ಐಪಿಎಲ್ 2026 ರ 45ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕೆಕೆಆರ್ ಪರ ಕನ್ನಡಿಗ ಮನೀಷ್ ಪಾಂಡೆಗೆ ಪ್ಲೇಯಿಂಗ್ 11ನಲ್ಲಿ ಆಡುವ ಅವಕಾಶ ಸಿಕ್ಕಿತು. ಈ ಆವೃತ್ತಿಯಲ್ಲಿ ಮನೀಷ್ಗೆ ಆಡುವ ಅವಕಾಶ ಸಿಕ್ಕಿದ್ದು ಇದೇ ಮೊದಲು. ಈ ಮೂಲಕ ಮನೀಷ್ ಐಪಿಎಲ್ನಲ್ಲಿ ವಿಶೇಷ ದಾಖಲೆಯನ್ನು ಸೃಷ್ಟಿಸಿದರು.
ವಾಸ್ತವವಾಗಿ ಐಪಿಎಲ್ 19 ವರ್ಷಗಳನ್ನು ಪೂರೈಸಿದೆ. ಈ 19 ಸೀಸನ್ಗಳನ್ನು ಆಡಿದ್ದವರಲ್ಲಿ ಕೇವಲ 3 ರಿಂದ 4 ಆಟಗಾರರ ಹೆಸರಿದೆ. ಇದರಲ್ಲಿ ವಿರಾಟ್ ಕೊಹ್ಲಿ, ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ದೊಡ್ಡ ಹೆಸರುಗಳು. ಆದರೆ ಇವರನ್ನು ಹೊರತುಪಡಿಸಿ, ಮನೀಷ್ ಪಾಂಡೆ ಕೂಡ ಲೀಗ್ನ ಮೊದಲ ಸೀಸನ್ನಿಂದ ಆಡುತ್ತಿರುವ ಆಟಗಾರ.
ಇದೀಗ ಮನೀಷ್ ಪಾಂಡೆ ಐಪಿಎಲ್ನಲ್ಲಿ ಧೋನಿಗೂ ಸಹ ಸಾಧಿಸಲು ಸಾಧ್ಯವಾಗದ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ವಿರಾಟ್ ಮತ್ತು ರೋಹಿತ್ ನಂತರ ಈ ಸಾಧನೆ ಮಾಡಿದ ಮೂರನೇ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.
ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಮೂಲಕ ಮನೀಷ್ 19 ಐಪಿಎಲ್ ಸೀಸನ್ಗಳಲ್ಲಿ ಕನಿಷ್ಠ ಒಂದು ಪಂದ್ಯವನ್ನಾದರೂ ಆಡಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಹಿಂದಿನ 18 ಸೀಸನ್ಗಳಲ್ಲಿ ಮನೀಷ್ ವಿವಿಧ ತಂಡಗಳಿಗಳ ಪರ ಒಂದು ಅಥವಾ ಹೆಚ್ಚಿನ ಪಂದ್ಯಗಳನ್ನು ಆಡಿದ್ದರು. ಇದೀಗ ಈ ಸೀಸನ್ನಲ್ಲಿಯೂ ಮನೀಷ್ಗೆ ಆಡುವ ಅವಕಾಶ ಸಿಕ್ಕಿದೆ.
ಇದರೊಂದಿಗೆ ಪಾಂಡೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಿದರು. ಈ ಇಬ್ಬರೂ ಅನುಭವಿಗಳು ಪ್ರತಿ ಐಪಿಎಲ್ ಆವೃತ್ತಿಯಲ್ಲಿ ಕನಿಷ್ಠ ಒಂದು ಪಂದ್ಯವನ್ನಾದರೂ ಆಡಿದ್ದಾರೆ. ಆಶ್ಚರ್ಯಕರವೆಂದರೆ, ಮನೀಶ್ ಪಾಂಡೆ ಈ ವಿಷಯದಲ್ಲಿ ಧೋನಿಯನ್ನು ಮೀರಿಸಿದ್ದಾರೆ. ಗಾಯದಿಂದಾಗಿ ಧೋನಿ ಈ ಆವೃತ್ತಿಯಲ್ಲಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಅದಕ್ಕಾಗಿಯೇ ಧೋನಿಯನ್ನು ಪ್ರಸ್ತುತ ಈ ಪಟ್ಟಿಯಿಂದ ಹೊರಗಿಡಲಾಗಿದೆ.
ಮನೀಶ್ ಪಾಂಡೆ ಅವರ ಐಪಿಎಲ್ ವೃತ್ತಿಜೀವನವು ಸಾಕಷ್ಟು ಏರಿಳಿತಗಳಿಂದ ಕೂಡಿದೆ. ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಏಳು ತಂಡಗಳ ಭಾಗವಾಗಿರುವ ಮನೀಷ್ 175 ಪಂದ್ಯಗಳನ್ನು ಆಡಿದ್ದು, 3,942 ರನ್ ಗಳಿಸಿದ್ದಾರೆ. ಇದರಲ್ಲಿ 22 ಅರ್ಧಶತಕಗಳು ಮತ್ತು ಒಂದು ಶತಕವೂ ಸೇರಿದೆ. 2009 ರ ಐಪಿಎಲ್ನಲ್ಲಿ ಶತಕ ಬಾರಿಸುವ ಮೂಲಕ ಮನೀಷ್, ಐಪಿಎಲ್ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ನಿರ್ಮಿಸಿದ್ದರು.





