ತಿಲಕ್ ವರ್ಮಾ ಕೊನೆಗೂ ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ. ಗುಜರಾತ್ ವಿರುದ್ಧದ ಈ ಪಂದ್ಯದಲ್ಲಿ ಆರಂಭದಲ್ಲೇ ಪ್ರಮುಖ 3 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಮುಂಬೈ ತಂಡದ ಇನ್ನಿಂಗ್ಸ್ ನಿಭಾಯಿಸುವುದರ ಜೊತೆಗೆ ಐದನೇ ಕ್ರಮಾಂಕದಲ್ಲಿ ಬಂದು ಭರ್ಜರಿ ಶತಕವನ್ನು ಸಿಡಿಸಿದರು. ಗುಜರಾತ್ ಟೈಟಾನ್ಸ್ ವಿರುದ್ಧ, ಅವರು ಕೇವಲ 45 ಎಸೆತಗಳಲ್ಲಿ ಏಳು ಸಿಕ್ಸರ್ಗಳು ಮತ್ತು ಎಂಟು ಬೌಂಡರಿಗಳ ಸಹಾಯದಿಂದ 101 ರನ್ ಕಲೆಹಾಕಿದರು. 224.44 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ತಿಲಕ್, 20ನೇ ಓವರ್ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ ತಮ್ಮ ಶತಕ ಪೂರೈಸಿದರು. ತಿಲಕ್ ಶತಕ ಬಾರಿಸುತ್ತಿದ್ದಂತೆ ಇತ್ತ ಡಗೌಟ್ನಲ್ಲಿ ಕುಳಿತಿದ್ದ ನಾಯಕ ಹಾರ್ದಿಕ್ ಪಾಂಡ್ಯ ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಿಸಿದರು.
ಈ ಶತಕದೊಂದಿಗೆ ತಿಲಕ್ ವರ್ಮಾ, ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಪರ ಅತ್ಯಂತ ವೇಗದ ಶತಕ ಬಾರಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಿಲಕ್ ವರ್ಮಾಗೂ ಮೊದಲು, ಸನತ್ ಜಯಸೂರ್ಯ ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಅವರು 2008 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಈ ಇನ್ನಿಂಗ್ಸ್ ಆಡಿದ್ದರು. ತಿಲಕ್ ಅವರ ಇನ್ನಿಂಗ್ಸ್ನ ಮತ್ತೊಂದು ವಿಶೇಷವೆಂದರೆ ಅವರು ಈ ಆವೃತ್ತಿಯ ವೇಗದ ಶತಕ ಬಾರಿಸಿದ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಮೂಲಕ 52 ಎಸೆತಗಳಲ್ಲಿ ಶತಕ ಬಾರಿಸಿದ ಸಂಜು ಸ್ಯಾಮ್ಸನ್ ಅವರ ದಾಖಲೆಯನ್ನು ಮುರಿದಿದ್ದಾರೆ.