ಪತಿ-ಪತ್ನಿ ಪರಸ್ಪರ ಮೊಬೈಲ್ ಚೆಕ್ ಮಾಡಬಹುದೇ?Image Credit source: Getty Images
ಮದುವೆ ಎಂಬುದು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಪವಿತ್ರ ಬಂಧ ಮಾತ್ರವಲ್ಲ, ಎರಡು ಕುಟುಂಬಗಳ ನಡುವಿನ ಮಹತ್ವದ ಸಂಬಂಧವೂ ಹೌದು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಪ್ರೀತಿ, ವಿಶ್ವಾಸದ ಜೊತೆಗೆ ಕೆಲವೊಮ್ಮೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು, ಅನುಮಾನಗಳು ಸಹಜವಾಗಿ ಮೂಡುತ್ತವೆ. ಇಂತಹ ಸಂದರ್ಭಗಳಲ್ಲಿ ಸಂಗಾತಿಯ ನಡವಳಿಕೆಯ ಮೇಲೆ ಸಂಶಯಗೊಂಡು ಅವರ ಮೊಬೈಲ್ ಫೋನ್ ಪರಿಶೀಲಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ, ಗಂಡ ಹೆಂಡತಿಯ ಮೊಬೈಲ್ ಅಥವಾ ಹೆಂಡತಿ ಗಂಡನ ಮೊಬೈಲ್ ಫೋನ್ ಪರಿಶೀಲಿಸಬಹುದೇ? ಇದು ಅಪರಾಧವೇ? ಇದರ ಬಗ್ಗೆ ಭಾರತದ ಕಾನೂನು ಹೇಳುವುದೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಎಲ್ಲದರ ಮೇಲೂ ಹಕ್ಕಿದೆ ಎಂಬ ತಪ್ಪು ಕಲ್ಪನೆ ಬೇಡ:
ಮದುವೆಯಾದ ನಂತರ ಅನೇಕರು ತಮ್ಮ ಸಂಗಾತಿ ಹೊಂದಿರುವ ಪ್ರತಿಯೊಂದು ವಸ್ತುವಿನ ಮೇಲೂ ತಮಗೆ ಸಂಪೂರ್ಣ ಹಕ್ಕಿದೆ ಎಂದು ಭಾವಿಸುತ್ತಾರೆ. ಅವರು ಬಯಸಿದಾಗಲೆಲ್ಲಾ ತಮ್ಮ ಸಂಗಾತಿಯ ಮೊಬೈಲ್ ಫೋನ್ ತೆಗೆದುಕೊಂಡು ವಾಟ್ಸಾಪ್ ಚಾಟ್‌ಗಳು, ಕರೆ ಇತಿಹಾಸ (Call Logs) ಅಥವಾ ಗ್ಯಾಲರಿಯನ್ನು ಪರಿಶೀಲಿಸಬಹುದು ಎಂದು ಅಂದಕೊಂಡಿರುತ್ತಾರೆ. ಆದರೆ ಕಾನೂನಿನ ಪ್ರಕಾರ ಇದು ತಪ್ಪು. ಮದುವೆಯ ನಂತರವೂ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ವೈಯಕ್ತಿಕ ಸ್ವಾತಂತ್ರ್ಯ ಇರುತ್ತದೆ ಎಂಬುದನ್ನು ಮರೆಯಬಾರದು.
ಸಂವಿಧಾನ ನೀಡಿದ ‘ಗೌಪ್ಯತೆಯ ಹಕ್ಕು’ ಮದುವೆಯ ನಂತರವೂ ಇರುತ್ತದೆ:
ಭಾರತೀಯ ಕಾನೂನಿನ ಪ್ರಕಾರ, ಪತಿ ಅಥವಾ ಪತ್ನಿ ಯಾರೇ ಆಗಿರಲಿ, ಸಂಗಾತಿಯ ಅನುಮತಿಯಿಲ್ಲದೆ ಪರಸ್ಪರರ ಮೊಬೈಲ್ ಫೋನ್ ಪರಿಶೀಲಿಸುವ ಹಕ್ಕನ್ನು ಕಾನೂನುಬದ್ಧವಾಗಿ ಹೊಂದಿಲ್ಲ. ಭಾರತೀಯ ಸಂವಿಧಾನದ ವಿಧಿ 21ರ (Article 21) ಅಡಿಯಲ್ಲಿ ‘ಗೌಪ್ಯತೆಯ ಹಕ್ಕು’ (Right to Privacy) ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ. ಈ ಹಕ್ಕು ಮದುವೆಯ ಬಂಧಕ್ಕೆ ಒಳಗಾದ ನಂತರವೂ ಕೊನೆಗೊಳ್ಳುವುದಿಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಗೂ ಸ್ವತಂತ್ರವಾಗಿ ಅನ್ವಯಿಸುತ್ತದೆ.
ಇದನ್ನೂ ಓದಿ: ವಿಚಿತ್ರ ಮೂಢನಂಬಿಕೆಗಳು! ಜಗತ್ತಿನ ಈ 6 ನಂಬಿಕೆಗಳ ಬಗ್ಗೆ ಕೇಳಿದರೆ ನಿಮಗೂ ಅಚ್ಚರಿ ಆಗುತ್ತೆ
ಒಪ್ಪಿಗೆಯಿಲ್ಲದೆ ಫೋನ್ ಮುಟ್ಟುವುದು ಗೌಪ್ಯತೆಯ ಉಲ್ಲಂಘನೆ:
ನಿಮ್ಮ ಸಂಗಾತಿಯ ಮೊಬೈಲ್ ಫೋನ್ ಅನ್ನುಅವರ ಒಪ್ಪಿಗೆಯಿಲ್ಲದೆ ರಹಸ್ಯವಾಗಿ ಪರಿಶೀಲಿಸುವುದು ಕಾನೂನಿನ ದೃಷ್ಟಿಯಲ್ಲಿ ಅಪರಾಧದ ಚೌಕಟ್ಟಿಗೆ ಬರಬಹುದು. ಸಂಗಾತಿಯ ವಾಟ್ಸಾಪ್ ಸಂದೇಶಗಳು, ಫೋಟೋಗಳು, ಕರೆ ದಾಖಲೆಗಳು ಅಥವಾ ಇಮೇಲ್‌ಗಳನ್ನು ಅವರ ಅನುಮತಿಯಿಲ್ಲದೆ ನೋಡುವುದು ಅವರ ವೈಯಕ್ತಿಕ ಗೌಪ್ಯತೆಯ ಹಕ್ಕನ್ನು ನೇರವಾಗಿ ಉಲ್ಲಂಘಿಸಿದಂತಾಗುತ್ತದೆ.
ಪಾಸ್‌ವರ್ಡ್ ಕೇಳಿ ಒತ್ತಾಯಿಸುವುದು ಕಾನೂನುಬಾಹಿರ:
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯು ಹೆಚ್ಚಾಗಿದ್ದು, ಸಂಗಾತಿಯ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಅಥವಾ ಇಮೇಲ್ ಖಾತೆಗಳನ್ನು ಪರಿಶೀಲಿಸಲು ಬಯಸುವುದು ಸಾಮಾನ್ಯವಾಗಿದೆ. ಆದರೆ, ನಿಮ್ಮ ಅನುಮತಿಯಿಲ್ಲದೆ ನಿಮ್ಮ ಸಂಗಾತಿ ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಲು ಸಾಧ್ಯವಿಲ್ಲ. ಸಾಮಾಜಿಕ ಮಾಧ್ಯಮ ಖಾತೆಯ ಪಾಸ್‌ವರ್ಡ್ ಹಂಚಿಕೊಳ್ಳುವಂತೆ ಸಂಗಾತಿಯನ್ನು ಪೀಡಿಸುವುದು ಅಥವಾ ಒತ್ತಾಯಿಸುವುದು ಕಾನೂನುಬಾಹಿರ ನಡೆ ಎನಿಸಿಕೊಳ್ಳುತ್ತದೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 3:55 pm, Fri, 17 July 26