ಬೆಂಗಳೂರು (ಮೇ 15): ಬಿಸಿಲಿನ ಬೇಗೆಯ ನಡುವೆಯೇ ಕರ್ನಾಟಕದಲ್ಲಿ (Karnataka) ಹಲವೆಡೆ ವರುಣ (Rain) ತಂಪೆರೆಯುತ್ತಿದ್ದಾನೆ. ಕೆಲ ದಿನಗಳಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಈ ಮಳೆ ಇನ್ನಷ್ಟು ದಿನ ಮುಂದುವರೆಯಲಿದೆ. ಹೌದು…ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದರಿಂದ 50% ಗಿಂತ ಹೆಚ್ಚಿನ ಪ್ರದೇಶದಲ್ಲಿ 3 ದಿನ ಗುಡುಗು ಮಿಂಚಿನ ಸಮೇತ ಮಳೆಯಾಗುವ ಸಾಧ್ಯತೆಗಳಿವೆ. ಗಂಟೆಗೆ 30ರಿಂದ 40 ಕಿ.ಮೀ ವೇಗ ದಲ್ಲಿ ಗಾಳಿ ಬಿಸಲಿದೆ. ಹೀಗಾಗಿ ಮುಕ್ಕಾಲು ಭಾಗ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಎಲ್ಲೆಲ್ಲಿ ಮಳೆ?
ಇನ್ನು ಈ ಬಗ್ಗೆ ಹವಾಮಾನ ತಜ್ಞರಾದ CS ಪಾಟೀಲ್ ಅವರು ಟಿವಿ9 ಜತೆ ಮಾತನಾಡಿದ್ದು, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪ್ರಭಾವ ಭಾರಿ ಮಳೆಯಾಗುವ ಸಾಧ್ಯತೆ ಇದೆ. 50% ಗಿಂತ ಹೆಚ್ಚಿನ ಪ್ರದೇಶದಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಗುಡುಗು ಮಿಂಚಿನ ಸಮೇತ ಮಳೆಯಾಗಲಿದೆ. ಕರ್ನಾಟಕದ ಉತ್ತರ ಒಳನಾಡು, ಕರಾವಳಿ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಧಾರವಾಡ, ಗದಗ, ಬಳ್ಳಾರಿ, ವಿಜಯನಗರ , ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಉಡುಪಿ, ದಕ್ಷಿಣ ಕನ್ನಡ , ಚಿಕ್ಕಮಗಳೂರು ಹಾಸನ, ತುಮಕೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಪಾಟೀಲ್ ಹೇಳಿದ್ದಾರೆ.
ಈ ಬಾರಿಯ ಮಳೆಯ ಮೇಲೆ ಎಲ್ ನಿನೋ ಪರಿಣಾಮ ದೊಡ್ಡಮಟ್ಟದಲ್ಲಿ ಬೀರಲಿದೆ. ಇದರಿಂದ ಈ ವರ್ಷವು ನೈರುತ್ಯ ಮಾನ್ಸೂನ್ ಮಳೆಯ ಪ್ರಮಾಣ ವಾಡಿಕೆಗಿಂತ ಕಡಿಮೆಯಾಗಲಿದೆ ಎಂದಿದ್ದಾರೆ.