ಬೆಂಗಳೂರು, ಜೂನ್ 03: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದು, ಅವರೊಂದಿಗೆ ಸಿದ್ದರಾಮಯ್ಯ ಮತ್ತು 10 ರಿಂದ 12 ಮಂದಿ ಶಾಸಕರೂ ಸಹ ಸಚಿವರಾಗಿ ಪದಗ್ರಹಣ ಮಾಡಲಿದ್ದಾರೆ. ಈ ಸಮಾರಂಭಕ್ಕೆ 10,000ಕ್ಕೂ ಹೆಚ್ಚು ವಿವಿಐಪಿ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಭದ್ರತೆಗಾಗಿ 1,500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಧರ್ಮಗುರುಗಳೂ ಸಹ ಈ ಕಾರ್ಯಕ್ರಮದಲ್ಲಿದ್ದು, ಸಂಜೆ 4:05ಕ್ಕೆ ಸರಿಯಾಗಿ ಪದಗ್ರಹಣ ನೆರವೇರಲಿದೆ.
ಕರ್ನಾಟಕ ರಾಜಕಾರಣದಲ್ಲಿ ಅಧಿಕಾರ ಹಂಚಿಕೆಯ ವಿಚಾರದಲ್ಲಿ ಸಾಕಷ್ಟು ಜಟಾಪಟಿ ನಡೆದಿತ್ತು. ಇತ್ತೀಚೆಗೆ ಸಿದ್ದರಾಮಯ್ಯನವರ ದೆಹಲಿ ಭೇಟಿ, ಹೈಕಮಾಂಡ್ ಜೊತೆಗಿನ ಚರ್ಚೆಯ ಬಳಿಕ ಈ ಜಟಾಪಟಿಗೆ ತೆರೆ ಬಿದ್ದಿದೆ. ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಟ್ಟು ರಾಜೀನಾಮೆ ಕೊಡುವುದರ ಜೊತೆಗೆ ಡಿಕೆ ಶಿವಕುಮಾರ್ ಮುಂದಿನ ಸಿಎಂ ಆಗಲಿದ್ದಾರೆಂದು ಘೋಷಿಸಿದ್ದರು. ಅಂತೆಯೇ ಇಂದು ಸಿಎಂ ಆಗಿ ಡಿಕೆಶಿ ಕುರ್ಚಿ ಏರಲು ಸಿದ್ಧರಾಗಿದ್ದಾರೆ. ಡಿ ಕೆ ಶಿವಕುಮಾರ್ ಜೊತೆಗೆ 10-12 ಮಂದಿ ಶಾಸಕರ ಪ್ರಮಾಣವಚನದ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಅಪ್ಡೇಟ್ ಆಗಲಿದ್ದು, ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.