ಟಿ20 ಕ್ರಿಕೆಟ್ನಲ್ಲಿ ಡೇವಿಡ್ ಮಿಲ್ಲರ್ (David Miller) ಹೊಸ ಮೈಲುಗಲ್ಲು ದಾಟಿದ್ದಾರೆ. ಅದು ಸಹ ಸೋಲಿನ ನಡುವೆ. ಅಂದರೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮಿಲ್ಲರ್ 19 ರನ್ ಬಾರಿಸಿದ್ದರು.
ಈ 19 ರನ್ಗಳೊಂದಿಗೆ ಡೇವಿಡ್ ಮಿಲ್ಲರ್ ಟಿ20 ಕ್ರಿಕೆಟ್ನಲ್ಲಿ 12 ಸಾವಿರ ರನ್ಗಳನ್ನು ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಸೌತ್ ಆಫ್ರಿಕಾದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಈ ಮೈಲುಗಲ್ಲು ದಾಟಿದ ವಿಶ್ವದ 13ನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಇದಕ್ಕೂ ಮುನ್ನ ಸೌತ್ ಆಫ್ರಿಕಾ ಪರ ಕ್ವಿಂಟನ್ ಡಿಕಾಕ್ ಹಾಗೂ ಫಾಫ್ ಡುಪ್ಲೆಸಿಸ್ ಮಾತ್ರ ಟಿ20 ಕ್ರಿಕೆಟ್ನಲ್ಲಿ 12 ಸಾವಿರ ರನ್ಗಳ ಗಡಿದಾಟಿದ್ದರು. ಈ ಪಟ್ಟಿಯಲ್ಲಿ 12454 ರನ್ಗಳೊಂದಿಗೆ ಕ್ವಿಂಟನ್ ಡಿಕಾಕ್ ಮೊದಲ ಸ್ಥಾನದಲ್ಲಿದ್ದರೆ, 12041 ರನ್ಗಳಿಸಿರುವ ಫಾಫ್ ಡುಪ್ಲೆಸಿಸ್ ದ್ವಿತೀಯ ಸ್ಥಾನದಲ್ಲಿದ್ದಾರೆ.
ಇದೀಗ 513 ಟಿ20 ಇನಿಂಗ್ಸ್ಗಳ ಮೂಲಕ ಡೇವಿಡ್ ಮಿಲ್ಲರ್ 12008 ರನ್ ಕಲೆಹಾಕಿದ್ದಾರೆ. ಅಲ್ಲದೆ ಮುಂದಿನ ಪಂದ್ಯಗಳಲ್ಲಿ 34 ರನ್ ಗಳಿಸಿದರೆ ಫಾಪ್ ಡುಪ್ಲೆಸಿಸ್ (12041) ಅವರನ್ನು ಹಿಂದಿಕ್ಕಬಹುದು. ಹೀಗಾಗಿ ಈ ಬಾರಿಯ ಐಪಿಎಲ್ ಮೂಲಕ ಡೇವಿಡ್ ಮಿಲ್ಲರ್ ಟಿ20 ರನ್ ಸರದಾರರ ಪಟ್ಟಿಯಲ್ಲಿ ಮತ್ತೊಂದು ಸ್ಥಾನ ಮೇಲೇರುವುದನ್ನು ಎದುರು ನೋಡಬಹುದು.
ಇನ್ನು ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಹೆಸರಿನಲ್ಲಿದೆ. 2005 ರಿಂದ 2022 ರವರೆಗೆ ವೆಸ್ಟ್ ಇಂಡೀಸ್ ಸೇರಿದಂತೆ ವಿವಿಧ ತಂಡಗಳ ಪರ ಕಣಕ್ಕಿಳಿದಿರುವ ಕ್ರಿಸ್ ಗೇಲ್ 455 ಇನಿಂಗ್ಸ್ಗಳಿಂದ ಒಟ್ಟು 14562 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.




