ಗಾಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನವಾದ ಇಂದು ಭಾರತ ತಂಡ ಐತಿಹಾಸಿಕ ಗೆಲುವಿನತ್ತ ಮುನ್ನುಗ್ಗುತ್ತಿದೆ. ಐದನೇ ದಿನದ ಭೋಜನ ವಿರಾಮದ ವೇಳೆಗೆ ಶ್ರೀಲಂಕಾ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಭಾರತ ನೀಡಿದ್ದ 372 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುತ್ತಿರುವ ಶ್ರೀಲಂಕಾ ತಂಡಕ್ಕೆ ಭಾರತದ ಬೌಲರ್‌ಗಳು ತೀವ್ರ ಆಘಾತ ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಶ್ರೀಲಂಕಾ ಗೆಲುವಿಗೆ ಇನ್ನು 197 ರನ್‌ಗಳ ಅಗತ್ಯವಿದ್ದು, ಕೈಯಲ್ಲಿ ಕೇವಲ 4 ವಿಕೆಟ್‌ಗಳು ಮಾತ್ರ ಬಾಕಿ ಇವೆ.
ಪಂದ್ಯದಲ್ಲಿ ಇನ್ನೂ 2 ಸೆಷನ್‌ಗಳು ಮತ್ತು ಕನಿಷ್ಠ 65 ಓವರ್‌ಗಳು ಬಾಕಿದೆ. ಈ ಎರಡು ಸೆಷನ್ಗಳ ಒಳಗೆ ಲಂಕಾ ಪಡೆ 197 ರನ್ಗಳಿಸಬೇಕಿದೆ. ಇತ್ತ ಟೀಮ್ ಇಂಡಿಯಾ 4 ವಿಕೆಟ್ ಉರುಳಿಸಿದರೆ ಗೆಲುವು ತನ್ನದಾಗಿಸಿಕೊಳ್ಳಬಹುದು. ಹೀಗಾಗಿಯೇ ಇದೀಗ ಎಲ್ಲರ ಕಣ್ಣು ಗಾಲೆಯತ್ತ ನೆಟ್ಟಿದೆ.
- ಬಾಕಿ ಇರುವ ಓವರ್‌ಗಳು: ಪಂದ್ಯದಲ್ಲಿ ಇನ್ನು ಕನಿಷ್ಠ 65 ಓವರ್‌ಗಳು ಬಾಕಿ ಇವೆ.
- ಬೇಕಾಗಿರುವ ರನ್‌ಗಳು: ಶ್ರೀಲಂಕಾ ಗೆಲ್ಲಲು ಇನ್ನು 197 ರನ್‌ಗಳು ಬೇಕು
- ಬೇಕಿರುವ ವಿಕೆಟ್‌ಗಳು: ಭಾರತ ತಂಡದ ಗೆಲುವಿಗೆ 4 ವಿಕೆಟ್‌ಗಳ ಅಗತ್ಯವಿದೆ.
- ಬಾಕಿ ಇರುವ ಸೆಷನ್‌ಗಳು: ಇಂದು 5ನೇ ದಿನವಾಗಿದ್ದು, ಇನ್ನು 2 ಸೆಷನ್‌ಗಳು (ಟೀ ಬ್ರೇಕ್ ಸೆಷನ್ ಮತ್ತು ಅಂತಿಮ ಸೆಷನ್) ಬಾಕಿ ಇವೆ.
ಕ್ರೀಸ್ನಲ್ಲಿರುವವರು ಯಾರು?
- ಸೋನಲ್ ದಿನುಶಾ: 65* ರನ್ (112 ಎಸೆತಗಳು)
- ಕೇಶರ ನುವಾಂತ: 8* ರನ್ (27 ಎಸೆತಗಳು)
ಸೋನಲ್ ದಿನುಶಾ ಸದ್ಯ ಕ್ರೀಸ್‌ನಲ್ಲಿ ಭರ್ಜರಿ ಅರ್ಧಶತಕ ಬಾರಿಸಿ ಆಡುತ್ತಿರುವುದರಿಂದ, ಇದೀಗ ಶ್ರೀಲಂಕಾ ತಂಡ ಅವರನ್ನೇ ಸಂಪೂರ್ಣವಾಗಿ ನೆಚ್ಚಿಕೊಂಡಿದೆ. ಅಂದರೆ ಸೋನಲ್ ದಿನುಶಾ ಕ್ರೀಸ್ ಕಚ್ಚಿ ನಿಂತು ಹೋರಾಟ ಮುಂದುವರಿಸಿದರೆ ಲಂಕಾ ಪಡೆಗೆ ಸೋಲಿನಿಂದ ಪಾರಾಗುವ ಅಥವಾ ಗೆಲುವಿನ ಹತ್ತಿರ ಸಾಗುವ ಆಸೆ ಚಿಗುರಬಹುದು.
ಇದನ್ನೂ ಓದಿ: ರಿಷಭ್ ಪಂತ್ ಆರ್ಭಟಕ್ಕೆ ಗಿಲ್ ದಾಖಲೆ ಉಡೀಸ್!
ಆದರೆ ಇತ್ತ ಟೀಮ್ ಇಂಡಿಯಾ ಪರ ಮಾನವ್ ಸುತಾರ್ ಮತ್ತು ರವೀಂದ್ರ ಜಡೇಜಾ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸುತ್ತಿದ್ದು, ಭಾರತೀಯ ಸ್ಪಿನ್ನರ್‌ಗಳ ಮ್ಯಾಜಿಕ್ ಎದುರು ಲಂಕಾದ ಉಳಿದ ಲೋವರ್ ಆರ್ಡರ್ ಬ್ಯಾಟರ್‌ಗಳು ಕ್ರೀಸ್ ಕಚ್ಚಿ ನಿಲ್ಲುವುದು ಕಷ್ಟಕರ ಎಂದೇ ಹೇಳಬಹುದು. ಹೀಗಾಗಿ ಈ ಮ್ಯಾಚ್ನಲ್ಲಿ ಟೀಮ್ ಇಂಡಿಯಾದ ಗೆಲುವನ್ನು ಎದುರು ನೋಡಬಹುದು.
Published On – 12:51 pm, Wed, 19 August 26