Headlines

Indian Breakfast in Tokyo: ಭಾರತಕ್ಕೆ ಬಂದು ದೋಸೆ ರುಚಿಗೆ ಫಿದಾ; ಟೋಕಿಯೊದಲ್ಲಿ ಇಡ್ಲಿ-ದೋಸೆ ಹೋಟೆಲ್ ಆರಂಭಿಸಿದ ಜಪಾನಿ ದಂಪತಿ – Kannada News

ಇಡ್ಲಿ-ದೋಸೆ ಹೋಟೆಲ್ ಆರಂಭಿಸಿದ ಜಪಾನಿ ದಂಪತಿImage Credit source: instagram/sonammidhax

ಭಾರತೀಯ ಆಹಾರದ ಖ್ಯಾತಿ ವಿಶ್ವದಾದ್ಯಂತ ಹರಡುತ್ತಿದೆ. ಅದರಲ್ಲೂ ದಕ್ಷಿಣ ಭಾರತದ ತಿಂಡಿಗಳಿಗೆ ವಿದೇಶಗಳಲ್ಲಿ ವಿಶೇಷ ಬೇಡಿಕೆ ಹೆಚ್ಚುತ್ತಿದೆ. ಇದೀಗ ಜಪಾನ್‌ನ ಟೋಕಿಯೊ ನಗರದಲ್ಲಿರುವ ಒಂದು ವಿಶಿಷ್ಟ ಉಪಹಾರ ಮಂದಿರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಪ್ರವಾಸಿ ವ್ಲಾಗರ್ ಸೋನಂ ಮಿಧಾ ಅವರು ಟೋಕಿಯೊದಲ್ಲಿರುವ “Kerala no Kaze no Morning” ಎಂಬ ಕೇರಳ ಶೈಲಿಯ ಉಪಹಾರ ಮಂದಿರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಕಂಡ ಕಥೆ ಅನೇಕರ ಮನ ಗೆದ್ದಿದೆ.

40 ವರ್ಷಗಳ ಹಿಂದಿನ ಭಾರತದ ನೆನಪು:

ಈ ರೆಸ್ಟೋರೆಂಟ್‌ನ್ನು ನಡೆಸುತ್ತಿರುವುದು ನಿವೃತ್ತ ಜಪಾನಿ ದಂಪತಿ. ವಿಶೇಷವೆಂದರೆ, ಸುಮಾರು ನಾಲ್ಕು ದಶಕಗಳ ಹಿಂದೆ ಈ ದಂಪತಿ ಕೇರಳದಲ್ಲಿ ಎರಡು ವರ್ಷಗಳ ಕಾಲ ವಾಸಿಸಿದ್ದರು. ಆ ಅವಧಿಯಲ್ಲಿ ಭಾರತೀಯ, ವಿಶೇಷವಾಗಿ ಕೇರಳದ ಆಹಾರದ ರುಚಿಗೆ ಅವರು ಮನಸೋತಿದ್ದರು. ನಿವೃತ್ತಿಯ ನಂತರ ತಮ್ಮ ಆ ಪ್ರೀತಿಯನ್ನು ಜಪಾನ್‌ನ ಜನರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಈ ಉಪಹಾರ ಮಂದಿರವನ್ನು ಆರಂಭಿಸಿದ್ದಾರೆ.

ದೋಸೆ, ಇಡ್ಲಿ, ವಡೆ ಸೇರಿದಂತೆ ಹಲವು ಖಾದ್ಯಗಳು:

ಈ ರೆಸ್ಟೋರೆಂಟ್‌ನಲ್ಲಿ ದೋಸೆ, ಇಡ್ಲಿ, ವಡೆ, ಉತ್ತಪ್ಪ, ಉಪ್ಪಿಟ್ಟು ಹಾಗೂ ಚಹಾ ಸೇರಿದಂತೆ ದಕ್ಷಿಣ ಭಾರತದ ಜನಪ್ರಿಯ ಉಪಹಾರಗಳನ್ನು ತಯಾರಿಸಿ ಗ್ರಾಹಕರಿಗೆ ನೀಡಲಾಗುತ್ತಿದೆ. ಕೇರಳದ ಸಾಂಪ್ರದಾಯಿಕ ರುಚಿಯನ್ನು ಸಾಧ್ಯವಾದಷ್ಟು ಉಳಿಸಿಕೊಳ್ಳಲು ದಂಪತಿ ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ಕಾರ್ಪೊರೇಟ್ ಕೆಲಸಕ್ಕೆ ಬೇಸತ್ತು ಕುರಿ ಕಾಯುವ ಕೆಲಸಕ್ಕೆ ಮುಗಿಬಿದ್ದ ಯುವಕರು! ಒಂದು ಜಾಹೀರಾತು, 700ಕ್ಕೂ ಹೆಚ್ಚು ಅರ್ಜಿ!

“ನಾನು ಪ್ರತಿದಿನ ಈ ಆಹಾರ ತಿನ್ನಲು ರೆಸ್ಟೋರೆಂಟ್ ತೆರೆದಿದ್ದೇನೆ”

ರೆಸ್ಟೋರೆಂಟ್ ಆರಂಭಿಸಿದ ಕಾರಣವನ್ನು ವಿವರಿಸಿದ ಮಾಲೀಕರು, “ನಾನು ಪ್ರತಿದಿನ ಈ ಆಹಾರವನ್ನು ಸವಿಯಲು ಸಾಧ್ಯವಾಗಲಿ ಎಂಬ ಕಾರಣಕ್ಕೆ ಈ ರೆಸ್ಟೋರೆಂಟ್ ಆರಂಭಿಸಿದೆ. ಜೊತೆಗೆ ಜಪಾನ್‌ನ ಜನರಿಗೆ ಈ ವಿಶೇಷ ಆಹಾರ ಸಂಸ್ಕೃತಿಯನ್ನು ಪರಿಚಯಿಸಬೇಕೆಂದು ಬಯಸಿದೆ” ಎಂದು ಹೇಳಿದ್ದಾರೆ. ಅವರು ಹಿಂದೆ ಮದ್ಯಾಹ್ನ, ರಾತ್ರಿ ಊಟವನ್ನೂ ನೀಡುತ್ತಿದ್ದರು. ಆದರೆ ವಯಸ್ಸಾದ ಕಾರಣ ಈಗ ಉಪಹಾರಗಳ ಸೇವೆಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ:

ವ್ಲಾಗರ್ ಹಂಚಿಕೊಂಡ ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರು ದಂಪತಿಯ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಕೆಲವರು ಈ ರೆಸ್ಟೋರೆಂಟ್‌ಗೆ ಭೇಟಿ ನೀಡಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಅಲ್ಲಿನ ಆಹಾರದ ರುಚಿ ಹಾಗೂ ದಂಪತಿಯ ಆತಿಥ್ಯವನ್ನು ಮೆಚ್ಚಿಕೊಂಡಿದ್ದಾರೆ. ಈ ಕಥೆ ಮತ್ತೊಮ್ಮೆ ಆಹಾರಕ್ಕೆ ಗಡಿ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ. ನಾಲ್ಕು ದಶಕಗಳ ಹಿಂದೆ ಭಾರತದಲ್ಲಿ ಬೆಳೆದ ಒಂದು ಪ್ರೀತಿ ಇಂದು ಜಪಾನ್‌ನಲ್ಲಿ ಸಾವಿರಾರು ಮಂದಿಗೆ ಭಾರತೀಯ ಆಹಾರದ ಸುವಾಸನೆಯನ್ನು ಪರಿಚಯಿಸುತ್ತಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *