MI vs KKR: 13 ವರ್ಷಗಳ ಸತತ ಸೋಲಿಗೆ ಬ್ರೇಕ್ ಹಾಕಿದ ಮುಂಬೈ ಇಂಡಿಯನ್ಸ್

MI vs KKR: 13 ವರ್ಷಗಳ ಸತತ ಸೋಲಿಗೆ ಬ್ರೇಕ್ ಹಾಕಿದ ಮುಂಬೈ ಇಂಡಿಯನ್ಸ್

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ 2026 ರ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಹಾಗೂ ರಘುವಂಶಿ ಅವರ ಅರ್ಧಶತಕದ ನೆರವಿನಿಂದ 220 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ರಿಕಲ್ಟನ್ ಅವರ ಅರ್ಧಶತಕದ ನೆರವಿನಿಂದ ಈ ಬೃಹತ್ ಗುರಿಯನ್ನು ಬೆನ್ನಟ್ಟಿ ಗೆಲುವು ಸಾಧಿಸಿತು. ಈ ಮೂಲಕ ಮುಂಬೈ ಐಪಿಎಲ್ ಐತಿಹಾಸದಲ್ಲಿ ಅತ್ಯಧಿಕ ಮೊತ್ತ ಬೆನ್ನಟ್ಟಿದ ದಾಖಲೆ ಬರೆಯುವುದರ ಜೊತೆಗೆ ತನ್ನ ಸೋಲಿನ ಸರಣಿಗೂ ಅಂತ್ಯ ಹಾಡಿದೆ.

ವಾಸ್ತವವಾಗಿ ಮುಂಬೈ ಇಂಡಿಯನ್ಸ್ ತಂಡ 2012 ರ ಐಪಿಎಲ್​ನಂತರ ಇಲ್ಲಿಯವರೆಗೆ ಪ್ರತಿ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಸತತ ಸೋಲುಗಳನ್ನು ಕಂಡಿತ್ತು. ಅಂದರೆ ಸತತ 13 ಆವೃತ್ತಿಗಳ ಮೊದಲ ಪಂದ್ಯದಲ್ಲಿ ಮುಂಬೈಗೆ ಗೆಲುವು ಧಕ್ಕಿರಲಿಲ್ಲ. ಆದರೆ ಈ ಸತತ ಸೋಲಿನ ಸರಣಿಯನ್ನು 2026 ರ ಆವೃತ್ತಿಯಲ್ಲಿ ಮುರಿಯುವಲ್ಲಿ ಮುಂಬೈ ಇಂಡಿಯನ್ಸ್ ಯಶಸ್ವಿಯಾಗಿದೆ. ಹಾಗೆಯೇ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಗುರಿ ಬೆನ್ನಟ್ಟಿದ ದಾಖಲೆಯನ್ನು ಬರೆದಿದೆ. 2021 ರಲ್ಲಿ ಮುಂಬೈ, ಸಿಎಸ್​ಕೆ ನೀಡಿದ್ದ 219 ರನ್​ಗಳ ಗುರಿ ಬೆನ್ನಟ್ಟಿ ಗೆದ್ದಿತ್ತು. ಇದೀಗ 221 ರನ್ ಬೆನ್ನಟ್ಟಿ ಮುಂಬೈ ತನ್ನ ಹಳೆಯ ದಾಖಲೆಯನ್ನು ಮುರಿದಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್​ಗಳಲ್ಲಿ 4 ವಿಕೆಟ್‌ಗಳಿಗೆ 220 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ನಾಯಕ ಅಜಿಂಕ್ಯ ರಹಾನೆ, ಹೊಸ ಆರಂಭಿಕ ಆಟಗಾರ ಫಿನ್ ಅಲೆನ್ (37) ಅವರೊಂದಿಗೆ ತಂಡಕ್ಕೆ 69 ರನ್‌ಗಳ ಸ್ಫೋಟಕ ಆರಂಭವನ್ನು ನೀಡಿದರು. ರಹಾನೆ (67) ಭರ್ಜರಿ ಅರ್ಧಶತಕ ಗಳಿಸಿದರೆ, ನಂತರ ಬಂದ ಯುವ ಬ್ಯಾಟ್ಸ್‌ಮನ್ ಅಂಗ್‌ಕ್ರಿಶ್ ರಘುವಂಶಿ ಕೂಡ (51) ಸ್ಫೋಟಕ ಅರ್ಧಶತಕ ಗಳಿಸಿದರು. ಮುಂಬೈ ಪರ, ಶಾರ್ದೂಲ್ ಠಾಕೂರ್ 3 ವಿಕೆಟ್‌ ಕಬಳಿಸಿದರು.

Source link

Leave a Reply

Your email address will not be published. Required fields are marked *