ತುಂಗಭದ್ರಾ, ಆಲಮಟ್ಟಿಗೆ ಕಳೆ ತಂದ ಮುಂಗಾರು, ರೈತರಲ್ಲಿ ಹರ್ಷ!
ಬೆಂಗಳೂರು, ಆಗಸ್ಟ್ 05: ರಾಜ್ಯದಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದ್ದು, ಪ್ರಮುಖ ಜಲಾಶಯಗಳಿಗೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ (Dam water level) ಭಾರಿ ಏರಿಕೆ ಕಂಡಿದೆ. ಉತ್ತರ ಕರ್ನಾಟಕದ ಆಲಮಟ್ಟಿ ಮತ್ತು ತುಂಗಭದ್ರಾ ಜಲಾಶಯಗಳು ಭರ್ತಿಯತ್ತ ಸಾಗುತ್ತಿದ್ದರೆ, ಕಾವೇರಿ ಕೊಳ್ಳದ ಕೆಆರ್ಎಸ್, ಕಬಿನಿ ಹಾಗೂ ಹೇಮಾವತಿ ಡ್ಯಾಂಗಳಲ್ಲಿಯೂ ನೀರಿನ ಮಟ್ಟ ಸ್ಥಿರವಾಗಿ ಏರಿಕೆಯಾಗುತ್ತಿದೆ.
1. ತುಂಗಭದ್ರಾ ಜಲಾಶಯ
ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದುಬರುತ್ತಿದೆ. 105 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಒಂದೇ ದಿನದಲ್ಲಿ 9 ಟಿಎಂಸಿ ನೀರು ಸಂಗ್ರಹವಾಗಿದ್ದು, ಪ್ರಸ್ತುತ 59 ಟಿಎಂಸಿ ನೀರಿದೆ. ಇದರಿಂದ ಕೊಪ್ಪಳ, ಬಳ್ಳಾರಿ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಗಳ ರೈತರಲ್ಲಿ ಸಂತಸ ಮನೆಮಾಡಿದೆ.
2. ಆಲಮಟ್ಟಿ ಜಲಾಶಯ (ವಿಜಯಪುರ)
ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ (ಆಲಮಟ್ಟಿ) ಜಲಾಶಯಕ್ಕೆ 1,45,675 ಕ್ಯೂಸೆಕ್ ಒಳಹರಿವು ಇದ್ದು, 1,51,297 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಆಗಿದ್ದು, ಇಂದಿನ ಮಟ್ಟ 518.87 ಮೀಟರ್ ತಲುಪಿದೆ.
3. ಕೆಆರ್ಎಸ್ ಜಲಾಶಯ (ಮಂಡ್ಯ)
ಕಾವೇರಿ ಕೊಳ್ಳದ ಪ್ರಮುಖ ಡ್ಯಾಂ ಕೆಆರ್ಎಸ್ನಲ್ಲಿ ಇಂದಿನ ನೀರಿನ ಮಟ್ಟ 105.10 ಅಡಿಯಷ್ಟಿದೆ (ಗರಿಷ್ಠ ಮಟ್ಟ: 124.80 ಅಡಿ). 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ ಪ್ರಸ್ತುತ 27.077 ಟಿಎಂಸಿ ನೀರು ಸಂಗ್ರಹವಿದ್ದು, 19,275 ಕ್ಯೂಸೆಕ್ ಒಳಹರಿವು ಮತ್ತು 1,985 ಕ್ಯೂಸೆಕ್ ಹೊರಹರಿವು ದಾಖಲಾಗಿದೆ.
4. ಕಬಿನಿ ಜಲಾಶಯ (ಮೈಸೂರು)
ಕಬಿನಿ ಜಲಾಶಯದಲ್ಲಿ ಕಳೆದ 24 ಗಂಟೆಗಳಲ್ಲಿ 45 ಮಿ.ಮೀ. ಮಳೆಯಾಗಿದ್ದು, 22,256 ಕ್ಯೂಸೆಕ್ ಒಳಹರಿವಿದೆ. 19.52 ಟಿಎಂಸಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ 18.26 ಟಿಎಂಸಿ ನೀರು ಸಂಗ್ರಹವಾಗಿದ್ದು, 27,000 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ (ಇಂದಿನ ಮಟ್ಟ: 82.04 ಅಡಿ).
5. ಹೇಮಾವತಿ ಜಲಾಶಯ (ಗೊರೂರು, ಹಾಸನ)
37 ಟಿಎಂಸಿ ಗರಿಷ್ಠ ಸಾಮರ್ಥ್ಯ ಹೊಂದಿರುವ ಹೇಮಾವತಿ ಜಲಾಶಯದಲ್ಲಿ 28.782 ಟಿಎಂಸಿ ನೀರು ಸಂಗ್ರಹವಾಗಿದೆ. ಇಂದಿನ ನೀರಿನ ಮಟ್ಟ 2912.70 ಅಡಿಯಿದ್ದು, 4,879 ಕ್ಯೂಸೆಕ್ ಒಳಹರಿವು ಹಾಗೂ 500 ಕ್ಯೂಸೆಕ್ ಹೊರಹರಿವು ದಾಖಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ