ಎಂಟನೇ ರಾಶಿಯಾದ ವೃಶ್ಚಿಕ ರಾಶಿವರಿಗೆ ಮೇ ತಿಂಗಳಲ್ಲಿ ಮಿಶ್ರ ಫಲದ್ದಾಗಲಿದೆ. ವಿಶಾಖಾ, ಅನುರಾಧಾ ಜ್ಯೇಷ್ಠಾ ನಕ್ಷತ್ರದವರಿಗೆ ಗುರು, ಶನಿ ಮತ್ತು ಬುಧರು ಅಧಿಪತಿಗಳಾಗಿದ್ದು ಈ ಮೂರು ಗ್ರಹಗಳ ಪ್ರಭಾವ ಅಧಿಕವಾಗಿರಲಿದೆ ಹಾಗೂ ಗ್ರಹಗಳ ದೃಷ್ಟಿ, ಸ್ಥಾನ, ದಿಗ್ಬಲಗಳ ಆಧಾರದ ಮೇಲೆ ಈ ರಾಶಿಗೆ ಫಲಗಳು ಪ್ರಾಪ್ತಿಯಾಗಾಲಿವೆ.
ಶುಭ ದಶೆ:
- ರವಿ: ಸೂರ್ಯನು ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿ ದಿಗ್ಬಲನಾಗಿರುತ್ತಾನೆ. ಇದು ಶತ್ರುಗಳ ಮೇಲೆ ಜಯ, ಆರೋಗ್ಯ ಸುಧಾರಣೆ ಮತ್ತು ಸರ್ಕಾರಿ ಕೆಲಸಗಳಲ್ಲಿ ಯಶಸ್ಸನ್ನು ನೀಡುತ್ತದೆ.
- ಶುಕ್ರ :ಶುಕ್ರನು ತನ್ನ ಸ್ವಕ್ಷೇತ್ರವಾದ ಏಳನೇ ಮನೆಯಲ್ಲಿರುವುದು ನಿಮ್ಮ ವೈಯಕ್ತಿಕ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಇದು ದಾಂಪತ್ಯ ಜೀವನಕ್ಕೆ ಬಹಳ ಶುಭ.
- ಗುರು :ಗುರು ಎಂಟನೇ ಮನೆಯಲ್ಲಿದ್ದರೂ, ನಿಮ್ಮ ಧನಸ್ಥಾನ ಮತ್ತು ಸುಖಸ್ಥಾನದ ಮೇಲೆ ದೃಷ್ಟಿ ಬೀರುವುದರಿಂದ ಆಕಸ್ಮಿಕ ಧನ ಲಾಭಕ್ಕೆ ದಾರಿಯಾಗುತ್ತದೆ.
ಅಶುಭ ದಶೆ :
ಶನಿ, ಕುಜ, ಬುಧ :
ಐದನೇ ಮನೆಯಲ್ಲಿ ಈ ಮೂರು ಗ್ರಹಗಳ ಯುತಿ ಇರುವುದು ಸ್ವಲ್ಪ ಕಳವಳಕಾರಿ. ಇದು ಮುಖ್ಯವಾಗಿ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ, ಮಕ್ಕಳ ಆರೋಗ್ಯ ಅಥವಾ ಶಿಕ್ಷಣದ ಬಗ್ಗೆ ಚಿಂತೆ ಉಂಟಾಗಲಿದೆ.
ಕುಜ :
ನಿಮ್ಮ ರಾಶ್ಯಾಧಿಪತಿಯಾದ ಕುಜನು ಶನಿಯೊಂದಿಗೆ ಇರುವುದರಿಂದ ಅತಿಯಾದ ಕೋಪ ಅಥವಾ ಆತುರದ ನಿರ್ಧಾರಗಳಿಂದ ಕೆಲಸಗಳು ಕೆಡುವ ಸಾಧ್ಯತೆ ಇದೆ.
ಉದ್ಯೋಗ ಮತ್ತು ಅಧಿಕಾರ :
ಸೂರ್ಯನು ಆರನೇ ಮನೆಯಲ್ಲಿರುವುದರಿಂದ ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ಬಾಕಿ ಉಳಿದಿದ್ದ ಫೈಲ್ಗಳು ವಿಲೇವಾರಿಯಾಗಲಿವೆ. ಉದ್ಯೋಗದಲ್ಲಿ ವರ್ಗಾವಣೆಯ ಸಾಧ್ಯತೆ ಇದೆ. ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ.
ಐದನೇ ಮನೆಯಲ್ಲಿ ಶನಿ-ಕುಜ ಇರುವುದರಿಂದ ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ಸಂಯಮವಿರಲಿ. ನಿಮ್ಮ ಮಾತೇ ನಿಮಗೆ ಶತ್ರುವಾಗದಂತೆ ನೋಡಿಕೊಳ್ಳಿ.
ಪ್ರೇಮ ಮತ್ತು ವಿವಾಹ :
ಶುಕ್ರನು ಏಳನೇ ಮನೆಯಲ್ಲಿರುವುದರಿಂದ ವಿವಾಹ ಸಂಬಂಧಿ ಮಾತುಕತೆಗಳು ಯಶಸ್ವಿಯಾಗುತ್ತವೆ. ಕಂಕಣ ಬಲ ಕೂಡಿಬರುವ ಸಾಧ್ಯತೆ ಹೆಚ್ಚಿದೆ. ಪ್ರೇಮಿಗಳ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು. ಐದನೇ ಮನೆಯಲ್ಲಿರುವ ಪಾಪಗ್ರಹಗಳ ಪ್ರಭಾವದಿಂದ ಸಂಗಾತಿಯನ್ನು ಸಂಶಯಿಸಬೇಡಿ. ಪರಸ್ಪರ ಗೌರವ ನೀಡಿದರೆ ಸಂಬಂಧ ಗಟ್ಟಿಯಾಗುತ್ತದೆ.
ಆರ್ಥಿಕ ಮತ್ತು ಆರೋಗ್ಯ :
ಗುರುವಿನ ದೃಷ್ಟಿಯಿಂದಾಗಿ ಹಳೆಯ ಸಾಲಗಳು ತೀರುವ ಸಾಧ್ಯತೆ ಇದೆ. ಆದರೆ ಅನಗತ್ಯ ಹೂಡಿಕೆಗಳ ಬಗ್ಗೆ ಎಚ್ಚರವಿರಲಿ. ರಕ್ತದೊತ್ತಡ ಅಥವಾ ಉಷ್ಣ ಸಂಬಂಧಿ ಸಮಸ್ಯೆಗಳ ಬಗ್ಗೆ ಜಾಗರೂಕತೆ ಇರಲಿ. ವಾಹನ ಚಾಲನೆ ಮಾಡುವಾಗ ಅಧಿಕ ಗಮನ ಬೇಕು.
ಕುಜ ಮತ್ತು ಶನಿಯ ಪ್ರಭಾವ ತಗ್ಗಿಸಲು ಮಂಗಳವಾರ ಸುಬ್ರಹ್ಮಣ್ಯ ಅಷ್ಟಕ ಪಠಿಸಿ. ಶನಿವಾರದಂದು ಎಳ್ಳೆಣ್ಣೆ ದೀಪ ಹಚ್ಚುವುದು ಉತ್ತಮ.
– ಲೋಹಿತ ಹೆಬ್ಬಾರ್
Published On – 6:06 pm, Thu, 30 April 26