ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನದಲ್ಲಿ ನಡೆದ 2026 ರ ಮಹಿಳಾ ಟಿ20 ವಿಶ್ವಕಪ್ನ 18ನೇ ಪಂದ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಉತ್ತಮ ಆರಂಭ ಪಡೆಯಿತ್ತಾದರೂ ಆ ಬಳಿಕ ತಾನು ಮಾಡಿದ ತಪ್ಪುಗಳಿಂದಲೇ ಸೋಲಿಗೆ ಶರಣಾಯಿತು. ಮೊದಲಿಗೆ ಬ್ಯಾಟಿಂಗ್ನಲ್ಲಿ ಸಿಕ್ಕ ಉತ್ತಮ ಆರಂಭವನ್ನು ಬಳಸಿಕೊಳ್ಳುವಲ್ಲಿ ಎಡವಿದ ಭಾರತ, ಆ ಬಳಿಕ ಬೌಲಿಂಗ್ನಲ್ಲೂ ಸಿಕ್ಕ ಆರಂಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಎಡವಿತು. ಅದರಲ್ಲೂ ದಕ್ಷಿಣ ಆಫ್ರಿಕಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮರಿಜಾನ್ನೆ ಕಪ್ ಅವರ ಸುಲಭ ಕ್ಯಾಚ್ ಕೈಚೆಲ್ಲುವ ಮೂಲಕ ಟೀಂ ಇಂಡಿಯಾ ಸೋಲಿಗೆ ನೇರ ಆಹ್ವಾನ ನೀಡಿತು. ಇದು ಈ ಪಂದ್ಯಾವಳಿಯಲ್ಲಿ ಭಾರತದ ಮೊದಲ ಸೋಲಾಗಿದ್ದು, ಇತ್ತ ಆಫ್ರಿಕಾ ತಂಡಕ್ಕೆ ಸತತ ಎರಡನೇ ಗೆಲುವಾಗಿದೆ.
ಎಡವಿದ ಬ್ಯಾಟಿಂಗ್ ವಿಭಾಗ
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭವೇ ಸಿಕ್ಕಿತು. ಸ್ಮೃತಿ ಹಾಗೂ ಶಫಾಲಿ ಮೊದಲ 3 ಓವರ್ಗಳಲ್ಲಿ 30 ರನ್ ಕಲೆಹಾಕಿದರು. ಆದರೆ 3ನೇ ಓವರ್ನ ಕೊನೆಯ ಎಸೆತದಲ್ಲಿ ಬೇಡದ ಶಾಟ್ ಆಡುವ ಯತ್ನದಲ್ಲಿ ಸ್ಮೃತಿ ವಿಕೆಟ್ ಕೈಚೆಲ್ಲಿದರು. ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಮೂರನೇ ಕ್ರಮಾಂಕದಲ್ಲಿ ಬಂದ ಯಾಸ್ತಿಕಾ ಭಾಟಿಯಾ ಬ್ಯಾಟಿಂಗ್ ಮಾಡಲು ಬಂದರಾದರೂ ಅವರ ಆಟ ಕೂಡ ಅಷ್ಟಕಷ್ಟೆ. ಇತ್ತ ಎಂದಿನಂತೆ ಹೊಡಿಬಡಿ ಆಟ ಮುಂದುವರೆಸಿದ ಶಫಾಲಿ ಕೂಡ 31 ರನ್ ಬಾರಿಸಿ ಬೇಡದ ಶಾಟ್ ಆಡಿ ವಿಕೆಟ್ ಉಡುಗೊರೆ ನೀಡಿದರು.
ಆರಂಭಿಕರ ವಿಕೆಟ್ ಪತನದ ಎಂದಿನಂತೆ ತಂಡದ ಬ್ಯಾಟಿಂಗ್ ವಿಭಾಗ ಪೆವಿಲಿಯನ್ ಪರೇಡ್ ಶುರು ಮಾಡಿತು. ಈ ಪಂದ್ಯಾವಳಿಯಲ್ಲಿ ಇದುವರೆಗೆ ಲಯಕಂಡುಕೊಳ್ಳದ ಜೆಮಿಮಾ ಕೇವಲ 12 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ಐತಿಹಾಸಿಕ 200ನೇ ಟಿ20 ಪಂದ್ಯವನ್ನಾಡಿದ ನಾಯಕಿ ಹರ್ಮನ್ಪ್ರೀತ್ ಅವರ ಇನ್ನಿಂಗ್ಸ್ ಕೂಡ 24 ರನ್ಗಳಿಗೆ ಅಂತ್ಯವಾಯಿತು. ಕೊಂಚ ಹೋರಾಟ ತೋರಿದ ದೀಪ್ತ 29 ರನ್ಗಳಿಗೆ ಸುಸ್ತಾದರೆ, ರಿಚಾ ಘೋಷ್ 15 ರನ್ಗಳಿಗೆ ಪೆವಿಲಿಯನ್ ದಾರಿ ಹಿಡಿದರು. ಬ್ಯಾಟಿಂಗ್ ವಿಭಾಗದಲ್ಲಿ ಎಲ್ಲರೂ ಉತ್ತಮ ಆರಂಭ ಪಡೆದರಾದರೂ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಬದಲಿಸುವುಲ್ಲಿ ಎಡವಿದರು. ಹೀಗಾಗಿ ಟೀಂ ಇಂಡಿಯಾ ಕೇವಲ 158 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಆರಂಭದಲ್ಲಿ ಭಾರತಕ್ಕೆ ಮೇಲುಗೈ
ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವನ್ನು ಪವರ್ಪ್ಲೇನಲ್ಲೇ ಟೀಂ ಇಂಡಿಯಾದ ಸ್ಪಿನ್ನರ್ಗಳು ಸಂಪೂರ್ಣವಾಗಿ ಕಟ್ಟಿಹಾಕಿದರು. ತಂಡದ ಮೊದಲೆರಡು ವಿಕೆಟ್ಗಳು ಕೇವಲ 25 ರನ್ಗಳಿಗೆ ಉರುಳಿದವು. ಹೀಗಾಗಿ ಆಫ್ರಿಕಾ ತಂಡ ಮೊದಲ 6 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 26 ರನ್. ಆದರೆ ಅಲ್ಲಿಂದ ಜೊತೆಯಾದ ಕಪ್ ಹಾಗೂ ಬ್ರಿಟ್ಸ್ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದರು. ಆರಂಭದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ ಟೀಂ ಇಂಡಿಯಾದ ಬೌಲಿಂಗ್ ವಿಭಾಗ ಆ ನಂತರ ಹಳಿ ತಪ್ಪಿತು. ಅದರಲ್ಲೂ ತಂಡದ ಅನುಭವಿ ಸ್ಪಿನ್ನರ್ ದೀಪ್ತಿ ಶರ್ಮಾ ಸರಾಗವಾಗಿ ರನ್ ನೀಡಿದ್ದು, ಆಫ್ರಿಕಾದ ಒತ್ತಡವನ್ನು ಕಡಿಮೆ ಮಾಡಿತು.
ಕ್ಯಾಚ್ ಬಿಟ್ಟು ಮ್ಯಾಚ್ ಸೋತ ಭಾರತ
ಇದೇ ಹಂತದಲ್ಲಿ ರಾಧಾ ಯಾದವ್, ಕಪ್ ನೀಡಿದ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದರು. ಆ ಸಮಯದಲ್ಲಿ ಕಪ್ ಅರ್ಧಶತಕವನ್ನು ಬಾರಿಸಿರಲಿಲ್ಲ. ಆದರೆ ಆ ಜೀವದಾನದ ಲಾಭ ಪಡೆದ ಕಪ್ ಕೊನೆಯವರೆಗೂ ಅಜೇಯರಾಗಿ ಉಳಿದು ತಂಡಕ್ಕೆ ಗೆಲುವು ತಂದುಕೊಟ್ಟರು. ಹಾಗೆಯೇ ತಂಡದ ಸೋಲಿನಲ್ಲಿ ನಾಯಕಿ ಹರ್ಮನ್ಪ್ರೀತ್ ತೆಗೆದುಕೊಂಡ ನಿರ್ಧಾರಗಳು ಕಾರಣವಾದವು. ಈ ಪಂದ್ಯದಲ್ಲಿ ದೀಪ್ತಿ ದುಬಾರಿಯಾಗಿದ್ದರೂ ಅವರಿಂದ 19ನೇ ಓವರ್ ಬೌಲ್ ಮಾಡಿಸಿದರು. ಈ ಓವರ್ನಲ್ಲಿ 2 ಸಿಕ್ಸರ್ಗಳನ್ನು ಬಾರಿಸುವ ಮೂಲಕ ಕಪ್ ತಂಡದ ಗೆಲುವು ಖಚಿತ ಪಡಿಸಿದರು. ಹಾಗೆಯೇ ಶ್ರೇಯಾಂಕ ಬದಲಿಗೆ ಬಂದ ಪ್ರೇಮಾ ದುಬಾರಿಯಾಗಿದ್ದು ಕೂಡ ತಂಡದ ಸೋಲಿಗೆ ಕಾರಣವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 10:34 pm, Sun, 21 June 26