KL Rahul: ಒಂದು ಗೆಲುವು ಎಲ್ಲವನ್ನೂ ಮರೆಸುತ್ತದೆ..! – Kannada News | Kl rahul post match interview after RR vs DC Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 43ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜಯ ಸಾಧಿಸಿದೆ. ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್​ಗಳಲ್ಲಿ 225 ರನ್​ ಕಲೆಹಾಕಿದ್ದರು. ಈ ಕಠಿಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ದಾಂಡಿಗ ಕೆಎಲ್ ರಾಹುಲ್ 40 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 75 ರನ್ ಬಾರಿಸಿದ್ದರು. ಈ ಭರ್ಜರಿ ಬ್ಯಾಟಿಂಗ್ ನೆರವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ 19.1 ಓವರ್​ಗಳಲ್ಲಿ 226 ರನ್​ ಬಾರಿಸಿ 7 ವಿಕೆಟ್​ಗಳ ಜಯ ಸಾಧಿಸಿತು.

ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೆಎಲ್ ರಾಃಉಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಈ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ರಾಹುಲ್,  ಬಹಳ ವರ್ಷಗಳ ಕಾಲ ಕ್ರಿಕೆಟ್ ಆಡಿದ ಮೇಲೆ ಅಂಕಿ-ಅಂಶಗಳು ಮುಖ್ಯವಾಗುತ್ತವೆ. ವೈಯಕ್ತಿಕವಾಗಿ ದೊಡ್ಡ ಮೊತ್ತ ದಾಖಲಿಸುವುದು ಮತ್ತು ದಾಖಲೆ ಮುರಿಯುವುದು ಸಂತೋಷ ನೀಡುತ್ತದೆ ನಿಜ. ಆದರೆ, ದಿನದ ಅಂತ್ಯಕ್ಕೆ ತಂಡಕ್ಕೆ ಗೆಲುವು ಸಿಗದಿದ್ದರೆ ಆ ರನ್‌ಗಳಿಗೆ ಯಾವುದೇ ಅರ್ಥವಿರುವುದಿಲ್ಲ. ಇದೀಗ ಗೆಲುವು ಸಿಕ್ಕಿದೆ. ಈ ಗೆಲುವು ಎಲ್ಲವನ್ನೂ ಮರೆಸುತ್ತದೆ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.

ಇದೇ ವೇಳೆ ಸ್ಟ್ರೈಕ್ ರೇಟ್  ಬಗ್ಗೆ ಮಾತನಾಡಿದ ರಾಹುಲ್, “ನನ್ನ ಸ್ಟ್ರೈಕ್ ರೇಟ್ ಬಗ್ಗೆ ಕಳೆದ ಕೆಲವು ವರ್ಷಗಳಿಂದ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿದ್ದವು. ಈ ಸೀಸನ್​ನಲ್ಲಿ ನಾನು ಅದರ ಮೇಲೆ ಹೆಚ್ಚು ಗಮನ ಹರಿಸಿದ್ದೇನೆ. ಆಧುನಿಕ ಟಿ20 ಕ್ರಿಕೆಟ್ ಏನು ನಿರೀಕ್ಷಿಸುತ್ತದೆಯೋ ಮತ್ತು ತಂಡಕ್ಕೆ ಏನು ಅಗತ್ಯವಿದೆಯೋ ಅದನ್ನು ಮಾಡುತ್ತಿರುವುದು ನನಗೆ ತೃಪ್ತಿ ನೀಡಿದೆ ಎಂದಿದ್ದಾರೆ.

ಪವರ್‌ಪ್ಲೇನಲ್ಲಿ ಪಾತುಮ್ ನಿಸ್ಸಂಕಾ ನೀಡಿದ ಸ್ಫೋಟಕ ಆರಂಭವನ್ನು ಕೊಂಡಾಡಿದ ರಾಹುಲ್, ನಾನು ಪವರ್‌ಪ್ಲೇನಲ್ಲಿ ಹೆಚ್ಚು ಎಸೆತಗಳನ್ನು ಎದುರಿಸಬೇಕೆಂದು ಅಂದುಕೊಂಡಿದ್ದೆ. ಆದರೆ ಪಾತುಮ್ ಬ್ಯಾಟ್ ಮಾಡುತ್ತಿದ್ದ ರೀತಿ ಅದ್ಭುತವಾಗಿತ್ತು. ನಾನು ಕೇವಲ ನಾನ್-ಸ್ಟ್ರೈಕರ್ ತುದಿಯಲ್ಲಿ ನಿಂತು ಅವರು ಚೆಂಡನ್ನು ಸಿಕ್ಸರ್‌ಗೆ ಅಟ್ಟುವುದನ್ನು ನೋಡುವುದೇ ಆನಂದವಾಗಿತ್ತು. 220 ರನ್‌ಗಳ ಗುರಿ ಬೆನ್ನಟ್ಟುವಾಗ ಅಂತಹ ಆರಂಭ ನಮಗೆ ಅನಿವಾರ್ಯವಾಗಿತ್ತು ಎಂದು ತಮ್ಮ ಆರಂಭಿಕ ಜೊತೆಗಾರನ ಬ್ಯಾಟಿಂಗ್ ಶ್ಲಾಘಿಸಿದರು.

ಇದನ್ನೂ ಓದಿ: IPL 2026: ಅದು ಕ್ಲಿಯರ್ ಔಟ್… ಅಶ್ವಿನ್ ನೀಡಿದ ಸ್ಪಷ್ಟನೆ ಹೀಗಿದೆ

ಇನ್ನು ಕಳೆದ ಎರಡು ಪಂದ್ಯಗಳಲ್ಲಿ ಸೋತಿದ್ದರೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಡ್ರೆಸ್ಸಿಂಗ್ ರೂಮ್ ವಾತಾವರಣ ಸಮತೋಲನದಿಂದ ಕೂಡಿತ್ತು. ತಂಡವು ದೊಡ್ಡ ತಪ್ಪುಗಳನ್ನೇನೂ ಮಾಡುತ್ತಿರಲಿಲ್ಲ, ಬದಲಾಗಿ ಪಂದ್ಯದ ನಿರ್ಣಾಯಕ ಕ್ಷಣಗಳನ್ನು ಕೈವಶ ಮಾಡಿಕೊಳ್ಳುವಲ್ಲಿ ವಿಫಲವಾಗುತ್ತಿತ್ತು. ಈಗ ಸಿಕ್ಕಿರುವ ಲಯವನ್ನು ಮುಂದಿನ ಪಂದ್ಯಗಳಲ್ಲೂ ಮುಂದುವರಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

Source link

Leave a Reply

Your email address will not be published. Required fields are marked *