ಬೆಂಗಳೂರು, ಏ.28: ಸಿಲಿಕಾನ್ ಸಿಟಿಯ ಹೃದಯಭಾಗ ಎಂ.ಜಿ. ರಸ್ತೆಯಲ್ಲಿರುವ (MG Road) ಪ್ರಖ್ಯಾತ ‘ತಂದೂರ್ ಹೋಟೆಲ್’ನಲ್ಲಿ ಯುವತಿಯೊಬ್ಬಳ ಮೇಲೆ ಮ್ಯಾನೇಜರ್ ಅಸಭ್ಯವಾಗಿ ವರ್ತಿಸಿ, ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಹೋಟೆಲ್ ಮ್ಯಾನೇಜರ್ ರವಿ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕೀರ್ತಿ ಎಂಬ ಯುವತಿ ನಿನ್ನೆ (ಏ.27) ಮಧ್ಯಾಹ್ನ ಸುಮಾರು 2:30ರ ಸಮಯದಲ್ಲಿ ತಮ್ಮ ಸ್ನೇಹಿತರೊಂದಿಗೆ ಊಟಕ್ಕಾಗಿ ತಂದೂರ್ ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಗ್ರಾಹಕರು ಮತ್ತು ಹೋಟೆಲ್ ಮ್ಯಾನೇಜರ್ ನಡುವೆ ಗಲಾಟೆ ಸಂಭವಿಸಿದೆ ಎನ್ನಲಾಗಿದೆ.
ಯುವತಿ ಕೀರ್ತಿ ಅವರು ನೀಡಿರುವ ದೂರಿನಲ್ಲಿ ಏನಿದೆ?
ಹೋಟೆಲ್ ಮ್ಯಾನೇಜರ್ ರವಿ ಯುವತಿಯೊಂದಿಗೆ ಅತ್ಯಂತ ಕೆಟ್ಟದಾಗಿ ನಡೆದುಕೊಂಡಿದ್ದಾನೆ ಎಂದು ಹೇಳಲಾಗಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ.ಗಲಾಟೆಯ ಸಂದರ್ಭದಲ್ಲಿ ಮ್ಯಾನೇಜರ್ ಯುವತಿಯ ಬಟ್ಟೆ ಹರಿಯಲು ಯತ್ನಿಸಿದ್ದಾನೆ ಎಂಬ ಗಂಭೀರ ಆರೋಪವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ನಡೆದ ಬೆನ್ನಲ್ಲೇ ಕೀರ್ತಿ ಅವರು ಹಲಸೂರು ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ಯುವತಿಯ ದೂರಿನ ಅನ್ವಯ ಪೊಲೀಸರು ಮ್ಯಾನೇಜರ್ ರವಿ ವಿರುದ್ಧ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಹೋಟೆಲ್‌ನಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಸೋಲಿನ ಅಂಚಿನಲ್ಲಿದ್ದಾಗಲೂ ಅಭಿಮಾನಿಗಳು ಸಂಭ್ರಮಿಸಲು ಸಾಧ್ಯವೇ? ಸಾಧ್ಯ ಎಂಬುದಕ್ಕೆ ಡೆಲ್ಲಿ ಕ್ಯಾಪಿಟಲ್ಸ್ (DC) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಣ ಪಂದ್ಯ ಸಾಕ್ಷಿ. ಆರ್‌ಸಿಬಿ ವಿರುದ್ಧದ ಈ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸುತ್ತಿದ್ದರೂ, ಅಭಿಮಾನಿಗಳು ಮಾತ್ರ ತಮ್ಮ ತಂಡವು ಕನಿಷ್ಠ 50 ರನ್ ಬಾರಿಸಲಿ ಎಂದು ಕಾತರದಿಂದ ಕಾಯುತ್ತಿದ್ದರು. ಯಾವಾಗ ತಂಡದ ಸ್ಕೋರ್ 49 ದಾಟಿತೋ, ಆಗ ಸ್ಟೇಡಿಯಂನಲ್ಲಿ ಮೊಳಗಿದ ಸಂಭ್ರಮದ ಅಲೆ ಅಷ್ಟಿಷ್ಟಲ್ಲ. ಆ ಅಪರೂಪದ ಕ್ಷಣ ಮತ್ತು ಅದರ ಹಿಂದಿನ ಸ್ವಾರಸ್ಯಕರ ಕಥೆ ಇಲ್ಲಿದೆ.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಆರ್‌ಸಿಬಿ ಬೌಲರ್‌ಗಳ ಮಾರಕ ದಾಳಿಗೆ ಸಿಲುಕಿ ದಿಕ್ಕೆಟ್ಟಿತು. ಪವರ್‌ಪ್ಲೇ ಮುಕ್ತಾಯದ ವೇಳೆಗೆ ಕೇವಲ 13 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಡೆಲ್ಲಿ, ಐಪಿಎಲ್ ಇತಿಹಾಸದ ಅತ್ಯಂತ ಕಡಿಮೆ ಮೊತ್ತಕ್ಕೆ ಔಟ್ ಆಗುವ ಭೀತಿಯಲ್ಲಿತ್ತು.
ಐಪಿಎಲ್ ಇತಿಹಾಸದಲ್ಲಿ 49 ರನ್ ಅತ್ಯಂತ ಕಡಿಮೆ ಮೊತ್ತ. ಈ ಹೀನಾಯ ದಾಖಲೆ ಇರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರಿನಲ್ಲಿ. 2017ರ ಐಪಿಎಲ್ ಸೀಸನ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್‌ಸಿಬಿ ಕೇವಲ 49 ರನ್‌ಗಳಿಗೆ ಆಲೌಟ್ ಆಗಿದ್ದರು.
ಈ ಹೀನಾಯ ದಾಖಲೆಯನ್ನು ಅಳಿಸಿ ಹಾಕುವ ಅವಕಾಶ ಆರ್‌ಸಿಬಿ ಮುಂದಿತ್ತು. ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೇವಲ 13 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಹೀಗಾಗಿ ಎಲ್ಲರೂ ಆರ್‌ಸಿಬಿ ತನ್ನ ಅನಗತ್ಯ ದಾಖಲೆಯ ಹಣೆಪಟ್ಟಿಯನ್ನು ಕಳಚಲಿದೆ ಎಂದು ಭಾವಿಸಿದ್ದರು.
ಆದರೆ ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಅಭಿಮಾನಿಗಳು ಒಂದು ಬಾರಿ ತಂಡದ ಸ್ಕೋರ್ 49 ದಾಟಲು ಕಾಯುತ್ತಿದ್ದರು. ಹೀಗಾಗಿಯೇ ಪ್ರತಿ ರನ್ ಬಂದಾಗಲೂ ಹರ್ಷೋದ್ಘಾರ ಮುಗಿಲು ಮುಟ್ಟುತ್ತಿತ್ತು.
49 ಸಂಭ್ರಮ:
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಕೋರ್ 40 ರನ್ ದಾಟುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು “49… 49…” ಎಂದು ಏಕದನಿಯಲ್ಲಿ ಕೂಗಲಾರಂಭಿಸಿದರು. ಡೆಲ್ಲಿ ತಂಡವು 49 ರನ್‌ಗಳನ್ನು ದಾಟಲಿ ಎಂಬುದು ಅವರ ಈ ಸಂಭ್ರಮದ ಹಿಂದಿನ ಉದ್ದೇಶವಾಗಿತ್ತು.
ಅಂತಿಮವಾಗಿ ಕೈಲ್ ಜೇಮಿಸನ್ ಸಿಕ್ಸರ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ಇತ್ತ ತಂಡದ ಸ್ಕೋರ್ ಐವತ್ತು ದಾಟುತ್ತಿದ್ದಂತೆ ಇಡೀ ಸ್ಟೇಡಿಯಂ ಕಿಕ್ಕಿರಿದು ಸಂಭ್ರಮಿಸಿತು. ಇದು ತಂಡ ಗೆದ್ದಾಗ ಆಗುವ ಸಂಭ್ರಮಕ್ಕಿಂತಲೂ ಹೆಚ್ಚಾಗಿತ್ತು!
ಅಭಿಮಾನಿಗಳ ಈ ಚೇಷ್ಟೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. “ಆರ್‌ಸಿಬಿ ತನ್ನ 49 ರನ್‌ಗಳ ದಾಖಲೆಯನ್ನು ಉಳಿಸಿಕೊಂಡಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದಗಳು” ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.
ಪಂದ್ಯದ ಫಲಿತಾಂಶ:
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 16.3 ಓವರ್ಗಳಲ್ಲಿ 75 ರನ್ ಬಾರಿಸಿ ಆಲೌಟ್ ಆಗಿತ್ತು. ಈ ಸುಲಭ ಗುರಿಯನ್ನು ಆರ್‌ಸಿಬಿ ತಂಡ 6.3 ಓವರ್ಗಳಲ್ಲಿ ಚೇಸ್ ಮಾಡಿ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಒಟ್ಟಿನಲ್ಲಿ ಈ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಅಭಿಮಾನಿಗಳ ಪಾಲಿಗೆ ಇದು ಮರೆಯಬೇಕಾದ ಪಂದ್ಯವಾದರೂ, ಕ್ರೀಡಾಂಗಣದಲ್ಲಿ ಮೊಳಗಿದ ‘49’ರ ಘೋಷಣೆ ಮಾತ್ರ ಐಪಿಎಲ್ ಇತಿಹಾಸದ ತಮಾಷೆಯ ಕ್ಷಣಗಳಲ್ಲಿ ಒಂದಾಗಿ ಉಳಿಯಲಿದೆ.
ಕೇಂದ್ರ ಮೀಸಲು ಪೊಲೀಸ್ ಪಡೆ (CRPF) 2026ನೇ ಸಾಲಿನ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಕಾನ್ಸ್‌ಟೇಬಲ್ (ತಾಂತ್ರಿಕ, ಟ್ರೇಡ್ಸ್‌ಮನ್ ಮತ್ತು ಪಯೋನಿಯರ್) ವಿಭಾಗಗಳಲ್ಲಿ ಒಟ್ಟು 9,175 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಆಂಧ್ರಪ್ರದೇಶಕ್ಕೆ 504 ಮತ್ತು ತೆಲಂಗಾಣಕ್ಕೆ 353 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದ್ದು, ದೇಶಾದ್ಯಂತ ಮಹಿಳಾ ಅಭ್ಯರ್ಥಿಗಳಿಗೆ 79 ಹುದ್ದೆಗಳು ಮೀಸಲಿವೆ. ಪಯೋನಿಯರ್ ವಿಭಾಗದ ಹುದ್ದೆಗಳಿಗೆ ಎಲ್ಲಾ ರಾಜ್ಯದ ಅಭ್ಯರ್ಥಿಗಳು ಸ್ಪರ್ಧಿಸಬಹುದಾಗಿದೆ.
ಅರ್ಹತೆ ಮತ್ತು ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಅಥವಾ ಸಂಬಂಧಿತ ಟ್ರೇಡ್‌ನಲ್ಲಿ ITI ಉತ್ತೀರ್ಣರಾಗಿರಬೇಕು. ಚಾಲಕ (Driver) ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 10ನೇ ತರಗತಿಯ ಜೊತೆಗೆ ಭಾರೀ ವಾಹನ ಚಾಲನಾ ಪರವಾನಗಿ (HMV License) ಹೊಂದಿರಬೇಕು. ವಯೋಮಿತಿಯು ಸಾಮಾನ್ಯ ಹುದ್ದೆಗಳಿಗೆ 18 ರಿಂದ 23 ವರ್ಷ ಹಾಗೂ ಚಾಲಕ ಹುದ್ದೆಗಳಿಗೆ 21 ರಿಂದ 27 ವರ್ಷಗಳ ಒಳಗಿರಬೇಕು. ಸರ್ಕಾರದ ನಿಯಮದಂತೆ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ:
ಅಭ್ಯರ್ಥಿಗಳ ಆಯ್ಕೆಯು ಬಹುಹಂತಗಳಲ್ಲಿ ನಡೆಯಲಿದೆ. ಮೊದಲಿಗೆ ದೈಹಿಕ ದಕ್ಷತೆ ಪರೀಕ್ಷೆ (PET) ಮತ್ತು ದೈಹಿಕ ಗುಣಮಟ್ಟ ಪರೀಕ್ಷೆ (PST) ನಡೆಸಲಾಗುವುದು. ಇದರಲ್ಲಿ ಅರ್ಹರಾದವರಿಗೆ 100 ಅಂಕಗಳ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ (CBT) ಇರಲಿದ್ದು, ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳ ಕಡಿತವಿರುತ್ತದೆ (Negative Marking). ನಂತರ ಅಗತ್ಯವಿರುವ ಹುದ್ದೆಗಳಿಗೆ 50 ಅಂಕಗಳ ಕೌಶಲ್ಯ ಪರೀಕ್ಷೆ (Trade Test), ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವ ಮೂಲಕ ಅಂತಿಮ ಆಯ್ಕೆ ಮಾಡಲಾಗುತ್ತದೆ.
ದೈಹಿಕ ಮಾನದಂಡಗಳು:
ದೈಹಿಕ ಗುಣಮಟ್ಟ ಪರೀಕ್ಷೆಯಲ್ಲಿ ಪುರುಷ ಅಭ್ಯರ್ಥಿಗಳು ಕನಿಷ್ಠ 170 ಸೆಂ.ಮೀ ಎತ್ತರ ಮತ್ತು ಮಹಿಳಾ ಅಭ್ಯರ್ಥಿಗಳು ಕನಿಷ್ಠ 157 ಸೆಂ.ಮೀ ಎತ್ತರ ಹೊಂದಿರಬೇಕು (ಎಸ್‌ಟಿ ಅಭ್ಯರ್ಥಿಗಳಿಗೆ ಸಡಿಲಿಕೆ ಇದೆ). ದೈಹಿಕ ದಕ್ಷತೆ ಪರೀಕ್ಷೆಯಲ್ಲಿ ಪುರುಷರು 5 ಕಿಲೋಮೀಟರ್ ಓಟವನ್ನು 24 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕಾಗುತ್ತದೆ. ಮಹಿಳೆಯರಿಗೆ 1.6 ಕಿಲೋಮೀಟರ್ ಓಟದ ಗುರಿ ಇರುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಹಂತ-3ರ ಅಡಿಯಲ್ಲಿ ಆಕರ್ಷಕ ವೇತನ ನೀಡಲಾಗುತ್ತದೆ. ಆರಂಭಿಕ ಮೂಲ ವೇತನ 21,700 ರೂ. ಆಗಿದ್ದು, ಡಿಎ, ಎಚ್‌ಆರ್‌ಎ ಸೇರಿದಂತೆ ವಿವಿಧ ಭತ್ಯೆಗಳೊಂದಿಗೆ ಮಾಸಿಕ ವೇತನ ಸುಮಾರು 40,000 ರೂ. ಗಳವರೆಗೆ ಇರುತ್ತದೆ. ಆಸಕ್ತ ಅಭ್ಯರ್ಥಿಗಳು ಮೇ 19, 2026 ರೊಳಗೆ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕವಿದ್ದು, ಎಸ್‌ಸಿ/ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಮುಂಬೈ, ಏಪ್ರಿಲ್ 28: ಮುಂಬೈನ ನಯಾ ನಗರ ಪ್ರದೇಶದಲ್ಲಿ ಅಮೆರಿಕದಿಂದ ಬಂದಿರುವ ವ್ಯಕ್ತಿ ಇಬ್ಬರು ಭದ್ರತಾ ಸಿಬ್ಬಂದಿಗೆ ಇರಿದಿದ್ದಾನೆ. ಚಾಕುವಿನಿಂದ ಇರಿಯುವ ಮುನ್ನ ಆತ ಅವರ ಧರ್ಮವನ್ನು ಕೇಳಿದ್ದಾನೆ. ನೀವು ಯಾವ ಧರ್ಮದವರು ಎಂದು ಕೇಳಿದ ಆತ ಕಲ್ಮಾ ಪಠಿಸಲು ಸೂಚಿಸಿದ್ದಾನೆ. ಸೆಕ್ಯುರಿಟಿ ಕಲ್ಮಾ ಪಠಣ ಮಾಡದೆ ಇದ್ದಾಗ ಅವರಿಗೆ ಇರಿದಿದ್ದಾನೆ. ಇದು ಪಹಲ್ಗಾಮ್ನಲ್ಲಿ (Pahalgam Attack) ನಡೆದ ದಾಳಿಯನ್ನು ನೆನಪಿಸುತ್ತಿದೆ.
ಆರೋಪಿ 31 ವರ್ಷದ ಜೈಬ್ ಜುಬೇರ್ ಅನ್ಸಾರಿ ಇಸ್ಲಾಂನ ಮೂಲಭೂತ ಸಿದ್ಧಾಂತಗಳಾದ ‘ಕಲ್ಮಾ’ ಅಥವಾ ‘ಕಲಿಮಾ’ ಪಠಿಸುವಂತೆ ಸೆಕ್ಯುರಿಟಿಗಳಿಗೆ ಒತ್ತಾಯಿಸಿದ್ದ. ಸೆಕ್ಯುರಿಟಿ ಗಾರ್ಡ್‌ಗಳಾದ ರಾಜ್‌ಕುಮಾರ್ ಮಿಶ್ರಾ ಮತ್ತು ಸುಬ್ರೋಟೊ ಸೇನ್ ಮುಸ್ಲಿಂ ಧರ್ಮದವರಲ್ಲ ಎಂದು ಗೊತ್ತಾಗುತ್ತಿದ್ದಂತೆ ಚಾಕುವಿನಿಂದ ಇರಿದಿದ್ದಾನೆ. ವೋಕ್‌ಹಾರ್ಡ್ ಆಸ್ಪತ್ರೆಯ ಹಿಂದೆ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿದ್ದಾಗ ಅನ್ಸಾರಿ ಅವರಿಬ್ಬರ ಮೇಲೆ ದಾಳಿ ನಡೆಸಿದ್ದಾನೆ. ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ.
ಚಾಕು ಇರಿತದಿಂದ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ನಡೆದ 90 ನಿಮಿಷಗಳ ನಂತರ ಅನ್ಸಾರಿಯನ್ನು ಬಂಧಿಸಲಾಯಿತು. ಪೊಲೀಸರು ಅವನನ್ನು ಪತ್ತೆಹಚ್ಚಲು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿ ಕಾರ್ಯಾಚರಣೆ ನಡೆಸಿದರು. ಈ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸುವುದಾಗಿ ಮುಖ್ಯಮಮತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಬಂಧನದ ನಂತರ ಅನ್ಸಾರಿಯನ್ನು ಥಾಣೆಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮೇ 4ರವರೆಗೆ ಆತನನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪೊಲೀಸ್ ಮತ್ತು ರಾಜ್ಯ ಭಯೋತ್ಪಾದನಾ ನಿಗ್ರಹ ದಳದ ತಂಡವು ದಾಳಿಯ ತನಿಖೆ ನಡೆಸುತ್ತಿದೆ. ಇದು ಸಾಮಾನ್ಯವಾದ ದಾಳಿಯೇ ಅಥವಾ ದೊಡ್ಡ ಪಿತೂರಿಯ ಭಾಗವೇ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ಈಗ ಅನ್ಸಾರಿಯಿಂದ ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಪರಿಶೀಲಿಸುತ್ತಿದ್ದಾರೆ. ಮೂಲಗಳು ಹೇಳುವಂತೆ ಅನ್ಸಾರಿ ಬರೆದುಕೊಂಡ ನೋಟ್ಗಳಲ್ಲಿ ‘ISIS’, ‘ಒಂಟಿ ತೋಳ’, ‘ಜಿಹಾದ್’ ಮತ್ತು ‘ಗಾಜಾ’ ಮುಂತಾದ ಪದಗಳನ್ನು ಬರೆಯಲಾಗಿದೆ.
ಅನ್ಸಾರಿ ಹಲವಾರು ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದ. ಆತನ ಕುಟುಂಬದ ಸದಸ್ಯರು ಇನ್ನೂ ಆ ದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಆತನಿಗೆ ಅಲ್ಲಿ ಕೆಲಸ ಸಿಗಲಿಲ್ಲ. ಹೀಗಾಗಿ ಭಾರತಕ್ಕೆ ಮರಳಬೇಕಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಧಾರವಾಡ, ಏಪ್ರಿಲ್ 28: ಕುಂದಗೋಳ ಪಟ್ಟಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜನಸಂಪರ್ಕ ಸಭೆಯ ಮಧ್ಯೆ, ರೈತರೊಬ್ಬರು ತಮ್ಮ ಸಮಸ್ಯೆಗಳ ಕುರಿತು ಕೂಗಾಡಿದ್ದಾರೆ. ಅಧಿಕಾರಿಗಳು ವೈಯಕ್ತಿಕವಾಗಿ ಅರ್ಜಿಗಳನ್ನು ಸಲ್ಲಿಸುವಂತೆ ಸೂಚಿಸಿದರೂ, ರೈತರು ಸಭೆಯಲ್ಲಿಯೇ ತಮ್ಮ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಕೇಳುವ ಪ್ರಯತ್ನ ಮಾಡಿದ ಪ್ರಸಂಗ ನಡೆದಿದೆ. ಈ ಘಟನೆಯು ಕುಂದಗೋಳದ ಜನಸಂಪರ್ಕ ಸಭೆಯಲ್ಲಿ ಅಲ್ಪ ಕಾಲ ಗೊಂದಲಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಭೆ ಗೊಂದಲದ ಗೂಡಾದ ಕಾರಣ, ವೇದಿಕೆಯಲ್ಲೇ ಅಧಿಕಾರಿಗಳನ್ನು ಸಚಿವ ಸಂತೋಷ್ ಲಾಡ್ ತರಾಟೆಗೆ ಪಡೆದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನ 40ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಲ್ಲನ್ಪುರ್ನ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಏಕೆಂದರೆ ಉಭಯ ತಂಡಗಳಲ್ಲಿ ಸ್ಫೋಟಕ ದಾಂಡಿಗರ ದಂಡೇ ಇದ್ದು, ಹೀಗಾಗಿ ಪವರ್ಪ್ಲೇನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಎದುರು ನೋಡಬಹುದಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಉಭಯ ತಂಡಗಳು ಈವರೆಗೆ 30 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ರಾಜಸ್ಥಾನ್ ರಾಯಲ್ಸ್ ತಂಡ 17 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಇದೇ ವೇಳೆ ಪಂಜಾಬ್ ಕಿಂಗ್ಸ್ ತಂಡ ಗೆದ್ದಿರುವುದು ಕೇವಲ 13 ಪಂದ್ಯಗಳಲ್ಲಿ ಮಾತ್ರ. ಅಂದರೆ ಈ ಹಿಂದಿನ ಅಂಕಿ ಅಂಶಗಳ ಪ್ರಕಾರ ರಾಜಸ್ಥಾನ್ ರಾಯಲ್ಸ್ ತಂಡ ಬಲಿಷ್ಠವಾಗಿದೆ. ಆದರೆ ಕಳೆದ ಸೀಸನ್ನಿಂದ ಶ್ರೇಯಸ್ ಅಯ್ಯರ್ ಮುಂದಾಳತ್ವದಲ್ಲಿ ಕಣಕ್ಕಿಳಿಯುತ್ತಿರುವ ಪಂಜಾಬ್ ಕಿಂಗ್ಸ್ ಬಲಿಷ್ಠ ಪಡೆಯಾಗಿ ಗುರುತಿಸಿಕೊಂಡಿದ್ದು, ಹೀಗಾಗಿ ಆರ್ಆರ್ ತಂಡಕ್ಕೆ ಈ ಬಾರಿ ಕಠಿಣ ಪೈಪೋಟಿ ಒಡ್ಡುವುದು ಖಚಿತ.
ರಾಜಸ್ಥಾನ್ ರಾಯಲ್ಸ್ ತಂಡ: ರಿಯಾನ್ ಪರಾಗ್ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಡೊನೊವನ್ ಫೆರೇರಾ, ಸಂದೀಪ್ ಶರ್ಮಾ, ಶುಭಂ ದುಬೆ, ವೈಭವ್ ಸೂರ್ಯವಂಶಿ, ಲುವಾನ್-ಡ್ರೆ ಪ್ರಿಟೋರಿಯಸ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್, ಯುಧ್ವೀರ್ ಸಿಂಗ್ ಚರಕ್, ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ಕ್ವೇನಾ ಮಫಾಕ, ನಾಂಡ್ರೆ ಬರ್ಗರ್, ರವಿ ಬಿಷ್ಣೋಯ್, ಸುಶಾಂತ್ ಮಿಶ್ರಾ, ಯಶ್ ರಾಜ್ ಪುಂಜಾ, ವಿಘ್ನೇಶ್ ಪುತ್ತೂರ್, ರವಿ ಸಿಂಗ್, ಅಮನ್ ರಾವ್, ಬ್ರಿಜೇಶ್ ಶರ್ಮಾ, ಆಡಮ್ ಮಿಲ್ನ್, ಕುಲದೀಪ್ ಸೇನ್.
ಬೆಂಗಳೂರು, ಏ.28: ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಈಗ ಹೊಸದೊಂದು ಆತಂಕ ಎದುರಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಹೆಬ್ಬಾಳ (Hebbal) ಮತ್ತು ಗೊರಗುಂಟೆಪಾಳ್ಯ (Goraguntepalya) ನಡುವಿನ ಸಂಚಾರ ಈಗ ಪಂಕ್ಚರ್ ದಂಧೆಕೋರರ ಸಂಚಿನಿಂದಾಗಿ ಪ್ರಾಣಾಪಾಯಕಾರಿಯಾಗುತ್ತಿದೆ. ಈ ಹಿಂದೆ ಪ್ಲೈಓವರ್ಗಳಲ್ಲಿ ಇಂತಹ ಸಂಚುಗಳನ್ನು ಮಾಡಿ. ಹಣ ವಸೂಲಿ ಮಾಡುತ್ತಿದ್ದರು. ಇದೀಗ ನಗರ ಪ್ರದೇಶದಲ್ಲಿ ಪ್ರಮುಖ ರಸ್ತೆಗಳಲ್ಲೂ ಈ ದಂಧೆ ಬಂದಿದೆ. ಈ ಬಗ್ಗೆ ವಿಡಿಯೋವೊಂದನ್ನು @KarnatakaPortfolio ಎಂಬ ಎಕ್ಸ್ ಖಾತೆ ಹಂಚಿಕೊಂಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಳೆದ ಕೆಲವು ದಿನಗಳಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಸರಣಿ ಪಂಕ್ಚರ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಂಶಯಗೊಂಡು ಪರಿಶೀಲಿಸಿದಾಗ ರಸ್ತೆಯ ಮೇಲೆ ಉದ್ದೇಶಪೂರ್ವಕವಾಗಿ ನೂರಾರು ಮೊಳೆಗಳನ್ನು ಹರಡಿರುವುದು ಪತ್ತೆಯಾಗಿದೆ. ಇದು ಕೇವಲ ಕಾಕತಾಳೀಯವಲ್ಲ, ಬದಲಾಗಿ ವಾಹನ ಸವಾರರನ್ನು ಸುಲಿಗೆ ಮಾಡಲು ನಡೆಸುತ್ತಿರುವ ವ್ಯವಸ್ಥಿತ ಸಂಚು ಎಂಬುದು ಸ್ಪಷ್ಟವಾಗಿದೆ.
ಇಲ್ಲಿದೆ ನೋಡಿ ವಿಡಿಯೋ:
Nail Trap Mafia Back in Bengaluru? Are Roads Being Turned into Profit Zones for Puncture Rackets
The menace of puncture gangs appears to be resurfacing in Bengaluru, raising serious concerns about public safety and law enforcement. Fresh reports are emerging from the stretch… pic.twitter.com/Rfp1rHzhYQ
ಈ ಕೃತ್ಯದ ಹಿಂದೆ ಬಲವಾದ ಅನುಮಾನಗಳು ಸೃಷ್ಟಿಯಾಗಿದೆ. ಮೊಳೆಗಳು ಬಿದ್ದಿರುವ ಜಾಗದ ಕೆಲವೇ ಮೀಟರ್‌ಗಳ ಅಂತರದಲ್ಲಿ ಪಂಕ್ಚರ್ ರಿಪೇರಿ ಅಂಗಡಿಗಳು ಇರುವುದು ಈ ಸಂಶಯಕ್ಕೆ ಪುಷ್ಟಿ ನೀಡಿದೆ. ವಾಹನ ಸವಾರರು ಅಸಹಾಯಕರಾದಾಗ ಅವರಿಂದ ಹೆಚ್ಚಿನ ಹಣ ವಸೂಲಿ ಮಾಡುವ ಉದ್ದೇಶದಿಂದ ಈ ರೀತಿ ಮೊಳೆಗಳನ್ನು ರಸ್ತೆಗೆ ಸುರಿಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ವೇಗವಾಗಿ ಚಲಿಸುವ ವಾಹನಗಳ ಟೈರ್ ಏಕಾಏಕಿ ಪಂಕ್ಚರ್ ಆದರೆ ಚಾಲಕನ ನಿಯಂತ್ರಣ ತಪ್ಪಿ ದೊಡ್ಡ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಲಾಭಕ್ಕಾಗಿ ಜನರ ಪ್ರಾಣದ ಜೊತೆ ಆಟವಾಡುತ್ತಿರುವ ಈ ‘ಪಂಕ್ಚರ್ ಮಾಫಿಯಾ’ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. ಬೆಂಗಳೂರಿನಂತಹ ಐಟಿ ಹಬ್‌ನಲ್ಲಿ ಇಂತಹ ಕೀಳುಮಟ್ಟದ ದಂಧೆಗಳು ನಡೆಯುತ್ತಿರುವುದು ನಗರದ ಘನತೆಗೆ ಧಕ್ಕೆ ತರುತ್ತಿದೆ. ಪೊಲೀಸರು ಕೂಡಲೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಇಂತಹ ಕೃತ್ಯಗಳಲ್ಲಿ ತೊಡಗಿರುವವರನ್ನು ಪತ್ತೆಹಚ್ಚಿ ಜೈಲಿ ಹಾಕಬೇಕು ಎಂದು ಎಕ್ಸ್ನಲ್ಲಿ ಅಕ್ರೋಶ ವ್ಯಕ್ತವಾಗಿದೆ.
ತುಮಕೂರು, ಏಪ್ರಿಲ್ 28: ಕ್ಷುಲ್ಲಕ ವಿಚಾರಕ್ಕೆ ಒಡಹುಟ್ಟಿದವರ ನಡುವೆ ಆರಂಭವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ. ಮಧುಗಿರಿ ತಾಲೂಕಿನ ನಿಟ್ಟರಹಳ್ಳಿ ನಿವಾಸಿ ಗಂಗರಾಜು ಮೃತನಾಗಿದ್ದು, ಕಲ್ಲಿನಿಂದ ಜಜ್ಜಿ ಸಹೋದರನ ಹತ್ಯೆಗೈದ ಆರೋಪಿ ನರಸಿಂಹಮೂರ್ತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ಕೋಪದ ಕೈಗೆ ಬುದ್ಧಿಕೊಟ್ಟ ಅಣ್ಣ ಜೈಲು ಸೇರಿದ್ದರೆ, ಮದ್ಯಕ್ಕೆ ದಾಸನಾಗಿದ್ದ ತಮ್ಮ ಇಹಲೋಕವನ್ನೇ ತೊರೆದಿದ್ದಾನೆ. ಭೀಕರ ಘಟನೆಗೆ ಸ್ಥಳೀಯರು ಬೆಚ್ಚಿಬಿದ್ದಿದ್ದು, ಮೃತ ಗಂಗರಾಜು ಅವಿವಾಹಿತ ಎಂಬುದು ಕೂಡ ಗೊತ್ತಾಗಿದೆ.
ಇನ್ನು ಗಂಗರಾಜು ಸಹೋದರರರಿಗೆ ಅಪ್ಪ-ಅಮ್ಮ ಇರಲಿಲ್ಲ. ಹೀಗಾಗಿ ಅಜ್ಜಿಯ ಆಶ್ರಯದಲ್ಲಿಯೇ ಇವರು ಬೆಳೆದಿದ್ದರು. ಓದು ತಲೆಗೆ ಹತ್ತದಿದ್ದರೂ ಕುಡಿತದ ಚಟ ಮಾತ್ರ ಮೈಗಂಟಿತ್ತು. ಮದುವೆ ಬಳಿಕ ಗಂಗರಾಜು ಅಣ್ಣಂದಿರು ಬೇರೆ ಮನೆ ಮಾಡಿಕೊಂಡು ವಾಸವಿದ್ದರೆ, ಈತ ಮಾತ್ರ ಅಜ್ಜಿಯ ಸೇವೆ ಮಾಡಿಕೊಂಡು ಆಕೆಯ ಜೊತೆಗೇ ಇದ್ದ. ಈ ನಡುವೆ ನಿನ್ನೆ ಸಂಜೆ ವೇಳೆಗೆ ಮನೆಯಲ್ಲಿದ್ದ ಗಂಗರಾಜು ಬಾರ್ಗೆ ತೆರಳಿ ಕುಡಿದು ಬಂದಿದ್ದಾನೆ. ಇದೇ ವೇಳೆ ಸಹೋದರ ನರಸಿಂಹಮೂರ್ತಿ ಸಹ ಕುಡಿದ ಮತ್ತಿನಲ್ಲಿ ಪ್ರತ್ಯಕ್ಷನಾಗಿದ್ದಾನೆ. ಈ ವೇಳೆ ಅಣ್ಣ-ತಮ್ಮನ ನಡುವೆ ಹಣದ ವಿಚಾರ ಸಂಬಂಧ ಗಲಾಟೆ ಶುರುವಾಗಿದೆ. ಆ ಜಗಳ ವಿಕೋಪಕ್ಕೆ ತೆರಳಿ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ನಡುವೆ ಕುಸಿದು ಬಿದ್ದ ಗಂಗರಾಜುವಿನ ಮೇಲೆ ಅಲ್ಲೇ ಇದ್ದ ಕಲ್ಲಿನಿಂದ ನರಸಿಂಹಮೂರ್ತಿ ದಾಳಿ ಮಾಡಿದ್ದಾನೆ. ತಲೆಗೆ ಕಲ್ಲಿನಿಂದ ಹಲ್ಲೆ ಮಾಡಿ ಸಹೋದರನ ಕೊಲೆಗೈದಿದ್ದಾನೆ.
ಪ್ರಕರಣ ಸಂಬಂಧ ಕೊಡಿಗೇನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಗಂಗರಾಜುವಿನ ಮತ್ತೋರ್ವ ಸಹೋದರ ನೀಡಿರುವ ದೂರಿನ ಅನ್ವಯ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಕುಡಿದ ಮತ್ತಿನಲ್ಲಿ ನಡೆದ ಜಗಳದಲ್ಲಿ ತಮ್ಮನ ಕೊಂದ ಅಣ್ಣನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತಿದ್ದಾರೆ. ಮೇಲ್ನೋಟಕ್ಕೆ ಕ್ಷುಲ್ಲಕ ವಿಚಾರಕ್ಕೆ ಕೊಲೆ ನಡೆದಿರುವಂತೆ ಕಂಡುಬಂದಿದೆ. ಆದರೆ ಇದರ ಹೊರತಾಗಿ ಸಹೋದರರ ನಡುವೆ ಬೇರೆನಾದರೂ ವಿಚಾರ ಸಂಬಂಧ ಜಗಳ ಸೃಷ್ಟಿಯಾಗಿ ಕೊಲೆ ನಡೆದಿದೆಯಾ ಎಂಬ ಅನುಮಾನ ಸಹ ಮೂಡಿದ್ದು, ಪೊಲೀಸರ ತನಿಖೆಯಿಂದಷ್ಟೇ ಮತ್ತಷ್ಟು ಸಂಗತಿಗಳು ಹೊರಬರಬೇಕಿವೆ.
ಬಿಗ್ಬಾಸ್ (Bigg Boss) ರಜತ್ ಮತ್ತೊಮ್ಮೆ ರೀಲ್ಸ್ ಕಾರಣಕ್ಕೆ ವಿವಾದಕ್ಕೆ ಸಿಲುಕಿದ್ದಾರೆ. ಈ ಹಿಂದೆ ಲಾಂಗ್ ಹಿಡಿದು ರೀಲ್ಸ್ ಮಾಡಿ ವಿವಾದಕ್ಕೊಳಗಾಗಿ ಜೈಲಿಗೆ ಸಹ ಹೋಗಿ ಬಂದಿದ್ದ ಬಿಗ್ಬಾಸ್ ರಜತ್, ಇದೀಗ ಮತ್ತೊಮ್ಮೆ ರೀಲ್ಸ್ ಕಾರಣಕ್ಕೆ ವಿವಾದಕ್ಕೆ ಒಳಗಾಗಿದ್ದಾರೆ. ಇತ್ತೀಚೆಗೆ ಬೈಕ್ ಒಂದರ ಪ್ರಚಾರಕ್ಕಾಗಿ ಸಣ್ಣ ರೀಲ್ಸ್ ಮಾಡಿದ್ದರು. ಅದರಲ್ಲಿ ಬೆಂಕಿ, ಬ್ಲಾಸ್ಟ್ಗಳನ್ನು ಸಹ ಬಳಸಲಾಗಿತ್ತು, ಅದರ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಇದೀಗ ಮತ್ತೊಂದು ವಿಡಿಯೋ ಅಪ್ಲೋಡ್ ಮಾಡಿರುವ ರಜತ್, ಕ್ಷಮೆ ಕೇಳಿದ್ದಾರೆ, ಅಲ್ಲದೆ ರೀಲ್ಸ್ ಅನ್ನು ಡಿಲೀಟ್ ಮಾಡಿರುವುದಾಗಿಯೂ ಹೇಳಿದ್ದಾರೆ. ವಿಡಿಯೋ ನೋಡಿ…
ಬಿರಿಯಾನಿ ತಿಂದ ನಂತರ ಕಲ್ಲಂಗಡಿ ಸೇವನೆ ಮಾರಕವೇ?Image Credit source: Pinterest
ಇತ್ತೀಚೆಗೆ ಮುಂಬೈನಲ್ಲಿ ನಡೆದ ಒಂದು ದುರದೃಷ್ಟಕರ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಬಿರಿಯಾನಿ ಸೇವಿಸಿದ ನಂತರ ಕಲ್ಲಂಗಡಿ ಹಣ್ಣನ್ನು ತಿಂದ ಒಂದೇ ಕುಟುಂಬದ ನಾಲ್ವರು ಸದಸ್ಯರು ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಭೀತಿ ಹುಟ್ಟಿಸಿದೆ. ಈ ಘಟನೆಯ ನಂತರ, “ಬಿರಿಯಾನಿ ಮತ್ತು ಕಲ್ಲಂಗಡಿ ಒಟ್ಟಿಗೆ ತಿಂದರೆ ಸಾವು ಸಂಭವಿಸುತ್ತದೆಯೇ?” ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಈ ಕುರಿತು ವೈದ್ಯಕೀಯ ತಜ್ಞರು ನೀಡಿರುವ ಸ್ಪಷ್ಟನೆ ಇಲ್ಲಿದೆ.
ಬಿರಿಯಾನಿ-ಕಲ್ಲಂಗಡಿ ಸಂಯೋಜನೆ ಸಾವಿಗೆ ಕಾರಣವಾಗುತ್ತದೆಯೇ?
ವೈದ್ಯಕೀಯ ತಜ್ಞರ ಪ್ರಕಾರ, ಬಿರಿಯಾನಿ ಮತ್ತು ಕಲ್ಲಂಗಡಿಯನ್ನು ಅಲ್ಪ ಅವಧಿಯಲ್ಲಿ ಸೇವಿಸುವುದರಿಂದ ನೇರವಾಗಿ ಸಾವು ಸಂಭವಿಸುವ ಸಾಧ್ಯತೆ ತೀರಾ ಕಡಿಮೆ. ಮುಂಬೈನ ಖ್ಯಾತ ಸಾಂಕ್ರಾಮಿಕ ರೋಗ ತಜ್ಞ (Infectious Disease Specialists) ಡಾ. ಈಶ್ವರ್ ಗಿಲಾಡಾ ಅವರ ಪ್ರಕಾರ, ಇವೆರಡೂ ವಿಭಿನ್ನ ರೀತಿಯ ಆಹಾರಗಳು ಮತ್ತು ಇವುಗಳ ಜೀರ್ಣಕ್ರಿಯೆಯ ಸಮಯ ಬೇರೆಯಾಗಿರುತ್ತದೆ. ಕಲ್ಲಂಗಡಿ ಬೇಗನೆ ಜೀರ್ಣವಾದರೆ, ಮಾಂಸಾಹಾರಿ ಆಹಾರವಾದ ಬಿರಿಯಾನಿ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ವ್ಯತ್ಯಾಸದಿಂದ ಜೀರ್ಣಕ್ರಿಯೆಯಲ್ಲಿ ಏರುಪೇರಾಗಿ ಹೊಟ್ಟೆ ಉಬ್ಬರ ಅಥವಾ ಅಜೀರ್ಣವಾಗಬಹುದೇ ಹೊರತು ತಕ್ಷಣದ ಸಾವಿಗೆ ಇದು ಕಾರಣವಾಗುವುದಿಲ್ಲ.
ಅಸಲಿ ಅಪಾಯ ಎಲ್ಲಿದೆ? ‘ಫುಡ್ ಪಾಯ್ಸನಿಂಗ್’ ಶಂಕೆ:
ಅಂತಹ ಸಂದರ್ಭಗಳಲ್ಲಿ ಸಾವಿಗೆ ಪ್ರಮುಖ ಕಾರಣ ‘ಫುಡ್ ಪಾಯ್ಸನಿಂಗ್’ (ಆಹಾರ ವಿಷವಾಗುವುದು) ಇರಬಹುದು ಎಂದು ವೈದ್ಯರು ಶಂಕಿಸುತ್ತಾರೆ. ಆಹಾರ ಅಥವಾ ಹಣ್ಣುಗಳನ್ನು ದೀರ್ಘಕಾಲದವರೆಗೆ ತೆರೆದಿಟ್ಟಿದ್ದರೆ ಅಥವಾ ಅವು ಹಳೆಯದಾಗಿದ್ದರೆ, ಅದರಲ್ಲಿ ಸಾಲ್ಮೊನೆಲ್ಲಾ, ಇ.ಕೋಲಿ ಅಥವಾ ಸ್ಟ್ಯಾಫಿಲೋಕೊಕಸ್‌ನಂತಹ ಅಪಾಯಕಾರಿ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ.
ಸೆಪ್ಸಿಸ್ ಭೀತಿ:
ಈ ಬ್ಯಾಕ್ಟೀರಿಯಾಗಳು ದೇಹ ಸೇರಿ ತೀವ್ರ ವಾಂತಿ ಮತ್ತು ಅತಿಸಾರಕ್ಕೆ ಕಾರಣವಾಗುತ್ತವೆ. ದೇಹದಲ್ಲಿ ನೀರಿನಂಶ ಮತ್ತು ಎಲೆಕ್ಟ್ರೋಲೈಟ್‌ಗಳ ಕೊರತೆಯಾಗಿ ರಕ್ತದೊತ್ತಡ ಹಠಾತ್ ಕುಸಿಯಬಹುದು. ಇದು ‘ಸೆಪ್ಸಿಸ್’ ಅಥವಾ ದೇಹದ ಅಂಗಾಂಗಗಳ ವೈಫಲ್ಯಕ್ಕೆ ಕಾರಣವಾಗಿ ಪ್ರಾಣಾಪಾಯ ಉಂಟುಮಾಡಬಹುದು.
ಕೆಲವೊಮ್ಮೆ ಕಲ್ಲಂಗಡಿ ಹಣ್ಣು ಹೆಚ್ಚು ಕೆಂಪಾಗಿ ಕಾಣಲು ಅಥವಾ ಬೇಗ ಹಣ್ಣಾಗಲು ಅಪಾಯಕಾರಿ ರಾಸಾಯನಿಕಗಳನ್ನು ಚುಚ್ಚಲಾಗುತ್ತದೆ. ಅಂತಹ ಕಲಬೆರಕೆ ಹಣ್ಣುಗಳನ್ನು ಸೇವಿಸಿದಾಗ ಅವು ದೇಹದಲ್ಲಿ ವಿಷವಾಗಿ ಪರಿಣಮಿಸಬಹುದು. ಒಂದು ವೇಳೆ ಕಲ್ಲಂಗಡಿ ಹಣ್ಣು ಕಲುಷಿತಗೊಂಡಿದ್ದರೆ ಅಥವಾ ಅದಕ್ಕೆ ವಿಷಕಾರಿ ಅಂಶಗಳು ಸೇರಿದರೆ ಮಾತ್ರ ಇಂತಹ ಸಾವುಗಳು ಸಂಭವಿಸಲು ಸಾಧ್ಯ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.
ತಜ್ಞರ ಸಲಹೆ ಏನು?
ತಾಜಾ ಆಹಾರ ಸೇವಿಸಿ: ಹೋಟೆಲ್ ಆಗಲಿ ಅಥವಾ ಮನೆಯಲ್ಲೇ ಆಗಲಿ, ತಯಾರಿಸಿದ ತಕ್ಷಣ ಆಹಾರ ಸೇವಿಸುವುದು ಉತ್ತಮ. ದೀರ್ಘಕಾಲ ಹೊರಗಿಟ್ಟ ಆಹಾರ ಬೇಡ.
ಹಣ್ಣುಗಳ ಶುಚಿತ್ವ: ಹಣ್ಣುಗಳನ್ನು ಕತ್ತರಿಸುವ ಮುನ್ನ ಚೆನ್ನಾಗಿ ತೊಳೆಯಿರಿ ಮತ್ತು ಕತ್ತರಿಸಿದ ತಕ್ಷಣ ಸೇವಿಸಿ. ಬಣ್ಣಕ್ಕಾಗಿ ರಾಸಾಯನಿಕ ಬಳಸಿದ ಹಣ್ಣುಗಳ ಬಗ್ಗೆ ಎಚ್ಚರವಿರಲಿ.
ಮುಂಬೈ ಘಟನೆಯಲ್ಲಿ ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ (Forensic) ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣವೇನು ಎಂಬುದು ತಿಳಿದುಬರಲಿದೆ.
ಗಮನಿಸಿ: ಈ ಮಾಹಿತಿಯು ಸಂಶೋಧನಾ ಅಧ್ಯಯನಗಳು ಮತ್ತು ತಜ್ಞರ ಅಭಿಪ್ರಾಯಗಳನ್ನು ಆಧರಿಸಿದೆ. ಇದನ್ನು ವೈದ್ಯಕೀಯ ಸಲಹೆಗೆ ಪರ್ಯಾಯವೆಂದು ಪರಿಗಣಿಸಬೇಡಿ. ನಿಮಗೆ ಯಾವುದೇ ಅನುಮಾನ ಅಥವಾ ಹೊಸ ಆಹಾರ ಕ್ರಮ, ವ್ಯಾಯಾಮವನ್ನು ಕೈಗೊಳ್ಳುವ ಮೊದಲು ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ