ಹಾಲಿ ಚಾಂಪಿಯನ್ ಆರ್‌ಸಿಬಿ (RCB) 2026 ರ ಐಪಿಎಲ್ನಲ್ಲೂ (IPL 2026) ತನ್ನ ಅಮೋಘ ಪ್ರದರ್ಶನವನ್ನು ಮುಂದುವರೆಸಿದೆ. ತಂಡದ ಈ ಗೆಲುವಿನ ಓಟಕ್ಕೆ ಸಾಂಘಿಕ ಪ್ರದರ್ಶನವೇ ಪ್ರಮುಖ ಕಾರಣವಾಗಿದೆ. ಅದರಲ್ಲೂ ಭಾರತದ ಯುವ ವೇಗಿ ರಸಿಕ್ ಸಲಾಂ ದಾರ್ (Rasikh Salam Dar) ಬೌಲಿಂಗ್ ವಿಭಾಗವನ್ನು ಕೂಡಿಕೊಂಡ ಬಳಿಕ ತಂಡ ಮತ್ತಷ್ಟು ಸಮತೋಲಿತವಾಗಿ ಕಾಣಿಸಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಈ ವೇಗದ ಬೌಲರ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿ, 4 ಓವರ್‌ಗಳಲ್ಲಿ ಕೇವಲ 24 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಬಳಿಸಿದರು. ರಸಿಕ್ ಸಲಾಂ ಐಡೆನ್ ಮಾರ್ಕ್ರಾಮ್, ಆಯುಷ್ ಬಡೋನಿ, ಮುಕುಲ್ ಚೌಧರಿ ಮತ್ತು ಆವೇಶ್ ಖಾನ್ ಅವರ ವಿಕೆಟ್‌ಗಳನ್ನು ಕಬಳಿಸಿದರು.
ರಸಿಕ್ ಸಲಾಂ ದಾರ್ ಅವರ ಈ ವಿಧ್ವಂಸಕ ಬೌಲಿಂಗ್ನಿಂದಾಗಿ ಲಕ್ನೋ ಸೂಪರ್ ಜೈಂಟ್ಸ್ ಕೇವಲ 146 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ಯಾವುದೇ ಸಮಸ್ಯೆಗಳಿಲ್ಲದೆ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದಿತು. ರಸಿಕ್ ಸಲಾಂ ಅವರ ಅತ್ಯುತ್ತಮ ಪ್ರದರ್ಶನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಬಿಸಿಸಿಐ ಅವರನ್ನು ಎರಡು ವರ್ಷಗಳ ಕಾಲ ಕ್ರಿಕೆಟ್ನಿಂದ ನಿಷೇಧಿಸಿತ್ತು ಎಂಬುದು ನಿಮಗೆ ತಿಳಿದಿದೆಯೇ?. ಅಷ್ಟಕ್ಕೂ ರಸಿಕ್ ವಿರುದ್ಧ ಏಕೆ ಅಂತಹ ಕಠಿಣ ಕ್ರಮ ಕೈಗೊಳ್ಳಲಾಯಿತು ಎಂಬುದನ್ನು ನೋಡುವುದಾದರೆ..
ರಸಿಕ್‌ಗೆ 2 ವರ್ಷ ನಿಷೇಧ
2019 ರಲ್ಲಿ ರಸಿಕ್ ಸಲಾಂ ಅವರನ್ನು ಬಿಸಿಸಿಐ ಎರಡು ವರ್ಷಗಳ ಕಾಲ ಕ್ರಿಕೆಟ್ನಿಂದ ನಿಷೇಧಿಸಿತು. ವಾಸ್ತವವಾಗಿ ರಸಿಕ್ ವಯಸ್ಸಿನ ವಂಚನೆಯಲ್ಲಿ ತಪ್ಪಿತಸ್ಥರೆಂದು ಸಾಭೀತಾಗಿತ್ತು. ಹೀಗಾಗಿ ಅವರಿಗೆ ಈ ಶಿಕ್ಷೆ ವಿಧಿಸಲಾಗಿತ್ತು. ರಸಿಕ್ ಭಾರತೀಯ ಅಂಡರ್ -19 ತಂಡಕ್ಕೆ ಆಯ್ಕೆಯಾಗಲು ಬಿಸಿಸಿಐಗೆ ನಕಲಿ ಜನನ ಪ್ರಮಾಣಪತ್ರವನ್ನು ಸಲ್ಲಿಸಿದ್ದರು. ಇದನ್ನು ಗಮನಿಸಿದ್ದ ಜಮ್ಮು ಮತ್ತು ಕಾಶ್ಮೀರ ರಾಜ್ಯ ಶಾಲಾ ಶಿಕ್ಷಣ ಮಂಡಳಿಯು ರಸಿಕ್ ತನ್ನ ವಯಸ್ಸನ್ನು ತಪ್ಪಾಗಿ ನಮೂದಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್‌ಗೆ ಮಾಹಿತಿ ನೀಡಿತ್ತು. ಪರಿಣಾಮವಾಗಿ, ಬಿಸಿಸಿಐ ಅವರನ್ನು ಭಾರತ U-19 ತಂಡದಿಂದ ತೆಗೆದುಹಾಕಿದಲ್ಲದೆ ಎರಡು ವರ್ಷಗಳ ನಿಷೇಧವನ್ನು ವಿಧಿಸಿತ್ತು.
ರಸಿಕ್‌ಗೆ ಅವಕಾಶ ನೀಡಿದ್ದ ಮುಂಬೈ
ರಸಿಕ್ ಅವರನ್ನು ಕ್ರಿಕೆಟ್ನಿಂದ ನಿಷೇಧಿಸುವ ವೇಳೆಗೆ ಅವರು ಅದಾಗಲೇ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಮುಂಬೈ ಇಂಡಿಯನ್ಸ್ ಅವರಿಗೆ ಅವಕಾಶ ನೀಡಿತ್ತು. ಎರಡು ವರ್ಷಗಳ ನಿಷೇಧದ ನಂತರ ದೇಶೀಯ ಕ್ರಿಕೆಟ್‌ಗೆ ಮರಳಿದ ರಸಿಕ್‌ಗೆ ಕೆಕೆಆರ್ ಮತ್ತು ದೆಹಲಿ ಕ್ಯಾಪಿಟಲ್ಸ್ ತಂಡಗಳು ಐಪಿಎಲ್‌ನಲ್ಲಿ ಅವಕಾಶ ನೀಡಿದವು. ಈಗ ಅವರು ಆರ್‌ಸಿಬಿ ತಂಡದ ಭಾಗವಾಗಿದ್ದು, ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ.
RCB vs LSG: ತವರಿನಲ್ಲಿ ಲಕ್ನೋ ವಿರುದ್ಧ ಆರ್ಸಿಬಿಗೆ ಮೊಟ್ಟ ಮೊದಲ ಜಯ
ರಸಿಕ್ ಸಲಾಂ ಅವರ ವೃತ್ತಿಜೀವನ
ರಸಿಕ್ ಸಲಾಂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 19 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲೂ 19 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅವರು 55 ವಿಕೆಟ್‌ಗಳನ್ನು ಉರುಳಿಸಿದ್ದು ಐಪಿಎಲ್‌ನಲ್ಲಿ 15 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಲಕ್ನೋ ವಿರುದ್ಧ ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ