Headlines

China Landslide: ಚೀನಾದಲ್ಲಿ ಭೀಕರ ಭೂಕುಸಿತ; 8 ಜನ ಸಾವು, 34 ಮಂದಿ ನಾಪತ್ತೆ – Kannada News | 8 people dead 34 injured in China’s Chongqing landslide

ಬೀಜಿಂಗ್, ಜುಲೈ 17: ಚೀನಾದ ಚಾಂಗ್‌ಕಿಂಗ್ ನಗರದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ (Landslide) 8 ಜನರು ಸಾವನ್ನಪ್ಪಿದ್ದು, 34ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಈ ದುರಂತ ಸಂಭವಿಸಿದೆ. ಚೀನಾದ ಗುಡ್ಡಗಾಡು ಪ್ರದೇಶವೊಂದರಲ್ಲಿ ಈ ಭೂಕುಸಿತ ಸಂಭವಿಸಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಬೆಟ್ಟದ ಒಂದು ದೊಡ್ಡ ಭಾಗ ಕುಸಿದು ಕೆಳಗಿದ್ದ ವಸತಿ ಪ್ರದೇಶಗಳು ಮತ್ತು ಮನೆಗಳ ಮೇಲೆ ಬಿದ್ದಿದೆ. ಇದರ ಪರಿಣಾಮವಾಗಿ ಹಲವು ಮನೆಗಳು ಮಣ್ಣಿನ ಅಡಿಯಲ್ಲಿ ಸಂಪೂರ್ಣವಾಗಿ ಹೂತುಹೋಗಿವೆ.

ಈ ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಚೀನಾ ಸರ್ಕಾರವು ನೂರಾರು ರಕ್ಷಣಾ ಸಿಬ್ಬಂದಿ, ಮಿಲಿಟರಿ ಪಡೆಗಳು ಮತ್ತು ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ರವಾನಿಸಿದೆ. ಕುಸಿದು ಬಿದ್ದಿರುವ ಭಾರಿ ಪ್ರಮಾಣದ ಮಣ್ಣು ಮತ್ತು ಕಲ್ಲುಗಳನ್ನು ಸರಿಸಲು ಬುಲ್ಡೋಜರ್‌ಗಳು ಹಾಗೂ ಆಧುನಿಕ ಯಂತ್ರಗಳನ್ನು ಬಳಸಲಾಗುತ್ತಿದೆ. ಮಣ್ಣಿನ ಅಡಿಯಲ್ಲಿ ಇನ್ನೂ ಅನೇಕರು ಸಿಲುಕಿರುವ ಅನುಮಾನ ಇರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ.

ಇದನ್ನೂ ಓದಿ: Wayanad Landslide: ವಯನಾಡು ಭೂಕುಸಿತ, ರಕ್ಷಣಾ ಕಾರ್ಯಾಚರಣೆ ತೀವ್ರ, ಮೂವರು ಸಾವು, ಐವರು ನಾಪತ್ತೆ

ರಸ್ತೆ ಸಂಪರ್ಕ ಕಡಿತ:

ಈ ದುರಂತ ಸಂಭವಿಸಿದ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮತ್ತಷ್ಟು ಅನಾಹುತಗಳು ಸಂಭವಿಸದಂತೆ ತಡೆಯಲು ನೀರು, ವಿದ್ಯುತ್ ಮತ್ತು ಗ್ಯಾಸ್ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ. ಹಲವು ವಿದ್ಯುತ್ ಕಂಬಗಳು ಮಣ್ಣಿನಡಿ ಸಿಲುಕಿದ್ದರಿಂದ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಮಣ್ಣಿನಡಿ ಸಿಲುಕಿದ್ದ 18 ಜನರನ್ನು ರಕ್ಷಿಸಲಾಗಿದ್ದರೂ, ಅವರಲ್ಲಿ 8 ಜನರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಮತ್ತು ಉಳಿದ 10 ಜನರನ್ನು ಸುರಕ್ಷಿತವಾಗಿ ಹೊರತರಲಾಗಿದೆ.

ನಾಪತ್ತೆಯಾದವರ ಹುಡುಕಾಟ:

ನಾಪತ್ತೆಯಾಗಿರುವ 34ಕ್ಕೂ ಹೆಚ್ಚು ಜನರನ್ನು ಹುಡುಕಲು ಶ್ವಾನ ದಳ ಹಾಗೂ ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಈ ಪ್ರದೇಶದಲ್ಲಿ ಮುಂದಿನ ಕೆಲವು ದಿನಗಳ ಕಾಲ ಮತ್ತಷ್ಟು ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆ ‘ರೆಡ್ ಅಲರ್ಟ್’ ಘೋಷಿಸಿದೆ. ಮಣ್ಣು ಸಡಿಲಗೊಂಡಿರುವುದರಿಂದ ಮತ್ತಷ್ಟು ಭೂಕುಸಿತ ಸಂಭವಿಸುವ ಅಪಾಯವಿದ್ದು, ಸುತ್ತಮುತ್ತಲಿನ ಹಳ್ಳಿಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಇದನ್ನೂ ಓದಿ: ಜಾಗತಿಕ ರಾಜಕೀಯ ತಲ್ಲಣ: 220 ಮಿಲಿಯನ್ ಅಮೆರಿಕನ್ನರ ವೋಟರ್ ಡೇಟಾ ಚೀನಾ ಪಾಲು, ಶ್ವೇತಭವನದಿಂದ ಟ್ರಂಪ್ ಬಾಂಬ್

ಉಜಿಹಾಂಗ್ ನದಿಯ ಸಮೀಪವಿರುವ ಪರ್ವತ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ಕೇವಲ 2 ವಾರಗಳ ಹಿಂದಷ್ಟೇ ಚೀನಾದ ವಾಯುವ್ಯ ಗನ್ಸು ಪ್ರಾಂತ್ಯದಲ್ಲಿ ನಡೆದ ಭೂಕುಸಿತದಲ್ಲಿ 21 ಜನರು ಸಾವನ್ನಪ್ಪಿದ್ದರು. ಈಗ ಚಾಂಗ್‌ಕಿಂಗ್‌ನಲ್ಲಿ ಮತ್ತೊಂದು ಭೀಕರ ದುರಂತ ಸಂಭವಿಸಿರುವುದು ಅಲ್ಲಿನ ಜನರಲ್ಲಿ ಆತಂಕ ಮೂಡಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *