ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಕೆಲವು ಸಣ್ಣ ಬದಲಾವಣೆಗಳು ಆರೋಗ್ಯದ ಬಗ್ಗೆ ಮಹತ್ವದ ಸುಳಿವುಗಳನ್ನು ನೀಡಬಹುದು. ಅವುಗಳಲ್ಲಿ ಉಗುರಿನ ಕೆಳಭಾಗದಲ್ಲಿರುವ ಬಿಳಿ ಅರ್ಧಚಂದ್ರಾಕಾರದ ಗುರುತು (Lunula) ಕೂಡ ಒಂದು. ಕೆಲವರಿಗೆ ಇದು ಸ್ಪಷ್ಟವಾಗಿ ಕಾಣಿಸಿದರೆ, ಇನ್ನೂ ಕೆಲವರಿಗೆ ಬಹಳ ಚಿಕ್ಕದಾಗಿರಬಹುದು ಅಥವಾ ಕಾಣದೇ ಇರಬಹುದು. ಇದನ್ನು ಕೆಲವರು ಸಾಮಾನ್ಯ ಸಂಗತಿಯೆಂದು ಭಾವಿಸಿದರೆ, ಮತ್ತೊಂಡಷ್ಟು ಜನ ಧಾರ್ಮಿಕ ನಂಬಿಕೆಗಳೊಂದಿಗೆ ಕೂಡ ಸಂಪರ್ಕಿಸುತ್ತಾರೆ. ಆದರೆ ವೈದ್ಯರ ಪ್ರಕಾರ, ಲುನುಲಾದ ಬಣ್ಣ, ಗಾತ್ರ ಅಥವಾ ಕಾಣುವ ರೀತಿಯಲ್ಲಿ ಏಕಾಏಕಿ ಬದಲಾವಣೆ ಕಂಡುಬಂದರೆ ಅದು ಕೆಲವು ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು. ಆದರೆ ಉಗುರನ್ನು ನೋಡಿ ಮಾತ್ರ ಯಾವುದೇ ಕಾಯಿಲೆಯನ್ನು ಖಚಿತಪಡಿಸಲು ಸಾಧ್ಯವಿಲ್ಲ. ಹಾಗಾದರೆ ಹೃದಯ ಮತ್ತು ಕಿಡ್ನಿ ಆರೋಗ್ಯದೊಂದಿಗೆ ಇದರ ಸಂಬಂಧವೇನು, ತಜ್ಞರು ಏನು ಹೇಳುತ್ತಾರೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ
ಲುನುಲಾ (Lunula) ಎಂದರೇನು?
ಉಗುರಿನ ಕೆಳಭಾಗದಲ್ಲಿ ಕಾಣುವ ಬಿಳಿ ಅರ್ಧಚಂದ್ರಾಕಾರದ ಭಾಗವನ್ನು ಲುನುಲಾ (Lunula) ಎಂದು ಕರೆಯಲಾಗುತ್ತದೆ. ಇದು ಉಗುರಿನ ಬೆಳವಣಿಗೆಯ ಸಹಜ ಭಾಗವಾಗಿದೆ. ಎಲ್ಲರಲ್ಲೂ ಇದು ಒಂದೇ ರೀತಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.
ಹೃದಯ ಮತ್ತು ಕಿಡ್ನಿ ಆರೋಗ್ಯದೊಂದಿಗಿರುವ ಸಂಬಂಧವೇನು?
ತಜ್ಞ ವೈದ್ಯರ ಪ್ರಕಾರ, ದೀರ್ಘಕಾಲದ ಕಿಡ್ನಿ ಕಾಯಿಲೆ ಇರುವ ಕೆಲವರಲ್ಲಿ ಲುನುಲಾ ಚಿಕ್ಕದಾಗುವುದು ಅಥವಾ ಕಾಣಿಸದೇ ಹೋಗುವುದು ಕಂಡುಬರಬಹುದು. ಇದಕ್ಕೆ ಕಾರಣ, ಕಿಡ್ನಿ ಸಮಸ್ಯೆಯಿಂದ ರಕ್ತಸಂಚಾರ ಮತ್ತು ಉಗುರಿನ ಬೆಳವಣಿಗೆಯ ಮೇಲೆ ಪರಿಣಾಮ ಉಂಟಾಗಬಹುದು. ಕೆಲವು ಹೃದಯ ಸಂಬಂಧಿ ಕಾಯಿಲೆಗಳಲ್ಲಿ ಕೂಡ ಲುನುಲಾದ ಬಣ್ಣ ಅಥವಾ ಅದರ ಕಾಣುವ ವಿಧಾನದಲ್ಲಿ ಬದಲಾವಣೆ ಕಂಡುಬರುವ ಸಾಧ್ಯತೆಯಿದೆ. ಆದರೆ ಉಗುರಿನ ಬದಲಾವಣೆ ಮಾತ್ರ ನೋಡಿ ಹೃದಯ ಅಥವಾ ಕಿಡ್ನಿ ಕಾಯಿಲೆ ಇದೆ ಎಂದು ನಿರ್ಧರಿಸುವುದು ಸರಿಯಲ್ಲ ಎಂದು ವೈದ್ಯರು ಸ್ಪಷ್ಟಪಡಿಸುತ್ತಾರೆ.
ಈ ಲಕ್ಷಣಗಳು ಇದ್ದರೆ ನಿರ್ಲಕ್ಷಿಸಬೇಡಿ
ಉಗುರಿನ ಬದಲಾವಣೆಯ ಜೊತೆಗೆ ಈ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
- ಕಾಲುಗಳಲ್ಲಿ ಊತ
- ಉಸಿರಾಟದ ತೊಂದರೆ
- ಎದೆನೋವು ಅಥವಾ ಎದೆ ಭಾರವಾಗಿರುವ ಅನುಭವ
- ಅತಿಯಾದ ಆಯಾಸ
- ಮೂತ್ರ ವಿಸರ್ಜನೆಯಲ್ಲಿ ತೊಂದರೆ
- ರಕ್ತಹೀನತೆ (Anemia)
- ಥೈರಾಯ್ಡ್ ಸಮಸ್ಯೆ
- ವಿಟಮಿನ್ ಕೊರತೆ
- ಮಧುಮೇಹ
ತಜ್ಞರ ಪ್ರಕಾರ, ಉಗುರಿನ ಬಣ್ಣ, ದಪ್ಪ, ಆಕಾರ ಅಥವಾ ಬೆಳವಣಿಗೆಯಲ್ಲಿ ಆಗುವ ಬದಲಾವಣೆಗಳು ಕೆಲವೊಮ್ಮೆ ಐರನ್ ಕೊರತೆ, ವಿಟಮಿನ್ ಬಿ12 ಕೊರತೆ, ಯಕೃತ್ತಿನ ಕಾಯಿಲೆ, ಶ್ವಾಸಕೋಶದ ಸಮಸ್ಯೆಗಳು ಅಥವಾ ರಕ್ತಸಂಚಾರ ಸಮಸ್ಯೆಗಳ ಸೂಚನೆಯಾಗಿರಬಹುದು. ಆದ್ದರಿಂದ ಉಗುರಿನಲ್ಲಿ ಏಕಾಏಕಿ ಬದಲಾವಣೆ ಕಂಡುಬಂದರೆ ಅದನ್ನು ನಿರ್ಲಕ್ಷಿಸಬಾರದು.
ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?
ಈ ಪರಿಸ್ಥಿತಿಗಳಲ್ಲಿ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.
- ಲುನುಲಾ ಏಕಾಏಕಿ ಕಾಣಿಸದೇ ಹೋದರೆ
- ಬಣ್ಣದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದರೆ
- ಉಗುರುಗಳು ದುರ್ಬಲವಾಗಿ ಮುರಿಯಲು ಆರಂಭಿಸಿದರೆ
- ಹಲವು ವಾರಗಳವರೆಗೆ ಬದಲಾವಣೆ ಮುಂದುವರಿದರೆ
- ಜೊತೆಗೆ ಹೃದಯ ಅಥವಾ ಕಿಡ್ನಿ ಸಮಸ್ಯೆಯ ಲಕ್ಷಣಗಳು ಕಂಡುಬಂದರೆ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ