ನೆಮ್ಮದಿ, ಸುರಕ್ಷಿತ ಮತ್ತು ಯಶಸ್ವಿ ಜೀವನವನ್ನು ನಡೆಸಲು ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ಅನೇಕ ಪ್ರಮುಖ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಕೆಲವರಿಗೆ ಎಲ್ಲಾ ವಿಷಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಅಭ್ಯಾಸ ಇದೆ. ಚಾಣಕ್ಯರ ಪ್ರಕಾರ ಕೆಲವೊಮ್ಮೆ ನಾವು ಇತರರ ಬಳಿ ಹೇಳುವ ವಿಷಯಗಳು ಭವಿಷ್ಯದಲ್ಲಿ ನಮಗೆ ತೊಂದರೆ ಮತ್ತು ನಷ್ಟವನ್ನು ಉಂಟುಮಾಡಬಹುದು, ಕೆಲವೊಮ್ಮೆ ನಾವು ಮೋಸ ಹೋಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಕೆಲವೊಂದು ಸೀಕ್ರೆಟ್‌ಗಳನ್ನು ನಿಮಗೆ ಎಷ್ಟೇ ಆಪ್ತರಾಗಿರುವ ವ್ಯಕ್ತಿಗಳ ಬಳಿಯೂ ಸಹ ಹಂಚಿಕೊಳ್ಳಬಾರದು. ಅಂತಹ ವಿಚಾರಗಳನ್ನು ಆದಷ್ಟು ಗೌಪ್ಯವಾಗಿ ಇಟ್ಟುಕೊಳ್ಳುವುದೇ ಒಳ್ಳೆಯದು. ಆ ವೈಯಕ್ತಿಕ ರಹಸ್ಯ ವಿಷಯಗಳು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ನಿಮ್ಮ ಈ ವೈಯಕ್ತಿಕ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ:
ಆರ್ಥಿಕ ನಷ್ಟ: ಯಾರಿಗೂ ಆರ್ಥಿಕ ನಷ್ಟವನ್ನು ಬಹಿರಂಗಪಡಿಸಬಾರದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಏಕೆಂದರೆ, ನಿಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ತಿಳಿದ ನಂತರ, ಹೆಚ್ಚಿನ ಜನರು ನೀವು ಸಹಾಯ ಕೇಳಬಹುದು ಎಂಬ ಭಯದಿಂದ ನಿಮ್ಮಿಂದ ದೂರವಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮಗೆ ಯಾವುದೇ ಬೆಂಬಲ ಸಿಗುವುದಿಲ್ಲ, ನಿಮ್ಮ ಸ್ವಂತದವರೇ ನಿಮ್ಮಿಂದ ದೂರವಾಗುತ್ತಾರೆ. ಆದ್ದರಿಂದ, ನಿಮ್ಮ ಆರ್ಥಿಕ ಸಂಕಷ್ಟವನ್ನು ಎಂದಿಗೂ ಪ್ರದರ್ಶಿಸಬೇಡಿ, ಬದಲಾಗಿ ನಿಮ್ಮ ಪರಿಸ್ಥಿತಿಯನ್ನು ಸುಧಾರಿಸಲು ಸದ್ದಿಲ್ಲದೆ ಕೆಲಸ ಮಾಡಿ. ಜೊತೆಗೆ ನಿಮ್ಮ ಆದಾಯ, ಬ್ಯಾಂಕ್ ಬ್ಯಾಲೆನ್ಸ್ ಮತ್ತು ಆಸ್ತಿಗಳ ಬಗ್ಗೆಯೂ ಯಾರ ಬಳಿಯೂ ಹೇಳಬೇಡಿ.
ಕುಟುಂಬದಲ್ಲಿನ ಘರ್ಷಣೆಗಳು ಮತ್ತು ನ್ಯೂನತೆಗಳು: ಪ್ರತಿಯೊಂದು ಮನೆಯಲ್ಲೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಅಥವಾ ಜಗಳಗಳು ಇರುತ್ತವೆ, ಅದು ತೀರಾ ಸಾಮಾನ್ಯ ಕೂಡ. ಕುಟುಂಬದಲ್ಲಿ ನಡೆಯುವಂತಹ ಇಂತಹ ಘಟನೆಗಳ ಬಗ್ಗೆ ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬಾರದು ಎನ್ನುತ್ತಾರೆ ಚಾಣಕ್ಯ. ಏಕೆಂದರೆ ಈ ಜಗತ್ತಿನಲ್ಲಿ ನಮ್ಮ ಹಿತದೃಷ್ಟಿಯನ್ನು ಯೋಚಿಸುವವರು ಬಹಳ ಕಡಿಮೆ. ನೀವು ನಿಮ್ಮ ದುಃಖವನ್ನು ಹಂಚಿಕೊಳ್ಳುವ ವ್ಯಕ್ತಿ ನಿಮಗೆ ಸಹಾಯ ಮಾಡುವ ಬದಲು ನಿಮ್ಮನ್ನು ಅಪಹಾಸ್ಯ ಮಾಡುವ ಸಾಧ್ಯತೆಯಿದೆ, ಇದು ನಿಮ್ಮ ದುಃಖವನ್ನು ಇನ್ನಷ್ಟು ಹೆಚ್ಚಿಸಬಹುದು ಜೊತೆಗೆ ನಿಮ್ಮ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ.
ಯಾವುದೇ ಪ್ರಮುಖ ದ್ರೋಹ ಅಥವಾ ಅವಮಾನ: ಯಾರಾದರೂ ನಿಮಗೆ ದ್ರೋಹ ಮಾಡಿದ್ದರೆ, ಅಥವಾ ನಿಮ್ಮನ್ನು ಅವಮಾನಿಸಿದ್ದರೆ, ಆ ನೋವು ಮತ್ತು ಕೋಪವನ್ನು ಒಳಗೆ ಇಟ್ಟುಕೊಳ್ಳಿ. ಅದನ್ನು ಇತರರಿಗೆ ಹೇಳಬೇಡಿ. ನೀವು ಯಾರೋ ಒಬ್ಬರಿಂದ ದ್ರೋಹ ಅಥವಾ ಅವಮಾನಕ್ಕೊಳಗಾಗಿದ್ದೀರಿ ಎಂದು ಇತರರಿಗೆ ಹೇಳಿದಾಗ, ಜನರು ನಿಮ್ಮನ್ನು ದುರ್ಬಲ ಮತ್ತು ಮೂರ್ಖ ಎಂದು ನೋಡಲು ಪ್ರಾರಂಭಿಸುತ್ತಾರೆ. ನಿಮ್ಮ ಖ್ಯಾತಿ ಕಡಿಮೆಯಾಗುತ್ತದೆ. ಜೊತೆಗೆ ಅವರೂ ಸಹ ನಿಮಗೆ ದ್ರೋಹ ಬಗೆಯುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಚಾಣಕ್ಯರ ಪ್ರಕಾರ ಮದುವೆಯಾಗುವ ಗಂಡು-ಹೆಣ್ಣಿನ ನಡುವೆ ವಯಸ್ಸಿನ ಅಂತರ ಎಷ್ಟಿರಬೇಕು ಗೊತ್ತಾ?
ನಿಮ್ಮ ಮನಸ್ಸಿನ ದುಃಖ ಮತ್ತು ದೌರ್ಬಲ್ಯ: ಆಚಾರ್ಯ ಚಾಣಕ್ಯರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಒಂದಲ್ಲ ಒಂದು ರೀತಿಯ ದುಃಖ ಅಥವಾ ಸಂಕಟವನ್ನು ಅನುಭವಿಸುತ್ತಾನೆ. ಅದೇ ರೀತಿ ಒಂದಲ್ಲ ಒಂದು ರೀತಿಯ ಭಯ, ಅಭದ್ರತೆ, ದೌರ್ಬಲ್ಯ ಇದ್ದೇ ಇರುತ್ತದೆ. ಇವೆಲ್ಲವನ್ನು ನೀವು ಇತರರ ಬಳಿ ಹಂಚಿದಾಗ ಜನರು ಬಾಹ್ಯವಾಗಿ ಸಂತಾಪ ಸೂಚಿಸುತ್ತಾರೆ, ಆದರೆ ನಿಮ್ಮ ಬೆನ್ನ ಹಿಂದೆ, ಅವರು ನಿಮ್ಮ ಅಸಹಾಯಕತೆಯ ಲಾಭವನ್ನು ಪಡೆದುಕೊಳ್ಳುತ್ತಾರೆ. ಸಮಯ ಬಂದಾಗ ಅವರು ನಿಮ್ಮ ದೌರ್ಬಲ್ಯಗಳನ್ನು ಬಳಸಿಕೊಂಡು ನಿಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಬಹುದು.
ಭವಿಷ್ಯದ ಯೋಜನೆಗಳನ್ನು ಹೇಳಬೇಡಿ: ನಿಮ್ಮ ದೊಡ್ಡ ಕನಸುಗಳು, ಯೋಜನೆಗಳು ಮತ್ತು ಗುರಿಗಳನ್ನು ಅವು ಪೂರ್ಣಗೊಂಡ ನಂತರ ಮಾತ್ರ ಹಂಚಿಕೊಳ್ಳಿ. ಯೋಜನೆಗಳು ಪೂರ್ಣಗೊಳ್ಳುವ ಮೊದಲೇ ಇದನ್ನು ಹಂಚಿಕೊಂಡರೆ ಜನರು ನಿಮ್ಮ ಸ್ಥೈರ್ಯ ಕುಗ್ಗಿಸಲು ಅಥವಾ ಅಡೆತಡೆಗಳನ್ನು ಸೃಷ್ಟಿಸಲು ಪ್ರಯತ್ನಿಸಬಹುದು.
ನಿಮ್ಮ ವೈಯಕ್ತಿಕ ಸಂಬಂಧಗಳನ್ನು ಮರೆಮಾಡಿ: ನಿಮ್ಮ ಪ್ರೀತಿ ಮತ್ತು ಸಂಬಂಧಗಳ ಬಗ್ಗೆ ಇತರರೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸಿ. ಕೆಲವೊಮ್ಮೆ ಜನರು ನಿಮ್ಮ ಸಂತೋಷವನ್ನು ಸಹಿಸಲಾರರು ಮತ್ತು ನಿಮ್ಮ ಸಂಬಂಧಗಳನ್ನು ಹಾಳುಮಾಡಲು ಪ್ರಯತ್ನಿಸುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ