
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ 2026 ರ 12ನೇ ಪಂದ್ಯ ಮಳೆಯಿಂದ ರದ್ದಾಗಿದೆ. ಹೀಗಾಗಿ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ಸಿಕ್ಕಿದೆ. ಇದರಿಂದ ಕೆಕೆಆರ್ಗೆ ಲಾಭವಾದರೆ, ಪಂಜಾಬ್ ತಂಡ ಬೇಸರದಿಂದ ಮೈದಾನ ತೊರೆದಿದೆ. ಏಕೆಂದರೆ ಕೆಕೆಆರ್ ತಂಡ ಆಡಿದ ಮೊದಲ ಎರಡು ಪಂದ್ಯಗಳನ್ನು ಸೋತಿತ್ತು. ಇದರಿಂದ ತಂಡ ಯಾವುದೇ ಅಂಕಗಳನ್ನು ಹೊಂದಿರಲಿಲ್ಲ. ಆದರೆ ಈ ಪಂದ್ಯ ರದ್ದಾದ ಕಾರಣ ಕೆಕೆಆರ್ಗೆ 1 ಅಂಕ ಸಿಕ್ಕಿದೆ. ಇತ್ತ ಪಂಜಾಬ್ ಮೊದಲ ಎರಡು ಪಂದ್ಯಗಳನ್ನು ಗೆದ್ದು 4 ಅಂಕಗಳನ್ನು ಹೊಂದಿತ್ತು. ಇದೀಗ ಈ ಪಂದ್ಯವನ್ನು ಗೆದ್ದು 6 ಅಂಕಗಳನ್ನು ಪಡೆಯುವ ಅವಕಾಶ ಹೊಂದಿತ್ತು. ಆದರೆ ಅದಕ್ಕೆ ಮಳೆರಾಯ ಅವಕಾಶ ಮಾಡಿಕೊಡಲಿಲ್ಲ. ಆದಾಗ್ಯೂ ಪಂಜಾಬ್ 5 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.