ಐಪಿಎಲ್ (IPL) ಟ್ರೋಫಿಯನ್ನು 3 ಬಾರಿ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ (KKR), 19 ನೇ ಸೀಸನ್‌ನಲ್ಲಿ ತಮ್ಮ ಮೊದಲ ಗೆಲುವಿಗಾಗಿ ಏಳನೇ ಪಂದ್ಯಕ್ಕಾಗಿ ಕಾಯಬೇಕಾಯಿತು. ತಂಡದಲ್ಲಿ ಪ್ರತಿಭಾವಂತ ಬ್ಯಾಟ್ಸ್‌ಮನ್ ಮತ್ತು ಬೌಲರ್ ಇದ್ದರೂ, ಕೆಕೆಆರ್ ಮೊದಲ 6 ಪಂದ್ಯಗಳಲ್ಲಿ 5 ರಲ್ಲಿ ಸೋಲಬೇಕಾಯಿತು. ಮಳೆಯಿಂದಾಗಿ 1 ಪಂದ್ಯ ರದ್ದಾಯಿತು. ಆದಾಗ್ಯೂ ಕೆಕೆಆರ್ ತನ್ನ ಅಭಿಯಾನದ ಏಳನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಸತತ ಸೋಲುಗಳ ಸರಣಿಯನ್ನು ಮುರಿಯಿತು. ಅದರಲ್ಲೂ ಬಲಿಷ್ಠ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿದ್ದು ಕೆಕೆಆರ್ ತಂಡಕ್ಕೆ ಆನೆಬಲ ತಂದುಕೊಟ್ಟಿದೆ. ಮಾತ್ರವಲ್ಲದೆ ಸತತ ಸೋಲುಗಳಿಂದ ಎಲ್ಲರ ಟೀಕೆಗೆ ಗುರಿಯಾಗಿದ್ದ ಕೆಕೆಆರ್ ತಂಡದ ಆಟಗಾರರು ಈ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತು ಪುಟ್ಟ ಮಕ್ಕಳಂತೆ ಕಣ್ಣೀರಿಟ್ಟಿದ್ದಾರೆ. ಈ ವಿಚಾರವನ್ನು ತಂಡದ ಸ್ಟಾರ್ ಸ್ಪಿನ್ನರ್ ವರುಣ್ ಚಕ್ರವರ್ತಿ (Varun Chakravarthy) ಬಹಿರಂಗಪಡಿಸಿದ್ದಾರೆ.
ಆಟಗಾರರ ಕಣ್ಣಂಚಲ್ಲಿ ನೀರು ತುಂಬಿತ್ತು
ಪಂದ್ಯ ಮುಗಿದ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಯಾವ ರೀತಿಯ ವಾತಾವರಣವಿತ್ತು ಎಂಬುದನ್ನು ಬಹಿರಂಗಪಡಿಸಿರುವ ವರುಣ್ ಚಕ್ರವರ್ತಿ, ತಂಡದ ಮೊದಲ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಹಲವು ಆಟಗಾರರ ಕಣ್ಣಂಚಲ್ಲಿ ನೀರು ತುಂಬಿತ್ತು. ಎಲ್ಲರೂ ಭಾವುಕರಾಗಿ ಕಾಣಿಸುತ್ತಿದ್ದರು. ಸತತ ಸೋಲುಗಳಿಂದ ನಮ್ಮ ತಂಡ ಹೊರಗಿನಿಂದ ಸಾಕಷ್ಟು ಟೀಕೆಗಳನ್ನು ಕೇಳಬೇಕಾಯಿತು. ಅಂತಿಮವಾಗಿ ಮೊದಲ ಗೆಲುವು ತಂಡದ ಆಟಗಾರರನ್ನು ಭಾವುಕರಾಗಿಸಿತು. ಹೇಳಬೇಕೆಂದರೆ 2024 ರಲ್ಲಿ ನಾವು ಐಪಿಎಲ್ ಟ್ರೋಫಿ ಗೆದ್ದಾಗಲೂ ಇಷ್ಟು ಭಾವುಕರಾಗಿಲ್ಲ ಎಂದಿದ್ದಾರೆ.
ಈ ಗೆಲುವಿನ ಕ್ರೆಡಿಟ್ ನೀಡಬೇಕು
ಮುಂದುವರೆದು ಮಾತನಾಡಿರುವ ವರುಣ್, ಪಂದ್ಯಾವಳಿ ಪ್ರಾರಂಭಕ್ಕೂ ಮುನ್ನವೇ ಸ್ಟಾರ್ ಆಟಗಾರರ ಇಂಜುರಿ ಸಮಸ್ಯೆ ತಂಡವನ್ನು ಸಂಕಷ್ಟಕ್ಕೆ ತಳ್ಳಿತ್ತು. ಅಲ್ಲದೆ ಅವರ ಬದಲಿಯಾಗಿ ಬೇರೆಯವರನ್ನು ಹುಡುಕುವುದು ಮತ್ತು ಗೆಲುವಿನ ಲಯ ಕಂಡುಕೊಳ್ಳುವುದು ಕಷ್ಟಕರವಾಗಿತ್ತು. ಹೌದು ನಾವು ಇನ್ನು ಕೆಲವು ಕ್ಷೇತ್ರಗಳಲ್ಲಿ ಸುಧಾರಿಸಬೇಕಾಗಿದೆ. ಆದರೆ ನಮ್ಮ ಸಾಂಘಿಕ ಪ್ರದರ್ಶನ ಇಂದು ನಮಗೆ ಗೆಲುವು ತಂದುಕೊಟ್ಟಿದೆ. ಇದಕ್ಕೆ ನಾವು ತಂಡದ ತರಬೇತುದಾರರು, ಮುಖ್ಯವಾಗಿ ಹೆಡ್ ಕೋಚ್ ಅಭಿಷೇಕ್ ಶರ್ಮಾ ಅವರಿಗೆ ಈ ಗೆಲುವಿನ ಕ್ರೆಡಿಟ್ ನೀಡಬೇಕು. ಅವರು ತಂಡವನ್ನು ಬಹಳ ಕಠಿಣ ಪರಿಸ್ಥಿತಿಯಿಂದ ಹೊರತಂದಿದ್ದಾರೆ. ನಿಧಾನವಾಗಿ, ಹಂತ ಹಂತವಾಗಿ, ಸಣ್ಣ ಗೆಲುವುಗಳೊಂದಿಗೆ, ನಾವು ಮತ್ತೆ ಹಳಿಗೆ ಬರುತ್ತೇವೆ ಎಂದಿದ್ದಾರೆ.
KKR vs RR: ರಿಂಕುಗೆ ಜೀವದಾನ ನೀಡಿ ಸೋತ ರಾಜಸ್ಥಾನ್; ಕೆಕೆಆರ್‌ಗೆ ಮೊದಲ ಜಯ
ಪಂದ್ಯ ಹೀಗಿತ್ತು
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ 20 ಓವರ್‌ಗಳಲ್ಲಿ 155 ರನ್‌ಗಳಿಸಿತು. ಕೆಕೆಆರ್ ಪರ, ವರುಣ್ ಚಕ್ರವರ್ತಿ ಮತ್ತು ಕಾರ್ತಿಕ್ ತ್ಯಾಗಿ ಇಬ್ಬರೂ ತಲಾ 3 ವಿಕೆಟ್ ಪಡೆದರು. ನಂತರ, 156 ರನ್‌ಗಳನ್ನು ಬೆನ್ನಟ್ಟಿದ ಕೆಕೆಆರ್ 14 ಓವರ್‌ಗಳಲ್ಲಿ 85 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದಾಗ್ಯೂ, ಏಕಾಂಗಿ ಹೋರಾಟ ನೀಡಿದ ರಿಂಕು ಸಿಂಗ್ ಮತ್ತು ಅನುಕುಲ್ ರಾಯ್ ತಂಡಕ್ಕೆ ಗೆಲುವು ತಂದುಕೊಟ್ಟರು. ರಿಂಕು ಅಜೇಯ 53 ಮತ್ತು ಅನುಕುಲ್ 29 ರನ್ ಗಳಿಸಿ ಕೆಕೆಆರ್‌ಗೆ ಮೊದಲ ಗೆಲುವು ತಂದುಕೊಟ್ಟರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 4:00 pm, Mon, 20 April 26