ತಿರುವನಂತಪುರದಲ್ಲಿ ನಡೆದ ಶ್ರೀಲಂಕಾ ಮಹಿಳಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ ಮಹಿಳಾ ತಂಡವು ಏಕಪಕ್ಷೀಯ ಗೆಲುವು ಸಾಧಿಸಿ ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ. ಮೂರನೇ ಟಿ20 ಪಂದ್ಯವನ್ನು 8 ವಿಕೆಟ್ಗಳಿಂದ ಗೆದ್ದುಕೊಂಡ ಟೀಂ ಇಂಡಿಯಾ ಗೆಲುವಿನಲ್ಲಿ ರೇಣುಕಾ ಸಿಂಗ್, ದೀಪ್ತಿ ಶರ್ಮಾ ಮತ್ತು ಶೆಫಾಲಿ ವರ್ಮಾ ಪ್ರಮುಖ ಪಾತ್ರವಹಿಸಿದರು. ಈ ಮೂವರ ಅದ್ಭುತ ಪ್ರದರ್ಶನದಿಂದಾಗಿ ಹರ್ಮನ್ ಪಡೆ ಸರಣಿಯಲ್ಲಿ 3-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಕೇವಲ 112 ರನ್ ಕಲೆಹಾಕಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 14 ನೇ ಓವರ್ನಲ್ಲಿ ಜಯದ ನಗೆ ಬೀರಿತು. ತಂಡದ ಪರ ಶೆಫಾಲಿ ವರ್ಮಾ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು.