ಗ್ಲಾಸ್ಗೋದಲ್ಲಿ ನಡೆದ 2026 ರ ಕಾಮನ್‌ವೆಲ್ತ್ ಕ್ರೀಡಾಕೂಟ ( Commonwealth Games 2026) ಮುಕ್ತಾಯವಾಗಿದೆ. ಈ ಕ್ರೀಡಾಕೂಟದಲ್ಲಿ ಭಾರತ ಒಟ್ಟು 39 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡದುಕೊಂಡಿತು. ಭಾರತ ಗೆದ್ದ ಒಟ್ಟು 39 ಪದಕಗಳಲ್ಲಿ 13 ಚಿನ್ನ 17 ಬೆಳ್ಳಿ ಮತ್ತು 9 ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ಕಳೆದ ಆವೃತ್ತಿಗೆ ಹೋಲಿಸಿಕೊಂಡರೆ ಈ ಬಾರಿ ಭಾರತದ ಪ್ರದರ್ಶನ ಕೊಂಚ ನಿರಸವಾಗಿತ್ತು. ಇದಕ್ಕೆ ಕಾರಣ ಈ ಆವೃತ್ತಿಯಲ್ಲಿ ಭಾರತ ಪದಕ ಗೆಲ್ಲುವಂತಹ ಕೆಲವು ಸ್ಪರ್ಧೆಗಳನ್ನು ಕೈಬಿಟ್ಟಿದ್ದು, ಭಾರತದ ಪದಕಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿತ್ತು. ಅದಾಗ್ಯೂ ಈ ಕ್ರೀಡಾಕೂಟದಲ್ಲಿ ದೇಶದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೇರಿಸಿದ ಭಾರತದ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿಯವರು (PM Modi) ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಪ್ರದರ್ಶನದ ಬಗ್ಗೆ ಹೆಮ್ಮೆಯಿದೆ
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಳ್ಳುವ ಮೂಲಕ ಪದಕ ವಿಜೇತರನ್ನು ಅಭಿನಂದಿಸಿರುವ ಮೋದಿ, ‘ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಮ್ಮ ತಂಡದ ಪ್ರದರ್ಶನದ ಬಗ್ಗೆ ಹೆಮ್ಮೆಯಿದೆ. ಭಾರತ 13 ಚಿನ್ನ ಸೇರಿದಂತೆ 39 ಪದಕಗಳನ್ನು ಗೆದ್ದಿರುವುದು ಸಂತೋಷ ತಂದಿದೆ. ಪದಕ ವಿಜೇತರಿಗೆ ಅಭಿನಂದನೆಗಳು. ಕ್ರೀಡಾಕೂಟದ ಉದ್ದಕ್ಕೂ, ನಮ್ಮ ಪ್ರತಿಭಾನ್ವಿತ ಕ್ರೀಡಾಪಟುಗಳು ಅಸಾಧಾರಣ ಕೌಶಲ್ಯ, ದೃಢನಿಶ್ಚಯ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿದ್ದಾರೆ. ಅವರ ಕಠಿಣ ಪರಿಶ್ರಮ ನಮ್ಮ ಯುವಕರಿಗೆ ಸ್ಫೂರ್ತಿ ನೀಡುತ್ತದೆ. ಮುಂದಿನ ಪ್ರಯತ್ನಗಳಿಗೆ ಇಡೀ ಭಾರತೀಯ ತಂಡಕ್ಕೆ ನನ್ನ ಶುಭಾಶಯಗಳು. ಅವರು ತಮ್ಮ ಅತ್ಯುತ್ತಮ ಪ್ರಯತ್ನವನ್ನು ಮುಂದುವರಿಸಿ ರಾಷ್ಟ್ರಕ್ಕೆ ಮತ್ತಷ್ಟು ಕೀರ್ತಿ ತರಲಿ’ ಎಂದು ಬರೆದುಕೊಂಡಿದ್ದಾರೆ.
Proud of our contingent’s performance at the Glasgow Commonwealth Games.
Delighted that India has won 39 medals, including 13 Golds. Congrats to the medal winners.
Throughout the Games, our talented athletes have displayed exceptional skill, determination and dedication.…
— Narendra Modi (@narendramodi) August 3, 2026
ಭಾರತದ ಆತಿಥ್ಯ
11 ದಿನಗಳ ಕಾಲ ನಡೆದ ಈ ಕ್ರೀಡಾಕೂಟಕ್ಕೆ ತೆರೆ ಬಿದ್ದಿದ್ದು, ಇದೀಗ 2030 ರಲ್ಲಿ ನಡೆಯಲಿರುವ ಈ ಕ್ರೀಡಾಕೂಟಕ್ಕೆ ಭಾರತ ಆತಿಥ್ಯವಹಿಸಲಿದೆ. ಹೀಗಾಗಿ ಆತಿಥೇಯ ಭಾರತಕ್ಕೆ ಸ್ಕಾಟ್ಲೆಂಡ್ ಔಪಚಾರಿಕವಾಗಿ ಕಾಮನ್‌ವೆಲ್ತ್ ಕ್ರೀಡಾಕೂಟದ ಧ್ವಜ ಮತ್ತು ವಿಧ್ಯುಕ್ತ ಲಾಠಿ ಪ್ರದಾನ ಮಾಡಿತು. 2030 ರ ಕಾಮನ್‌ವೆಲ್ತ್ ಕ್ರೀಡಾಕೂಟವು ಅಹಮದಾಬಾದ್‌ನಲ್ಲಿ ನಡೆಯಲಿದ್ದು, ಆಸ್ಟ್ರೇಲಿಯಾ ನಂತರ ಬಹು-ಕ್ರೀಡಾ ಕಾರ್ಯಕ್ರಮವನ್ನು ಒಂದಕ್ಕಿಂತ ಹೆಚ್ಚು ಬಾರಿ ಆಯೋಜಿಸಿದ ಎರಡನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಭಾರತವು ಈ ಹಿಂದೆ 2010 ರಲ್ಲಿ ನವದೆಹಲಿಯಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 4:09 pm, Mon, 3 August 26