IPL 2026: ಟಿಕೆಟ್ ಖರೀದಿ ಬಗ್ಗೆ ಮಾಹಿತಿ ನೀಡಿದ ಆರ್​ಸಿಬಿ; ಸ್ಟೇಡಿಯಂ ಎಂಟ್ರಿ, ಪಾರ್ಕಿಂಗ್ ವಿವರವೂ ಇಲ್ಲಿದೆ

IPL 2026: ಟಿಕೆಟ್ ಖರೀದಿ ಬಗ್ಗೆ ಮಾಹಿತಿ ನೀಡಿದ ಆರ್​ಸಿಬಿ; ಸ್ಟೇಡಿಯಂ ಎಂಟ್ರಿ, ಪಾರ್ಕಿಂಗ್ ವಿವರವೂ ಇಲ್ಲಿದೆ

2026 ರ ಐಪಿಎಲ್ (IPL 2026) ಮಾರ್ಚ್​ 28 ರಿಂದ ಆರಂಭವಾಗುತ್ತಿದೆ. ಟೂರ್ನಿಯ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಆರ್​ಸಿಬಿ, ಸನ್‌ರೈಸರ್ಸ್ ಹೈದರಾಬಾದ್ (RCB vs SRH) ತಂಡವನ್ನು ಎದುರಿಸಲಿದೆ. ಇದರ ಜೊತೆಗೆ ಉಭಯ ತಂಡಗಳ ನಡುವಿನ ಈ ಉದ್ಘಾಟನಾ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂದರೆ ಆರ್​ಸಿಬಿ ತನ್ನ ಮೊದಲ ಪಂದ್ಯವನ್ನು ತನ್ನ ತವರು ಮೈದಾನದಲ್ಲಿ ಆಡುತ್ತಿದೆ. ಹೀಗಾಗಿ ಅಭಿಮಾನಿಗಳು ಕೂಡ ತನ್ನ ನೆಚ್ಚಿನ ತಂಡ ಮೊದಲ ಪಂದ್ಯವನ್ನು ತವರಿನಲ್ಲಿ ಆಡುವುದನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಆರ್​ಸಿಬಿ ಫ್ರಾಂಚೈಸಿ ಕೂಡ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.

ಅದೆನೆಂದರೆ ಉದ್ಘಾಟನಾ ಪಂದ್ಯ ಆರಂಭಕ್ಕೆ 8 ದಿನ ಬಾಕಿ ಇರುವಾಗ ಮೊದಲ ಪಂದ್ಯದ ಟಿಕೆಟ್ ಖರೀದಿಯ ಬಗ್ಗೆ ಆರ್​ಸಿಬಿ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಇದರ ಜೊತೆಗೆ ಪಂದ್ಯವನ್ನು ವೀಕ್ಷಿಸಲು ಬರುವ ಅಭಿಮಾನಿಗಳು ತಮ್ಮ ತಮ್ಮ ವಾಹನಗಳನ್ನು ಎಲ್ಲಿ ಪಾರ್ಕ್​ ಮಾಡಬೇಕು? ಯಾವ ಯಾವ ಮಾರ್ಗದಿಂದ ಕ್ರೀಡಾಂಗಣಕ್ಕೆ ಎಂಟ್ರಿಕೊಡಬಹುದು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ. ಅಭಿಮಾನಿಗಳಿಗೆ ಯಾವುದೇ ಗೊಂದಲವುಂಟಾಗಬಾರದು ಮತ್ತು ಕಳೆದ ವರ್ಷ ನಡೆದ ಅಹಿತಕರ ಘಟನೆ ಮತ್ತೆ ಮರುಕಳಿಸದಂತೆ ತಡೆಯಲು ಆರ್​ಸಿಬಿ ಫ್ರಾಂಚೈಸಿ ಈ ಬಾರಿ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದೆ.

ಫ್ಯಾನ್ಸ್​ಗೆ ಮಾಹಿತಿ ನೀಡಿದ ಆರ್​ಸಿಬಿ

ಮೊದಲ ಪಂದ್ಯದ ಟಿಕೆಟ್ ಖರೀದಿ ಬಗ್ಗೆ ಆರ್​ಸಿಬಿ ಅಭಿಮಾನಿಗಳಿಗೆ ವಿವರವಾದ ಸಲಹೆಯನ್ನು ನೀಡಿದೆ. ಆದಾಗ್ಯೂ ಪಂದ್ಯದ ಟಿಕೆಟ್ ಮಾರಾಟ ಇನ್ನೂ ಆರಂಭವಾಗಿಲ್ಲ. ಟಿಕೆಟ್ ಮಾರಾಟ ಆರಂಭವಾಗುವ ದಿನಾಂಕವನ್ನು ಇಷ್ಟರಲ್ಲೇ ಪ್ರಕಟಿಸುವ ಬಗ್ಗೆ ಮಾಹಿತಿ ನೀಡಿರುವ ಆರ್​ಸಿಬಿ, ಪಂದ್ಯದ ಟಿಕೆಟ್‌ಗಳನ್ನು ಫ್ರಾಂಚೈಸಿಯ ಅಧಿಕೃತ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಸುವಂತೆ ಅಭಿಮಾನಿಗಳಿಗೆ ಸೂಚನೆ ನೀಡಿದೆ. ಅಲ್ಲದೆ ಇತರೆ ಮೂಲಗಳಿಂದ ಟಿಕೆಟ್ ಖರೀದಿಸಲು ಪ್ರಯತ್ನಿಸಿ ಮೋಸ ಹೋಗದಂತೆಯೂ ಎಚ್ಚರಿಕೆ ನೀಡಿದೆ. ಟಿಕೆಟ್ ಮಾರಾಟ ಪ್ರಾರಂಭವಾದ ನಂತರ ಟಿಕೆಟ್‌ಗಳನ್ನು ಅಧಿಕೃತ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾತ್ರ ಖರೀದಿಸಬೇಕು ಎಂದು ಆರ್​ಸಿಬಿ ಒತ್ತಿ ಹೇಳಿದೆ.

ಪಾರ್ಕಿಂಗ್, ಎಂಟ್ರಿ ಬಗ್ಗೆಯೂ ಇಲ್ಲಿದೆ ಮಾಹಿತಿ

ಅಭಿಮಾನಿಗಳು ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ, ಪಂದ್ಯದ ಟಿಕೆಟ್ ಖರೀದಿಸಿದವರಿಗೆ ಪಂದ್ಯದ ದಿನಗಳಲ್ಲಿ ಮೆಟ್ರೋ ಪ್ರಯಾಣ ಉಚಿತವಾಗಿರಲಿದೆ. ಹಾಗಯೇ ಅಭಿಮಾನಿಗಳು ಟಿಕೆಟ್‌ಗಳನ್ನು ಖರೀದಿಸುವಾಗಲೇ ಸೀಮಿತ ಪಾರ್ಕಿಂಗ್ ಸ್ಥಳಗಳನ್ನು ಮುಂಗಡವಾಗಿ ಬುಕ್ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ, ಜೊತೆಗೆ ಕ್ರೀಡಾಂಗಣದ ಬಳಿ ಪಿಕ್-ಅಪ್ ಮತ್ತು ಡ್ರಾಪ್‌ಗಾಗಿ ಶಟಲ್ ಸೇವೆಗಳನ್ನು ಸಹ ಪಡೆಯಬಹುದಾಗಿದೆ. ಇದರ ಜೊತೆಗೆ ಟಿಕೆಟ್ ಹೊಂದಿರುವ ಪ್ರೇಕ್ಷಕರು ಕ್ರೀಡಾಂಗಣದೊಳಕ್ಕೆ ಕಬ್ಬನ್ ರಸ್ತೆ ಮತ್ತು ಲಿಂಕ್ ರಸ್ತೆ ಮೂಲಕ ಮಾತ್ರ ಪ್ರವೇಶಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಜನಸಂದಣಿ ನಿರ್ವಹಣೆಗಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಫ್ರಾಂಚೈಸಿ ತಿಳಿಸಿದೆ.

ಟಿಕೆಟ್‌ಗಳನ್ನು ಯಾವಾಗ ಮತ್ತು ಎಲ್ಲಿ ಖರೀದಿಸಬೇಕು?

ಆರ್‌ಸಿಬಿ, ಪೂರ್ವ-ಬುಕಿಂಗ್ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದ್ದರೂ, ಟಿಕೆಟ್ ಮಾರಾಟ ಆರಂಭವಾಗುವ ದಿನಾಂಕಗಳನ್ನು ಇನ್ನೂ ದೃಢೀಕರಿಸಿಲ್ಲ. ಆದಾಗ್ಯೂ ಅಭಿಮಾನಿಗಳು ಫ್ರಾಂಚೈಸ್ ಮತ್ತು ಬಿಸಿಸಿಐನ ಅಧಿಕೃತ ವೆಬ್‌ಸೈಟ್‌ಗಳನ್ನು ಆಗಾಗ್ಗೆ ಪರಿಶೀಲಿಸುವ ಮೂಲಕ ಮಾಹಿತಿ ಪಡೆದುಕೊಳ್ಳಲು ತಿಳಿಸಿದೆ. ಟಿಕೆಟ್ ಮಾರಾಟ ಆರಂಭವಾದ ಬಳಿಕ ತಂಡದ ಅಧಿಕೃತ ವೆಬ್‌ಸೈಟ್, ಬುಕ್‌ಮೈಶೋ, ಜೊಮಾಟೊದ ಡಿಸ್ಟ್ರಿಕ್ಟ್ ಅಪ್ಲಿಕೇಶನ್ ಸೇರಿದಂತೆ ಬಹು ಅಧಿಕೃತ ಪ್ಲಾಟ್‌ಫಾರ್ಮ್‌ಗಳ ಮೂಲಕ ಟಿಕೆಟ್‌ಗಳನ್ನು ಖರೀದಿಸಬಹುದು. ಈ ಪ್ಲಾಟ್‌ಫಾರ್ಮ್‌ಗಳು ಅಭಿಮಾನಿಗಳಿಗೆ ಆನ್‌ಲೈನ್ ಮತ್ತು ಆಫ್‌ಲೈನ್ ಬುಕಿಂಗ್ ಆಯ್ಕೆಗಳನ್ನು ನೀಡುತ್ತವೆ.

IPL: ಐಪಿಎಲ್ ಇತಿಹಾಸದಲ್ಲಿ ಪರ್ಪಲ್ ಕ್ಯಾಪ್ ಗೆಲ್ಲದ ಐವರು ಲೆಜೆಂಡರಿ ಬೌಲರ್​ಗಳಿವರು

ಟಿಕೆಟ್‌ಗಳನ್ನು ಆನ್‌ಲೈನ್, ಆಫ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ?

ಆನ್‌ಲೈನ್ ಬುಕಿಂಗ್‌ಗಳಿಗಾಗಿ, ಅಭಿಮಾನಿಗಳು ಬುಕ್‌ಮೈಶೋ, ಅಥವಾ ಆರ್‌ಸಿಬಿಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ತಾವು ವೀಕ್ಷಿಸಬೇಕೆಂದಿರುವ ಪಂದ್ಯವನ್ನು ಆಯ್ಕೆ ಮಾಡಬೇಕು. ಆ ನಂತರ ಆಸನ ವಿಭಾಗಗಳನ್ನು ಆಯ್ಕೆ ಮಾಡಿ ಯುಪಿಐ, ಕಾರ್ಡ್‌ಗಳು ಅಥವಾ ನೆಟ್ ಬ್ಯಾಂಕಿಂಗ್‌ನಂತಹ ಡಿಜಿಟಲ್ ಆಯ್ಕೆಗಳನ್ನು ಬಳಸಿಕೊಂಡು ಹಣವನ್ನು ಪಾವತಿ ಮಾಡಬೇಕು. ನಂತರ ಟಿಕೆಟ್‌ಗಳು ಇಮೇಲ್ ಅಥವಾ SMS ಮೂಲಕ ಪ್ರೇಕ್ಷಕನಿಗೆ ಲಭ್ಯವಾಗುತ್ತವೆ.

ಇನ್ನು ಆಫ್​ಲೈನ್​ನಲ್ಲಿ ಟಿಕೆಟ್ ಖರೀದಿಸಲು ಬಯುಸವವರು ಅಧಿಕೃತ ಕ್ರೀಡಾಂಗಣದ ಕೌಂಟರ್‌ಗಳಲ್ಲಿ ಖರೀದಿಸಬಹುದಾಗಿದೆ. ಅಲ್ಲಿ ಅಭಿಮಾನಿಗಳು ಆಸನಗಳನ್ನು ಆಯ್ಕೆ ಮಾಡಿ, ನಗದು ಅಥವಾ ಕಾರ್ಡ್ ಮೂಲಕ ಹಣ ಪಾವತಿಸಿ ತಕ್ಷಣವೇ ಟಿಕೆಟ್‌ಗಳನ್ನು ಪಡೆಯಬಹುದು. ಆದಾಗ್ಯೂ ಆಫ್​ಲೈನ್ ಟಿಕೆಟ್ ಖರೀದಿ ಮಾಡುವವರು ಕಡ್ಡಾಯವಾಗಿ ತಮ್ಮ ಫೋಟೋ ಐಡಿಯನ್ನು ಹೊಂದಿರಬೇಕಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *