2026 ರ ಐಪಿಎಲ್ನಲ್ಲಿ (IPL 2026) ಆಟಗಾರರ ಗಾಯದಿಂದ ಹೆಚ್ಚು ತೊಂದರಿಗೀಡಾಗಾದ ತಂಡವೆಂದರೆ ಅದು ಆರ್ಸಿಬಿ (RCB) ಎಂಬ ಮಾತಿತ್ತು. ಏಕೆಂದರೆ ಟೂರ್ನಿ ಆರಂಭಕ್ಕೂ ಮುನ್ನವೇ ಗಾಯಗೊಂಡಿದ್ದ ಜೋಶ್ ಹೇಜಲ್ವುಡ್ ಇಂಜುರಿಯಿಂದ ಚೇತರಿಸಿಕೊಂಡು ತಂಡವನ್ನು ಸೇರಿಕೊಂಡಿದ್ದರು. ಅಂದಿನಿಂದ ತಂಡದಲ್ಲಿ ಯಾವುದೇ ಸಮಸ್ಯೆಗಳಿರಲಿಲ್ಲ. ಆದರೀಗ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್ ಓಪನರ್ ಫಿಲ್ ಸಾಲ್ಟ್ (Phil Salt ) ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿ ಅವರು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಆಡಲಿರಲಿಲ್ಲ. ಆದರೆ ಅವರು ಡೆಲ್ಲಿ ವಿರುದ್ಧದ ಪಂದ್ಯದ ವೇಳೆಗೆ ಚೇತರಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೀಗ ಅದು ಸುಳ್ಳಾಗಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಫಿಲ್ ಸಾಲ್ಟ್ ಆಡುವುದಿಲ್ಲ ಎಂದು ವರದಿಯಾಗಿದೆ.
ಸತತ 2ನೇ ಪಂದ್ಯಕ್ಕೆ ಸಾಲ್ಟ್ ಅಲಭ್ಯ
ಆರ್ಸಿಬಿ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 27, ಸೋಮವಾರ ರಾಜಧಾನಿ ನವದೆಹಲಿಯಲ್ಲಿ ಆಡಲಿದೆ. ಈ ಪಂದ್ಯದಲ್ಲಿ, ರಜತ್ ಪಾಟಿದಾರ್ ನಾಯಕತ್ವದ ಬೆಂಗಳೂರು, ಆತಿಥೇಯ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಬೆಂಗಳೂರು ತಂಡ ಈ ಪಂದ್ಯಕ್ಕಾಗಿ ದೆಹಲಿಗೆ ಆಗಮಿಸಿದೆ. ಆದರೆ ಮೈದಾನಕ್ಕಿಳಿಯುವ ಮುನ್ನವೇ ತಂಡಕ್ಕೆ ಆಘಾತ ಎದುರಾಗಿದ್ದು, ಈ ಪಂದ್ಯದಲ್ಲಿ ಸಾಲ್ಟ್ ಆಡದಿರುವುದು ಖಚಿತವಾಗಿದೆ. ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಇದನ್ನು ದೃಢಪಡಿಸಿದ್ದಾರೆ.
ಆರ್ಸಿಬಿ ತಂಡದ ಸ್ಫೋಟಕ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅವರ ಪ್ರದರ್ಶನ ಈ ಆವೃತ್ತಿಯಲ್ಲಿ ಏರಿಳಿತಗಳಿಂದ ಕೂಡಿದೆ. ಆಡಿರುವ ಆರು ಇನ್ನಿಂಗ್ಸ್ಗಳಲ್ಲಿ ಮೊದಲ ಮೂರು ಇನ್ನಿಂಗ್ಸ್ಗಳಲ್ಲಿ ವಿಫಲರಾಗಿದ್ದ ಸಾಲ್ಟ್, ಎರಡು ಪಂದ್ಯಗಳಲ್ಲಿ ಅರ್ಧಶತಕಗಳ ಇನ್ನಿಂಗ್ಸ್ ಆಡಿದ್ದಾರೆ. ಉಳಿದಂತೆ ಒಂದು ಪಂದ್ಯದಲ್ಲಿ 40 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಒಟ್ಟಾರೆಯಾಗಿ, ಅವರು ಆರು ಇನ್ನಿಂಗ್ಸ್ಗಳಲ್ಲಿ 168 ರ ಸ್ಟ್ರೈಕ್ ರೇಟ್ನಲ್ಲಿ 202 ರನ್ಗಳಿಸಿದ್ದಾರೆ. ಇದರಲ್ಲಿ 16 ಬೌಂಡರಿಗಳು ಮತ್ತು 11 ಸಿಕ್ಸರ್ಗಳು ಸೇರಿವೆ.
IPL 2026: ತವರಿನ ಹೊರಗೆ ಸೇಡಿನ ಸಮರಕ್ಕೆ ಸಜ್ಜಾದ ಆರ್ಸಿಬಿ; ಎದುರಾಳಿ ಯಾರು?
ಯಾರಿಗೆ ಅವಕಾಶ?
ಫಿಲ್ ಸಾಲ್ಟ್ ಅಲಭ್ಯತೆ ಆರ್ಸಿಬಿಗೆ ದೊಡ್ಡ ಹಿನ್ನಡೆಯಾಗಿದ್ದರೂ, ವಿರಾಟ್ ಕೊಹ್ಲಿ ತಂಡದಲ್ಲಿರುವುದು ತಂಡವನ್ನು ಕೊಂಚ ನಿರಾಳವಾಗಿಸಿದೆ. ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ಜಾಕೋಬ್ ಬೆಥೆಲ್,ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸುವುದು ಖಚಿತ. ಕಳೆದ ಪಂದ್ಯದಲ್ಲಿ ಅವರು ವಿಫಲರಾಗಿದ್ದರೂ, ಬೆಥೆಲ್ಗೆ ಈ ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ