ರಾಷ್ಟ್ರೀಯ ಕೈಮಗ್ಗ ದಿನImage Credit source: Unsplash
ಶತಮಾನಗಳಷ್ಟು ಹಳೆಯ ಇತಿಹಾಸವನ್ನು ಹೊಂದಿರುವ ಕೈಮಗ್ಗ (Handloom) ಉದ್ಯಮವು ಭಾರತದ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದೆ. ಈ ಉದ್ಯಮವು ಜೀವನೋಪಾಯದ ಪ್ರಮುಖ ಮೂಲವಾಗಿದ್ದು, ಇದು ಹೆಚ್ಚಿನ ಜನರಿಗೆ ಉದ್ಯೋಗವನ್ನು ಒದಗಿಸಿಕೊಟ್ಟಿದೆ. ಅಲ್ಲದೆ ಕೈಮಗ್ಗವು ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ತನ್ನದೇ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಿದೆ. ಆದರೆ ಇಂದು ಆದರೆ ಇಂದು ತಂತ್ರಜ್ಞಾನ ಹಾಗೂ ಪಾಶ್ಚಿಮಾತ್ಯ ಉತ್ಪನ್ನಗಳ ಪ್ರಭಾವದಿಂದಾಗಿ ಭಾರತದ ಕೈಮಗ್ಗ ಉದ್ಯಮವು ಕುಂಠಿತಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ದೇಶದ ಈ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ಹಾಗೂ ಕೈಮಗ್ಗ ಉದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಹಾಗೂ ಕೈಮಗ್ಗ ಉದ್ಯಮದ ಮಹತ್ವ ಮತ್ತು ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಅದರ ಕೊಡುಗೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ.
ರಾಷ್ಟ್ರೀಯ ಕೈಮಗ್ಗ ದಿನದ ಇತಿಹಾಸವೇನು?
1905 ರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ನಡೆದ ‘ಸ್ವದೇಶಿ’ ಚಳುವಳಿಯ ನೆನಪಿಗಾಗಿ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. ಸ್ವದೇಶಿ ಚಳುವಳಿ 1905 ರಲ್ಲಿ ಪ್ರಾರಂಭವಾಯಿತು. ಬ್ರಿಟೀಷರ ಹಾಗೂ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ, ಸ್ವದೇಶಿ ಉತ್ಪನ್ನಗಳನ್ನು ಜಾಗೃತಗೊಳಿಸುವುದು ಈ ಚಳುವಳಿಯ ಉದ್ದೇಶವಾಗಿತ್ತು. ಈ ಆಂದೋಲನದಲ್ಲಿ ಹೆಚ್ಚಿನ ಸಂಖ್ಯೆಯ ಕೈಮಗ್ಗ ನೇಕಾರರು ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಈ ಚಳುವಳಿಯ ಕಾರಣದಿಂದಾಗಿ ಭಾರತದ ಬಹುತೇಕ ಪ್ರತಿಯೊಂದು ಮನೆಯಲ್ಲೂ ಖಾದಿ ಪ್ರಾರಂಭವಾಯಿತು. ಈ ಚಳುವಳಿಯ ಗೌರವಾರ್ಥವಾಗಿ ಆಗಸ್ಟ್ 7, 2015 ರಲ್ಲಿ ರಾಷ್ಟ್ರೀಯ ಕೈಮಗ್ಗ ದಿನದ ಆಚರಣೆ ಪ್ರಾರಂಭವಾಯಿತು.
ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಕೈಮಗ್ಗ ಉದ್ಯಮದ ಕೊಡುಗೆಯನ್ನು ಎತ್ತಿ ತೋರಿಸಲು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳನ್ನು ಉತ್ತೇಜಿಸಲು ಹಾಗೂ ನೇಕಾರರ ಸಮುದಾಯವನ್ನು ಗೌರವಿಸಲು, ಅವರ ಕೊಡುಗೆಗಳನ್ನು ಶ್ಲಾಘಿಸುವುದು ಈ ದಿನದ ಆಚರಣೆಯ ಪ್ರಮುಖ ಉದ್ದೇಶವಾಗಿದೆ.
ಇದನ್ನೂ ಓದಿ: ಭೀಕರ ಪರಮಾಣು ದಾಳಿಗೆ ನಲುಗಿ ಹೋಗಿದ್ದ ಜಪಾನಿನ ಹಿರೋಷಿಮಾ ನಗರ ಇಂದು ಹೇಗಿದೆ?
ಭಾರತದ ಪ್ರಮುಖ ಕೈಮಗ್ಗ ತಾಣಗಳು:
ಮೊಳಕಾಲ್ಮೂರು: ಚಿತ್ರದುರ್ಗದ ಮೊಳಕಾಲ್ಮೂರಿನಲ್ಲಿ ನೇಯಲಾಗುವ ಮೊಳಕಾಲ್ಮೂರು ಸೀರೆಗಳು ಹತ್ತಿ ಮತ್ತು ರೇಷ್ಮೆ ಸೀರೆಗಳಿಗೆ ಹಾಗೂ ಸಾಂಪ್ರದಾಯಿಕ ಪಲ್ಲು ವಿನ್ಯಾಸಕ್ಕೆ ಪ್ರಸಿದ್ಧಿ ಪಡೆದಿದೆ.
ಮೈಸೂರು: ಮೈಸೂರು ರೇಷ್ಮೆ ಸೀರೆಗಳು ತನ್ನ ಶ್ರೀಮಂತ ಹೊಳಪಿಗೆ ಹೆಸರುವಾಸಿಯಾಗಿವೆ. ಶುದ್ಧ ಮಲ್ಬೆರಿ ರೇಷ್ಮೆಯನ್ನು ಬಳಸಿ ಕೈಯಿಂದ ನೇಯಲಾಗುವ ಈ ಸೀರೆಯ ಸ್ಪರ್ಶ ತುಂಬಾನೇ ಮೃದುವಾಗಿದೆ.
ಇಳಕಲ್: ಬಾಗಲಕೋಟೆ ಜಿಲ್ಲೆಯ ಇಳಕಲ್ನಲ್ಲಿ ನೇಯಲಾಗುವ ಇಳ್ಕಲ್ ಸೀರೆಗಳು ತನ್ನ ವಿಶಿಷ್ಟವಾದ ಪರಳಿ ಅಂಚು ಮತ್ತು ಚಾರಣ ಅಂಚಿನ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ಇದಲ್ಲದೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತನ್ನ ಸಾಂಪ್ರದಾಯಿಕ ಹಾಗೂ ವಿಶಿಷ್ಟ ಜ್ಯಾಮಿತೀಯ ನಮೂನೆಗಳ ಖಣ ಬ್ಲೌಸ್ ಬಟ್ಟೆಗಳಿಗೆ ಪ್ರಸಿದ್ಧಿಯಾಗಿದೆ.
ನವಲಗುಂದ: ಧಾಡವಾರ ಜಿಲ್ಲೆಯ ನವಲಗುಂದವು ಕೈಯಿಂದ ನೇಯ್ದ ಜಮಖಾನಾ ಉತ್ಪನ್ನಗಳಿಗೆ ಖ್ಯಾತಿ ಪಡೆದಿದೆ. ಜ್ಯಾಮಿತೀಯ ವಿನ್ಯಾಸಗಳನ್ನು ಹೊಂದಿರುವ ಈ ಹತ್ತಿ ಜಮಖಾನಗಳು ಭೌಗೋಳಿಕ ಸೂಚ್ಯಾಂಕ (GI Tag) ಪಡೆದಿದೆ.
ವಾರಣಾಸಿ, ಉತ್ತರ ಪ್ರದೇಶ: ವಾರಣಾಸಿಯು ತನ್ನ ಸೊಗಸಾದ ಕೈಮಗ್ಗ ಉತ್ಪನ್ನಗಳಿಗೆ, ವಿಶೇಷವಾಗಿ ಬನಾರಸಿ ರೇಷ್ಮೆ ಸೀರೆಗಳು, ಜರಿ ಕಸೂತಿ ಮತ್ತು ಬ್ರೊಕೇಡ್ಗಳಿಗೆ ಹೆಸರುವಾಸಿಯಾಗಿದೆ. ಇದು ನೇಯ್ಗೆ ಕರಕುಶಲ ವಸ್ತುಗಳ ಕೇಂದ್ರವೂ ಆಗಿದೆ.
ಸೂರತ್, ಗುಜರಾತ್: ಭಾರತದ ಪ್ರಮುಖ ಜವಳಿ ಕೇಂದ್ರಗಳಲ್ಲಿ ಒಂದೆಂದು ಕರೆಯಲ್ಪಡುವ ಸೂರತ್, ಅಭಿವೃದ್ಧಿ ಹೊಂದುತ್ತಿರುವ ಕೈಮಗ್ಗ ಮಾರುಕಟ್ಟೆಯಾಗಿದೆ. ಸಾಂಪ್ರದಾಯಿಕ ಪಟೋಲಾ, ರೇಷ್ಮೆಯಿಂದ ನೇಯ್ದ ಡಬಲ್ ಇಕಾತ್ ಸೀರೆ ಇಲ್ಲಿನ ಪ್ರಮುಖ ಕೈಮಗ್ಗ ಉತ್ಪನ್ನಗಳಾಗಿವೆ.
ಪಾಣಿಪತ್, ಹರಿಯಾಣ: ಈ ನಗರ ಕೈಮಗ್ಗದಿಂದ ತಯಾರಿಸಲಾದಕಾರ್ಪೆಟ್ಗಳು, ಮ್ಯಾಟ್ಗಳು, ರತ್ನಗಂಬಳಿ, ಟವೆಲ್ಗಳಿಗೆ ಹೆಸರುವಾಸಿಯಾಗಿವೆ.
ಕಾಂಚೀಪುರಂ, ತಮಿಳುನಾಡು: ಈ ನಗರ ಸುಂದರವಾದ ಕಾಂಚಿಪುರಂ ಸೀರೆಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ.
ಮಹೇಶ್ವರ, ಮಧ್ಯಪ್ರದೇಶ: ಈ ಸ್ಥಳವು ಜನಪ್ರಿಯ ಮಹೇಶ್ವರಿ ಸೀರೆಗಳು ಮತ್ತು ಬಟ್ಟೆಗಳಿಗೆ ಹೆಸರುವಾಸಿಯಾಗಿದೆ.
ಲಕ್ನೋ, ಉತ್ತರ ಪ್ರದೇಶ: ಚಿಕನ್ಕರಿ ಒಂದು ಪ್ರಸಿದ್ಧ ಕೈಮಗ್ಗ ಬಟ್ಟೆಯಾಗಿದ್ದು, ಲಕ್ನೋ ಇವುಗಳ ಉತ್ಪಾದನೆಗೆ ಸಖತ್ ಹೆಸರುವಾಸಿಯಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ