2026 ರ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿತ್ತಾದರೂ, ತಂಡದ ಬ್ಯಾಟಿಂಗ್ ವಿಭಾಗ ಮಾತ್ರ ಆಡಳಿತ ಮಂಡಳಿಯ ದೊಡ್ಡ ತಲೆನೋವಾಗಿತ್ತು. ಏಕೆಂದರೆ ಪ್ರಮುಖ ಬ್ಯಾಟ್ಸ್ಮನ್ಗಳು ಲಯ ಕಳೆದುಕೊಂಡಿದ್ದರು. ಇದರ ಪರಿಣಾಮವಾಗಿ ಟೀಂ ಇಂಡಿಯಾ, ಸೌತ್ ಆಫ್ರಿಕಾ ವಿರುದ್ಧ ತನ್ನ ಮೊದಲ ಸೂಪರ್ 8 ಪಂದ್ಯವನ್ನು ಹೀನಾಯವಾಗಿ ಸೋತಿತ್ತು.
ಇದೀಗ ಸೋಲಿನಿಂದ ಪಾಠ ಕಲಿತಿರುವ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳು ಲಯಕಂಡುಕೊಂಡಿದ್ದಾರೆ. ಜಿಂಬಾಬ್ವೆ ವಿರುದ್ಧದ ಸೂಪರ್ 8 ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದ ತಂಡದ ಎಲ್ಲಾ ಬ್ಯಾಟ್ಸ್ಮನ್ಗಳು ಅದ್ಭುತ ಪ್ರದರ್ಶನ ನೀಡಿದರು. ಇದರ ಪರಿಣಾಮವಾಗಿ ಟೀಂ ಇಂಡಿಯಾ 20 ಓವರ್ಗಳಲ್ಲಿ ಬರೋಬ್ಬರಿ 256 ರನ್ ಕಲೆಹಾಕಿತು.
ತಂಡದ ಪರ ಆರಂಭಿಕ ಅಭಿಷೇಕ್ ಶರ್ಮಾ 55 ಬಾರಿಸಿದರೆ, ಹಾರ್ದಿಕ್ ಪಾಂಡ್ಯ ಅಜೇಯ 50 ಮತ್ತು ತಿಲಕ್ ವರ್ಮಾ ಅಜೇಯ 44 ರನ್ಗಳ ಕಾಣಿಕೆ ನೀಡಿದರು. ಇವರ ಜೊತೆಗೆ ಇಶಾನ್ ಕಿಶನ್ 38, ಸೂರ್ಯ 33 ರನ್ ಮತ್ತು ಸಂಜು ಸ್ಯಾಮ್ಸನ್ 24 ರನ್ ಬಾರಿಸಿ ತಂಡವನ್ನು ಬೃಹತ್ ಮೊತ್ತಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದರು.
ಈ ಪಂದ್ಯದಲ್ಲಿ ಭಾರತ 256 ರನ್ ಕಲೆಹಾಕುವ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತ ಕಲೆಹಾಕಿದ ದಾಖಲೆ ನಿರ್ಮಿಸಿದೆ. ಇದಕ್ಕೂ ಮೊದಲು ಭಾರತ ತಂಡ 2007 ರಲ್ಲಿ ಡರ್ಬನ್ನಲ್ಲಿ ಇಂಗ್ಲೆಂಡ್ ವಿರುದ್ಧ 218 ರನ್ ಬಾರಿಸಿದ್ದು ಟಿ20 ವಿಶ್ವಕಪ್ನಲ್ಲಿ ಭಾರತದ ಅತ್ಯಧಿಕ ಸ್ಕೋರ್ ಆಗಿತ್ತು. ಇದೀಗ ಜಿಂಬಾಬ್ವೆ ವಿರುದ್ಧ 256 ರನ್ ಬಾರಿಸಿರುವ ಟೀಂ ಇಂಡಿಯಾ 19 ವರ್ಷಗಳ ಹಿಂದಿನ ಅತ್ಯಧಿಕ ಸ್ಕೋರ್ ದಾಖಲೆಯನ್ನು ಮುರಿದಿದೆ.
ಆದಾಗ್ಯೂ ಟೀಂ ಇಂಡಿಯಾ ಕೇವಲ 4 ರನ್ಗಳಿಂದ ವಿಶ್ವ ದಾಖಲೆ ನಿರ್ಮಿಸುವುದರಿಂದ ವಂಚಿತವಾಯಿತು. ವಾಸ್ತವವಾಗಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತ ಕಲೆಹಾಕಿದ ತಂಡಗಳ ಪಟ್ಟಿಯಲ್ಲಿ 260 ರನ್ ಬಾರಿಸಿರುವ ಶ್ರೀಲಂಕಾ ತಂಡ ಮೊದಲ ಸ್ಥಾನದಲ್ಲಿದೆ. ಲಂಕಾ ಪಡೆ 2007 ರ ಟಿ20 ವಿಶ್ವಕಪ್ನಲ್ಲಿ ಕೀನ್ಯಾ ವಿರುದ್ಧ ಈ ಮೊತ್ತ ಕಲೆಹಾಕಿತ್ತು.
ಇಂದಿನ ಪಂದ್ಯದಲ್ಲಿ ಭಾರತ ರ 4 ರನ್ ಬಾರಿಸಿದ್ದರೆ, ಅತಿ ಹೆಚ್ಚು ಮೊತ್ತ ಕಲೆಹಾಕಿದ ವಿಶ್ವ ದಾಖಲೆಗೆ ಕೊರಳೊಡ್ಡುತ್ತಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆದಾಗ್ಯೂ ಭಾರತ ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಐದನೇ ಅತ್ಯಧಿಕ ಮೊತ್ತ ದಾಖಲಿಸಿದ ಸಾಧನೆ ಮಾಡುವಲ್ಲಿ ಯಶಸ್ವಿಯಾಯಿತು.





