ಮುಂಬೈನ ವಾಂಖೆಡೆ ಮೈದಾನ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. 2026 ರ ಟಿ20 ವಿಶ್ವಕಪ್ನ ಎರಡನೇ ದಿನದಂದು ಬಲಿಷ್ಠ ಇಂಗ್ಲೆಂಡ್ ಹಾಗೂ ನೇಪಾಳ ಮುಖಾಮುಖಿಯಾಗಿದ್ದವು. ಎರಡು ತಂಡಗಳ ಬಲಾಬಲವನ್ನು ನೋಡಿದರೆ, ಇಂಗ್ಲೆಂಡ್ ತಂಡವೇ ಗೆಲುವಿನ ಫೇವರೇಟ್ ಎನಿಸಿತ್ತು. ಆದರೆ ಇಡೀ ಪಂದ್ಯದಲ್ಲಿ ಕೆಚ್ಚೆದೆಯ ಹೋರಾಟ ನೀಡಿದ ನೇಪಾಳ ಕೊನೆಯ ಓವರ್ನಲ್ಲಿ 10 ರನ್ ಹೊಡೆಯಲು ಸಾಧ್ಯವಾಗದೆ 4 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಈ ಪಂದ್ಯದಲ್ಲಿ ನೇಪಾಳ ಸೋತಿತ್ತಾದರೂ ಕ್ರಿಕೆಟ್ ಜನಕರಾದ ಆಂಗ್ಲರ ಮುಖದಲ್ಲಿ ಸೋಲಿನ ಭಯ ಎದ್ದು ಕಾಣುವಂತೆ ಮಾಡಿತು. ಕೊನೆಯ ಎಸೆತವನ್ನು ಹಾಕುವವರೆಗೂ ಇಂಗ್ಲೆಂಡ್ ತಂಡದ ಪ್ರತಿಯೊಬ್ಬ ಆಟಗಾರನಿಗೆ ಸೋಲಿನ ಭಯ ಹುಟ್ಟಿಸುವಲ್ಲಿ ನೇಪಾಳ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಇಂಗ್ಲೆಂಡ್ 184 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನೇಪಾಳ 180 ರನ್ ಕಲೆಹಾಕಲಷ್ಟೇ ಶಕ್ತವಾಗಿ 4 ರನ್‌ಗಳಿಂದ ವೀರೋಚಿತ ಸೋಲಿಗೆ ಕೊರಳೊಡ್ಡಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 184 ರನ್ ಗಳಿಸಿತು. ತಂಡದ ಪರ ಜಾಕೋಬ್ ಬೆಥೆಲ್ 35 ಎಸೆತಗಳಲ್ಲಿ ಅದ್ಭುತ 55 ರನ್ ಗಳಿಸಿದರೆ, ನಾಯಕ ಹ್ಯಾರಿ ಬ್ರೂಕ್ 32 ಎಸೆತಗಳಲ್ಲಿ 53 ರನ್ ಬಾರಿಸಿದರು. ವಿಲ್ ಜಾಕ್ಸ್ ಕೂಡ ಅಜೇಯ 39 ರನ್ ಗಳಿಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು. ಕೊನೆಯ ಓವರ್‌ಗಳಲ್ಲಿ ಜಾಕ್ಸ್ ಸ್ಫೋಟಕ ಬ್ಯಾಟಿಂಗ್ ನಡೆಸದಿದ್ದರೆ, ಇಂದಿನ ಪಂದ್ಯದ ಫಲಿತಾಂಶವೇ ಬೇರೆಯದ್ದಾಗಿರುತಿತ್ತು. ಅದರಲ್ಲೂ 20ನೇ ಓವರ್ನ ಕೊನೆಯ ಎಸೆತದಲ್ಲಿ ಬಾರಿಸಿದ ಸಿಕ್ಸರ್, ಇಂಗ್ಲೆಂಡ್ ಗೆಲುವಿಗೆ ಕಾರಣವಾಯಿತು. ಇತ್ತ ನೇಪಾಳ ಪರ ದೀಪೇಂದ್ರ ಸಿಂಗ್ ಐರಿ ಮತ್ತು ನಂದನ್ ಯಾದವ್ ತಲಾ ಎರಡು ವಿಕೆಟ್ ಪಡೆದರೆ, ಶೇರ್ ಮಲ್ಲಾ ಮತ್ತು ಸಂದೀಪ್ ಲಾಮಿಚಾನೆ ತಲಾ ಒಂದು ವಿಕೆಟ್ ಪಡೆದರು.
ಈ ಗುರಿ ಬೆನ್ನಟ್ಟಿದ ನೇಪಾಳ ಉತ್ತಮ ಆರಂಭ ಪಡೆಯಿತು. ಆರಂಭಿಕ ಕುಶಾಲ್ ಭುರ್ತೆಲ್ 29 ಮತ್ತು ದೀಪೇಂದ್ರ ಸಿಂಗ್ ಐರಿ 44 ರನ್ ಗಳಿಸಿ ಇಂಗ್ಲೆಂಡ್ ಮೇಲೆ ಒತ್ತಡ ಹೇರಿದರು. ನಂತರ ನಾಯಕ ರೋಹಿತ್ ಪೌಡೆಲ್ 39 ರನ್ ಗಳಿಸಿ ತಂಡವನ್ನು ಬಲಿಷ್ಠ ಸ್ಥಿತಿಯಲ್ಲಿಟ್ಟರು. ಕೊನೆಯಲ್ಲಿ ಲೋಕೇಶ್ ಬಾಮ್ 20 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿದರು, ಆದರೆ ಅವರು ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ನೇಪಾಳ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 180 ರನ್‌ಗಳನ್ನು ಮಾತ್ರ ಗಳಿಸಿ, ಪಂದ್ಯವನ್ನು 4 ರನ್‌ಗಳಿಂದ ಸೋತಿತು. ಆದಾಗ್ಯೂ, ನೇಪಾಳದ ಬ್ಯಾಟಿಂಗ್ ಮತ್ತು ಬೌಲಿಂಗ್ ಎಲ್ಲರನ್ನೂ ಅಚ್ಚರಿಗೊಳಿಸಿತು.
Published On – 6:43 pm, Sun, 8 February 26