ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಅಲ್ಲಿ 5 ಪಂದ್ಯಗಳ ಟಿ20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಅದಾದ ಬಳಿಕ ಟಿ20 ಸರಣಿಗಾಗಿ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯ ನಂತರ ಟೀಂ ಇಂಡಿಯಾ ಮತ್ತೆ ಬಿಳಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದು, ಶ್ರೀಲಂಕಾ ವಿರುದ್ಧ (India vs Sri Lanka) ಕಣಕ್ಕಿಳಿಯಲಿದೆ. ವಾಸ್ತವವಾಗಿ ಭಾರತ ಹಾಗೂ ಶ್ರೀಲಂಕಾ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಆಗಸ್ಟ್ 15 ರಿಂದ ಆರಂಭವಾಗಲಿದೆ. ಈ ಸರಣಿಯ ವೇಳಾಪಟ್ಟಿ ಇಂದು ಪ್ರಕಟವಾಗಿದೆ. ಆದರೆ ಉಭಯ ತಂಡಗಳ ನಡುವೆ ನಡೆಯಬೇಕಿದ್ದ 3 ಪಂದ್ಯಗಳ ಟಿ20 ಸರಣಿಯನ್ನು ರದ್ದುಗೊಳಿಸಲಾಗಿದೆ.
ಡಬ್ಲ್ಯೂಟಿಸಿ ಪಾಯಿಂಟ್ ಪಟ್ಟಿಯಲ್ಲಿ ಟೀಂ ಇಂಡಿಯಾ
ಜುಲೈ 2ರ ಗುರುವಾರದಂದು ಶ್ರೀಲಂಕಾ ಕ್ರಿಕೆಟ್, ಎರಡು ಪಂದ್ಯಗಳ ಟೆಸ್ಟ್ ಸರಣಿಯ ದಿನಾಂಕಗಳನ್ನು ಘೋಷಿಸಿದೆ. ಒಂಬತ್ತು ವರ್ಷಗಳ ನಂತರ ಭಾರತ ತಂಡವು ಟೆಸ್ಟ್ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಲಿದೆ. ಟೀಂ ಇಂಡಿಯಾ ಕೊನೆಯ ಬಾರಿಗೆ ಶ್ರೀಲಂಕಾದಲ್ಲಿ ಟೆಸ್ಟ್ ಪಂದ್ಯವನ್ನು ಆಡಿದ್ದು 2017 ರಲ್ಲಿ. ಇದೀಗ 9 ವರ್ಷಗಳ ಟೆಸ್ಟ್ ಸರಣಿಗಾಗಿ ಲಂಕಾ ಪ್ರವಾಸ ಮಾಡುತ್ತಿರುವ ಟೀಂ ಇಂಡಿಯಾಕ್ಕೆ ಈ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. ಪ್ರಸ್ತುತ ಡಬ್ಲ್ಯೂಟಿಸಿ ಪಾಯಿಂಟ್ ಪಟ್ಟಿಯಲ್ಲಿ ಟೀಂ ಇಂಡಿಯಾ 5ನೇ ಸ್ಥಾನದಲ್ಲಿದೆ. ಆಡಿರುವ 9ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದು 52 ಅಂಕಗಳನ್ನು ಹೊಂದಿದೆ. ಆದರೆ ತಂಡದ ಗೆಲುವಿನ ಶೇಕಡಾವಾರು 48.15 ಆಗಿರುವುದರಿಂದ ಡಬ್ಲ್ಯೂಟಿಸಿ ಫೈನಲ್ ತಲುಪುವ ಅವಕಾಶಗಳನ್ನು ಕಾಪಾಡಿಕೊಳ್ಳಲು ಟೀಂ ಇಂಡಿಯಾ ಈ ಸರಣಿಯನ್ನು ಗೆಲ್ಲುವುದು ಅವರಿಗೆ ನಿರ್ಣಾಯಕವಾಗಿದೆ.
Mark your calendars 🗓️
Presenting #TeamIndia‘s schedule for the two-match Test series against Sri Lanka, starting August 15 🙌#SLvIND pic.twitter.com/FoUEaUb3Qe
— BCCI (@BCCI) July 2, 2026
ಟೆಸ್ಟ್ ಸರಣಿ ವೇಳಾಪಟ್ಟಿ ಇಲ್ಲಿದೆ
ವೇಳಾಪಟ್ಟಿಯ ಬಗ್ಗೆ ಹೇಳುವುದಾದರೆ, ಈ ಸರಣಿಯಲ್ಲಿ ಭಾರತ ಮತ್ತು ಶ್ರೀಲಂಕಾ ಕೇವಲ 13 ದಿನಗಳಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿವೆ. ಇದು ಆಗಸ್ಟ್ 15 ರಂದು ಭಾರತೀಯ ಸ್ವಾತಂತ್ರ್ಯ ದಿನದಂದು ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಆಗಸ್ಟ್ 15 ರಿಂದ 19 ರವರೆಗೆ ಗ್ಯಾಲೆಯ ಐತಿಹಾಸಿಕ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೊನೆಯ ಪ್ರವಾಸದಲ್ಲಿ, ಟೀಂ ಇಂಡಿಯಾ ಗ್ಯಾಲೆಯಲ್ಲಿ ನಡೆದ ಟೆಸ್ಟ್ ಪಂದ್ಯವನ್ನು 304 ರನ್ಗಳಿಂದ ಗೆದ್ದುಕೊಂಡಿತು. ಎರಡನೇ ಪಂದ್ಯ ಆಗಸ್ಟ್ 23 ರಿಂದ 27 ರವರೆಗೆ ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯಲಿದೆ. ಈ ಮೈದಾನದಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಇನ್ನಿಂಗ್ಸ್ ಮತ್ತು 53 ರನ್ಗಳಿಂದ ಗೆದ್ದಿತು. ಹೀಗಾಗಿ ಮುಂಬರುವ ಪ್ರವಾಸದಲ್ಲೂ ಟೀಂ ಇಂಡಿಯಾ ಇದೇ ಪ್ರದರ್ಶನವನ್ನು ಪುನಾರವರ್ತಿಸಬೇಕಾಗಿದೆ.
IND W vs ENG W: ಟೀಂ ಇಂಡಿಯಾ ವಿರುದ್ಧದ ಲಾರ್ಡ್ಸ್ ಟೆಸ್ಟ್ಗೆ ಇಂಗ್ಲೆಂಡ್ ತಂಡ ಪ್ರಕಟ
ಟಿ20 ಸರಣಿ ರದ್ದು
ವಾಸ್ತವವಾಗಿ ಈ ಟೆಸ್ಟ್ ಸರಣಿಯ ಜೊತೆಗೆ 3 ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ ಆಡಲಿದೆ ಎಂಬ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿತ್ತು. ಶ್ರೀಲಂಕಾದಲ್ಲಿ ನೈಸರ್ಗಿಕ ವಿಕೋಪಕ್ಕೆ ಬಲಿಯಾದ ಸಂತ್ರಸ್ತರಿಗೆ ಸಹಾಯ ಮಾಡುವ ಸಲುವಾಗಿ ಈ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಾಗುತ್ತಿದೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಪೂರಕವಾಗಿ ಉಭಯ ಕ್ರಿಕೆಟ್ ಮಂಡಳಿಗಳ ಕೂಡ ಕೆಲಸ ಮಾಡುತ್ತಿವೆ ಎಂದು ವರದಿಯಾಗಿತ್ತು. ಆದರೀಗ ಪ್ರಕಟವಾಗಿರುವ ವೇಳಾಪಟ್ಟಿಯಲ್ಲಿ ಕೇವಲ ಟೆಸ್ಟ್ ಪಂದ್ಯಗಳ ಬಗ್ಗೆ ಮಾತ್ರ ವಿವರ ನೀಡಲಾಗಿದೆ. ಇದರರ್ಥ ಉಭಯ ತಂಡಗಳ ನಡುವೆ ನಡೆಯಬೇಕಿದ್ದ ಟಿ20 ಸರಣಿಯನ್ನು ರದ್ದುಗೊಳಿಸಿರುವ ಸಾಧ್ಯತೆಗಳಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 5:06 pm, Thu, 2 July 26