ಜಿನಿವಾ, ಮೇ.15: ಅಟ್ಲಾಂಟಿಕ್ ಸಾಗರದಲ್ಲಿ ಸಂಚರಿಸುತ್ತಿದ್ದ MV Hondius ಕ್ರೂಸ್ ಹಡಗಿನಲ್ಲಿ ಕಾಣಿಸಿಕೊಂಡಿದ್ದ ಹಂಟಾವೈರಸ್ ಸೋಂಕು ಈಗ ಹೊಸ ರೂಪ ಪಡೆದುಕೊಂಡಿದೆ. ಸೋಂಕಿತರಲ್ಲಿ ಎಂಟು ಮಂದಿಗೆ ‘ಆಂಡಿಸ್ ವೈರಸ್’ ತಗುಲಿರುವುದು ದೃಢಪಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಇದು ಹಂಟಾವೈರಸ್ನ ಅತ್ಯಂತ ಅಪಾಯಕಾರಿ ತಳಿಯಾಗಿದ್ದು, ಸೋಂಕಿತ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡುವ ಸಾಮರ್ಥ್ಯ ಹೊಂದಿದೆ.
ಏಪ್ರಿಲ್ 1 ರಂದು ಅರ್ಜೆಂಟೀನಾದಿಂದ ಹೊರಟಿದ್ದ ಈ ಹಡಗಿನಲ್ಲಿ ಇದುವರೆಗೆ ಮೂವರು ಸಾವನ್ನಪ್ಪಿದ್ದಾರೆ. ಇವರಲ್ಲಿ ಇಬ್ಬರಿಗೆ ಆಂಡಿಸ್ ವೈರಸ್ ಇರುವುದು ದೃಢಪಟ್ಟಿದ್ದರೆ, ಮತ್ತೊಬ್ಬರ ಸಾವು ಕೂಡ ಇದೇ ಸೋಂಕಿನಿಂದ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.ಎಂಟು ಮಂದಿಯಲ್ಲಿ ಸೋಂಕು ಖಚಿತವಾಗಿದ್ದು, ಇಬ್ಬರಲ್ಲಿ ಸೋಂಕಿನ ಲಕ್ಷಣಗಳು ಹೆಚ್ಚಿದೆ ಎಂದು ಹೇಳಲಾಗಿದೆ. ಇನ್ನು ಈ ಸೋಂಕಿಗೆ ಸಂಬಂಧಿಸಿದಂತೆ ಅಮೆರಿಕದ ಪ್ರಯಾಣಿಕರೊಬ್ಬರಿಗೆ ಈ ಬಗ್ಗೆ ಪರೀಕ್ಷೆ ಮಾಡಲಾಗಿತ್ತು. ಇದೀಗ ಆರೋಗ್ಯ ಇಲಾಖೆ ನೀಡಿದ ವರದಿಯಲ್ಲಿ ಹಲವು ಗೊಂದಲಗಳು ಇದೆ ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದೆ.
ಸಾಮಾನ್ಯವಾಗಿ ಹಂಟಾವೈರಸ್ ಸೋಂಕು ಇಲಿಗಳ ಮೂತ್ರ, ಮಲ ಮತ್ತು ಜೊಲ್ಲಿನ ಮೂಲಕ ಹರಡುತ್ತದೆ. ಆದರೆ ಆಂಡಿಸ್ ವೈರಸ್ ಮನುಷ್ಯರ ನಡುವಿನ ನಿಕಟ ಸಂಪರ್ಕದಿಂದಲೂ ಹರಡಬಲ್ಲದು. ತನಿಖೆಯ ಪ್ರಕಾರ, ಮೊದಲು ಸೋಂಕಿಗೆ ಒಳಗಾದ ಪ್ರಯಾಣಿಕರು ಅರ್ಜೆಂಟೀನಾ ಮತ್ತು ಚಿಲಿಯಲ್ಲಿ ಪ್ರವಾಸ ಮಾಡುವಾಗ ಸೋಂಕಿತ ಇಲಿಗಳ ಸಂಪರ್ಕಕ್ಕೆ ಬಂದಿರಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ: ರಮ್ಮಿ ಆಟಗಾರರಿಗೆ ದೊಡ್ಡ ಶಾಕ್! ಗೇಮ್ಸ್ಕ್ರಾಫ್ಟ್ನಿಂದ 526 ಕೋಟಿ ರೂ. ವಂಚನೆ? ಇಡಿಯಿಂದ ಮೂವರು ಬಿಗ್ ಬಾಸ್ಗಳ ಬಂಧನ
ವಿಶ್ವ ಆರೋಗ್ಯ ಸಂಸ್ಥೆಯು ಈ ಸೋಂಕಿನ ಅಪಾಯದ ಮಟ್ಟವನ್ನು ಹಡಗಿನಲ್ಲಿದ್ದವರಿಗೆ ‘ಮಧ್ಯಮ’ (Moderate) ಮತ್ತು ಉಳಿದ ಜಗತ್ತಿಗೆ ‘ಕಡಿಮೆ’ (Low) ಎಂದು ವರ್ಗೀಕರಿಸಿದೆ. ಹಡಗು ಈಗ ನೆದರ್ಲ್ಯಾಂಡ್ಸ್ನತ್ತ ಸಾಗುತ್ತಿದ್ದು, ಸಂಪೂರ್ಣವಾಗಿ ಸೋಂಕುಮುಕ್ತಗೊಳಿಸುವ (Disinfection) ಪ್ರಕ್ರಿಯೆ ನಡೆಯಲಿದೆ.
ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 11:10 am, Fri, 15 May 26