IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ ಸೀಸನ್-19ರ ಮೊದಲಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಈ ಪ್ರದರ್ಶನದೊಂದಿಗೆ ಆರ್ಸಿಬಿ ಪಡೆ ಮೊದಲ ಏಳು ಪಂದ್ಯಗಳ ಮೂಲಕ 10 ಅಂಕಗಳನ್ನು ಪಡೆದುಕೊಂಡಿದೆ.
ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಬಗ್ಗು ಬಡಿಯುವ ಮೂಲಕ ಈ ಬಾರಿಯ ಐಪಿಎಲ್ ಅಭಿಯಾನ ಆರಂಭಿಸಿದ್ದ ಆರ್ಸಿಬಿ, ಆ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹೀನಾಯವಾಗಿ ಸೋಲಿಸಿತ್ತು. ಆದರೆ ಮೂರನೇ ಮ್ಯಾಚ್ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲೊಪ್ಪಿಕೊಂಡಿದ್ದರು.
ಆರ್ಆರ್ ವಿರುದ್ಧದ ಈ ಸೋಲಿನ ಬಳಿಕ ಕಂಬ್ಯಾಕ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಬಗ್ಗು ಬಡಿದಿದ್ದರು. ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲುವ ಮೂಲಕ ನಿರಾಸೆ ಮೂಡಿಸಿದ್ದರು.
ಇದೀಗ ಮೊದಲಾರ್ಧದ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆರ್ಸಿಬಿ ಪಡೆ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಟ್ಟು 10 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ.
ಮೊದಲಾರ್ಧದಲ್ಲಿ 5 ಗೆಲುವುಗಳೊಂದಿಗೆ 10 ಅಂಕ ಪಡೆದಿರುವ ಆರ್ಸಿಬಿ ತಂಡವು ಪ್ಲೇಆಫ್ನಲ್ಲಿ ತನ್ನ ಸ್ಥಾನವನ್ನು ಖಚಿತ ಪಡಿಸಿಕೊಳ್ಳಲು ಮೂರೇ ಮೂರು ಗೆಲುವು ಸಾಕು. ಅಂದರೆ ದ್ವಿತೀಯಾರ್ಧದ 7 ಮ್ಯಾಚ್ಗಳಲ್ಲಿ ಆರ್ಸಿಬಿ ತಂಡ ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ ಒಟ್ಟು 16 ಅಂಕಗಳನ್ನು ಪಡೆದು ಪ್ಲೇಆಫ್ ಆಡುವುದನ್ನು ಖಚಿತಪಡಿಸಿಕೊಳ್ಳಲಿದೆ.
ಹೀಗಾಗಿ ಮುಂದಿನ ಏಳು ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೂರು ಮ್ಯಾಚ್ಗಳಲ್ಲಿ ಜಯ ಸಾಧಿಸಿ ಪ್ಲೇಆಫ್ಗೇರುವುದನ್ನು ಎದುರು ನೋಡಬಹುದು. ಈ ಮೂಲಕ ದ್ವಿತೀಯ ಸುತ್ತಿನಲ್ಲೂ ಅಮೋಘ ಪ್ರದರ್ಶನ ನೀಡಿ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.





