ಈ ಬಾರಿಯ ಐಪಿಎಲ್ನಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿದ್ದ ಶುಭ್ಮನ್ ಗಿಲ್ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ತಂಡವು ತನ್ನ ಗೆಲುವಿನ ಖಾತೆ ತೆರೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯವನ್ನು 1 ರನ್ಗಳಿಂದ ರೋಚಕವಾಗಿ ಗೆದ್ದುಕೊಂಡ ಗುಜರಾತ್ ತಂಡಕ್ಕೆ ಎರಡು ಅಂಕಗಳು ಸಿಕ್ಕಿವೆ. ಇದರಿಂದ ಗುಜರಾತ್ ತಂಡ ಪಾಯಿಂಟ್ ಟೇಬಲ್ನಲ್ಲಿ ತಮ್ಮ ಖಾತೆಯನ್ನು ತೆರೆದಿದೆ.
ಆದಾಗ್ಯೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ನಿಧಾನಗತಿಯ ಓವರ್ ನಿಯಮವನ್ನು ಗುಜರಾತ್ ಟೈಟಾನ್ಸ್ ತಂಡ ಉಲ್ಲಂಘಿಸಿದೆ. ಹೀಗಾಗಿ ತಂಡದ ನಾಯಕ ಶುಭ್ಮನ್ ಗಿಲ್ಗೆ 12 ಲಕ್ಷ ರೂಪಾಯಿ ದಂಡ ವಿಧಿಸಿ ಬಿಸಿಸಿಐ ಆದೇಶ ಹೊರಡಿಸಿದೆ.
ಐಪಿಎಲ್ 2026 ರ 14 ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ನಿಧಾನಗತಿಯ ಓವರ್ ದರಕ್ಕಾಗಿ ಗುಜರಾತ್ ನಾಯಕ ಗಿಲ್ ಅವರಿಗೆ ದಂಡ ವಿಧಿಸಲಾಗಿದೆ. ಇದು ಪ್ರಸಕ್ತ ಸೀಸನ್ನಲ್ಲಿ ತಂಡವು ಐಪಿಎಲ್ ನೀತಿ ಸಂಹಿತೆ 2.22 ಅನ್ನು ಉಲ್ಲಂಘಿಸಿದ ಮೊದಲ ಪ್ರಕರಣವಾಗಿದ್ದು, ಇದರ ಪರಿಣಾಮವಾಗಿ ದಂಡ ವಿಧಿಸಲಾಗಿದೆ. ಗಿಲ್ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ರೀತಿಯಾಗಿ ಬಿಸಿಸಿಐನಿಂದ ದಂಡನೆಗೆ ಒಳಗಾಗುತ್ತಿರುವ ಮೊದಲ ನಾಯಕ ಶುಭ್ಮನ್ ಗಿಲ್ ಅಲ್ಲ. ಗಿಲ್ಗೂ ಮೊದಲು ಶ್ರೇಯಸ್ ಅಯ್ಯರ್ ಎರಡು ಬಾರಿ ಈ ಅಪರಾಧ ಮಾಡಿದ್ದಾರೆ. ಮೊದಲ ಬಾರಿಗೆ ಶ್ರೇಯಸ್ ಅಯ್ಯರ್ ಗೆ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಎರಡನೇ ಬಾರಿ ಅದನ್ನು 25 ಲಕ್ಷ ರೂ.ಗೆ ಹೆಚ್ಚಿಸಲಾಯಿತು. ಅಯ್ಯರ್ ಮತ್ತೆ ಈ ನಿಯಮ ಮುರಿದರೆ ಅವರನ್ನು ಒಂದು ಪಂದ್ಯದಿಂದ ಹೊರಗಿಡಲಾಗುತ್ತದೆ.
ಇನ್ನು ಈ ಪಂದ್ಯದ ವಿಚಾರಕ್ಕೆ ಬರುವುದಾದರೆ.. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ಶುಭಮನ್ ಗಿಲ್, ಜೋಸ್ ಬಟ್ಲರ್ ಮತ್ತು ವಾಷಿಂಗ್ಟನ್ ಸುಂದರ್ ಅವರ ಅರ್ಧಶತಕಗಳ ಸಹಾಯದಿಂದ 210 ರನ್ಗಳ ಬೃಹತ್ ಸ್ಕೋರ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಎಸೆತದಲ್ಲಿ 1 ರನ್ಗಳ ವೀರೋಚಿತ ಸೋಲು ಅನುಭವಿಸಿತು.




