ಪ್ರಜ್ವಲ್ ದೇವರಾಜ್ (Prajwal Devaraj), ರಾಜ್ ಬಿ ಶೆಟ್ಟಿ (Raj B Shetty) ಸೇರಿದಂತೆ ಹಲವು ಪ್ರತಿಭಾವಂತ ನಟ, ನಟಿಯರು ನಟಿಸಿ ಗುರುದತ್ ಗಾಣಿಗಾ ನಿರ್ದೇಶನ ಮಾಡಿರುವ ‘ಕರಾವಳಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಶೂಟಿಂಗ್ ಆರಂಭವಾದಾಗಿನಿಂದಲೂ ಈ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ಗಮನ ಸೆಳೆಯುತ್ತಲೇ ಇತ್ತು. ಆದರೆ ಬಿಡುಗಡೆ ಸನಿಹ ಬರುತ್ತಿದ್ದಂತೆ ವಿವಾದದಿಂದ ಸುದ್ದಿ ಆಗಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಬಂದು ಗಲಾಟೆ ಮಾಡಿದ್ದರು. ನಿರ್ದೇಶಕ ಹಾಗೂ ಗುರುದತ್ ಗಾಣಿಗಾ ನಡುವೆ ಇದ್ದ ಮನಸ್ಥಾಪ ಬಹಿರಂಗವಾಗಿದ್ದು, ಪರಸ್ಪರರು ಆರೋಪ-ಪ್ರತ್ಯಾರೋಪಗಳನ್ನು ಸಹ ಮಾಡಿಕೊಂಡಿದ್ದಾರೆ.
ಸಿನಿಮಾನಲ್ಲಿ ನಟಿಸಿರುವ ರಾಜ್ ಬಿ ಶೆಟ್ಟಿ, ನಿನ್ನೆಯಷ್ಟೆ ವಿಡಿಯೋ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಆಗಿರುವ ವಿವಾದಕ್ಕೆ ಕ್ಷಮೆ ಕೋರಿದ್ದಾರೆ. ವಿಡಿಯೋನಲ್ಲಿ ಮಾತನಾಡಿರುವ ರಾಜ್ ಬಿ ಶೆಟ್ಟಿ, ‘ಕೆಜಿಎಫ್’, ‘ಕಾಂತಾರ’ ಅಂಥಹಾ ಸಿನಿಮಾಗಳು ಯಶಸ್ವಿಯಾದಾಗ ನಮ್ಮ ಕನ್ನಡದ ಸಿನಿಮಾ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಹಾಗೆಯೇ ಈ ರೀತಿ ವಿವಾದಗಳು ನಡೆದಾಗಲೂ ಸಹ ಮನಸ್ಸಿಗೆ ಬಹಳ ಬೇಸರ ಆಗುತ್ತದೆ, ನೋವನ್ನು ಅನುಭವಿಸುತ್ತೇವೆ’ ಎಂದಿದ್ದಾರೆ.
ಇದನ್ನೂ ಓದಿ:‘ಕರಾವಳಿ’ ಸಿನಿಮಾ ಹಾಡಿಗೆ ಹಿರಿಯ ಗಾಯಕಿ ಬಿ ಜಯಶ್ರೀ ಧ್ವನಿ
ಮುಂದುವರೆದು ಮಾತನಾಡಿ, ‘ಇಲ್ಲಿ ಯಾರು ಸರಿ, ಯಾರು ತಪ್ಪು ಎಂಬುದು ಮುಖ್ಯವಲ್ಲ, ಕನ್ನಡ ಸಿನಿಮಾ ಪ್ರೇಕ್ಷಕರ ಮುಂದೆ ನಾವು ಹೀಗೆ ನಡೆದುಕೊಳ್ಳುತ್ತಿದ್ದೇವಲ್ಲ ಎಂಬುದು ಬೇಜಾರು ಕೊಡುವ ಸಂಗತಿ. ಚಿತ್ರರಂಗದವನಾಗಿ ನಾನು ಇಡೀ ಪ್ರೇಕ್ಷಕರ ವರ್ಗಕ್ಕೆ ದೊಡ್ಡ ಕ್ಷಮೆ ಕೇಳುತ್ತೇನೆ. ಮುಂದೆ ಹೀಗೆ ನಡೆಯದಂತೆ ನೋಡಿಕೊಳ್ಳುವ, ವರ್ತಿಸುವ ಪ್ರಯತ್ನ ಮಾಡುತ್ತೇನೆ’ ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
‘ಕರಾವಳಿ’ ಸಿನಿಮಾನಲ್ಲಿ ಪ್ರಜ್ವಲ್ ದೇವರಾಜ್ ಅವರು ನಾಯಕ, ನನ್ನದು ಅತಿಥಿ ಪಾತ್ರ. ಆದರೆ ಬಹಳ ಮುಖ್ಯವಾದ ಅತಿಥಿ ಪಾತ್ರ. ನಾವು ಮಾತ್ರವೇ ಅಲ್ಲದೆ ಹಲವು ಪ್ರತಿಭಾವಂತ ನಟ-ನಟಿಯರು ಸಿನಿಮಾನಲ್ಲಿ ಇದ್ದಾರೆ. ಸಂಪದಾ, ಮಿತ್ರ, ರಮೇಶ್ ಇಂದಿರಾ ಇನ್ನೂ ಕೆಲವರು ಸಿನಿಮಾನಲ್ಲಿದ್ದಾರೆ. ಒಂದು ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಪ್ರಾಮಾಣಿಕ ಪ್ರಯತ್ನವನ್ನು ನಿರ್ದೇಶಕ ಗುರುದತ್ ಗಾಣಿಗಾ ಮಾಡಿದ್ದಾರೆ’ ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ