2026 ರ ಐಪಿಎಲ್ ಮಾರ್ಚ್ 28 ರಂದು ಆರಂಭವಾಗಲಿದೆ. ಪ್ರತಿ ವರ್ಷದಂತೆ, ವಿಶ್ವದ ಕೆಲವು ಅತ್ಯುತ್ತಮ ಕ್ರಿಕೆಟಿಗರು 10 ವಿಭಿನ್ನ ತಂಡಗಳ ಪರ ಕಣಕ್ಕಿಳಿಯಲಿದ್ದಾರೆ. ಆದರೆ ಈ ಬಾರಿ ಒಂದೇ ಕೋಚ್ನ ಗರಡಿಯಲ್ಲಿ ಪಳಗಿದ 7 ಆಟಗಾರರು ಅಬ್ಬರಿಸಲು ಸಜ್ಜಾಗಿದ್ದಾರೆ. ಆ ಒಬ್ಬ ಕೋಚ್ ಯುವರಾಜ್ ಸಿಂಗ್ ಆಗಿದ್ದರೆ, ಅವರ ಗರಡಿಯಲ್ಲಿ ಪಳಗಿದ 7 ಆಟಗಾರರು ಯಾರು ಎಂಬುದರ ಪಟ್ಟಿ ಈ ಕೆಳಗಿನಂತಿದೆ.
ಯುವರಾಜ್ ಸಿಂಗ್ ಗರಡಿಯಲ್ಲಿ ಪಳಗಿ ಐಪಿಎಲ್ನಲ್ಲಿ ಹಾಗೂ ಟೀಂ ಇಂಡಿಯಾದಲ್ಲಿ ಅಬ್ಬರಿಸುತ್ತಿರುವ ಅಭಿಷೇಕ್ ಶರ್ಮಾ ಎಸ್ಆರ್ಹೆಚ್ ತಂಡದ ಉಪನಾಯಕತ್ವದ ಜವಾಬ್ದಾರಿ ಹೊತ್ತಿದ್ದಾರೆ. ಯುವರಾಜ್ ತರಬೇತಿಯಲ್ಲಿ ಅಭಿಷೇಕ್ ಅವರ ಆಟದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂತು. ಇದಕ್ಕೆ ಪೂರಕವಾಗಿ ಕಳೆದ ಎರಡು ಐಪಿಎಲ್ ಆವೃತ್ತಿಗಳಲ್ಲಿ ಅಭಿಷೇಕ್ ಐಪಿಎಲ್ನಲ್ಲಿ ರನ್ಗಳ ಮಳೆಗರೆದಿದ್ದಾರೆ.
ಟೀಂ ಇಂಡಿಯಾದ ಏಕದಿನ ಮತ್ತು ಟೆಸ್ಟ್ ನಾಯಕ ಶುಭ್ಮನ್ ಗಿಲ್ ಕೂಡ ಯುವರಾಜ್ ಸಿಂಗ್ ಅವರ ಶಿಷ್ಯರಾಗಿದ್ದು, ಅವರ ಮಾರ್ಗದರ್ಶನದಲ್ಲಿ ತಮ್ಮ ಬ್ಯಾಟಿಂಗ್ ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ಕಳೆದಿದ್ದಾರೆ. ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿರುವ ಗಿಲ್ಗೆ ಈ ಆವೃತ್ತಿ ನಿರ್ಣಾಯಕವಾಗಿದೆ. ಏಕೆಂದರೆ ಅವರು ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆಯಬೇಕೆಂದರೆ ಐಪಿಎಲ್ನಲ್ಲಿ ಅಬ್ಬರಿಸಬೇಕಿದೆ.
ಯುವರಾಜ್ ಶಿಷ್ಯರ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ ಹೆಸರು ಕೆಳಿದವರಿಗೆ ಆಶ್ಚರ್ಯವಾಗಬಹುದು. ಏಕೆಂದರೆ ಸಂಜು ಸ್ಯಾಮ್ಸನ್ ಪಂಜಾಬ್ ಕ್ರಿಕೆಟ್ನೊಂದಿಗೆ ಸಂಬಂಧ ಹೊಂದಿಲ್ಲ ಅಥವಾ ಯುವರಾಜ್ ಸಿಂಗ್ ಯಾವುದೇ ಐಪಿಎಲ್ ತಂಡದಲ್ಲಿ ಸ್ಯಾಮ್ಸನ್ ಜೊತೆ ಆಡಿಲ್ಲ. ಆದಾಗ್ಯೂ, ಇತ್ತೀಚೆಗೆ ಟಿ20 ವಿಶ್ವಕಪ್ನಲ್ಲಿ ಸ್ಮರಣೀಯ ಪ್ರದರ್ಶನ ನೀಡಿದ ಸ್ಯಾಮ್ಸನ್, ವಿಶ್ವಕಪ್ ಪ್ರಾರಂಭವಾಗುವ ಮೊದಲು, ಯುವರಾಜ್ ಮತ್ತು ರಾಬಿನ್ ಉತ್ತಪ್ಪ ನನಗೆ ಕರೆ ಮಾಡಿ ಸಹಾಯ ಮಾಡಿದ್ದರು ಎಂದು ಸ್ಯಾಮ್ಸನ್ ಹೇಳಿದ್ದರು.
ಯುವರಾಜ್ ಸಿಂಗ್ ನಿವೃತ್ತಿ ಘೋಷಿಸಿದಾಗ, ರಿಷಭ್ ಪಂತ್ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ತುಂಬಬಹುದು ಎಂದಿದ್ದರು. ಆದಾಗ್ಯೂ, ಪಂತ್ ಏಕದಿನ ಮತ್ತು ಟಿ20ಮಾದರಿಯಲ್ಲಿ ಅದನ್ನು ಸಾಧಿಸಲು ವಿಫಲರಾದರು. ಆದಾಗ್ಯೂ, 2026 ರ ಐಪಿಎಲ್ ಆರಂಭಕ್ಕೂ ಮೊದಲು ಪಂತ್, ಯುವರಾಜ್ ಅವರಡಿಯಲ್ಲಿ ತರಬೇತಿ ಪಡೆದಿದ್ದಾರೆ. ಅದರ ವೀಡಿಯೊಗಳನ್ನು ಪಂತ್ ಅವರೇ ಪೋಸ್ಟ್ ಮಾಡಿದ್ದಾರೆ. ಆದ್ದರಿಂದ, ಈ ಐಪಿಎಲ್ನಲ್ಲಿ ಪಂತ್ ಏನಾದರೂ ವಿಶೇಷ ಸಾಧನೆ ಮಾಡಿದರೆ, ಯುವರಾಜ್ ಅವರ ಮಾರ್ಗದರ್ಶನ ಕೆಲಸ ಮಾಡಿದೆ ಎನ್ನಬಹುದು.
ಅಭಿಷೇಕ್ ಮತ್ತು ಗಿಲ್ ಅವರಂತೆಯೇ, ಪಂಜಾಬ್ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಪ್ರಭ್ಸಿಮ್ರಾನ್ ಸಿಂಗ್ ಕೂಡ ಕಳೆದ ಎರಡು ಮೂರು ವರ್ಷಗಳಿಂದ ಯುವರಾಜ್ ಸಿಂಗ್ ಅವರಿಂದ ಮಾರ್ಗದರ್ಶನ ಪಡೆದಿದ್ದಾರೆ. ಕಳೆದ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಪರ ಪ್ರಭ್ಸಿಮ್ರಾನ್ ಅವರ ಅದ್ಭುತ ಪ್ರದರ್ಶನದಲ್ಲಿ ಇದು ಸ್ಪಷ್ಟವಾಗಿತ್ತು. ಪಂಜಾಬ್ ತಂಡವನ್ನು ಫೈನಲ್ಗೆ ಕೊಂಡೊಯ್ಯುವಲ್ಲಿ ಪ್ರಭ್ಸಿಮ್ರಾನ್ ಪ್ರಮುಖ ಪಾತ್ರ ವಹಿಸಿದ್ದರು. ಈಗ, ಅವರ ಮಾರ್ಗದರ್ಶಕರ ಸಹಾಯದಿಂದ, ಅವರು ಮತ್ತೊಮ್ಮೆ ಪಂಜಾಬ್ ತಂಡವನ್ನು ಪ್ರಶಸ್ತಿಗೆ ಕೊಂಡೊಯ್ಯುವ ಭರವಸೆಯಲ್ಲಿದ್ದಾರೆ.
ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುವ ಓಪನರ್ ಪ್ರಿಯಾಂಶ್ ಆರ್ಯ, ಕಳೆದ ಐಪಿಎಲ್ ನಂತರ ಯುವರಾಜ್ ಸಿಂಗ್ ಅವರ ಅಕಾಡೆಮಿಯಲ್ಲಿ ಸ್ವಲ್ಪ ಸಮಯ ಕಳೆದಿದ್ದರು ಅಲ್ಲಿ ಅವರಿಗೆ ಪ್ರಭ್ಸಿಮ್ರಾನ್ ಜೊತೆಗಿದ್ದರು. ಇದಾದ ಬಳಿಕ ಪ್ರಿಯಾಂಶ್ ದೆಹಲಿ ತಂಡದ ಪರ ಕೆಲವು ಉತ್ತಮ ಇನ್ನಿಂಗ್ಸ್ಗಳನ್ನು ಆಡಿದ್ದರು. ಆದರೆ ಅವರ ನಿಜವಾದ ಪ್ರತಿಭೆ ಈಗ ಐಪಿಎಲ್ನಲ್ಲಿ ಮೂಡಿಬರಬೇಕಿದೆ.
ಈ ಐಪಿಎಲ್ ಸೀಸನ್, ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರಿಗೆ ನಿರ್ಣಾಯಕವಾಗಲಿದೆ. ಮುಂಬೈ ಇಂಡಿಯನ್ಸ್ ಪರ ನಾಲ್ಕು ಸೀಸನ್ಗಳನ್ನು ಕಳೆದಿದ್ದರೂ, ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ, ಆದರೆ ಈ ಬಾರಿ ಅವರು ಲಕ್ನೋ ಸೂಪರ್ ಜೈಂಟ್ಸ್ನ ಭಾಗವಾಗಿದ್ದಾರೆ. ಈ ಬಾರಿ ಅರ್ಜುನ್ಗೆ ಅವಕಾಶಗಳು ಸಿಗುವ ಸಾಧ್ಯತೆಗಳಿವೆ. ಆದ್ದರಿಂದ, ಹೊಸ ಸೀಸನ್ ಪ್ರಾರಂಭವಾಗುವ ಮೊದಲು, ಅರ್ಜುನ್, ಯುವರಾಜ್ ಸಿಂಗ್ ಅವರಿಂದ ಕೆಲವು ಸಲಹೆಗಳನ್ನು ಪಡೆದಿದ್ದಾರೆ. ಅದು ಅವರ ಬ್ಯಾಟಿಂಗ್ನಲ್ಲಿ ಸಹಾಯಕವಾಗಬಹುದು.







