ಬೆಂಗಳೂರು (ಮೇ. 01): ಇಂಡಿಯನ್ ಪ್ರೀಮಿಯರ್ ಲೀಗ್ 2026 ರ 42ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲು ಕಂಡಿದೆ. ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ದೊಡ್ಡ ಟಾರ್ಗೆಟ್ ನೀಡಲು ವಿಫಲವಾಯಿತು. ಪರಿಣಾಮ ನಾಲ್ಕು ವಿಕೆಟ್‌ಗಳಿಂದ ಜಿಟಿ ಗೆದ್ದು ಬೀಗಿತು. ಈ ಪಂದ್ಯದಲ್ಲಿ ಕೆಲ ವಿಚಿತ್ರ ಘಟನೆ ಕೂಡ ನಡೆಯಿತು. ಜೇಸನ್ ಹೋಲ್ಡರ್ ಹಿಡಿದ ಕ್ಯಾಚ್ ವಿವಾದಕ್ಕೆ ಕಾರಣವಾದರೆ, ಅತ್ತ ವಿರಾಟ್ ಕೊಹ್ಲಿ (Virat Kohli) ಸೆಲೆಬ್ರೇಷನ್ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಗುಜರಾತ್ ಟೈಟಾನ್ಸ್ ಗುರಿ ಬೆನ್ನಟ್ಟುವ ಸಂದರ್ಭ ಶುಭ್ಮನ್ ಗಿಲ್ ಔಟಾದಾಗ ವಿರಾಟ್ ಕೊಹ್ಲಿ ಸೆಲೆಬ್ರೇಷನ್ ಮಾಡಿದ ರೀತಿ ಸಾಮಾಜಿಕ ತಾಣಗಳಲ್ಲಿ ಟೀಕೆಗೆ ಗುರಿಯಾಗಿದೆ. ಕ್ರಿಕೆಟ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಶಾಂತ ಸ್ವಭಾವ ಹೊಂದಿದ್ದರು. ಒಂದು ಕಾಲದಲ್ಲಿ ಆಕ್ರಮಣಶೀಲತೆಗೆ ಹೆಸರುವಾಸಿಯಾಗಿದ್ದ ಕೊಹ್ಲಿ ಅವರ ಸ್ವಭಾವ ಕಳೆದ ಕೆಲವು ವರ್ಷಗಳಿಂದ ಗಮನಾರ್ಹವಾಗಿ ಬದಲಾಗಿದೆ. ಆದಾಗ್ಯೂ, ನಿನ್ನೆಯ ಪಂದ್ಯದಲ್ಲಿ ಕೊಹ್ಲಿ ಅವರ ಹಳೆಯ ಆಕ್ರಮಣಶೀಲತೆ ಮೈದಾನದಲ್ಲಿ ಎದ್ದುಕಂಡಿತು.
ಗಿಲ್ ಅವರ ಕ್ಯಾಚ್ ಹಿಡಿದ ನಂತರ ವಿರಾಟ್ ಕೋಪ
ಟಾರ್ಗೆಟ್ ಬೆನ್ನಟ್ಟಲು ಬಂದ ಜಿಟಿ ಪರ ಶುಭ್ಮನ್ ಗಿಲ್ ತಂಡಕ್ಕೆ ಸ್ಫೋಟಕ ಆರಂಭ ನೀಡಿದ್ದರು. ಆದರೆ, ಐದನೇ ಓವರ್‌ನ ಕೊನೆಯ ಎಸೆತದಲ್ಲಿ ಗಿಲ್ ವಿಕೆಟ್ ಪತನವಾಯಿತು. ಭುವನೇಶ್ವರ್ ಕುಮಾರ್ ಎಸೆತದಲ್ಲಿ ಗಿಲ್ ಬಿರುಸಿನ ಶಾಟ್ ಹೊಡೆದರು, ಆದರೆ ವಿರಾಟ್ ಕೊಹ್ಲಿ ಕವರ್‌ನಲ್ಲಿ ಕ್ಯಾಚ್ ಪಡೆದರು. ಕ್ಯಾಚ್ ಹಿಡಿದಾಗ ಕೊಹ್ಲಿ ಸಾಕಷ್ಟು ಆಕ್ರಮಣಕಾರಿಯಾದರು. ಮೊದಲು, ಗಿಲ್ ಅವರನ್ನು ಕೊಹ್ಲಿ ಕೆಲವು ಸೆಕೆಂಡುಗಳ ಕಾಲ ದಿಟ್ಟಿಸಿ ನೋಡಿದರು, ನಂತರ ಚೆಂಡನ್ನು ಬಲವಾಗಿ ನೆಲಕ್ಕೆ ಹೊಡೆದು ಬೊಬ್ಬೆ ಹೊಡೆಯಲು ಪ್ರಾರಂಭಿಸಿದರು.
ಗಿಲ್ ಔಟಾದಾಗ ವಿರಾಟ್ ಕೊಹ್ಲಿ ಮಾಡಿದ ಸೆಲೆಬ್ರೇಷನ್ನ ವಿಡಿಯೋ
ವಿರಾಟ್ ಕೊಹ್ಲಿ ಅವರ ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ದೇಶೀಯ ಪಂದ್ಯದಲ್ಲಿ, ಅದರಲ್ಲೂ ಓರ್ವ ಶ್ರೇಷ್ಠ ಭಾರತೀಯ ಬ್ಯಾಟರ್ ಔಟಾದಾಗ ಈರೀತಿ ಸೆಲೆಬ್ರೇಷನ್ ಮಾಡಿದ್ದು ತಪ್ಪು ಎಂದು ಅನೇಕರು ಸಾಮಾಜಿಕ ತಾಣಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ. ಒಟ್ಟಾರೆ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
GT vs RCB: ಕಳಪೆ ಬ್ಯಾಟಿಂಗ್, ಫಿಲ್ಡಿಂಗ್ಗೆ ಸೋಲಿನ ಬೆಲೆ ತೆತ್ತ ಆರ್‌ಸಿಬಿ
ಸೋತರೂ ಎರಡನೇ ಸ್ಥಾನದಲ್ಲಿ ಆರ್‌ಸಿಬಿ ಭದ್ರ
ಈ ಸೋಲಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಹಿನ್ನಡೆ ಏನೂ ಆಗಿಲ್ಲ, ಇನ್ನೂ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆರ್‌ಸಿಬಿ ತಮ್ಮ ಒಂಬತ್ತು ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದಿದೆ ಮತ್ತು ಮೂರರಲ್ಲಿ ಸೋತಿದೆ. +1.420 ರ ನಿವ್ವಳ ರನ್ ದರದೊಂದಿಗೆ, ಆರ್‌ಸಿಬಿ ಇನ್ನೂ ಸುರಕ್ಷಿತ ಸ್ಥಾನದಲ್ಲಿದೆ, ಆದರೆ ಪಂಜಾಬ್ ಕಿಂಗ್ಸ್ ತಮ್ಮ ಸತತ ಗೆಲುವುಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.
ಅತ್ತ, ಗುಜರಾತ್ ಟೈಟಾನ್ಸ್ ಈ ಗೆಲುವಿನೊಂದಿಗೆ 10 ಅಂಕಗಳನ್ನು ತಲುಪಿದೆ. ಗುಜರಾತ್ ಇದುವರೆಗೆ ಒಂಬತ್ತು ಪಂದ್ಯಗಳನ್ನು ಆಡಿದ್ದು, ಐದು ಪಂದ್ಯಗಳನ್ನು ಗೆದ್ದು ನಾಲ್ಕರಲ್ಲಿ ಸೋತಿದೆ. ಅವರು ಐದನೇ ಸ್ಥಾನದಲ್ಲಿದ್ದರೂ, ಅಗ್ರ ನಾಲ್ಕು ತಂಡಗಳೊಂದಿಗೆ ಅವರ ಅಂತರವು ಗಮನಾರ್ಹವಾಗಿ ಕಡಿಮೆಯಾಗಿದೆ. ಗುಜರಾತ್‌ನ ನಿವ್ವಳ ರನ್ ದರ ಪ್ರಸ್ತುತ -0.192 ಆಗಿದ್ದು, ಮುಂಬರುವ ಪಂದ್ಯಗಳಲ್ಲಿ ಗೆಲುವಿನ ಜೊತೆಗೆ ರನ್ರೇಟ್ ಮುಖ್ಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ