Headlines

Jagannath Rath Yatra 2026: ಪುರಿ ಜಗನ್ನಾಥನ ವಿಗ್ರಹಗಳು ಕೈಗಳಿಲ್ಲದೇ ಅಪೂರ್ಣವಾಗಿರಲು ಕಾರಣವೇನು ಗೊತ್ತಾ? – Kannada News | Puri Jagannath Temple: Rath Yatra 2026 Dates and Mysterious Incomplete Idols

ಪುರಿ ಜಗನ್ನಾಥನ ವಿಗ್ರಹಗಳು ಅಪೂರ್ಣImage Credit source: Pinterest

ಭಾರತದ ಪವಿತ್ರ ಚಾರ್ ಧಾಮ್‌ಗಳಲ್ಲಿ ಒಂದಾದ ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯವು ವಿಶ್ವಪ್ರಸಿದ್ಧವಾಗಿದೆ. ಇಲ್ಲಿ ಸಾಕ್ಷಾತ್ ಶ್ರೀಕೃಷ್ಣನನ್ನು ಜಗನ್ನಾಥನ (ಜಗದ ಒಡೆಯ) ರೂಪದಲ್ಲಿ ಆರಾಧಿಸಲಾಗುತ್ತದೆ. ಈ ಗರ್ಭಗುಡಿಯಲ್ಲಿ ಜಗನ್ನಾಥನೊಂದಿಗೆ ಆತನ ಹಿರಿಯ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರೆಯೂ ಒಟ್ಟಿಗೆ ಕುಳಿತು ಭಕ್ತರಿಗೆ ದರ್ಶನ ನೀಡುತ್ತಾರೆ. ಈ ಪುಣ್ಯಕ್ಷೇತ್ರದ ವಿಗ್ರಹಗಳು ನೋಡಲು ವಿಚಿತ್ರವಾಗಿ ಮತ್ತು ಅಪೂರ್ಣವಾಗಿ ಕಂಡರೂ, ಅವುಗಳ ಹಿಂದೆ ಅಪ್ರತಿಮ ಭಕ್ತಿ ಮತ್ತು ಬ್ರಹ್ಮಾಂಡದ ರಹಸ್ಯ ಅಡಗಿದೆ.

ಜಗನ್ನಾಥ ರಥಯಾತ್ರೆಯ ಸಂಭ್ರಮ:

ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ಬಿದಿಗೆಯಂದು ಜಗನ್ನಾಥ ದೇವರ ಭವ್ಯ ರಥಯಾತ್ರೆ ಜರುಗುತ್ತದೆ. ಈ ಬಾರಿ 2026 ರಲ್ಲಿ, ಜಗನ್ನಾಥ ರಥಯಾತ್ರೆಯು ಜುಲೈ 16 ರಂದು ಅತ್ಯಂತ ವೈಭವದಿಂದ ಆರಂಭವಾಗಲಿದ್ದು, ಜುಲೈ 24 ರವರೆಗೆ ಭಕ್ತಿಭಾವದಿಂದ ಮುಂದುವರಿಯಲಿದೆ. ಈ ಒಂಬತ್ತು ದಿನಗಳ ಕಾಲ ಜಗನ್ನಾಥ, ಬಲಭದ್ರ ಮತ್ತು ಸುಭದ್ರೆಯರು ಪ್ರತ್ಯೇಕ ರಥಗಳಲ್ಲಿ ಕುಳಿತು ಜನ್ಮಸ್ಥಳವಾದ ಗುಂಡಿಚಾ ದೇವಸ್ಥಾನಕ್ಕೆ ಪ್ರಯಾಣ ಬೆಳೆಸುತ್ತಾರೆ. ಈ ರಥೋತ್ಸವವನ್ನು ಕಣ್ಣುಂಬಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಪುರಿಗೆ ಹರಿದುಬರುತ್ತಾರೆ.

ಜಗನ್ನಾಥನ ವಿಗ್ರಹಗಳು ಅಪೂರ್ಣ?

ಮಾಳವ ದೇಶದ ರಾಜ ಇಂದ್ರದ್ಯುಮ್ನನು ದೇವಸ್ಥಾನವನ್ನು ನಿರ್ಮಿಸಿ ವಿಗ್ರಹಗಳನ್ನು ಕೆತ್ತಲು ಮುಂದಾದಾಗ, ಸಾಕ್ಷಾತ್ ದೇವಶಿಲ್ಪಿ ವಿಶ್ವಕರ್ಮನು ವೃದ್ಧ ಕುಶಲಕರ್ಮಿಯ ವೇಷದಲ್ಲಿ ರಾಜನ ಬಳಿಗೆ ಬಂದನು. ವಿಶ್ವಕರ್ಮನು ವಿಗ್ರಹಗಳನ್ನು ಕೆತ್ತಲು ಒಂದು ಕಠಿಣ ಷರತ್ತನ್ನು ವಿಧಿಸಿದನು. “ನಾನು 21 ದಿನಗಳಲ್ಲಿ ಈ ಮೂರು ಪ್ರತಿಮೆಗಳನ್ನು ಪೂರ್ಣಗೊಳಿಸುತ್ತೇನೆ. ಆದರೆ, ನಾನು ಒಂದೇ ಕೋಣೆಯಲ್ಲಿ ಒಬ್ಬಂಟಿಯಾಗಿ ಕೆಲಸ ಮಾಡುತ್ತೇನೆ, ಅಲ್ಲಿಯವರೆಗೆ ಯಾರೂ ಬಾಗಿಲು ತೆರೆಯಬಾರದು” ಎಂದನು. ರಾಜನು ಇದಕ್ಕೆ ಒಪ್ಪಿದನು. ಪ್ರತಿದಿನ ಕೋಣೆಯ ಒಳಗಿನಿಂದ ಉಳಿ ಮತ್ತು ಸುತ್ತಿಗೆಯ ಶಬ್ದ ಕೇಳಿಸುತ್ತಿತ್ತು. ಆದರೆ, ಕೆಲವು ದಿನಗಳ ನಂತರ ಇದ್ದಕ್ಕಿದ್ದಂತೆ ಒಳಗಿನಿಂದ ಶಬ್ದ ಬರುವುದು ನಿಂತುಹೋಯಿತು.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಒಳಗಿದ್ದ ವೃದ್ಧ ಶಿಲ್ಪಿಗೆ ಏನಾಯಿತೋ ಎಂಬ ಆತಂಕ ಮತ್ತು ಕುತೂಹಲದಿಂದ ರಾಜ ಇಂದ್ರದ್ಯುಮ್ನನು ತಡೆಯಲಾರದೆ 21 ದಿನಗಳು ಮುಗಿಯುವ ಮುನ್ನವೇ ಕೋಣೆಯ ಬಾಗಿಲು ತೆರೆದನು. ಅಷ್ಟರಲ್ಲಿ ದೇವಶಿಲ್ಪಿ ವಿಶ್ವಕರ್ಮನು ಅಲ್ಲಿಂದ ಮಾಯವಾಗಿದ್ದನು ಮತ್ತು ಜಗನ್ನಾಥ, ಬಲಭದ್ರ, ಸುಭದ್ರೆಯರ ವಿಗ್ರಹಗಳು ಕೈಕಾಲುಗಳಿಲ್ಲದೆ ಅರ್ಧಕ್ಕೆ ನಿಂತಿದ್ದವು. ರಾಜನು ತನ್ನ ಆತುರದ ನಿರ್ಧಾರಕ್ಕೆ ತೀವ್ರವಾಗಿ ಪಶ್ಚಾತ್ತಾಪಪಟ್ಟನು. ಆದರೆ, ಅಶರೀರವಾಣಿಯ ಮೂಲಕ ಇದನ್ನು ದೈವೇಚ್ಛೆ ಎಂದು ತಿಳಿದ ರಾಜನು, ಅದೇ ಅಪೂರ್ಣ ವಿಗ್ರಹಗಳನ್ನು ಮಂದಿರದಲ್ಲಿ ಪ್ರತಿಷ್ಠಾಪಿಸಿದನು. ಅಂದಿನಿಂದ ಇಂದಿನವರೆಗೂ ಜಗತ್ತಿನ ಒಡೆಯನಾದ ಆ ಜಗನ್ನಾಥನನ್ನು ಭಕ್ತರು ಅದೇ ವಿಚಿತ್ರ, ಅಪೂರ್ಣ ಹಾಗೂ ಅತ್ಯಂತ ಸುಂದರ ರೂಪದಲ್ಲಿ ಭಕ್ತಿಯಿಂದ ಪೂಜಿಸುತ್ತಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:27 am, Wed, 17 June 26

Source link

Leave a Reply

Your email address will not be published. Required fields are marked *