Headlines

Gautam Adani: ಅಮೆರಿಕ ಕೋರ್ಟ್‌ನಿಂದ ಎಲ್ಲಾ ಆರೋಪ ವಜಾ; ಸತ್ಯಕ್ಕೆ ಸಿಕ್ಕ ಜಯ ಎಂದ ಗೌತಮ್ ಅದಾನಿ! – Kannada News | Faith In Truth Unwavering: Gautam Adani Welcomes US Court Dismissing Charges

ನವದೆಹಲಿ, ಆಗಸ್ಟ್ 11: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಸಾಗರ್ ಅದಾನಿ ಅವರ ಮೇಲಿದ್ದ ಎಲ್ಲಾ ಕ್ರಿಮಿನಲ್ ಮತ್ತು ವಂಚನೆ ಆರೋಪಗಳನ್ನು ಅಮೆರಿಕದ ನ್ಯಾಯಾಲಯವು ಅಧಿಕೃತವಾಗಿ ವಜಾಗೊಳಿಸಿದೆ. ಈ ಮಹತ್ವದ ತೀರ್ಪನ್ನು ಗೌತಮ್ ಅದಾನಿ ಅವರು ಅತ್ಯಂತ ವಿನಮ್ರತೆಯಿಂದ ಸ್ವಾಗತಿಸಿದ್ದು, ಸತ್ಯ ಮತ್ತು ಕಾನೂನಿನ ಮೇಲಿನ ತಮ್ಮ ನಂಬಿಕೆ ಮತ್ತಷ್ಟು ಗಟ್ಟಿಯಾಗಿದೆ ಎಂದು ಹೇಳಿದ್ದಾರೆ. ಅಮೆರಿಕದ ನ್ಯೂಯಾರ್ಕ್‌ನ ಈಸ್ಟರ್ನ್ ಡಿಸ್ಟ್ರಿಕ್ಟ್ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ನಿಕೋಲಸ್ ಗರಾಫಿಸ್, ಫೆಡರಲ್ ಪ್ರಾಸಿಕ್ಯೂಟರ್‌ಗಳು ಸಲ್ಲಿಕೆ ಮಾಡಿದ್ದ ಮನವಿಯನ್ನು ಪುರಸ್ಕರಿಸಿ ಈ ಮಹತ್ವದ ಆದೇಶ ಹೊರಡಿಸಿದ್ದಾರೆ.

‘ಸತ್ಯದ ಮೇಲಿನ ನಂಬಿಕೆ ಎಂದಿಗೂ ಅಲುಗಾಡಲಿಲ್ಲ’ ಎಂದ ಅದಾನಿ:

ನ್ಯಾಯಾಲಯದ ಈ ಆದೇಶ ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ‘X’ (ಟ್ವಿಟರ್) ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಗೌತಮ್ ಅದಾನಿ, “ಅಮೆರಿಕ ನ್ಯಾಯಾಲಯದ ತೀರ್ಪನ್ನು ನಾನು ವಿನಮ್ರತೆಯಿಂದ ಸ್ವಾಗತಿಸುತ್ತೇನೆ. ಈ ಇಡೀ ಸವಾಲಿನ ಅವಧಿಯಲ್ಲಿ, ಸತ್ಯ, ನಿಷ್ಪಕ್ಷಪಾತ ಮತ್ತು ಕಾನೂನಿನ ಆಡಳಿತದ ಮೇಲಿನ ನಮ್ಮ ನಂಬಿಕೆ ಎಂದಿಗೂ ಅಲುಗಾಡಲಿಲ್ಲ” ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು, “ನಮ್ಮ ಮೇಲೆ, ವ್ಯವಸ್ಥೆಯ ಮೇಲೆ ಮತ್ತು ಭಾರತದ ನ್ಯಾಯ ಒದಗಿಸುವ ಸಾಮರ್ಥ್ಯದ ಮೇಲೆ ನಂಬಿಕೆ ಕಳೆದುಕೊಳ್ಳದ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ದೇಶದ ನಿರ್ಮಾಣ, ಮೌಲ್ಯವರ್ಧನೆ ಮತ್ತು ಸ್ವಾರ್ಥ ಮೀರಿದ ಸಾಮಾಜಿಕ ಸೇವೆಗಾಗಿ ನಮ್ಮ ಬದ್ಧತೆ ಎಂದಿನಂತೆ ಮುಂದುವರಿಯಲಿದೆ. ಜೈ ಹಿಂದ್” ಎಂದು ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.

ಪ್ರಕರಣ ಕೈಬಿಡಲು ಅಮೆರಿಕದ ನ್ಯಾಯಾಂಗ ಇಲಾಖೆ ನೀಡಿದ ಕಾರಣವೇನು?

ಭಾರತದಲ್ಲಿ ಸೌರಶಕ್ತಿ ಗುತ್ತಿಗೆ ಪಡೆಯಲು ಲಂಚದ ಆಮಿಷ ಒಡ್ಡಿದ ಹಾಗೂ ಅಮೆರಿಕದ ಹೂಡಿಕೆದಾರರನ್ನು ಹಾದಿ ತಪ್ಪಿಸಿದ ಆರೋಪಗಳನ್ನು ಈ ಹಿಂದೆ ಅದಾನಿ ಮತ್ತು ಇತರರ ಮೇಲೆ ಹೊರಿಸಲಾಗಿತ್ತು. ಆದರೆ, ಜುಲೈ ತಿಂಗಳಿನಲ್ಲಿಯೇ ಅಮೆರಿಕದ ನ್ಯಾಯಾಂಗ ಇಲಾಖೆ (DOJ) ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿ, ಈ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವುದೇ ತಪ್ಪು ಎಂದು ಸ್ಪಷ್ಟಪಡಿಸಿತ್ತು.

ಈ ಪ್ರಕರಣವು ಸಂಪೂರ್ಣವಾಗಿ ಭಾರತಕ್ಕೆ ಸಂಬಂಧಿಸಿದ್ದಾಗಿದೆ. ಭಾರತೀಯರು ಇನ್ನೊಬ್ಬ ಭಾರತೀಯನಿಗೆ ಲಂಚ ನೀಡಿ, ಭಾರತದ ಜನರಿಗೆ ವಿದ್ಯುತ್ ಪೂರೈಸಲು ಭಾರತದಲ್ಲೇ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪ ಇದಾಗಿತ್ತು. ಇದಕ್ಕೆ ಅಮೆರಿಕ ಜಾಗತಿಕ ಪೊಲೀಸನಂತೆ ವರ್ತಿಸುವುದು ರಾಜತಾಂತ್ರಿಕ ಕಲಹಕ್ಕೆ ಕಾರಣವಾಗಬಹುದು.

ಅದಾನಿ ಅವರ ಮೇಲಿನ ಸೆಕ್ಯೂರಿಟಿಸ್ ವಂಚನೆ ಆರೋಪಗಳಿಗೆ ಬಲವಾದ ಕಾನೂನು ಆಧಾರಗಳೇ ಇರಲಿಲ್ಲ. ಅದಾನಿ ಗ್ರೂಪ್ ಅಮೆರಿಕದಲ್ಲಿ ಹೂಡಿಕೆ ಮಾಡಲು ಮುಂದಾಗಿರುವ ಕಾರಣಕ್ಕೆ ಈ ಪ್ರಕರಣ ವಜಾ ಮಾಡಲಾಗುತ್ತಿದೆ ಎಂಬ ಮಾಧ್ಯಮಗಳ ವರದಿಯನ್ನು ಇಲಾಖೆ ಸ್ಪಷ್ಟವಾಗಿ ತಳ್ಳಿಹಾಕಿದೆ. ಹೂಡಿಕೆಯ ವಿಷಯಕ್ಕೂ, ಈ ಕಾನೂನು ನಿರ್ಧಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪ್ರಿನ್ಸಿಪಲ್ ಅಸೋಸಿಯೇಟ್ ಡೆಪ್ಯುಟಿ ಅಟಾರ್ನಿ ಜನರಲ್ ಆರ್. ಟ್ರೆಂಟ್ ಮೆಕ್ಕಾಟರ್ ಸ್ಪಷ್ಟಪಡಿಸಿದ್ದಾರೆ. ಅಂತಿಮವಾಗಿ, ನ್ಯಾಯಾಧೀಶರು ಪ್ರಾಸಿಕ್ಯೂಷನ್ ಮಂಡಿಸಿದ ವಾದವನ್ನು ಒಪ್ಪಿಕೊಂಡು, ಅದಾನಿ ಗ್ರೂಪ್ ಮುಖ್ಯಸ್ಥರ ಮೇಲಿದ್ದ ಎಲ್ಲಾ ಕಾನೂನು ಚಾರ್ಜ್‌ಗಳನ್ನು ಮುಕ್ತಗೊಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:13 am, Tue, 11 August 26

Source link

Leave a Reply

Your email address will not be published. Required fields are marked *