾಮಾನ್ಯ ಜೀವನಶೈಲಿ ನಡೆಸಲು ಅತ್ಯಂತ ಮುಖ್ಯವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: ಗೃಹಿಣಿ ಅನುಮಾನಾಸ್ಪದ ಸಾವು, ವರದಕ್ಷಿಣೆ ಕಿರುಕುಳ ಕೊಟ್ಟು ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರ ಆರೋಪ – Kannada News | Bengaluru Crime: Housewife Vandana Found Dead in Hulimavu; Family Alleges Dowry Harassment Murder by Husband’s Family

ಬೆಂಗಳೂರು, ಮೇ 2: ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೃಹಿಣಿ ವಂದನಾ ಎಂಬವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಆಕೆ ವರದಕ್ಷಿಣ ಕಿರುಕುಳದಿಂದ ಮೃತಪಟ್ಟಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಮಗಳಿಗೆ ಪತಿಯ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ವಂದನಾ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ.

ಮೂರು ವರ್ಷಗಳ ಹಿಂದೆ ವಂದನಾ ವಿಕ್ರಂಶೇಷ್ ಎಂಬವರನ್ನು ಮದುವೆಯಾಗಿದ್ದರು. ಮದುವೆಯಾದಾಗಿನಿಂದಲೂ ಪತಿಯ ಮನೆಯವರಿಂದ ವರದಕ್ಷಿಣೆ ಕಿರುಕುಳ ಎದುರಿಸುತ್ತಿದ್ದರು ಎಂದು ವಂದನಾ ಕುಟುಂಬದವರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ರಾಜ ಸಂಧಾನ ಕೂಡ ನಡೆಸಿದ್ದರು. ಆದರೆ, ಕಿರುಕುಳ ನಿಂತಿರಲಿಲ್ಲ. ಗುರುವಾರ ಸಂಜೆ ವಂದನಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಗಳು ಧೈರ್ಯವಂತೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ. ಇದು ಕೊಲೆಯೇ ಎಂದು ಕುಟುಂಬದವರು ಹೇಳುತ್ತಿದ್ದಾರೆ. ಅಲ್ಲದೆ, ವಂದನಾ ಪತಿಯ ಕುಟುಂಬದವರ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೈಕ್​, ಚಿನ್ನಾಭರಣ ಕೊಟ್ಟಿದ್ದಲ್ಲದೆ 4 ಲಕ್ಷ ರೂ. ಖರ್ಚು ಮಾಡಿ ಮದುವೆ ಮಾಡಿದ್ದೆವು. ಅದ್ಧೂರಿಯಾಗಿ ಮದುವೆ ಮಾಡಿದ್ದರೂ ಮತ್ತೆ ವರದಕ್ಷಿಣೆಗಾಗಿ ಕಿರುಕುಳ ಕೊಟ್ಟಿದ್ದಾರೆ ಎಂದು ವಂದನಾ ಕುಟುಂಬದವರು ಆರೋಪಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸಾರಾ ಗೋವಿಂದ್ ಧಮ್ಕಿ ಹಾಕಿದ್ರು’; ಕಾನೂನು ಹೋರಾಟಕ್ಕೆ ಮುಂದಾದ ಚೇತನ್

‘ರಾಜ್​​​ಕುಮಾರ್ ಪುಣ್ಯಭೂಮಿ ವಿಷಯಕ್ಕೆ ಚೇತನ್ ಅಹಿಂಸ ಅವರು ಕೊಂಕು ತೆಗೆದಿದ್ದರು. ಈಗಾಗಲೇ ಅವರು ವಿವಾದಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳಿದ್ದಾರೆ. ಈ ವಿಷಯವಾಗಿ ಈಗ ಹೊಸ ಬೆಳವಣಿಗೆ ನಡೆದಿದೆ. ಸಾರಾ ಗೋವಿಂದು ಈಗ ಅವರು ಧಮ್ಕಿ ಹಾಕಿರುವ ಆರೋಪವನ್ನು ಚೇತನ್ ಮಾಡಿದ್ದಾರೆ. ಸಾರಾ ಗೋವಿಂದು ಹಾಗೂ ಕನ್ನಡಪರ ಹೋರಾಟಗಾರರು ನನ್ನ ಮನೆಗೆ ಮುತ್ತಿಗೆ ಹಾಕಿ ಕ್ಷಮೆ ಕೇಳುವಂತೆ ಮಾತಾಡಿದ್ರು. ಸಾರಾ ಗೋವಿಂದ್ ನನಗೆ ಧಮ್ಕಿ ಹಾಕೋ ರೀತಿ ಮಾತಾಡಿದ್ದರು’ ಎಂದು ಚೆತನ್ ಆರೋಪಿಸಿದ್ದಾರೆ. ಹೀಗಾಗಿ ಅವರು ದೂರು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

 

Source link

IPL 2026: ಜೇಮಿಸನ್​ಗೆ ‘ಶಿಕ್ಷಾರ್ಹ ಅಂಕ’: ಏನಿದು ‘ಡಿಮೆರಿಟ್ ಪಾಯಿಂಟ್’? – Kannada News | IPL 2026: Kyle Jamieson handed demerit point

IPL 2026: ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಹಣಾಹಣಿಯಲ್ಲಿ, ಡೆಲ್ಲಿ ತಂಡದ ವೇಗಿ ಕೈಲ್ ಜೇಮಿಸನ್ ತೋರಿದ ಅತಿಯಾದ ಆಕ್ರಮಣಕಾರಿ ವರ್ತನೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಕೇವಲ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರನ್ನು ಔಟ್ ಮಾಡಿದ ನಂತರ ಜೇಮಿಸನ್ ತೋರಿದ ಈ ಅತೀರೇಕದ ವರ್ತನೆಗೆ ಇದೀಗ ಐಪಿಎಲ್ ಆಡಳಿತ ಮಂಡಳಿಯು ಒಂದು ಡಿಮೆರಿಟ್ ಪಾಯಿಂಟ್ ನೀಡಿದೆ.

ನಡೆದಿದ್ದೇನು?

ಪಂದ್ಯದ ಎರಡನೇ ಓವರ್‌ನಲ್ಲಿ ಜೇಮಿಸನ್ ಎಸೆದ ಅತ್ಯುತ್ತಮ ಯಾರ್ಕರ್ ಎಸೆತಕ್ಕೆ ಸೂರ್ಯವಂಶಿ ಕ್ಲೀನ್ ಬೌಲ್ಡ್ ಆಗಿದ್ದರು. ವಿಕೆಟ್ ಪಡೆದ ಸಂಭ್ರಮದಲ್ಲಿ ಜೇಮಿಸನ್ ಸೂರ್ಯವಂಶಿ ಅವರ ಹತ್ತಿರ ಹೋಗಿ ಆಕ್ರಮಣಕಾರಿಯಾಗಿ ಚಪ್ಪಾಳೆ ತಟ್ಟುತ್ತಾ, ಏನೋ ಹೇಳುತ್ತಾ ಪೆವಿಲಿಯನ್ ಕಡೆಗೆ ಹೋಗುವಂತೆ ಸನ್ನೆ ಮಾಡಿದರು. ಒಬ್ಬ ಅನುಭವಿ ಆಟಗಾರ 15 ವರ್ಷದ ಬಾಲಕನ ವಿರುದ್ಧ ತೋರಿದ ಈ ವರ್ತನೆ ಅಸಮಾಧಾನಕ್ಕೆ ಕಾರಣವಾಯಿತು.

ಐಪಿಎಲ್ ಕ್ರಮ:

ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5ರ ಅಡಿಯಲ್ಲಿ ಕೈಲ್​ ಜೇಮಿಸನ್ ತಪ್ಪಿತಸ್ಥರೆಂದು ಕಂಡುಬಂದಿದೆ. ಹೀಗಾಗಿ ಅವರಿಗೆ ಈ ಕೆಳಗಿನಂತಿನ ಶಿಕ್ಷಾರ್ಹ ಅಂಕಗಳನ್ನು ನಿಡಿದೆ.

  • ಶಿಕ್ಷೆ: ಒಂದು ಡಿಮೆರಿಟ್ ಪಾಯಿಂಟ್ ಮತ್ತು ಅಧಿಕೃತ ಎಚ್ಚರಿಕೆ.
  • ಒಪ್ಪಿಗೆ: ಪಂದ್ಯದ ರೆಫರಿ ರಾಜೀವ್ ಸೇಠ್ ಅವರ ಮುಂದೆ ಜೇಮಿಸನ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಏನಿದು ಡಿಮೆರಿಟ್ ಪಾಯಿಂಟ್?

ಕ್ರಿಕೆಟ್‌ನಲ್ಲಿ ಡೆಮೆರಿಟ್ ಪಾಯಿಂಟ್ (Demerit Points) ಎನ್ನುವುದು ಆಟಗಾರರು ಮೈದಾನದಲ್ಲಿ ಕೆಟ್ಟದಾಗಿ ವರ್ತಿಸಿದಾಗ ನೀಡುವ ಒಂದು ರೀತಿಯ ‘ಶಿಕ್ಷಾರ್ಹ ಅಂಕ’ಗಳು.  ಇದು ಹೇಗೆ ಕೆಲಸ ಮಾಡುತ್ತದೆ ಎಂಬ ವಿವರ ಈ ಕೆಳಗಿನಂತಿದೆ…

ಅಂಕಗಳನ್ನು ಯಾವಾಗ ನೀಡಲಾಗುತ್ತದೆ?

ಒಬ್ಬ ಆಟಗಾರ ಐಸಿಸಿ (ICC) ಅಥವಾ ಐಪಿಎಲ್‌ನ ನೀತಿ ಸಂಹಿತೆಯನ್ನು (Code of Conduct) ಮೀರಿದಾಗ ಶಿಕ್ಷೆ ನೀಡಲಾಗುತ್ತದೆ. ಉದಾಹರಣೆಗೆ:

  • ಅಂಪೈರ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸುವುದು.
  • ಎದುರಾಳಿ ಆಟಗಾರರ ಮೇಲೆ ಕೆಟ್ಟ ಪದ ಬಳಕೆ ಅಥವಾ ಆಕ್ರಮಣಕಾರಿ ವರ್ತನೆ (ಜೇಮಿಸನ್ ಮಾಡಿದಂತೆ).
  • ಮೈದಾನದ ವಸ್ತುಗಳಿಗೆ (ವಿಕೆಟ್ ಇತ್ಯಾದಿ) ಹಾನಿ ಮಾಡುವುದು.

ಅಂಕಗಳ ಹಂಚಿಕೆ ಹೇಗೆ?

ಇಲ್ಲಿ ಆಟಗಾರನ ವರ್ತನೆಗೆ ಅಥವಾ ತಪ್ಪಿನ ತೀವ್ರತೆಗೆ ಅನುಗುಣವಾಗಿ ಅಂಕಗಳನ್ನು ನೀಡಲಾಗುತ್ತದೆ. ಇದನ್ನು ಮ್ಯಾಚ್ ರೆಫರಿ ನಿರ್ಧರಿಸುತ್ತಾರೆ. ಅದರಂತೆ ಈ ಕೆಳಗಿನ ಲೆವೆಲ್​ ಹಂತದ ಅನ್ವಯ ಡಿಮೆರಿಟ್ ಪಾಯಿಂಟ್ ನೀಡಲಾಗುತ್ತದೆ.

  • ಲೆವೆಲ್ 1 ತಪ್ಪು: 1 ಅಥವಾ 2 ಡಿಮೆರಿಟ್ ಪಾಯಿಂಟ್.
  • ಲೆವೆಲ್ 2 ತಪ್ಪು: 3 ಅಥವಾ 4 ಡಿಮೆರಿಟ್ ಪಾಯಿಂಟ್.
  • ಲೆವೆಲ್ 3 ಮತ್ತು 4 ತಪ್ಪು: ಇವು ಗಂಭೀರ ಸ್ವರೂಪದ ತಪ್ಪುಗಳಾಗಿದ್ದು, ನೇರವಾಗಿ ಅಮಾನತು ಮಾಡಲಾಗುತ್ತದೆ.

ನಿಷೇಧ ಯಾವಾಗ?

ಯಾವಾಗ ಈ ಡಿಮೆರಿಟ್ ಪಾಯಿಂಟ್‌ಗಳು ಹೆಚ್ಚಾಗುತ್ತವೆಯೋ, ಆಗ ಆಟಗಾರನನ್ನು ಪಂದ್ಯಗಳಿಂದ ನಿಷೇಧಿಸಲಾಗುತ್ತದೆ. ಉದಾಹರಣೆಗೆ…

  • ಒಬ್ಬ ಆಟಗಾರನ ಖಾತೆಯಲ್ಲಿ 24 ತಿಂಗಳ ಅವಧಿಯಲ್ಲಿ 4 ಡಿಮೆರಿಟ್ ಪಾಯಿಂಟ್ ಸೇರಿದರೆ, ಅದನ್ನು 2 ಸಸ್ಪೆನ್ಷನ್ ಪಾಯಿಂಟ್ ಎಂದು ಪರಿಗಣಿಸಲಾಗುತ್ತದೆ.
  •  2 ಸಸ್ಪೆನ್ಷನ್ ಪಾಯಿಂಟ್ ಅಂದರೆ: ಆಟಗಾರನು ಒಂದು ಟೆಸ್ಟ್ ಪಂದ್ಯ ಅಥವಾ ಎರಡು ಏಕದಿನ/ಟಿ20 ಪಂದ್ಯಗಳಿಂದ (ಯಾವುದು ಮೊದಲು ಬರುತ್ತದೋ ಅದರಿಂದ) ಹೊರಗುಳಿಯಬೇಕಾಗುತ್ತದೆ.

ಇದನ್ನೂ ಓದಿ: ರಣರೋಚಕ ಪಂದ್ಯದಲ್ಲಿ 2 ರನ್​ಗಳ ಜಯ ಸಾಧಿಸಿ ಫೈನಲ್​ಗೇರಿದ ಹೈದರಾಬಾದ್

ಡಿಮೆರಿಟ್ ಪಾಯಿಂಟ್ ಅವಧಿ ಎಷ್ಟು?

ಡಿಮೆರಿಟ್ ಪಾಯಿಂಟ್ಸ್​ ಆಟಗಾರನ ಹೆಸರಿನಲ್ಲಿ ಶಾಶ್ವತವಾಗಿ ಇರುವುದಿಲ್ಲ. ಒಂದು ಪಾಯಿಂಟ್ ಪಡೆದ ನಂತರ 24 ತಿಂಗಳವರೆಗೆ (2 ವರ್ಷ) ಅದು ಆತನ ದಾಖಲೆಯಲ್ಲಿ ಇರುತ್ತದೆ. ಆ ಅವಧಿ ಮುಗಿದ ನಂತರ ಆ ಪಾಯಿಂಟ್ ರದ್ದಾಗುತ್ತದೆ.

ಸರಳವಾಗಿ ಹೇಳಬೇಕೆಂದರೆ, ಕೈಲ್ ಜೇಮಿಸನ್‌ಗೆ ಈಗ 1 ಡಿಮೆರಿಟ್ ಪಾಯಿಂಟ್ ಸಿಕ್ಕಿದೆ. ಮುಂದಿನ 24 ತಿಂಗಳೊಳಗೆ ಅವರು ಮತ್ತೆ ಇಂತಹ ತಪ್ಪು ಮಾಡಿ ಒಟ್ಟು 4 ಪಾಯಿಂಟ್ ಪಡೆದರೆ, ಅವರು ಒಂದು ಅಥವಾ ಎರಡು ಪಂದ್ಯಗಳಿಂದ ನಿಷೇಧಕ್ಕೊಳಗಾಗುತ್ತಾರೆ. ಹೀಗಾಗಿ ಡಿಮೆರಿಟರ್ ಪಾಯಿಂಟ್ಸ್ ಪಡೆದ ಆಟಗಾರರು 2 ವರ್ಷಗಳ ಅವಧಿಯಲ್ಲಿ ಇಂತಹ ಯಾವುದೇ ತಪ್ಪುಗಳನ್ನು ಮಾಡಲು ಮುಂದಾಗುವುದಿಲ್ಲ.

Source link

ಹುಬ್ಬಳ್ಳಿ-ಧಾರವಾಡ ಪಾಲಿಕೆ ವಿಭಜನೆ ಫೈಟ್: ಬೃಹತ್ ಪಾಲಿಕೆಗೆ ಬಿಜೆಪಿ ಪಟ್ಟು, ವಿಭಜನೆಯೇ ಲೇಸು ಎಂದ ಕಾಂಗ್ರೆಸ್ – Kannada News | Hubballi Dharwad Corporation Split vs Greater HDMC: BJP and Congress Clash Over 16th Finance Commission Grants

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆImage Credit source: tv9

ಹುಬ್ಬಳ್ಳಿ, ಮೇ 2: ಉತ್ತರ ಕರ್ನಾಟಕದ ಪ್ರಮುಖ ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ (Hubli-Dharawad) ಮಹಾನಗರ ಪಾಲಿಕೆಯ ಭವಿಷ್ಯದ ಕುರಿತು ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ಒಂದು ಕಾಲದಲ್ಲಿ ಪಾಲಿಕೆ ವಿಭಜನೆಗೆ ಪಟ್ಟು ಹಿಡಿದಿದ್ದ ಬಿಜೆಪಿಯು ಈಗ ಹೆಚ್ಚಿನ ಅನುದಾನದ ಆಸೆಗೆ ‘ಬೃಹತ್ ಮಹಾನಗರ ಪಾಲಿಕೆ’ (Greater Hubballi-Dharwad Municipal Corporation) ರಚನೆಗೆ ಒತ್ತಾಯಿಸುತ್ತಿದೆ. ಆದರೆ, ಆಡಳಿತಾರೂಢ ಕಾಂಗ್ರೆಸ್ ಮಾತ್ರ ವಿಭಜನೆಯ ನಿರ್ಧಾರಕ್ಕೇ ಅಂಟಿಕೊಂಡಿದೆ.

ಹುಬ್ಬಳ್ಳಿ-ಧಾರವಾಡ ಪಾಲಿಕೆ ವಿಭಜನೆ ಫೈಟ್: ಹಿನ್ನೆಲೆ ಏನು?

1962ರಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ನಗರಸಭೆಗಳನ್ನು ವಿಲೀನಗೊಳಿಸಿ ಮಹಾನಗರ ಪಾಲಿಕೆಯನ್ನು ರಚಿಸಲಾಗಿತ್ತು. ಪ್ರಸ್ತುತ ಇದು 202.3 ಚದರ ಕಿ.ಮೀ ವ್ಯಾಪ್ತಿ ಹಾಗೂ 82 ವಾರ್ಡ್‌ಗಳನ್ನು ಹೊಂದಿದೆ. ಆದರೆ, ಅನುದಾನ ಹಂಚಿಕೆಯಲ್ಲಿ ಧಾರವಾಡಕ್ಕೆ ಅನ್ಯಾಯವಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ, ಶಾಸಕ ಅರವಿಂದ್ ಬೆಲ್ಲದ್ ನೇತೃತ್ವದಲ್ಲಿ ಪ್ರತ್ಯೇಕ ಧಾರವಾಡ ಪಾಲಿಕೆಗೆ ಆಗ್ರಹ ಕೇಳಿಬಂದಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ 2025ರ ಜನವರಿಯಲ್ಲಿ ವಿಭಜನೆಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿತ್ತು.

ಬಿಜೆಪಿ ನಿಲುವು ಬದಲಾಗಿದ್ದೇಕೆ?

ಕೇಂದ್ರದ 16ನೇ ಹಣಕಾಸು ಆಯೋಗವು 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಪಾಲಿಕೆಗಳಿಗೆ ವಾರ್ಷಿಕ 500ರಿಂದ 1,000 ಕೋಟಿ ರೂ. ಹೆಚ್ಚಿನ ಅನುದಾನ ನೀಡಲು ಶಿಫಾರಸು ಮಾಡಿದೆ. ಒಂದು ವೇಳೆ ಪಾಲಿಕೆ ವಿಭಜನೆಯಾದರೆ ಎರಡೂ ನಗರಗಳ ಜನಸಂಖ್ಯೆ 10 ಲಕ್ಷಕ್ಕಿಂತ ಕಡಿಮೆಯಾಗಲಿದ್ದು, ಈ ಬೃಹತ್ ಅನುದಾನ ಕೈತಪ್ಪಲಿದೆ ಎಂಬುದು ಬಿಜೆಪಿಯ ಆತಂಕ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಪಾಲಿಕೆ ಸಭೆಯಲ್ಲಿ ವಿಭಜನೆ ಕೈಬಿಟ್ಟು ‘ಬೃಹತ್ ಪಾಲಿಕೆ’ ರಚಿಸಲು ಠರಾವು ಪಾಸು ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿದೆ.

ಕಾಂಗ್ರೆಸ್ ಆಕ್ಷೇಪ

ಬಿಜೆಪಿಯ ಈ ನಡೆಯನ್ನು ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ತೀವ್ರವಾಗಿ ವಿರೋಧಿಸಿದ್ದಾರೆ. ‘ಕೇಂದ್ರ ಸರ್ಕಾರ ಅನುದಾನ ನೀಡುತ್ತದೆ ಎಂಬ ಗ್ಯಾರಂಟಿ ಇಲ್ಲ. ಕೇಂದ್ರದ ಮಾನದಂಡಗಳಿಗೆ ನಮ್ಮ ಪಾಲಿಕೆ ಒಳಪಡುವುದು ಅನುಮಾನ. ಹೀಗಾಗಿ ವಿಭಜನೆಯೇ ಸೂಕ್ತ’ ಎಂಬುದು ಅವರ ವಾದ. ಈ ಗೊಂದಲಗಳ ನಡುವೆ ರಾಜ್ಯ ಸರ್ಕಾರ ಅಂತಿಮವಾಗಿ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: RCB ತಂಡದ ಮುಂದಿನ ಪಂದ್ಯಗಳ ಮಾಹಿತಿ ಇಲ್ಲಿದೆ – Kannada News | Ipl 2026 rcb next match vs lsg

ಐಪಿಎಲ್ 2026ರ ಆವೃತ್ತಿಯು ರೋಚಕ ಹಂತಕ್ಕೆ ತಲುಪಿದೆ. ಹಾಲಿ ಚಾಂಪಿಯನ್ಸ್ ಪಟ್ಟದೊಂದಿಗೆ ಕಣಕ್ಕಿಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಈ ಸೀಸನ್‌ನಲ್ಲಿ ಏರಿಳಿತದ ಹಾದಿ ಸವಿಯುತ್ತಿದೆ. ಏಪ್ರಿಲ್ 30ರಂದು ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಅನುಭವಿಸಿದ ಸೋಲು ತಂಡಕ್ಕೆ ಸ್ವಲ್ಪ ಹಿನ್ನಡೆ ತಂದಿದ್ದರೂ, ಪ್ಲೇ-ಆಫ್​ಗೇರಲು ಮುಂದಿನ ಪಂದ್ಯಗಳು ಅತ್ಯಂತ ನಿರ್ಣಾಯಕವಾಗಿವೆ.

ಅದರಲ್ಲೂ ಮುಂದಿನ ಮ್ಯಾಚ್​ನಲ್ಲಿ ಆರ್​ಸಿಬಿ ತಂಡದ ಜಯ ಸಾಧಿಸಿದರೆ ಪ್ಲೇಆಫ್​ಗೆ ಎಂಟ್ರಿ ಕೊಡುವುದು ಬಹುತೇಕ ಖಚಿತವಾಗಲಿದೆ. ಏಕೆಂದರೆ ಮುಂದಿನ ಪಂದ್ಯದ ಬಳಿಕ ಆರ್​ಸಿಬಿ 4 ಮ್ಯಾಚ್​ಗಳನ್ನಾಡಲಿದ್ದು, ಅದರಲ್ಲಿ ಒಂದು ಪಂದ್ಯ ಗೆದ್ದರೂ 16 ಅಂಕಗಳನ್ನು ಪಡೆಯಬಹುದು.

ಇಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್. ಮೇ 7 ರಂದು ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್​ಸಿಬಿ ಗೆದ್ದರೆ ಒಟ್ಟು 14 ಅಂಕಗಳನ್ನು ಪಡೆಯಲಿದೆ. ಇದಾದ ಬಳಿಕ ಪ್ಲೇಆಫ್ ಆಡುವುದು ಖಚಿತವಾಗಲು ಕೇವಲ ಒಂದು ಜಯ ಸಿಕ್ಕರೆ ಸಾಕು. ಅದರಂತೆ ಆರ್​ಸಿಬಿ ತಂಡದ ಮುಂದಿನ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ…​

  •  ಲಕ್ನೋ ಸೂಪರ್ ಜೈಂಟ್ಸ್ (LSG): ಮೇ 7, ರಾತ್ರಿ 7:30ಕ್ಕೆ ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಲಕ್ನೋದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಆರ್‌ಸಿಬಿ ಬ್ಯಾಟರ್‌ಗಳಿಗೆ ದೊಡ್ಡ ಸವಾಲು ಎದುರಾಗಲಿದೆ.
  •  ಮುಂಬೈ ಇಂಡಿಯನ್ಸ್ (MI): ಮೇ 10ರಂದು ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ಆರ್​ಸಿಬಿ ತಂಡ ಮುಂಬೈ ಇಂಡಿಯನ್ಸ್​ ಸವಾಲನ್ನು ಎದುರಿಸಲಿದೆ.
  • ಕೋಲ್ಕತ್ತಾ ನೈಟ್ ರೈಡರ್ಸ್ (KKR): ಮೇ 13ರಂದು ಮತ್ತೆ ರಾಯ್‌ಪುರದಲ್ಲಿ ಕೆಕೆಆರ್ ಮತ್ತು ಆರ್​ಸಿಬಿ ಸೆಣಸಲಿದೆ.
  •  ಪಂಜಾಬ್ ಕಿಂಗ್ಸ್ (PBKS): ಮೇ 17ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಆರ್​ಸಿಬಿ ಮುಖಾಮುಖಿಯಾಗಲಿದೆ.
  • ಸನ್‌ರೈಸರ್ಸ್ ಹೈದರಾಬಾದ್ (SRH): ಮೇ 22ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಎಸ್​ಆರ್​​ಹೆಚ್ ಮತ್ತು ಆರ್​ಸಿಬಿ ತಂಡಗಳು ಮುಖಾಮುಖಿಯಾಗಲಿದೆ.

ಇದನ್ನೂ ಓದಿ: ನಾನು ಅಷ್ಟೊಂದು ಹೆದರಿದ್ದೆ… ಕೈಲ್ ಜೇಮಿಸನ್ ಬಹಿರಂಗ ಹೇಳಿಕೆ

ಸದ್ಯ ಗುಜರಾತ್ ಟೈಟಾನ್ಸ್​ ವಿರುದ್ಧದ ಸೋಲಿನ ಬಳಿಕ ಲಕ್ನೋನತ್ತ ಮುಖ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂದಿನ 5 ಪಂದ್ಯಗಳಲ್ಲಿ 2 ಗೆಲುವು ದಾಖಲಿಸುವ ಮೂಲಕ ಪ್ಲೇಆಫ್​ಗೇರುವ ವಿಶ್ವಾಸದಲ್ಲಿದೆ. ಅದರಲ್ಲೂ ಮುಂದಿನ ಐದು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ ಮಾತ್ರ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಬಹುದು. ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಪಡೆಯಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.

Source link